Image default
Articles

ರಂಗಕರ್ಮಿ ಅಬ್ಬೂರು ಜಯತೀರ್ಥ ಅವರ ಜೀವನ ಮತ್ತು ಸಾಧನೆಗಳ ಒಂದು ಪಕ್ಷಿನೋಟ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಚೆನ್ನಪಟ್ಟಣದಿಂದ ಅನತಿ ದೂರದಲ್ಲಿರುವ “ಅಬ್ಬೂರು” ಗ್ರಾಮವು ವೈಷ್ಣವರಿಗೆ ಪರಮ ಪವಿತ್ರ ಕ್ಷೇತ್ರ. ಇಲ್ಲಿ ಗುರು ಬ್ರಹ್ಮಣ್ಯ ತೀರ್ಥರ ಬೃಂದಾವನವಿದೆ. ಇಲ್ಲೇ ಎಂಟು ದಶಕಗಳ ಹಿಂದೆ (29-11-1939) “ಜಯತೀರ್ಥ” ಎಂಬ ಕಲಾಕುಸುಮವೊಂದು ಜನಿಸಿತು.

ತಂದೆ ಶ್ರೀ ಸೇತುಮಾಧವ ರಾವ್, ಸಂಸ್ಕೃತ ಪಂಡಿತರೂ ಮತ್ತು ವೇದಾಂತಿಗಳೂ ಆಗಿದ್ದರು. ಇದಲ್ಲದೆ ಗಾಯಕರಾಗಿ,  ಲೆಗ್ ಹಾರ್ಮೋನಿಯಂ ಮತ್ತು ಕೊಳಲು ವಾದಕರಾಗಿಯೂ ಇದ್ದರು. ಅವರು ರಂಗ ಕಲಾವಿದರೂ ಕೂಡ . ನಾಟಕ ತಂಡವನ್ನು ಕಟ್ಟಿ, ನಿರ್ದೇಶಿಸಿ, ತಾವೂ ನಟಿಸುತ್ತಿದ್ದರು. ತಾಯಿ ಸುಶೀಲಾಬಾಯಿ ಅವರು ಖ್ಯಾತ ಸಂಗೀತಗಾರರಾಗಿದ್ದ ಭೈರವಿ ನಾರಾಯಣಪ್ಪನವರ ಸಹೋದರ, ನಟ ವೆಂಕಟರಾಮಯ್ಯನವರ ಪುತ್ರಿ.  ಹಾಗಾಗಿ ವೇದಾಂತ, ಸಾಹಿತ್ಯ, ಸಂಗೀತ ಮತ್ತು ಅಭಿನಯ ಕಲೆಗಳು ಶ್ರೀ ಜಯತೀರ್ಥರಿಗೆ ರಕ್ತಗತವಾಗಿಯೇ ಬಂದವು.

ವೃತ್ತಿ – ಪ್ರವೃತ್ತಿ

ಪ್ರೌಢ ಶಾಲೆಯ ಓದಿನ ನಂತರ ಬೆಂಗಳೂರಿನಲ್ಲಿ ಬಿ.ಕಾಮ್ ಮತ್ತು ಎಲ್.ಎಲ್.ಬಿ. ಪದವೀಧರರಾದರು. ಬಾಲ್ಯದಿಂದಲೂ ನಾಟಕಾಸಕ್ತರಾದ ಜಯತೀರ್ಥ ಶಾಲಾ-ಕಾಲೇಜಿನ ದಿನಗಳಲ್ಲೂ ಅದನ್ನು ಮುಂದುವರಿಸಿಕೊಂಡು ಹೋದರು.  ಇಲ್ಲಿಯೂ ಸಹ ನಾಟಕಗಳಲ್ಲಿ ನಟಿಸುತ್ತಿದ್ದರು. 1958 ರಲ್ಲಿ ‘ಕನ್ನಡ ಸಾಹಿತ್ಯ ಕಲಾಸಂಘ’ ಸ್ಥಾಪಿತವಾಗಿ “ನಾಟ್ಯ ದರ್ಪಣ” ಎಂಬ ತಂಡದ ಹೆಸರಿನಲ್ಲಿ ಅನೇಕ ನಾಟಕಗಳು ಪ್ರದರ್ಶಿಸಲ್ಪಡಲಾರಂಭಿತು.. ಸಾಹಿತ್ಯ ಸಂಘದಲ್ಲಿ ನಾಟಕಗಳ ಅಧ್ಯಯನ ಮತ್ತು ರಚನಾ ಚಟುವಟಿಕೆಗಳು ನಡೆಯುತ್ತಿದ್ದವು.

