Image default
Short Stories

ಕಮಲು ಯೋಗ ಕಲಿತದ್ದು

ಕಛೇರಿಯ ವಿಶ್ರಾಂತಿಯ ಸಮಯ. ಎಂದಿನಂತೆ ಕಮಲು ಸೀಟಿನ ತುಂಬ ಸುಖಾಸನ ಹಾಕಿಕೊಂಡು ಅಳ್ಳಕವಾಗಿ ಕುಳಿತು ನಾಲ್ಕು ಅಂತಸ್ತಿನ ತನ್ನ ಟಿಫನ್ ಕ್ಯಾರಿಯರ್ ಬಟ್ಟಲುಗಳನ್ನು ಬಿಚ್ಚಿ ಟೇಬಲ್ಲಿನ ಪೂರ ಹರಡಿಕೊಂಡು ‘ಏಕಾದಶಿ ಫಲಾಹಾರ’ಕ್ಕೆ ಕೂತಿದ್ದಳು.ಏಕಾದಶಿಯ ದಿನ ‘ಮುಸುರೆ’ ಅಂದ್ರೆ ಅರ್ಥಾತ್ ‘ಅನ್ನ’ ನಿಷಿದ್ದವಾದ್ದರಿಂದ ಇಂದು ಬರೀ ಗೊಜ್ಜವಲಕ್ಕಿ, ದೊಣ್ಣೆ ಮೆಣಸಿನಕಾಯಿ ಬಟಾಣಿ ಉಪ್ಪಿಟ್ಟು, ಗೋಡಂಬಿ ದ್ರಾಕ್ಷಿ ಕಿಕ್ಕಿರಿದ ಸಣ್ಣರವೆ ಕೇಸರೀಭಾತು, ಮತ್ತು ಹೀರೇಕಾಯಿ ಬೋಂಡಗಳನ್ನು ಸ್ವಾಹ ಮಾಡಲು ಸನ್ನದ್ದಳಾಗಿದ್ದಳು!

ಅಷ್ಟರಲ್ಲೇ ಆಫೀಸ್ ಬಾಯ್ ಪ್ಯಾಂಪ್ಲೆಟ್ಸ್‍ಗಳನ್ನು ಹಂಚುತ್ತ ಬರಬೇಕೇ ?‘ಮಾಧುರಿ ದೀಕ್ಷಿತಳಂಥ ಮೈಕಟ್ಟು, ಪಿ. ಟಿ. ಉಷಾಳ ಚಟುವಟಿಕೆ, ಕಾಂತಿಯುತ ಆರೋಗ್ಯ ಪಡೆಯಲು ಬಯಸುವವರಿಗೆಲ್ಲಾ ಸುವರ್ಣಾವಕಾಶ! ಬಿಡಬೇಡಿ… ಬಿಟ್ಟು ನಿರಾಶರಾಗದಿರಿ.‘ಜನುಮಕ್ಕೊಮ್ಮೆ ಮಾತ್ರ ಸಿಗಬಹುದಾದಂಥ ಸುಸಂಧಿ’- ಎಂದು ಘೋಷಣೆಯನ್ನು ಹಾಕುತ್ತ, ಹಂಡೆಯ ಹೋಲುವ ಕಮಲುವಿನತ್ತ ಒಂದು ಸ್ಪೆಷಲ್ ಅರ್ಥಗರ್ಭಿತ ನಗೆಯನ್ನು ಚಿಮ್ಮಿಸಿ, ಜೊತೆಗೊಂದು ಪ್ಯಾಂಪ್ಲೆಟ್ಟನ್ನೂ ಬಿಸಾಕಿ ಮುಂದೋಡಿದ.

‘ಕಮ್ಲೂ ಇಂಟರ್‍ವೆಲ್ ಹೊತ್ನಲ್ಲಿ ನಮ್ಮ ಮಹಿಳೆಯರಿಗೆ ಎದುರಿನ ಆಫೀಸಿನಲ್ಲಿ ನಾಳೆಯಿಂದ ಯೋಗ ಹೇಳಿಕೊಡ್ತಾರಂತೆ ಕಣೆ… ನಾವೂ ಹೋಗೋಣ್ವೇನೇ?’ಸೈಜಿನಲ್ಲಿ ಕಮಲೂ ತಂಗಿ ಹಾಗಿದ್ದ ಲೀಲೂ ತನ್ನ ಕೀರಲು ಸ್ವರದಲ್ಲಿ ಕೇಳಿದಾಗ, ಕಮಲು ಕಣ್ಣು ಪ್ಯಾಂಪ್ಲೆಟಿನ ಮೇಲೆ ಹಾಯ್ದಿತು.ಮಹಿಳೆಯರಿಗೆ ವಿಶೇಷ ಯೋಗ ತರಬೇತಿ!…ತಿಂಗಳಲ್ಲೇ ಸುಂದರ ಮೈಕಟ್ಟು! ಕಾಂತಿ ಹೊಮ್ಮುವ ಆರೋಗ್ಯ!! ಕಮಲುವಿನ ಅರಳುಗಣ್ಣುಗಳು ಒಮ್ಮೆಲೇ ನೂರು ಕ್ಯಾಂಡಲಿನ ಬಲ್ಬಿನಂತೆ ಝಗಝಗಿಸಿದವು! ತನುವಾಗಲೇ ರೋಮಾಂಚನದಿಂದ ಕಂಪಿಸಿತು.ಮರುದಿನವೇ ಮಹಿಳೆಯರ ಒಂದು ದೊಡ್ಡ ಬೆಟಾಲಿಯ

