ಮತ್ತೆ ಫೋನು ಟ್ರಿಣಗುಟ್ಟಿತು. ಬೆಳಗಿನಿಂದ ಒಂದೇಸಮನೆ ಫೋನಿನ ಕರೆಗೆ ಉತ್ತರಿಸಿ ಉತ್ತರಿಸಿ ಸಾಕಾಗಿಹೋಗಿತ್ತು ಮುಕುಂದರಾಯರಿಗೆ. ಮೊಬೈಲ್ ಫೋನೂ ಬಾಯ್ಮುಚ್ಚಿಕೊಂಡಿರಲಿಲ್ಲ. ಆದರೂ ಅವರು ಉತ್ಸಾಹ ಕಳೆದುಕೊಳ್ಳದೆ ಒಂದು ಬಗೆಯ ಆನಂದದಿಂದ ರಿಸೀವರನ್ನೆತ್ತಿ “ಹಲೋ” ಎನ್ನುತ್ತಿದ್ದರು. ಶುಭಾಶಯಗಳ ಮೇಲೆ ಶುಭಾಶಯಗಳು-ಅಭಿನಂದನೆಯ ಸುರಿಮಳೆ.! ಅವರ ಮೊಗದ ತುಂಬಾ ಸಂತಸದ ಅಲೆ ತೂಗುಯ್ಯಾಲೆಯಾಡುತ್ತಿತ್ತು.
” ಥ್ಯಾಂಕ್ಯು…ಥ್ಯಾಂಕ್ಯು….” ಅಂದಂದು ಗಂಟಲು ಒಣಗೇ ಹೋಗಿತ್ತು. ಅವರ ಆನಂದದಲ್ಲಿ ಸಹಭಾಗಿಯಾಗಿ ಅವರ ಪಕ್ಕದಲ್ಲಿ ಆಸೀನರಾಗಿ ಕುಳಿತಿದ್ದ್ದ ಮಣಿಕರ್ಣಿಕಾದೇವಿಯವರು ಖುಷಿಯಿಂದ ಮೇಲೆದ್ದು ಒಳಹೋಗಿ ಗಂಡನಿಗೆ ಜ್ಯೂಸ್, ಕಾಫಿ, ಬಾದಾಮಿಹಾಲುಗಳನ್ನು ತಂದುಕೊಟ್ಟಿದ್ದು ಅದೆಷ್ಟು ಸಲವೋ.
ಬೆಳಗಿನಿಂದ ಮುಕುಂದರಾಯರಿಗೆ ಫೋನಿನ ಆತ್ಮೀಯ ಧ್ವನಿಗಳಿಗೆ ಸ್ಪಂದಿಸುವುದೇ ಆಗಿದ್ದರಿಂದ, ಮಧ್ಯಾಹ್ನದ ಮೂರುಗಂಟೆಯಾಗಿದ್ದರೂ ಇನ್ನೂ ಊಟಕ್ಕೆ ಏಳಲು ಅವರಿಗೆ ಅವಕಾಶವೇ ಆಗಿರಲಿಲ್ಲ. ಡೈನಿಂಗ್ ಟೇಬಲ್ಲಿನ ತುಂಬಾ ಹರಡಿ ಕುಳಿತಿದ್ದ ನಾನಾ ಬಗೆಯ ಸಿಹಿ-ಖಾರದ ಅಡುಗೆ, ಖಾದ್ಯಗಳು ಅವರ ಬರುವನ್ನೇ ಕಾದು ಕುಳಿತು ತಣ್ಣಗೆ ಜೋಂಪಿಸುತ್ತಿದ್ದವು. ಇಂದು ಆ ದಂಪತಿಗಳಿಗೆ ಆನಂದದಿಂದಲೇ ಹೊಟ್ಟೆ ತುಂಬಿಹೋಗಿತ್ತು.
ಮತ್ತೆ ಸಂಜೆ ಬಂದ ಒಂದು ಹೊರೆ ಗ್ರೀಟಿಂಗ್ಸ್, ಕಾರ್ಡ್ಸ್-ಕವರುಗಳು!…ಎಲ್ಲವನ್ನೂ ಒಡೆದು ವಿವರವಾಗಿ, ಮತ್ತೆ ಮತ್ತೆ ಓದಿ ಖುಷಿಪಟ್ಟರು ಅವರಿಬ್ಬರು. ಮೊಬೈಲ್ ಮೆಸೇಜ್ಗಳೂ ಬಿಡುವಿಲ್ಲದೆ ರಿಂಗಣಗುಣಿಸುತ್ತಿದ್ದವು.
ಮುಕುಂದರಾಯರು ನಿರೀಕ್ಷಿಸದಷ್ಟು ಭಾರೀ ಸನ್ಮಾನ-ಪ್ರಶಸ್ತಿಗಳು ಅವರ ಕೊರಳಿಗೆ ತಾವಾಗೇ ಬಂದು ಅಲಂಕರಿಸಿದ್ದವು. ಅವರು ರಾಜ್ಯದ ಹಿತದೃಷ್ಟಿಯಿಂದ ಅದರ ಪ್ರಗತಿ-ಅಭ್ಯುದಯಕ್ಕಾಗಿ ರೂಪಿಸಿದ ಯೋಜನೆಗಳು, ಸಲ್ಲಿಸಿದ ಸೇವೆಯನ್ನು ಗುರುತಿಸಿದ ಸರ್ಕಾರ ಅವರ ನಿವೃತ್ತಿಯನಂತರವೂ ಎರಡು ವರ್ಷಗಳ ಅವಧಿಗೆ ಅವರ ಸೇವೆಯನ್ನು ವಿಸ್ತರಿಸಿತ್ತು. ಇದೀಗ ಸರ್ಕಾರದ ಮಟ್ಟದಲ್ಲಿ ಅವರಿಗೆ ಉನ್ನತ ಮರ್ಯಾದೆ -ಗೌರವ, ಅಭಿನಂದನಾ ಸಮಾರಂಭ ಏರ್ಪಾಟಾಗಿತ್ತು.
ನಗರದ ಅತ್ಯಂತ ಪ್ರತಿಷ್ಠಿತ ವ್ಯಕ್ತಿ, ಉನ್ನತ ಅಧಿಕಾರಿಯೆನಿಸಿಕೊಂಡಿದ್ದ ಮುಕುಂದರಾಯರ ಬುದ್ಧಿಮತ್ತೆ, ಪ್ರಾಮಾಣಿಕ ಸೇವಾ ಮನೋಭಾವಗಳ ಬಗ್ಗೆ ಸರ್ಕಾರದ ಸಂಪುಟ ಸಭೆಯಲ್ಲೂ ಚರ್ಚೆ ನಡೆದು ಅವರಿಗೆ ಮತ್ತೊಂದು ಹಿರಿಯ ಹೊಣೆಗಾರಿಕೆ ವಹಿಸಿ ಅವರಿಗೆ ಮಾನ್ಯತೆ ನೀಡಲಾಗಿತ್ತು. ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಅವರು ತಯಾರಿಸಿ ಕೊಟ್ಟಿದ್ದ ಮುನ್ನೂರ ನಲವತ್ತು ಪುಟಗಳ ದೀರ್ಘ ಪ್ರಾಜೆಕ್ಟ್ ರಿಪೋರ್ಟ್ ಹಾಗೂ ಅದರ ರೂಪು ರೇಷೆಗಳು ಬಹು ಸಮರ್ಪಕವಾಗಿ ಪರಿಣಾಮಕಾರಿಯಾಗಿ ಜಾರಿಗೆ ಬಂದು ರಾಜಕಾರಣಿಗಳ ಹಾಗೂ ಜನಮೆಚ್ಚುಗೆ ಗಳಿಸಿದ್ದು, ಅವರ ಜನಪ್ರಿಯತೆ ನಾಡಿನ ಮನೆಮಾತಾಗಿತ್ತು. ಎಲ್ಲ ಪತ್ರಿಕೆ-ವಿದ್ಯುನ್ಮಾನ ಮಾಧ್ಯಮಗಳಲ್ಲೂ ಅವರು ಮಿಂಚಿದ್ದೇ ಮಿಂಚಿದ್ದು. ಈ ಮೂಲಕ ಅವರ ಖ್ಯಾತಿ ರಾಷ್ಟ್ರೀಯ-ಅಂತರಾಷ್ಟ್ರೀಯ ಮಟ್ಟಕ್ಕೂ ತಲುಪಿತ್ತು. ಅದಕ್ಕೆಂದೇ ಈಗ ಅವರಿಗೆ “ರಾಜ್ಯ ರತ್ನ” ಪ್ರಶಸ್ತಿ ಸರ್ಕಾರ ಘೋಷಿಸಿತ್ತು.
