Image default
Short Stories

ಶಕುನ

ಕೈಲಿದ್ದ ಸೀರೆ ಪ್ಯಾಕೇಟೂ ಬೀಳುವುದನ್ನು ಲೆಕ್ಕಿಸದೆ ಗೌರಮ್ಮ ಗಂಡನತ್ತ ಓಡಿದರು.

“ಏನೂಂದ್ರೆ ನಿಮ್ಮ ಹಿಂದೆ ಹಸೂ ” ಎನ್ನುವುದರಲ್ಲಿ ರಾಮಯ್ಯನಾಗಲೇ ಕೆಳಗೆ ಬಿದ್ದಾಗಿತ್ತು.

“ಅಯ್ಯೋ ಶಿವನೇ! ಏ… ವಿಶ್ವ… ಶಂಕ್ರೂ,  ಲಕ್ಷ್ಮೀ,…” ಎಂದು ಗಾಬರಿಯಿಂದ ಆಕೆ ಮಕ್ಕಳನ್ನು ಕೂಗಿ, ಕೆಳಗೆ ಚಪ್ಪಡಿ ಕಲ್ಲಿನ ಮೇಲೆ ಧಸಕ್ಕನೆ ಕುಸಿದು ಬಿದ್ದಿದ್ದ ಗಂಡನ ಧಡೂತಿ ಶರೀರವನ್ನು ಎತ್ತಲಾರದೆ ಅಸಹಾಯಕತೆಯಿಂದ ನೋಡುತ್ತ ಭಯವಿಹ್ವಲರಾಗಿ ನಿಂತಿದ್ದರು.

ಎಲ್ಲವೂ ಕಣ್ಮುಚ್ಚಿ ತೆರೆಯುವಷ್ಟರಲ್ಲಾಗಿತ್ತು. ಮುಂದಿನವಾರ ಇಟ್ಟುಕೊಂಡಿದ್ದ ವಿಶ್ವನ ಮದುವೆ ನಿಶ್ಚಿತಾರ್ಥಕ್ಕೆಂದು ಸಂಭ್ರಮವಾಗಿ ಭಾವೀಸೊಸೆಗೆ ಸೀರೆಗಳನ್ನು ಖರೀದಿಸಿ ಅಂಗಡಿಯಿಂದ ಹೊರಬರುವಷ್ಟರಲ್ಲಿ ಈ ಘಟನೆ ಜರುಗಿ ಹೋಗಿತ್ತು!

ರಾಮಯ್ಯನವರಿಗೆ ಬಿದ್ದ ಪೆಟ್ಟಿಗಿಂತ ಗಾಬರಿಯೇ ಹೆಚ್ಚಾಗಿ, “ಲೇ ಗೌರೂ…” ಎಂದು ಬಡಬಡಿಸಿ, ಮೇಲೆದ್ದು ಕೂರಲು ಪ್ರಯತ್ನಿಸಿ ನಡುಗಿದರು.

ಕ್ಷಣಾರ್ಧದಲ್ಲಿ ಮಕ್ಕಳೆಲ್ಲ ಅವರನ್ನು ಸುತ್ತುವರಿದಿದ್ದರು.

“ಅಪ್ಪಾ…ಅಪ್ಪಾ…ಏನಾಯ್ತಪ್ಪಾ? ಗಾಬರಿಯಾಗಬೇಡಿ… ಮೆಲ್ಲಗೆ” ಎನ್ನುತ್ತ ಅವರೆಲ್ಲ ಸೇರಿ ತಂದೆಯನ್ನೆತ್ತಿ, ಮೆಲ್ಲಗೆ ಎದ್ದು ಕೂಡಿಸಿ, ತಲೆಗೆ ಮೆತ್ತಿಕೊಂಡಿದ್ದ ರಸ್ತೆಯ ಧೂಳನ್ನು ಕೊಡವಿ, ಬ್ಯಾಗಿನಲ್ಲಿದ್ದ ಬಾಟಲನ್ನು ತೆಗೆದು ಸ್ವಲ್ಪ ನೀರನ್ನು ಅವರ ಮುಖಕ್ಕೆ ಸಿಂಪಡಿಸಿ, ತಲೆಗೆ ತಟ್ಟಿ- “ಏನಾಗಿಲ್ಲ ಅಂಥದ್ದು” ಎಂದು ಧೈರ್ಯ ಹೇಳಿದರು.

ಗೌರಮ್ಮನ ಮುಖವಂತೂ ಗಾಬರಿಯ ಹೊಂಡವಾಗಿತ್ತು. ಗಂಡುಮಕ್ಕಳು ತಂದೆಯ ಕಂಕುಳಿಗೆ ಕೈ ಹಾಕಿ ಮೆಲ್ಲಗೆ ಎದ್ದು ನಿಲ್ಲಿಸಿ, ಪಕ್ಕದಲ್ಲಿ ನಿಂತಿದ್ದ ಆಟೋದೊಳಗೆ ಕೂರಿಸಿದರು.

ಮನೆ ತಲುಪಿದ ಅವರ ಮುಖಗಳೆಲ್ಲ ನಡೆದ ಅಹಿತಕರ ಘಟನೆಯಿಂದ ಪೆಚ್ಚಾಗಿದ್ದವು. ಹೊರಡುವಾಗಿದ್ದ ಉತ್ಸಾಹದ ಎಳೆಗಳು ಈಗ ಮಂಗಮಾಯವಾಗಿದ್ದವು! 

ಮನೆಗೆ ಬಂದೊಡನೆ ಗೌರಮ್ಮ ಬೇಗ ಕೈ, ಕಾಲು ತೊಳೆದುಕೊಂಡು ದೇವರಿಗೆ ದೀಪ ಹಚ್ಚಿಟ್ಟು, ಮೂರು ನಮಸ್ಕಾರ ಹಾಕಿ- “ದೇವರೇ, ಇವರಿಗೇನೂ ಅಪಾಯವಾಗದಂತೆ ಕಾಪಾಡಪ್ಪ” ಅಂತ ಬೇಡಿಕೊಂಡರು.

