Image default
Dance Reviews

ಲಾವಂತಿಯ ಪ್ರೌಢ ಅಭಿನಯದ ಸುಮನೋಹರ ನೃತ್ಯ

ನೃತ್ಯಕಲಾವಿದೆ ಲಾವಂತಿ ಶಿವಕುಮಾರ್ ರಂಗಪ್ರವೇಶಿಸಿದ ಪ್ರಥಮ ಹೆಜ್ಜೆಯ ದೃಢತೆಯ ಸೌಂದರ್ಯ, ಅವಳ ಮುಂದಿನ ಪ್ರಸ್ತುತಿಗಳ ವಿಶಿಷ್ಟ ಮುನ್ನೋಟ ನೀಡಿತು. ಮೊಣಕಾಲ ಕೆಳಗಿನವರೆಗಿನ ವೀರಗಚ್ಚೆಯಂಥ ಅಂಚಿನ ಸೀರೆ ಗಮನಾರ್ಹ ಆಹಾರ್ಯ ಅವಳ ಆಂಗಿಕಚಲನೆಗಳ ಸ್ಫುಟತೆಗೆ ಮೆರಗು ನೀಡಿತ್ತು. ಇತ್ತೀಚಿಗೆ ಜೆ.ಎಸ್.ಎಸ್. ಆಡಿಟೋರಿಯಂ ನಲ್ಲಿ ನೃತ್ಯಾರ್ಪಣೆ  ಮಾಡಿದ ಲಾವಂತಿಯ ಅಂಗಶುದ್ಧಿಯ ಅಚ್ಚುಕಟ್ಟಾದ ನರ್ತನ ಮನಸ್ಸಿಗೆ ಅಹ್ಲಾದವನ್ನುಂಟು ಮಾಡಿತು. ‘ಕಲಾಸಿಂಧು ಅಕಾಡೆಮಿ ಆಫ್ ಡಾನ್ಸ್ ’ನೃತ್ಯಶಾಲೆಯ ನಾಟ್ಯಗುರು, ನೃತ್ಯಕಲಾವಿದೆ ಮತ್ತು ನೃತ್ಯ ಸಂಯೋಜನೆಗೆ ಹೆಸರಾದ ವಿದುಷಿ. ಪೂರ್ಣಿಮಾ ಗುರುರಾಜ ಅವರ ನುರಿತ ಗರಡಿಯಲ್ಲಿ ರೂಪುಗೊಂಡ ಶಿಲ್ಪ, ನೈಪುಣ್ಯ ಚಿಮ್ಮಿಸಿದ ನೃತ್ಯ ಕಲಾವಿದೆಯಾಗಿ ಹೊರಹೊಮ್ಮಿದಳು.  ಪ್ರಸ್ತುತಿಯ ಆರಂಭದಿಂದ  ಕೊನೆಯವರೆಗೂ ನಿರಾಯಾಸವಾಗಿ ಅಷ್ಟೇ ಸಲೀಸಾಗಿ ಹಸನ್ಮುಖಳಾಗಿ ನರ್ತಿಸಿದ, ಖಚಿತ ಹಸ್ತ, ಅಡವುಗಳ ಖಾಚಿತ್ಯ ಮನೋಹರತೆಯಿಂದ ಆಕರ್ಷಿಸಿದ ಲಾವಂತಿ ನಿಜಕ್ಕೂ ಹೃನ್ಮನ ತುಂಬಿದಳು.