ನ್ನೇ ಎದುರು ಆಫೀಸಿನತ್ತ ದಾಳಿಯಿಟ್ಟಿತು.ಮೊದಲ ದಿನ ಬರೀ ಥಿಯರಿ ಕ್ಲಾಸ್. ಯೋಗ ಹೇಳ್ಕೊಡೋ ಗುರು ಯಾರಪ್ಪ ಎಂದು ಕಣ್ಣು ಕಿಚಾಯಿಸಿ ನೋಡಿದರೆ ನಿರಾಸೆಯಾಗೋಣವೇ?! …ಮೂಳೆ ಚಕ್ಕಳ ಬಿಟ್ಕೊಂಡ ಒಂದು ಸಣ್ಣ ಪಡ್ಡೆ ಹುಡುಗಿ! ಪರವಾಗಿಲ್ಲ ಕಂಠ ಮಾತ್ರ ಘಂಟೆ ಹೊಡೆದಂತಿತ್ತು. ತರಗತಿಯ ನಿಯಮಗಳನ್ನು ಕುರಿತು ಹೇಳಿದಳು.‘ನಾಳೆಯಿಂದ ನೀವುಗಳೆಲ್ಲ ಸತೃಣಾಭ್ಯ ವ್ಯವಹಾರಿ’ಗಳಾಗಬೇಕು… ಅಂದ್ರೆ ಅರ್ಥಾತ್ ದನಗಳಾಗಬೇಕು… ನಿಮ್ಮ ಆಹಾರ ಬರೀ ಸೊಪ್ಪು, ಸದೆ-ಹಸೀ ತರಕಾರಿ, ಕಚ್ಚಾ ವಸ್ತುಗಳು… ಉದ್ದಿನ ವಡೆ, ಪಕೋಡ ಬದ್ಲು ನಾಳೆಯಿಂದ ನೀವೆಲ್ಲಾ ಕಾಳುಗಳನ್ನು ಲಂಚ್‍ಗೆ ತರಬೇಕು…… ಇಲ್ಲಿಗೆ ಬರೋವಾಗ ಎಲ್ಲರೂ ಸೆಲ್ವಾರ್ ಕಮೀಜ್ ಹಾಕ್ಕೊಂಡು ಬರಬೇಕು..’.ಮುಂತಾಗಿ ಕೆಲವು ರೂಲ್ಸ್ ಗಳನ್ನು ಮುಂದಿಟ್ಟು ‘ತಿಂಗಳಲ್ಲೇ ಆನೇಮರಿ ಹೇಗೆ ಚಿಗರೆಮರಿಯಾಗುತ್ತೆ ನೊಡ್ಕೊಂಡಿರಿ’ ಎಂದೆಲ್ಲ ಆಸೆ ಹುಟ್ಟಿಸಿದಾಗ, ಕಮಲೂ ಮುಖವಂತೂ ಕಾದ ಎಣ್ಣೆಗೆ ಹಾಕಿದ ಹಪ್ಪಳದ ಥರ ಬಿರಿದುಹೋಯ್ತು!ಅಲ್ಲಿಂದ ಮೇಲೇಳುವಾಗಲೇ ಅವಳಿಗೆ ಹತ್ತು ಕೆಜಿ ಭಾರವನ್ನು ಕಳೆದುಕೊಂಡಂಥ ಹಗುರ…ಹುಮ್ಮಸ್ಸು!! ಸಂಜೆವರೆಗೂ ಅವಳಿಗೆ ಅದೇ ಗುಂಗು. ತಿಂಗಳು ಕಳೆದ ಮೇಲೆ ತಾನು ಹೇಗೆ ಕಾಣಬಹುದೂಂತ ಕನಸು.

