ಅಂದಿನ ‘ರಂಗಪ್ರವೇಶ’ದಲ್ಲಿ ಪ್ರಸ್ತುತಿಪಡಿಸಿದ ಕೃತಿಗಳ ಆಯ್ಕೆ, ಹಿಮ್ಮೇಳದ ವಾದ್ಯಝರಿ, ನಟುವಾಂಗದ ಸ್ಪುಟತೆ, ರಂಗಸಜ್ಜಿಕೆಯ ಸೌಂದರ್ಯಪ್ರಜ್ಞೆ, ಬೆಳಕಿನ ಕಿರಣಗಳ ಚಮತ್ಕಾರ, ಇವೆಲ್ಲಕ್ಕೂ ಕಳಶವಿಟ್ಟಂತೆ ರಸರೋಮಾಂಚಗೊಳಿಸಿದ ನೃತ್ಯಕಲಾವಿದೆ ಶೀತಲ್ ಪ್ರೇಮಕುಮಾರರ ಮನೋಜ್ಞನೃತ್ಯ ವೈಖರಿ.
ಇದು ಇತ್ತೀಚಿಗೆ ನಗರದ ಕೆ.ಇ.ಎ.ಪ್ರಭಾತ್ ರಂಗಮಂದಿರದ ವೇದಿಕೆಯ ಮೇಲಿನ ‘ರಂಗಪ್ರವೇಶ’ದ ಚೆಲುವು ಚೆಲ್ಲಿದ ನೋಟ.!!..
ಖ್ಯಾತ ‘ನೃತ್ಯ ದಿಶಾ ಟ್ರಸ್ಟ್’ ನೃತ್ಯಸಂಸ್ಥೆಯ ನುರಿತ ನೃತ್ಯಗುರು, ಉತ್ತಮ ನಾಟ್ಯಕಲಾವಿದೆ ಮತ್ತು ನೃತ್ಯ ಸಂಯೋಜಕಿಯಾದ ದರ್ಶಿನಿ ಮಂಜುನಾಥ್ ಅವರ ಸತತ ಪರಿಶ್ರಮ-ಬದ್ಧತೆಯ ತರಬೇತಿಯಿಂದ ರೂಪುಗೊಂಡ ಶಿಲ್ಪವೇ ಶೀತಲ್. ಗುರುಗಳು ಎರಕಹೊಯ್ದ ವಿದ್ಯೆಯನ್ನು ಸಂಪೂರ್ಣ ತನ್ನದಾಗಿಸಿಕೊಂಡು ಅತ್ಯಂತ ನಿಷ್ಠೆ-ಕಾಳಜಿಗಳಿಂದ ಮೈಗೂಡಿಸಿಕೊಂಡ ನೃತ್ಯಪ್ರಭುತ್ವವನ್ನು ರಸಿಕಜನರ ಸಮ್ಮುಖ ಅನಾವರಣಗೊಳಿಸಿದಳು ಕಲಾವಿದೆ.
ಮೊದಲಿಗೆ ‘ಶ್ರೀ ವಿಘ್ನರಾಜಂ ಭಜೆ’ ಎಂದು ಗಣಪನ ಮಹಿಮೆಯನ್ನು ನಿರೂಪಿಸುತ್ತ ಶೀತಲ್ , ನಗುಮುಖದಲ್ಲಿ ಆನಂದ ತುಳುಕಿಸುತ್ತ, ತನ್ನ ಚೆಂದದ ಆಂಗಿಕಗಳಿಂದ, ಮೋಹಕ ಅಡವುಗಳಿಂದ ಗಣಪನನ್ನು ಕಣ್ಮುಂದೆ ತಂದು ನಿಲ್ಲಿಸಿದಳು.
ಗ್ರೀವ-ದೃಷ್ಟಿ ಭೇದಗಳ ಸೊಗಸನ್ನು ‘ಅಲ್ಲರಿಪು’ವಿನಲ್ಲಿ ಕಾಣಿಸಿದರೆ, ‘ಜತಿಸ್ವರ’ದಲ್ಲಿ ಲಯ-ತಾಳಗಳ ವೈವಿಧ್ಯವನ್ನು ಅಭಿವ್ಯಕ್ತಿಸಿದಳು. ಕ್ಲಿಷ್ಟ ಅಂಗವಿನ್ಯಾಸಗಳು, ಸಂಕೀರ್ಣ ಜತಿಗಳು ಸರಾಗವಾಗಿ ನಿರೂಪಿತವಾದವು. ಹಸ್ತಚಲನೆ, ಮಿನುಗು ಕಣ್ಣುಗಳ ಕಾಂತಿಯಲ್ಲಿ ಅಭಿನಯದ ಸೊಗಡು ಇಣುಕಿತ್ತು.