ಒಂದು ನಾಟಕ ಪ್ರದರ್ಶನದಲ್ಲಿ ನಾಟಕಕ್ಕೆ ಅಗತ್ಯವಾದ ಬೆಳಕು ಮತ್ತು ಧ್ವನಿಯ ಪಾತ್ರ ಬಹು ಮುಖ್ಯವಾದುದು. ಆಗಿನ ಕಾಲದಲ್ಲೇ ಒಂದು ಧ್ವನಿಮುದ್ರಣ ಯಂತ್ರವನ್ನು 800 ರೂಗಳಿಗೆ  ಖರೀದಿಸಿ ಜೋರು ಜಲಪಾತದ ರಭಸ, ಹಕ್ಕಿಯ ಇಂಚರ, ಝಡಿಯುವ ಮಳೆ, ರೈಲು, ಬಸ್, ಕಾರ್, ಆಟೋ ಸ್ಕೂಟರ್, ಮುಂತಾದವುಗಳ ಚಲನೆಯ ಶಬ್ದಗಳೆಲ್ಲವನ್ನೂ ನಾಟಕಗಳಿಗೆ ಹಿನ್ನಲೆಯ ಪರಿಣಾಮವಾಗಿ ಬಳಸಿಕೊಂಡರು. ನಾಟಕಗಳಿಗೆ ಅಗತ್ಯವಾದ ಧ್ವನಿ ಮತ್ತು ಬೆಳಕಿನ ನೆರವು ನೀಡುವ ಕಲೆಯಲ್ಲಿ ಸಿದ್ಧಹಸ್ತರಾದರು. ಇದಲ್ಲದೆ, ಗಾಯನ ಮತ್ತು ವಾದ್ಯ ಸಂಗೀತಗಳನ್ನು ಬಳಸಿ ನಾಟಕಗಳಲ್ಲಿನ  ನವರಸ ಸನ್ನಿವೇಶಗಳಿಗೆ ಅಳವಡಿಸುವ ಕಲೆಯನ್ನೂ ಕರಗತಮಾಡಿಕೊಂಡರು. ಒಟ್ಟಾರೆ,  ಆಸಕ್ತಿ-ಸಾಧನೆ-ನಿರಂತರ ಕಲಿಕೆಯಿದ್ದಲ್ಲಿ ಏನನ್ನೂ ಬೇಕಾದರೂ ಸಾಧಿಸಬಹುದೆಂಬುದಕ್ಕೆ ಅಬ್ಬೂರವರೇ ನಿದರ್ಶನ.

