Image default
Dance Reviews

ಸುಂದರ ನೃತ್ಯಾಭಿನಯ ಅಕ್ಷತಾ ನರ್ತನ ಸೊಬಗು

ಸದಾ ಹೊಸ ಪ್ರಯೋಗಗಳಿಗೆ ತುಡಿಯುವ ನಾಟ್ಯಗುರು ದೀಪಾಭಟ್ ಎಂದೂ ಕನ್ನಡ ಕೃತಿಗಳಿಗೆ ಒತ್ತುಕೊಡುವ ಉತ್ಸಾಹಶೀಲ  ಕನ್ನಡಾಭಿಮಾನಿ. ಕನ್ನಡದ ವೈಶಿಷ್ಟ್ಯವನ್ನು ಎತ್ತಿ ಹಿಡಿಯುವ ಇಂಥ ಮನೋವೃತ್ತಿ ಉಳಿದವರಿಗೆ ಸ್ಫೂರ್ತಿಯ ಪ್ರೇರಣೆಯಾಗಬೇಕು.

            `ಕಲಾಕ್ಷೇತ್ರ’ದ ನೃತ್ಯದ ಛಾಪನ್ನು ಪ್ರದರ್ಶಿಸುವ ‘ನೃತ್ಯಕುಟೀರ’ದ ಸೃಜನಶೀಲ ನಾಟ್ಯಗುರು ದೀಪಾಭಟ್ ಅವರ ಪ್ರತಿಭೆಯ ಮೂಸೆಯಲ್ಲರಳಿದ ಕಲಾಶಿಲ್ಪ ಅಕ್ಷತಾರಾವ್, ಇತ್ತೀಚಿಗೆ ಜೆ ಎಸ್ ಎಸ್ ರಂಗಮಂದಿರದಲ್ಲಿ ರಂಗಪ್ರವೇಶಮಾಡಿ ತನ್ನ ಪ್ರತಿಭಾ ಪ್ರದರ್ಶನ ಮಾಡಿದಳು. ಆದ್ಯಂತವಾಗಿ ಆಕೆ ಪ್ರಸ್ತುತಿಪಡಿಸಿದ ಕೃತಿಗಳೆಲ್ಲ ಕನ್ನಡ ಕೃತಿಗಳೇ ಆಗಿದ್ದದ್ದು ವಿಶಿಷ್ಟವೆನಿಸಿತು.

            ಶುಭಾರಂಭದ ರಿದ್ಧಿ-ಸಿದ್ಧಿಯರ ಪತಿ ವಿನಾಯಕನ ಸ್ತುತಿ, ಸುಪ್ರಸಿದ್ಧ ರಂಗಗೀತೆ (ರಚನೆ ಬಿ.ವಿ.ಕಾರಂತ್)ಯಾಗಿದ್ದು ಇದನ್ನು ನಾಟಕದ ಮಟ್ಟಿನ ರೂಪದಲ್ಲೇ ವಿದುಷಿ ದೀಪಾಭಟ್ ನೃತ್ಯಕ್ಕೆ ಅಳವಡಿಸಿದ್ದು ಸಂಚಲನವುಂಟು ಮಾಡಿತು. ’ಗಜವದನ ಹೇರಂಭಾ ವಿಜಯಧ್ವಜ…’ ಎಂಬ ಸಾಲುಗಳಿಗೆ ಅಕ್ಷತಾ ಚೇತೋಹಾರಿಯಾಗಿ ಅಭಿನಯಿಸಿದಳು. ಪಂಚನಡೆಯ ‘ಅಲ್ಲರಿಪು’ವನ್ನು ನರಸಿಂಹಾಷ್ಟಕದ ಹಿನ್ನಲೆಯಲ್ಲಿ ದೃಷ್ಟಿಭೇದ-ಗ್ರೀವಬೇಧಗಳೊಂದಿಗೆ ಅಚ್ಚುಕಟ್ಟಾಗಿ ನೃತ್ತಗಳನ್ನು ಪ್ರದರ್ಶಿಸಿದಳು. ‘ತ್ರಿದೇವಿ ಶಬ್ದಂ’ -ತ್ರಿಮಾತೆಯರಾದ ಲಕ್ಷ್ಮಿ, ಸರಸ್ವತಿ ಮತ್ತು ಪಾರ್ವತಿಯರ ಗುಣಗಾನ, ಸಾಮರ್ಥ್ಯ ವರ್ಣನೆಯನ್ನು ಕಲಾವಿದೆ ತನ್ನ ಸ್ಫುಟವಾದ ಆಂಗಿಕಗಳ ಮೂಲಕ ಅಭಿವ್ಯಕ್ತಿಸಿದಳು. ಭಾವಪೂರ್ಣ ಅಭಿನಯ ದೈವೀಕತೆಗೆ ಮೆರುಗು ನೀಡಿತು.

