ನೃತ್ಯವೊಂದು ತಪಸ್ಸು ಎಂಬಂತೆ ಎಲೆಮರೆಯ ಕಾಯಿಯಾಗಿ, ತಾವು ಅರ್ಜಿಸಿದ ವಿದ್ಯೆಯನ್ನು ತಮ್ಮ ಶಿಷ್ಯರಿಗೆ ಬದ್ಧತೆಯಿಂದ ಧಾರೆ ಎರೆಯುತ್ತಿರುವ ಪ್ರತಿಭಾನ್ವಿತ ನಾಟ್ಯಾಗುರು ವಿದುಷಿ ಶುಭಾ ಪ್ರಹ್ಲಾದರಾವ್. ಇವರು ಸ್ಥಾಪಿಸಿದ ‘ರಾವ್ಸ್ ಅಕಾಡೆಮಿ ಆಫ್ ಡಾನ್ಸ್’ ಗುಣಾತ್ಮಕ ಶಿಕ್ಷಣಕ್ಕೆ ಹೆಸರಾಗಿದ್ದು ನೂರಾರು ಮಕ್ಕಳನ್ನು ನೃತ್ಯದ ಕ್ಷೇತ್ರಕ್ಕೆ ಬರಮಾಡಿಕೊಂಡು ಉತ್ತಮ ಶಿಲ್ಪವಾಗಿ ಕಡೆಯುವ ಕೈಂಕರ್ಯದಲ್ಲಿ ತೊಡಗಿದೆ.
ಇತ್ತೀಚಿಗೆ, ಶುಭಾ ಅವರ ಮಾರ್ಗದರ್ಶನದಲ್ಲಿ ಅರಳಿದ ಪಂಚ ಕಲಾಪುಷ್ಪಗಳು ರಂಗದ ಮೇಲೆ ವಿಕಸಿತವಾದವು. ಶಾಸ್ತ್ರೋಕ್ತವಾಗಿ ನಗರದ ಜೆ.ಎಸ್.ಎಸ್. ರಂಗಮಂದಿರದಲ್ಲಿ ಗುರು-ಹಿರಿಯರ ಸಮ್ಮುಖ ಕಾಲಿಗೆ ಗೆಜ್ಜೆ ಕಟ್ಟಿ ‘ಗೆಜ್ಜೆಪೂಜೆ’ಯ ಸುಸಂದರ್ಭದಲ್ಲಿ ಆನಂದದಿಂದ ಸೊಗಸಾಗಿ ನರ್ತಿಸಿದರು.
ಅಚ್ಚುಕಟ್ಟಾಗಿ ಮೂಡಿಬಂದ ನರ್ತನ ವಿಲಾಸದಲ್ಲಿ ಕಲಾರಸಿಕರನ್ನು ಆಕರ್ಷಿಸಿದ ಪುಟ್ಟ ಕಲಾವಿದೆಯರೆಂದರೆ, ಅನುಷ್ಕ, ದಿಶಾ, ಅಮೃತಾ, ಕಿರಣ್ಮಯಿ ಮತ್ತು ಶ್ರೀನಿಧಿ. ಕೃತಿಗಳ ಆಯ್ಕೆಯಲ್ಲಿ ಗುರು ಶುಭ ಜಾಣ್ಮೆ ತೋರಿ, ಮಕ್ಕಳ ವಯಸ್ಸಿಗೆ ಹದವಾದ ಸುಲಭಗ್ರಾಹ್ಯ ಕೃತಿಗಳು ಮತ್ತು ಸರಳ-ಸುಂದರ ನೃತ್ಯ ಸಂಯೋಜನೆಯನ್ನು ಅಳವಡಿಸಿದ್ದರು.