ಕೆಲಕಾಲ ರಾಜಾಮಿಲ್ ನಲ್ಲಿ ಉದ್ಯೋಗ ಮಾಡಿದ ನಂತರ, ಇವರ ನಾಟಕ ಕಲೆಯ ಆಧಾರದ ಮೇಲೆಯೇ ಕೇಂದ್ರ ಸರ್ಕಾರದ AG ಕಛೇರಿಗೆ ಸೇರ್ಪಡೆಯಾಗಿ ವೃತ್ತಿ ಆರಂಭಿಸಿದರು. ಇಲ್ಲಿ ಹಲವಾರು ವರ್ಷಗಳ ಕಾಲ ತಮಿಳು ನಾಟಕಗಳೇ ಆಡಲ್ಪಡುತ್ತಿದ್ದವು. “ಅಬ್ಬೂರು” ಎಂದೇ ಕರೆಯಲ್ಪಡುತ್ತಿದ್ದ ಶ್ರೀಯುತರು ಆ ನಾಟಕಗಳಿಗೂ ರಂಗ ಸಜ್ಜಿಕೆಗೆ ಸಹಾಯ ಹಸ್ತ ನೀಡುತ್ತಿದ್ದರು. ಇವರ ಹಿರಿಯ ಸಹೋದ್ಯೋಗಿಗಳಾಗಿದ್ದ ಶ್ರೀ ವೈ.ವಿ. ಶ್ರೀನಿವಾಸ ರಾವ್, ರಾಜಾರಾವ್, H S ವಿಶ್ವನಾಥ್ ಮುಂತಾದವರ ಕನ್ನಡ ಪ್ರೀತಿಯ ಒತ್ತಾಯದಿಂದ ತಾವೇ ಮುಂದಾಗಿ, ಕನ್ನಡ ನಾಟಕಗಳನ್ನು ಕೈಗೆತ್ತಿಕೊಂಡು ನಿರ್ದೇಶನ ಮಾಡುವ, ಯಶಸ್ವೀ  ಪ್ರದರ್ಶನಗಳನ್ನು ನೀಡುವ ಸಾಹಸಕ್ಕೆ ಸಜ್ಜಾದರು.

ಅಂದು ಅವರ ಸಹೋದ್ಯೋಗಿಗಳು  ಬಿತ್ತಿದ ಬೀಜವೇ  ಹೆಮ್ಮರವಾಗಿ ಬೆಳೆಯಿತು. ಕಛೇರಿಯ ಸಾಂಸ್ಕೃತಿಕ ಸಂಘದ ವತಿಯಿಂದ ಅನೇಕ ಸಂಗೀತ ಮತ್ತು ನಾಟಕ ಉತ್ಸವಗಳು ಒಂದರ ಹಿಂದೊಂದು ನಿರಂತರವಾಗಿ ಸಾಗಿದವು. ಅನೇಕ ಸ್ಪರ್ಧೆಗಳಲ್ಲಿ ಈ ತಂಡಕ್ಕೆ ಪ್ರಥಮ ಬಹುಮಾನಗಳು ದೊರಕಿದವು.

ಮಧ್ಯಾಹ್ನದ ವಿರಾಮ ವೇಳೆಗಳಲ್ಲಿ ಸಂಗೀತ ಮತ್ತು ನಾಟಕಗಳು ನಡೆಯುತಿದ್ದವು. ತಮ್ಮ ಸ್ಥಳಗಳನ್ನು ಕಾದಿರಿಸಿಕೊಳ್ಳಲು ಪ್ರೇಕ್ಷಕರು ಒಂದು ಗಂಟೆಕಾಲ ಮುಂಚಿತವಾಗಿ ಆಗಮಿಸಿ ತಾವು ತಂದಿದ್ದ ತಿಂಡಿ – ಊಟಗಳನ್ನು ಅಲ್ಲೇ ತಿಂದು, ಕಾರ್ಯಕ್ರಮಗಳನ್ನು ಆಸಕ್ತಿಯಿಂದ ವೀಕ್ಷಿಸುತ್ತಿದ್ದ ಪರಿ ಅಬ್ಬೂರವರ ನಾಟಕಗಳ ಗುಣಮಟಕ್ಕೆ ಸಾಕ್ಷಿಯಾದವು. ಹೀಗೆ ತಮ್ಮ ಕಛೇರಿಯಲ್ಲಿ ಉತ್ತಮ ಪ್ರೇಕ್ಷಕರನ್ನು ರೂಪುಗೊಳಿಸಿದ ಕೀರ್ತಿ ಅಬ್ಬೂರು ಅವರಿಗೇ ಸಲ್ಲುತ್ತದೆ.