ನಡುಮನೆಯ ಸೋಫಾದ ಮೇಲೆ ನರುಳುತ್ತ ಕುಳಿತಿದ್ದರು ರಾಮಯ್ಯ. ಮಗಳೂ ಗಾಬರಿಗೊಂಡು, ತಂದೆಗೆ-ಕುಡಿಯಲು ನೀರು ತಂದುಕೊಟ್ಟು ಪಕ್ಕದಲ್ಲಿ ಕುಳಿತು ಸಾಂತ್ವನ ಹೇಳುತ್ತಿದ್ದಳು. ಶಂಕರೂ ಡಾಕ್ಟರಿಗೆ ಫೋನ್ ಮಾಡಿ ಕೂಡಲೇ ಬರಲು ತಿಳಿಸಿದ್ದ.

“ಅಲ್ಲಾ ಅಪ್ಪ, ಅಂಗಡಿಯಿಂದ ಹೊರಬಂದೋರು ಅಷ್ಟು ಸಣ್ಣರಸ್ತೆ ಮಧ್ಯೇನ ನಿಂತ್ಕೋಳೋದೂ? ಸ್ವಲ್ಪ ಹಿಂದೆ ಮುಂದೆ ನೋಡಬಾರದಿತ್ತಾ?”

-ವಿಶ್ವನ ಆಕ್ಷೇಪಣೆಯ ದನಿಗೆ, ಲಕ್ಷ್ಮೀ-‘ಹೌದು ಅಪ್ಪನದೇ ತಪ್ಪು… ಹಸು ಆ ಕಡೆಯಿಂದ ಅಷ್ಟು ನಿಧಾನವಾಗಿ ಬರ್ತಿದೆ, ಸ್ವಲ್ಪ ಪಕ್ಕಕ್ಕೆ ಜರುಗಬಾರ್ದಿತ್ತಾ?…ಅಲಕ್ಷ್ಯದಿಂದ ಹಾಗೇ ನಿಂತ್ಕೊಂಡು ಅಂಗಡಿ ಬೋರ್ಡುಗಳನ್ನೆಲ್ಲ ನೋಡ್ತಾ ನಿಂತ್ರೆ, ಅದು ಜಾಗಕ್ಕಾಗಿ ಮೂತಿಯಿಂದ ಇವರ ಬೆನ್ನನ್ನು ಸ್ವಲ್ಪ ನೂಕಿತು…ಅತಂತ್ರವಾಗಿ ಏನೋ ಯೋಚಿಸುತ್ತಾ ನಿಂತಿದ್ದೋರು ಬೀಳದೇ ಇರ್ತಾರಾ?” ಎಂದು ದನಿಗೂಡಿಸಿದಳು.

ಶಂಕ್ರೂ ತಂದೆಯ ಮುಖದ ನೋವಿನ ಗೆರೆಗಳನ್ನು ಗಮನಿಸುತ್ತಾ, “ಸುಮ್ನಿರೆ ಸಾಕು, ತಪ್ಪು ನೆಪ್ಪುಗಳನ್ನು ಅಳೆಯೋದಕ್ಕೆ ಹೋದ್ಳು… ಹಾಗೆ ದನಗಳನ್ನು ಪೋಲಿಯಾಗಿ ಅಲೆಯೋದಕ್ಕೆ ಬಿಟ್ಟೋರನ್ನು ಹಿಡಿದು ಫೈನ್ ಹಾಕ್ಬೇಕು, ಶಿಕ್ಷೆ ಮಾಡ್ಬೇಕು… ರ್ಯಾಸ್ಕಲ್ಸ್…” ಎಂದು ಗದರಿದಾಗ, ಎಲ್ಲರೂ ಬಾಯಿಗೆ ಬೀಗ ಹಾಕಿಕೊಂಡು ಗಪ್‍ಚಿಪ್ಪಾಗಿ ಕುಳಿತರು.

ಡಾಕ್ಟರು ಬರುವವರೆಗೂ ರಾಮಯ್ಯ ಸಣ್ಣಗೆ ನೋವಿನ ದನಿಯನ್ನು ಹೊರಡಿಸುತ್ತಲೇ ಇದ್ದರು.

ಡಾಕ್ಟರು ಅವರನ್ನು ಪರೀಕ್ಷಿಸಿ ಇಂಜೆಕ್ಷನ್‍ವೊಂದನ್ನು ಕೊಟ್ಟು, “ನಾಳೆ ಯಾವುದಕ್ಕೂ ಆಸ್ಪತ್ರೆಗೆ ತೋರಿಸುವುದು ಒಳ್ಳೇದು’’ ಎಂದರು.

ಮರುದಿನ ರಾಮಯ್ಯನವರನ್ನು ನರ್ಸಿಂಗ್ ಹೋಂಗೆ ಚೆಕ್‍ಅಪ್‍ಗೆಂದು, ಕರೆದೊಯ್ದವರು ಅಲ್ಲಿಯೇ ಆಡ್ಮಿಟ್ ಮಾಡಿದರು. ಸೊಂಟದ ಮೂಳೆ ಜರುಗಿದೆಯೆಂದು, ಅದು ಕೂಡಲು ಅನುವಾಗುವಂತೆ ಕಾಲಿನ ಮೊಣಕಾಲಿನ ಕೆಳಗಿನ ಮೂಳೆ ಮುಖಾಂತರ ಕೊರೆದು ಒಂದು ಸ್ಟೀಲ್ ಕಂಬಿಯನ್ನು ಜೋಡಿಸಿ, ಕಾಲನ್ನು ಜರುಗಿದೆಯೆಂದು, ಅದು ಕೂಡಲು ಅನುವಾಗವಂತೆ ಒಂದು ಸ್ಟೀಲ್ ಕಂಬನಿಯನ್ನು ಜೋಡಿಸಿ ಕಾಲನ್ನು  ಎತ್ತಿ ಕಟ್ಟಿ ಭಾರದ ಮರಳಿನ ಚೀಲವನ್ನು ತೂಗಿಬಿಡಲಾಗಿತ್ತು.

