Image default
Dance Reviews

ಕವನ-ಧ್ವನಿ ಸೋದರಿಯರ ಸುಂದರ ಯುಗಳ ನೃತ್ಯ

ರಂಗಪ್ರವೇಶ ನೃತ್ಯಕಲಾವಿದರ ಜೀವನದಲ್ಲಿ ಮರೆಯಲಾರದ ಒಂದು ಸ್ಮರಣೀಯ ಘಟ್ಟ. ಅದುವರೆಗೂ ತಾವು ಗುರುಮುಖೇನ ಕಲಿತ ವಿದ್ಯೆಯನ್ನು ಸಾಕ್ಷೀಕರಿಸುವ ಒಂದು ಮುಖ್ಯ ಹಂತ. ಶಿಷ್ಯರ ನೃತ್ಯ ಚತುರತೆ, ಸಾಮರ್ಥ್ಯ ಇತ್ಯಾದಿಗಳನ್ನು ನಿಕಷಕ್ಕೆ ಹಚ್ಚಬಲ್ಲ ಶಕ್ತಿ ಇರುವುದು ಅವರ ಗುರುಗಳಿಗೆ ಮಾತ್ರ. ಹೀಗಾಗಿ ಗುರುಗಳು, ಅವರ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ಸ್ಪಷ್ಟವಾಗಿ ತಿಳಿದವರಾದ್ದರಿಂದ ಪ್ರದರ್ಶನಕ್ಕೆ ಸೂಕ್ತವಾದ ಕೃತಿಗಳನ್ನು ಆಯ್ಕೆ ಮಾಡುವಲ್ಲಿ ತಮ್ಮ ಜಾಣ್ಮೆ ತೋರುವುದು ಸಹಜ.

ನಗರದ ಎ.ಡಿ.ಎ. ರಂಗಮಂದಿರದಲ್ಲಿ ಯಶಸ್ವಿಯಾಗಿ ನಡೆದ ಸೋದರಿಯರಾದ ಎ.ಕವನ ಮತ್ತು ಎ.ಧ್ವನಿಯ ರಂಗಪ್ರವೇಶದಲ್ಲಿ ಈ ಔಚಿತ್ಯ ಮೆರೆದವರು ನಾಟ್ಯಗುರು ಪ್ರಶಾಂತ್ ಗೋಪಾಲ್ ಶಾಸ್ತ್ರೀ. ಹಿರಿಯ ನಾಟ್ಯಗುರು ಪ್ರಭಾವತಿ ಶಾಸ್ತ್ರಿಯವರಿಂದ ಸ್ಥಾಪಿಸಲ್ಪಟ್ಟ ಖ್ಯಾತ ‘’ನಾಟ್ಯಕಲಾಕ್ಷೇತ್ರ’’ ನೃತ್ಯಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಅವರ ಪುತ್ರ ಪ್ರಶಾಂತ್ ಸ್ವತಃ ಉತ್ತಮ ಭರತನಾಟ್ಯ ಕಲಾವಿದರಾಗಿ, ಸಮರ್ಥ ಗುರುಗಳಾಗಿ ಹೆಸರು ಮಾಡಿದವರು. ಇವರ ಮಾರ್ಗದರ್ಶನದಲ್ಲಿ ರಂಗಪ್ರವೇಶ ಮಾಡಿದ ಅವಳಿ ಜವಳಿಗಳಂತಿದ್ದ ಈ ಸೋದರಿಯರು ಸುಂದರವಾಗಿ ನರ್ತಿಸಿದರು.

