Image default
Dance Reviews

ಅಪೂರ್ವಳ ಹೃನ್ಮನ ತಣಿಸಿದ ವರ್ಚಸ್ವೀ ನೃತ್ಯ

ಹಿರಿಯ ನಾಟ್ಯಗುರು ಬಿ.ಕೆ.ವಸಂತಲಕ್ಷ್ಮಿ ಅವರ ಶಿಷ್ಯೆ ಅಪೂರ್ವ ಶರ್ಮಳ ‘ರಂಗಪ್ರವೇಶ’ ಎ.ಡಿ.ಎ. ರಂಗಮಂದಿರದಲ್ಲಿ ನಡೆಯಿತು. ಕಲಾವಿದೆ ಪ್ರಸ್ತುತಪಡಿಸಿದ ಅಭಿನಯಪ್ರಧಾನ ಕೃತಿಗಳೆಲ್ಲ ಬಹು ವೈಶಿಷ್ಟ್ಯಪೂರ್ಣವಾಗಿದ್ದವು. ಕಲಾವಿದೆಯ ಭಾವಸ್ಫುರಣೆಯ ಕಂಗಳು, ನೃತ್ಯಕ್ಕೆ ಹೇಳಿಮಾಡಿಸಿದ ಮೈಮಾಟ-ಉತ್ತಮ ನಿಲುವು, ಅಚ್ಚುಕಟ್ಟಾದ ನರ್ತನ ರಸಿಕರ ಹೃನ್ಮನ ತಣಿಸಿದವು. ಭಾರತೀ ವೇಣುಗೋಪಾಲ್ ಅವರ ಭಾವಪೂರ್ಣ ಗಾಯನ, ಭವಾನಿಶಂಕರರ ಮೃದಂಗ, ದಯಾಕರ್ ಪಿಟೀಲು, ನರಸಿಂಹಮೂರ್ತಿ ಕೊಳಲಗಾನ ನೃತ್ಯಕ್ಕೆ ಸುಸ್ವರದ ಹಿಮ್ಮೇಳ ಒದಗಿಸಿದ್ದವು.

 ಆತ್ಮವಿಶ್ವಾಸದ ನೋಟ, ದೃಢವಾದ ಹೆಜ್ಜೆಗಳು, ಆಕರ್ಷಕ ನೃತ್ತಗಳ ಗುಚ್ಚದಿಂದ ಶೋಭಿಸಿದ  ‘ಪುಷ್ಪಾಂಜಲಿ’ ಮತ್ತು ‘ಅಂಬಾಸುತ ಕರಿವದನ ಕಾಯೋ’ ಎಂಬುದಾಗಿ ಗಣೇಶನಕೃಪೆಯನ್ನು ಬೇಡುವ, ಅವನ ಅಮಿತಗುಣಗಳನ್ನು ಸ್ತುತಿಸುವ ಅಪೂರ್ವಳ ಭಾವಪೂರ್ಣ ಅಭಿವ್ಯಕ್ತಿ ಸುಮನೋಹರವಾಗಿ ಮೂಡಿಬಂತು. ಅನಂತರ ಪ್ರಸ್ತುತವಾದ  ‘ಶಬ್ದಂ ’- ‘ಸರಸಿಜಾಕ್ಷಲು ಜಳಕ ಮಾಡೆ…’ಕೃತಿಯಲ್ಲಿ ಶ್ರೀಕೃಷ್ಣನ ಲೀಲಾವಿನೋದ ವಿವಿಧ ಮಜಲುಗಳಲ್ಲಿ ಸಾಗಿತು. ಗೋಪಿಕೆಯರು ಜಲಕ್ರೀಡೆಯಲ್ಲಿ ತಲ್ಲೀನರಾಗಿದ್ದಾಗ ಮೆಲ್ಲನೆ ಅವರ ವಸ್ತ್ರಗಳನ್ನು ಕದಿಯುವ ಕೃಷ್ಣನ ಕೀಟಲೆ-ಕೋಟಲೆಗಳು, ಮೊಸರು-ಬೆಣ್ಣೆಗಳ ಗಡಿಗೆಗಳನ್ನು ಒಡೆದು ಕದ್ದುತಿನ್ನುವ ಅವನ ತುಂಟಾಟಗಳು ಕಲಾವಿದೆಯ ಲವಲವಿಕೆಯ ಅಭಿನಯದಿಂದ ಕಣ್ಣಿಗೆ ಕಟ್ಟುವಂತೆ ಚಿತ್ರಿತವಾದವು. ಗೋಪಿಕೆಯರನ್ನು ಗೋಳುಹೊಯ್ದುಕೊಳ್ಳುವ ಕೃಷ್ಣನ ಪರಿ ನ್ಯಾಯವೇ-ಧರ್ಮವೇ ಎಂಬುದಾಗಿ, ಏನೂ ಗೊತ್ತಿಲ್ಲದ ಮುಗ್ಧನಂತೆ  ಮಲಗಿರುವ ಅನಂತಪದ್ಮನಾಭನನ್ನು ಪ್ರಶ್ನಿಸುವ ನಾಟಕೀಯ ದೃಶ್ಯಗಳಿಂದ ಕಂಗೊಳಿಸಿದ ‘ಶಬ್ದಂ’ ಅಪೂರ್ವಳ ಪ್ರತಿಭಾ ಸಾಮರ್ಥ್ಯಕ್ಕೆ ಕನ್ನಡಿಯಾಯಿತು.