ಪ್ರಾರ್ಥನಾ ಪ್ರಸ್ತುತಿ ‘ ಸುಮ್ಮನೆ ಬ್ರಹ್ಮವಾಗುವನೇ?’ – ಗಾಯಕಿ ಐಶ್ವರ್ಯ ನಿತ್ಯಾನಂದ ಅವರ ಸುಶ್ರಾವ್ಯ ಕಂಠಸಿರಿಯ ಮೋಡಿಯಲ್ಲಿ ಲಾವಂತಿಯ ನರ್ತನದ ಸೊಬಗು ಇಮ್ಮಡಿಸಿತು. ಮೈಸೂರು ವಾಸುದೇವಾಚಾರ್ಯ ವಿರಚಿತ ಗಣೇಶವಂದನೆಯಲ್ಲಿ ಮನೋಜ್ಞ ಚಲನೆಗಳಿಂದ ನೋಡುಗರನ್ನು ಸೆರೆಹಿಡಿದಳು. ಇಂಗಿತಜ್ಞೆಯಾದ ಕಲಾವಿದೆಯ ಮೊಗದಲ್ಲಿ ಮಿನುಗುತ್ತಿದ್ದ ಆತ್ಮವಿಶ್ವಾಸ, ಆಂಗಿಕಗಳ ಕಲಾತ್ಮಕತೆ ಪ್ರಧಾನವಾಗಿ ಎದ್ದುಕಂಡಿತು. ಮೈಸೂರು ಗಣಿಕಾ ನೃತ್ಯಪದ್ದತಿಯಲ್ಲಿ ಸಾಕಾರಗೊಂಡ ‘ಅಲರಿ’ ವೈಶಿಷ್ಟ್ಯಪೂರ್ಣವಾಗಿತ್ತು. ಇಂಥ ರಚನೆಗಳನ್ನು ನೋಡುವುದೇ ಅಪರೂಪ. ಹಿಂದೆ ಅರಸರ ಕಾಲದಲ್ಲಿ ಮೆರವಣಿಗೆಯಲ್ಲಿ ಸಾಗುತ್ತಿದ್ದ  ನರ್ತಕಿಯರು ಪ್ರತಿ ತಿರುವಿನಲ್ಲೂ ಭಗವದರ್ಪಣ  ಮಾಡುತ್ತಿದ್ದ ಈ ವಿಶಿಷ್ಟ ‘ಅಲರಿ’ ಸಾಕಷ್ಟು ಶಾರೀರಿಕ ವ್ಯಾಯಾಮ ನೀಡುವ ‘ಅಲ್ಲರಿಪು’ವಿನ ಪೂರ್ವವರ್ತಿಯಾದ ಚೆಲುವಿನ ನೃತ್ಯಬಂಧ.  ದೇವಾಲಯ ತಲುಪುವಷ್ಟರಲ್ಲಿ ನರ್ತಕಿಯರು ಈ ನೃತ್ಯವನ್ನು ನೂರಾರು ಬಾರಿ ಮಾಡುತ್ತಿದ್ದರು ಎಂಬುದು ಇದರ ವಿಶೇಷ. ಲಾವಂತಿ ಹಲವಾರು ನಮೂನೆಯಲ್ಲಿ ಅರೆಮಂಡಿ, ವಿವಿಧ ಚಾರಿಗಳಲ್ಲಿ ಪೊಡಮಟ್ಟು ನಮಸ್ಕರಿಸುತ್ತ, ಅಲರಿಯನ್ನು ಚೆಂದಗಾಣಿಸಿದಳು.