ಒಂದು ದಿನ ಪೂರ್ತಿ ರಾಮಯ್ಯ ಬೊಬ್ಬೆ ಹಾಕುತ್ತಲೇ ಇದ್ದರು. ಮಾರನೆಯ ದಿನದ ಹೊತ್ತಿಗೆ ಭಾರ- ನೋವು ಅಭ್ಯಾಸವಾಗಿ, ದನಿಯೂ ಅಡಗಿ ಸಪ್ಪಗೆ ಬಿದ್ದುಕೊಂಡಿದ್ದರು, ಹಿಂದಿನ ದಿನದವರೆಗೂ ಚಟುವಟಿಕೆಯಿಂದ ಓಡಾಡುತ್ತಿದ್ದ ಯಜಮಾನರು ಇಂದು ಹಾಸಿಗೆ ಕಚ್ಚಿ ನಿಶ್ಚೇಷ್ಟಿತರಾಗಿ ಮಲಗಿದ್ದ ದೃಶ್ಯ ಕಂಡು ಗೌರಮ್ಮನವರ ಕರುಳಲ್ಲಿ ಕುಡುಗೋಲು ಆಡಿಸಿದಂತಾಗಿ ಕಣ್ತುಂಬಿ ಬಂದಿತ್ತು.

ಇನ್ನೂ ತಿಂಗಳು-ತಿಂಗಳೂವರೆ ಹೀಗೇ ಮಲಗಿದಲ್ಲೇ ಮಲಗಿರುವುದೆಂದರೇನು? ಒಂದು ಗಳಿಗೆ ಕೂಡದ ಈ ಜೀವ ಈ ಶಿಕ್ಷೆಯನ್ನು ಸಹಿಸುವುದೇ ಎಂದು ಒಳಗೇ ವೇದನೆಪಟ್ಟರಾಕೆ.

ಕಛೇರಿಯ ಕೆಲಸದೊಡನೆ ನೂರೆಂಟು ಚಟುವಟಿಕೆಗಳನ್ನು ಹಚ್ಚಿಕೊಂಡಿದ್ದ ರಾಮಯ್ಯನ ಜೀವವೂ ಒಂದೇ ಸಮನೆ ಚಡಪಡಿಸುತ್ತಿತ್ತು.

ಒಂದೇ ಎರಡೇ ಯೋಜನೆಗಳು…?

          “ನಾಳೇನೇ ಡಿಸ್‍ಪೋಸ್  ಆಗಬೇಕಾದ  ಮುಖ್ಯವಾದ ನಾಲ್ಕೈದು ಫೈಲುಗಳಿತ್ತು…..ಎರಡು ಮುಖ್ಯವಾದ ಅಪಾಯಿಂಟ್‍ಮೆಂಟ್‍ಗಳೂ ಇತ್ತು… ಏನ್ಮಾಡೋದು?’’ ಎಂದು ಯೋಚನೆಯಿಂದ ಹಣ್ಣಾದ ತಲೆಯನ್ನು ಕೊಡವಿ ನಿಟ್ಟುಸಿರಿಕ್ಕಿ, ಮಗನತ್ತ ತಿರುಗಿ-“ಏನ್ಮಾಡೋದೋ ವಿಶ್ವಾ?… ನನ್ನ ನೋಡಕ್ಕೆ ಅದೆಷ್ಟು ಜನ ಬರ್ತಾರೆ… ಎಷ್ಟೊಂದು ಮುಖ್ಯವಾದ ಕೆಲಸಗಳಿದ್ವು… ಏನ್ಕತೆ … ತತ್‍ಕ್ಷಣ ನನ್ನ ಪಿ.ಎ.ಗೆ ಬರಹೇಳಪ್ಪಾ” ಎಂದು ಮಗನಿಗೆ ಸೂಚನೆಯಿತ್ತ ರಾಮಯ್ಯ, ತಮ್ಮ ದುರಾದೃಷ್ಟಕ್ಕೆ ಹಲುಬಿದರು.

“ಅಯ್ಯೋ ದೇವ್ರೇ… ಇನ್ನೂ 40-50 ದಿನಗಳು ಹೀಗೇ… ಇಲ್ಲೇ… ಓಹ್ ಇಂಪಾಸಿಬಲ್”-ಎಂದು ಉದ್ಗರಿಸಿ, ತಮ್ಮ ನೋವನ್ನು ಹಂಚಿಕೊಳ್ಳಲೆತ್ನಿಸುತ್ತ ಬಗುಲಲ್ಲಿ ದೈನಳಾಗಿ ನಿಂತಿದ್ದ ಹೆಂಡತಿಯತ್ತ ವಿಷಾದದ ನೋಟವನ್ನು ತುಳುಕಿಸಿದರು.

ಚಿಕಿತ್ಸೆ ಆರಂಭವಾಗಿದ್ದು ಮನೆಗೂ-ನರ್ಸಿಂಗ್‍ಹೋಂಗೂ ಓಡಾಡಿ ಸುಸ್ತಾಗಿದ್ದ ಮಕ್ಕಳೆಲ್ಲ, ಅಪ್ಪನೆದುರು ಬೇಸರ ವ್ಯಕ್ತಪಡಿಸಲಾರದೆ ಮಂಕಾಗಿ ತಲೆ ಬಾಗಿಸಿ ಕುಳಿತಿದ್ದರು. ಎಲ್ಲರ ಮನಸ್ಸಿನಲ್ಲೂ “ಏಕೆ ಹೀಗಾಯಿತು?” ಎಂಬುದೇ ಯಕ್ಷಪ್ರಶ್ನೆಯಾಗಿತ್ತು!

“ನಾವು ಅವತ್ತು ಸೀರೆ ತೊಗೊಳಕ್ಕೆ ಪೇಟೆಗೆ ಹೋಗಿದ್ದೇ ಇದಕ್ಕೆ ಕಾರಣ… ಛೇ…ನಾವಂದು ಹೋಗಬಾರದಿತ್ತು ಎಲ್ಲ ನಮ್ಮ ಗ್ರಹಚಾರ” ಎಂದು ಗೊಣಗಿದ ಗೌರಮ್ಮ ಎಲ್ಲರ ಮೆದುಳುಗಳನ್ನು ಕೆದಕಿದ್ದರು.

“ಅದ್ಯಾವ ದರಿದ್ರ ಗಳಿಗೇಲಿ ಸೀರೆ ತರಕ್ಕೇಂತ ಮನೆ ಬಿಟ್ವೋ… ಛೇ…ಟೈಮೇ ಸರಿ ಇರ್ಲಿಲ್ಲ”-ಮಲಗಿದ್ದಲ್ಲಿಂದಲೇ ರಾಮಯ್ಯ ಆಲಾಪ ಹಾಡಿದರು.