ಸಂಜೆ ಆಫೀಸಿನಿಂದ ಮನೆಗೆ ಬಂದವಳೇ. ಸೋಫಾದ ಮೇಲೆ ಹರವಾಗಿ ಮೈಚೆಲ್ಲಿ-‘ರೀ… ನಡೀರಿ ಈಗಲೇ ಕಾಂಪ್ಲೆಕ್ಸಿಗೆ ಹೋಗಿಬರೋಣ…ಅರ್ಜೆಂಟು!’ಎಂದು ಮನೆಯೊಳಗೆ ಇರಬಹುದಾದ ಗಂಡ ಶ್ರೀಕಂಠೂಗೆ ಏರುಕಂಠದಿಂದ ಆರ್ಡರ್ ಹಾಕಿದಳು. ಅದೇ ತಾನೇ ಕಛೇರಿಯಿಂದ ಬಂದು ಪ್ಯಾಂಟ್ ಬಿಚ್ಚಿ, ಪಟ್ಟಾಪಟ್ಟಿ ಚಡ್ಡಿಯಲ್ಲೇ ಕಾಫಿ ಕಾಯಿಸಲು ಅಡುಗೆಯ ಮನೆಯತ್ತ ಧಾವಿಸುತ್ತಿದ್ದವನು ಗಕ್ಕನೆ ರೈಟ್ ಅಬೌಟ್ ಟರ್ನ್ ಪೊಸಿಷನ್‍ನಲ್ಲಿ ಅವಾಕ್ಕಾಗಿ ನಿಂತ!‘ಬನ್ರೀ ಇಲ್ಲಿ… ನಾಳೆಯಿಂದ ನಾನು ಯೋಗ ಕ್ಲಾಸಿಗೆ ಹೋಗಬೇಕು… ಅದಕ್ಕೆ ಡ್ರೆಸ್ ತರಬೇಕು. ಹೋಗೋಣ ನಡೀರಿ’ಶ್ರೀಮತಿಯ ಹೊಸ ಸಾಹಸದ ನಿರ್ಧಾರ ಕೇಳಿ, ಶ್ರೀಕಂಠು, ದುಸರಾ ಮಾತಿಲ್ಲದೆ ‘ಜೀ ಹುಕುಂ’ ಎಂದು ಪ್ಯಾಂಟುಧಾರಿಯಾದ. ಗಂಡ-ಹೆಂಡತಿಯ ಜೊತೆ ಮಕ್ಕಳೂ ಕಾಂಪ್ಲೆಕ್ಸ್ ಎಲ್ಲಾ ಅಲೆದದ್ದೇ ಅಲೆದದ್ದು. ದುರ್ಬೀನ್ ಹಾಕಿಕೊಂಡು ನೋಡಿದರೂ, ಕಮಲೂ ಸೈಜ್‍ಗಾಗೋ ಸೆಲ್ವಾರ್ ಕಮೀಜ್ ಹೊಲೆಸಿಟ್ಕೊಂಡ ಅಂಗಡೀನೇ ಕಣ್ಣಿಗೆ ಬೀಳಲಿಲ್ಲ.ಅದೃಷ್ಟವಷಾತ್ ಕಡೆಗೂ ಒಂದು ಅಂಗಡಿಯಲ್ಲಿ ಅವಳ ಅಳತೆಯ ಡ್ರೆಸ್ಸೊಂದು ಸಿಕ್ಕೇಬಿಡೋದೇ! ಕಮಲೂ ಆ ಕಿವಿಯಿಂದ ಈ ಕಿವಿಯವರೆಗೂ ಹಿಗ್ಗುತ್ತಾ ಅದನ್ನು ಕೈಯಲ್ಲಿ ಹಿಡಿದು ಟ್ರಯಲ್ ರೂಮಿಗೆ ನುಗ್ಗೇ ಬಿಟ್ಟಳು! ನಿಲುವು ಗನ್ನಡಿಯ ಮುಂದೆ ನಿಂತು ಅದನ್ನು ಧರಿಸಿ, ವ್ಯಾಯಾಮ ಮಾಡುವವಳಂತೆ ಕೈ ಮೇಲೆತ್ತಿ ಬಗ್ಗಿದಳು. ತತ್‍ಕ್ಷಣವೇ ಪಟಪಟನೆಂದಿತು! ಗ್ರಹಚಾರಕ್ಕೆ ಪೈಜಾಮ ಟ್ರಯಲ್‍ನಲ್ಲೇ ಪಂಕ್ಚರ್ ಆಗಿತ್ತು.ಕಮಲೂ ಗಾಬರಿ ಗಾಬರಿಯಿಂದ ಅದನ್ನು ಕಳಚಿ, ನೀಟಾಗಿ ಮಡಚಿ ‘ಈ ಬಣ್ಣ ಬೇಡಪ್ಪ’ ಎಂದು ಅಂಗಡಿಯವನ ಮುಂದೆ ಕುಕ್ಕಿ, ಚಕಾರವೆತ್ತದೆ ಅಲ್ಲಿಂದ ಹೊರಹಾರಿದಳು.ಇನ್ನು ಈ ಮೊಸಳೆ ಬಾಯಿ ಥರ ಹೊಲಿಗೆ ಬಿಟ್ಕೊಳ್ಳೋ ಪೈಜಾಮದ ಸಹವಾಸ ಬೇಡವೆಂದು ನಿರ್ಧರಿಸಿ, ಜೀನ್ಸ್ ಷಾಪಿಗೆ ನುಗ್ಗಿದಳು. ಹತ್ತಾರು ಜಾಗಿಂಗ್ ಸೂಟು ತೆಗೆಸಿ ಹಾಕಿ ಫ್ರೀ… ಎಕ್ಸ್‍ಟ್ರಾ ಲಾರ್ಜ್‍ನ ಸೆಟ್ ಒಂದನ್ನು ಆರಿಸಿ ಐನೂರು ತೆತ್ತು, ಕವರನ್ನು ಶ್ರೀಕಂಠೂ ಹೆಗಲಿನತ್ತ ಚಾಚಿದಳು.

