ಅಂದಿನ ಮುದವಾದ ಸಂಜೆಯಲ್ಲಿ ವೈಷ್ಣವಿ-ಶ್ರಾವಣಿ ಸೋದರಿಯರು ತಮ್ಮ ರಮ್ಯ ನರ್ತನದಿಂದ ಯಶಸ್ವಿಯಾಗಿ ‘ರಂಗಪ್ರವೇಶ’ ಮಾಡಿ ನೆರೆದ ಕಲಾರಸಿಕರ ಮನಸೂರೆಗೊಂಡರು. `ಭ್ರಮರ ಸ್ಕೂಲ್ ಆಫ್ ಮ್ಯೂಸಿಕ್ ಅಂಡ್ ಡಾನ್ಸ್’ನ ಖ್ಯಾತ ನೃತ್ಯಗುರು ವಿದುಷಿ ವಂದ್ಯಾ ಶ್ರೀನಾಥ್, ಉತ್ಕೃಷ್ಟಮಟ್ಟದ ಕೃತಿಗಳಿಗೆ ಹೊಸವಿನ್ಯಾಸದ ನೃತ್ಯಸಂಯೋಜನೆಯ ಮೂಲಕ ತಮ್ಮ ಶಿಷ್ಯರ ಪ್ರತಿಭಾ ಪ್ರದರ್ಶನವನ್ನು ಅನಾವರಣಗೊಳಿಸಿದ್ದರು.
ಕಲಾಕ್ಷೇತ್ರದ ಬಾನಿಯಲ್ಲಿ ಪರಿಪೂರ್ಣತೆ ಸಿದ್ಧಿಸಿಕೊಂಡ ಗುರು ವಂದ್ಯಾ, ಬಹು ಮುತವರ್ಜಿಯಿಂದ ಶಿಷ್ಯರಿಗೆ ತರಬೇತಿ ನೀಡಿದ್ದು ಕಲಾವಿದೆಯರ ಪ್ರಫುಲ್ಲ ನರ್ತನ ಸಾಕ್ಷಿಗೊಟ್ಟಿತ್ತು. ಮೊದಲಿಗೆ, ಸೋದರಿಯರು ‘ಷಣ್ಮುಖ ಕೌತ್ವಂ’ ಅನ್ನು ಭಕ್ತಿಭಾವದಿಂದ ಪ್ರಸ್ತುತಪಡಿಸುತ್ತ ತಮ್ಮ ನೃತ್ತ ಸಾಮರ್ಥ್ಯವನ್ನು ಕಲಾತ್ಮಕವಾಗಿ ಪ್ರದರ್ಶಿಸಿದರು. ವಿಶಿಷ್ಟ ಅಡವುಗಳು – ಹಸ್ತಚಲನೆ, ಪಾದಭೇದಗಳು ಮೊದಲನೋಟಕ್ಕೇ ಸೆರೆಹಿಡಿದವು. ಅನಂತರ ಪರಮೇಶ್ವರನನ್ನು ಕೊಂಡಾಡುವ ‘ಚಂದ್ರಶೇಖರ ಭಜಾಮಿ ಸತತಂ’ -ಚಂದ್ರಕೌನ್ಸ್ ರಾಗದ ಕೀರ್ತನೆ, ಬಸವಣ್ಣನವರ ಅರ್ಥಪೂರ್ಣ ವಚನವನ್ನು ನಾಂದಿಪದ್ಯದಂತೆ ಬಳಸಿಕೊಂಡು ಆರಂಭಿಸಿದ್ದು ಸೊಗಸೆನಿಸಿತ್ತು. ವೈಷ್ಣವಿ, ಸ್ವರಾವಳಿಗೆ ಸರಾಗವಾಗಿ ಹೆಜ್ಜೆಗೂಡಿಸುತ್ತ, ಶಿವನ ನಾಟ್ಯವೈಭವವನ್ನು ಕಣ್ಮುಂದೆ ತರುತ್ತ, ನೃತ್ತಗಳನ್ನು ಅಚ್ಚುಕಟ್ಟಾಗಿ ಮಂಡಿಸಿದಳು.