ಸೀರೆ ಖರೀದಿಸಬೇಕಾದ ಪ್ರಮೇಯವನ್ನು ಕುರಿತು ಆಲೋಚಿಸುತ್ತ ಮಗಳು-“ಎಲ್ಲಾ ಆ ಹಾಳು ಸೀರೆ ವ್ಯಾಪಾರದಿಂದಲೇ ಆಗಿದ್ದು… ಇಲ್ಲದಿದ್ರೆ ನಾವ್ಯಾಕೆ ಮನೆ ಬಿಡ್ತಿದ್ವಿ?’’ ಎಂದು ಆ ದಿಕ್ಕಿನ ಆಲೋಚನೆಗೆ ಒಗ್ಗರಣೆ ಹಾಕಿದಾಗ, ಅದರ ಘಾಟು ಧಗ್ಗೆಂದು ಮೇಲೆದ್ದಿತು.

“ಹೌದ್ಹೌದು… ನಿಶ್ಚಿತಾರ್ಥದ ಮುಹೂರ್ತ ಸರಿಯಾಗಿರಲಿಲ್ಲಾಂತ ಕಾಣುತ್ತೆ,  ನಾವು ಆ ಸೋಮಣ್ಣನ ಮಾತು ನಂಬ್ಕೊಂಡು ಅವರ ಮನೆಗೆ ಹೋಗಿದ್ದೇ ಯಾಕೋ ಆಗಿಬರಲಿಲ್ಲ… ಷ್… ವೃಥಾ ಎಷ್ಟು ನೋವು –ಖರ್ಚು… ತೊಂದರೆ… ಎಂಥಾ ಅವಘಡ ಸಂಭವಿಸಿತು”- ಗೌರಮ್ಮ ಪಶ್ಚಾತ್ತಾಪದಿಂದ ಹಪಹಪಿಸಿದರು.

ಅವರೆಲ್ಲರ ಮಾತುಗಳನ್ನು ಕೇಳಿಸಿಕೊಳ್ಳುತ್ತ  ಮೌನವಾಗಿದ್ದ ವಿಶ್ವನಿಗೂ ಅವರ ತರ್ಕ ಸರಿಯೆಂದೇ ತೋರಿತು.

ಸುದ್ದಿ ತಿಳಿದು ಊರಿನಿಂದ ಬಂದಿಳಿದ ಅವರ ಹಿರಿಯ ಹೆಣ್ಣುಮಕ್ಕಳು ಅಪ್ಪನ ಅವಸ್ಥೆ ಕಂಡು ಗೊಳೋ ಎಂದು ಅತ್ತೇಬಿಟ್ಟರು.

“ಇದೆಲ್ಲ ಬರಲಿರುವ ಆ ಪುಣ್ಯಾತ್ಗಿತ್ತಿಯ ಕೆಟ್ಟ ಕಾಲ್ಗುಣಾನೇ” ಎಂದವರು ತಮ್ಮ ತೀರ್ಪಿತ್ತರು.

ಸುದ್ದಿ ತಿಳಿದ ನೆಂಟರಿಷ್ಟರೆಲ್ಲ ದಬೆ ದಬೆ ಆಸ್ಪತ್ರೆಗೆ ದಾಳಿ ಇಟ್ಟವರೇ, ಹಸು ತಿವಿದಿದ್ದರಿಂದ ಹಿಡಿದು ಹುಡುಗಿಯನ್ನು ನೋಡಿಕೊಂಡು ಬಂದ ಕೆಟ್ಟಗಳಿಗೆ, ಕಾಲ್ಗುಣ, ಶಕುನಗಳವರೆಗೆ ಮಾತುಗಳನ್ನು ಪೋಣಿಸಿದ್ದರು.

ಮೊದಲೇ ದಂಪತಿಗಳ ತಲೆಯಲ್ಲಿ ಹೊಕ್ಕಿದ್ದ ಅಪಶಕುನದ ಬೀಜ ಮೊಳೆತು, ಈಗ ತಲೆಯೆತ್ತಿ ಪಲ್ಲವಿಸತೊಡಗಿತ್ತು.

ಇದೊಂದೇ ಆಗಿದ್ದರೆ ಏನೋ ಅನ್ನಬಹುದಿತ್ತು. ಆದರೆ ರಾಮಯ್ಯನವರ ಪಾಲಿಗಾದ ನೋವು-ನಷ್ಟ ಒಂದೆರಡಲ್ಲ. ಇನ್ನೊಂದು ತಿಂಗಳಿಗೆ ಸರಿಯಾಗಿ ಅವರು ಕೆಲಸದಿಂದ ರಿಟೈರ್ ಆಗುವುದಿತ್ತು. ನಿವೃತ್ತಿಯಾಗುವುದರಲ್ಲಿ ಇನ್ನೊಂದು ಬಡ್ತಿ ಪಡೆಯುವ ಉದ್ದೇಶದಿಂದ ಅವರು ಕಳೆದೆರಡು ತಿಂಗಳುಗಳಿಂದ ಶತಪ್ರಯತ್ನ ನಡೆಸಿದ್ದರು. ಇನ್ನೇನು ಅದು ಕೈಗೂಡುವ ಹಂತ. ಅವರ ಫೈಲ್ ಇನ್ನು ಒಂದೆರಡು ಟೇಬಲ್ ದಾಟುವುದಿತ್ತಷ್ಟೆ. ಅಷ್ಟರಲ್ಲಿ ಎಲ್ಲ ನೀರಿನಲ್ಲಿ ಹೋಮ ಮಾಡಿದಂತಾಗಿ, ಕೈಗೆ ಬಂದ ತುತ್ತು ಬಾಯಿಗೆಟುಕಿರಲಿಲ್ಲ. ಅವರ ಪ್ರಮೋಷನ್ ಫೈಲನ್ನು ಮುಂದಕ್ಕೆ ತಳ್ಳುವ ಕೈಗಳಿಲ್ಲದೆ, ಸೊರಗಿ ಅದು ಕೂತ ಮೇಜಿನ ಮೇಲೆಯೇ ನಿದಿಸ್ರಿಬಿಡುವ ಕಲ್ಪನೆಯಿಂದ ರಾಮಯ್ಯನವರ ಮೈ ಬೆವೆತಿತ್ತು! ಈಗೇನು ಮಾಡಲಿಯೆಂದು ಅಸಹಾಯಕತೆಯಿಂದ ಮಲಗಿದ್ದಲ್ಲೇ ಮೈ ಪರಚಿಕೊಂಡರು.