ಇಲ್ಲಿ ಹಯವದನ, ಮಾನಿಷಾದ, ಸದ್ದು ವಿಚಾರಣೆ ನಡಿತಾ ಇದೆ, ಮಾರೀಚನ ಬಂಧುಗಳು, ಹೆಜ್ಜೆಗಳು, ದೊಡ್ಡಪ್ಪ, ಲಂಚಾಮೃತ, ದೆವ್ವದ ಮನೆ, ಹಕ್ಕಿ ಹಾರುತಿದೆ ನೋಡಿದಿರಾ, ಗಿಳಿಯು ಪಂಜರದೊಳಿಲ್ಲ, ಹೃದಯ ದೇಗುಲ, ಕೈಲಾಸಂ ನಾಟಕಗಳ ಸರಣಿ, ಅಮ್ಮ ರಿಟೈರ್ ಆಗ್ತಾಳೆ, ಕತ್ತಲೆ ಬೆಳಕು, ಅಪೂರ್ಣ ರಾಮಾಯಣ, ಖರೋಖರ, ಸಾಕ್ಷಿ ಕಲ್ಲು, ಸಾಯೋ ಆಟ, ಬಹದ್ದೂರ್ ಗಂಡು,  ಮುಂತಾದ ನಾಟಕಗಳು, ಇವರ ನಿರ್ದೇಶನದಲ್ಲಿ ಪ್ರದರ್ಶಿಸಲ್ಪಟ್ಟವು.

 “ಬಾದಾಮ್ ರಾಣಿ ಚೌಪಟ್ ಗುಲಾಮ್”  ನಾಟಕದಲ್ಲಿ ಬೊಕ್ಕತಲೆಯ ಅಬ್ಬೂರ್ ಟೋಫನ್ ಧರಿಸಿ ಯುವಕನ ಪಾತ್ರವಹಿಸಿದ್ದು ಸ್ಮರಣೀಯ. 

ಇದಲ್ಲದೆ ವಿಶ್ವೇಶ್ವರ ಭಟ್ ಹಾಗು ಶ್ರೀಮತಿ ಸುಧಾ ಮೂರ್ತಿ ಅವರ ಕಥೆಗಳಿಂದ ಪ್ರೇರಿತರಾಗಿ “ದೇವರೆಲ್ಲಿದ್ದಾನೆ” ಎಂಬ ನಾಟಕವನ್ನು ರಚಿಸಿ ಅದು ಅನೇಕ ಯಶಸ್ವಿ ಪ್ರದರ್ಶನಗಳನ್ನು ಕಂಡಿತು.

ಇವರ ಗರಡಿಯಲ್ಲಿ ಪಳಗಿದ ಶ್ರೀ/ಶ್ರೀಮತಿ. ನಳಿನಾಮೂರ್ತಿ, ಕೃಷ್ಣೇ ಗೌಡ , ರಿಚರ್ಡ್ಸ್ ಲೂಯಿಸ್, ಮುಂತಾದವರು ಕಿರು ಮತ್ತು ಬೆಳ್ಳಿ ತೆರೆಗಳ ಮೇಲೆ ಮಿಂಚಿ ಖ್ಯಾತರಾದರು.