ಮುಕುಂದರಾಯರು ಅದಕ್ಕೆ ಸರ್ವಥಾ ಯೋಗ್ಯರಾಗಿದ್ದರು ಕೂಡ. ಅವರ ಉನ್ನತ ವಿದ್ಯಾಭ್ಯಾಸ ಇಂಜಿನಿಯರಿಂಗ್ , ಎಂಎಸ್. ಪಿ.ಎಚ್.ಡಿ.ಗಳೊಂದಿಗೆ ಹಲವಾರು ಪರಿಣತಿಗಳು ಅವರನ್ನು ರಾಜ್ಯದ ಮುಖ್ಯ ಹುದ್ದೆಗೇರಿಸಿದ್ದವು. ಈಗವರು ಸರ್ಕಾರದ ಮುಖ್ಯ ಸಲಹೆಗಾರರೂ ಆಗಿದ್ದರು. ಹೀಗಾಗಿ ಸಮಾಜದಲ್ಲಿ ಒಬ್ಬ ಆದರ್ಶ ವ್ಯಕ್ತಿಯೆನಿಸಿಕೊಂಡಿದ್ದರು.
ವಿದ್ಯಾಕಳೆಯಿಂದ ಶೋಭಿಸುತ್ತಿದ್ದ ಮುಕುಂದರಾಯರ ಲಕ್ಷಣವಾದ ಮುಖ ಇಂದು ಲೌಕಿಕ ದೃಷ್ಟಿಯಿಂದ ಕೊಂಚ ಮೇಕಪ್ ಪಡೆದುಕೊಂಡಿತ್ತು. ತಿಳಿಯಾಗಸ ಬಣ್ಣದ ಸೂಟು ತೊಟ್ಟು, ಟೈ ಧರಿಸಿದ್ದ ಅವರು ಸರ್ವಾಲಂಕಾರ ಭೂಷಿತೆ, ಆಭರಣ ಸುಂದರಿ ಮಣಿಕರ್ಣಿಕಾದೇವಿಯವರೊಂದಿಗೆ ತಮ್ಮ ಭವ್ಯ ಬಂಗಲೆಯ ಮುಂದೆ ನಿಂತಿದ್ದ ಕೆನೆಬಣ್ಣದ ಬಿ ಎಂ ಡಬ್ಲ್ಯು ಕಾರಿನೊಳಗೆ ಕುಳಿತು ಸಮಾರಂಭಕ್ಕೆ ಹೊರಟರು.
ಸುಮಾರು ಸಾವಿರ ಜನ ಒಟ್ಟಿಗೆ ಕೂತು ನೋಡಬಹುದಾದಂಥ ದೊಡ್ಡ ಸಭಾಂಗಣ. ಎತ್ತರವಾದ ಭವ್ಯ ವೇದಿಕೆ. ಹಿನ್ನಲೆಯಲ್ಲಿ ಮುಕುಂದರಾಯರ ಭಾವಚಿತ್ರದೊಂದಿಗೆ ಸನ್ಮಾನದ ವಿವರ ಕುರಿತ ದೊಡ್ಡ ಫ್ಲೆಕ್ಸ್ ಬ್ಯಾನರ್ -ಹೂವಿನ ತೋರಣಗಳ ಅಲಂಕಾರ -ದೀಪಮಾಲೆ ಆಕರ್ಷಣೀಯವಾಗಿತ್ತು. ವೇದಿಕೆಯ ಮೇಲೆ ಜರಿ ಕಿಂಕಾಪಿನ , ವೆಲ್ವೆಟ್ ಹೊದಿಕೆಯ ಸಿಂಹಾಸನದಂತಿದ್ದ ನಾಲ್ಕಾರು ಆಸನಗಳು…ಅಂದು ಮಂತ್ರಿ ಮಹೋದಯರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದುದರಿಂದ ಸಭೆ ಕಿಕ್ಕಿರಿದಿತ್ತು. ಸಭೆಯ ಮುಂದಿನ ಎರಡು ಸಾಲು ಆಸನಗಳು ವಿ.ಐ.ಪಿ. ಗಳಿಗಾಗಿ ಕಾದಿರಿಸಲಾಗಿತ್ತು. ಬಲಗಡೆಯ ಮೊದಲ ಸಾಲಿನ ಆಸನಗಳಲ್ಲಿ ಭಾರಿ ತುರುಬು, ರೊಟ್ಟಿಯಂಚಿನ ಕಂಚೀ ಜರಿ ಸೀರೆಯುಟ್ಟ ಮಣಿಕರ್ಣಿಕಾದೇವಿಯವರ ತಾಯಿ,ತಂಗಿಯರು, ಅಣ್ಣ-ತಮ್ಮಂದಿರು, ಅವರ ಹೆಂಡತಿಯರು ಇತ್ಯಾದಿ ನೆಂಟರಿಂದ ಸರಿಯಾಗಿ ಹದಿನಾರು ಆಸನಗಳು ಭರ್ತಿಯಾಗಿದ್ದವು.
ಕಾರ್ಯಕ್ರಮ ಸರಿಯಾಗಿ ಆರೂವರೆ ಗಂಟೆಗೆ ಆರಂಭವಾಯಿತು. ಅದ್ಧೂರಿ ಸನ್ಮಾನ ಸಮಾರಂಭ!.. ಮಂತ್ರಿಮಹೋದಯರು ರಾಯರಿಗೆ ಜರೀಶಾಲು ಹೊದಿಸಿ, ಕೊರಳಿಗೆ ಬಂಗಾರದ ಪದಕ ತೂಗಿಬಿಟ್ಟು, ಅವರುದ್ದದ ಭಾರಿ ಹಾರವೊಂದನ್ನು ಹಾಕಿ ಕೈಗೆ ತುರಾಯಿ ಕೊಟ್ಟರು. ಮಣೀಕರ್ಣಿಕಾದೇವಿಯವರಿಗೆ ಬೆಳ್ಳಿ ತಟ್ಟೆಯ ತುಂಬಾ ಹಣ್ಣು-ಹೂವು, ರೇಷ್ಮೆಸೀರೆ ಸಮರ್ಪಣೆ….ರಾಯರ ಗುಣಗಾನ ಮಾಡುವ ಭರ್ಜರಿ ಭಾಷಣಗಳು…ರಾಯರು ಅಧ್ಯಕ್ಷರಾಗಿ, ಪೋಷಕರಾಗಿ ಸೇವೆ ಸಲ್ಲಿಸುತ್ತಿದ್ದ ಹಲವಾರು ಅನಾಥಾಶ್ರಮ, ವೃದ್ಧಾಶ್ರಮ, ಸಮಾಜ ಸೇವಾ ಸಂಸ್ಥೆಗಳ ಕಡೆಯಿಂದ ಅಭಿಮಾನ ವರ್ಷ…ಹಾರಗಳ ಸುರಿಮಳೆಯಲ್ಲಿ ರಾಯರು ಪೂರ್ತಿ ಮುಳುಗೇಹೋಗಿದ್ದರು. ನಾಲ್ಕು ಮೊಳದುದ್ದದ ಬಿನ್ನವತ್ತಳೆಯನ್ನು ಕಂಚುಕಂಠದ ನಿರೂಪಕರೊಬ್ಬರು ಜೋರಾಗಿ ಓದುತ್ತಿದ್ದರು. ಕನ್ನಡ ಭಾಷೆಯ ನಿಘಂಟಿನಲ್ಲಿದ್ದ ಬಹುತೇಕ ಗುಣವಾಚಕಗಳೂ ಅಲ್ಲಿ ಮೇಳೈವಿಸಿದ್ದವು. ರಾಯರ ಹರಿತ ಬುದ್ಧಿಶಕ್ತಿ, ದೂರದೃಷ್ಟಿಯ ಫಲವಾಗಿ ಯಶಸ್ವಿಯಾದ ಜನಪರ ಯೋಜನೆಗಳನ್ನು ಮನಸಾರೆ ಕೊಂಡಾಡಿದರು ಮುಖ್ಯ ಅತಿಥಿಗಳು. ಕಡೆಗೊಂದು ಸಂಗತಿಯನ್ನು ಮಾನ್ಯ ಮಂತ್ರಿಗಳು ಘೋಷಿಸಿದಾಗ ನೆರೆದ ಸಭಿಕರಲ್ಲಿ ಹರ್ಷೋದ್ಗಾರವಾಯಿತು.
ಇತರರಿಗೆ ಮಾರ್ಗದರ್ಶಕ -ಆದರ್ಶ ವ್ಯಕ್ತಿತ್ವವನ್ನು ಹೊಂದಿರುವ ರಾಯರ ಮಾದರಿ ಜೀವನಚರಿತ್ರೆಯನ್ನು ಬರೆಯಿಸಿ ಪ್ರಕಟಿಸುವ ಉದ್ದೇಶ ಇಲಾಖೆಗಿದೆ ಎಂಬ ಸಂಗತಿ ಘೋಷಣೆಯಾದಾಗ ಸ್ವತಃ ರಾಯರಿಗೆ ಮೈ ನವಿರೆದ್ದಿತು. ಜೋರಾದ ಕರತಾಡನ ಕಿವಿಗಡಚಿಕ್ಕಿತು. ಹಿನ್ನಲೆಯ ಪರದೆಯ ಮೇಲೆ ಅವರನ್ನು ಕುರಿತು ನಿರ್ಮಿಸಲಾದ ಸಾಕ್ಷ್ಯಚಿತ್ರ ಪ್ರದರ್ಶಿತವಾದಾಗ ಕಿವಿಗಡಚಿಕ್ಕುವ ಕರತಾಡನ!!
