ಮಂದಾಕಿನಿ ಫಕ್ಕನೆ ಮುಖ ಸಿಂಡರಿಸಿದಳು. ರಾಘವ ಜೋರಾಗಿ ನಗುತ್ತಿದ್ದ, ಮತ್ತೆ ಬೆನ್ನಿನ ಮೇಲೆ ಬೆರಳುಗಳ ಚೌಕಾಬಾರ. ಈ ಬಾರಿ ಅವಳು ಸಿಟ್ಟಿನಿಂದ ಬೆನ್ನು ತೆಗೆದು ಮುಂದೆ ಬಾಗಿ ‘ನೀವು ಸ್ವಲ್ಪ ಈ ಕಡೆ ಬನ್ನಿ…ನಂಗೆ ಕಿಟಕಿ ಕಡೆ ಬಿಡಿ’ ಎಂದಳು ಹುಬ್ಬುಗಂಟು ಸಡಿಲಿಸದೆ. ರಾಘವ ಹುಸಿನಗು ನಗುತ್ತಲೇ ಪಕ್ಕಕ್ಕೆ ಸರಿದ. ಹೆಂಡತಿಯ ವಿಲಕ್ಷಣ ಚರ್ಯೆ ಕಂಡು ಸುತ್ತಮುತ್ತಲವರ ವಿಸ್ಮಯ ತುಂಬಿಕೊಂಡ ಮುಖಗಳನ್ನು ಕಾಣುತ್ತ ಅವನಲ್ಲಿ ಏನೋ ಒಂದು ರೀತಿಯ ಸಂಕೋಚ ಕವಿಯಿತು. ಅವಳ ವಿಚಿತ್ರ ನಡವಳಿಕೆಗೆ ಮುಸುಕು ತೊಡಿಸುವಂತೆ ಅವನು ಹಾರ್ದಿಕ ನಗು ಪ್ರಕಟಿಸುತ್ತ, ಬೆನ್ನ ಮೇಲೆ ಶುರುವಾದ ಕಚಗುಳಿಗೆ ಮುಖದಲ್ಲಿ ಆನಂದದ ಗೆರೆ ಬರೆದ. ಆದರೂ ಮಂದಾಕಿನಿ ಬಿಗಿದುಕೊಂಡೇ ಕುಳಿತಿದ್ದಳು.
ಹಿಂದಿನಿಂದ ಎಳೆಯ ಕೈಗಳು ರಾಘವನ ಕೊರಳನ್ನು ಬಳಸಿ ತಬ್ಬಿಕೊಂಡಾಗ ಅವನು ಹಿಂದಕ್ಕೆ ತಿರುಗಿ ತಾಯಿಯ ತೊಡೆಯ ಮೇಲೆ ಕೇಕೆ ಹಾಕುತ್ತ ನಿಂತುಕೊಂಡಿದ್ದ ಮಗುವನ್ನು ಅಕ್ಕರೆಯಿಂದ ತನ್ನ ತೊಡೆಗೆ ತಂದುಕೊಂಡ. ಮಗು ಒಮ್ಮೆಲೆ ನಗು ಮುಚ್ಚಿ ಬಾಯಿ ಬಿರಿದು ಜೋರಾಗಿ ಅಳತೊಡಗಿ ಅವನ ತೊಡೆಯ ಮೇಲೆ ಕುಣಿದಾಡಿತು. ಅವನ ಮುಖದ ನಗು ಮಾಸಲಿಲ್ಲ. ‘ಅಲ್ಲಿ ನೋಡುಮರಿ…ಕಾಗೆ…ನಾಯಿ…ಸೈಕಲ್ಲು’ ಎಂದು ಮಗುವನ್ನು ಬಾಲಭಾಷೆಯಲ್ಲಿ ರಮಿಸಲು ಯತ್ನಿಸುತ್ತ ಕಿಟಕಿಯ ಹೊರಗೆ ಕೈ ಮಾಡಿ ತೋರಿಸಿ ಅದರ ತಲೆ ನೇವರಿಸಿದ. ಮಗುವಿನ ಬೊಚ್ಚುಬಾಯಿ ಅರಳಿತು. ಜೊಲ್ಲು ಅವನ ಎದೆಯನ್ನು ತೊಯ್ಯಿಸುತ್ತಿತ್ತು. ಮಗುವಿನೊಡನೆ ಅವನೂ ಚಪ್ಪಾಳೆಯಿಕ್ಕಿ ಖುಷಿಯಿಂದ ಏನೇನೋ ಉದ್ದಕ್ಕೆ ಹೇಳುತ್ತಲೇ ಇದ್ದ.