ನಟನೆ, ರಂಗಸಜ್ಜಿಕೆ, ಹಿಮ್ಮೇಳಗಳಲ್ಲಿ ಭಾಗವಹಿಸುತ್ತಿದ್ದ ಅಕೌಂಟೆಂಟ್  ಜನರಲ್ ಕಛೇರಿಯ ದೊಡ್ಡ ತಂಡವೇ ಇತ್ತು. ಅವರೆಂದರೆ ಶ್ರೀ/ಶ್ರೀಮತಿ. ಬಸವರಾಜ್, ಲೀಲಾ ಬಸವರಾಜ್, ಮಹದೇವಯ್ಯ, ಹಿರಿಯೂರು ನಾಗೇಂದ್ರ, ಹೊ ನ. ಚಂದ್ರಶೇಖರ, ಬಿ.ವಿ ಮಂಜುನಾಥ್, ವಿ ರವೀಂದ್ರ, ಆರ್.ಎಸ್.ಗುರುರಾಜ್, ಎಸ್ ರಾಧಾಕೃಷ್ಣ, ಗೋಪಾಲರಾವ್, ಟಿ.ಗೋಪಾಲ್, ಶಿವಲಿಂಗಯ್ಯ, ಜಿ ಪಿ  ನಾಗರಾಜನ್, ರವಿ, ಪದ್ಮಲತಾ, ಪ್ರದೀಪ್, ಶ್ರೀಕಾಂತ್, ಶಿವಪ್ರಿಯಾ, ರಾಜೇಶ್ವರಿಗುಪ್ತ, ಪ್ರಭಾಮಣಿ, ವೆಂಕಟೇಶ್, ಮೋಹನ್ ರಾಜ್, ಬಿ.ವಿ. ಹರೀಶ್, ಜಿ. ಗಂಗಾಧರಯ್ಯ, ಎ. ಕೃಷ್ಣ ಮುಂತಾದವರು.

ಹಲವಾರು ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡುವ ಸೌಭಾಗ್ಯ ಅಬ್ಬೂರು ಅವರ ಸಹೋದ್ಯೋಗಿಯಾಗಿದ್ದ ನನಗೂ ದೊರಕಿತು.

70ರ ದಶಕ ಕನ್ನಡ ನಾಟಕ ಪ್ರದರ್ಶನಗಳ ಸುವರ್ಣಯುಗ. ನಾಟಕ ಪ್ರದರ್ಶನಗಳು ಹೇರಳವಾಗಿ ವಿಜೃಂಭಿಸಿದ ಕಾಲ.  ಆ ಕಾಲಘಟ್ಟದಲ್ಲಿ ಹೆಸರಾಂತ ತಮಿಳು ನಟರಾದ ವಿ.ಮನೋಹರ್ ಮತ್ತು ಸಾರಂಗ ಪಾಣಿ ಮುಂತಾದ ಕಲಾವಿದರು ಅನೇಕ ತಮಿಳು ಪೌರಾಣಿಕ ನಾಟಕಗಳನ್ನು ವಿಸ್ಮಯಕಾರಿ ತಂತ್ರಗಾರಿಕೆ ಮೂಲಕ ಪ್ರೇಕ್ಷಕರಲ್ಲಿ ಒಂದು ಭ್ರಾಮಕ ಕನಸಿನ ವಾತಾವರಣವನ್ನು ಕಟ್ಟಿಕೊಡುತ್ತಿದ್ದರು. ಅವುಗಳನ್ನೆಲ್ಲ ಗಮನಿಸಿ ನಮ್ಮ ಕನ್ನಡ ನಾಟಕಗಳ ಅಗತ್ಯತೆಗೆ ತಕ್ಕಂತೆ ಅವುಗಳನ್ನು ಕನ್ನಡ ನಾಟಕಗಳ ಸಂದರ್ಭಕ್ಕೆ ಅಳವಡಿಸಿಕೊಂಡ ಜಾಣ್ಮೆ ಅಬ್ಬೂರರದು.