ಮೊದಲಿಗೆ ಹಂಸನಂದಿ ರಾಗದ ದ್ವಾರಕಿ ಕೃಷ್ಣಸ್ವಾಮಿ ಅವರ ರಚನೆಯ ಸಾಂಪ್ರದಾಯಕ ಪುಷ್ಪಾಂಜಲಿಯಲ್ಲಿ ವಿಘ್ನನಿವಾರಕ ಗಣಪತಿಯನ್ನು ಕುರಿತು ಭಕ್ತಿ ನಮನ ಸಲ್ಲಿಸಿದರು. ಅನಂತರ ‘ವರವೀಣಾ ಮೃದುಪಾಣಿ’ಯಾದ ಸರಸ್ವತಿಯನ್ನು ತಿಶ್ರ ಅಲ್ಲರಿಪುವಿನಲ್ಲಿ ಅಳವಡಿಸಿದರೆ, ಶಿವನನ್ನು ಕುರಿತ ‘ಶಬ್ದಂ’ ಮಿಶ್ರ ಚಾಪುವಿನಲ್ಲಿ ಮತ್ತು ನಟೇಶ ಕೌತ್ವಂ ಅನ್ನು ಚತುಶ್ರ ಅಲ್ಲರಿಪುವಿನಲ್ಲಿ ಒಂದರೊಳಗೊಂದು ಸಮರಸವಾಗಿ ಬೆರೆಸಿ ನೃತ್ಯ ಸಂಯೋಜಿಸಲಾಗಿತ್ತು. ಕಲಾವಿದೆಯರು ಅಭಿನಯದೊಡನೆ ಸರಳಜತಿಗಳನ್ನು ಮನನೀಯವಾಗಿ ಪ್ರದರ್ಶಿಸಿದರು.

 ಮುಂದೆ ‘ಜತಿಸ್ವರ’, ಅನಂತರ ರಾಗಮಾಲಿಕೆಯ ಭಕ್ತಿಪ್ರಧಾನ ‘ಪದವರ್ಣಂ’ ‘ಫಾಲನೇತ್ರ ಕೈಲಾಸ’ವಾಸಿಯ ವಿವಿಧ ಭಂಗಿಗಳನ್ನು ಚಿತ್ರವತ್ತಾಗಿ ನಿರೂಪಿಸಿದರು. ನಡುನಡುವೆ ವಿವಿಧ ಆಯಾಮದ ನೃತ್ತಗಳು ರಾರಾಜಿಸಿದವು. ಸಂಚಾರಿಯಲ್ಲಿ ಶಿವ ನೀಲಕಂಠನಾದ ಮತ್ತು ಚಂದ್ರ ಹಾಗೂ ಗಂಗೆಯನ್ನು ಧರಿಸಿ ಗಂಗಾಧರನಾದ ಕಥಾನಕಗಳನ್ನು ಪರಿಣಾಮಕಾರಿಯಾಗಿ ನಿರೂಪಿಸಿದರು. ಅಭಿನಯದಲ್ಲಿ ಸಾದರಗೊಂಡ ಆನಂದ ತಾಂಡವ ರಂಜಿಸಿದರೆ, ಲಾಸ್ಯದ ಹೆಜ್ಜೆಗಳು ಮುದನೀಡಿದವು.

ಸ್ವಾತಿ ತಿರುನಾಳ್ ರಚಿಸಿದ ‘ಶಂಕರ ಶ್ರೀಗಿರಿ ನಾದಪ್ರಭೋ’ಕೃತಿಯನ್ನು ಕಲಾವಿದರು ಸರಾಗವಾಗಿ ನಿರೂಪಿಸಿದರು. ಆದಿ ಶಂಕರಾಚಾರ್ಯರ ‘ಐಗಿರಿ ನಂದಿನಿ, ನಂದಿತಾ ಮೇದಿನಿ’-ಮಹಿಷಾಸುರ ಮರ್ಧಿನಿ ಸ್ತೋತ್ರ -ದೇವೀಸ್ತುತಿಯಲ್ಲಿ ಸಿಂಹವಾಹಿನಿಯ ಉಗ್ರರೂಪವನ್ನು ಸಮಂಜಸವಾಗಿ ಪ್ರದರ್ಶಿಸಿದರು.