ಗಕ್ಕನೆ ಅವನ ಪಕ್ಕೆ ಜೋರಾಗಿ ತಿವಿದಂತಾಯ್ತು. ರಾಘವ ನಿಮಿರಿ ಕುಳಿತ.
‘ನಿಮಗೇನು ಒಂಚೂರು ಸೆನ್ಸ್ ಇಲ್ವೇ…? ಥೂ ಗಬ್ಬು…ಎಷ್ಟು ಕೊಳಕಾಗಿದೆ! ಇಂಥ ಮಗೂನ ಎತ್ಕೊಂಡು ಮುದ್ದಾಡ್ತೀರಲ್ಲ…ನಾನ್ಸೆನ್ಸ್…’- ಮಂದಾಕಿನಿ ಅವಡುಗಚ್ಚಿ ಅವನನ್ನೇ ದುರುಗುಟ್ಟಿ ನೋಡಿದಳು. ಅವಳ ಕಂಗಳ ಬಿರುಸನ್ನು ಗುರುತಿಸಿಯೇ ಅವಳ ಕೋಪದ ಡಿಗ್ರಿಯನ್ನು ಅರಿತುಕೊಂಡವನಿಗೆ, ಇನ್ನು ಮುಂದಿನ ತಮ್ಮ ಮಧುಚಂದ್ರದ ರಾತ್ರಿ ಒಗರಿನ ಇರುಳೆಂಬುದು ಖಾತ್ರಿಯಾಗತೊಡಗಿದಂತೆ ಅವನು ಸೀಟಿನಲ್ಲಿ ಈಜಾಡುತ್ತ ಚಡಪಡಿಸತೊಡಗಿದ. ಮುಖ ಪೆಚ್ಚಾಯಿತು. ತೋಳಲ್ಲಿ ನಗುತ್ತಿದ್ದ ಮಗುವನ್ನು ಒಲ್ಲದ ಮನದಿಂದ ಬೀಳ್ಕೊಟ್ಟು ಮಡದಿಯನ್ನು ಒತ್ತಿಕುಳಿತು ಬಿಸುಪಾದ ಹಸ್ತದಿಂದ ಅವಳ ತೋಳು ಅಮುಕಿದ. ಮಂಜುಗಡ್ಡೆಯಂತೆ ಕಲ್ಲಾಗಿ ಕುಳಿತಿದ್ದಳು ಮಂದಾಕಿನಿ. ಮುಖದಲ್ಲಿ ಹಾಸ್ಯದ ಸೆಲೆ ಬತ್ತಿತ್ತು. ರಾಘವ ಅಳುಕುತ್ತ ಅವಳನ್ನು ಸಡಿಲಿಸುವ ಪ್ರಯತ್ನ ನಡಸೇ ಇದ್ದ.
‘ಏನಾಯ್ತೀಗ?… ಯಾಕಿಷ್ಟು ಕೋಪ!… ಮಗೂನ ಮುದ್ದಿಸ್ದೆ, ನಿನ್ನ ಮುದ್ದಿಸ್ಲಿಲ್ಲ ಅಂತ್ಲೇ? ನಿನ್ನ ತೊಡೇ ಮೇಲೆ ಕೂಡಿಸ್ಕೊಂಡ್ರೆ ಎಲ್ರೂ ಆಮೇಲೆ ನಮ್ಮನ್ನೇ ನೋಡ್ತಾರಷ್ಟೆ…ಪ್ಲೀಸ್ ರಾತ್ರಿ ಇದಕ್ಕೆ ಮುಯ್ಯಿಗೆ ಮುಯ್ಯಿ ಮಾಡ್ತೀನಿ ಸಾಕಾ…ಇನ್ನಾದ್ರೂ ರಾಣೀಸಾಹೇಬ್ರು ಪ್ರಸನ್ನರಾಗಿ…’ ಅವನ ಮುಖದೊಡನೆ ಧ್ವನಿಯೂ ದೈನ್ಯದ ಲೇಪನ ಪಡೆದಿತ್ತು.
