ಸುಮಾರು ಎಂಭತ್ತರ ದಶಕದಲ್ಲಿ ಕಪ್ಪು-ಬಿಳುಪು ಪರದೆಯ ದೂರದರ್ಶನದಲ್ಲಿ ಸ್ಫುಟವಾಗಿ ಕನ್ನಡ ವಾರ್ತೆಗಳನ್ನು ಓದುತ್ತಿದ್ದ ಆ ಸುಂದರ ಹುಡುಗಿಯ ನೆನಪಿದೆಯೇ.? ಆಗ ರೂಪಾ ಉಪೇಂದ್ರರಾವ್. ಈಗ, ದೂರದ ಅಮೆರಿಕಾದ ಮಿಷಿಗನ್ನಿನ ಡೆಟ್ರಾಯ್ಟ್ ನಲ್ಲಿ ತಮ್ಮದೇ ಅದ `ನೃತ್ಯೋಲ್ಲಾಸ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್’ ಭರತನಾಟ್ಯ ಶಾಲೆಯನ್ನು ಕಳೆದ ಮೂರು ದಶಕಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಹಿರಿಯ ಪ್ರೌಢ ನೃತ್ಯಕಲಾವಿದೆ-ನಾಟ್ಯಗುರು ರೂಪಾ ಶ್ಯಾಮಸುಂದರ.
ಶ್ರೀ ಉಪೇಂದ್ರರಾವ್ ಮತ್ತು ಶಾಂತಾ ದಂಪತಿಗಳ ಕಣ್ಮಣಿ ರೂಪಾ ಹೆಸರಿಗೆ ತಕ್ಕ ರೂಪವತಿ ಅಷ್ಟೇ ಅಲ್ಲ, ಪ್ರತಿಭಾವಂತೆ ಕೂಡ. ಅಂದು-ಇಂದೂ-ಎಂದೆಂದೂ ‘ನೃತ್ಯ ಎಂದರೆ ನನ್ನ ಪ್ರಾಣ’ ಎನ್ನುವುದು ರೂಪಾ ನಿಲುವು. ಅಷ್ಟೇ ನಿಷ್ಠೆ, ಪರಿಶ್ರಮ ಸದಾ. ಸುಮಾರು ಎಂಟುವರ್ಷದ ಬಾಲಕಿಯಾಗಿದ್ದಾಗಲೇ ನೃತ್ಯ ಕಲಿಯಲಾರಂಭ. ಖ್ಯಾತ ನಾಟ್ಯಗುರು ರಾಧಾ ಶ್ರೀಧರ್ ಅವರ ಬಳಿ ಕಲಿಕೆ-ಸತತಾಭ್ಯಾಸ. ಕರ್ನಾಟಕ ಸರ್ಕಾರ ನಡೆಸುವ ಜ್ಯೂನಿಯರ್, ಸೀನಿಯರ್ ಮತ್ತು ವಿದ್ವತ್ ನೃತ್ಯಪರೀಕ್ಷೆಗಳಲ್ಲಿ ಉತ್ತಮಾಂಕಗಳಿಂದ ಜಯಶಾಲಿ. ಗುರುಗಳ ನೇತೃತ್ವದಲ್ಲಿ ಆಗಲೇ ಅನೇಕ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ, ಆತ್ಮಸ್ಥೈರ್ಯ ಪ್ರಾಪ್ತಿ. ಅವರ ಎಲ್ಲ ನೃತ್ಯರೂಪಕಗಳಲ್ಲೂ ಪ್ರಮುಖ ಪಾತ್ರಗಳಲ್ಲಿ ಅಭಿನಯ-ನೃತ್ಯ ಇವಳ ವೈಶಿಷ್ಟ್ಯ.
