Image default
Dance Reviews

‘ಕಾದಂಬರಿ’- ಒಡಿಸ್ಸಿ ನೃತ್ಯಸಂಸ್ಥೆಯ ಚಿಣ್ಣರ ‘ಸ್ಥಾಯಿ’ಲಾಸ್ಯ

                  ದೇವ ಜಗನ್ನಾಥನ ನಾಡಿನಿಂದ ವಿಶ್ವದಾದ್ಯಂತ ಸಂಚರಿಸುತ್ತಿರುವ, ಭಾರತದ ಶಾಸ್ರೀಯ ನೃತ್ಯಕಲೆಗಳಲ್ಲೊಂದಾದ `ಒಡಿಸ್ಸಿ’ ನೃತ್ಯಶೈಲಿ ಸಾಂಪ್ರದಾಯಕತೆ, ಭಕ್ತಿ ಮತ್ತು ಲಾಲಿತ್ಯಗಳ ಆಗರ. ಚೌಕ ಮತ್ತು ತ್ರಿಭಂಗದ ಸೊಬಗಿನ ಶೈಲಿಯೇ ಈ ಒಡಿಸ್ಸಿ ನೃತ್ಯದ ಪ್ರಮುಖ ಆಕರ್ಷಣೆ ಹಾಗೂ ಜೀವಾಳ. ಈ ಸುಮನೋಹರ ನೃತ್ಯಶೈಲಿಯಲ್ಲಿ ತರಬೇತಿ ಪಡೆದು ಅನೇಕ ವೇದಿಕೆಗಳಲ್ಲಿ  ನೃತ್ಯ ಪ್ರದರ್ಶನ ನೀಡುವ ಮೂಲಕ ರಸಿಕರ ಮನರಂಜಿಸುತ್ತಿರುವ ಖ್ಯಾತ ಕಲಾವಿದೆಯರ ಪೈಕಿ ಶ್ರೀಮತಿ ಕರಿಷ್ಮಾ ಅಹುಜಾ ಕೂಡ ಒಬ್ಬರು.

ಬೆಂಗಳೂರು ದಕ್ಷಿಣಭಾಗದಲ್ಲಿ ತಮ್ಮದೇ ಆದ ‘ಕಾದಂಬರಿ’ ನೃತ್ಯ ಸಂಸ್ಥೆಯ ಮೂಲಕ ಮಕ್ಕಳಿಗೆ ಬದ್ಧತೆಯಿಂದ ಒಡಿಸ್ಸಿ ನೃತ್ಯವನ್ನು ಕಲಿಸುತ್ತಿರುವ ಈಕೆ ತಮ್ಮ ಇಡೀ ಜೀವನವನ್ನು ನೃತ್ಯಾರ್ಪಣೆ ಮಾಡಿಕೊಂಡಿರುವುದು ವಿಶೇಷ. ಸದ್ಯದಲ್ಲೇ ಚೆನ್ನೈ ನಲ್ಲೂ ಈ ಶಾಲೆಯ ಶಾಖೆ ಆರಂಭವಾಗಲಿದೆ.

ಮುಂಬೈ ಮೂಲದ ಪ್ರತಿಭಾವಂತೆ ಕರಿಷ್ಮಾರ ವಿದ್ಯಾರ್ಜನೆಗೂ ಅವರು ಕೈಕೊಂಡಿರುವ ಕಾಯಕಕ್ಕೂ ಅರ್ಥಾತ್ ಸಂಬಂಧವಿಲ್ಲ. ಮೂಲತಃ ಎಂ.ಬಿ.ಎ. ಪದವೀಧರೆಯಾಗಿ, ಹಲವು ವರ್ಷಗಳು ಕಾರ್ಪೋರೆಟ್ ಕಂಪೆನಿಯಲ್ಲಿ ಹೆಚ್.ಆರ್. ಆಗಿ ಕಾರ್ಯ ನಿರ್ವಹಿಸಿರುವ ಇವರಿಗೆ ಮೊದಲಿನಿಂದ ನೃತ್ಯದ ಬಗ್ಗೆ ಅದಮ್ಯ ಪ್ರೀತಿ. ಅನೇಕ ವರ್ಷಗಳು ಒಡಿಸ್ಸಿ ನೃತ್ಯಪ್ರಕಾರದಲ್ಲಿ ತರಬೇತಿಗೊಂಡ ಇವರು ಪ್ರಸ್ತುತ ಒಡಿಸ್ಸಿ ನೃತ್ಯ ದಿಗ್ಗಜ ಕೇಳುಚರಣ್ ಮಹೋಪಾತ್ರರ ಮಗ-ಸೊಸೆಯ ಮಾರ್ಗದರ್ಶನ ಪಡೆಯುತ್ತಿದ್ದಾರೆ.