ಲಾಲ್ಗುಡಿ ಜಯರಾಂ ರಚನೆಯ ರಸಿಕಪ್ರಿಯ ರಾಗದ ‘ಜತಿಸ್ವರ’ವನ್ನು ಲಾವಂತಿ, ಗುರು ಪೂರ್ಣಿಮಾ ಅವರ ಹೊಸ ಆಯಾಮದ ಕಾಣ್ಕೆಯಲ್ಲಿ ಸಾಕಾರಗೊಳಿಸಿದಳು. ಮತ್ತೆ ಮತ್ತೆ ನೋಡಬೇಕೆನ್ನಿಸುವ ಬೆಡಗಿನ ನೃತ್ತಗಳು, ಸುಂದರ ಮುಕ್ತಾಯಗಳು, ಅಭಿನಯದ ಹೊಳಹಿನಲ್ಲಿ ಸಾಗಿದ ಜತಿಗಳ ಸೌಂದರ್ಯ ವೃದ್ಧಿಸಿತ್ತು. ಶಿಲಾಬಾಲಿಕೆಯಂತೆ ಶೋಭಿಸುತ್ತಿದ್ದ ಲಾವಂತಿ ದೇವಲೋಕದ ಕನ್ಯೆಯಂತೆ ಭಾಸವಾದಳು. ‘ ಶಿವಕೃತಿ’ (ಶಂಕರಾಭರಣ ರಾಗ)- ಸಂಧ್ಯಾ ತಾಂಡವವಾಡಿದ ನಟರಾಜನ ಧೀಮಂತ-ದೈವೀಕ ಸೌಂದರ್ಯವನ್ನು ಅಭಿವ್ಯಕ್ತಿಸಿದ ಲಾವಂತಿಯ ಬೀಸು ಹೆಜ್ಜೆಗಳ ಸೊಗಸೇ ಸೊಗಸು. ಹಿಮ್ಮಡಿಯ ಮೇಲಿನ ಪದಗತಿಗಳು, ಮೃದಂಗದ ಕೊರ್ವೆಗಳಿಗೆ ಹಾಕಿದ ಪಾದರಸದ ಅಡವು-ಪಾದಭೇದಗಳ ಲವಲವಿಕೆ ರೋಮಾಂಚವನ್ನುಂಟು ಮಾಡಿದವು. ಕಲಾವಿದೆಯ ಲಯಜ್ಞಾನ-ತಾಳಜ್ಞಾನಗಳು ಸುವ್ಯಕ್ತವಾದವು. ಕಣ್ಮನ ತುಂಬಿದ ದಿವ್ಯಭಂಗಿಗಳಲ್ಲಿ ಆಕೆಯ ದೇಹದ ಮೇಲಿನ ನಿಯಂತ್ರಣ ಅನುಪಮವೆನಿಸಿತು.

ಆನಂದಭೈರವಿ ರಾಗದ ‘ ಏ ಸಖಿಯೇ…’ ಎಂದು ಆರಂಭವಾಗುವ ‘ವರ್ಣ’ದ ನಾಯಿಕೆಗೆ ಮನ್ನಾರ್ ಗುಡಿಯ ರಾಜಗೋಪಾಲಸ್ವಾಮಿಯ ಮೇಲೆ ಅಪಾರ ಪ್ರೇಮ. ಅವನಿಲ್ಲದೆ ಬದುಕಲಾರೆ ಎಂಬ ತೀವ್ರ ವಿರಹದ ಸ್ಥಿತಿ. ಅವನ ಸಾನಿಧ್ಯಕ್ಕಾಗಿ ಹಾತೊರೆದು ಅವನನ್ನು ಕರೆದು ತಾ ಎಂದು ಸಖಿಯಲ್ಲಿ ಬಿನ್ನವಿಸುತ್ತಾಳೆ. ಸ್ವಾಮಿಯ ಉತ್ಸವ, ಮಹಿಮೆಯನ್ನು ಕೇಳಿ ಕರಗಿಹೋದ ಅವಳು ತನ್ನ ಆತ್ಮೋದ್ಧಾರದ ಉನ್ನತ ಮಜಲನ್ನು ಕಂಡುಕೊಳ್ಳುವ ಅವನಿಗೆ ಸಂಪೂರ್ಣ ಶರಣಾಗುವ ದೈವೀಕ ಪ್ರೇಮ, ಸಾಯುಜ್ಯ ಉಜ್ವಲ ಭಕ್ತಿಯಮೂರ್ತಿಯಾಗುತ್ತಾಳೆ. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ತನ್ಮಯತೆಯ ಪರಾಕಾಷ್ಠೆಯಿಂದ ಅತ್ಯಂತ ಭಾವಪೂರ್ಣವಾಗಿ ಸಾತ್ವಿಕಾಭಿನಯವನ್ನು ಅಭಿವ್ಯಕ್ತಿಸಿದಳು ಕಲಾವಿದೆ . ನಡುವೆ ಸುಳಿವ ಸಹಜವೆಂಬಂತೆ ಬೆಸೆದುಕೊಂಡ ಹೊಸವಿನ್ಯಾಸದ ನೃತ್ತ-ಸಂಕೀರ್ಣ ಜತಿಗಳನ್ನು ಮೋಹಕವಾಗಿ ನಿರೂಪಿಸಿದ್ದು ವಿಶೇಷವಾಗಿತ್ತು. ಅವಳ ಪ್ರತಿಯೊಂದು ಹಸ್ತಚಲನೆ, ನಡೆಗಳೂ ಕಲಾತ್ಮಕ ಚೌಕಟ್ಟಿನಲ್ಲಿ ಕಂಗೊಳಿಸಿದವು. ನಾಯಕನ ಆರಾಧನೆಯ ಸನ್ನಿವೇಶದಲ್ಲಿ ಕಲಾವಿದೆ ತನ್ನ ನವಿರುಭಾವನೆಗಳನ್ನು ಸಖಿಗೆ ನಿವೇದಿಸುವ ಬಗೆ ಹೃದಯಸ್ಪರ್ಶಿಯಾಗಿತ್ತು.  ರಂಗದ ತುಂಬಾ ಹರಿಣಿಯಂತೆ ಕುಪ್ಪಳಿಸುತ್ತ ಲೀಲಾಜಾಲವಾಗಿ ನಿರ್ವಹಿಸಿದ ಸಂಕೀರ್ಣ ಜತಿಗಳು ರಂಜಿಸಿದವು. ಲಾವಂತಿ ತನ್ನ ಹೃದ್ಯ ಅಭಿನಯ ಪರಿಣತಿಯಿಂದ ತನ್ನ ಕಲಾಸಾಮರ್ಥ್ಯವನ್ನು ಸಾಬೀತುಪಡಿಸಿದಳು.  ಪೂರ್ಣಿಮಾ ಅವರ ಓತಸ್ರೋತ ನಟುವಾಂಗ ಝೇಂಕರಿಸಿತು.