ಮೊದಲಿಗೆ ‘ಪುಷ್ಪಾಂಜಲಿ’ಯ ಮೂಲಕ ದೇವಾನುದೇವತೆಗಳಿಗೆ, ಗುರು-ಹಿರಿಯರು, ವಾದ್ಯಗೋಷ್ಠಿ ಮತ್ತು ಕಲಾರಸಿಕರಿಗೆ ಭಕ್ತಿಪೂರ್ವಕ ನಮನವನ್ನು ನೃತ್ತ ನೈವೇದ್ಯದ ಮೂಲಕ ಅರ್ಪಿಸಿದರು. ಅದರೊಡನೆ ಜಗನ್ನಾಥದಾಸರು ರಚಿಸಿದ ಪರಮೇಶ್ವರನ ಗುಣಗಾನ, ಮಹಿಮೆಗಳ -ಭಕ್ತ್ಯಾರ್ಪಣೆಯ ಕೃತಿಯನ್ನು ನೃತ್ತಗಳ ಝೇಂಕಾರದ ಮಿಂಚಿನಲ್ಲಿ ಸಾದರಪಡಿಸಿದರು. ನಾಗಭೂಷಣನ ಸರ್ವಾಲಂಕಾರದ ವರ್ಣನೆ, ನಂದಿವಾಹನನ ಮೆರುಗನ್ನು ತಮ್ಮ ಆಂಗಿಕಾಭಿನಯದ ರಮ್ಯತೆಯಿಂದ ಎತ್ತಿ ಹಿಡಿದರು.
ಮುಂದೆ-ಸರಸ್ವತಿ ರಾಗದ ರೂಪಕ ತಾಳದ ಕಾಂಚೀಪುರಂ ಎಲ್ಲಪ ಮುದಲಿಯಾರ್ ವಿರಚಿತ ‘ಜತಿಸ್ವರ’’ವನ್ನು ನರ್ತಕಿಯರು ಒಂದೇ ಎರಕದ ಅಚ್ಚುಗಳಂತೆ ಸಾಮರಸ್ಯದಿಂದ ಜತಿಗಳನ್ನು ನಿರೂಪಿಸಿದರು. ಕಲಾವಿದೆಯರು ಹಸನ್ಮುಖದಿಂದ ಆನಂದಿಸುತ್ತಾ ನರ್ತಿಸಿದ್ದು ವಿಶೇಷವಾಗಿತ್ತು. ಆಕರ್ಷಕ ಅಡವುಗಳ ಈ ಶುದ್ಧ ನೃತ್ತಬಂಧ, ನಾಟ್ಯದ ವ್ಯಾಕರಣದ ಅನೇಕ ಆಯಾಮಗಳನ್ನುಪರಿಚಯಿಸಿದವು.
ರಾಗಮಾಲಿಕೆಯ ‘ಶಬ್ದ’-‘ಕಲಾಕ್ಷೇತ್ರ’ ಪದ್ಧತಿಯ ಸಂಯೋಜನೆಯನ್ನು ಹೊಂದಿತ್ತು. ಬಾಲಕೃಷ್ಣನ ರಮ್ಯಲೀಲೆಗಳನ್ನು ಚಿತ್ರಿಸುವ ಈ ಸುಂದರ ಕೃತಿ, ಸಣ್ಣ ಜತಿಗಳೊಂದಿಗೆ ಅಭಿನಯವನ್ನು ಮೊದಲ ಬಾರಿಗೆ ಪ್ರದರ್ಶಿಸಿತು. ಪುಟ್ಟಗೋಪನ ತುಂಟಾಟಗಳು, ಗೋಪಿಕೆಯರೊಡನಾಟದ ಅನೇಕ ಸ್ವಾರಸ್ಯಕರ ಪ್ರಸಂಗಗಳನ್ನು ತೆರೆದಿಟ್ಟಿತು. ಜೊತೆಗೆ ಬಾಲಕೃಷ್ಣನ ಕಾಳಿಂಗಮರ್ಧನ, ಗೋವರ್ಧನ ಗಿರಿಧಾರಿಯಾಗಿ ಜನರನ್ನು ಕಾಪಾಡಿದ ಕಲ್ಯಾಣಕಾರಿ ಘಟನೆಗಳನ್ನು ಅನಾವರಣಗೊಳಿಸಿತು. ಭಾರತೀ ವೇಣುಗೋಪಾಲ್ ಅವರ ಭಾವಪೂರ್ಣ ಗಾಯನ ನೃತ್ಯದ ಐಸಿರಿಯಾಯಿತು. ಕಲಾವಿದೆಯರ ಮುದವಾದ ಅಭಿನಯ, ಖಚಿತ ಹಸ್ತಮುದ್ರೆ, ಅಡವುಗಳ ಸೊಗಸು ಗಮನಾರ್ಹವಾಯಿತು.