‘ಮಹಾಭಾರತ ಶಬ್ದಂ ’-ಅಪರೂಪವಾದ ಅಷ್ಟೇ ಆಕರ್ಷಕ ಕೃತಿ. ಪಾಂಡವ-ಕೌರವರ ಪಗಡೆಯಾಟ, ದುಶ್ಹಾಸನ ದ್ರೌಪದಿಯನ್ನು ರಾಜಸಭೆಗೆ ಎಳೆತರುವ ಹಾಗೂ ಅಕ್ಷಯವಸ್ತ್ರದ ಪ್ರಮುಖ ಘಟನೆಗಳು ಪರಿಣಾಮಕಾರಿಯಾಗಿ ಮೂಡಿಬಂದವು.
ನಾಟಕೀಯ ಬೆಡಗಿನಿಂದ ಮನಸೆಳೆದ ದ್ಯೂತ ಸನ್ನಿವೇಶದಲ್ಲಿ ಶೀತಲ್ ಎರಡೂ ಪಕ್ಷಗಳ ಆಟವನ್ನು ತನ್ನ ವಿಶಿಷ್ಟ ಭಾವ-ಭಂಗಿಗಳಿಂದ ನಿರೂಪಿದಳು. ಸೋತ ದ್ರೌಪದಿಯನ್ನು ಎಳೆದುತರಲು ಹೊರಟ ದುಶಾಸನನ ಹಮ್ಮಿನ ನಡೆಗೆ ಬಳಸಲಾದ ಯಕ್ಷಗಾನದ ಮಟ್ಟು, ಕಲಾವಿದೆಯ ವಿರೋಚಿತ ನಡಿಗೆ, ಅಹಂಕಾರ-ಕ್ರೌರ್ಯದ ಮುಖಾಭಿವ್ಯಕ್ತಿ ಸಮರ್ಥವಾಗಿ ಹೊರಸೂಸಿತು. ಪಾಂಡವರ ಹತಾಶೆ, ದುರ್ಯೋಧನನ ದರ್ಪ, ದ್ರೌಪದಿಯ ದೈನ್ಯರಾಶಿ ಮುಂತಾದ ಭಾವನೆಗಳನ್ನು ಶೀತಲ್ ತನ್ನ ಪರಿಣತ ಅಭಿನಯದಿಂದ ಸನ್ನಿವೇಶದ ಗಾಢತೆಯನ್ನು ಹೆಚ್ಚಿಸಿದಳು. ನಡುನಡುವೆ ಭಾವಗಳಿಗೆ ತಕ್ಕಂತೆ ಮೂಡಿದ ಮಂದಚಲನೆಯ ನೃತ್ತಗಳ ಲಾಸ್ಯ ಮನಮೋಹಕವಾಗಿದ್ದವು.
ದಂಡಾಯುಧಪಾಣಿ ವಿರಚಿತ ‘ವೇಲನೈ ವರಸೊಲ್ಲಡಿ ಸಖಿ..’ ಎಂಬುದಾಗಿ, ಮುರುಗನಲ್ಲಿ ಅನುರಕ್ತಳಾದ ನಾಯಕಿ ತನ್ನ ಸಖಿಯಲ್ಲಿ ಕಾರುಣ್ಯದಿಂದ ಬಿನ್ನವಿಸುವ ‘’ ವರ್ಣ’’ ಉತ್ಕೃಷ್ಟಮಟ್ಟದ ಅಭಿನಯದಿಂದ ಶೋಭಿಸಿತು.