ಮುಂದೆ, ‘ದೇವಿಸ್ತುತಿ’ಯಲ್ಲಿ, ಭೈರವಿಯಾಗಿ ಚಿತ್ರಿಸಲಾದ ಶಿವಶಕ್ತಿಯ ರೋಷಾವೇಶ, ರೌದ್ರಭಾವಗಳನ್ನು ಲಾವಂತಿ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಳು. ಶಾಸ್ತ್ರೀಯ ಚೌಕಟ್ಟಿನೊಳಗೆ ತೋರಿದ ಕಲಾನೈಪುಣ್ಯದ ವಿವಿಧ ಮಜಲುಗಳು ಮನವನ್ನು ಅಪಹರಿಸಿತು. ಶ್ರೀಪಾದರಾಜರ ಸರಳಗನ್ನಡದ ರಚನೆ ‘ಎಲ್ಲಾಡಿ ಬಂದ್ಯೋ ಮುದ್ದು ರಂಗಯ್ಯ’ ಎಂಬ ಕೃಷ್ಣನ  ಕುರಿತ ಪ್ರಸ್ತುತಿಯ   ಮನೋಜ್ಞ ಅಭಿನಯ ಮಂತ್ರಮುಗ್ಧರನ್ನಾಗಿಸಿದರೆ, ಅಂತ್ಯದ ಜುಂಜೂಟಿರಾಗದ ‘ತಿಲ್ಲಾನ’ದಲ್ಲಿ, ಕಲಾವಿದೆಯ ಲವಲವಿಕೆಯ ನೃತ್ತಾವಳಿಗಳು ಸಮ್ಮೋಹಕಗೊಳಿಸಿದವು.

Related posts

Ramya Sabhapathi Rangapravesha Review article

YK Sandhya Sharma

ಪ್ರೌಢ ಅಭಿನಯದ ಚೇತೋಹಾರಿ ನೃತ್ಯಸಂಭ್ರಮ

YK Sandhya Sharma

Natanam Institute of Dance-Tyagaraja Sampoorna Ramayana

YK Sandhya Sharma

Leave a Comment

This site uses Akismet to reduce spam. Learn how your comment data is processed.