‘ಇನ್ಯಾವುದಾದ್ರೂ ಚಿಳ್ಳೆಪಿಳ್ಳೆಗಳನ್ನು ಮುಟ್ಟಿದರೆ ನೋಡಿ…ನಾ ತತ್‍ಕ್ಷಣ ಇಳಿದು ಬೆಂಗಳೂರು ಬಸ್ಸು ಹತ್ತಿಬಿಡ್ತೀನಿ. ಥೂ ಎಂಥ ಬ್ಯಾಡ್‍ಹ್ಯಾಬಿಟ್ರೀ ನಿಮ್ದು. ಯಾವ ಮಕ್ಕಳಾದ್ರೂ ಸರಿ ಸರ್ರಂತ ಕೊಂಕಳಿಗೆ ಸಿಕ್ಕಿಸ್ಕೊಂಡು ಬಿಡ್ತೀರಾ… ಅಸಹ್ಯ.. ಗಂಭೀರವಾಗಿ ಕೂತ್ಕೊಳ್ಳಿ ಸ್ವಲ್ಪ…’ ಅವಳ ಸಿಡುಕಿನ ಆಣತಿಗೆ ಅವನು ಎದುರಾಡುವಂತಿರಲಿಲ್ಲ. ತೆರೆದ ಕಿಟಕಿಯಿಂದ ಭರ್ರನೆ ನುಗ್ಗಿದ ಎದುರುಗಾಳಿ ಅವನ ಉಸಿರುಗಟ್ಟಿಸಿತು.
ಮದುವೆಯ ದಿನವೇ ಅವನಿಗೆ ಅವಳ ಮನಸ್ಸು ಸ್ಪಷ್ಟವಾಗಿ ತಿಳಿದುಹೋಗಿತ್ತು. ನಾಗೋಲಿಯಲ್ಲಿ ಕಂದನನ್ನು ಆಡಿಸುವ ಶಾಸ್ತ್ರವನ್ನು ಪುರೋಹಿತರು ಪ್ರಾರಂಭಿಸಿದಾಗಲೇ ಅವಳು ಮುಖ ದುಮ್ಮಿಸಿಕೊಂಡು ಕುಳಿತಿದ್ದಳು. ಯಾರೂ ಅವಳನ್ನು ಗಮನಿಸಲೇ ಇಲ್ಲ. ಪುರೋಹಿತರ ಕುಚೋದ್ಯದೊಡನೆ ರಾಘವನ ಕಿರಿಯ ತಂಗಿ ಜಲಜಳ ಹಾಸ್ಯವೂ ಬೆರೆತುಕೊಂಡಿತು. ಮದುವೆ ಮನೆಯಲ್ಲಿ ಸೇರಿದ್ದ ನೆಂಟರ, ಯುವಕ-ಯುವತಿಯರ ತಮಾಷೆಗಳು, ಮಂದಾಕಿನಿಯ ಕೆನ್ನೆಯನ್ನು ಕೆಂಪೇರಿಸುವ ಬದಲು, ರಾಘವನ ಮುಖಕ್ಕೆ ಲಜ್ಜೆಯ ತೋರಣಗಟ್ಟಿತ್ತು. ರಾಘವ ಮನಸಾರೆ ನಾಚುತ್ತ, ಮುಂದೆ ಹಿಡಿದಿದ್ದ ಬಟ್ಟೆಯೊಳಗೆ ಮಲಗಿದ್ದ ಚಂದನದ ಗಂಡು-ಹೆಣ್ಣಿನ ಗೊಂಬೆಗಳನ್ನು ದಿಟ್ಟಿಸುತ್ತ ತೃಪ್ತಿಯ ಕಂಪನ ಪಡೆದಿದ್ದ. ಮಂದಾಕಿನಿಯ ಗಲ್ಲವೂ ಕೆಂಪಡರಿತ್ತು. ಆದರೆ ಲಜ್ಜೆಯಿಂದಲ್ಲ, ಭುಸುಗುಡುವ ಕೋಪದಿಂದ.