ಕಾರ್ತಿಕೇಯನ ರೂಪ ಚಿತ್ರಿಸುವ ಭಾವ-ಭಂಗಿಗಳು ಅನುಪಮವಾಗಿದ್ದರೆ, ಹಿನ್ನಲೆಯಲ್ಲಿ ಮೂಡಿಬಂದ ನವಿಲುಗರಿಗಳ ಅಂದ ಮತ್ತಷ್ಟು ಮನೋಜ್ಞತೆ ಹೆಚ್ಚಿಸಿತು. ಸಂಚಾರಿಯಲ್ಲಿ- ಕಾರ್ತಿಕೇಯನ ಜನನದ ಹಿನ್ನಲೆಯ ಕಥೆಯನ್ನು ಶೀತಲ್ ಸಂಕ್ಷಿಪ್ತವಾಗಿ ಅಷ್ಟೇ ಸ್ವಾರಸ್ಯವಾಗಿ ನಿರೂಪಿಸಿದಳು. ಶಿವ-ಪಾರ್ವತಿಯರ ವಿವಾಹ, ಸೂರಪದ್ಮ ರಕ್ಕಸನಿಗೆ ಮುಕ್ತಿ, ಶಿವನ ಮೂರನೆಯ ಕಣ್ಣಿನಿಂದ ಚಿಮ್ಮಿದ ಬೆಂಕಿ, ಆರು ಉಂಡೆಗಳಾಗಿ ಅದರಿಂದ ‘ಆರ್ಮುಗ’ ಜನ್ಮತಾಳುವ, ಮುಂದೆ ‘ವಲ್ಲಿ ವಿವಾಹ’ದ ಸುಂದರ ಕಥೆಗಳನ್ನು ಕಲಾವಿದೆ ಸುಮನೋಹರ ಅಭಿನಯದಿಂದ ಕಟ್ಟಿಕೊಟ್ಟಳು. ಮಧ್ಯ ಸ್ವರಗುಚ್ಚಗಳಿಗೆ ಅನುಗುಣವಾಗಿ ನರ್ತಿಸಿದ ಶೀತಲ್ ತನ್ನ ನೃತ್ತಪ್ರಭುತ್ವವನ್ನೂ ಮೆರೆದದ್ದು ವಿಶೇಷವಾಗಿತ್ತು.
ಸಾಮಾನ್ಯವಾಗಿ ‘ವರ್ಣ’ ದೀರ್ಘಬಂಧವಾಗಿದ್ದರೂ, ಕಲಾವಿದೆಯ ಲೀಲಾಜಾಲ ನರ್ತನ, ಹೃದಯಸ್ಪರ್ಶೀ ಅಭಿನಯಗಳಿಂದ ಕುತೂಹಲ ಹುಟ್ಟಿಸುತ್ತಾ ಚುರುಕಾಗಿ ಸಾಗಿ ಕಣ್ಮನ ತುಂಬಿತು. ಅಂಗಶುದ್ಧಿಯ ಅಚ್ಚುಕಟ್ಟಾದ ನೃತ್ಯ ಆಕೆಯ ಅಭಿನಯಪ್ರಾವೀಣ್ಯವನ್ನು ಎತ್ತಿಹಿಡಿಯಿತು.
ಮುಂದಿನ ಪ್ರಸ್ತುತಿ ದರ್ಶಿನಿಯವರ ವಿಶೇಷ ಪರಿಕಲ್ಪನೆಯದಾಗಿತ್ತು. ಸಾಹಿತ್ಯವಿಲ್ಲದೆ, ಕೇವಲ ವಾದ್ಯಗೋಷ್ಠಿಯ ಮೂಲಕ ‘ಶಿವ ನವರಸ’ವೆಂಬ ಶೀರ್ಷಿಕೆಯಲ್ಲಿ ರಾಗಮಾಲಿಕೆ-ತಾಳಮಾಲಿಕೆಯಲ್ಲಿ ಕಲಾವಿದೆಯ ನವರಸಾಭಿವ್ಯಕ್ತಿಯ ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯುವುದಾಗಿತ್ತು. ಪ್ರತಿಯೊಂದು ರಸಗಳನ್ನೂ ಒಂದೊಂದು ಘಟನೆಯ ನಿರೂಪಣೆಯ ಮೂಲಕ ರಸಾಸ್ವಾದಕ್ಕೆ ಅವಕಾಶ ಒದಗಿಸಲಾಗಿತ್ತು. ಇದರ ಸಾಕಾರದಲ್ಲಿ ಶೀತಲ್ ಸಫಲಳಾದಳು ಕೂಡ. ಆಕೆಯ ಪರಿಣತ ನವರಸಾಭಿವ್ಯಕ್ತಿ ರಸಿಕರನ್ನು ಮಂತ್ರಮುಗ್ಧಗೊಳಿಸಿತು.
ಹಾಗೆಯೇ ಮುಂದಿನಕೃತಿ ‘ದುರ್ಗಾ ಸ್ತುತಿ’ ದೈವೀಕತೆಯಿಂದ, ಭಾವತಲ್ಲೀನ ಆತ್ಮಸಮರ್ಪಣಾ ಭಾವದ ಓಜಸ್ಸಿನಿಂದ ಬೆಳಗಿತು. ಶ್ರೀ ಕೃಷ್ಣನ ಕೊಳಲಗಾನ ಮಾಧುರ್ಯ ಅನುರಣಿಸಿದ ‘ತಿಲ್ಲಾನ’ ಶುದ್ಧ ನೃತ್ತಗಳಿಂದಾವೃತವಾಗಿ, ವೈವಿಧ್ಯ ಲಯವಿನ್ಯಾಸಗಳ ಸೊಬಗಿನಿಂದ ಮನವರಳಿಸಿತು.