ವೇದಿಕೆಯ ಮೇಲಿದ್ದವರೊಬ್ಬರು ಮೈಕಿನ ಬಳಿ ಬಂದು, ” ಇಂಥ ಮಹಾಪುರುಷನನ್ನು ಹೆತ್ತ ಆ ತಾಯಿಯನ್ನು ಸನ್ಮಾನಿಸಬೇಕಾದ್ದು ನಮ್ಮ ಆದ್ಯ ಕರ್ತವ್ಯ. ಆಕೆಯ ಬಾಯಿಂದ ಇವರ ಬಾಲಲೀಲೆಗಳನ್ನು, ಪ್ರತಿಭಾ ಪ್ರಕಾಶದ ಚಿಕ್ಕಂದಿನ ಘಟನೆಗಳನ್ನು ಕೇಳುವ ಭಾಗ್ಯ ನಮ್ಮದಾಗಲಿ” ಎನ್ನುತ್ತ , ರಾಯರಿಗೆ ಅವರ ತಾಯಿಯನ್ನು ವೇದಿಕೆಯ ಮೇಲೆ ಆಹ್ವಾನಿಸುವಂತೆ ಕೇಳಿಕೊಂಡರು.
ರಾಯರ ಮುಖಚಹರೆ ಒಮ್ಮೆಲೆ ಬದಲಾಯಿತು.! ಸಾವರಿಸಿಕೊಂಡು ಪೆಚ್ಚುನಗೆ ಬೀರಿದರು. ಮಂತ್ರಿಗಳ ಬಯಕೆ-ಅಪ್ಪಣೆಯನ್ನು ತಿಳಿದು ಕಂಗಾಲಾಗಿ ಬಿಳುಚಿಕೊಂಡರು.
ಮಣಿಕರ್ಣಿಕಾದೇವಿಯವರ ತುಟಿಗಳು ನಡುಗಿ-“ಅವರು…ಅವರು…” -ಎಂದು ತೊದಲಿದರು.
“ಪರವಾಗಿಲ್ಲ…ಅವರಿಗೆ ಬಂದ ಹಾಗೆ ಮಾತನಾಡಲಿ, ಕರೀರಿ”-ಎಂದರು ಮುಖ್ಯ ಅತಿಥಿಗಳು.
ಒತ್ತಾಯಕ್ಕೆ ಮಣಿದು, ಗತ್ಯಂತರವಿಲ್ಲದೆ ಮುಕುಂದರಾಯರು ಮುಂದಿನ ಸಾಲಿನಲ್ಲಿ ಕುಳಿತಿದ್ದ ಅತ್ತೆಯನ್ನು ಕೈ ಮಾಡಿ ಕರೆದರು. ಆಕೆ ಗಾಬರಿಯಿಂದೆದ್ದು ನಿಂತು , ತಮ್ಮ ತುರುಬು, ಹೂವು ಸರಿಮಾಡಿಕೊಂಡು ವೇದಿಕೆಯ ಮೇಲೆ ಬಂದು ಮೈಕ್ ಮುಂದೆ ಬಂದು ನಿಂತರಷ್ಟೇ….. ಆದರೆ ಅವರ ಗಂಟಲು ಕಟ್ಟಿದಂತಾಗಿ, ತುಟಿಗಳು ನಡುಗಿ ಧ್ವನಿಯೇ ಹೊರಡಲಿಲ್ಲ. ಸೆರಗಿನ ತುದಿಯನ್ನು ಬೆರಳಿಗೆ ಸುತ್ತುವುದು ಬಿಚ್ಚುವುದು ಮಾಡುತ್ತ ಅಳಿಯನತ್ತ ಕಂಗಾಲಾಗಿ ದಿಟ್ಟಿಸಿದರು.
ರಾಯರಿಗೆ ಅವಮಾನದಿಂದ ಮುಖ ಕೆಂಪಾಯಿತು.”ಏನಾದ್ರೂ ಮಾತಾಡಿ”-ಎಂದು ಕೋಪದಿಂದ ಹುಬ್ಬು ಗಂಟಿಕ್ಕಿ ಪಿಸುಗುಟ್ಟಿದರು. ಆಕೆ ತಬ್ಬಿಬ್ಬಾಗಿ ತೊದಲತೊಡಗಿದರು. ನೆರೆದ ಸಭಿಕರಲ್ಲಿ ಗುಸುಪಿಸು ಆರಂಭವಾಯಿತು. ರಾಯರೊಂದಿಗೆ ಮಣಿಕರ್ಣಿಕಾದೇವಿಯವರಿಗೂ ಚಡಪಡಿಕೆ. ಎದುರಿಗೆ ಕುಳಿತಿದ್ದ ಮಾಧ್ಯಮದ ಮಂದಿ ಕುತೂಹಲದಿಂದ ಇತ್ತಲೇ ದಿಟ್ಟಿಸುತ್ತಿದ್ದರು. ವಿವಿಧ ವಾಹಿನಿಗಳ ಕ್ಯಾಮರಾಗಳೆಲ್ಲ್ಲ ಚುರುಕಾದವು. ರಾಯರು ಮುಜುಗರಕ್ಕೀಡಾದುದು ವೇದಿಕೆಯಲ್ಲಿದ್ದವರಿಗೂ ಅಹಿತವೆನಿಸಿ ” ಬನ್ನಿ ತಾಯಿ, ಇಲ್ಲಿ ಬಂದು ಕೂಡಿ, ಪಾಪ ಸಂಕೋಚ ಅಂತ ಕಾಣತ್ತೆ ಆಕೆಗೆ…. ಇದೆಲ್ಲ ಅಭ್ಯಾಸವಿಲ್ಲ , ಸುಮ್ಮನೆ ಅವರನ್ನು ಕಾಡುವುದು ಬೇಡ ಬಿಡಿ,..”-ಎಂದು ಅವರನ್ನು ಹಿಂದಕ್ಕೆ ಕರೆದು, ವೇದಿಕೆಯ ಆಸನದಲ್ಲಿ ಕೂರಿಸಿದರು. ಅಷ್ಟರಲ್ಲಿ ನಿರೂಪಕರು ಮೈಕಿನತ್ತ ತೆರಳಿ- “ರಾಯರ ಮಾತೃಶ್ರೀಯವರು ವಿವರಿಸುವ ರಾಯರ ಚಿಕ್ಕಂದಿನ ವಿಷಯಗಳನ್ನು ನೀವು ಅವರ ಮುಂಬರುವ ಜೀವನಚರಿತ್ರೆ ಪುಸ್ತಕದಲ್ಲಿ ಖಂಡಿತಾ ಓದಬಹುದು “-ಎಂದು ಆಶ್ವಾಸನೆ ಕೊಡುವಷ್ಟರಲ್ಲಿ , ನೆರೆದ ಪ್ರೇಕ್ಷಕರ ನಡುವಿನಿಂದ ದನಿಯೊಂದು ಚಿಮ್ಮಿಬಂತು-” ಆಕೆ ಮುಕುಂದರಾಯರ ತಾಯಿಯಲ್ಲ, ಅತ್ತೆ…!”
ಹಟಾತ್ತನೆ ಜನ ಬೆರಗಾಗಿ ಜೋರು ಉದ್ಗಾರವೆತ್ತಿತು…ತಮ್ಮ ತಮ್ಮಲ್ಲೇ ಗುಸುಪಿಸು…ವಾತಾವರಣದಲ್ಲಿ ತುಸು ಗೊಂದಲವೇರ್ಪಟ್ಟಿತು.
ರಾಯರ ಮೈ ಬೆವರಿಟ್ಟಿತು…..ಅವರ ಪಕ್ಕದಲ್ಲಿ ಕುಳಿತಿದ್ದ ಮಂತ್ರಿಗಳು ರಾಯರತ್ತ ಪ್ರಶ್ನಾರ್ಥಕವಾಗಿ-ವಿಸ್ಮಯದಿಂದ ಹುಬ್ಬೇರಿಸಿದರು. ಮುಖ್ಯ ಅತಿಥಿಗಳು ಆಶ್ಚರ್ಯದ ಉದ್ಗಾರವೆತ್ತಿದರು.!..ಕುಳಿತ ನೆಲ ಹಾಗೇ ಬಿರಿಯಬಾರದೇ ಎಂಬಷ್ಟು ತೀವ್ರ ಅವಮಾನ-ನಾಚಿಕೆಗಳಿಂದ ಮುಕುಂದರಾಯರು ತೊಯ್ದುಹೋಗಿದ್ದರು. ತಟ್ಟನೆ ಪತ್ರಿಕೆಯ ಮಂದಿಯೆಲ್ಲ ಅವರನ್ನು ಮುತ್ತಿಕೊಂಡರು. ಟಿವಿ ಕಣ್ಣುಗಳು ಝಗಝಗಿಸಿದವು. ಅಕ್ಷರಶಃ ನಡುಗತೊಡಗಿದರು ರಾಯರು.