ಅನಂತರ-ದಾಸಶ್ರೇಷ್ಠ ಪುರಂದರದಾಸ ಕೃತ ‘ಸುನಾದ ವಿನೋದಿನಿ’ ರಾಗದ ದೇವರನಾಮ -‘ಹರಿಯಾಡಿದನೆ’ ಮನಕಾನಂದ ನೀಡುವ ಲಹರಿಯ ಪದಗತಿಯಲ್ಲಿ ಸಾಗಿತು. ಹರಿಯ ಮಹಿಮೆ ಮತ್ತು ಗುಣಾವಳಿಗಳನ್ನು ಕಲಾವಿದೆಯರು ಬಹು ಮನೋಹರವಾಗಿ, ತಮ್ಮ ಸಲಿಲ ಚಲನೆಯ ನೃತ್ತ ಪ್ರಸ್ತುತಿಯೊಂದಿಗೆ ಸಾಕ್ಷಾತ್ಕರಿಸಿದರು. ತಮ್ಮ ಮುದ್ದುಮುಖಗಳ ನಗುವಿನೊಂದಿಗೆ ಚೇತೋಹಾರಿಯಾಗಿ ನರ್ತಿಸಿದರು. ಪ್ರತಿ ಕೃತಿಯ ಅಂತ್ಯದಲ್ಲೂ ಪ್ರದರ್ಶಿಸಿದ ಸುಂದರ ವಿನ್ಯಾಸದ ರಚನೆ- ವಿಶಿಷ್ಟ ಭಂಗಿಗಳು ಆಕರ್ಷಕವಾಗಿದ್ದವು. ಗುರು ಶುಭಾ ಅವರ ಉತ್ಸಾಹಪೂರಿತ-ನಟುವಾಂಗ ಸ್ಫುಟವಾಗಿ ಝೇಂಕರಿಸುತ್ತ, ಕಲಾವಿದೆಯರಲ್ಲಿ ಸ್ಫೂರ್ತಿ ತುಂಬಿತು.

ಅಂತ್ಯದಲ್ಲಿ ಪ್ರಸ್ತುತವಾದ ಮೋಹನಕಲ್ಯಾಣಿ ರಾಗದ ಲಾಲ್ಗುಡಿ ಜಯರಾಂ ವಿರಚಿತ ‘ತಿಲ್ಲಾನ’ ಮನೋಹರ ನೃತ್ತಗಳ ಹೆಣಿಗೆಯೊಂದಿಗೆ ಆಹ್ಲಾದಕರವಾಗಿ ನಿರೂಪಿತವಾಯಿತು. ಮಂಗಳಕರವಾಗಿ ಮುಕ್ತಾಯಗೊಂಡ ನೃತ್ಯ ಸಂಭ್ರಮದಲ್ಲಿ , ಕಲಾವಿದೆಯರು ವರ್ಣರಂಜಿತ ಲಂಗ-ಪೋಲಕಗಳಲ್ಲಿ, ತಲೆಯ ಮೇಲೆ ಬಣ್ಣ ಬಣ್ಣದ ಕೊಡಗಳನ್ನು ಹಿಡಿದು ಉಲ್ಲಸಿತವಾಗಿ ‘ವಾದಿರಾಜ’ರ ಕೃತಿಗೆ ಹೆಜ್ಜೆ ಹಾಕಿ ಮೋಡಿ ಮಾಡಿದರು.
ನೃತ್ಯದ ಮೆರುಗನ್ನು ಹೆಚ್ಚಿಸಿದ ವಾದ್ಯ ಸಹಕಾರ-ಮೃದಂಗ- ಪವನ್ ಮಾಧವ್, ಕೊಳಲು- ಗಣೇಶ್, ವಯೊಲಿನ್- ಮಧುಸೂದನ್, ಸುಶ್ರಾವ್ಯ ಗಾಯನ-ಭಾರತೀ ವೇಣುಗೋಪಾಲ್ ಮತ್ತು ನಟುವಾಂಗ- ಗುರು ಶುಭಾ ಪ್ರಹ್ಲಾದ್ ರಾವ್.
*******************