ಇದರ ಬಗ್ಗೆ ಮಗನಿಗಾಗಲಿ, ಪಿ.ಎ.ಗಾಗಲಿ ಸೂಚನೆ ಕೊಡಲಾಗದೆ ಹುಡುಗಿಗೆ ಹಿಡಿಹಿಡಿ ಶಾಪ ಹಾಕಿದರು.

ಅವರು ನರ್ಸಿಂಗ್ ಹೋಂನಲ್ಲಿದ್ದಂತೆಯೇ ಅವರಿಗೆ ನಿವೃತ್ತಿಯಾಯಿತು. ಪ್ರತಿಬಾರಿ ಕಛೇರಿಯಲ್ಲಿ ಯಾರೇ ನಿವೃತ್ತರಾಗಲಿ ಅವರಿಗೆ ಭರ್ಜರಿ ಬೀಳ್ಕೊಡುಗೆಯ ಸಮಾರಂಭ ಏರ್ಪಡಿಸುವ ಜವಾಬ್ದಾರಿ ರಾಮಯ್ಯನವರದೇ ಆಗಿತ್ತು. ಎಲ್ಲರಿಗೂ ಗಡದ್ದಾಗಿ ಸನ್ಮಾನಿಸುತ್ತಿದ್ದ ರಾಮಯ್ಯನವರಿಗೆ ಹಾಸಿಗೆಯ ಮೇಲೆ ಕನಸು ಕಾಣುವುದೊಂದನ್ನು ಬಿಟ್ಟರೆ ಈಗ ಬೇರೆ ದಾರಿಯಿರಲಿಲ್ಲ. ಇದಕ್ಕಿಂತ ಹೆಚ್ಚಾಗಿ ಅವರ ತಲೆಕೆಡಿಸಿದ್ದು, ಅವರಿಗೆ ತಿಂಗಳೆರಡರ ಹಿಂದೆ ಅನೌನ್ಸ್ ಆಗಿದ್ದ ‘ಕರ್ತವ್ಯರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ. ಎರಡು ಸಲ ಮುಂದೂಡಿದ್ದ ಸಮಾರಂಭ ಈಗ ಈ ತಿಂಗಳ ಮೂರನೇ ವಾರ ಏರ್ಪಾಡಾಗಿತ್ತು. ಸಿಬ್ಬಂದಿ-ಅಧಿಕಾರಿಗಳ ಕರ್ತವ್ಯ ಪ್ರಜ್ಞೆಗೆ ಮೆಚ್ಚಿ ಪ್ರಶಂಸಾಪೂರ್ವಕವಾಗಿ ನೀಡುತ್ತಿದ್ದ ಅಪರೂಪದ ಪ್ರಶಸ್ತಿ. ‘ಕರ್ತವ್ಯ ರತ್ನ’ವನ್ನು ರಾಜ್ಯದ ಮುಖ್ಯಮಂತ್ರಿಗಳ ಅಮೃತಹಸ್ತದಿಂದ ಸ್ವೀಕರಿಸುವ ಬಗ್ಗೆ ಇದಾಗಲೇ ಅವರು ಹತ್ತಾರು ರೀಲು ಕನಸು ಕಂಡಿದ್ದರು.

ಪ್ರಶಸ್ತಿಯನ್ನು ತಮ್ಮ ಪರವಾಗಿ ಪಡೆದು ಬಂದ ಮಗ ಚಿನ್ನದ ಪದಕವನ್ನು ಅವರ ಕೈಗಿತ್ತಾಗ, ಅವರದನ್ನು ಹಿಂದೆ ಮುಂದೆ ತಿರುಗಿಸಿ ನೋಡಿ, ಅದನ್ನು ಪಡೆಯುವ ಭಾಗ್ಯದಿಂದ ತಾವು ವಂಚಿತರಾದುದಕ್ಕೆ ಒಂದೆಡೆ ವ್ಯಥೆ-ಇನ್ನೊಂದೆಡೆ ಕೃದ್ಧರಾಗಿ ಒಳಗೇ ಮುಲುಕಿದರು.

ಪೆಟ್ಟಿನ ಮೇಲೆ ಪೆಟ್ಟು! ತಿಂಗಳಿಂದ ಕಾತುರತೆಯಿಂದ ನಿರೀಕ್ಷಿಸಿದ್ದ ಹೊಸ ಕಾರು, ಟ್ರಕ್ ಮುಷ್ಕರದಿಂದ ತಡವಾಗಿ ಆಗಮಿಸಿ ಈಗ ಸರಿಯಾಗಿ ಕುಳಿತುಕೊಳ್ಳಲು ಆಗದ ಅವರನ್ನು ‘ಡ್ರೈವ್’ ಮಾಡಲು ಆಹ್ವಾನಿಸಿ ಅಣಕಿಸಿದಂತಾಗಿತ್ತು.

ದುಃಖದ ಪೇರುಸಿರು! ತಾವೇ ತಮ್ಮ ಕೈಯಾರ ಅದನ್ನು ನಡೆಸಿಕೊಂಡು, ದೇವಸ್ಥಾನಕ್ಕೆ ಹೋಗಿ ಪೂಜೆ ಮಂಗಳಾರತಿ, ದೃಷ್ಟಿ ನಿವಾರಣೆ ಮಾಡಿಸಿಕೊಂಡು ಬರುವ ಕಲ್ಪನೆ ಹೆಣೆದಿದ್ದ ಅವರಿಗೆ, ಮಗ ಹೊರಗೆ ಕಾರಿನ ಹಾರನ್ ಒತ್ತಿದಾಗ ಕಣ್ಣಲ್ಲಿ ಕಪ್ಪು ಕಾವಳ ತುಂಬಿತು.