ಭರತನಾಟ್ಯ ಪ್ರಸ್ತುತಿಯ ಹೃದಯಭಾಗವಾದ ‘ಪದವರ್ಣಂ’ ಸಂಕೀರ್ಣ ಜತಿಗಳಿಂದ ಕೂಡಿದ್ದು, ಆಕರ್ಷಕ ನೃತ್ತಗಳೊಡನೆ ಅಭಿನಯಪ್ರಧಾನ ದೀರ್ಘ ನೃತ್ಯಬಂಧವಾಗಿತ್ತು. ಸಾಮಾನ್ಯವಾಗಿ ವರ್ಣ ಪ್ರಸ್ತುತಿಯಲ್ಲಿ ನರ್ತಕಿಯರ ನೃತ್ಯ ಸಾಮರ್ಥ್ಯ, ನಟನಾ ಚತುರತೆ, ಲಯ-ತಾಳಜ್ಞಾನಗಳ ಮೇಲಿನ ಹಿಡಿತ ಸುವ್ಯಕ್ತವಾಗುತ್ತವೆ. ಆಭೇರಿ ರಾಗದ ‘ಪದವರ್ಣ’ದ ರಚನೆ ವಿ.ಮಹೇಶ ಸ್ವಾಮಿ ಹಾಗೂ ನೃತ್ಯ ಸಂಯೋಜನೆ-ಡಾ. ಎಂ.ಆರ್.ಕೃಷ್ಣಮೂರ್ತಿ. ‘ಸುಂದರೇಶ್ವರನು ಬಾರನೇಕೆ ಸಖಿ..?’ ಎಂದು ವಿಲಪಿಸುವ ವಿರಹೋತ್ಖಂಡಿತ ನಾಯಕಿ ತನ್ನ ದೈವ ಸುಂದರೇಶ್ವರನ ಆಗಮನದ ನಿರೀಕ್ಷೆಯಲ್ಲಿ ಬೇಯುವ ಹತಾಶೆಯ ಚಿತ್ರಣವನ್ನು ಅಕ್ಷತಾ ಮನಮುಟ್ಟುವಂತೆ ಚಿತ್ರಿಸಿದಳು. ತನ್ನನ್ನು ಶೋಧನೆಗೆ ಗುರಿ ಮಾಡಿರುವ ಸುಂದರೇಶ್ವರನನ್ನು ಪರಿಪರಿಯಾಗಿ ದೈನ್ಯದಿಂದ ಬೇಡುತ್ತ, ಭಕ್ತಿಯ ಪರಾಕಾಷ್ಟತೆಯನ್ನು ಮನಮುಟ್ಟುವಂತೆ ನಿವೇದಿಸುತ್ತಾಳೆ. 

ತ್ರಿಕಾಲದಲ್ಲಿ ಜತಿಗಳನ್ನು ಸರಾಗವಾಗಿ ನಿರೂಪಿಸುವ ಅಕ್ಷತಾ, ಪಕ್ವಾಭಿನಯದಲ್ಲೂ ರಸಿಕರ ಮನವನ್ನು ಗೆಲ್ಲುವಲ್ಲಿ ಸಫಲಳಾಗುತ್ತಾಳೆ. ಪ್ರತಿಸಾಲಿನ ವಿಸ್ತಾರದಲ್ಲೂ ವಿಭಿನ್ನ ಅಭಿನಯವನ್ನು ಅಭಿವ್ಯಕ್ತಿಸುವಳು. ದೀಪಾ ಅವರ ಪ್ರಬಲ ನಟುವಾಂಗದ ಲಯಕ್ಕೆ ತಕ್ಕ ಕಲಾವಿದೆಯ ಹೆಜ್ಜೆಗೆಜ್ಜೆಗಳ ವಿನ್ಯಾಸದಲ್ಲಿ ಆಕರ್ಷಣೆಯಿತ್ತು. 