ರೂಪಾ, ನೃತ್ತಾಭಿನಯಗಳಲ್ಲಿ ಚತುರೆ. ನೃತ್ತಗಳ ಸೌಂದರ್ಯವನ್ನು ಬೆಳಗಿಸುವಲ್ಲಿ ಎಷ್ಟು ಸಮರ್ಥಳೋ, ಅಭಿನಯ ಪ್ರಾವೀಣ್ಯದಲ್ಲೂ ಅಷ್ಟೇ ಪರಿಪಕ್ವತೆ ಮಿನುಗಿಸಿ ಕಲಾರಸಿಕರಿಗೆ ಹೃದಯಸ್ಪರ್ಶೀ ಅನುಭವ ನೀಡುವುದರಲ್ಲಿ ಶಕ್ತಳಾಗಿದ್ದ ಗರಿಮೆ. ತಾನು ಓದಿದ ಪ್ರತಿಭಾ ಬಾಲಮಂದಿರ, ಸರಸ್ವತೀ ವಿದ್ಯಾಮಂದಿರ ಮತ್ತು ಮಹಾರಾಷ್ಟ್ರ ಮಹಿಳಾ ಮಂಡಲ ಶಾಲೆಗಳಲ್ಲಿ ಲೀಲಾಜಾಲ ನರ್ತನ ಪ್ರತಿಭೆಯಿಂದ ಉತ್ತಮ ನರ್ತಕಿ ಎಂದೇ ಹೆಸರು ಪಡೆದಿದ್ದಳು. ಸ್ಪರ್ಧೆಗಳಲ್ಲಿ ಬಹುಮಾನಗಳ ವಿಜೇತೆ. ವಿದ್ಯಾವರ್ಧಕ ಕಾಲೇಜಿನಿಂದ ಬಿ.ಕಾಂ. ಪದವೀಧರೆ. ನೃತ್ಯ ಅವಳ ಜೀವನದ ಅವಿಭಾಜ್ಯ ಅಂಗವಾದ್ದರಿಂದ ಒಂದು ದಿನವೂ ನೃತ್ಯಾಭ್ಯಾಸಕ್ಕೆ ನಿಲುಗಡೆ ಇಲ್ಲ. ಇಷ್ಟರಲ್ಲಿ ಇವಳಿಗೆ ಭಾರತ ಸರ್ಕಾರದಿಂದ ಸ್ಕಾಲರ್ಷಿಪ್ ಕೂಡ ದೊರಕ್ಕಿತ್ತು.
ಸುಮಾರು ಹದಿನೇಳು ವರ್ಷಗಳು ಸತತ ಗುರು ರಾಧಾ ಶ್ರೀಧರ್ ಅವರಲ್ಲಿ ನಿಷ್ಠೆಯಿಂದ ಶಿಕ್ಷಣ ಪಡೆದು ನಟುವಾಂಗದ ಜ್ಞಾನವನ್ನೂ ಕರಗತ ಮಾಡಿಕೊಂಡು ಅವರ ‘ವೆಂಕಟೇಶ ನಾಟ್ಯ ಮಂಡಳಿ’ ಯಲ್ಲಿ ಕಿರಿಯ ಮಕ್ಕಳಿಗೆ ನೃತ್ಯಶಿಕ್ಷಕಿಯಾಗಿಯೂ ಅನುಭವ ಗಳಿಕೆ. ನೃತ್ಯ ಕಲಿಸುವುದಕ್ಕೆ ಸವಾಲೆನಿಸುವ, ‘ರಮಣ ಮಹರ್ಷಿ ಅಂಧಶಾಲೆ’ಯ ಅಂಧಮಕ್ಕಳಿಗೆ ನೃತ್ಯ ಕಲಿಸುವ ಪ್ರಯತ್ನ ಮಾಡಿದ ಪ್ರಥಮರು ಎಂಬ ಅಗ್ಗಳಿಕೆ ಇವರದು.
ನಾಲ್ಕು ದಶಕಗಳಿಗೂ ಹಿಂದೆಯೇ ‘ರಂಗಪ್ರವೇಶ’ ಮಾಡಿ, ಸಾವಿರಾರು ನೃತ್ಯ ಪ್ರದರ್ಶನಗಳನ್ನು ಮಾಡಿ ಖ್ಯಾತಿ ಗಳಿಸಿರುವ ರೂಪಾ ತುಂಬಿದ ಕೊಡ. ‘ಹನುಮದ್ವಿಲಾಸ’ ಜನಪ್ರಿಯ ನೃತ್ಯರೂಪಕದಲ್ಲಿ ಈಕೆ ನಿರ್ವಹಿಸಿದ ‘ಹನುಮಂತ’ನ ಪಾತ್ರ ಸ್ಮರಣೀಯ.