ಪ್ರಥಮದಲ್ಲಿ ಸುಬ್ರಹ್ಮಣ್ಯ, ನಂತರ ಶಿವ, ಮುಂದೆ ಪಾರ್ವತಿ ಕುರಿತ ದೇವತ್ರಯರನ್ನು ವಂದಿಸುವ ಅನುಕ್ರಮದ ಪ್ರಸ್ತುತಿಯಲ್ಲಿ ಒಂದು ಬಗೆಯ ಸಾಂಗತ್ಯವಿತ್ತು. ಮುಂದೆ ‘ಮಾತೆ ಮಲಯಧ್ವಜ ಪಾಂಡ್ಯ ಸಂಜಾತೆ’ ಎಂಬ ಧರು ‘’ವರ್ಣ’’ (ರಚನೆ-ಮುತ್ತಯ್ಯ ಭಾಗವತರ್ -ಕಮಾಚ್ ರಾಗ)ವನ್ನು ಭಾವಪೂರ್ಣವಾಗಿ ಅಭಿನಯಿಸಿದರು. ನಡುನಡುವೆ ವೀರಾವೇಶಭಾವದಲ್ಲಿ ಮಿಂಚಿನ ಸಂಚಾರದ ನೃತ್ತಗಳು ಝೇಂಕರಿಸಿದವು. ಕಲಾವಿದೆಯರ ನಡುವೆ ಸುಂದರ ಸಾಮರಸ್ಯ ಮಿನುಗಿ, ಮನೋಹರ ಭಂಗಿಗಳು ಪೂರಕವಾಗಿದ್ದದ್ದು ವಿಶೇಷ. ಪ್ರತಿಯೊಂದು ಸಂಚಾರಿಯಲ್ಲೂ ಇಬ್ಬರೂ ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತ ಕಥಾನಕಗಳನ್ನು ಅರ್ಥಪೂರ್ಣವಾಗಿ ಕಟ್ಟಿಕೊಟ್ಟರು. ಪಾರ್ವತಿ ಚಂದನ ತೇಯ್ದು, ಮೈಯ್ಯಿಗೆ ಲೇಪಿಸಿಕೊಂಡು, ಸ್ನಾನಕ್ಕೆ ಹೋಗುವ ಮುನ್ನ ದ್ವಾರದ ಕಾವಲಿಗಾಗಿ ತನ್ನ ಮೈಮೇಲಿದ್ದ ಚಂದನವನ್ನು ಬಳಿದು, ಅದರಿಂದ ಬಾಲಕನನ್ನು ಸೃಷ್ಟಿ ಮಾಡುವ , ಸಹಜ ಚಿತ್ರಣವನ್ನು ವಂದ್ಯಾ ಸುಂದರ ಸಂಯೋಜನೆಯ ಮೂಲಕ ಸೃಷ್ಟಿಸಿದ್ದರು. ಮಹಿಷಾಸುರನ ಸಂಹಾರದ ಸಂಚಾರಿಯಲ್ಲಿ ಅಸುರ (ಶ್ರಾವಣಿ) ಗೂಳಿಯಂತೆ ಕಾಲನ್ನು ಝಾಡಿಸಿ ಕಾಳಗಕ್ಕೆ ಮುನ್ನುಗ್ಗಿ ಬರುವ ಸೂಕ್ಷ್ಮತೆಗಳ ಅಭಿನಯ, ಕಡೆಗೆ ದೇವಿ(ವೈಷ್ಣವಿ) ಗೆಲುವು ಸಾಧಿಸಿ ಮಾಡುವ ವಿಜಯ ನೃತ್ಯಗಳ ಭೀಷಣತೆಯಲ್ಲಿ ಕಲಾವಿದೆಯರು ಪಕ್ವಾಭಿನಯವನ್ನು ಮೆರೆದಿದ್ದರು. ತ್ರಿಕಾಲ ಜತಿಯ ನಿರ್ವಹಣೆಯಲ್ಲಿ ‘ಸೈ’ ಎನಿಸಿಕೊಂಡರು. ಜೋಡಿಯಾಗಿ ನಿರೂಪಿಸಿದ ನೃತ್ತಲಹರಿ, ಒಂದೇ ಅಚ್ಚಿನ ಪ್ರತಿಗಳಂತೆ ಸುಮನೋಹರ ಸಾಮರಸ್ಯದ ಸೊಗಡನ್ನು ಬೀರಿತ್ತು. ಮಿಂಚಿನ ಸಂಚಾರದ ನೃತ್ತಗಳು, ಆಕಾಶಚಾರಿಗಳು, ಹೃದಯಂಗಮ ಭಂಗಿಗಳ ರಚನೆ ಒಂದೆಡೆ ಆಕರ್ಷಿಸಿದರೆ, ಇನ್ನೊಂದೆಡೆ ನಂದಕುಮಾರರ ಸುಶ್ರಾವ್ಯ ಸಂಗೀತ- ಮೃದಂಗದ ಬನಿ, ಉಳಿದ ವಾದ್ಯಗೋಷ್ಟಿಗಳ ಕರ್ಣಾನಂದ ಹಿಮ್ಮೇಳ ಮನಸೂರೆಗೊಂಡಿತು. ಯಾಂತ್ರಿಕತೆಯ ನೆರಳೂ ಸುಳಿಯದಂತೆ ವೈವಿಧ್ಯತೆ ಮಿಂಚಿತ್ತು.
ಭೈರವಿರಾಗದ ‘ಜಾವಳಿ’ಯ ಅರ್ಪಣೆಯಲ್ಲಿ ಶ್ರಾವಣಿ ತನ್ನ ಸೊಗಸಾದ ಅಭಿನಯದಿಂದ ಮನಗೆದ್ದಳು. ಅನಂತರ ಪ್ರಸ್ತುತಿಗೊಂಡ ‘ದಶಾವತಾರ’- ವಂದ್ಯಾರ ಸುಮನೋಹರ ಸಂಯೋಜನೆಯಲ್ಲಿ ರೋಮಾಂಚಗೊಳಿಸಿತು. ಕಲಾವಿದೆಯರು ಒಂದೊಂದು ಅವತಾರಗಳನ್ನೂ ಅದ್ಭುತಾಭಿನಯದಿಂದ ಸಾಕ್ಷಾತ್ಕರಿಸುತ್ತ, ನೋಡುವ ಕಣ್ಣುಗಳಿಗೆ ಹಬ್ಬವಾದರು. ಹೊಸ ಅನುಭವ ನೀಡಿದ ಈ ದೈವೀಕ ತನ್ಮಯಾಭಿವ್ಯಕ್ತಿ ಮನದುಂಬಿತು. ಕಲಾತ್ಮಕ ಸ್ಪರ್ಶದಿಂದ ಅಂತ್ಯದ ‘ತಿಲ್ಲಾನ’ ಮತ್ತು ‘ಮಂಗಳ’- ಸುಮ್ಮಾನದ ಚಲನೆಗಳ, ಸಶಕ್ತ ಶೊಲ್ಲುಕಟ್ಟುಗಳ ಕುಣಿಸುವ ಲಯದ ಪರಿವೇಷದಲ್ಲಿ ಕಲಾವಿದೆಯರು ಮೈದುಂಬಿ ನರ್ತಿಸಿದರು.