‘ವೆರಿ ಬ್ಯಾಡ್ ಲಕ್’-ಅವರ ಅಂತರಂಗದ ನಿಡುಸುಯ್ಲು ಅವರಿಗರಿವಿಲ್ಲದೆ ಹೊರ ಸೋರಿದಾಗ, ಎದುರಿಗೆ ಕುಳಿತಿದ್ದ ಗೌರಮ್ಮನ ಮೊಗದಲ್ಲಿ ಕಹಿಯಲೆ ಹರಡಿತು. ಏನೋ ತೀರ್ಮಾನಿಸಿದಂತೆ ತುಟಿ ಕಚ್ಚಿ “ಈಗ್ಲೇ ಹೋಗಿ ಆ ಸೋಮಣ್ಣನನ್ನು ಬರಹೇಳು” ಎಂದರು ಶಂಕ್ರೂಗೆ.

ಕೂಡಲೇ ಮದುವೆ ದಳ್ಳಾಳಿ ಸೋಮಣ್ಣ ಹಾಜರಾದ. ಅವನ ಮುಖದಲ್ಲಿ ಕಳವಳ ಕೆನೆಗಟ್ಟಿತ್ತು.

“ಹೆಂಗಿದೆ ಯಜಮಾನ್ರಿಗೆ?”

ಅವನ ದನಿ ಕೇಳುತ್ತಲೇ ರಾಮಯ್ಯ ಮುಖ ಗಂಟಕ್ಕಿ “ಎಲ್ಲಾ ನಿಮ್ಮಿಂದ್ಲೇ” ಅಂದರು ಅವನನ್ನು ದುರುಗುಟ್ಟಿ ನೋಡಿ. “ನಾನೇನು ಮಾಡಿದೆ ಯಜಮಾನ್ರೇ?” ಎಂದವನು ಮೆಟ್ಟಿಬಿದ್ದ!

“ನೀನೇ…ನೀನೇ ತಾನೇ ಆ ಹೆಣ್ಣನ್ನು ಕರ್ಕೊಂಡೋಗಿ ನಮಗೆ ತೋರಿಸಿದ್ದು. ನೋಡು ಅವಳಿಂದ ಎಷ್ಟು ಕಷ್ಟ ನಷ್ಟ ಆಯ್ತು… ನನ್ನ ಜೀವನದ ಮರೆಯಲಾರದಂಥ ಅಪರೂಪದ ಕ್ಷಣಗಳನ್ನೆಲ್ಲ ಕಳ್ಕೋಬೇಕಾಯ್ತು… ಖರೀದೀಗೇಂತ ಮಾತಾಗಿದ್ದ ಒಳ್ಳೆ ಮನೇನೂ ನಮ್ಮ ಕೈ ತಪ್ಪಿಹೋಯ್ತು… ಓ… ನಮಗೆ ಎಂಥ ಕಷ್ಟದ ದಿನಗಳು ಒದಗಿದವು!…ಎಲ್ಲ…ಎಲ್ಲಕ್ಕೂ ಕಾರಣ ಅವಳೇ…ಅವಳ ಕಾಲ್ಗುಣ… ಅವಳನ್ನು ನೋಡಿದ ಘಳಿಗೆಯೇ ಸರಿಯಿರಲಿಲ್ಲ…ಅಪಶಕುನ’–ಎಂದರಾತ ಕ್ರೋಧಿತರಾಗಿ.

ಸೋಮಣ್ಣನ ಮುಖದಲ್ಲಿ ಪ್ರೇತಕಳೆ ತುಂಬಿತು. ನಾಲಗೆಯಲ್ಲಿದ್ದ ಪದಗಳೆಲ್ಲ ಒಳಗೇ ಜಾರಿದವು.

“ಬೇಡ ಸೋಮಣ್ಣ, ಆ ಹುಡುಗಿ ನಮ್ಮನೆಗೆ ಆಗಿಬರಲ್ಲ.. ಇನ್ನೂ ಬಂದೇ ಇಲ್ಲ, ಆಗ್ಲೇ ನೋಡು ಎಂಥ ಅನಾಹುತ!…ಇನ್ನು ಬಂದ್ಮೇಲೆ ಇನ್ನೆಷ್ಟು ಕಾದಿವೆಯೋ… ಬೇಡಪ್ಪ ಬೇಡ. ಸದ್ಯ… ಮನೇಲಿ ಬೇರೆ ಮದುವೆಗೆ ನಿಂತ ಮಗಳಿದ್ದಾಳೆ. ಶಕುನ ಸರಿಹೋಗ್ಲಿಲ್ಲ ಅಂತ ಹೇಳಿ ಈ ಮದುವೇನ ಕ್ಯಾನ್ಸಲ್ ಮಾಡಿಸಿಬಿಡು”– ಗೌರಮ್ಮ ಹಲ್ಲು ಮುಡಿಕಚ್ಚಿಕೊಂಡು ನುಡಿದರು.

“ಹೋಗ್ಲಿ ಬಿಡ್ರಕ್ಕ…ಹುಡುಗಿ ತುಂಬ ಸುಂದರವಾಗಿದ್ದಾಳೆ, ಓದಿದಾಳೆ. ಮೇಲಾಗಿ ಶ್ರೀಮಂತರ ಮನೆಯ ಹುಡುಗಿ ಅಂತ ನೀವೇ ಮುಂದುವರಿದಿದ್ದಲ್ವಾ? ಇದರಲ್ಲಿ ನಂದೇನು ತಪ್ಪಿದೆ? ಇಂಥಾ ಹುಡುಗೀನ ಬಿಟ್ರೆ ಸಿಕ್ಕೋದು ಕಷ್ಟ” ಎಂದವನೇ ಸೋಮಣ್ಣ ತತ್‍ಕ್ಷಣ ನಾಲಗೆ ಕಚ್ಚಿಕೊಂಡ, ಗೌರಮ್ಮನ ಮೊಗ ಕೆಂಡಾಮಂಡಲವಾಗಿದ್ದನ್ನು ಕಂಡು.

“ಭಾಳ ಚೆನ್ನಾಗಿ ಹೇಳಿದೆ. ಇಂಥ ಅಪಶಕುನದ ಹುಡುಗೀನ ಬಿಡೋದಲ್ಲದೆ ಕಟ್ಕೋಳ್ಳೋದೇ? ಖಂಡಿತಾ ಸಾಧ್ಯವಿಲ್ಲ-ಈಗ್ಲೇ ಹೋಗಿ ಹೇಳಿ ಬಂದ್ಬಿಡು, ಈ ಸಂಬಂಧ ನಮಗೆ ಬೇಕಿಲ್ಲ ಅಂತ… ಇವಳಲ್ಲದಿದ್ರೆ ಇನ್ನೊಬ್ಬಳು. ಹತ್ತು ಪಟ್ಟು ಅದೃಷ್ಟವಂತಳು ನಮ್ಮ ಮನೆಗೆ ಬರ್ತಾಳೆ ಬಿಡು” ಎಂದು ಗೊಣಗಿದರು.