ಬೆಂಗಳೂರು ದೂರದರ್ಶನ ಪ್ರಾರಂಭವಾದಾಗ ಅದರ ಉದ್ಘಾಟನಾ ಸಮಾರಂಭದಲ್ಲಿ ನೃತ್ಯ ಪ್ರದರ್ಶನ ನೀಡಿದ ಅಗ್ಗಳಿಕೆ ಇವರದು. ದೇಶದ ಉದ್ದಗಲಕ್ಕೂ ನಿರಂತರ ನೃತ್ಯಪ್ರದರ್ಶನ ನೀಡಿಕೆ, ಮೈಸೂರು ದಸರಾದಿಂದ ಹಿಡಿದು ಆಂಧ್ರ-ತಮಿಳುನಾಡು ಮುಂತಾದ ಎಲ್ಲೆಡೆ ಸಂಚರಿಸಿ, ಪ್ರಮುಖ ದೇವಾಲಯಗಳಲ್ಲಿ, ರಾಷ್ಟ್ರೀಯ ಅನೇಕ ಪ್ರತಿಷ್ಠಿತ ಸಂಗೀತ-ನೃತ್ಯೋತ್ಸವ, ಸಮ್ಮೇಳನಗಳಲ್ಲಿ, ಹೆಸರಾಂತ ವೇದಿಕೆಗಳಲ್ಲಿ ನರ್ತಿಸಿದ ಹೆಮ್ಮೆ ಇವರದು.
ಕಲಿತಷ್ಟೂ ಇಂಗದ ತೃಷೆ. ಹೊಸತನ್ನು ಸಾಧಿಸುವ ಬಯಕೆ. ಈಕೆ ಮುಂದೆ ಖ್ಯಾತ ಭರತನಾಟ್ಯದ ಗುರುಗಳಾದ ‘ಕಲಾಕ್ಷೇತ್ರ’ ಖ್ಯಾತಿಯ ಧನಂಜಯ್, ಉಷಾ ದಾತಾರ್, ನರ್ಮದಾ ಮತ್ತು ಕಥಕ್ ಶೈಲಿಯ ನೃತ್ಯವನ್ನು ಕಾರ್ಯಾಗಾರದಲ್ಲಿ ಮಾಯಾರಾವ್, ಚಿತ್ರ ವಿಶ್ವೇಶ್ವರನ್ ಅವರ ಬಳಿ ಹಾಗೂ ಅಭಿನಯವನ್ನು ಕಲಾನಿಧಿ ನಾರಾಯಣನ್ ಬಳಿ ಕಲಿತರು.
ನೃತ್ಯಜಗತ್ತಿನಲ್ಲಿ ಇಂದು ರೂಪಾ, ವಿಶ್ವದ ಭೂಪಟದಲ್ಲಿ, ಗುರು ರಾಧಾ ಶ್ರೀಧರರ ಅತ್ಯಂತ ಹಿರಿಯ ಶಿಷ್ಯೆಯಾಗಿ ಗುರುತಿಸಲ್ಪಟ್ಟು ಗೌರವಾನ್ವಿತ ಸ್ಥಾನ ಪಡೆದ ನುರಿತ ಉತ್ತಮ ನೃತ್ಯ ಕಲಾವಿದೆ ಮತ್ತು ಬದ್ಧತೆಯ ನಾಟ್ಯಗುರು. ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಕಲಿತದ್ದು ಇವರ ನೃತ್ಯ ಸಾಧನೆಗೆ ಪೂರಕವಾಯಿತು.