ಕುಗ್ಗಿದ ಧ್ವನಿ ಆಳದ ಕಮರಿಯಿಂದೆಂಬಂತೆ ಕ್ಷೀಣವಾಗಿ ತೊದಲಿತು.-” ಅತ್ತೆಯವರೇ ಈಗ ನನ್ನ ತಾಯಿ ಸ್ಥಾನ ತುಂಬಿದ್ದಾರೆ…ನನ್ನ ತಾಯಿ…” ಎಂದು ತೊದಲುತ್ತ ಮಾತು ನಿಲ್ಲಿಸಿದರು.
ತ್ಚು..ತ್ಚು..ತ್ಚು…ಲೊಚಗುಟ್ಟಿತು ಮಂತ್ರಿಗಳ ನಾಲಗೆ.
“ಅಯಾಮ್ ವೆರಿ ಸಾರಿ”
ಸಭೆ ಕ್ಷಣ ಕಾಲ ಸ್ತಬ್ಧವಾಯಿತು. ರಾಯರ ಜೀವನಚರಿತ್ರೆ ಬರೆಯಲುದ್ದೇಶಿಸಿದ್ದ ಲೇಖಕರಿಗೆ ಅಪಾರ ನಿರಾಶೆಯಾಯಿತು. ತನ್ನ ಕೃತಿ ಅಪೂರ್ಣವಾಗುವುದಲ್ಲ ಎಂಬ ಮಿಡುಕು.
ಮತ್ತೆ ಮೂಲೆಯಿಂದೊಂದು ಅಶರೀರವಾಣಿ- “ಇಲ್ಲ, ಇದು ಶುದ್ಧ ಸುಳ್ಳು…ರಾಯರ ತಾಯಿ ಬದುಕಿದ್ದಾರೆ”
ದನಿ ಬಂದತ್ತ ಜನಗಳೆಲ್ಲ ತಿರುಗಿದರು.
ರಾಯರು ತಲ್ಲಣಿಸಿಹೋದದರು!!…..ನಾರಾಯಣ……ನಾಣಿ…!!!” ಅವರು ಕುಳಿತಲ್ಲೇ ಕರಗತೊಡಗಿದರು.
“ಹಾಗಂದವರು ದಯವಿಟ್ಟು ಮುಂದೆ ಬನ್ನಿ..ಪ್ಲೀಸ್..”-ಲೇಖಕ ಮೈಕ್ ಮುಂದೆ ಬಂದು ನಿಂತು ಬಿನ್ನವಿಸಿಕೊಂಡ.
ಸನ್ನಿವೇಶ ಎಲ್ಲಿಂದೆಲ್ಲಿಗೋ ಬದಲಾಗುತ್ತಿರುವ ಬಗ್ಗೆ , ಹೊಸದಾಗಿ ತೆರೆದುಕೊಂಡ ಅಂಕವನ್ನು ಕುತೂಹಲದಿಂದ ವೀಕ್ಷಿಸತೊಡಗಿದರು , ಸಭಿಕರ ಜೊತೆ ಮಂತ್ರಿಗಳೂ.
ಮಾಸಲು ಬಣ್ಣದ ಜುಬ್ಬಾ-ಪೈಜಾಮ ತೊಟ್ಟ ಸುಮಾರು ಮೂವತ್ತೆಂಟು-ನಲವತ್ತರ ತರುಣ ನಾಣಿ , ದಿಟ್ಟವಾಗಿ ಮೈಕಿನ ಮುಂದೆ ಬಂದು ನಿಂತವನು, ಒಂದುಕ್ಷಣ ರಾಯರತ್ತ ಹಿಂಜರಿಕೆಯಿಂದ ದಿಟ್ಟಿಸಿದ.
ರಾಯರ ಮುಖ ದೈನ್ಯವಾಗಿತ್ತು… ಬಾಯಿ ತೆರೆಯಲನುವಾಗುತ್ತಿದ್ದ ನಾಣಿ ಕೊಂಚ ಮೆತ್ತಗಾದ. ಆದರೆ ರಾಯರ ಪಕ್ಕದಲ್ಲಿ ಕುಳಿತಿದ್ದ ಅವರ ಹೆಂಡತಿಯ ಮುಖ ಕೋಪದಿಂದ ಧುಮುಗುಡುವುದನ್ನು ಕಂಡೊಡನೆ ವ್ಯಗ್ರನಾದ ನಾಣಿ, ಕಂಚಿನ ಕಂಠದಲ್ಲಿ ನುಡಿದ: ” ಈ ಮಹಾನುಭಾವರ ತಾಯಿ ಎನಿಸಿಕೊಂಡ ಪ್ರಾಣಿ ಇನ್ನೂ ಬದುಕಿದೆ…ಇಪ್ಪತ್ತು ವರ್ಷಗಳನಂತರ ಮಗನೆಂಬ ಮಮಕಾರವನ್ನು ತಡೆಯಲಾಗದೆ ಅವನಿಗೆ ಸನ್ಮಾನವಾಗುವ ದೃಶ್ಯವನ್ನು ಕಣ್ತುಂಬಿಸಿಕೊಳ್ಳಲು ಮದುಕಿ ಹದಿನೈದು ಕಿಮಿ ದೂರದಿಂದ ಬಸವಳಿದು ಬಂದಿದೆ…ಅದೋ ಅಲ್ಲಿ…ಆ ಮೂಲೆಯಲ್ಲಿ..”
ಎಲ್ಲರ ದೃಷ್ಟಿಯೂ ಅತ್ತ ತಿರುಗಿತು. ಮಂತ್ರಿಗಳೂ ವೇದಿಕೆಯಿಂದಿಳಿದು ಅತ್ತ ಧಾವಿಸಿದರು. ಲೇಖಕನೂ ಅವರ ಹಿಂದೆ ಓಡಿದ. ಸುಮಾರು ಎಂಭತ್ನಾಲ್ಕು ವರ್ಷದ ಲಕ್ಷಣವಾದ ಮುತ್ತೈದೆ..ವೃದ್ಧೆ… ತನ್ನೆರಡೂ ಕಾಲುಗಳನ್ನು ಕುರ್ಚಿಯ ಮೇಲಕ್ಕೆ ಇಟ್ಟುಕೊಂಡು ಮುದುರಿ ಕುಳಿತಿತ್ತು. ಮೈ ಮೇಲೆ ಹಸಿರು ಬಣ್ಣದ ತಾತಾ ತೂತಿಯಾದ ಹರಕಲು ಸ್ವೆಟರಿದ್ದರೂ ಡಿಸೆಂಬರ್ ಚಳಿ ಆಕೆಯ ಒಣಕಲು ದೇಹವನ್ನು ನಡುಗಿಸುತ್ತಿತ್ತು. ಹಣೆ ಮುದುರಿ ಸಾಲುಗಟ್ಟಿದ್ದ ಗೆರೆಗಳ ನಡುವೆ ಕಾಸಗಲದ ಪುಡಿ ಕುಂಕುಮ ಬಿರುಕುಬಿಟ್ಟಿತ್ತು. ಗುಳಿ ಬಿದ್ದ ಸುಕ್ಕಿನ ಕೆನ್ನೆ. ಜೀರ್ಣವಾಗಿದ್ದ ಇಳಕಲ್ಲಿನ ಸೀರೆ. ಮಾಸಲು ರವಿಕೆ. ಆಕೆಯ ಮಗ್ಗುಲಲ್ಲಿ ಕುಳಿತಿದ್ದಾತ , ಬಡತನದಲ್ಲಿ ಕೊರೆದು ತೆಗೆದಂತ್ತಿದ್ದ ಆಕೃತಿ, ಎಲುಬಿನ ಹಂದರವಾಗಿದ್ದ ತೊಂಭತ್ತರ ಮುದುಕರು….ಎದುರಿನ ಸನ್ಮಾನ ಸಮಾರಂಭದ ಹೃದ್ಯ ದೃಶ್ಯ ಕಂಡು ಜಿನುಗಿದ್ದ ಅವರ ಕಣ್ಣಹನಿಯ ಹೊಳಪು ಇನ್ನೂ ಆರಿರಲಿಲ್ಲ. ಬತ್ತಿದ್ದ ಅವರಿಬ್ಬರ ಮುಖಗಳಲ್ಲೂ ಸಂತಸದ ಮಿನುಗು!!!