ಆದ್ಯ ರಂಗಾಚಾರ್ಯರ “ನೀ ಕೊಡೆ ನಾ ಬಿಡೆ” ನಾಟಕವನ್ನು ನಿರ್ದೇಶಿಸಲು ಹೆಸರಾಂತ ರಂಗನಿರ್ದೇಶಕ ಶ್ರೀ ಬಿ. ವಿ. ಕಾರಂತ್ ರವರನ್ನು  ದೆಹಲಿಯಿಂದ ಬೆಂಗಳೂರಿಗೆ ತಂದವರಲ್ಲಿ ಅಬ್ಬೂರರ ಪಾತ್ರವೂ ಇದೆ. ಕಾರಂತರು ನಿರ್ದೇಶಿಸಬೇಕಾಗಿದ್ದ “ಆಷಾಢದಲ್ಲಿ ಒಂದು ದಿನ” ನಾಟಕಕ್ಕೆ ಅವರು ಬರಲಾಗದಾಗ ಅಬ್ಬೂರು ಅವರೇ ಅವರ ಅನುಪಸ್ಥಿತಿಯಲ್ಲಿ ಆ ನಾಟಕದ ನಿರ್ದೇಶನದ ಸಾಹಸಕ್ಕಿಳಿದು ಎಲ್ಲರ ಮೆಚ್ಚುಗೆಯನ್ನು ಪಡೆದರು. 

ಅಂದಿನ ರಂಗಭೂಮಿ ದಿಗ್ಗಜರಾಗಿದ್ದ ಸರ್ವಶ್ರೀ ಬಿ.ವಿ.ಕಾರಂತ್, ನಾಣಿ, ಬೀ.ಸಿ, ಶಂಕರನಾಗ್, ಜಯಶ್ರೀ, ಲಂಕೇಶ್ ಅವರ ನಿಕಟ ಸಂಪರ್ಕದಿಂದ ಅವರುಗಳಿಂದ ಅಪಾರ ಅನುಭವಗಳಿಸಿ ಮೆಚ್ಚುಗೆಯನ್ನು ಪಡೆದರು. ಇವರು ಸ್ವತಂತ್ರವಾಗಿ ಮೊಟ್ಟಮೊದಲ ಬಾರಿಗೆ ನಿರ್ದೇಶಿಸಿದ ನಾಟಕ “ಆಷಾಡದ ದಿನಗಳು” ಅನೇಕ ಬಾರಿ ಪ್ರದರ್ಶಿಸಲ್ಪಟ್ಟು ಇವರಿಗೆ ದೊಡ್ಡ ಹೆಸರು ತಂದಿತು. ಹಿಂದೆ ಅ.ನ.ಕೃ ಅವರ ವಿವಾದಿತ ನಾಟಕ “ಗುಬ್ಬಚ್ಚಿ ಗೂಡು” ನಾಟಕವನ್ನು ಅನೇಕ ವಿರೋಧಗಳ ನಡುವೆಯೇ ಪ್ರದರ್ಶಕ್ಕೆ ಅಣಿಮಾಡಿ ಯಶಸ್ಸುಗಳಿಸಿದರು. ಶ್ರೀಯುತರಾದ ಸಂಸ, ಪರ್ವತವಾಣಿ, ಶ್ರೀರಂಗ ಮತ್ತು ಗಿರೀಶ್ ಕಾರ್ನಾಡ್ ನಿರ್ದೇಶನದಲ್ಲಿ ನಟಿಸಿ, ಬೆಳಕು-ಧ್ವನಿಗಳನ್ನಿತ್ತು ಅಪಾರ ಮನ್ನಣೆಗಳಿಸಿದರು.

ನೀ ಕೊಡೆ ನಾ ಬಿಡೆ, ಸ್ವರ್ಗಕ್ಕೆ ಮೂರೇ ಗೇಣು, ತುಘಲಕ್, ಸಂಕ್ರಾಂತಿ, ಬಯಲು ಸೀಮೆ, ಸರದಾರ ಮುಂತಾದ ಅನೇಕ ನಾಟಕಗಳಲ್ಲಿ ವಿವಿಧ ರೀತಿಯಲ್ಲಿ ಸಕ್ರಿಯರಾಗಿ ರಂಗಭೂಮಿಗೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಕಲಾವಿದರಾದ ಶ್ರೀಮತೀ ಶ್ರೀ ಗಿರಿಜಾ ಲೋಕೇಶ್, ಶ್ರೀನಿವಾಸ ಪ್ರಭು, ಭಾರ್ಗವಿ ನಾರಾಯಣ್, ಪ್ರಸನ್ನ ಮತ್ತನೇಕರನ್ನು ರಂಗಭೂಮಿಗೆ ಪರಿಚಯಿಸಿದ ಕೀರ್ತಿ ಅಬ್ಬೂರವರದು.