‘ಅಣ್ಣಾ…ಮಕ್ಕಳಿಗೆ ಹೆಸರಿಡೋ ಛಾನ್ಸು ಅತ್ತೆಯಾದ ನಂದು ನಂದು’ ಎನ್ನುತ್ತ ರಾಘವನ ತಂಗಿಯರು ನೀರಜ, ಜಲಜ ಕಿತ್ತಾಡುತ್ತಿದ್ದರೆ, ಅವನ ತಾಯಿ ಸದ್ದಿಲ್ಲದೆ ಬೊಂಬೆಗಳನ್ನು ಮಡಿಲಲ್ಲಿ ಮಲಗಿಸಿಕೊಂಡು ಸಂಭ್ರಮದಿಂದ ‘ನೋಡಿ ನನ್ನ ಮೊಮ್ಮಕ್ಕಳು ಎಷ್ಟು ಮುದ್ದಾಗಿವೆ!’ ಎನ್ನುತ್ತ ಸುತ್ತಮುತ್ತ ಕುಳಿತವರತ್ತ ಸಂಭ್ರಮದ ನಗು ಬೀರಿದರು. ನಗು ಜೋರಾಗಿ ಎದ್ದಿತು. ಸುತ್ತ ಬರೀ ನಗುವ ಮುಖಗಳೇ, ರಾಘವ ಮೆಲ್ಲನೆ ಪಕ್ಕಕ್ಕೆ ತಿರುಗಿ ಓರೆನೋಟ ಬೀರಿದ. ಅವನ ಮುಖದಲ್ಲಿ ಕೆನೆಗಟ್ಟಿದ್ದ ಸಂತೋಷ ಹಾರಿ ಹೋಗಿ ಮುಖ ಸಪ್ಪಗಾಯಿತು.
ಮಂದಾಕಿನಿ-‘ಹೂಂ…ಸಿಲ್ಲಿ ಶಾಸ್ತ್ರಗಳು ನಾನ್ಸೆನ್ಸ್… ಶುದ್ಧ ಅನಾಗರಿಕರು’ ಎಂದು ಗೊಣಗುಟ್ಟಿಕೊಳ್ಳುತ್ತಿದ್ದಳು.
ಪುರೋಹಿತರು ಹಿರಿಯ ದಂಪತಿಗಳೊಬ್ಬರಿಗೆ ನಮಸ್ಕರಿಸಲು ಹೇಳಿದಾಗ, ಅವರಿಂದ ಬಂದ ಆಶೀರ್ವಚನ ಕೇಳಿ ಮಂದಾಕಿನಿ ಮೊಂಡುದನದಂತೆ ಹಿಂದೆ ಸರಿದು ವ್ಯಗ್ರಳಾದಳು. ‘ಬಹುಪುತ್ರ ಪ್ರಾಪ್ತಿರಸ್ತು’… ‘ಹೂಂ ಇವರದೇನು ಗಂಟು ಹೋಗ್ಬೇಕು. ಧಾರಾಳವಾಗಿ ಹರಸಿಬಿಡ್ತಾರೆ!’ –ವ್ಯಂಗ್ಯಪೂರಿತ ಚುಚ್ಚುನುಡಿಗಳು.
ರಾಘವ ಮುಂದಿನ ಶಾಸ್ತ್ರಗಳಲ್ಲಿ ಉತ್ಸಾಹದೋರದೆ ‘ಎಲ್ಲ ಚುಟುಕದರಲ್ಲಿ ಮುಗಿಸಿಬಿಡಿ’ ಎಂದು ಹೆಂಡತಿಯ ಪರವಾಗಿ ಪುರೋಹಿತರಿಗೆ ಸೂಚಿಸಿದರೂ ಅವನ ಮನಸ್ಸು ನೂತನ ಪತ್ನಿಯ ಅರಸಿಕ ಮನೋಭಾವಕ್ಕೆ ಒಳಗೇ ನೊಂದುಕೊಂಡು ಮೆತ್ತಗಾಯಿತು.