ಸೋಮಣ್ಣ ಮನಸ್ಸಿಲ್ಲದ ಮನಸ್ಸಿನಿಂದ ಮೇಲೆದ್ದ. ವಿಶ್ವನ ಓದು, ಕೆಲಸಗಳನ್ನು ನೋಡಿದರೆ ಆ ಹುಡುಗಿ ಇವನನ್ನು ಒಪ್ಪಿದ್ದೇ ಹೆಚ್ಚು. ತಾನೇ ಅಲ್ಲವೇ ಹುಡುಗನ ಗುಣ-ಮನೆತನಗಳ ಬಗ್ಗೆ ಇಲ್ಲದ್ದು ಹೇಳಿ ಅವಳ ಮನೆಯವರನ್ನು ಮರುಳು ಮಾಡಿದ್ದು ಅಂತ ಅಂದುಕೊಂಡ ಮನದಲ್ಲೇ.

“ಹೇಗೂ ಅವರೂ ಈ ಬಗ್ಗೆ ಮುಂದುವರಿಸಲು ಬಂದಿಲ್ಲ…ಒಂದ್ನಾಲ್ಕು ದಿನ ತಡೆದು ಸೂಕ್ಷ್ಮವಾಗಿ ಹೇಳಿ ಬರ್ತಿನಕ್ಕ” ಎಂದು ಸೋಮಣ್ಣ ನಿರ್ಗಮಿಸಿದ್ದ.

ರಾಮಯ್ಯನವರು ಹದಿನೈದು-ಇಪ್ಪತ್ತು ದಿನ ನರ್ಸಿಂಗ್ ಹೋಂನಲ್ಲಿದ್ದು, ತಿಂಗಳು ಮನೇಲಿ ವಿಶ್ರಾಂತಿ ತೆಗೆದುಕೊಂಡ ಮೇಲೆಯೇ ಅವರು ನಾಲ್ಕು ಹೆಜ್ಜೆ ಇಡುವಂತಾಗಿದ್ದು.

ತಂದೆಗಾದ ಅಪಘಾತದ ವಿಷಯ ತಿಳಿದು ಅಮೆರಿಕೆಯಲ್ಲಿದ್ದ ಅವರ ಹಿರಿಯ ಮಗ ಗಿರೀಶ ತತ್‍ಕ್ಷಣ ಬರುವ ಆತುರವಿದ್ದರೂ ರಜೆ ಸಿಗದೆ ಎರಡು ತಿಂಗಳ ನಂತರ ಬಂದಿದ್ದ.

ನಡೆದ ವಿಷಯವನ್ನೆಲ್ಲ ಕೇಳಿ, ಅದರಲ್ಲೂ ವಿಶ್ವನ ಮದುವೆಯ ಬಗ್ಗೆ ಅವರ ಆಲೋಚನೆ, ತೀರ್ಮಾನ ಕೇಳಿ ಬಹು ಬೇಸರಗೊಂಡ.

“ಅಲ್ಲಪ್ಪ, ಅಂಥ ಚೆನ್ನಾಗಿರೋ ಹುಡುಗೀನ ನಿಮ್ಮ ಮೂರ್ಖತನ ಮೂಢನಂಬಿಕೆಗಳಿಂದ ಬಿಟ್ಬಿಟ್ರೇ-ನಷ್ಟ ನಿಮಗೇ ಹೊರತು ಅವಳಿಗಲ್ಲ. ನೀವೇನೇ ಹೇಳಿ, ವಿಶ್ವನಿಗೆ ಆ ಹುಡುಗೀ ಮೇಲೆ ತುಂಬಾ ಮನಸ್ಸಿರೋದ್ರಿಂದ ನಾನು ಮತ್ತೆ ಹೋಗಿ ಮಾತಾಡಿಕೊಂಡು  ಬರ್ತೀನಿ…ನಡೆಯೋ ವಿಶ್ವ” ಎಂದು ಅವನನ್ನು ಹೊರಡಿಸಿಕೊಂಡು ಗಿರೀಶ ಹೊರಟು ನಿಂತಾಗ ದಂಪತಿಗಳು ದಂಗಾಗಿದ್ದರು!

ಆ ಹುಡುಗಿಯ ಮನೆಯ ಕರೆಗಂಟೆ ಒತ್ತಿದಾಗ ಅವಳೇ ಬಾಗಿಲು ತೆರೆದಳು. ಅಪರಿಚಿತನ ಹಿಂದೆ ನಿಂತಿದ್ದ ವಿಶ್ವನನ್ನು ಗುರುತಿಸಿ ಅವಳು ಮುಗುಳ್ನಕ್ಕು “ಬನ್ನಿ ಒಳಗೆ” ಎಂದು ಸ್ವಾಗತಿಸಿದಳು.

“ನಾನು ರಾಮಯ್ಯನವರ ಹಿರಿ ಮಗ ಗಿರೀಶ್ ಅಂತ…ಅಮೆರಿಕದಲ್ಲಿದ್ದೀನಿ…ವಿಷಯ ಎಲ್ಲ ತಿಳೀತು, ಐಯಾಮ್ ವೆರಿ ಸಾರಿ… ಏನೋ ತಿಳಿಯದೆ ತಪ್ಪು ಅಭಿಪ್ರಾಯ-ನಿರ್ಧಾರಕ್ಕೆ ಬಂದು ಹಾಗೆ ಹೇಳಿ ಕಳಿಸಬೇಕಾಯ್ತು… ಸಾರಿ…ಈಗ ನಾವು ಮನಸ್ಸು ಬದಲಾಯಿಸಿದ್ದೀವಿ”

ಸೋಫಾದಲ್ಲಿ ಕೂರುತ್ತಾ ಗಿರೀಶ ಸಂಕೋಚದಿಂದ ನುಡಿದಾಗ ಅವಳು ತಣ್ಣಗೆ ನಕ್ಕಳು.