1982-85 ರಲ್ಲಿ ರಾಜ್ಯ ನಾಟಕ ಅಕಾಡೆಮಿಯ ಸದಸ್ಯರಾಗಿ ಸೇವೆಸಲ್ಲಿಸಿದರು. 1988 ರಲ್ಲಿ Manchester ನಲ್ಲಿ ವಿಶ್ವಕನ್ನಡ ಸಮ್ಮೇಳನದಲ್ಲಿ ಇವರು ನಿರ್ದೇಶಿಸಿದ “ಉದ್ಭವ” ನಾಟಕವು ಪ್ರದರ್ಶಿಸಲ್ಪಟ್ಟು ಅಪಾರ ಮೆಚ್ಚುಗೆ ಗಳಿಸಿತ್ತು.

ಪ್ರಸ್ತುತ ಮಕ್ಕಳಿಗೆ ನಾಟಕದ ತರಬೇತಿ ನೀಡುತ್ತಾ ಭವ್ಯ ಸಾಂಸ್ಕೃತಿಕ ಪರಂಪರೆಗೆ ಕಾರಣರಾದ ಶ್ರೀಯುತರಿಗೆ ಸಲ್ಲಬೇಕಾದ ಗೌರವ ಸನ್ಮಾನಗಳು ಸಿಗದಿದ್ದರೂ ಎಂದೂ ಕೊರಗದೆ ನಿರ್ದೇಶನ, ನಟನೆಯಲ್ಲಿ ತೊಡಗಿಸಿಕೊಂಡು ಆನಂದ ಪಡುತ್ತಿರುವ ನಿರ್ಲಿಪ್ತ ಕಲಾವಿದರಿವರು.

ಅನುಕೂಲ ಸಾಂಗತ್ಯ

ಇವರ ವೃತ್ತಿ, ಪ್ರವೃತ್ತಿ ಮತ್ತು ಸಂಸಾರದ ಹೊಣೆಗಳನ್ನು ಸಮರ್ಥವಾಗಿ ನಡೆಸಲು ಬೆಂಬಲವಾಗಿದ್ದವರು ಇವರ ಸಹಧರ್ಮಿಣಿ ಶ್ರೀಮತಿ ಉಮಾ. ಇಂದಿಗೂ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಅಬ್ಬೂರರ ಇಡೀ ಕುಟುಂಬ ಕಲಾರಂಗಕ್ಕೆ ಅರ್ಪಣಗೊಂಡಿದೆ. ಈ ರಂಗಚೇತನದ ಅಪರಿಮಿತ ಉತ್ಸಾಹ, ಕಾರ್ಯಶೀಲತೆ ಅನುಕರಣೀಯ.ಅಬ್ಬೂರಿನಲ್ಲಿ ಅವರ ಪೂರ್ವಿಕರು ವಾಸವಾಗಿದ್ದ ಮನೆಯನ್ನು ದುರಸ್ತಿಗೊಳಿಸಿದ್ದು, ಇಲ್ಲಿ ಅನೇಕ ಕಿರುತೆರೆ – ಬೆಳ್ಳಿ ತೆರೆಗಳ ಚಿತ್ರೀಕರಣಗಳು ನಡೆದಿವೆ.