ದೇಶಾದ್ಯಂತ ತಮ್ಮ ಪ್ರತಿಭಾ ಪ್ರದರ್ಶನ  ಮಾಡಿರುವ ಕರಿಷ್ಮಾ, ಅನೇಕ ನೃತ್ಯ ಪ್ರದರ್ಶನಗಳನ್ನು ನೀಡಿ ಮೆಚ್ಚುಗೆ ಗಳಿಸಿದ್ದಾರೆ. ಅನನ್ಯ ನೃತ್ಯದ ಒಲವುಳ್ಳ ಇವರಿಗೆ ತಾಳ್ಮೆ-ಸಹನಾ ಸ್ವಭಾವಗಳು ಜನ್ಮತಃ ಬಂದಿರುವುದರಿಂದ ತಮ್ಮಲ್ಲಿ ನೃತ್ಯ ಕಲಿಯಲು ಬರುವ ಪುಟ್ಟಮಕ್ಕಳಿಗೆ ಬಹು ಅಕ್ಕರಾಸ್ಥೆಯಿಂದ ಬಹು ತಾಳ್ಮೆಯಿಂದ ನೃತ್ಯ ಶಿಕ್ಷಣ ನೀಡುತ್ತಿರುವುದು ಈಕೆಯ ವಿಶೇಷ ಗುಣ . ಬೆಂಗಳೂರಿನ ಪ್ರಸಿದ್ಧ ‘ವ್ಯಾಲಿಶಾಲೆ’ಯಲ್ಲಿ ನೃತ್ಯ ಶಿಕ್ಷಕಿಯಾಗಿರುವುದೂ ಇದಕ್ಕೆ ಪೂರಕವಾಗಿದೆ.

ಕೋಗಿಲೆಯಗಾನದ ಅನ್ವರ್ಥತೆ ಹಾಗೂ ವಿದ್ಯಾಮಾತೆ ಸರಸ್ವತಿಯ ಇನ್ನೊಂದು ಪರ್ಯಾಯನಾಮ ಹೊಂದಿರುವ ಇವರ ನೃತ್ಯಶಾಲೆ ‘ಕಾದಂಬರಿ’ಯಲ್ಲಿ ನೃತ್ಯಾಕಾಂಕ್ಷಿಗಳು ಶಾಸ್ತ್ರೀಯ ರೀತ್ಯ ಒಡಿಸ್ಸಿ ನೃತ್ಯವನ್ನು ಬಹು ಆಸಕ್ತಿಯಿಂದ ಕಲಿಯುತ್ತಿದ್ದಾರೆ. ಸಣ್ಣಮಕ್ಕಳಿಗೆ ಅಂಗಶುದ್ಧವಾದ ನೃತ್ಯವನ್ನು ಅದರ ಮೂಲ ಸೊಗಡಿನೊಂದಿಗೆ ಕಲಿಸುವುದು ನಿಜಕ್ಕೂ ಸವಾಲಿನ ಕೆಲಸವೇ ಸರಿ. ಪ್ರತಿ ಆಂಗಿಕ ಚಲನೆಯನ್ನು ಶ್ರದ್ಧೆಯಿಂದ, ಸ್ಫುಟವಾಗಿ ಕಲಿಸುತ್ತಿರುವ ಗುರು ಕರಿಷ್ಮಾ ಸಂಕೀರ್ಣ ಅಡವುಗಳನ್ನು ಸರಳೀಕರಿಸಿ, ಅವರು ಸುಲಭವಾಗಿ ಗ್ರಹಿಸುವಂತೆ, ಅನುಕರಿಸುವಂತೆ ಮಾಡುವಲ್ಲಿ ಸಫಲರಾಗಿರುವುದು ಅವರಿಗೆ ತೃಪ್ತಿ ತಂದಿದೆ.

ಇಂದಿನ ‘ಕರೋನಾ’ ಪಿಡುಗಿನ ಕಾರಣ ಎಲ್ಲ ನೃತ್ಯ ಕಾರ್ಯಕ್ರಮಗಳೂ ಈ ದಿನಗಳಲ್ಲಿ  ಅಂತರ್ಜಾಲದಲ್ಲೇ ನಡೆಯುತ್ತಿರುವುದು ಸಾಮಾನ್ಯವಾಗಿದೆ. ಅದರಂತೆ ಉದಯೋನ್ಮುಖ ಕಲಾವಿದರ ಕಲಿಕೆಯ ಪ್ರದರ್ಶನಕ್ಕಾಗಿ ಕರಿಷ್ಮಾ, ಇತ್ತೀಚಿಗೆ  ಪಂಕಜ್ ಚರಣ್ ದಾಸ್ ಅವರ ಸಂಯೋಜನೆಯ ‘ಸ್ಥಾಯಿ’ -ನೃತ್ಯ ಪ್ರದರ್ಶನವನ್ನು ಏರ್ಪಡಿಸಿದ್ದರು.  