 ಸಂಗೀತಗಾರ್ತಿ ಭಾರತಿ ವೇಣುಗೋಪಾಲ್ ವಿರಚಿತ ಶ್ರೀರಾಮನ ಪರಿಪೂರ್ಣ ವ್ಯಕ್ತಿತ್ವವನ್ನು ಕಟ್ಟಿಕೊಡುವ ಕನ್ನಡದ ‘ವರ್ಣ’ (ಖರಹರಪ್ರಿಯ ರಾಗ) ಭಕ್ತಿಯ ಪರಾಕಾಷ್ಟತೆಯನ್ನು ಪ್ರದರ್ಶಿಸಿತು. ರಾಮಾಯಣದ ವಿವಿಧ ಪ್ರಸಂಗಗಳನ್ನು ಕಟ್ಟಿಕೊಡುವ ದೃಶ್ಯಾವಳಿಗಳು ಕಲಾವಿದೆಯ ಭಾವಸ್ಫುರಣ ಅಭಿನಯದಿಂದ ಮನಸೂರೆಗೊಂಡಿತು. ‘ ರಾಮ ಭಾನು ಕುಲಾಂಬುಧಿ ಸೋಮ…’ ಎಂಬ ಸಾಲುಗಳಿಗೆ ಹೆಜ್ಜೆಹಾಕುತ್ತ ಅಪೂರ್ವ, ತನ್ನ ಮನೋಹರ ನೃತ್ತಗಳಿಂದ , ಹುಬ್ಬು-ಕಣ್ಣುಗಳ ಸುಂದರ ಚಲನೆಯಿಂದ ಮನೋಹರವಾಗಿ ನರ್ತಿಸಿದಳು. ವಿಶ್ವಾಮಿತ್ರರ ಯಾಗರಕ್ಷಣೆಯ ಪ್ರಸಂಗ, ಹರಧನಸ್ಸು ಛೇಧನ, ಸೀತಾ ಕಲ್ಯಾಣಗಳ ಘಟನೆಯ ನಿರೂಪಣೆಯೊಂದಿಗೆ  ಶಬರಿಯ ಪ್ರಸಂಗ ಉತ್ಕೃಷ್ಟವಾಗಿ ಮೂಡಿಬಂತು. ಶ್ರೀರಾಮ, ಆಂಜನೇಯನ ಭಕ್ತಿಯ ಪಾರಮ್ಯ ಗುರುತಿಸಿ ಅವನಿಗೆ ಹೃದಯದಲ್ಲಿ ಸ್ಥಾನನೀಡುವ ಭಾಗ ಆರ್ದ್ರವಾಗಿ, ಭಕ್ತಿತನ್ಮಯತೆಯಿಂದ ಸೆರೆಹಿಡಿಯಿತು. ಗುರು ವಸಂತಲಕ್ಷ್ಮಿಯವರ ನೃತ್ಯಸಂಯೋಜನೆ ಸೃಜನಾತ್ಮಕತೆಯಿಂದ ಕೂಡಿತ್ತು.

ಮುಂದೆ ನಾಯಕಿಯ ವಿವಿಧ ಮನಸ್ಥಿತಿಗಳನ್ನು ಸುಂದರವಾಗಿ ಚಿತ್ರಿಸುವ ಮೂರು ವಿವಿಧ ಕೃತಿಗಳು ಸಾಲಾಗಿ ಪ್ರಸ್ತುತಗೊಂಡವು. ಕಾರಣ, ಅವುಗಳ ಆಂತರ್ಯದಲ್ಲಿ ಏಕತ್ರಭಾವ ಸ್ರವಿಸುತ್ತಿದ್ದುದರಿಂದ ಅವುಗಳನ್ನು ಕೌಶಲ್ಯದಿಂದ ಜೋಡಿಸಿ ಭಾವಸೌಂದರ್ಯ ಹೊರಹೊಮ್ಮಲು ಅನುವು ಮಾಡಿಕೊಡಲಾಗಿತ್ತು.