 ‘ ಮಗಳೇ, ಎನ್ನ ಬಾಳಿನ ಮುಗುಳೇ’ ಎಂಬ ವಿಭಿನ್ನ ವಾತ್ಸಲ್ಯ ‘ಪದಂ’ ತಾಯಿ-ಮಗಳ ಅನುಪಮ ಸಂಬಂಧಕ್ಕೆ ಭಾಷ್ಯ ಬರೆಯಿತು. ಹುಟ್ಟಿದ ಕ್ಷಣದಿಂದ ಮಗಳನ್ನು ಎದೆಗವುಚಿ ಜೋಪಾನ ಮಾಡುವ ತಾಯಕರುಳಿನ ಮಿಡಿತ ಮತ್ತು ವೃದ್ಧಾಪ್ಯದಲ್ಲಿ ತಾಯನ್ನು ಜತನವಾಗಿ ಕಾಪಾಡುವ ಮಗಳ ಅಂತಃಕರುಣದ ಆಪ್ತ ಅನುಭವ ಹೃದಯಸ್ಪರ್ಶಿಯಾಗಿತ್ತು. ದೀಪಾ ನೃತ್ಯಸಂಯೋಜನೆ ಅರ್ಥಪೂರ್ಣವಾಗಿತ್ತು.

ಪುರಂದರದಾಸರ ‘ಯಮನೆಲ್ಲಿ ಕಾಣನೆಂದು ಹೇಳಬೇಡ’-ಭಗವಂತನನ್ನು ನಂಬಿದವರಿಗೆ ಕೇಡಿಲ್ಲ, ನಂಬದವರಿಗೆ ದೈವಕೃಪೆಯಿಲ್ಲ ಎಂಬ ಸಾರಾಂಶವನ್ನು ಕಲಾವಿದೆ ವಿವಿಧ ದೃಷ್ಟಾಂತಗಳ ಮೂಲಕ ಸುಂದರಾಭಿನಯದ ಸಂಚಾರಿ ಮತ್ತು ಮನೋಜ್ಞ ಭಂಗಿಗಳನ್ನು ಪ್ರದರ್ಶಿಸಿದಳು. ಅನಂತರ ಜಯಲಕ್ಷ್ಮೀ ಭಟ್ ಕಾವ್ಯಾತ್ಮಕವಾಗಿ ರಚಿಸಿದ ‘ಸಖೀ…ಕಾದಿರುವೆನು ನಾ..’ಎಂಬ ಜಾವಳಿಯಲ್ಲಿ ನಾಯಿಕಾ ದೇವಸೇನಾ ತನ್ನ ಸ್ವಾಮಿ ಸ್ಕಂಧನ ಬರುವಿಕೆಯ ನಿರೀಕ್ಷೆಯಲ್ಲಿ ಬಸವಳಿದು ವಿಹ್ವಲಳಾದ ವಿರಹಾರ್ತ ಸ್ತರಗಳನ್ನು ಅಕ್ಷತಾ ತನ್ನ ಪರಿಣತ ಅಭಿನಯ, ಆಂಗಿಕಗಳಿಂದ ಅಭಿವ್ಯಕ್ತಿಸಿದ್ದು ಮನಸೆಳೆಯಿತು. ಕಡೆಯಲ್ಲಿ ಪಾದರಸದ ಚಲನೆಯ ಜತಿಗಳು, ರಂಗಾಕ್ರಮಣದ ತಿಲ್ಲಾನದೊಂದಿಗೆ ಪ್ರಸ್ತುತಿ ಸಂಪನ್ನಗೊಂಡಿತು.

ನೃತ್ಯದ ಮೆರುಗನ್ನು ಎತ್ತಿ ಹಿಡಿದ ಗಾಯನ- ದೀಪ್ತಿ ಶ್ರೀನಾಥ್, ಕೊಳಲು-ಮಹೇಶಸ್ವಾಮಿ, ಮೃದಂಗ- ಜನಾರ್ಧನ ರಾವ್, ವಯೊಲಿನ್- ಕೃಷ್ಣ ಕಶ್ಯಪ್ ಮತ್ತು ನಟು ವಾಂಗಂ- ಗುರು ದೀಪಾ ಭಟ್ ಅವರ ಪ್ರತಿಭಾ ಸಹಕಾರ ಅಕ್ಷತಾಳ ರಂಗಪ್ರವೇಶದ ನೃತ್ಯ ಸಂಭ್ರಮಕ್ಕೆ ಉತ್ತಮ ಪ್ರಭಾವಳಿಯನ್ನು ನಿರ್ಮಿಸಿತ್ತು.

                   

Related posts

Captivating Rangapravesha of Ranjani Veena Belavadi

YK Sandhya Sharma

ಆಪ್ಯಾಯಮಾನ ಮೋಹಿನಿಯಾಟ್ಟಂ -ಕಥಕ್ ಸಮ್ಮಿಲನ

YK Sandhya Sharma

ಪ್ರೌಢ ಅಭಿನಯದ ಚೇತೋಹಾರಿ ನೃತ್ಯಸಂಭ್ರಮ

YK Sandhya Sharma

Leave a Comment

This site uses Akismet to reduce spam. Learn how your comment data is processed.