ಶ್ರೀಕಂಠುವಿನ ಬಲಗಣ್ಣಾಗಲೇ ಹಾರತೊಡಗಿತ್ತು!ರಾತ್ರಿಯೆಲ್ಲಾ ಕಮಲೂಗೆ ತಾನು ಬಳ್ಳಿಯಂತೆ ಬಳುಕುತ್ತಾ, ಖುಷಿಯಿಂದ ನರ್ತಿಸಿದಂತೆ ಕನಸೋ ಕನಸು!ಮಾರನೇ ದಿನ-ಮಧ್ಯಾಹ್ನ ಒಂದೂವರೆ… ಎದುರು ಆಫೀಸಿನ ದೊಡ್ಡ ಹಾಲಿನ ತುಂಬಾ ಹೆಂಗಸರು. ಆಗಲೇ ‘ಒನ್ ಟೂ…ಒನ್ ಟೂ’… ಎಂದು ದಬೆ ದಬೆ ಮೇಲಕ್ಕೂ ಕೆಳಕ್ಕೂ ಕುಣೀತಿದ್ದರು. ಕಮಲೂ ಕೂಡ ಉತ್ಸಾಹದಿಂದ ಲೈನು ಸೇರಿ, ಅವರಂತೆ ಕಾಲನ್ನಗಲಿಸಿ ಮೇಲಕ್ಕೂ ಕೆಳಕ್ಕೂ ಎಗರಲಾರಂಭಿಸಿದಳು.‘ಒನ್ ಟೂ…ಒನ್ ಟೂ…’ಅಡ್ಡಡ್ಡ… ಎತ್ತರೆತ್ತರ…. ಅಗಲಗಲ ಹೇಗ್ಹೇಗೋ ಕುಣಿದ ಅಂಗನೆಯರ ದೇಹಗಳಿಂದ ನಖಶಿಖಾಂತ ಬೆವರು!ಕಮಲೂನೂ ಒಂದೇ ದಿನದಲ್ಲಿ ‘ಸ್ಲಿಂ’ ಆಗಬೇಕೂಂತ ತೀರ್ಮಾನಿಸಿ ಕುಣಿದದ್ದೇ ಬಂತು. ಎಡಮಂಡಿಯ ನರ ಉಳುಕಿ-ಲಟಕ್ಕೆಂದು-ಅವಳು ಧುಡುಮ್ಮೆಂದು ‘ಧರಾಶಾಯಿ’ಯಾದಳು!ಸಮುದ್ರದಲ್ಲಿ ಬುಡಮೇಲಾದ ಹಡಗಿನಂತೆ ತೊನೆದಾಡ್ತಿದ್ದ ಕಮಲೂನ ಅವಸ್ಥೆ ಏನೂಂತ ತಿಳೀದೇ, ಆ ಛೋಟಾ ಮಾಸ್ತರಿಣಿ, ‘ಕಮಾನ್,ಗೆಟ್ ಅಪ್…ಡೋಂಟ್‍ವರಿ… ಮೇಲೆದ್ದು ಶುರುಹಚ್ಕೊಳ್ಳಿ.’‘ಒನ್ …ಟೂ…ಒನ್ ಟೂ’ ಎನ್ನುತ್ತ ತಾನೂ ಉಯ್ಯಾಲೆಯಂತೆ ಕಾಲನ್ನು ಮೇಲೆ ಕೆಳಗೆ ಆಡಿಸಿದಳು.ಕಮಲೂ ತನ್ನ ಮೈಯ್ಯಿನ ಬೊಜ್ಜುಗಳನ್ನೆಲ್ಲ ಝಗಝಗನೆ ಅಲ್ಲಾಡಿಸುತ್ತಾ, ಪ್ರಯಾಸದಿಂದ ಮೇಲೆದ್ದು, ಮತ್ತೆ ‘ಒನ್ ಟೂ…ಒನ್ ಟೂ..’.