“ಹೋಕ್ಕೊಳ್ಳಿ ಬಿಡಿ… ನಿಮಗೆ ಅಪಶಕುನವಾಗಿದ್ದೇ ನನಗೆ ಶುಭ ಶಕುನವಾಯಿತು.. ನಿಮ್ಮ ಪಾಲಿಗೆ ದುರಾದೃಷ್ಟ ಅನಿಸಿದ್ದು ನನ್ನ ಪಾಲಿಗೆ ಅದೃಷ್ಟ ತಂದಿತು…ನನ್ನ ಮದುವೆ ಫಿಕ್ಸ್ ಆಯ್ತು… ಹುಡುಗ ಎಂ.ಟೆಕ್… ಸ್ವಂತ ಫಾಕ್ಟರಿ ಇಟ್ಟಿದ್ದಾರೆ… ತಂದೆಗೆ ಒಬ್ಬನೇ ಮಗ… ಮದುವೆ ಮುಂದಿನವಾರ, ಅದಕ್ಕೇ ನಮ್ಮ ತಂದೆ, ತಾಯಿ ಇನ್ವಿಟೇಷನ್ಸ್ ಕೊಡಕ್ಕೆ ಹೊರಗೆ ಹೋಗಿದ್ದಾರೆ” ಎಂದು ಮುಖದಲ್ಲಿ ನಗು ತುಳುಕಿಸಿದಳು.

 “ನಾವಿನ್ನು ಬರ್ತೀವಿ…” ಎಂದು ಅಣ್ಣ ತಮ್ಮಂದಿರು ಪೆಚ್ಚಾಗಿ ಮೇಲೇಳ ಹೊರಟಾಗ ಅವಳು,

 “ಒಂದ್ನಿಮಿಷ ಕೂತ್ಕೊಳ್ಳಿ” ಎಂದು ಒಳಗೆ ಹೋಗಿ ಅವರಿಗೆ ತನ್ನ ಮದುವೆಯ ಕರೆಯೋಲೆಯನ್ನು ತಂದಿತ್ತು, “ಮದುವೆಗೆ ಖಂಡಿತಾ ಬರಬೇಕು…ಅದಕ್ಕೇನು ಶಕುನ ನೋಡೋ ಅಗತ್ಯವಿಲ್ಲ ತಾನೇ?” ಎಂದು ಕಿಲಕಿಲನೆ ನಕ್ಕವಳೇ, “ನೋಡಿ, ಇದು ಹ್ಯಾಗಿದೆ ತಮಾಷೆ…ನಿಮ್ಮ ತಂದೆಯ ಬೇಜವಾಬ್ದಾರಿಗೆ ನಾನು ಹೊಣೆಯಂತೆ-ನನ್ನ ಕಾಲ್ಗುಣ ಕೆಟ್ಟದು ಅನ್ನುವುದಾದರೆ ಅದೇ ಸಮಯದಲ್ಲಿ ನಿಮ್ಮ ಹೊಸ ಕಾರೂ ಬಂತಲ್ಲ ಅದರ ಟೈರ್ ಗುಣ ಮಾತ್ರ ತುಂಬಾ ಒಳ್ಳೇದಾ?…ಭಾಳ ಚೆನ್ನಾಗಿದೆ… ಬೇಕಾಗಿದ್ದಕ್ಕೆ ಸ್ವಾಗತ. ಬೇಡವಾದುದಕ್ಕೆ ತಿರಸ್ಕಾರ ಅಲ್ಪಾ?… ಅಪಶಕುನ-ಕೆಟ್ಟ ಕಾಲ್ಗುಣ ಅಂತ ಪಟ್ಟ… ಅಪಪ್ರಚಾರ ಬೇರೆ…”

-ಎಂದವಳು ಹರಿತವಾಗಿ ನುಡಿದು ಹಗುರಾಗಿ ನಗುತ್ತಿರುವಾಗಲೇ ಹೊರಗೆ ಕಾರಿನ ಹಾರನ್ ಶಬ್ಧ ಕೇಳಿಸಿತು. ಒಡನೆಯೇ, ಅವಳ ಹೆತ್ತವರಿಗೆ ಮುಖ ತೋರಿಸುವುದು ಹೇಗೆಂಬ ಸಂಕೋಚ ಒತ್ತಿ ಬಂತು ವಿಶ್ವನಿಗೆ.

“ಓಹ್ … ನನ್ನ ವುಡ್‍ಬಿ ಬಂದರೂ ಅಂತ ಕಾಣುತ್ತೆ …ಒನ್ ಮಿನಿಟ್ ಕೂತ್ಕೊಳ್ಳಿ, ಪರಿಚಯ ಮಾಡಿಸ್ತೀನಿ”-ಎಂದವಳು ಖುಷಿಯಿಂದ ಬಾಗಿಲತ್ತ ಓಡಿದಾಗ ಅಣ್ಣ-ತಮ್ಮಂದಿರು ಕೂತ ಸೋಫದೊಳಗೆ ನಾಚಿಕೆ, ಪಶ್ಚಾತ್ತಾಪಗಳಿಂದ ಕುಸಿದುಹೋಗಿದ್ದರು. 

                                                                **  **   **

Related posts

ಯಾವುದೀ ಮಾಯೆ?!

YK Sandhya Sharma

ಕಿರುಗುಟ್ಟುವ ದನಿಗಳು

YK Sandhya Sharma

ಇಂಚರ

YK Sandhya Sharma

2 comments

Dr.C.S.Varuni October 7, 2020 at 11:02 pm

Namma karmakke bereyavarannu guru maaduvudi. Jeeva ulididdi olle shauna allavaa.

Reply
YK Sandhya Sharma October 8, 2020 at 11:14 am

ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ. ನೀವು ಹೇಳುವುದು ನಿಜ.ಮೂಢ ಜನಗಳು ಇರುವತನಕ ಇದು ಇದ್ದದ್ದೇ. ನಾವು ಎಂದೂ ಪಾಸಿಟಿವ್ ಆಗಿ ಯೋಚಿಸುವುದು ಒಳಿತು. ಫೇಸ್ ಬುಕ್ನಲ್ಲಿ ಆಗಾಗ ಕವನಗಳನ್ನು ಹಾಕುತ್ತಿರುತ್ತೇನೆ. ದಯವಿಟ್ಟು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

Reply

Leave a Comment

This site uses Akismet to reduce spam. Learn how your comment data is processed.