ಸಂತಕವಿ ಜಯದೇವನ ‘ಗೀತಗೋವಿಂದ’ ರಸಘಟ್ಟಗಳ ಸುಮಧುರ ಶೃಂಗಾರಕಾವ್ಯ. ಶ್ರೀಕೃಷ್ಣನಿಗಾಗಿ ತಳಮಳಿಸಿದ ನಾಯಕಿಯ ವಿರಹವೇದನೆಯನ್ನು ಮನಗಂಡ ಸಖಿ, ತಡಮಾಡದೆ ಅವನ ಬಳಿ ತೆರಳಲು ಸೂಚಿಸುವ, ಸಾಂತ್ವನ ಹೇಳುವ ಯಮನ್ ಕಲ್ಯಾಣಿರಾಗದ ‘ರತಿಸುಖ ಸಾರೆ, ಗತಮಭಿಸಾರೆ …’ ಎಂಬ ಅಷ್ಟಪದಿಯ ಹೃದಯಭಾವವನ್ನು ಗ್ರಹಿಸಿ ಕಲಾವಿದೆ ಸುಮನೋಹರವಾಗಿ ಸಾಕ್ಷಾತ್ಕರಿಸಿದಳು. ಅದೇ ಅನುರಾಗಭಾವದ ಇನ್ನೊಂದು ಕೃತಿಯಲ್ಲಿ, ಅಭಿಸಾರಿಕೆ ‘ಆಂಡಾಳ್ ‘ ಶ್ರೀಕೃಷ್ಣನಲ್ಲಿ ಐಕ್ಯಳಾಗುವ ದಿವ್ಯಾನುಭವ, ಸಮರ್ಪಿಸಿದ ಪ್ರೇಮನೈವೇದ್ಯ ಅತ್ಯಂತ ದೈವೀಕವಾಗಿ ಭಕ್ತಿಪೂರ್ವಕವಾಗಿ ಸಾಕಾರಗೊಂಡಿತು. ಅಪೂರ್ವಳ ಮನೋಜ್ಞ ಭಂಗಿಗಳು ಕಣ್ಮನ ತುಂಬಿದವು. ಜೀವಾತ್ಮ-ಪರಮಾತ್ಮ ಕಲ್ಪನೆಯಲ್ಲಿ ಭಕ್ತಿರಸ ಮಡುಗಟ್ಟಿತ್ತು.

‘ ರಂಗನೇತಕೆ ಬಾರನೇ?…’ ಎಂದು ಕಳವಳಗೊಳ್ಳುವ ವಿರಹಿ ನಾಯಕಿ ಕೃಷ್ಣನ ನಿರೀಕ್ಷೆಯಲ್ಲಿ ಬೆಂದು ಬಸವಳಿದು ಹಪಹಪಿಸುತ್ತ , ತನ್ನ ತೀವ್ರಭಾವನೆಗಳನ್ನು ಸಖಿಯಲ್ಲಿ ತೋಡಿಕೊಳ್ಳುವ ಪರಿ ಮನನೀಯವಾಗಿತ್ತು. ಮೂರೂ ಕೃತಿಗಳ ಸ್ಥಾಯಿಭಾವ, ವಸ್ತು ಒಂದೇ ಆದ್ದರಿಂದ ಅವುಗಳನ್ನು ಒಂದರೊಳಗೊಂದು ಹಾಸುಹೊಕ್ಕು ಹೆಣೆದದ್ದು ಕಲಾತ್ಮಕವೆನಿಸಿತು.   ಅಂತ್ಯದ ರೇವತಿರಾಗದ ‘ತಿಲ್ಲಾನ’ ಚುರುಕಾದ ನೃತ್ತ-ರಂಗಾಕ್ರಮಣದಿಂದ ಸೆಳೆದರೆ, ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದ ‘ವಂದೇ ಮಾತರಂ’ ಭಾವಪೂರ್ಣವಾಗಿ ಮೂಡಿಬಂದು ಹೃದಯಸ್ಪರ್ಶಿಯ ಅನುಭವ ನೀಡಿತು.

Related posts

ಸಂಗೀತ ತ್ರಿವಳಿ ರತ್ನಗಳಿಗೆ ನೃತ್ಯನಮನ

YK Sandhya Sharma

ಸೃಷ್ಟಿಯ ಸಾತ್ವಿಕಾಭಿನಯದ ಕಲಾತ್ಮಕ ನರ್ತನ

YK Sandhya Sharma

ಕಣ್ಮನ ಸೆಳೆದ ಅನಘಾ-ನಿಧಿ ಬೋಳಾರ್ ಅಪೂರ್ವ ನೃತ್ಯ

YK Sandhya Sharma

Leave a Comment

This site uses Akismet to reduce spam. Learn how your comment data is processed.