ಪುಟಾಣಿ ಕಲಾವಿದರು ನೃತ್ತ ಪ್ರಧಾನವಾದ `ಸ್ಥಾಯಿ’ ಯನ್ನು  ಬಹು ಅಚ್ಚುಕಟ್ಟಾಗಿ, ಶುದ್ಧರೀತಿಯಲ್ಲಿ  ಸುಮನೋಹರವಾಗಿ ಪ್ರದರ್ಶಿಸಿದ್ದು ಮೆಚ್ಚುಗೆ ಪಡೆಯಿತು. 6 ರಿಂದ 12 ವರ್ಷದೊಳಗಿನ ಮಕ್ಕಳು ತಮ್ಮ ವಯೋಸಹಜತೆಗೆ ತಕ್ಕಂತೆ ನರ್ತಿಸಿದ್ದು ಮುದ ತಂದಿತು. ಒಡಿಸ್ಸಿ ನೃತ್ಯಪ್ರಕಾರವೇ ಮೃದುತ್ವ, ನವಿರು ಆಂಗಿಕಗಳಿಂದ ಕೂಡಿದ್ದು, ನೋಡಲು ಸುಮನೋಹರ. ಅದನ್ನು ಪುಟಾಣಿಗಳು ಸುಂದರವಾಗಿ ಸಾಕಾರಗೊಳಿಸಿದರು.

ಭರತನಾಟ್ಯದಲ್ಲಿನ ಅಲ್ಲರಿಪು-ಜತಿಸ್ವರದಲ್ಲಿರುವಂತೆ ಕೇವಲ ನೃತ್ತಗಳ ವಿವಿಧ ವಿನ್ಯಾಸಗಳ ಸೌಂದರ್ಯವನ್ನು ಬಿತ್ತರಿಸುವ ವಿಶಿಷ್ಟ ಕೃತಿ ಇದು. ಒರಿಸ್ಸಾ ದೇವಾಲಯಗಳಲ್ಲಿರುವ ಮನೋಹರ ಮೂರ್ತಿಗಳ ಶಿಲ್ಪಕಲಾ ಭಂಗಿಗಳನ್ನು ಪುನರ್ರಚಿಸಿದರು.  ಆ ಶಿಲಾಸುಂದರಿಯರ ಮೈಮೇಲೆ ಶೋಭಿಸಿದ ಕೊರಳಹಾರ, ಓಲೆ, ಕಂಕಣ, ನೂಪುರ ಮುಂತಾದ ವಿವಿಧ ಆಭರಣಗಳ ಕಲಾವಂತಿಕೆಯನ್ನು ಹಾಗೂ ಸೀರೆಯ ನೆರಿಗೆ-ಸೆರಗುಗಳ ವಯ್ಯಾರದೊಂದಿಗೆ, ತಮ್ಮ ಚೌಕ ಮತ್ತು ತ್ರಿಭಂಗ ಭಂಗಿಗಳ ಆಂಗಿಕಗಳಿಂದ ಸಿತಾರ್, ಕರತಾಳ, ಕೊಳಲು, ಮದ್ದಲೆ ಮುಂತಾದ ಸಂಗೀತವಾದ್ಯಗಳನ್ನು ಅಭಿನಯಿಸಿ ತೋರಿದ್ದು ತುಂಬಾ ಮನೋಜ್ಞವಾಗಿತ್ತು.

Related posts

ಕಣ್ಮನ ಸೆಳೆದ ಯೋಗದ ಭಂಗಿಗಳು- ಗಾಯನಳ  ರಮ್ಯನರ್ತನ

YK Sandhya Sharma

ಪ್ರೌಢ ಅಭಿನಯದ ಸೊಗಸಾದ ನರ್ತನ

YK Sandhya Sharma

ಉದಯೋನ್ಮುಖ ಉತ್ಸಾಹೀ ಪ್ರತಿಭೆಗಳ ಗೆಜ್ಜೆನಾದ

YK Sandhya Sharma

Leave a Comment

This site uses Akismet to reduce spam. Learn how your comment data is processed.