ಗೆ ಶುರು ಹಚ್ಕೊಂಡ್ಳು.ಉಂಡುಂಡೆಯಾಗಿದ್ದ ಕಮಲುವಿನ ಇಡೀ ಮೈ ಒರಳಿನಲ್ಲಿ ಹಾಕಿ ತಿರುವಿದಂತಾಗಿ, ಹೊಟ್ಟೆಯ ಒಳಗಿನ ಅವಯವಗಳೆಲ್ಲಾ ಕಲಸುಮೇಲೋಗರವಾಗಿ ಹೊಟ್ಟೆ ತೊಳೆಸಿಕೊಂಡು ಬಂತು…ಕಮಲು ರೈಲ್ವೇ ಎಂಜಿನ್ನಿನಂತೆ ಭುಗ್ ಭುಗ್ ಎಂದು ಏದುಸಿರು ಉಗುಳುತ್ತಿದ್ದಳು. ಮುಖವೆಲ್ಲಾ ರಕ್ತಮೆತ್ತಿದ ಹಾಗೆ… ಹಣೆಯಿಂದ ಗಂಗಾ-ಭಾಗೀರಥಿಧಾರೆ! ಉಸಿರು ಭುಸು ಭುಸು…ಕಮಲೂ ಅಂತೂ ಹೊರಬೀಳುವಷ್ಟರಲ್ಲಿ ಹೈರಾಣಾಗಿದ್ದಳು! ಸೀಟಿನಲ್ಲಿ ಧೊಪ್ಪನೆ ಬಿದ್ದುಕೊಂಡಳು. ನೂರು ಕೆಜಿ ಮೆಣಸಿನಪುಡಿಯನ್ನು ಕುಟ್ಟಿದಷ್ಟು ರೆಟ್ಟೆ ನೋಯ್ತಿತ್ತು. ಕಾಲುಗಳೋ ಪಾರ್ಶ್ವವಾಯು ಬಡಿದುಕೊಂಡವಂತೆ ಸೀಟಿನಿಂದ ಜೋತಾಡ್ತಿದ್ವು!ಮನೆಯ ಮುಂದೆ ಆಟೋ ಜೋರಾಗಿ ಹಾರನ್ ಮಾಡಿದಾಗ, ಶ್ರೀಕಂಠೂ ಉಟ್ಟ ಲುಂಗೀಲೇ ಹೊರಗೋಡಿ ಬಂದ.“ಏನಾಯ್ತೇ ಕಮಲಾಕ್ಷಿ?!’‘ಕಾಲು ಉಳುಕಿದೆ, ಇಳಿಸ್ಕೊಳ್ರಿ’ ಎಂದು ಆಟೋದೊಳಗಿಂದಲೇ ಕಮಲೂ ಆರ್ಡರ್ ಹಾಕಿದಾಗ, ಶ್ರೀಕಂಠುವಿನ ಮೋರೆ ಸೌತೇಕಾಯಿ! ಮಗನ ಸಹಾಯದಿಂದಲೇ ಮಡದಿಯನ್ನು ಅನ್‍ಲೋಡ್ ಮಾಡಿಕೊಂಡು, ಆಟೋಗೆ ನಲವತ್ತು ರೂ ಎಂಭತ್ತು ಪೈಸೆ ತೆತ್ತು, ಕುಂಟುತ್ತಿದ್ದ ಹೆಂಡತಿಯ ರೆಟ್ಟೆ ಹಿಡಿದುಕೊಂಡು, ಮುಗ್ಗರಿಸಿ ಸಾವರಿಸಿಕೊಂಡು ಅವಳನ್ನು ಒಳಗೆ ಸಾಗಿಸೊ ಅಷ್ಟರಲ್ಲಿ ಅವನು ಮೇಲುಸಿರು ಕೆಳಗುಸಿರು ಮಾಡಿದ್ದ.