ದಾಸಶ್ರೇಷ್ಠ ಕನಕದಾಸರು ಭಕ್ತಿದುಂಬಿ ಅಕ್ಷರಕ್ಕಿಳಿಸಿದ ‘ಬಾರೋ ಕೃಷ್ಣಯ್ಯ’ನ ಬಾಲಲೀಲೆಗಳನ್ನು ಧ್ವನಿ ಮನೋಹರವಾಗಿ ಅಭಿನಯಿಸಿದರೆ, ಕವನ – ಅಷ್ಟೇ ಕಾಳಜಿಯಿಂದ ‘ಏನು ಸರಸ, ಎಂಥ ಮೋಡಿ ’ ಎಂಬ ವಿರಹತಪ್ತ ನಾಯಕಿಯ ನೋವಿನ ಭಾವನೆಗಳನ್ನು ಶೃಂಗಾರಪೂರ್ಣ ಜಾವಳಿಯಲ್ಲಿ ಮನೋಹರವಾಗಿ ಅಭಿವ್ಯಕ್ತಿಸಿದಳು. ಸಿಂಹೇಂದ್ರಮಧ್ಯಮ ರಾಗದ ‘’ತಿಲ್ಲಾನ’’ದೊಂದಿಗೆ ಪ್ರಸ್ತುತಿ ಸಂಪನ್ನಗೊಂಡಿತು.

ನೃತ್ಯಕ್ಕೆ ಕಳೆ ನೀಡಿದ ಶಕ್ತ ನಟುವಾಂಗವನ್ನು ಗುರು ಪ್ರಶಾಂತಶಾಸ್ತ್ರಿ ಲವಲವಿಕೆಯಿಂದ ನಿರ್ವಹಿಸಿದರು. ಭಾವಪೂರ್ಣವಾಗಿ ಹಾಡಿದ ವಿದುಷಿ ಭಾರತಿ ವೇಣುಗೋಪಾಲ್, ಮೃದಂಗ-ವಿದ್ವಾನ್ ಆರ್.ಪುರುಷೋತ್ತಮ್ ಮತ್ತು ವಯೊಲಿನ್ ನುಡಿಸಿದ ವಿದ್ವಾನ್.ಸಿ. ಮಧುಸೂದನ ಅವರ ಹಿಮ್ಮೇಳ ನೃತ್ಯಪ್ರಸ್ತುತಿಗೆ ಪ್ರಭಾವಳಿಯಾಗಿತ್ತು.

                                         ********************    

                                   

Related posts

ನಿಖಿತಳ ಚೈತನ್ಯಪೂರ್ಣ ಸುಮನೋಹರ ನೃತ್ಯ

YK Sandhya Sharma

ಪ್ರೌಢ ಅಭಿನಯದ ಸೊಗಸಾದ ನರ್ತನ

YK Sandhya Sharma

ಶ್ರೇಯಾ.ಪಿ.ವತ್ಸ ಮನೋಜ್ಞ ಕಥಕ್ ನೃತ್ಯವಲ್ಲರಿ

YK Sandhya Sharma

4 comments

Kavana A July 7, 2021 at 11:06 pm

Thanks a lot mam🙏

Reply
YK Sandhya Sharma July 8, 2021 at 6:31 pm

ನಿಮಗೆ ಉತ್ತಮ ನೃತ್ಯ ಭವಿಷ್ಯ ಪ್ರಾಪ್ತವಾಗಲಿ. ಶುಭ ಹಾರೈಕೆಗಳು.

Reply
Nidasale Puttaswanaiah July 8, 2021 at 2:30 pm

ಫೋಟೋಗಳು ಹಾಗೂ ಲೇಖನ ಸುಂದರ ಮತ್ತು ಚನ್ನಾಗಿವೆ, ಅಭಿನಂದನೆಗಳು.

Reply
YK Sandhya Sharma July 8, 2021 at 6:33 pm

ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಅನಂತ ಕೃತಜ್ಞತೆಗಳು. ನಿಮ್ಮ ಅಭಿಪ್ರಾಯಗಳಿಗೆ ಸದಾ ಸುಸ್ವಾಗತ. ವಂದನೆಗಳು ನಿಡಸಾಲೆ ಪುಟ್ಟಸ್ವಾಮಯ್ಯ ಅವರೇ.

Reply

Leave a Comment

This site uses Akismet to reduce spam. Learn how your comment data is processed.