ಒಂಟಿಯಾಗಿ ಕುಳಿತಿದ್ದ ಭಾಗಮ್ಮನ ತಲೆಯ ತುಂಬ ಚಿಂತೆಯ ಹೊರೆ. ಕಣ್ಣುಗಳು ನಿಸ್ತೇಜವಾಗಿದ್ದವು. ಮತ್ತೆ ಅದೇ ಕೆಟ್ಟ ಯೋಚನೆ ಅವರನ್ನು ಕುಲುಕಿಸಿದಾಗ ಆಕೆ ಒಮ್ಮೆಲೆ ಎದ್ದು ದೇವರ ಮನೆಗೆ ಓಡಿದರು.
ಎಣ್ಣೆ ಕಡಿಮೆಯಾಗಿದ್ದ ನಂದಾದೀಪದ ಕುಡಿ ‘ತುಕ ತುಕ’ ಎಂದು ಉಸಿರು ಕಳೆದುಕೊಳ್ಳುವುದರಲ್ಲಿತ್ತು. ಅದನ್ನು ಕಂಡು ಆಕೆಯ ಮನಸ್ಸಿನಲ್ಲಿ ಏನೇನೋ ಗಲಿಬಿಲಿಯಾಗಿ ತತ್‍ಕ್ಷಣ ರೂಮಿಗೆ ನುಗ್ಗಿದರು. ರಾಮಯ್ಯನವರ ಮಂಚದ ಬಳಿ ನಿಂತುಕೊಂಡು ಆತಂಕದಿಂದ ಅವರ ಎದೆಯನ್ನು ದಿಟ್ಟಿಸಿದರು. ನಿಧಾನವಾದ ಏರಿಳಿತ. ಮತ್ತೆ ಭಾಗಮ್ಮ ದೇವರ ಮುಂದೆ ಕೈ ಜೋಡಿಸಿ ಕುಳಿತರು. ನಂದಾದೀಪಕ್ಕೆ ಎಣ್ಣೆ ಹಾಕಿ ಬತ್ತಿ ಮೀಟಿ, ನೀಲಾಂಜನಗಳಲ್ಲಿ ತುಪ್ಪದ ದೀಪ ಹೊತ್ತಿಸಿದರು. ಮುಖದಲ್ಲಿ ಭಕ್ತಿಗಿಂತ ಯಾವುದೋ ಭಯ, ಆತಂಕ ಎದ್ದು ಕುಣಿಯುತ್ತಿತ್ತು.
“ದೇವರೇ, ದಯಮಾಡಿ ಇವರಿಗೆ ಇನ್ನು ಹತ್ತು ದಿನಗಳಾದ್ರೂ ಆಯಸ್ಸು ಕೊಡಪ್ಪ.. ನಿನ್ನಲ್ಲಿಗೆ ಬಂದು ಸೇವೆ ಸಲ್ಲಿಸ್ತೀನಿ” ಎಂದು ಮನೆದೇವರಾದ ವೆಂಕಟರಮಣನಿಗೆ ಹರಕೆ ಮಾಡಿಕೊಂಡರು. ಹಳದೀ ಬಟ್ಟೆ ತೆಗೆದು ಒಂದು ರೂಪಾಯಿಯ ನಾಣ್ಯವನ್ನು ಮುಡಿಪು ಕಟ್ಟಿಟ್ಟ ಅವರ ಕೈಗಳ ತುಂಬ ನಡುಕ.
“ನಮ್ಮಪ್ಪ ವೆಂಕಟ್ರಮಣ, ನೀನೇ ಕಾಪಾಡ್ಬೇಕು” – ದೀನ ಬೇಡಿಕೆ, ನಮಸ್ಕಾರಗಳು.
“ಅಮ್ಮಾ ಹಾಲುಕ್ತಿದೆ.. ಇದೇನು ದೇವರ ಮುಂದೆ ಕೂತಿರೋ ಹಾಗೆ ಒಲೆಗೆ ಕೈ ಮುಗೀತಾ ಕೂತಿದ್ದೀಯಾ! ಬೇಗ ಇಳ್ಸಮ್ಮ..” ಸ್ಫೂರ್ತಿಯ ದನಿ ಕೇಳಿ ಭಾಗಮ್ಮ ಬೆಚ್ಚಿಬಿದ್ದರು. ಮುಂದೆಯೇ ಇದ್ದ ಇಕ್ಕಳವನ್ನು ಆಚೀಚೆ ಹುಡುಕುವುದರಲ್ಲಿ ಅರ್ಧ ಹಾಲು ನೆಲ ಸೇರಿತ್ತು. ನೆಲಕ್ಕೆ ಕೈ ಊರಿಕೊಂಡು ಎದ್ದು ರೂಮಿಗೆ ಬಂದರು. ಮುಸುಕಿನಿಂದ ಸಣ್ಣ ಮುಲುಕು. ಭಾಗಮ್ಮನ ಮುಖ ಭಯದ ಹೊಂಡ. ಮಂಚದ ಬದಿಗೆ ಮುದುರಿ ನಿಂತು. “ಸ್ವಲ್ಪ ಹಾಲು ಕುಡೀತೀರಾ? ಅಥ್ವಾ ಗಂಜೀ ಮಾಡಿಕೊಡ್ಲೋ?” ಮೆಲ್ಲನೆ ಬಡಕಲು ದನಿಯನ್ನು ಹೊರಗೆ ನೂಕಿದರು.
ಮಂಚ ಕಿರುಗುಟ್ಟಿತು. ಭಾಗಮ್ಮ ಮತ್ತೊಂದು ಸಲ ಕೇಳಿದರು. ನಿರುತ್ತರ… ಆಕೆಯ ಮುಖದ ಗೆರೆಗಳು ಬದಲಾದವು. ನಡುಮನೆಯಲ್ಲಿ ಓದುತ್ತ ಕುಳಿತಿದ್ದ ಪ್ರಮೋದನ ಹತ್ತಿರ ಬಂದು-
“ನೋಡೋ ನಿಮ್ತಾತ ಉತ್ರಾನೇ ಕೊಡ್ಲಿಲ್ಲ.. ಹೊಟ್ಟೆಗೇನು ತೊಗೊಳ್ತೀರ ಅಂದ್ರೂ ದನಿಯಿಲ್ಲ. ನಂಗೇನೋ ಗಾಬರಿಯಾಗ್ತಿದೆ. ಸ್ಪಲ್ಪ ಬಂದು ನೋಡ್ತೀಯಾ?” ಎಂದರು ಆತಂಕದಿಂದ.
ಮಗ ಆಶ್ಚರ್ಯದಿಂದ ತಾಯಿಯ ಮುಖವನ್ನೇ ದಿಟ್ಟಿಸುತ್ತ, ಎದ್ದು ಹೋಗಿ ತಾತನ ಮುಸುಕನ್ನು ಸರಿಸಿ ನೋಡಿ, “ನಿದ್ದೆ ಮಾಡ್ತಿದ್ದಾರೆ ಅಷ್ಟೆ.. ಅದಕ್ಯಾಕೆ ಸುಮ್‍ಸುಮ್ನೆ ಗಾಬ್ರಿ ಮಾಡ್ಕೊತೀಯಮ್ಮ?” ಎಂದು ಮತ್ತೆ ಪುಸ್ತಕ ಬಿಚ್ಚಿದ.
ಪ್ರಮೋದನಿಗೆ ತಾಯಿಯ ಈಚಿನ ನಡವಳಿಕೆ ಕಂಡು ತುಂಬ ಅಚ್ಚರಿ. ಮೊದಲಿನಿಂದಲೂ ಅಂದರೆ ಅವನಿಗೆ ತಿಳುವಳಿಕೆ ಬಂದಂದಿನಿಂದಲೂ ತಾಯಿ ತಾತನನ್ನು ಉಪಚರಿಸಿದ್ದು, ಅವರ ಬಗ್ಗೆ ಗಮನ ಕೊಟ್ಟಿದ್ದು, ಒಳ್ಳೆಯ ಮಾತನಾಡಿದ್ದು ಎಂದೂ ಅವನಿಗೆ ನೆನಪಿಲ್ಲ. ಇದ್ದಕ್ಕಿದ್ದ ಹಾಗೆ ಅವರ ಬಗ್ಗೆ ತಾಯಿಯ ತೀವ್ರ ಗಮನ ಏಕೆಂದು ಅವನಿಗೆ ಆಶ್ಚರ್ಯ! ಈಗ ಹತ್ತು ಹದಿನೈದು ದಿನಗಳಿಂದ ಆಕೆಗೆ ದೇವರಲ್ಲಿ ಎಂದೂ ಇಲ್ಲದ ಭಕ್ತಿ, ಚಿಕ್ಕಮಾವನ ಶುಶ್ರೂಷೆಯಲ್ಲಿ ಅತೀವ ಶ್ರದ್ಧೆ.
‘ದೇವ್ರೇ, ನಿನ್ನ ದಯದಿಂದ ಗೊತ್ತಾಗಿರೋ ಶುಭಕಾರ್ಯ ನಿರ್ವಿಘ್ನವಾಗಿ ಜರುಗಿಸಪ್ಪ ’ ಎಂದು ಸದಾ ಪ್ರಾರ್ಥನೆ.