ಕಮಲು ರೂಮೊಳಗೆ ಕಾಲಿಟ್ಟವಳೆ ಧಡಕ್ಕನೆ ಹಾಸಿಗೆಯ ಮೇಲೆ ಉರುಳಿ ‘ಅಯ್ಯೋ ಪ್ರಾಣ ಹೋಗ್ತಿದೆ… ಮೈಕೈ ನೋವು… ಕಾಲು ಲಕ್ವಹೊಡೆದ ಹಾಗೆ ತಿರುಚಿಕೊಂಡಿದೆ… ನಡೀರಿ ಡಾಕ್ಟ್ರ ಹತ್ತಿರ ಹೋಗೋಣ’ ಎಂದು ತನ್ನ ಗಂಡನಿಗೆ ದುಂಬಾಲು ಬಿದ್ದಳು ಕಮಲು.‘ಬೇಡಮ್ಮ ಮಹತಾಯಿ, ಆಟೋ ಛಾರ್ಜುಲೋಡಿಂಗ್ ಆನ್ ಲೋಡಿಂಗ್ ಸಮಸ್ಯೆ ಬದಲು, ಡಾಕ್ಟರರನ್ನು ಇಲ್ಲಿಗೇ ಕರೆಸ್ತೀನಿ’ ಎನ್ನುತ್ತಾ ಶ್ರೀಕಂಠು ಅವಳ ಉತ್ತರಕ್ಕೂ ಕಾಯದೆಯೇ ಮಗನನ್ನು ಡಾಕ್ಟರ್ ಷಾಪಿಗೆ ಓಡಿಸಿದ.ಡಾಕ್ಟರು ಬಂದೋರೇ ‘ಅಲ್ಲಮ್ಮ… ಅಂಥಾ ಚೆನ್ನಾಗಿದ್ದ ನಿಮಗೆ ಈ ದುರ್ಬುದ್ಧಿಯು ಯಾಕೆ ಬಂತಮ್ಮ?…ಅನ್ಯಾಯವಾಗಿ ಕಾಲು ಊನಮಾಡಿಕೊಂಡ್ರಲ್ಲ, ನಿಮಗ್ಯಾಕೆ ಬೇಕಿತ್ತು ಆ ಕಸರತ್ತು?!!’ –ಅಂತ ಅಳಿಗೊಂದು ಕಲ್ಲು ಅನ್ನುವ ಹಾಗೆ ಬಾಂಬ್ ಸಿಡಿಸಿಬಿಡೋದೇ?!‘ಧಿಡೀರ್ ಅಂತ, ಸಣ್ಣ ಆಗಿ ಬನ್ನೀಮ್ಮ ಅಂತ, ಯಾವ ಘನಂದಾರೀ ಚಿತ್ರ ನಿರ್ದೇಶಕ ಇವಳ ಕಾಲ್‍ಶೀಟನ್ನು ಕೇಳಿದ್ದ ಅಂತ ಸ್ವಲ್ಪಕೇಳಿ ಡಾಕ್ಟ್ರೇ?’– ಎಂದುಬಿಡೋದೇ ಶ್ರೀಕಂಠನೂ!ಅವರ ಮಾತು ಕೇಳಿ ಕಮಲೂ ಕಣ್ಣು ಕೆಂಪು ಕಮಲದ ಥರ ಬಿರಿದುಹೋಯ್ತು! ಅವಳ ಕಣ್ಣಿಗೇನಾದರೂ ಪವರ್ ಇದ್ದಿದ್ರೆ- ಶ್ರೀಕಂಠೂ ನಿಂತಲ್ಲೇ ವಿಭೂತಿಯಾಗಿ ಹೋಗ್ತಿದ್ದ! ಹೆದರಿ ರೊಟ್ಟಿ ಥರ ಅಪ್ಪಚ್ಚಿಯಾಗಿ ಹೋದ ಅವನು, ಒಳಗೇ ವಿಲವಿಲಿಸ್ತಾ ಡಾಕ್ಟರ್ ಫೀಸ್ ಇನ್ನೂರು ರೂ ಇಟ್ಟು, ಮೇಲೆ ಅವರು ಬರೆದುಕೊಟ್ಟ ಔಷಧಿಯನ್ನು ತರಲು ಮತ್ತೆರಡು ನೂರು ರೂ.ಗೆ ವಿದಾಯ ಹೇಳಿ ಬಿಸಿತುಪ್ಪವನ್ನು ಬಾಯಲ್ಲಿ ಇಟ್ಕೊಂಡವನ ಹಾಗೆ ಮುಖವನ್ನು ಬಫೂನ್ ಥರ ಮಾಡಿದ.‘ಅಪ್ಪಾ ಹಸಿವು’ –ಕಡೇಮಗ ಆಗಲೇ ಪಿಟೀಲು ಕೊರೆಯತೊಡಗಿದಾಗ ಶ್ರೀಕಂಠೂ ಜೇಬಿಗೆ ಕೈ ಹಾಕಿ ‘ತೊಗೋಳಪ್ಪಾ…… ನಮ್ಮ ಋಣವೂ ಹೊಟೇಲಿನವನಿಗೂ ಇದೇ ಅಂತ ಕಾಣತ್ತೆ…ಎಲ್ಲರಿಗೂ ಊಟ ಕಟ್ಟಿಸಿಕೊಂಡು ಬಾ ಹೋಗು’ ಎಂದು ಹಿರಿಮಗನ ಕೈಗೆ ನೋಟು ತುರುಕಿದ ಗತ್ಯಂತರವಿಲ್ಲದೆ.ಅಂದುರಾತ್ರಿ ಮನೆಯವರಿಗೆಲ್ಲರಿಗೂ ಹೊಟೇಲಿನ ಊಟವೇ ಗತಿಯಾಯಿತು.