“ಇವರೇ ನೋಡಿ ನಮ್ಮ ತಾಯಿ-ತಂದೆ….ಅಂದರೆ ಸಾಕ್ಷಾತ್ ಮುಕುಂದರಾಯರ ಹೆತ್ತವರು”-ನಾಣಿ ಅರ್ಥಾತ್ ನಾರಾಯಣರಾಯ ಪರಿಚಯಿಸಿದ.
“ಅಮ್ಮಾ , ನಿಮ್ಮ ಮಗನ ಬಗ್ಗೆ ನಾವು ಪುಸ್ತಕ ಬರೆದು ಪ್ರಕಟಿಸುತ್ತಿದ್ದೇವೆ…ಅವರ ಹೆಸರು ಅಂತರ್ರಾಷ್ಟೀಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿ ಹೋಗ್ತಿದೆ….ಅವರು ಹುಟ್ಟಿದಾಗಿನಿಂದ ನಡೆದ ಅವರ ಬಾಲ್ಯದ ವಿಚಾರಗಳನ್ನೆಲ್ಲ ಚಾಚೂ ತಪ್ಪದೆ ತಿಳಿಸ್ತೀರಾ ತಾಯಿ…ನಾಳೆ ನಿಮ್ಮನೆಗೆ ಬರ್ತೀನಿ”- ಲೇಖಕರು ಉತ್ಸಾಹದ ಆವೇಶದಿಂದ ಬಡಬಡಿಸಿದರು. ಮುದುಕಿ ತನ್ನ ಕಣ್ಣಿನ ರೆಪ್ಪೆಯನ್ನು ಪಟಪಟನೆ ಬಡಿಯಿತು ಎರಡು ಸಲ. ಧ್ವನಿ ಅತ್ಯಂತ ಕ್ಷೀಣವಾಗಿ, ನಡುಗುತ್ತ ಬಂತು-“ಸಂತೋಷಾನಪ್ಪ….ಇಂಥ ಪ್ರಸಿದ್ಧ ಮನುಷ್ಯ ,ದೇಶಕ್ಕೆ ದೊಡ್ಡ ಸೇವೆ ಸಲ್ಲಿಸ್ತಿರೋ ವ್ಯಕ್ತಿ, ನನ್ನ ಮಗನಾಗಿ ಹುಟ್ಟಿದ್ದು ನನ್ನ ಪುಣ್ಯ….ಅವನಿಗೆ ದೇವರು ಒಳ್ಳೇದು ಮಾಡಲಿ….ಅವನ್ನೆಲ್ಲಿದ್ರೂ, ಚೆನ್ನಾಗಿ ಆಯಸ್ಸು ಹಾಕ್ಕೊಂಡು ಸುಖವಾಗಿ ಬಾಳಲಿ”-ಮಾತೃಹೃದಯ ಮನಸಾರೆ ಹಾರೈಸಿತು.
ಆದರೆ ನೀಳವಾದ ನಿಟ್ಟುಸಿರು ಬಿಟ್ಟ ಮದುಕರ ಕಣ್ಣಲ್ಲಿ ಮಾತ್ರ ಅಸಹನೆಯ ಕಿಡಿ ಹಾರಿತ್ತು.
ತಂದೆ-ತಾಯಿಯರಿಗೆ ಆಸರೆಯಿತ್ತು ಹೊರಗೆ ನಡೆಸಿಕೊಂಡು ಹೋದ ನಾಣಿಯ ತುಟಿಗಳು ಅವಡುಗಚ್ಚಿದ್ದವು. ಮೂಗಿನ ಹೊಳ್ಳೆ ಅರಳಿ, ಕೆಂಡದ ಕಣ್ಣುಗಳು ವೇದಿಕೆಯ ಮೇಲಿದ್ದ ಸನ್ಮಾನಿತನನ್ನು ತಿವಿಯುವಂತೆ ನೋಡಿದವು.
ವೇದಿಕೆಯ ಸಿಂಹಾಸನದ ಮೇಲೆ ಕುಸಿದು ಕುಳಿತಿದ್ದ ರಾಯರಿಗೆ ಯಾರೋ ನೀರು ಕುಡಿಸುತ್ತಿದ್ದರು. ಅವರೆದೆಯ ಮೇಲಿದ್ದ ಬಂಗಾರದ ಪದಕ ಅವರ ಹೃದಯದ ಬಡಿತವನ್ನು ನಿಲ್ಲಿಸಿತ್ತು. ಕೊರಳ ಸುತ್ತ ಅಡಕಿದ್ದ ಹಾರಗಳು ಅವರ ಕುತ್ತಿಗೆಯನ್ನು ಅಮುಕಿ ಉಸಿರುಗಟ್ಟಿಸುತ್ತಿದ್ದವು. ನಡೆದ ಅನಿರೀಕ್ಷಿತ ಘಟನೆ ಅವರನ್ನು ನಿಶ್ಚೇಷ್ಟಿತನನ್ನಾಗಿಸಿತ್ತು.
ಸಮಾರಂಭ ಪೂರ್ಣಗೊಳ್ಳುವ ಮುನ್ನವೇ ಸಭೆ ಚೆದುರಿತ್ತು. ಜನಸ್ತೋಮದ ನಾಲಗೆಗಳು ನಾನಾ ರೀತಿ ಹೊರಳುತ್ತಿದ್ದವು.
ಮರುದಿನ ನಾನಾ ಟಿವಿ ವಾಹಿನಿಗಳೊಂದಿಗೆ ದೊಡ್ಡ ಪತ್ರಕರ್ತರ ದಂಡೇ ನಾಣಿಯ ಮನೆಯಲ್ಲಿತ್ತು. ಮುಂಚೂಣಿಯಲ್ಲಿದ್ದ ಲೇಖಕ.
“ನಿಮ್ಮ ಮಗ ಅಷ್ಟು ದೊಡ್ಡ ಹುದ್ದೆಯಲ್ಲಿದ್ದು, ಸಮಾಜದ ಅತ್ಯಂತ ಪ್ರತಿಷ್ಟಿತ ವ್ಯಕ್ತಿ, ಶ್ರೀಮಂತರೆನಿಸಿಕೊಡಿದ್ದ್ದು, ತಾವು…..!!?” – ವಿಸ್ಮಯದ ನೂರು ಪ್ರಶ್ನೆಗಳು ಎದುರಾದವು.
ನಾಣಿಯದು ಬಿಸಿ ರಕ್ತ. ಏನೋ ಹೇಳಲೆಂದು ಒಡನೆಯೇ ಬಾಯ್ತೆರೆಯಲೆತ್ನಿಸಿದ. ಆದರೆ ಅಷ್ಟರಲ್ಲಿ ಅವನ ತಾಯಿ ಸೀತಮ್ಮ ಇಕ್ಕಟ್ಟಿಗೆ ಸಿಕ್ಕಿದಂತೆ ಮುಜುಗರದ ಮುಖ ಮಾಡಿದ್ದನ್ನು ಗಮನಿಸಿದ ರಂಗನಾಥಯ್ಯನವರು-” ಅಂಥದ್ದೇನಿಲ್ಲ ಬಿಡಿ….ನಮಗೆಲ್ಲಿ ಅನುಕೂಲ ಅನ್ನಿಸಿತೋ ಅಲ್ಲಿದ್ದೇವೆ ಅಷ್ಟೇ …” ಎಂದು ಉತ್ತರಿಸಿ ಬಂದವರನ್ನು ನಿರಾಶೆಗೊಳಿಸಿದರು. ಆದರೂ ಪಟ್ಟು ಬಿಡದ ಪತ್ರಿಕೆಯವರು ಮಾತನಾಡಲು ಒತ್ತಾಯಿಸಿದರು. ನಾಣಿ, ತಂದೆಯ ವಿಷಣ್ಣ ಮುಖಭಾವಕ್ಕೆ ಕಟ್ಟುಬಿದ್ದು ಅನಿವಾರ್ಯವಾಗಿ ಬಾಯಿಗೆ ಬೀಗ ಹಾಕಿಕೊಂಡನಾದರೂ ಮುಖದಲ್ಲಿ ಮಾತ್ರ ಅಸಹನೆ ಹನಿಸಿದ.
ತಮ್ಮ ಬುದ್ಧಿವಂತಿಕೆಯನ್ನೆಲ್ಲ ಖರ್ಚು ಮಾಡಿ ಎಷ್ಟೇ ಪ್ರಯತ್ನಿಸಿದರೂ ವಾಹಿನಿಯವರಿಗೆ, ಪತ್ರಕರ್ತರಿಗೆ ಮಾತ್ರ ಸಣ್ಣ ಸುದ್ದಿಯೂ ದೊರೆಯದೆ, ಬೇಸರದಿಂದ ಅವರೆಲ್ಲ ನಿರ್ಗಮಿಸಲೇಬೇಕಾಯಿತು. ರಾಯರ ಜೀವನ ಚರಿತ್ರೆ ಬರೆಯಲುದ್ದೇಶಿಸಿದ ಲೇಖಕ ಮಾತ್ರ ತಾನು ಕೂತ ಜಾಗದಿಂದ ಕಿಂಚಿತ್ತೂ ಅಲುಗಾಡಲಿಲ್ಲ.