******
“ಅಮ್ಮಾ ನೋಡಮ್ಮ ಈ ಸೀರೆಗಳೆಲ್ಲ ಹೇಗಿವೆ? ಇದು ನಿಂಗೆ.. ಇದು ರಮ್ಯಂಗೆ, ಇದು ಸುಚೀಗೆ ಇವೆಲ್ಲ ನಂಗೆ.” ಅದೇ ತಾನೇ ಪೇಟೆಯಿಂದ ತಂದಿದ್ದ ಸೀರೆಗಳನ್ನೆಲ್ಲ ದೀಪ್ತಿ ತಾಯಿಯ ಮುಂದೆ ಹರವಿದಳು.
ಭಾಗಮ್ಮನ ಕಣ್ಣುಗಳು ನಿಶ್ಶಕ್ತಿಯಿಂದ ಸೀರೆಯನ್ನೇರಿದವು. ಬಿಟ್ಟ ಕಣ್ಣ ತುಂಬ ಮಂಚದ ಮುಸುಕು. ಕಿವಿಯಲ್ಲಿ ಕ್ಷೀಣ ನರಳಾಟ.
“ಈ ಮದ್ವೇ ನಡೆಯುತ್ತದೆಯೇ?’
ಮನಸ್ಸಿನಲ್ಲಿ ಸಣ್ಣ ಅನುಮಾನದ ತಂತು.
“ಇದು ಹೇಗಿದೇಮ್ಮಾ?..ಇದರ ಬಣ್ಣ?… ನೋಡು ಇದು ಎಷ್ಟು ಧಡೂತಿಯಾಗಿದೆ. ನೋಡು ನಿನ್ನ ಸೀರೇನಾ, ಅಣ್ಣಾನೇ ಸೆಲೆಕ್ಟ್ ಮಾಡಿದ್ದು”
ನಡೆಯುತ್ತಿದ್ದ ಮಾತುಕತೆಯ ಮೇಲೆ ಭಾಗಮ್ಮನ ಗಮನವೇ ಇಲ್ಲ. ಮದುವೆಯ ಜವಳಿ ಖರೀದಿಗೆ ಪೇಟೆಗೆ ಬರಲು ತಂದೆ-ಮಗಳು ಎಷ್ಟು ಒತ್ತಾಯಿಸಿದ್ದರೂ ಆಕೆ ಹೋಗಿರಲಿಲ್ಲ. ಈಗ ಹತ್ತಾರು ದಿನಗಳಿಂದ ಆಕೆಗೆ ಎಲ್ಲದರಲ್ಲೂ ಅನಾಸಕ್ತಿ. ರಾಮಯ್ಯನವರ ಅನಾರೋಗ್ಯವೇ ಅವರ ಎಲ್ಲ ಬದಲಾವಣೆಗಳ ಬಿಂದು.
“ದೀಪ್ತಿಯ ಕೊರಳಿಗೆ ತಾಳಿ ಬೀಳುವವರೆಗಾದರೂ ಅವರು ನೆಟ್ಟಗಿರಬಾರದೇ ಸದ್ಯ” ಎಂಬ ಹಂಬಲಿಕೆ. ಅದರ ಬೆನ್ನಿಗಂಟಿದಂತೆಯೇ ಕೆಟ್ಟ ಆಲೋಚನೆಗಳು.
“ಥೂ.. ದರಿದ್ರ ಮನುಷ್ಯ…. ನಾನು ಈ ಮನೆಗೆ ಕಾಲಿಟ್ಟಾಗಿನಿಂದ ಗೋಳು ಹೊಯ್ದುಕೊಂಡು ಅರೆದವರು.. ಇನ್ನೂ ಕಾಡ್ತಿದ್ದಾರಲ್ಲ.. ನನ್ನ ಆಯಸ್ಸಲ್ಲಿ ನಿರಾತಂಕವಾದ ದಿನ ಅನ್ನೋದೇ ಇಲ್ಲಾಂತ ಕಾಣುತ್ತೆ. ಬಹುಶಃ ಇವರ ಕಾಟ್ದಲ್ಲೇ ನಾನು ಬೇಗ ಹೋಗಿಬಿಡ್ತೀನೇನೋ.. ಅಂತೂ ಜನ್ಮಕ್ಕಂಟಿದ ಶನಿ ಇದು” ಎಂದು ಬೈಗುಳದ ಅಲೆಯೂ ಒಮ್ಮೊಮ್ಮೆ.
ಪ್ರದೀಪನಿಗೆ ಮದುವೆ ಗೊತ್ತಾದಾಗಲೂ ಭಾಗಮ್ಮನವರು ಚಿಂತೆ ಇದೇ ಆಗಿತ್ತು. ದೇವರ ಸಮಾರಾಧನೆ ದಿನ-ಚೆನ್ನಾಗಿದ್ದ ಮನುಷ್ಯನಿಗೆ ಇದ್ದಕ್ಕಿದ್ದ ಹಾಗೆ ಜ್ಞಾನ ತಪ್ಪಿ ಬಲಭಾಗಕ್ಕೆ ಪೂರಾ ಲಕ್ವ ಹೊಡೆದಿತ್ತು. ಭಾಗಮ್ಮನ ಯಜನಮಾನರು ತಕ್ಷಣ ಚಿಕ್ಕಪ್ಪನನ್ನು ಆಸ್ಪತ್ರೆಗೆ ಸೇರಿಸಿದ್ದರು. ಮನೆಗೆ-ಆಸ್ಪತ್ರೆಗೆ-ಮದುವೆ ಮನೆಗೆ ಓಡಾಡುವುದರಲ್ಲಿಯೇ ಎಲ್ಲರೂ ಸುಸ್ತಾದರು.
ಯಾರಿಗೂ ಮದುವೆ ಮನೆಯ ಸಂಭ್ರಮದಲ್ಲಿ ಪಾಲುಗೊಳ್ಳುವ ಹರ್ಷವಿರಲಿಲ್ಲ. ನಿಮಿಷ, ನಿಮಿಷವೂ ಆತಂಕ. ಅಂತೂ ಹೇಗೋ ಗಲಾಟೆಯ, ಮುಜುಗರದ ಮನಸ್ಸಿನಲ್ಲಿ ಲಗ್ನದ ಶಾಸ್ತ್ರ ಮುಗಿಸಿ ನಿಟ್ಟುಸಿರೆಳೆದರು. ಲಗ್ನವಾಗುವಷ್ಟರಲ್ಲಿಯೇ ಎಲ್ಲಿ ಕೆಟ್ಟ ಸುದ್ದಿ ಬಂದು ಮದುವೆ ನಿಂತುಹೋಗುತ್ತೋ ಎಂದು ಭಾಗಮ್ಮ ಗಾಬರಿಯಿಂದ ಪೆಚ್ಚಾಗಿದ್ದರು.
ಚೊಚ್ಚಿಲು ಮಗನ ಮದುವೆಯ ಸಂಭ್ರಮದಿಂದ ವಂಚಿತರಾಗಿ ಎಲ್ಲ ಶಾಸ್ತ್ರಗಳನ್ನೂ ಮೊಟಕು ಮಾಡಿಸಿ ಆಸ್ಪತ್ರೆಯಿಂದ ರಾಮಯ್ಯನವರನ್ನು ಮನೆಗೆ ಕರೆದು ತರುವುದೇ ದೊಡ್ಡ ಕಾರ್ಯಕ್ರಮವಾಗಿ ಹೋಯಿತು ಆ ದಂಪತಿಗಳಿಗೆ.
ಮದುವೆ ಮುಗಿಸಿಕೊಂಡು ಬಂದ ಹದಿನೈದು ದಿನಗಳ ಕಾಲ ಭಾಗಮ್ಮ ಮಂಕಾಗಿ ಕೂತಲ್ಲೇ ಕೂತಿದ್ದರು. ಮನ ‘ಭಣಭಣ’ ಎಂದು ಖಾಲಿ. ಪ್ರದೀಪ ಹುಟ್ಟಿದಂದಿನಿಂದ ಕನಸು ಕಂಡಿದ್ದ, ಆಸೆ ತುಂಬಿಕೊಂಡಿದ್ದ ದಿನ, ಕಳೆದರೆ ಸಾಕೆನ್ನುವ ಹಾಗೆ ಮಾಡಿಬಿಟ್ಟಿದ್ದ ಈ ಚಿಕ್ಕಮಾವನನ್ನು ಕಂಡರೆ ಆಕೆಯ ಮನದ ತುಂಬ ಉರಿ ಭುಗಿಲ್ಲೆನ್ನುತ್ತದೆ. ಆಕೆಯ ಆಸೆಯನ್ನು ಹೂತ ಆತನ ಜೋಲಾಡುವ ಕೈಕಾಲುಗಳನ್ನು ಕಂಡಾಗ, ಅವರ ಇಡೀ ದೇಹವನ್ನು ಕೊಚ್ಚಿ ಹಾಕುವ ರೊಚ್ಚು ಹೆದೆಯಾಡಿಸುತ್ತದೆ.
“ನಾನು ಅವರಿಗೆ ಅನ್ನ ಹಾಕಲ್ಲ.. ಸಾಯ್ಲಿ..” ಎಂದು ಅವಡುಗಚ್ಚಿ ಮೊಂಡಾಗಿ ಆಕೆ ಕುಳಿತರೆ, ಮಕ್ಕಳು ಯಾರಾದರೂ ಚಿಕ್ಕ ತಾತನಿಗೆ ಬಡಿಸುತ್ತಾರೆ. ಭಾಗಮ್ಮ ಸಂಜೆ ದೀಪ ಹಚ್ಚುವ ಸಮಯದಲ್ಲಿ ಅವರನ್ನು ಶಪಿಸುತ್ತ ನೆಟಿಕೆ ಮುರಿಯುವಾಗ ಆಕೆಗೆ ನೆನಪಾಗುತ್ತದೆ. “ತನ್ನ ಶಾಪದ ಫಲವೇ ಇರಬೇಕು ಈತನಿಗೆ ಲಕ್ವ” ಎನಿಸುತ್ತದೆ.