ನೃತ್ಯವೇ ನನ್ನುಸಿರು ಎನ್ನುವ ರೂಪಾ, ಮೂವತ್ತೆಂಟು ವರ್ಷಗಳ ಹಿಂದೆ ವಿವಾಹವಾಗಿ ಅಮೆರಿಕಾಗೆ ಹೋದಾಗ, ಭಾರತೀಯ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವ ಅಭಿಲಾಷೆಯಿಂದ ಅಲ್ಲಿ ತಮ್ಮದೇ ಅದ `ನೃತ್ಯೋಲ್ಲಾಸ’ ಸಂಸ್ಥೆ ಆರಂಭಿಸಿ, ಇದುವರೆಗೂ ಸುಮಾರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಶಿಷ್ಯರಿಗೆ ನೃತ್ಯ ಕಲಿಸಿದ್ದಾರೆ. ಇದುವರೆಗೆ 48 ನೃತ್ಯವಿದ್ಯಾರ್ಥಿ ಗಳಿಗೆ `ರಂಗಪ್ರವೇಶ’ ಮಾಡಿಸಿರುವ ಸಾರ್ಥಕ್ಯಭಾವ ಅವರದು. ಕಳೆದ ನಾಲ್ಕೂವರೆ ದಶಕಗಳ ಅಪಾರ ನೃತ್ಯಾನುಭವ ಗಳಿಸಿರುವ ರೂಪಾ, ಉತ್ತರ ಅಮೆರಿಕಾದ್ಯಂತ ಅಸಂಖ್ಯಾತ ನೃತ್ಯ ಕಾರ್ಯಕ್ರಮಗಳನ್ನು ನೀಡಿರುವುದಲ್ಲದೆ, ಶಾಸ್ತ್ರೀಯತೆ, ವಿದ್ವತ್ತು, ಬಹುಶ್ರುತತೆ ಸಂಗಮಿಸಿದ ಅನೇಕ ನೃತ್ಯರೂಪಕಗಳನ್ನು ಕಲಾತ್ಮಕವಾಗಿ ಸಂಯೋಜಿಸಿ ಪ್ರದರ್ಶನ ನೀಡಿದ್ದಾರೆ. ಅವುಗಳಲ್ಲಿ ಪ್ರಮುಖವಾದವು- ಶ್ರೀ ಕೃಷ್ಣ, ಭಾವಯಾಮಿ ರಘುರಾಮಂ, ಗೀತ-ಗೋವಿಂದ, ಶ್ರೀಕೃಷ್ಣ-ಪ್ರೇಮ,ಭಕ್ತಿ,ಮುಕ್ತಿ ಮತ್ತು ಇತ್ತೀಚಿಗೆ ‘ದೇಶ್’ ಮತ್ತು ‘ಪುಣ್ಯ ತೀರ್ಥಂ ’ಮುಂತಾದ ಒಟ್ಟು ಎಂಟು ನೃತ್ಯರೂಪಕಗಳು ಇವರ ಕೊಡುಗೆ.
‘ನೃತ್ಯೋಲ್ಲಾಸ’ದ ಬೆಳ್ಳಿಹಬ್ಬ ಸಂದರ್ಭದಲ್ಲಿ ಇವರ ಅಪೂರ್ವ ಪರಿಕಲ್ಪನೆ-ಸಂಯೋಜನೆಯ `ಪುಣ್ಯತೀರ್ಥಂ’ ಎನ್ನುವ ವಿಶೇಷ ನೃತ್ಯರೂಪಕ ಕಲಾಪ್ರೇಮಿಗಳು ಹಾಗೂ ವಿಮರ್ಶಕರ ಮೆಚ್ಚುಗೆ ಪಡೆದದ್ದು ದಾಖಲೆ ಎನ್ನಬಹುದು. ಭಾರತದ ಎಲ್ಲ ಮುಖ್ಯ ನದಿಗಳ ಉಗಮ, ಮಹತ್ವ, ಅದರ ಹಿನ್ನಲೆಯ ಕಥೆ, ಆಯಾ ಸ್ಥಳಪುರಾಣ, ಅಲ್ಲಿಯ ಜನಪದ ಸಂಸ್ಕೃತಿ ಮುಂತಾದ ಅಪೂರ್ವ ಮಾಹಿತಿಗಳನ್ನೊಳಗೊಂಡ ನಲವತ್ತೈದು ನೃತ್ಯಕಲಾವಿದರು ಭಾಗವಹಿಸಿದ ಸೃಜನಾತ್ಮಕ ನೃತ್ಯರೂಪಕವಾಗಿತ್ತು.