“ಸಾರ್, ನೀವು ಹೇಳದೇ ಹೋದರೆ ಸತ್ಯ ಹುದುಗಿಹೋಗತ್ತೆ…ನಾನು ಬರೆಯೋ ಜೀವನ ಚರಿತ್ರೆ ಅರ್ಥ ಕಳೆದುಕೊಳ್ಳತ್ತೆ…ಒಬ್ಬ ಮನುಷ್ಯನ ಸಾಧನೆ,ಪ್ರಗತಿಪರ ಹೆಜ್ಜೆಗಳ ಹಿನ್ನಲೆಗೆ ಅವನ ಬಾಲ್ಯದ ಜೀವನ ತುಂಬಾ ಮುಖ್ಯ….ಬೇರೆಯವರಿಗೆ ಅದು ಮಾದರಿ, ಆ ಅಧ್ಯಾಯವೇ ಅವನ ಒಟ್ಟು ಜೀವನಚಿತ್ರಣದಿಂದ ಮಾಯವಾದರೆ, ಅದು ನಿಸ್ಸಾರವಾಗತ್ತೆ…ಅಡಿಪಾಯವಿಲ್ಲದ ವ್ಯಕ್ತಿಚಿತ್ರಣ ಅಪೂರ್ಣವಾಗತ್ತೆ…ನಾನೆಷ್ಟೇ ಭವ್ಯವಾಗಿ ಚಿತ್ರಿಸಿದರೂ ಅದು ಶಿಥಿಲವಾಗತ್ತೆ…ನನ್ನ ಕಾಳಜಿಯನ್ನು ಅರ್ಥ ಮಾಡಿಕೊಳ್ಳಿ ಪ್ಲೀಸ್…”-ಎಂದವನು ಅಲವತ್ತುಕೊಂಡ.
ನಾಣಿ-” ಇರೋದೇ ಉಂಟಂತೆ, ಯಾಕದನ್ನು ಮುಚ್ಚಿಡ್ತೀರಿ…..ಕಡೇ ಪಕ್ಷ, ಬೇರೆ ಇಂಥ ಕೃತಘ್ನ ಮಕ್ಕಳ ಕಣ್ಣಾದರೂ ತೆರೆಯಬಹುದಪ್ಪಾ…..ದಯವಿಟ್ಟು ಹೇಳಿ…..ಅಥವ ನನಗಾದರೂ ಹೇಳಲು ಬಿಡಿ…”-ಎಂದ ಗಂಭೀರ ದನಿಯಲ್ಲಿ.
ರಂಗನಾಥಯ್ಯ ದೀರ್ಘ ನಿಟ್ಟುಸಿರಿಕ್ಕಿ, ಹೆಂಡತಿಯತ್ತ ಹೊರಳಿ ನೋಡಿದರು. ಸೀತಮ್ಮನ ಮೊಗದಲ್ಲಿ ನೋವು ಮಡುಗಟ್ಟಿತ್ತು.
ನೆನಪು ಸುಲಿಯತೊಡಗಿತು……..
ಆತನ ಮುಖದಲ್ಲಿ ಆಕ್ರೋಶದ ನೆರಿಗೆ ನಿಧಾನವಾಗಿ ಹರಡತೊಡಗಿತು. ದೊಡ್ಡ ನಿಟ್ಟುಸಿರಿನೊಡನೆ ಹೇಳತೊಡಗಿದರು: ” ನಮ್ಮ ದಾಂಪತ್ಯದ ಮೊದಲ ಕನಸು ಅವನು…ನಮ್ಮ ಶಕ್ತಿ ಮೀರಿಯೇ ಅವನನ್ನು ಬಹು ಪ್ರೀತಿಯಿಂದ, ಜತನದಿಂದ ಬೆಳೆಸಿದೆವು ನಾವು….ಅವನು ಆಸೆಪಟ್ಟಿದ್ದೆಲ್ಲ ಸಿಗುವಂಥ ದುರಭ್ಯಾಸ ಬೆಳೆಯಲು ನಾವೇ ಕಾರಣವೆಂದರೆ ತಪ್ಪಲ್ಲ…ಸುಮಾರು ಹತ್ತು ವರ್ಷ ಅವನ ಜೋಪಾನಕ್ಕಾಗಿಯೇ ಅಥವಾ ಅವನ ಅಖಂಡ ಸುಖಕ್ಕಾಗಿಯೇ, ಇನ್ನೊಂದು ಮಗು ಹುಟ್ಟಿ ಅವನ ಆಸೆಗಳಲ್ಲಿ ಪಾಲು ಕೇಳದಂತೆ ನೋಡಿಕೊಂಡೆವು. ಏಕ ಮಾತ್ರ ಪುತ್ರನಿಗಾಗಿ ನಾವಷ್ಟು ತ್ಯಾಗ ಮಾಡಿದೆವೆಂದೇ ಹೇಳಬಹುದು. ಅದೇ ತಪ್ಪಾಯಿತು…ತಮ್ಮ ಹುಟ್ಟಿದಾಗ ಅವನು ಸಂಭ್ರಮಿಸೋ ಬದಲು, ಅವನನ್ನು ದ್ವೇಷಿಸತೊಡಗಿದ…ಅನಂತರ ತಂಗಿ ಹುಟ್ಟಿದಾಗಲೂ ಸ್ವಾಗತಿಸಲಿಲ್ಲ. ಕೊಂಚ ಸ್ವಾರ್ಥಪರವಾಗೇ ಬೆಳೆದನೆಂದು ಹೇಳಬಹುದು….ಆದರೆ ನಮ್ಮ ಪ್ರೀತಿ ಮಾತ್ರ ಅವನ ಬಗ್ಗೆ ಕಿಂಚಿತ್ತೂ ಕಡಮೆಯಾಗಲಿಲ್ಲ….ಹುಡುಗ ತುಂಬಾ ಬುದ್ಧಿವಂತನಾಗಿದ್ದ. ಚೆನ್ನಾಗಿ ಓದುತ್ತಿದ್ದ. ಎಲ್ಲ ಕ್ಲಾಸಿನಲ್ಲೂ ಉನ್ನತ ಶ್ರೇಣಿ-ರ್ಯಾಂಕು…ಸಾಲ-ಸೋಲ ಮಾಡಿ ಓದಿಸಿದೆವು…ಶಕ್ತಿ ಮೀರಿ ಮಾಡಿದೆವು. ಇವಳ ಮೈ ಮೇಲಿನ ಚಿನ್ನವೆಲ್ಲ ಕರಗಿತು..ಮೈ ತುಂಬ ಸಾಲ…..ಯೋಚನೆ ಮಾಡಲಿಲ್ಲ..ಅವನೊಂದು ಒಳ್ಳೆಯ ಹಂತ ತಲುಪಿದರಷ್ಟೇ ಸಾಕು ಎಂದು ಜೀವ ಬಿಗಿಹಿಡಿದು ಅವನ ಶ್ರೇಯೋಭಿವೃದ್ಧಿ ಬಯಸಿದೆವು. ಎಂಜಿನಿಯರಿಂಗ್ ನಂತರ ವಿದೇಶದಲ್ಲಿ ಎಂ.ಎಸ್. ಮಾಡಲೇಬೇಕೆಂದು ಹಟ ಹಿಡಿದಾಗ, ಇದ್ದ ಒಂದು ಪುಟ್ಟ ಗೂಡೂ ಮಾರಿದ್ದಾಯ್ತು…..”