“ಹೂಂ.. ನನ್ನೇನು ಕಡಿಮೆ ಕಾಡಿಸಿದ್ನೇ ಈ ಮುದ್ಕ” ಎಂದು ಆಕೆ ತಮ್ಮ ಹಳೆಯ ದಿನಗಳನ್ನು ತಡಕುತ್ತಾರೆ. ನೆನಪು ಫಕ್ಕನೆ ಬಾಯಿ ಬಿಚ್ಚುತ್ತದೆ.
*****
ಭಾಗಮ್ಮ ಈ ಮನೆಗೆ ಸೊಸೆಯಾಗಿ ಬಂದು ನಲವತ್ತು ವರ್ಷಗಳೇ ಕಳೆದು ಹೋಗಿವೆ. ಹಿರಿಯ ಸೊಸೆ. ಮನೆಯ ಜವಾಬ್ದಾರಿ ಬಹು ಚಿಕ್ಕವಯಸ್ಸಿಗೆ ಅವರ ಹೆಗಲನ್ನೇರಿತ್ತು. ಅತ್ತೆ-ಮಾವರ ಸೇವೆಯ ಜೊತೆಗೆ ಮಕ್ಕಳಿಲ್ಲದ, ಹೆಂಡತಿಯನ್ನು ಕಳೆದುಕೊಂಡ ಚಿಕ್ಕಮಾವನ ಸೇವೆಯ ಜವಾಬ್ದಾರಿಯೂ ಇವರ ತಲೆಯ ಮೇಲೆಯೇ ಬಿತ್ತು.
ಸೌಮ್ಯ ಸ್ವಭಾವದ ಅತ್ತೆ-ಮಾವನ ಹಾಗೆ ರಾಮಯ್ಯನವರು ಇದ್ದಿದ್ದರೆ, ಭಾಗಮ್ಮನವರಿಗೆ ಅವರು ಅತಿ ಆಪ್ತರಾಗಿ ಬಿಡುತ್ತಿದ್ದರೇನೋ. ಆದರೆ ಅವರದು ಅತಿ ಕಿರಿಕಿರಿ ಗಲಾಟೆಯ ಸ್ವಭಾವ. ಅವರ ಗುಣ-ಸ್ವಭಾವ ದಿನದಿನಕ್ಕೆ ಪರಿಚಿತವಾದ ಹಾಗೆ, ಆತನ ಬಗ್ಗೆ ಬೇಸರ ಬೆಳೆಯಿತು ಆಕೆಗೆ.
ಹತ್ತಾರು ವರ್ಷ, ಆಕೆ, ಬಾಯಿ ಬಿಚ್ಚದೆ ಮೌನವಾಗಿ, ಇಷ್ಟವಿಲ್ಲದಿದ್ದರೂ ಅವರ ಕೆಲಸಗಳನ್ನೂ ಮಾಡಬೇಕಾಯಿತು. ಅತ್ತೆ ಮಾವ ಸತ್ತ ಮೇಲೂ ಈತ ತಮ್ಮಲೇ ಉಳಿದಿರುವುದನ್ನು ಸಹಿಸಲಾರದೆ ಭಾಗಮ್ಮ ಗೊಣಗಲು ಶುರುಮಾಡಿದ್ದರು.
“ಥೂ.. ಏನು ದರಿದ್ರ ಜನ್ಮ.. ಬದುಕಿದ್ದೂ ಪುಣ್ಯವಿಲ್ಲ. ಪುರಾಷಾರ್ಥವಿಲ್ಲ.. ಗಂಡು ಅಂದ್ಮೇಲೆ ಒಂದು ಸ್ವಂತ ಕೆಲ್ಸ ಮಾಡ್ಬೇಡ್ವೇ? ಸುಮ್ನೆ ಇನ್ಯಾರೋ ದುಡಿದು ಹಾಕಿದ್ದನ್ನ ದನದ ಹಾಗೆ ಮೇಯೋ ಮನಸ್ಸಾದ್ರೂ ಹೇಗೆ ಬರತ್ತೋ? ಅಥ್ವಾ ಸಂಪಾದಿಸೋ ಯೋಗ್ಯತೆ ಇಲ್ದೇ ಇದ್ರೆ ತೆಪ್ಪಗೆ ಹಾಕಿದ್ದನ್ನು ನುಂಗ್ತಾ ಬಿದ್ದಿರಬೇಕು.. ಮನೆ ಯಜಮಾನರಿಗಿಂತ ಹೆಚ್ಚಿನ ಪಾರುಪತ್ಯೆ, ತಲೆ ಹರಟೆ ಎಲ್ಲ ಯಾಕೆ? ಹೂಂ.. ತಮಗೂ ಸುಖವಿಲ್ಲ.. ತಮ್ಮ ಸುತ್ತಲಿನ ಜನರನ್ನೂ ಸುಖವಾಗಿಟ್ಕೊಳಲ್ಲ.. ಭಂಡಬಾಳು..”
ಬೆಳಕು ಹರಿಯುವುದರಲ್ಲಿ ಸ್ನಾನ ಮುಗಿಸಿ ದೇವರ ಪೂಜೆಗೆ ಕೂಡುತ್ತಿದ್ದ ರಾಮಯ್ಯ, ಪೂಜೆಗೆ ಸಿದ್ಧತೆ ಮಾಡೋದರಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅವರ ಆರ್ಭಟ ಶುರುವಾಗಿ ಬಿಡುತ್ತಿತ್ತು.
“ಲೋ.. ಮಾಧೂ.. ಬಾರೋ ಇಲ್ಲಿ.. ನಿನ್ನ ಹೆಂಡ್ತಿ ಮಾಡಿರೋ ಕೆಲ್ಸ ನೋಡು.. ವಯಸ್ಸು ಬಂದಿರೋದು ದಂಡಕ್ಕೆ, ಕೆಲ್ಸದಲ್ಲಿ ಒಂದು ಮಡೀನೇ, ಅಚ್ಚು ಕಟ್ಟೇ ಒಂದೂ ಕೇಳ್ಬೇಡ. ಎಲ್ಲಾ ಅಧ್ವಾನ್ನ.. ಏನೋ ಕಾಟಾಚಾರಕ್ಕೆ ಎಲ್ಲ ಕುಕ್ಕಿಡ್ತಾಳೆ. ಅಬ್ಬಬ್ಬ.. ಇಂಥ ಬಜಾರೀನ ಅಣ್ಣ, ಸೊಸೆಯಾಗಿ ತಂದು ನಮ್ಮ ವಂಶ ಉದ್ಧಾರ ಮಾಡ್ದ. ಆಚಾರ ವಿಚಾರದ ಗಂಧವೇ ಕಾಣೆ. ಇಂಥದ್ದನ್ನು ಕಟ್ಕೊಂಡು ಬಂದು ಸರಿಯಾದ ಹದ್ದುಬಸ್ತಿನಲ್ಲಿ ಇಟ್ಕೊಳ್ಳದ ಗಂಡ ನೀನೆಂಥ ಗಂಡ್ಸೋ? ಛೀ ಛೀ ಶುದ್ಧ ಹೊಲಸಾಗ್ಹೋಯ್ತು ಮನೆ. ಅದಕ್ಕೇಂತ ಕಾಣತ್ತೆ ಪುಣ್ಯಾತ್ಮರು ಅಣ್ಣ ಅತ್ಗೆ, ಇವಳ ಅನಾಹುತಗಳನ್ನು ನೋಡ್ಲಾರ್ದೆ ಬೇಗ ಕಣ್ಮುಚ್ಚಿಕೊಂಡ್ರು”
ಅಡಿಗೆ ಮನೆಯಲ್ಲಿ ಬೇಳೆ ಬೇಯಲು ಹಾಕಿ, ತರಕಾರಿ ಹೆಚ್ಚುತ್ತ ಕುಳಿತಿರುತ್ತಿದ್ದ ಭಾಗಮ್ಮನಿಗೆ ಬೆಳಗಾಗೆದ್ದು ದೇವರ ಮನೆಯಿಂದ ತೂರಿಬರುವ ಬೈಗುಳ ಕೇಳಿಸಿ ಮುಖ ಕೆಂಪು ಹಂಡೆಯಾಗುತ್ತಿತ್ತು. ಈಳಿಗೆ ಮಣೆಯನ್ನು ಸದ್ದಾಗುವಂತೆ ಜೋರಾಗಿ ದೂರಕ್ಕೆ ನೂಕಿ-
“ಪಾಪ ಮುದ್ಕ ಕೈಲಾಗಲ್ಲ ಅಂತ ಎಲ್ಲ ಸಿದ್ದ ಮಾಡಿಟ್ರೆ ಮಹಾ ಕೊಬ್ಬು.. ಇನ್ನೇನ್ಮತ್ತೆ ಯಾವುದನ್ನು ಎಲ್ಲಿಟ್ಟಿರ್ಬೇಕೋ ಅಲ್ಲಿಟ್ಟಿದ್ದಿದ್ರೆ ಸರಿಯಾಗಿರ್ತಿತ್ತು .. ಅತಿ ಪ್ರಾಶಸ್ತ್ಯ ಕೊಟ್ರೆ ಹೀಗೇ ಆಗೋದು. ಛೇ ಈ ಮುದುಕರು,ಇನ್ನೊಬ್ರು, ಮತ್ತೊಬ್ರು ಅಂತ ಮನೇ ತುಂಬ ಅವರಿವರನ್ನು ತುಂಬಿಸ್ಕೊಂಡ್ರೆ ನಾವು ಬದುಕಿದ ಹಾಗೇ ಇದೆ.. ನಮ್ಮ ಸಂಸಾರ ಎಷ್ಟೋ ಅಷ್ಟು ನೋಡ್ಕೋಬೇಕು ಅಂತ ಇವ್ರಿಗೆ ಎಷ್ಟು ಸಲ ಹೇಳಿದ್ರೂ ಕಿವಿ ಮೇಲೇ ಹಾಕ್ಕೊಳಲ್ಲ. ದರಿದ್ರವುಗಳನ್ನೆಲ್ಲ ಮನೇಲಿ ಸೇರಿಸ್ಕೊಂಡು ಬಿಡ್ತಾರೆ. ಇದೇನು ಛತ್ರ ಕೆಟ್ಹೋಯ್ತೇನೋ.. ಈ ಅನಿಷ್ಟಗಳಿಗೆಲ್ಲ ಯಾರು ಅನ್ನ ಬೇಯ್ಸಿ ಹಾಕ್ತಾರೆ? ಹೂಂ.. ನಾಚಿಕೆಗೆಟ್ಟ ಬಾಳು. ಬಾಯಲ್ಲಿ ಒಂದು ಒಳ್ಳೆ ಮಾತಿಲ್ಲ. ಒಂದು ಸದಾಚಾರವಿಲ್ಲ. ತುಟಿ ತುಂಬ ಪಿಟಿಪಿಟಿ ಮಂತ್ರ. ಗಂಟೆ ಹೊಡೆದಿದ್ದೂ ಹೊಡೆದಿದ್ದೇ. ಚಳಿಗೆ ಆರತಿ ಎತ್ತಿ ಮೈ ಬೆಚ್ಚಗೆ ಮಾಡ್ಕೊಂಡಿದ್ದೂ ಮಾಡ್ಕೊಂಡಿದ್ದೆ. ಎಲ್ಲಾ ಬೂಟಾಟಿಕೆ” ಎಂದು ಗಟ್ಟಿಯಾಗಿ ಅರಚುತ್ತಿದ್ದರು ಭಾಗಮ್ಮ ಅಸಹನೆಯ ಕಟ್ಟೆಯೊಡೆದು.
