ಅದೊಂದು ಅನಿರ್ವಚನೀಯ ಅಪೂರ್ವ ರಸಾನುಭವದ ಅನುಭೂತಿ. ದೈವೀಕ ನೆಲೆಗೊಯ್ಯುವ ಆಧ್ಯಾತ್ಮಿಕ ಪರಿಕಲ್ಪನೆಯ ಅದ್ಭುತ ಸಾಕ್ಷಾತ್ಕಾರ. ಕಣ್ಣೆವೆ ಮಿಟುಕಿಸದೆ ಸುಮಾರು ಎರಡುಗಂಟೆಗಳ ಕಾಲ ಬೇರೊಂದು ಲೋಕಕ್ಕೆ ಕರೆದೊಯ್ದ ನೃತ್ಯಾರ್ಚನೆಯ ಮಂತ್ರಮೋಡಿಯನ್ನು ಅನುಭವಿಸಿಯೇ ತಿಳಿಯಬೇಕು.
ಇತ್ತೀಚಿಗೆ ಸೇವಾಸದನದಲ್ಲಿ ಅಂತರರಾಷ್ಟ್ರೀಯ ನೃತ್ಯಕಲಾವಿದ ಡಾ. ಸಂಜಯ್ ಶಾಂತಾರಾಂ ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು. ಕಲಾರಸಿಕರ ನೆನೆಪಿನಲ್ಲಿ ಚಿರಸ್ಥಾಯಿಯಾಗಿ ಉಳಿಯುವಂಥ ವಿಶೇಷ ನೃತ್ಯ ರಸದೌತಣ ನೀಡಿ ಕಣ್ಮನ ತಣಿಸಿದರು.
ಅಂದು ಸಂಜಯ್ ಅರ್ಪಿಸಿದ ನೃತ್ಯನೈವೇದ್ಯ ಬುದ್ಧಿ-ಭಾವಗಳನ್ನು ತಣಿಸಿದ ವಿಶೇಷ ಅನುಭೂತಿಯದು. ನಾಟ್ಯದ ವಸ್ತು ಈ ಲೌಕಿಕ ಪರಿಧಿಯನ್ನು ದಾಟಿದ ಶಿವಸಾಕ್ಷಾತ್ಕಾರ ಮತ್ತು ಕೃಷ್ಣಾನುರಾಗದ ಪರಮ ಗಂತವ್ಯ. ಸೃಷ್ಟಿಯ ಮೂಲಭೂತ ರಹಸ್ಯದ ಸಾರವನ್ನು ಪ್ರತಿ ಎದೆಎದೆಗೂ ದಾಟಿಸಿದ ಆಧ್ಯಾತಿಕ ಸ್ಪರ್ಶ. ಇಲ್ಲಿ ನೃತ್ಯ ಕಲಾವಿದನಿಗೂ ಮತ್ತು ನೋಡುಗರಿಗೂ ಏರ್ಪಟ್ಟ ನೇರಸಂವಾದ ಹೆಜ್ಜೆ-ಗೆಜ್ಜೆಗಳ ಮಿಡಿತದಲ್ಲಿ, ಭಾವಸಂವೇದೀ ಪಕ್ವಾಭಿನಯದಲ್ಲಿ, ಭಕ್ತಿ ತಾದಾತ್ಮ್ಯತೆಯ ರಸದೊರತೆಯಲ್ಲಿ ಘನೀಕರಿಸಿ, ನಡುವೆ ಭಾವಸೇತು ನೇಯ್ದಿತ್ತು.