ಮುಂದಿನ ಮೂರುದಿನವೂ ಮಂಚ ಬಿಟ್ಟೇ ಇಳಿಯಲಿಲ್ಲ ಮಹರಾಯ್ತೀ ಕಮಲಾಕ್ಷಿ!!… ಹಿರೀಮಗ, ಮನೆಯಿಂದ ಹೊಟೇಲಿಗೆ, ಹೊಟೇಲಿನಿಂದ ಮನೆಗೆ ತಾರಾಡಿದ.ಜೇಬು ತಡಕುತ್ತಾ ಶ್ರೀಕಂಠು, ಸನ್ನಿ ಹತ್ತಿದವನಂತೆ ತನ್ನೊಳಗೆ ಒಬ್ಬೊಬ್ಬನೇ ಮುಲುಕಾಡಹತ್ತಿದ್ದ.‘ರೀ… ಹೀಗೇ ಪರಮನೆಂಟಾದರೆ ಗತಿ ಏನ್ರೀ?…ಆಫೀಸಿಗೆ ರಜೆಯನ್ನು ಹಾಕಿ ಒಂದು ವಾರವಾಯಿತು… ರಜಾ ಎಲ್ಲಾ ವೇಸ್ಟೂ’ – ಎಂದು ಕಮಲು ಅಲವತ್ತುಕೊಂಡರೆ, ಶ್ರೀಕಂಠೂ ಒಳದನೀಲೇ ‘ನಿನ್ನದು ಬರೀ ರಜವಾದರೆ, ನನ್ನದು ರಜದ ಜೊತೆ, ಎನರ್ಜಿ, ಹಣ ಎಲ್ಲಾ ಕಿತ್ಕೊಂಡು ಹೋಗ್ತಿದ್ಯಲ್ಲೇ’- ಎಂದು ವಿಲಪಿಸಿದ!ಆದರೆ ಕಮಲೂ ಅಷ್ಟಕ್ಕೇ ಬಿಟ್ಟಳೇ?… ಹಿಂದೆಂದೋ ಕಾಲು-ಮಂಡಿ, ಸೊಂಟ ಇನ್ನೂ ಯಾವು ಯಾವುದೋ ನೋವುಗಳ ಶಮನ ಮಾಡೋ ಅಕ್ಯುಪ್ರೆಷರ್ ಇನ್ಸ್‍ಟ್ರುಮೆಂಟ್‍ನ ಡೆಮಾನ್‍ಸ್ಟ್ರೇಷನ್ ನೋಡಿದ್ದ ಕಮಲು ನಿಂತ ನಿಲುವಿನಲ್ಲೇ -’ ಆ ಇನ್‍ಸ್ಟ್ರುಮೆಂಟ್ ತಂದು ಕೊಡ್ರಿ, ಇಲ್ಲದೆ ಇದ್ರೆ ನಾನು ಸತ್ತೆ’ ಅಂತ ಬೊಬ್ಬರಿಸಿದಳು!ಶ್ರೀಕಂಠು ಎದ್ದೆನೋ ಬಿದ್ದೆನೋ ಎಂದು ಪ್ಯಾಂಟೇರಿಸಿಕೊಂಡು ಹೋಗಿ, ಅಂದೇ ತನ್ನ ಹೆಂಡತಿಯ ಪ್ರೀತ್ಯರ್ಥವಾಗಿ ಎರಡು ಸಾವಿರದ ಎಂಟು ನೂರು ತೆತ್ತು ಆ ಉಪಕರಣ ಕೊಂಡುತಂದ!ತತ್‍ಕ್ಷಣ ಕಮಲು ಕಾಲುನೋವು ವಾಸಿಯಾದ ಹಾಗೆಯೇ ಮುಖಾನ ಗರಿಗರಿ ಮಾಡಿಕೊಂಡು, ಉತ್ಸಾಹದಿಂದ ಅದರೊಳಗೆ ಬಿಸಿನೀರು ತುಂಬಿ ಅದರಲ್ಲಿ ಕಾಲು ಇಟ್ಕೊಂಡು ಅದನ್ನು ಆನ್ ಮಾಡಿದಳು.ಸಕ್ಸೆಸ್!… ಗ್ರ್ಯಾಂಡ್ ಸಕ್ಸೆಸ್!!!!ಅಂತೂ ವೈದ್ಯರ ಮೆಡಿಸನ್ ಪ್ರಭಾವದಿಂದಲೋ, ಆಕ್ಯೂಪ್ರೆಷರ್ ಇನ್‍ಸ್ಟ್ರುಮೆಂಟ್‍ನಿಂದಲೋ ಅಥವಾ ಬೆಡ್‍ರೆಸ್ಟಿನಿಂದಲೋ ಕಮಲು ಹತ್ತು ದಿನಗಳನಂತರ ಎರಡೂ ಕಾಲೂರಿ ನಡೆಯತೊಡಗಿದಳು.