ಹತ್ತಾರು ವರ್ಷ ತೆಪ್ಪಗೆ ಅಂದದ್ದನ್ನು ಅನ್ನಿಸಿಕೊಂಡು ಬಿದ್ದಿದ್ದ ಭಾಗಮ್ಮನ ಕೋಪ ಅಸಲು, ಬಡ್ಡಿ ಸಮೇತ ಹೊರ ನುಗ್ಗುತ್ತಿತ್ತು. ಒಂದು ಗೋಡೆ ಮರೆಯಾಗಿ ಬಾಯಿ ಬಾಯಿ ಮಿಲಾಯಿಸುತ್ತಿತ್ತು.
“ಎಲ್ಲಾ ಇವಳಾ! ಇವಳ ಗಂಟಲಿಗೆ ಗಾಣ ಹಾಕ! ಕೇಳಿದಿಯೇನೋ ನಿನ್ನ ಘಟವಾಣಿ ಹೆಂಡ್ತೀ ಬಾಯಿನಾ? ಅಬ್ಬಬ್ಬ!.. ಖಂಡಿತ ಇವ್ಳು ಹೆಂಗ್ಸಲ್ಲ.ಕಣೋ. ರಾಕ್ಷಸಿ… ನಮ್ಮ ಕಾಲ್ದಲ್ಲಿ ಹೆಂಗಸ್ರು ಅಂದ್ರೆ ಹೊಸಿಲ ಕೆಳಗೇ ಬಿದ್ದು ಸಾಯ್ತಿದ್ರು. ಎಂದಾದ್ರೂ ಗಂಡಸರೆದುರಿಗೆ ತಲೆ ಎತ್ತಿದ್ದುಂಟೇ? ಅದಕ್ಕೇ ಕಾಲ ಚೆನ್ನಾಗಿತ್ತು. ಈಗ ಇಂಥ ಹೆಣ್ಣುಗಳಿಂದ ದೇಶ, ಮನೆ, ಸಂಸಾರ ಎಲ್ಲ ಕುಲಗೆಟ್ಟು ಹೋಗ್ತಿದೆ. ಏ…ಗಂಡ್ಸೇ ಎದ್ದು ಬಂದು ಅವಳ ಗಂಟ್ಲು ಅದುಮಿ ನಾಲ್ಕು ಬಾರಿಸೋ…ಈ ನಡುವೆ ತುಂಬಾ ಅತಿಯಾಗಿ ಹೋಗಿದೆ. ಈ ಜಾತೀನ ಯಾವತ್ತೂ ಒಂದು ಅಂಕೆ-ಶಂಕೆಯಲ್ಲೇ ಇಟ್ಟಿರ್ಬೇಕು. ಇಲ್ಲದಿದ್ರೆ ಏತಿ ಅಂದ್ರೆ ಪ್ರೇತಿ ಅನ್ನುತ್ವೆ”
ಒಸಡು ಕಚ್ಚಿ ನರಗಳನ್ನು ಹುರಿಗೊಳಿಸಿ ಕಾಲು ಝೂಡಿಸುತ್ತಿದ್ದರು ರಾಮಯ್ಯ.
ಇಷ್ಟರಲ್ಲಿ ಮಾಧವರಾಯರು ಎದ್ದು ಬಂದು ಚಿಕ್ಕಪ್ಪನಿಗೆ ಸಮಾಧಾನ ಹೇಳುತ್ತಿದ್ದರು:
“ಹೋಕ್ಕಳ್ಳಿ ಬಿಡು ಚಿಕ್ಕಪ್ಪ.. ಅವಳ್ಗಂತೂ ಬುದ್ಧಿ ಇಲ್ಲಾಂದ್ರೆ. ನೀನು ದೊಡ್ಡೋನು. ನೀನೂ ಹೀಗೆ ಒದರಾಡೋದೇ.. ನಾಳೆಯಿಂದ ಅವಳ ಮಾತನ್ನು ಕಿವಿ ಮೇಲೆ ಹಾಕ್ಕೊಳ್ಬೇಡ. ವಿವೇಕ ಇರೋ ನೀನು ಅವಳ ಮಾತಿಗೆ ಬೆಲೆ ಕೊಡ್ಬಾರ್ದು”
ಗಂಡನ ನಯವಾದ ಬುದ್ಧಿಮಾತುಗಳನ್ನು ಕೇಳಿದ ತಕ್ಷಣ ಭಾಗಮ್ಮ ಕಣ್ಣಲ್ಲಿ ನೀರು ಕಟ್ಟಿ-
“ಹೂಂ.. ನಂಕೈಲಂತೂ ಈ ಮುದ್ಕನ ಜೊತೆ ಏಗಕ್ಕಾಗಲ್ಲಾಂದ್ರೆ.. ಚಿನ್ನದಂಥ ಅತ್ತೆ, ಮಾವ, ಗಂಡ, ಮಕ್ಳು, ಮರಿ ಸಂಸಾರ ನಂಗೆ ಕಷ್ಟವಾಗ್ಲಿಲ್ಲ. ಈ ಹಾಳು ಮನುಷ್ಯನದೊಂದು ಪೀಡೆ.. ನಿಂತ್ರೆ ತಪ್ಪು, ಕೂತ್ರೆ ತಪ್ಪು. ಮಡಿ ನಿಡಿ ಅಂತ ಹಾರಾಡಿ ಮುಖ ತಿವಿಯುತ್ತೆ. ನನ್ನ ಕಂಡ್ರೆ ಅದಕ್ಕೆ ಮೈಯೆಲ್ಲಾ ಚಿಟಿಚಿಟಿ ಬೆಂಕಿ. ಇನ್ನು ನಾ ಇಲ್ಲೇ ಇದ್ರೆ, ನನ್ನ ಅಂದು ಹೀಗೆ ಹೊಸಕಿ ಹಾಕಿ ತಿಂದ್ಹಾಕಿಬಿಡುತ್ತೆ. ನಾನಿನ್ನು ಈ ಮನೇಲಿ ಒಂದ್ನಿಮಿಷವೂ ಇರಲ್ಲ ಕಣ್ರಿ. ನೀವು ಆ ಮುದಿಯನ ಜೊತೆ ಸಂಸಾರ ಮಾಡ್ಕೊಂಡು ಸುಖವಾಗಿರಿ. ನಾನು, ನನ್ನ ಮಕ್ಳು ನಮ್ಮಪ್ಪನ ಮನೆಗೆ ಹೋಗ್ತೀವಿ” ಎಂದು ಅಳುತ್ತಿದ್ದರು.