” ಅಪ್ಪಾ, ನೀವು ನನಗೆ ಎಗ್ಸಿಬಿಷನ್ನಿಂದ ತಂದ್ಕೊಟ್ಟ ಆ ಕೆಂಪು ವೆಲ್ವೆಟ್ ಕೋಟನ್ನು ಅಣ್ಣ, ಹೊಟ್ಟೆಕಿಚ್ಚಿನಿಂದ ಒಲೆಗೆ ಹಾಕಿದ ಕಥೆ ಹೇಳಲೇ ಇಲ್ವಲ್ಲಪ್ಪಾ…”-ಎಂದು ನಾಣಿ ಮಧ್ಯೆ ಬಾಯಿ ಹಾಕಿದ…
ರಂಗನಾಥಯ್ಯ ಅವನತ್ತ ಹರಿತ ನೋಟ ಬೀರಿ, ಸುಮ್ಮನೆ ಕೂಡುವಂತೆ ಕಣ್ಣಲ್ಲೇ ಸೂಚಿಸಿ ಕಥೆ ಮುಂದುವರಿಸಿದರು: “ವಿಲಾಯಿತಿಯಿಂದ ಹೆಚ್ಚಿನ ವಿದ್ಯಾಭ್ಯಾಸ ಮುಗಿಸಿ ¨ಬಂದವನಿಗೆ ಸರ್ಕಾರದ ಕೆಲಸವಾಯಿತು ನೋಡಿ, ಹೆಣ್ಣು ಕೊಡುವವರು ನಾ ಮುಂದು ತಾ ಮುಂದು ಎಂದು ಒಂದೇಸಮನೆ ಮನೆಗೆ ಎಡತಾಕಿದರು. ನಾವಿನ್ನೂ ಸಾಲದ ಬಲೆಯಿಂದ ಬಿಡಿಸಿಕೊಂಡಿರಲಿಲ್ಲ…ಅದು ಅವನಿಗೆ ಅರ್ಥವಾಗಬೇಕಲ್ಲ…ತಂಗಿ-ತಮ್ಮಂದಿರ ವಿದ್ಯಾಭ್ಯಾಸದ ಬಗ್ಗೆ ಅವನಿಗೆ ಯೋಚನೆಯೇ ಇಲ್ಲ…ಮನೆ ಪರಿಸ್ಥಿತಿ ಬಗ್ಗೆ ಗಮನವೇ ಇಲ್ಲ…ಆಗಲೇ ಅವನು ಮದುವೆಗೆ ರೆಡಿಯಾಗಿಬಿಟ್ಟಿದ್ದ. ಎದುರಿಗೆ ಬಂದು ಕುಳಿತ ಮೊದಲ ಹೆಣ್ಣನ್ನು ಕಣ್ಣರಳಿಸಿ ನೋಡಿದ್ದ. ಪಾಪಾ ಹೆಣ್ಣಿನ ಆಯ್ಕೆ ಬಗ್ಗೆ ಅವನಿಗೆ ಏನೂ ಕಲ್ಪನೆಯಿರಲಿಲ್ಲ…ಬಂದವರು ಅವನ ಕೆಲಸ, ಸಂಪಾದನೆ, ಬ್ಯಾಂಕ್ ಬ್ಯಾಲೆನ್ಸ್ ಇತ್ಯಾದಿಗಳ ಬಗ್ಗೆ ಒಂದರ ಹಿಂದೆ ಒಂದು ಹತ್ತಾರು ಪ್ರಶ್ನೆಗಳನ್ನು ಹಾಕಿದರು. ಹೆಣ್ಣಿನ ತಾಯಿ, ಅವನ ತಂಗಿ-ತಮ್ಮಂದಿರ ಹಾಗೂ ನಮ್ಮ ಮನೆಯ ಕಡೆ ಇರೋ ಇತರ ಜವಾಬ್ದಾರಿಗಳ ಬಗ್ಗೆ ವಿಚಾರಿಸಿಕೊಂಡರು….ನಮ್ಮಗಳ ಮನಸ್ಸಿಗೇಕೋ ಇವೆಲ್ಲ ಕಿರಿಕಿರಿಯೆನಿಸಿ ಅಹಿತವಾಯಿತು. ಆದರೆ ನಮ್ಮ ದುರಾದೃಷ್ಟಕ್ಕೆ ಮರುದಿನ ಬೆಳಗ್ಗೆಯೇ, ಆ ಹುಡುಗಿ ಅವನ ಆಫೀಸಿಗೆ ಹೋಗಿ ಅವನನ್ನು ಕಂಡು, ಮಾತನಾಡಿ ಮದುವೆಗೆ ಒಪ್ಪಿಸಿಯೇ ಬಿಟ್ಟಿದ್ದಳು. ನಾವು ‘ಸ್ವಲ್ಪ ತಡಿ ಮುಕುಂದ’ ಎಂದರೂ, ಮದುವೆ ನಡೆದೇಹೋಯಿತು…”
ಸೀತಮ್ಮನಿಗೆ ತಡೆಯಲಾಗಲಿಲ್ಲ. ಗಂಟಲುಬ್ಬಿಬಂದರೂ ಬಡಬಡಿಸಿದರು:
“ಎಂಥ ಅವಿವೇಕಿ ನೋಡಿ ನಮ್ಮ ಹುಡುಗ, ಮೊದಲ ರಾತ್ರಿಯಲ್ಲೇ, ನಮಗೆ ಈ ಮದುವೆ ಇಷ್ಟವಿರಲಿಲ್ಲ ಅಂತ ಅವಳಿಗೆ ಹೇಳಿಬಿಡೋದೇ?…ಅದೇನು ಮೋಡಿ ಮಾಡಿದಳೋ ಮಾರಾಯಗಿತ್ತಿ, ತಿಂಗಳೊಪ್ಪತ್ತಿನಲ್ಲಿ ಮನೆ ಮುಂದೆ ವ್ಯಾನ್ ಬಂದೇಬಿಡ್ತು, ಗಂಡ-ಹೆಂಡತಿ ಬೇರೆ ಮನೆ ಮಾಡ್ಕೊಂಡು ಹೊರಟೇಹೋದ್ರು…..ನಮಗೆ ಒಂದೂ ಮಾತೂ ಹೇಳಲಿಲ್ಲ. ಅಲ್ಲಿಂದ ಇವತ್ತಿನವರೆಗೂ, ಮೂವತ್ತು ವರ್ಷದ ಮೇಲಾಯ್ತು , ನಮಗೆ ಅವರ ಸುದ್ದಿಯೇ ತಿಳಿಯಲಿಲ್ಲ. ಒಂದು ಸಲವೂ ಅವರು ನಮ್ಮನೆಗೆ ಬರಲಿಲ್ಲ….ಆ ನನ್ನ ಕಂದನ ಜೊತೆಗೆ ಅವತ್ನಿಂದ ಇವತ್ತಿನವರೆಗೂ ಒಂದು ಮಾತಾಡೋ ಅವಕಾಶವೂ ನಮಗೆ ಸಿಕ್ಕಿಲ್ಲ….ಕಣ್ಣಲ್ಲಿ ನೋಡೂ ಇಲ್ಲ….ಅವನ ದನಿಯೇ ಮರ್ತುಹೋಗಿದೆ…ನೆಂಟರಿಷ್ಟರನ್ನು ನೋಡಿ ಹನ್ನೆರಡು ವರ್ಷದ ಮೇಲಾದರೆ ಎಣ್ಣೆಯಲ್ಲಿ ಮುಖ ನೋಡಬೇಕಂತೆ, ಶಾಸ್ತ್ರ “-ಎಂದಾಕೆ ಬಿಕ್ಕಳಿಸತೊಡಗಿದರು. ಅವರ ಕಂಠ ಸೊರಗಿಹೋಗಿತ್ತು.