‘ಯುರೇಕಾ’‘ಲೇ ಮಾರಾಯ್ತೀ… ಹುಷಾರೇ…ಕುಣಿದಾಡಬೇಡ… ಮತ್ತೆ ಮೂರು ಸಾವಿರಕ್ಕೆ ಕುತ್ತು ತಂದೀಯಾ ಎಂದು ಮೂಲೆಯಲ್ಲಿ ಪೇಪರ್ರು ಪೆನ್ನು ಹಿಡಿದು ಹೆಂಡತಿಯ ‘ಯೋಗವೈಭವ’ದ ಖರ್ಚುವೆಚ್ಚಗಳ ಲೆಕ್ಕವನ್ನು ಮಾಡ್ತಾ ಕೂತಿದ್ದ ಶ್ರೀಕಂಠು ಗಾಬರಿಯಿಂದ ಬಡಬಡಿಸಿದ.ಅಷ್ಟರಲ್ಲೇ ಅವನ ‘ಚಡ್ಡಿ ದೋಸ್ತ್’ ಗೋಪಿ ಒಳ ಬಂದವನೆ –‘ಶ್ರೀಕಂಠೂ, ಅಯಾಮ್ ವೆರಿಸಾರಿ ಕಣಮ್ಮ…ಅತ್ತಿಗೆಯವರ ಅನಾರೋಗ್ಯದ ಸುದ್ದಿ ಕೇಳಿದೆ, ನೀನೇನೇ ಹೇಳು- ಆ ಹಾಳಾದ ಯೋಗಾ ಮಾಸ್ತರಿಣಿಯನ್ನು ಮಾತ್ರ ಸುಮ್ಮನೆ ಬಿಡಬಾರದು ಕಣಯ್ಯ… ಅವಳಿಂದ ಎಷ್ಟೆಲ್ಲ ಕಷ್ಟ ನಷ್ಟ! ಅವಳಿಗೆ ಚುರುಕು ಮುಟ್ಟಿಸಲೇಬೇಕು… ಕ್ರಮವಾಗಿ ಪಾಠವನ್ನು ಆರಂಭಿಸಲಿಲ್ಲ ಅಂತ ಅವಳ ಮೇಲೆ ಯಾಕೊಂದು ಕೇಸು ಹಾಕಬಾರದು?’ಗೆಳೆಯನ ಮಾತು ಮುಗಿಯೋದ್ರೊಳಗೆ ಶ್ರೀಕಂಠು ಹಾರಿಬಂದು , ಅವನ ಬಾಯಿಯ ಮೇಲೆ ಭದ್ರವಾಗಿ ಕೈಯೂರಿ, ‘ಅಯ್ಯೊ ಮಾರಾಯ…ಸ್ವಲ್ಪ ಮೆತ್ತಗೆ ಮಾತಾಡಯ್ಯ… ಸದ್ಯ ಇದೊಂದು ಬಾಕಿ ಇತ್ತು ನೋಡು… ಈಗಾಗಿರೋ ನಷ್ಟ ಸಾಲದೂಂತ… ಅವಳ ಕಿವಿಗೇನಾದರೂ ಈ ಪಾಯಿಂಟ್ ಬಿತ್ತೂಂದ್ರೆ, ನನ್ನ ಗತಿ ಗೋವಿಂದ’ ಎಂದು ನುಡಿದು, ಭಯವಿಹ್ವಲನಾಗಿ ಶ್ರೀಕಂಠೂ, ತನ್ನ ಖಾಲಿ ಜೋಬನ್ನು ತಡಕುತ್ತಾ ದೈನ್ಯನಾಗಿ ಗೋಪಿಯ ಕಾಲಿಗೆ ಸಾಷ್ಟಾಂಗವೆರಗಿದ!

***

Related posts

ಕಿರುಗುಟ್ಟುವ ದನಿಗಳು

YK Sandhya Sharma

ಕನಸೆಂಬ ಹೆಗಲು…

YK Sandhya Sharma

ಮಹಿಳಾ ವಿಮೋಚನೆ

YK Sandhya Sharma

2 comments

Sudha Gopinath November 23, 2020 at 10:20 pm

Very nice Story???

Reply
YK Sandhya Sharma November 24, 2020 at 8:54 am

ಅನೇಕ ಧನ್ಯವಾದಗಳು ಸುಧಾ ಅವರೇ. ನಿಮ್ಮ ಓದಿನ ಪ್ರೀತಿ ಹೀಗೆಯೇ ಇರಲಿ. ವಂದನೆಗಳು.

Reply

Leave a Comment

This site uses Akismet to reduce spam. Learn how your comment data is processed.