ಮಾಧವರಾಯರು ಎಳೇಮಗುವಿನಂತೆ ದಿಕ್ಕುತೋಚದೆ ಬೆಪ್ಪಾಗಿ ಇಬ್ಬಂದಿಯಲ್ಲಿ ಒದ್ದಾಡುತ್ತಿದ್ದರು.
“ನೋಡು, ನನ್ನ ಮಾತು ಕೇಳು ಭಾಗು. ಇವರಿಗೆ ತಾನೆ ನಮ್ಮನ್ನು ಬಿಟ್ರೆ ಬೇರೆ ಯಾರು ದಿಕ್ಕು? ಅಲ್ದೆ ನೀನು ಇವರಿಗೆ ಹೆದರ್ಕೊಂಡು ಅಪ್ಪನ ಮನೆ ಸೇರೋದು, ಒಂದು, ಎರಡು ದಿನದ ಮಾತಲ್ಲ. ಇಡೀ ಜೀವಮಾನದ ಪ್ರಶ್ನೆ. ನೀ ಹೆದರಿದ್ರೆ ಅವರೇ ಜೋರಾಗ್ತಾರೆ. ನೀ ಯಾಕೆ ಓಡ್ಹೋಗ್ಬೇಕು? ಇದು ನಿನ್ನ ಮನೆ ಕಣೆ, ನೀನೇ ಯಜಮಾನ್ತಿ. ಧೈರ್ಯವಾಗಿರು. ನಾಳೆಯಿಂದ ನೀ ಅವರ ಕೆಲಸದ ಸುದ್ದೀಗೇ ಕೈ ಹಾಕ್ಬೇಡ. ಅವರ ಪೂಜೆಗೆಲ್ಲ ನಾ ಅಣಿ ಮಾಡಿಡ್ತೀನಿ ಆಯ್ತಾ, ನೀ ಸುಮ್ನಿರು.”
ಮಾಧವರಾಯರು ಆಡಿದಂತೆ ನಾಲ್ಕು ದಿನ ಮಾಡಿದರು ಅಷ್ಟೆ. ಯಥಾಪ್ರಕಾರ ಭಾಗಮ್ಮನ ಪಾಲಿಗೆ ದೇವರ ಮನೆ ಕೆಲಸ, ಮಡಿಯಲ್ಲಿ ಅಡಿಗೆ. ನಿತ್ಯ ಮಾವ- ಸೊಸೆ ಜಗಳ, ಕಚ್ಚಾಟ ತಪ್ಪಿದ್ದೇ ಇಲ್ಲ.
“ಹೂಂ, ನಮ್ಮ ಮನೆತನದ ಮರ್ಯಾದೆ, ವಂಶ ಕುಲಗೆಟ್ಹೋಯ್ತು. ಒಳ್ಳೆ ಸೊಸೆ ತಂದು ಸುಖಪಟ್ಟೆ” ಎಂದು ಕಂಡಕಂಡವರ ಹತ್ತಿರವೆಲ್ಲ ಹೇಳೋದು ರಾಮಯ್ಯನವರ ದಿನಚರಿ. ಮಕ್ಕಳು ಗಲಾಟೆ ಮಾಡಿದರೆ, ಕೊಳಕು ಮಾಡಿದರೆ ಮೂರು ಮನೆ ಒಂದಾಗುವಂತೆ ಗರ್ಜಿಸುವರು.
“ಬಂದವರೆದುರಿಗೆಲ್ಲ ಮಾನ ತೆಗೀಬೇಡಿ. ಎಲ್ಲಾದ್ರೂ ಹಾಳಾಗಿ ಹೋಗ್ಬಾರ್ದೇ?” ಎಂದು ಭಾಗಮ್ಮ ಅಂದರೆ, “ನೀ ಯಾವೋಳೇ ನನ್ನ ಹೋಗು ಅನ್ನೋಳು, ಇದು ನಮ್ಮನೆ ಕಣೇ. ನೀನೇ ಹೊರಗ್ನಿಂದ ದಿಕ್ಕೆಟ್ಟು ಬಂದೋಳು. ನೀ ಬೇಕಾದ್ರೆ ತೊಲಗು ಆಚೆಗೆ.. ಹೂಂ ನನ್ನ ಸುದ್ದೀಗೇನಾರ ಬಂದ್ರೆ ನಿನ್ನ ಗ್ರಹಚಾರ ಬಿಡಿಸಿಬಿಡ್ತೀನಿ..” ಎಂಬ ಗುಡುಗು.
ಕಡಿಮೆ ಎಂದರೆ ದಿನಕ್ಕೆ ಒಮ್ಮೆಯಾದರೂ ಭಾಗಮ್ಮ ಅಳಲೇಬೇಕಿತ್ತು. ಆಕೆ ಅತ್ತು, ಮೂಗು ಮುಖ ರಂಗು ಮಾಡಿಕೊಂಡಾಗಲೇ ರಾಮಯ್ಯನವರಿಗೂ ಕ್ರೂರ ಸಮಾಧಾನ.
ಸಂಜೆ ಹೊತ್ತು ಆಕೆ ಎಲ್ಲೂ ಹೊರಗೆ ಹೋಗದಂತೆ ಏನಾದರೂ ಕೆಲಸ ಹಚ್ಚುತ್ತಿದ್ದರು.
“ಇವತ್ಯಾಕೋ ನನ್ನ ಮೈ ಬೆಚ್ಚಗಿದೆ. ರಾತ್ರಿ ನಾ ಊಟ ಮಾಡಲ್ಲ. ಈಗಲೇ ಸ್ವಲ್ಪ ಗಂಜಿ ಮಾಡಿಕೊಟ್ಬಿಡು.”
“ಮೈ ಕೈ ನೋವು… ಸ್ವಲ್ಪ ಉಪ್ಪು ಬೆಚ್ಚಗೆ ಮಾಡಿಕೊಡ್ತೀಯಾ?”
“ನಾಳೆ ಪಕ್ಷ. ಬೆಳಗ್ಗೆ ಹೊತ್ತಿಗೆ ಮಡೀ ಪಂಚೆ ಒಣಗಲೇಬೇಕು. ಈಗ್ಲೇ ಮಡಿ ಒಗೆದು, ಒಣಗಿ ಹಾಕ್ಬಿಡು”
“ಬೇಜರಾಗ್ತಿದೆ. ಸ್ವಲ್ಪ ಕುರುಕಲು ಮಾಡಿಕೊಟ್ಟು ಎಲ್ಲಿ ಬೇಕಾದ್ರೂ ಹೋಗು”
ಓಡಾಡೋ ದಿನಗಳಲ್ಲೇ ಎಲ್ಲೂ ಹೋಗಲಿಲ್ಲ ಆಕೆ. ಈಗೇನು ಅರ್ಧ ಆಯುಸ್ಸು ಕಳೆಯಿತು ಅಂತ ಭಾಗಮ್ಮ ಬೆಳಕು ಬಡಿಯಲಿ, ಕತ್ತಲೆ ಕರಗಲಿ ಒಂದೇ ಥರ ಮನೆಯ ದುಡಿತಕ್ಕೆ ಮನ ತೆತ್ತಿದ್ದರು. ತನಗೆ ಈ ಮನೆಗೆಲಸದಿಂದ ಬಿಡುಗಡೆ ಎಂಬುದೇ ಇಲ್ಲ ಎಂದು ಆಕೆಗೆ ಖಚಿತವಾಗಿತ್ತು. ಈ ಮುದುಕನ ಸಾವಿನಿಂದಲೇ ತನ್ನೆಲ್ಲ ಸುಖ ತೆರೆಯಬೇಕೆಂದು ಆಕೆಯ ನಂಬಿಕೆ.
ಒಂದು ಘಳಿಗೆ ರಾಮಯ್ಯನವರ ಗೊಣಗು, ಮುಲುಕು, ಗೊರಕೆ ಕೇಳಬರದೇ ಇದ್ದರೆ ಆಕೆಗೆಷ್ಟೋ ಹಾಯಿ. ಸಂಸಾರ ಬೆಳೆದಂತೆ ತಾವು ಹಣ್ಣಾಗುತ್ತಾ ಬಂದರೂ ಈತ ತಮಗೇ ಭದ್ರವಾಗಿ ಕಚ್ಚಿಕೊಂಡಿರುವುದನ್ನು ಕಂಡಾಗ ಆಕೆಯ ಉಸಿರು ಸಿಕ್ಕಿಹಾಕಿಕೊಂಡ ಹಾಗೆ ಆಗುತ್ತದೆ.
“ಈ ಮುದ್ಕ ಸತ್ತ ದಿನವೇ ತನಗೆ ಮುಕ್ತಿ” ಎಂದು ಆತನ ಸಾವನ್ನು ಹಾರೈಸದ ದಿನವೇ ಇಲ್ಲ. ತೊಲೆಯ ಹಾಗಿದ್ದ ಮನುಷ್ಯ ತಮ್ಮ ಸುಖದ ದಿನಕ್ಕೆ ಮುಳುವಾಗಲು ಕಾದಿದ್ದಂತೆ ಮಗನ ಮದುವೆಯ ಈ ಸುಮುಹೂರ್ತದಲ್ಲೇ ಕೈ ಕಾಲಿಗೆ ಊನ ತಂದುಕೊಂಡು ಆಸ್ಪತ್ರೆಗೆ ಸೇರಿ ಸಡಗರದ ವಾತಾವರಣವನ್ನು ಬಗ್ಗಡ ಮಾಡಬೇಕೇ?