“ಅಮ್ಮಾ ಪ್ಲೀಸ್,…ದುಃಖಾನ ಕಂಟ್ರೋಲ್ ಮಾಡ್ಕೋ….ಅಂಥ ಅಯೋಗ್ಯನಿಗಾಗಿ ಕಣ್ಣೀರು ಹಾಕ್ಬೇಡಮ್ಮಾ….ನಿಜ ಹೇಳ್ಬೇಕೂಂತಂದ್ರೆ ಆ ಕ್ರೂರಿಗೆ ಒಂದ್ಸಲವೂ ಹೆತ್ತ ತಂದೆ-ತಾಯೀನಾ ನೋಡ್ಬೇಕು ಅಂತ ಅನ್ನಿಸದಿರೋದು ಆಶ್ಚರ್ಯವೇ ಸರಿ…ತಂದೆ-ತಾಯಿಗಳಿಗೆ ಇಲ್ಲದ ಸುಖ ಅವನ ಹೆಂಡತಿ-ಅತ್ತೆ ,ಮಾವ, ಆಕೆಯ ತೌರಿನವರಿಗೆ. ಅವನ ಹಣ,ಸಂಪಾದನೆ ಸ್ಥಾನ-ಮಾನ, ಕಾರು ಬಂಗಲೆ,ದೌಲತ್,ಸೌಲಭ್ಯಗಳೆಲ್ಲ ಅವನ ಹೆಂಡತಿ ಕಡೆಯವರು ಎಂಜಾಯ್ ಮಾಡೋದೂಂತಂದ್ರೆ ನಮಗೆ ಎಷ್ಟು ದುಖಃವಾಗಿರಬೇಡ ಹೇಳಿ….ದಿನೇ ದಿನೇ ಕೆಲಸದಲ್ಲಿ ಮೇಲೆ ಬರ್ತಿದ್ದ..ದೊಡ್ಡ ದೊಡ್ಡ ಹುದ್ದೆಗೇರುತ್ತಿದ್ದ…ಅವನ ಸುದ್ದಿಯನ್ನು ನಾವು ಟಿ.ವಿ. ಮುಖಾಂತರ,ಪತ್ರಿಕೆಗಳ ಮೂಲಕ ತಿಳಿದುಕೊಳ್ಳುತ್ತಿದ್ವಿ, ಅಂದ್ರೆ ನಮ್ಮದು ಎಂಥ ದೌರ್ಭಾಗ್ಯ ಅಂತ ನೀವೇ ಊಹಿಸಿಕೊಳ್ಳಿ……ಅಪ್ಪಾ-ಅಮ್ಮನಿಗೆ ಟಿವಿಯಲ್ಲಷ್ಟೇ ಮಗನ ಮುಖದರ್ಶನ!!…ಈಗೀಗ ಅವನು ಮುಖ್ಯಮಂತ್ರಿಗಳಿಗೆ ಆಪ್ತನಾಗಿದ್ದುದರಿಂದ ಸದಾ ಸುದ್ದಿಯಲ್ಲಿರುತ್ತಿದ್ದ…ಎಲ್ಲಕ್ಕಿಂತ ದುರಂತ ಅಂದರೆ, ಅವನು ನಮ್ಮಿಂದ ದೂರವಾದ ಐದಾರು ವರ್ಷಗಳಲ್ಲೇ ನಮ್ಮ ಎರಡನೇ ಅಣ್ಣ ಆಕ್ಸಿಡೆಂಟ್ ನಲ್ಲಿ ತೀರಿಕೊಂಡ. ಸುದ್ದಿ ತಿಳಿಸಿದೆವು….ಅವನ ಸುಳಿವೇ ಇಲ್ಲ..ಅದಾದ ಎರಡು ವರ್ಷಕ್ಕೆ ಅವನ ತಂಗಿ ಅಂದರೆ ನನ್ನ ಅಕ್ಕನ ಮದುವೆಯಾಯ್ತು…ಅದಕ್ಕೂ ಅವನು ಬರುವ ಮನಸ್ಸು ಮಾಡಲಿಲ್ಲ…ಅವನ ಪಾಲಿಗೆ ನಾವೆಲ್ಲ ಸತ್ತುಹೋಗಿದ್ವಿ….ಏನಂಥ ಸೇಡೋ , ಯಾಕಷ್ಟು ದ್ವೇಷವೋ ತಿಳಿಯಲಿಲ್ಲ…ನಾವೇನು ಅಂಥ ಮಹಾಪರಾಧ ಮಾಡಿದ್ವಿ ನೀವೇ ಹೇಳಿ ಸಾರ್…ಅವನ ಹೆಂಡ್ತಿ ಆಯ್ಕೆ ಬಗ್ಗೆ ಸ್ವಲ್ಪ ಯೋಚಿಸು ಅಂತ ಹೆತ್ತವರು ಅಂದದ್ದೇ ತಪ್ಪಾಯ್ತೇ?….ಇದೂ ಸಾಲದೂಂತ ನಮ್ಮ ತಾಯಿ, ಮಗನನ್ನು ನೋಡಿ ಹನ್ನೆರಡು ವರ್ಷವಾಗಿಬಿಡತ್ತಲ್ಲ ಅಂತ ಹಾಗೂ ಒಮ್ಮೆ ಧೈರ್ಯ ಮಾಡಿ ಮಗನ ಆಫೀಸಿಗೆ ಹೋಗಿ, ದೇವಸ್ಥಾನದಲ್ಲಿ ಎಲ್ಲ ಮುಖ ಮುಖ ನೋಡೋಣ ಬಾ ಅಂತ ಹೇಳಕ್ಕೆ ಹೋದರೆ, ಅವನು ಅಮ್ಮನನ್ನು ಒಳಗೇ ಸೇರಿಸಲಿಲ್ವಂತೆ ಪಾಪಿ…”-ಎಂದು ಮಾತು ನಿಲ್ಲಿಸಿದ ನಾಣಿಯ ಕಣ್ಣಿಂದ ಕಣ್ಣೀರ ಧಾರೆ ಹರಿಯತೊಡಗಿತು.
ಕಥೆ ಕೇಳುತ್ತಿದ್ದ ಲೇಖಕ ಗದ್ಗದಿತನಾಗಿದ್ದ.
“ಮನುಷ್ಯ ಕೆಟ್ಟವನಲ್ಲಪ್ಪ…ಅದ್ಯಾಕೆ ಅವನಿಗೆ ಇಂಥ ದುರ್ಬುದ್ಧಿ ಬಂತೋ ಆ ದೇವನೇ ಬಲ್ಲ…ಸಂಬಂಧದ ವಾಂಛಲ್ಯವೇ ಇಲ್ಲ…ಆದರೂ ನೆನ್ನೆ ನಮ್ಮ ಕರುಳು ತಡೆಯಲಿಲ್ಲಪ್ಪ….ಮಗನ್ನ ಕಣ್ಣಾರೆ ನೋಡಬೇಕೂಂತ ಹಂಬಲಿಸಿಬಂದೆವು….ಅವನ ಗುಣಗಾನ-ಪ್ರಸಿದ್ಧಿ ಕೇಳಿ ತುಂಬಾ ತೃಪ್ತಿಯಾಯ್ತಪ್ಪ…”-ತಂದೆ ಮಗನನ್ನು ನೆನೆಸಿಕೊಳ್ಳುತ್ತ ಆನಂದತುಂದಿಲರಾದರು.
ಸಾಕಷ್ಟು ಮಾಹಿತಿ ಸಂಗ್ರಹಿಸಿದ ಬಗ್ಗೆ ಲೇಖಕನ ಮುಖದಲ್ಲಿ ಗೆಲುವಿನ ನಗೆ ಹರಡಿತ್ತು.
“ತುಂಬಾ ಥ್ಯಾಂಕ್ಸ್ ಸಾರ್…ಅಮೂಲ್ಯವಾದ ಮಾಹಿತಿ ನೀಡಿದಿರಿ…ನನ್ನ ಕೃತಿಗೆ ಒಳ್ಳೆಯ ಆಯಾಮ ಸಿಗತ್ತೆ….ಸ್ವಾರಸ್ಯಪೂರ್ಣ ಸಂಗತಿಗಳಿಂದ ಕೂಡಿದ ನನ್ನ ಪುಸ್ತಕಕ್ಕೆ ಉತ್ತಮ ಬೇಡಿಕೆ ಲಭ್ಯವಾಗತ್ತೆ, ತುಂಬಾ ವಂದನೆಗಳು, ನಾನಿನ್ನು ಬರ್ತೀನಿ”- ಎಂದು ಹೊರಡಲನುವಾದ ಲೇಖಕ, ಮೇಲೆದ್ದು ನಿಂತ.
ತಟ್ಟನೆ ಸೀತಮ್ಮ ,ಅವನ ಎರಡೂ ಹಸ್ತಗಳನ್ನು ಅನಾಮತ್ತು ಹಿಡಿದುಕೊಂಡವರೆ ಗದ್ಗದ ಕಂಠದಿಂದ- “ನೋಡೀಪ್ಪಾ…ನಿಮ್ಮ ಸಮಾಧಾನಕ್ಕೆ, ಒತ್ತಾಯಕ್ಕೆ ನಮ್ಮ ಮನಸ್ಸಿನೊಳಗಿನ ಮಾತುಗಳನ್ನೆಲ್ಲ ಹೇಳಿದ್ದೀವಪ್ಪಾ…ಆದರೆ ನೀವು ಇವುಗಳನ್ನು ಯಾವುದೇ ಕಾರಣಕ್ಕೂ ಖಂಡಿತ ನಿಮ್ಮ ಪುಸ್ತಕದಲ್ಲಿ ಸೇರಿಸಬಾರದು…ಇದು ಈ ತಾಯಿಯ ಕೋರಿಕೆ ಕಣಪ್ಪ…ಎಷ್ಟಾದರೂ ಅವನು ನನ್ನ ಕರುಳಿನ ಭಾಗ , ಅವನಿಗೆ ನೋವಾದರೆ ಖಂಡಿತ ನಾ ಸಹಿಸಲಾರೆ….ಈ ವಿಷಯಗಳಿಂದ ಅವನ ಪ್ರತಿಷ್ಠೆಗೆ ಯಾವ ಹಾನಿಯೂ ಆಗಬಾರದು ಕಣಪ್ಪ …. ನೀನೂ ನನ್ನ ಮಗ ಇದ್ದ ಹಾಗೆ, ನನ್ನ ಈ ಮಾತನ್ನು ನೀನು ತಪ್ಪದೇ ನಡೆಸಿಕೊಡಬೇಕು…”-ಎಂದು ಆತನ ಕೈಯನ್ನೆತ್ತಿ ತಮ್ಮ ತಲೆಯ ಮೇಲೆ ಇಟ್ಟುಕೊಂಡರು
ತಾಯಿಯ ನಿರ್ವ್ಯಾಜ ಅಂತಃಕರಣ ಕಂಡು ಆ ಲೇಖಕ ಮೂಕವಿಸ್ಮಿತನಾಗಿದ್ದ.!!!