ರಾತ್ರಿ ಹೆಂಡತಿಯನ್ನು ಒಲಿಸಿಕೊಳ್ಳುವಾಗಲೂ ರಾಘವ, ಅವಳ ಭಾಷಣದ ಬುಸುಗುಡುವಿಕೆಗೆಲ್ಲ ಮೂಕನಂತೆ ತಲೆ ಹಾಕಬೇಕಾಯಿತು.
‘ನಮಗಂತೂ ಈ ದರಿದ್ರ ಮಕ್ಕಳೇ ಬೇಡಪ್ಪ. ಇಬ್ರೇ ಫ್ರೀಯಾಗಿ ಲೈಫ್‍ಲಾಂಗ್ ಎಂಜಾಯ್ ಮಾಡ್ಕೊಂಡಿರೋಣ’ ಮಂದಾಕಿನಿ ತನ್ನ ಅಭೀಷ್ಟವನ್ನು ಮೊದಲರಾತ್ರಿಯೇ ಗಂಡನ ಮುಂದಿರಿಸಿದಳು.
‘ಅದ್ಹೇಗೆ ಸಾಧ್ಯ?… ಪ್ರಕೃತಿ…ವಂಶ… ಪ್ರಪಂಚ, ಜೀವನದ ಸಾರ್ಥಕತೆಗಾದರೂ ಮಕ್ಕಳಿಲ್ದೆ ಎಂಥ ಬದುಕು?!’ – ಒಳಗೆ ಹುಟ್ಟಿದ ಅಸಂಖ್ಯ ಪ್ರಶ್ನೆಗಳ ಹೆಡೆಯನ್ನು ಮಟುಕುತ್ತ ಮೇಲೆ ಮಾತ್ರ ರಾಘವ ಅವಳ ನಿರ್ಧಾರಕ್ಕೆ ಸಮ್ಮ್ಮತಿಯ ಪೇಲವನಗೆ ಚೆಲ್ಲಬೇಕಾಯ್ತು. ಅವಳ ಎಲ್ಲ ಆಜ್ಞೆಗಳಿಗೂ ಅವನು ಅಸ್ತುಮುದ್ರೆ ಒತ್ತಿದ ಮೇಲೆಯೇ ಅವಳು ಪ್ರಸನ್ನವಾಗಿದ್ದು.
ಮಧುಚಂದ್ರದ ಪ್ರವಾಸ ಮುಗಿಸಿಕೊಂಡು ಬರುವವರೆಗೂ ರಾಘವ ಬಹು ಎಚ್ಚರದಿಂದಿದ್ದು, ಯಾವ ಮಗುವನ್ನೂ ಮುಟ್ಟುವ ತಪ್ಪಿಗೆ ಹೋಗಲಿಲ್ಲ. ‘ಮಕ್ಕಳು’ ಎಂಬ ಪದವೇ ಅವನ ಸಂಭಾಷಣೆಯಿಂದ ಮಾಯವಾಗಿದ್ದನ್ನು ಕಂಡಮೇಲೆ ಮಂದಾಕಿನಿ ಸಮಾಧಾನ ತಾಳಿದಳು. ಆದರೆ ಹೆಚ್ಚು ದಿನ ಅವನಿಂದ ಈ ನಾಟಕ ಸಾಧ್ಯವಾಗಲಿಲ್ಲ. ಎಂದೋ ಮೈಮರೆತು ಮಕ್ಕಳ ವಿಷಯ ತೆಗೆದ ದಿನವಂತೂ ಮನೆಯಲ್ಲಿ ಗಲಾಟೆ! ಅವಳು ಸಿಕ್ಕಾಪಟ್ಟೆ ಹಾರಾಡಿ, ಕೆರಳಿ ಮುಸುಕು ಗುಪ್ಪೆಯಾಗುತ್ತಿದ್ದಳು. ಅವನು ತನ್ನ ಬುದ್ಧಿಯ ಸ್ಟಾಕನ್ನೆಲ್ಲ ಖರ್ಚು ಮಾಡಿದರೂ ಅವಳನ್ನು ತಹಬಂದಿಗೆ ತರಲು ವಾರವೇ ಹಿಡಿಯುತ್ತಿತ್ತು. ಅಲ್ಲಿಯವರೆಗೆ ಅವನ ಪಾಲಿಗೆ ಶಿವರಾತ್ರಿಯ ಉಪವಾಸ, ವಿರಹದ ಜಾಗರಣೆ, ಒಳಗೆ ಇಳಿಯದ ತುಯ್ತ. ನಮ್ಮ ರಘೂಗೂ-ಮುತ್ತಿನಂಥ ಒಂದು ಹೆಣ್ಣು-ಒಂದು ಗಂಡು ಮಕ್ಕಳಾಗಿಬಿಟ್ಟರೆ ಸಾಕಪ್ಪ’-ಅವನ ತಾಯಿ ಪಕ್ಕದಮನೆ ತುಂಗಾಬಾಯಿಯ ಬಳಿ ಹೇಳಿಕೊಳ್ಳುತ್ತಿದ್ದರು.