ಸಂಜಯ್ ನಾಟ್ಯಾರಂಭಿಸಿದ್ದು ಸಾಂಪ್ರದಾಯಕ ಮಲ್ಲಾರಿಯೊಂದಿಗೆ. ಪುರಂದರದಾಸರ ‘ಗಜವದನ ಗೌರಿತನಯ’ ಎಂಬ ಗಣಪತಿಯ ಸ್ತುತಿಯನ್ನು ತಮ್ಮ ವಿಶಿಷ್ಟ ಆಂಗಿಕದೊಂದಿಗೆ ಪ್ರಸ್ತುತಿಪಡಿಸಿದರು. ಶಿವ-ಪಾರ್ವತಿಯರ ಅವಿನಾಭಾವದ ಕಲ್ಪನೆಯೇ ಅಮೋಘ. ಶಿವಪ್ರಿಯರಾದ ಸಂಜಯ್ ತಮ್ಮಲ್ಲಿ ಶಿವನನ್ನೇ ಆವಾಹಿಸಿಕೊಂಡಿದ್ದರೆಂದರೆ ಉತ್ಪ್ರೇಕ್ಷೆಯಲ್ಲ. ಅಂದು ನರ್ತಿಸಿದ ಭಾವಾವೇಶ, ತನ್ಮಯತೆ ನೃತ್ಯಕ್ಕೆ ವಿಶೇಷ ಮೆರುಗು ನೀಡಿತ್ತು. ಯುಗಳಭಾವದ ಪ್ರತೀಕದಂತಿರುವ ಅರ್ಧನಾರೀಶ್ವರರ ಅನನ್ಯ ಕಲ್ಪನೆಯನ್ನು ಅವರಿಬ್ಬರ ಏಕತ್ರಭಾವವನ್ನು ಸಮಗ್ರವಾಗಿ ಕಟ್ಟಿಕೊಟ್ಟರು.
ದಕ್ಷಯಜ್ಞ ಪ್ರಸಂಗದ ಇಡೀ ಸನ್ನಿವೇಶವನ್ನು ಸಂಜಯ್, ತಮ್ಮ ಸೊಗಸಾದ ಅಭಿನಯದಿಂದ ಕಣ್ಮುಂದೆ ತಂದು ನಿಲ್ಲಿಸಿದರು. ಪ್ರತಿ ಸೂಕ್ಷ್ಮವಿವರಗಳನ್ನೂ ಮತ್ತೆ ಮತ್ತೆ ನೋಡಬೇಕೆನಿಸುವ ಅವರ ವಿಶಿಷ್ಟ ಆಂಗಿಕ ಚಲನೆ, ಮುಖಾಭಿವ್ಯಕ್ತಿ ಶಿವನ ವ್ಯಕ್ತಿತ್ವವನ್ನು ಕಡೆದು ನಿಲ್ಲಿಸಿತು. ದಾಕ್ಷಾಯಿಣಿ ದಹನವಾದ ಘಟ್ಟದಲ್ಲಿ ಗುಡುಗಾಡಿಸಿದ ಶಿವತಾಂಡವದ ರುದ್ರನೃತ್ಯ ಅಪ್ರತಿಮ ಅಭಿನಯ ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯಿತು. ಮುಂದೆ ಪಾರ್ವತಿಯ ಜನಿಸಿ, ಶಿವನಿಗಾಗಿ ತಪಸ್ಸು ಮಾಡುತ್ತಿರುವಾಗ, ಶಿವ, ವೃದ್ಧನಾಗಿ ಅವಳ ಬಳಿಸಾರಿ, ಅವಳ ಆರಾಧ್ಯದೈವ ಶಿವನನ್ನು ಹಾಸ್ಯಮಾಡಿ, ಅವಳನ್ನು ಕೆರಳಿಸಿ, ನಂತರ ನಿಜರೂಪ ತೋರಿ ವಿವಾಹವಾಗುವ ಏಕಪಾತ್ರಾಭಿನಯವನ್ನು ಬಹು ಸೂಕ್ಷ್ಮವಾಗಿ ಎಳೆಎಳೆಯಾಗಿ ಕಂಡರಿಸಿದರು. ಸತಿ-ಪತಿಯರೊಂದಾಗಿ ‘ಅರ್ಧನಾರಿಶ್ವರ’ ಸಾಕಾರದಲ್ಲಿ ಲಾಸ್ಯ, ಒನಪು-ಮೃದುತ್ವದ ಗುಣ, ಮೋಹಕಚಲನೆ ಮತ್ತು ಪೆಡಸು ಹೆಜ್ಜೆ-ಆಂಗಿಕಗಳಲ್ಲಿ ವಿರುದ್ಧ ಗುಣ-ವಿಶೇಷಗಳನ್ನು ತಮ್ಮ ಅಂಗಶುದ್ಧಿಯ ಖಾಚಿತ್ಯ ಹಾವ-ಭಾವಗಳಲ್ಲಿ ಸೆರೆಹಿಡಿದರು.