 ಈ ದಂಪತಿಗಳ ಮಗಳು ಶ್ರೀಮತಿ ಸುಧಾ ಪ್ರಸನ್ನ ಈಗಾಗಲೇ ಕಿರುತೆರೆ ಮತ್ತು ಬೆಳ್ಳಿ ತೆರೆಗಳಮೇಲೆ ಮಿಂಚುತ್ತಿರುವ ಬಹುಬೇಡಿಕೆಯ ನಟಿ. ಮಗ ಭಾರ್ಗವ ಕೂಡ , ತಂದೆಯಂತೆಯೇ ರಂಗದ ನೇಪಥ್ಯದ ಕೆಲಸಗಳಲ್ಲಿ ಕಾರ್ಯಕ್ಷಮತೆ ಉಳ್ಳವರು,  ಬೆಳಕು ಮತ್ತು ಹಿನ್ನಲೆ ಧ್ವನಿ ಪರಿಣಾಮಗಳ ಸಮರ್ಥ ನೆರೆವು ನೀಡಬಲ್ಲವರಾಗಿದ್ದಾರೆ. ಅವರ ಮನೆಯೇ ಒಂದು ರಂಗಭೂಮಿಯಂತಿದ್ದು ವರ್ಷವೆಲ್ಲ ಒಂದಲ್ಲ ಒಂದು ಪ್ರಯೋಗಗಳಲ್ಲಿ ನಿರತರು. ಕೆಲವು ವರ್ಷಗಳಿಂದ ನಾಟ್ಯದರ್ಪಣದ ಮೂಲಕ ಇವರು ಆಯೋಜಿಸುತ್ತಿರುವ “ಅಬ್ಬೂರು” ನಾಟಕೋತ್ಸವಗಳು ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿರುವುದು ಸ್ವಾಗತಾರ್ಹ.

ಧಾರ್ಮಿಕ ಮನೋಭಾವದ ಅಬ್ಬೂರರು ಸಂಪ್ರದಾಯ  ನಿಷ್ಠರು. ಅವರಲ್ಲಿಗೆ ಬರುವವರಿಗೆ ಉತ್ತಮ ಆತಿಥ್ಯ ನೀಡುವ ಸಜ್ಜನ ದಂಪತಿಗಳ ಸ್ನೇಹ-ಅಂತಃಕರಣ ಕಿರಿಯರಿಗೆ ದಾರಿದೀಪವೆಂದರೆ ಅತಿಶಯೋಕ್ತಿಯಲ್ಲ.

ಗೀತೆಯ ವಾಕ್ಯದಂತೆ ಕಷ್ಟ- ಸುಖಗಳನ್ನು ಸಮವಾಗಿ ಸ್ವೀಕರಿಸುತ್ತಾ “ಇಟ್ಹಾಂಗೆ ಇರುವೆನೋ ಹರಿಯೇ, ಎನ್ನ ದೊರೆಯೇ” ಎಂಬ  ದಾಸವಾಣಿಯ ಸೂತ್ರವನ್ನು  ಸಂತೋಷದಿಂದ ಪಾಲಿಸುತ್ತಿರುವ, ಸದ್ಯದಲ್ಲೇ ಸಹಸ್ರ ಚಂದ್ರ ದರ್ಶನವನ್ನು ಮಾಡಿರುವ ಶ್ರೀ ಅಬ್ಬೂರು ಜಯತೀರ್ಥ ಅವರಿಗೆ ಭಗವಂತ ಧೀರ್ಘ ಆಯುರಾರೋಗ್ಯ ನೀಡಿ ಇವರ ಕಲಾ ಸೇವೆ ನಿರಂತರವಾಗಿ ನಡೆಯಲೆಂದು ಮನಸಾರೆ ಹಾರೈಸೋಣ.

                                         **************

ಲೇಖಕರು– ಸಂಗೀತ ಕಲಾರತ್ನ ವಿದ್ವಾನ್ ಎಸ್ .ಶಂಕರ್

Related posts

A HISTORIC EVENT IN THE CITY OF ‘TEHZEEBee’ LUCKNOW

YK Sandhya Sharma

MUDRAS – symbolic gestures

YK Sandhya Sharma

Creative Cruise-The journey of a polymath

YK Sandhya Sharma

Leave a Comment

This site uses Akismet to reduce spam. Learn how your comment data is processed.