*****
ದೀಪ್ತಿಗೂ ಮದುವೆ ವಯಸ್ಸಾಗುತ್ತಾ ಬಂದಿತ್ತು. ಮಾಧವರಾಯರು ನಾಲ್ಕಾರು ಕಡೆ ಜಾತಕ ಕೊಟ್ಟು ಬಂದರು.
“ನಾವೇನೋ ಇವ್ಳಿಗೆ ಮದ್ವೆಗೆ ನೋಡಿ ಎಲ್ಲ ಸಿದ್ದ ಮಾಡಿಟ್ಕೋತೀವಿ, ಇದರದ್ದೇಳಿ ಸಮಾಚಾರ. ಯಾವ ಘಳಿಗೆಗೆ ಹೇಗೋ ಏನೋ. ಅದಕ್ಕೆ ಇನ್ನೂ ಸ್ವಲ್ಪ ದಿನ ಸುಮ್ಮನಿರಿ. ಇದರದೊಂದು ಕಥೆ ಮುಗಿದ್ರೆ ಸರಾಗ. ಯಾವ ಆತಂಕಾನೂ ಇರಲ್ಲ” ಎಂದು ಭಾಗಮ್ಮ ಗಂಡನೊಡನೆ ನುಡಿದರೆ, ಆತ ಮುಖದಲ್ಲಿ ಬೇಸರ ತೋರಿಸುವರು.
“ನೀ ಸುಮ್ನಿರೇ, ಎಲ್ಲಕ್ಕೆ ಮುಂಚೆ ನೀನೇ ಅಪಶಕುನ ಆಡ್ಬೇಡ.. ಅವರ್ಯಾಕೆ ಸಾಯ್ಬೇಕು? ಚೆನ್ನಾಗಿ ಗುಂಡುಕಲ್ಲಾಗಿದ್ದು, ದೀಪ್ತಿ ತಲೆಯ ಮೇಲೂ ನಾಕು ಅಕ್ಷತೆ ಕಾಳು ಹಾಕಿ ಆಶೀರ್ವಾದ ಮಾಡ್ಲಿ”
“ನಾ ಬೇಡ ಅಂದ್ನೇ? ಅಕ್ಷತೆ ಹಾಕೋ ಹಾಗಿದ್ರೆ ಪರ್ವಾಗಿಲ್ಲ, ಇಲ್ಲದಿದ್ರೆ ಸುಮ್ನೆ ಒದ್ದಾಟ… ಯಾವುದೂ ಖಚಿತ ಇಲ್ಲ”
ರಾಮಯ್ಯನವರ ದೇಹಸ್ಥಿತಿ ಯಾವ ಖಚಿತ ಅಭಿಪ್ರಾಯ-ಭರವಸೆಯನ್ನೂ ಹೊರಗೆಡಹುತ್ತಿರಲಿಲ್ಲ.
ದೀಪ್ತಿಗೆ ಡಾಕ್ಟರ್ ವರ ನಿಶ್ಚಯವಾಯಿತು. ಇನ್ನು ಎರಡು ತಿಂಗಳಿಗೆ ಮದುವೆ. ಮದುವೆಯಾದ ಮೂರು ದಿನಕ್ಕೆ ಅವಳ ಗಂಡ ಆಸ್ಟ್ರೇಲಿಯಾಗೆ ಹೋಗಿ ದೀಪ್ತಿಯನ್ನು ಕರೆಸಿಕೊಳ್ಳುವುದು ಎಂದು ತೀರ್ಮಾನವಾಗಿತ್ತು. ಮದುವೆಗೆ ಸಿದ್ದತೆಗಳೆಲ್ಲ ಪ್ರಾರಂಭವಾಗಿದ್ದವು.
ಲಕ್ವದಿಂದ ಸುಧಾರಿಸಿಕೊಂಡಿದ್ದ ರಾಮಯ್ಯ, ಹಟಮಾಡಿ ಮೊಮ್ಮಗನ ಜೊತೆ ಪಾರ್ಕಿಗೆ ಹೋಗಿ ಆ ದಿನ ಮಳೆಯಲ್ಲಿ ನೆನೆದುಕೊಂಡು ಬಂದಿದ್ದರು. ಅಂದು, ರಾಮಯ್ಯನವರಿಗೆ ಚಳಿ ಜ್ವರ ಪ್ರಾರಂಭವಾಗಿದ್ದು ಹತ್ತು ದಿನಗಳಾಗಿದ್ದರೂ ಇಳಿದಿರಲಿಲ್ಲ. ದಿನಾ ಡಾಕ್ಟರ್ ಬಂದು ಹೋಗುತ್ತಿದ್ದರು. ಬಚ್ಚಲುಮನೆಗೆ ಹೋದಾಗ ಮುಗ್ಗರಿಸಿ ಬಿದ್ದು ಸೊಂಟದ ಮೂಳೆ ಮುರಿದು ಇನ್ನಷ್ಟು ಅವರ ಆರೋಗ್ಯ ಇನ್ನೂ ಬಿಗಡಾಯಿಸಿತು. ಬದುಕುವ ಭರವಸೆ ಇಲ್ಲವೆಂದು ಡಾಕ್ಟರ್ ತಿಳಿಸಿದಾಗ, ಮಾಧವರಾಯರು ಚಿಂತೆಗೆ ತುತ್ತಾದರು. ಸರಿಯಾಗಿ ತಿಂಗಳಿಗೆ ಮಗಳ ಮದುವೆ, ಚಿಕ್ಕಪ್ಪನಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ಪಿತೃಕಾರ್ಯ ಮುಗಿಸಿ ಶುಭಕಾರ್ಯ ಮಾಡಬೇಕಲ್ಲ. ಮನೆಗೆ ಹಿರಿಯ ನೋಡಿ ಸಂತೋಷಪಡುವ ಹಾಗೆ ಗಟ್ಟಿಯಾಗಿದ್ದಿದ್ದರೆ ಚೆನ್ನಾಗಿತ್ತಲ್ಲ ಎಂದು ಅವರ ಮನದಲ್ಲಿ ಯೋಚನೆಯ ಹುತ್ತ.
ಭಾಗಮ್ಮನ ಆಲೋಚನೆ ಇನ್ನೊಂದು ಕವಲು. ಈಗಲೇ ಅವರು ಸತ್ತುಬಿಟ್ಟರೆ, ಸರಿಯಾಗಿ ಹತ್ತು ದಿನ ಸೂತಕ. ಆಮೇಲೆ ಮೈಲಿಗೆ ಕಳೆದು ಇಪ್ಪತ್ತು ದಿನಗಳು ಉಳಿಯುತ್ತವೆ. ನಿರಾತಂಕ..ಇಲ್ಲದಿದ್ದರೆ ಇನ್ನೂ ಹತ್ತೆಂಟು ದಿನ ತಳ್ಳಿ ಸತ್ತರೆ ತಮಗೆ ಇನ್ನೂ ಹೆಚ್ಚಿನ ತೊಂದರೆ .
“ದೇವ್ರೇ, ಪಾಪ ವಯಸ್ಸಾದವರಿಗೆ ಇಂಥ ಕಷ್ಟ ಕೊಡಬಾರ್ದಪ್ಪ. ಹಾಸಿಗೆ ಮೇಲೆ ನರಳಿ ಹೊರಳಿ ಸತ್ರೆ ಆ ಜೀವಕ್ಕೆ ತಾನೇ ಶಾಂತೀನೇ? ಇಷ್ಟ್ ದಿನ ಬಾಳಿ ಬೆಳಗಿದ ಜೀವನದಲ್ಲಿ ಇನ್ನೇನೂ ಉಳಿದಿಲ್ಲ.. ಬದುಕಿದ್ರೆ ಸುಮ್ನೆಅವರಿಗೇ ಬಾಧೆ? ಬೇಗ ನಿನ್ನ ಹತ್ರ ಕರೆದುಕೊಳ್ಳಪ್ಪ ಭಗವಂತ”
ಮದುವೆ ಇನ್ನು ಹದಿನೈದು ದಿನ ಉಳಿದಿವೆ ಎನ್ನುವಾಗ ಭಾಗಮ್ಮನ ಚಡಪಡಿಕೆ ಹೆಚ್ಚಾಯಿತು. ರಾಮಯ್ಯನವರ ಸ್ಥಿತಿಯಲ್ಲಿ ಏರುಪೇರಿಲ್ಲ. ಸದಾ ಕಟ್ಟಿಗೆಯಂತೆ ಒರಗಿರುತ್ತಾರೆ. ಮಲಗಿ ಮಲಗಿ ಬೆನ್ನೆಲ್ಲ ಹುಣ್ಣಾಗಿ ನೀರು ಸುರಿಯಲು ಶುರುವಾಗಿತ್ತು. ದಿನದ ಎರಡು ಹೊತ್ತು ಸ್ಪಂಜ್‍ಬಾತ್ ಕೊಡುವ ಕೆಲಸ ಮಾಧವರಾಯರದೇ. ಮನೆಯಲ್ಲಿ ಹರಡಿದ್ದ ಕೆಲಸಗಳ ಮಧ್ಯೆ ಗಲ್ಲಕ್ಕೆ ಕೈ ಹಚ್ಚಿ ಬೊಂಬೆಯಂತೆ ಕುಳಿತ ಭಾಗಮ್ಮನವರ ಮನಸ್ಸಿನ ಉಗ್ರಾಣದ ತುಂಬ ಬರೀ ಲೆಕ್ಕಗಳ ಮೂಟೆಯೇ. ಮದುವೆಗೆ ಆಗಬೇಕಾದ ಉಳಿದ ಕೆಲಸಗಳ ಬಗ್ಗೆ ಅವರ ಪರಿವೆ ಮುರಿದಂತಿತ್ತು.