ದೈವೀಕ ಸ್ತರದ ಇನ್ನೊಂದು ಮಗ್ಗುಲಾಗಿ ಪ್ರೇಮಾತಿಶಯಕ್ಕೆ ರೂಪಕವಾದ ಕೃಷ್ಣ-ರಾಧೆಯರ ಅನುರಾಗದೋಕುಳಿ ಪ್ರಸ್ತುತಿ ಇನ್ನೊಂದು ಮುಖವನ್ನು ಅನಾವರಣಗೊಳಿಸಿತು. ಸಂಜಯ್ ತಮ್ಮನ್ನಾವರಿಸಿದ್ದ ಶಿವೋನ್ಮಾದವನ್ನು ಸಂಪೂರ್ಣ ಕಳಚಿ, ಪ್ರೇಮಾನುರಾಗದ ಮೂರ್ತಿಯಾಗಿ, ರಾಧೆಯಿಲ್ಲದೆ ಪರಿತಪಿಸುವ ವಿರಹಿಯಾಗಿ ಹೃದಯವನ್ನು ಆವರಿಸಿಕೊಂಡರು. ಜಯದೇವನ ‘ಗೀತಗೋವಿಂದ’ದ ಎರಡು ‘ಅಷ್ಟಪದಿ’ಗಳ ಪ್ರಸ್ತುತಿಯಲ್ಲಿ, ‘ಪ್ರಿಯೆ ಚಾರುಶೀಲೇ’ ಎಂದು ವಿರಹತಪ್ತನಾಗಿ, ತನ್ನ ಮನದನ್ನೆ ರಾಧೆಯ ಬಳಿ ಬಂದು, ಪರಸ್ತ್ರೀ ವ್ಯಾಮೋಹದ ತನ್ನ ತಪ್ಪಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿ ಅವಳನ್ನು ರಮಿಸತೊಡಗುತ್ತಾನೆ.
ಪ್ರೇಮಿಗಳ ಹುಸಿಕಲಹ, ಮುನಿಸು, ರಾಜಿಯ ಸುಮಧುರ ಕ್ಷಣಗಳನ್ನು ಚಿತ್ರವತ್ತಾಗಿ ಸಾಕ್ಷೀಕರಿಸಿದರು. ಪ್ರೇಮಿಗಳ ನಡುವಣ ಸಲ್ಲಾಪಗಳು ವರ್ಣರಂಜಿತವಾಗಿ ಸಾಗಿ, ಕೃಷ್ಣ ಸಂಪೂರ್ಣ ಅವಳಿಗೆ ಶರಣಾಗುವ ರಸಗಳಿಗೆಗಳನ್ನು ಸಂಜಯ್ ಪರಾಕಾಷ್ಟತೆಗೊಯ್ದರು. ಸಂಜಯರ ದ್ವಿಪಾತ್ರದ ನವಿರು ಅಭಿನಯ, ಕುಸುರಿ ನಡೆ, ಅಭಿನಯನೈಪುಣ್ಯ ಹೃದಯಾಪಹಾರಿಯಾಗಿತ್ತು. ಎಂಥ ಪಾತ್ರವನ್ನಾದರೂ ಪರಕಾಯ ಪ್ರವೇಶ ಮಾಡಿ ಅಭಿನಯಿಸುವ ಸಂಜಯ್ ಕಲಾಚಾತುರ್ಯ ಔನ್ನತ್ಯಕ್ಕೇರಿತ್ತು . ಪ್ರೇಮಪರ್ವಗಳನ್ನು ನಿರ್ಮಿಸಿದ ರಾಧಾ-ಕೃಷ್ಣರ ಅನುರಾಗದ ಮಜಲುಗಳು ಮತ್ತು ಅರ್ಧನಾರೀಶ್ವರರಾದ ಶಿವ-ಪಾರ್ವತಿಯರ ದೈವೀಕ ಸಾಕ್ಷಾತ್ಕಾರ ನಿಜಕ್ಕೂ ಒಂದು ಹೃದಯಸ್ಪರ್ಶೀ ದಿವ್ಯಾನುಭವ.