ಆನ್ ಆರ್ಬರ್, ವೆಸ್ಟ್ ಬ್ಲೂಮ್ ಫೀಲ್ಡ್, ನೋವಿ ಮತ್ತು ರೋಚೆಸ್ಟರ್ ಹಿಲ್ಸ್ ನಲ್ಲಿ ತಮ್ಮ ವಿವಿಧ ನೃತ್ಯ ಶಾಖೆಗಳಲ್ಲಿ ನೃತ್ಯ ಶಿಕ್ಷಣ ನೀಡುತ್ತಿರುವ ವಿಸ್ತೃತ ಅನುಭವ ಅವರದು. ಅಮೆರಿಕದಲ್ಲೇ ಹುಟ್ಟಿ ಬೆಳೆದ ಮಕ್ಕಳಿಗೆ ಭಾರತೀಯ ಪರಂಪರೆಯ ಭರತನಾಟ್ಯವನ್ನು ಕಲಿಸಿದ ಯಶಸ್ಸು ರೂಪಾ ಅವರದು. ಈಕೆಯ ಸೂಕ್ಷ್ಮ ನೃತ್ಯಸಂಯೋಜನಾ ಕೌಶಲ್ಯ, ದಕ್ಷತೆ ಮತ್ತು ರಂಗ ನಿರ್ವಹಣಾ ನೈಪುಣ್ಯದ ಬಗ್ಗೆ ನಾಟ್ಯಶಾಸ್ತ್ರ ನಿಪುಣ ‘ಏಮ್ ಸೇವಾ’ ಸಂಸ್ಥಾಪಕ, ಸ್ವಾಮಿ ದಯಾನಂದ ಸರಸ್ವತಿ ಅವರಿಂದ ಪ್ರಶಂಸೆ ಪಡೆದಿದ್ದು ಈಕೆಯ ಕೀರ್ತಿ ಮುಕುಟದ ಗರಿ.
ಪ್ರತಿಭಾವಂತ ನೃತ್ಯಜ್ಞೆ ರೂಪಾ ಅವರ ಸಾಧನೆಯನ್ನರಸಿ ಅನೇಕ ಗೌರವ-ಪ್ರಶಸ್ತಿಗಳು ಅವರನ್ನರಸಿ ಬಂದಿವೆ. ಮಿಚಿಗನ್ ಸ್ಟೇಟ್ ಯುನಿವರ್ಸಿಟಿ ಮ್ಯೂಸಿಯಂ ‘ಮಾಸ್ಟರ್ ಆರ್ಟಿಸ್ಟ್’ ಎಂಬ ಅಭಿದಾನ, ಸ್ಟೇಟ್ ಲೂಯಿಸ್ ಡ್ಯಾನ್ಸ್ ಫೆಸ್ಟಿವಲ್ ಸಂದರ್ಭದಲ್ಲಿ ‘ನೃತ್ಯ ರತ್ನಾಕರ’ಎಂಬ ಬಿರುದು ಇವರ ಕಾರ್ಯೋತ್ಸಾಹಕ್ಕೆ ಅದಮ್ಯ ಸ್ಫೂರ್ತಿ.
ಅಮೇರಿಕಾದ ಡೆಟ್ರಾಯಿಟ್ ನಲ್ಲಿ ನೆಲೆಸಿರುವ ರೂಪಾ ಅವರ ನೃತ್ಯಸಾಧನೆಗೆ ಬೆಂಬಲವಾಗಿರುವ ಇಂಜಿನಿಯರ್ ಪತಿ ಮಾಯಸಂದ್ರ ಶ್ಯಾಮಸುಂದರ ಮತ್ತು ಉತ್ತಮ ಹುದ್ದೆಗಳಲ್ಲಿ ಕಾರ್ಯೋನ್ಮುಖರಾಗಿರುವ ಮಕ್ಕಳು-ಅನಿರುದ್ಧ ಮತ್ತು ವಿವೇಕಾನಂದ ಅವರಿಂದ ಕೂಡಿದ ನಲ್ಮೆಯ ಸಂಸಾರ ಇವರದು.
****************************
2 comments
ಸೂಪರ್ ಸಂಧ್ಯಾ ಮೇಡಂ ರೂಪಾ ಅವರ ಬಗೆಗಿನ ಮಾಹಿತಿಗಾಗಿ. ಅಭಿನಂದನೆಗಳು ರೂಪಮೇಡಂ ನಮ್ನ ಸಂಸ್ಕೃತಿಯನ್ನು ವಿದೇಶದಲ್ಲಿ ಅತ್ಯುತ್ತಮವಾಗಿ, ಪರಿಣಾಮಕಾರಿಯಾಗಿ ಪಸರಿಸುತ್ತಿರುವ ನಿಮಗೆ ಹ್ಯಾಟ್ಸ್ ಆಫ್. ಮುಂದುವರೆಸಿ, ಶುಭವಾಗಲಿ.
ಅಪಾರ ಧನ್ಯವಾದಗಳು ರಾಧಿಕಾ ರಂಜಿನಿ. ನಿಮ್ಮ ಅಭಿಮಾನದ ನುಡಿಗೆ ಕೃತಜ್ಞತೆಗಳು.