“ಇವತ್ತು ಅಂತ ಇಟ್ಕೊಂಡ್ರು ಸೂತಕ ಕಳೆದು ಕೇವಲ ಐದೇ ದಿನ ಉಳಿಯೋದು. ಉಳಿದದ್ದೆಲ್ಲ ಪೂರೈಸುತ್ಯೇ?” ರಾಮಯ್ಯನವರ ಮಂಚದ ಹತ್ತಿರ ನಿಂತು ಕಾದರು. ಕಾದೇ ಕಾದರು. ಆಕೆಯ ತಾಳ್ಮೆಯನ್ನು ಕಡೆಯುವಂತೆ ಮಂಚದ ಕಿರುಗುಟ್ಟುವಿಕೆ ಮೆಲ್ಲಮೆಲ್ಲನೆ ಕೋಣೆಯ ತುಂಬ ವ್ಯಾಪಿಸಿತ್ತು.
ಮದುವೆಗೆ ಹತ್ತೇ ದಿನ ಉಳಿದಾಗ ಭಾಗಮ್ಮ ಹೌಹಾರಿದರು!!. ಎದೆಯ ಬಡಿತ ಢಕ್ಕೆಯಾಯಿತು. ಹತ್ತು ದಿನಗಳ ಮಧ್ಯೆ ಈ ಮುದುಕ ಯಾವಾಗ ‘ಗೊಟಕ್’ ಎಂದರೂ ಮದುವೆ ನಿಂತಂತೆಯೇ. ಹೌದು! ಶಾಶ್ವತವಾಗಿ ನಿಂತಂತೆಯೇ. ಇದೇ ಕಡೇ ಲಗ್ನ ಮುಹೂರ್ತ. ಇನ್ನೇನು ಆಷಾಢಮಾಸ ಪ್ರಾರಂಭವಾಗಿಬಿಡುತ್ತೆ. ಲಗ್ನದ ದಿನಗಳೇ ಇಲ್ಲ. ಅಲ್ಲದೆ ಇನ್ನು ಹದಿಮೂರು ದಿನಕ್ಕೆ ಸರಿಯಾಗಿ ದೀಪ್ತಿಯ ಗಂಡನಾಗುವವ ಆಸ್ಟ್ರೇಲಿಯಾಕ್ಕೆ ಹಾರಿಹೋಗಲಿದ್ದಾನೆ. ಪಾಸ್‍ಪೋರ್ಟ್, ವೀಸಾ ಎಲ್ಲ ಆ ದಿನಕ್ಕೆ ಸಿದ್ದವಾಗಿದೆ. ಮನೆಯಲ್ಲಿ ಈ ಅಶುಭದ ಘಟನೆ ಏನಾದರೂ ಸಂಭವಿಸಿದರೆ ಮತ್ತೆ ಈ ವರ ನಮ್ಮ ಕೈಗೆ ಸಿಕ್ಕುವುದಿಲ್ಲ. ಮದುವೆ ಮುರಿದಂತೆಯೇ ಸರಿ… ಅಯ್ಯೋ ರಾಮ… ಈ ಹಾಳು ಮುದುಕ ನಮ್ಮ ಇಡೀ ಬಾಳನ್ನು ನುಂಗಿದ್ದಾಯ್ತು. ಈಗ್ಲೂ ಕಂಟಕವಾಗಿ ಕಾಡಬೇಕೇ?.. ಬೇಡಪ್ಪ ಬೇಡ ಈ ಮದ್ವೆ ನಿರ್ವಿಘ್ನವಾಗಿ ನಡೆದ್ರೆ ಸಾಕು.
ಆಕೆಯ ಕಣ್ಣಂಚಿನಲ್ಲಿ ಕಾಲುವೆ. ಎದ್ದು ಕೈ, ಕಾಲು ತೊಳೆದುಕೊಂಡು ಬಂದು ದೇವರಸ್ತೋತ್ರ ಹೇಳಿಕೊಳ್ಳಲು ಮೊದಲು ಮಾಡಿದರು.
“ಈ ಮಂಗಳ ಕಾರ್ಯ ಆಗೋವರೆಗಾದ್ರೂ ಇವರಿಗೆ ಆಯಸ್ಸು ದಯಪಾಲಿಸಪ್ಪ ಭಗವಂತ, ಬೇಕಾದ್ರೆ ಮದುವೆ ಮುಗಿದ ಮಾರನೇ ದಿನವೇ ಇವರನ್ನು ಕರ್ಕೊಂಡು ಹೋಗು. ನಾವು ಬೇಡ ಅನ್ನಲ್ಲ.. ಆದ್ರೆ ಈ ಹತ್ತು ದಿನ ಮಾತ್ರ ಅವರನ್ನ ರಕ್ಷಿಸಪ್ಪ. ನಿನ್ನೇ ನಂಬಿದ್ದೀನಿ”-ಎಂದು ದೀನಳಾಗಿ ಬೇಡಿದರು.
ಆ ಹತ್ತು ದಿನವೂ ಆಕೆಯ ಪಾಲಿಗೆ ಹತ್ತು ಯುಗ… ಚಿಕ್ಕಮಾವನನ್ನು ಹಸುಗೂಸಿನಂತೆ ಜೋಪಾನವಾಗಿ ನೋಡಿಕೊಂಡರು. ಹಗಲು-ರಾತ್ರಿ ಭಾಗಮ್ಮ ಆತನ ಮಂಚದ ಬಗಲಲ್ಲೇ ಇದ್ದರು. ವಾತಾವರಣ ಒಂದು ನಿಮಿಷ ಮೌನವಾದರೂ ಎದೆಯಲ್ಲಿ ಗಾಬರಿ. ರಾಮಯ್ಯನವರನ್ನು ಏನಾದರೂ ಪ್ರಶ್ನಿಸಿ, ಮಾತನಾಡಿಸಿ ಅವರ ಉಸಿರ ಚಲನೆ ಕಂಡು ಧೈರ್ಯದ ನಿಟ್ಟುಸಿರು ಎಳೆಯುತ್ತಾರೆ. ಮನೆಯ ತುಂಬ ನೆಂಟರು. ಸಮಾಧಾನದ ಮನಸ್ಸಿನಿಂದ ಬಂದವರನ್ನು ವಿಚಾರಿಸಲು ಭಾಗಮ್ಮನ ಕೈಲಿ ಸಾಧ್ಯವಾಗಲಿಲ್ಲ. ನಗುವೇ ಅವರ ಮುಖದಿಂದ ಅಳಿಸಿಹೋಗಿತ್ತು. ಬರೀ ಯೋಚನೆಯ ಪದರುಗಳು.
ವರಪೂಜೆ ರಾತ್ರಿ- ರಾಮಯ್ಯನವರು ಸಾವಿನ ಹೊಸ್ತಿಲಲ್ಲಿದ್ದರು. ಹಾಲು, ನೀರೂ ಕೂಡ ಒಳಗಿಳಿಯದಾಯಿತು. ಮನೆಯಲ್ಲಿ ಬಿಟ್ಟು ಬಂದರೆ ಅಲ್ಲಿ ಯಾರು ನೋಡಿಕೊಳ್ಳುವವರು ಎಂದು ಭಾಗಮ್ಮ ತಾವೇ ನೋಡಿಕೊಳ್ಳುವುದಾಗಿ ಹೇಳಿ ರಾಮಯ್ಯನನ್ನು ಛತ್ರಕ್ಕೆ ಕರೆತಂದು ಒಂದು ಕೋಣೆಯಲ್ಲಿ ಮಂಚ ಹಾಕಿಸಿ ಅವರಿಗೆ ವ್ಯವಸ್ಥೆ ಮಾಡಿಸಿದ್ದರು.
“ಆಸ್ಪತ್ರೆಗಾದರೂ ಸೇರಿಸೋಣ ಭಾಗೂ.. ಇಲ್ದಿದ್ರೆ ಎಲ್ರಿಗೂ ಗಾಬ್ರಿ, ನಿಂಗೂ ಇಲ್ಲೇ ಮನಸ್ಸು” ಎಂದ ಗಂಡನ ಮಾತನ್ನು ಒರೆಸಿ-“ಬೇಡ…ಈ ಗಲಾಟೇಲಿ ಅಲ್ಯಾರು ಹೋಗೋರು? ಅಲ್ದೇ ನಂಗದೇ ಯೋಚ್ನೆ ಆಗುತ್ತೆ, ಇಲ್ಲಿದ್ರೆ ಅವರ ಪರಿಸ್ಥಿತಿ ಸದಾ ಗಮನಿಸ್ತಿರಬಹುದು” ಎಂದಿದ್ದರಾಕೆ.
ಇಡೀ ರಾತ್ರಿ ರಾಮಯ್ಯನವರು ಸಾವಿನ ತಕ್ಕಡಿಯಲ್ಲಿ ತೂಗಾಡುತ್ತಿದ್ದರು. ದಂಪತಿಗಳಿಬ್ಬರೂ ಅವರ ಆಚೆ ಈಚೆ. ಭಾಗಮ್ಮ ರೆಪ್ಪೆಗೆ ರೆಪ್ಪೆಯನ್ನು ತಾಗಿಸಲಿಲ್ಲ. ರಾತ್ರಿ ಕಳೆಯುವುದರಲ್ಲಿ ಆಕೆ ಎರಡು ಮುಡಿಪು ಕಟ್ಟಿಟ್ಟು ಅನೇಕ ದೇವರುಗಳಿಗೆ ಹರಕೆ ಹೊತ್ತಿದ್ದರು. “ಈ ಕುತ್ತಿನಿಂದ ಪಾರು ಮಾಡಪ್ಪ ದೇವ್ರೇ’’ ಎಂಬ ಒಂದೇ ಜಪ.
ಬೆಳಕು ಹುಟ್ಟುವುದರಲ್ಲಿ ಕಲಕಲ ಮಾತು. ವಾಲಗದ ಸದ್ದು. ನೆಂಟರು, ಬೀಗರ ಓಡಾಟ. ನಗು, ಮಾತುಕತೆ. ನಿಧಾನವಾಗಿ ಮದುವೆ ಮನೆಯ ತುಂಬಾ ಚಟುವಟಿಕೆ, ಸಡಗರ ಹರಡಿತು.
ರಮ್ಯ, ಅಲಂಕಾರ ಮುಗಿಸಿ ದೀಪ್ತಿಗೆ ತುರುಬು ಕಟ್ಟಿ ಹೂ ಮೂಡಿಸುತ್ತಿದ್ದಳು. ಸುಚಿತ್ರ ನೆರಿಗೆ ಚಿಮ್ಮುತ್ತ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ವೀಕ್ಷಿಸಿಕೊಂಡು ಸರಸರನೆ ಮಹಡಿ ಹತ್ತಿದಳು. ಪ್ರಮೋದ ಕ್ರಾಪ್ ಬಾಚಿಕೊಳ್ಳುವುದರಲ್ಲಿ ಮಗ್ನ.
“ಅತ್ತೆ, ಬೇಗ ಸೀರೆ ಉಟ್ಕೊಳ್ಳಿ… ಪುರೋಹಿತರು ಕರೀತಿದ್ದಾರೆ’’-ಸೊಸೆ ಸೌಮ್ಯಳ ದನಿಯಲ್ಲಿ ಸಡಗರ.
ಭಾಗಮ್ಮನಿಗೆ ಯಾವುದೂ ಬೇಡವಾಗಿತ್ತು. ನಿರುತ್ಸಾಹದಿಂದ ನಿಧಾನವಾಗಿ ಎದ್ದುಹೋದರು. ಪ್ರದೀಪ, ಮಾಧವರಾಯರು ನಾಲ್ಕಾರು ಬಾರಿ ರಾಮಯ್ಯನವರನ್ನು ವಿಚಾರಿಸಿಕೊಂಡು ಒಳ ಹೊರಗೆ ಓಡಾಡುತ್ತಲಿದ್ದರು.
ಧಾರೆಯ ಮಂಟಪದಲ್ಲೂ ರಾಮಯ್ಯ ಎಳೆಯುತ್ತಿರಬಹುದಾದ ಕೊನೆಯ ಉಸಿರನ್ನು ನೆನೆಸಿಕೊಂಡು ಭಾಗಮ್ಮನ ಮನಸ್ಸು ಉದ್ವಿಗ್ನವಾಯಿತು.
“ಬೇಗ ಬೇಗ ಮುಗ್ಸಿ’ ಎಂದು ಪುರೋಹಿತರಿಗೆ ಹೇಳಿದರು.
ಲಗ್ನ ಮುಗಿಯುವವರೆಗೂ ಭಾಗಮ್ಮನಿಗೂ, ರಾಮಯ್ಯನವರ ಕೋಣೆಗೂ ಬಿಡದ ನಂಟು. ಮಾಂಗಲ್ಯಧಾರಣೆ ನಡೆಯುತ್ತಿದ್ದ ಹಾಗೆ ಭಾಗಮ್ಮ ಕಬ್ಬಿಣದ ಕಟ್ಟುಗಳ ಹೊರೆಯನ್ನು ಇಳಿಸಿದ ದೊಡ್ಡ ನಿಟ್ಟುಸಿರು ಹೊರಗೆಸೆದು ನಿರಾಳವಾಗಿ ಕುಕ್ಕರಿಸಿದರು.
ಹತ್ತು ಹದಿನೈದು ನಿಮಿಷಗಳು ಬರೀ ನಿಟ್ಟುಸಿರ ಮಾಲೆ…. ಅವರ ಎದೆಯ ಸುಸ್ತು ಕಳೆಯಲು ಅರ್ಧಗಂಟೆಯೇ ಹಿಡಿಯಿತು. ಅಲ್ಲಿಂದ ಮುಂದೆ ಆಕೆ ಸಂತೋಷವಾಗಿ ಓಡಾಡಿದರು. ರಿಸೆಪ್ಷನ್ ಊಟ ಆಗುವವರೆಗೂ ಆಕೆ ರಾಮಯ್ಯನ ಕೋಣೆಯ ಕಡೆ ಅಪ್ಪಿತಪ್ಪಿಯೂ ಸುಳಿಯಲಿಲ್ಲ.
ಇದುವರೆಗೂ ಆತನ ಬಗ್ಗೆ ಇದ್ದ ಕಡು ಆಸಕ್ತಿ, ಗಮನ ಈಗ ದ್ವೇಷವಾಗಿ ಪರಿವರ್ತಿತವಾಯಿತು. ಆತನ ಆರೋಗ್ಯದ ಪರಿಸ್ಥಿತಿಯನ್ನು ನೆನೆಸಿಕೊಳ್ಳಲ್ಲಿಚ್ಚಿಸದೆ ಮುಕ್ತವಾಗಿ ನಕ್ಕರು, ಸಂತಸದಿಂದ ಮಾತಾಡಿದರು, ಬೀಗರಿಗೆ ನಿರಮ್ಮಳವಾಗಿ ಉಪಚಾರ ಮಾಡಿದರು.
ರಾತ್ರಿ- ಸಂತೋಷಕ್ಕೆ ಭಾಗಮ್ಮನಿಗೆ ನಿದ್ದೆಯೇ ಬರಲಿಲ್ಲ. “ಈ ಮುದ್ಕ ಹೇಗೆ ಇಡೀ ಮದುವೆ ಮನೆಯ ಸಡಗರವನ್ನೇ ನಿಯಂತ್ರಿಸಿದನಲ್ಲ!” ಎಂಬ ಕೋಪ-ಕೌತುಕ!!!.
“ಹೂಂ… ನಾಳೆಯಿಂದ ಈತನ ಮುಲಾಜೇನು! ನಾಳೆ ಏಕೆ, ಈಗ್ಲೇ ಬೇಕಾದ್ರೆ ಸಾಯ್ಲಿ, ನನ್ನದೇನೂ ಅಭ್ಯಂತರವಿಲ್ಲ” ಎಂದು ಹತ್ತು ಬಾರಿ ಹೇಳಿಕೊಂಡರು.
ಮರುದಿನ-ಬೀಗರ ಔತಣ ಮುಗಿದು, ಅವರು ಹೊರಟು, ತಮ್ಮ ಮನೆಗೆ ಸಾಮಾನು ಸಾಗಿಸುತ್ತಿರುವಾಗ ಭಾಗಮ್ಮ ಮೆಲ್ಲನೆ ಒಮ್ಮೆ ಚಿಕ್ಕಮಾವ ಮಲಗಿದ್ದ ಕೋಣೆಯೊಳಗೆ ಹಣಕು ಹಾಕಿದರು.
ರಾಮಯ್ಯನವರು ಹಾಯಾಗಿ ಒರೆಗುದಿಂಬಿಗೆ ಅರ್ಧ ಒರಗಿದಂತೆ ಮಲಗಿ, ದಿವ್ಯ ಕೊಟ್ಟ ಹಾಲಿನ ಲೋಟವನ್ನು ತುಟಿಗೆ ತಗುಲಿಸಿದ್ದರು.
************************
4 comments
ಕಥೆ ಆತಂಕವನ್ನು ಸೃಷ್ಟಿಸಿ ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುತ್ತದೆ.ಅದೆಷ್ಟೋ ಮನೆಗಳಲ್ಲಿ ಮಡೆಯುವ ಕಥೆ.ಬಾಗಮ್ಮನ ಬದುಕು ಹೀಗೊಬ್ಬ ಮುದುಕನ ಆರೈಕೆಯಲ್ಲಿ ಕಳೆಯಬೇಕಾದ ಬಗ್ಗೆ ಒಂದು ರೀತಿಯ ಕನಿಕರವೂ ಮೂಡುತ್ತದೆ.ಉತ್ತಮ ಕಥೆ.ಅಭಿನಂದನೆಗಳು👌🏻🙏
ಆತ್ಮೀಯ ಶ್ರೀಪ್ರಕಾಶ್ ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಅನೇಕ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆಯೇ ನಿರಂತರವಾಗಿರಲಿ. ವಂದನೆಗಳು.
Taanondu bagedare maanava 2 kathenuu tumbaa chennagide
ಅನಂತ ನಮನಗಳು. ಇದೇ ರೀತಿ ಪ್ರೋತ್ಸಾಹ ನಿರಂತರವಿರಲಿ.