ಮನೆಯನ್ನು ನರ್ಸರಿ ಮಾಡುವಷ್ಟು ಮಕ್ಕಳ ದಾಂಧಲೆ ಅವನಿಗೆ ಇಷ್ಟವಾಗದಿದ್ದರೂ, ತಮ್ಮ ಬಾಳಿನ ರಂಗಾಗಿ, ಉತ್ಸಾಹದುಂಬುವ ಮುದ್ದಿನ ಅರಗಿಣಿಯೊಂದಂತೂ ಬೇಕೇಬೇಕೆಂಬುದು ಅವನ ಅಂತರಂಗದ ಮಿಡಿತ. ಅವನ ಹೆತ್ತವರಿಗೆ ಡಜನ್ ಮಕ್ಕಳಾದರೆ, ಅಕ್ಕ-ಅಣ್ಣಂದಿರಿಗೂ ಅದಕ್ಕೆ ಕಡಿಮೆಯಿಲ್ಲದಂತೆ ತಲಾ ಮೂರು, ನಾಲ್ಕು ಮಕ್ಕಳು, ಮನೆಯ ತುಂಬ ಮಕ್ಕಳ ಸಂತೆ.
‘ನಂಗೆ ನಿಜವಾಗ್ಲೂ ತಲೆಚಿಟ್ಟು ಹಿಡಿದು ಹೋಗಿದೆ ನೋಡಿ… ಏನ್ರೀ ಇವುಗಳ ಕಿರಿಕಿರಿ, ಗಲಾಟೆ’ -ಮಂದಾಕಿನಿ ದಿನಕ್ಕೆ ಹತ್ತುಬಾರಿ ಅವನ ಬಳಿ ಗೊಣಗಿದ್ದು ತಪ್ಪಿಲ್ಲ. ಆದರೆ ಇದನ್ನವನು ಖಂಡಿತ ನಿರೀಕ್ಷಿಸಿರಲಿಲ್ಲ. ಮಗು ಎಂದರೆ ಜೊಲ್ಲು ಸುರಿಸುವ ಹೆಣ್ಣಿನ ಬಾಯಿಂದ ಮಕ್ಕಳ ನಿರಾಕರಣೆ! ನಿಜವಾಗಲೂ ಅವನಿಗೆ ಮೊದಲು ಇದು ಶಾಕ್ ಆಗಿತ್ತು. ಆದರೆ ಇದಕ್ಕಾಗಿ ವ್ಯರ್ಥ ಕದನ ಹೂಡಿ ಹೊಸ ಹೆಂಡತಿಯ ಸಾಮೀಪ್ಯ ಕಳೆದುಕೊಳ್ಳಲು ಅವನು ತಯಾರಿರಲಿಲ್ಲ. ಇಬ್ಬಂದಿಯ ಇಕ್ಕಳ ಅವನನ್ನು ಇರಿಯುತ್ತಿತ್ತು.
ಆ ದಿನ ಬೆಳಗಾಗೆದ್ದು ಅವಳು ಜೋರಾಗಿ ಅಳುತ್ತಿದ್ದಳು. ಅವನ ತಾಯಿಯೊಡನೆ ಅವನೂ ಗಾಬರಿಯಿಂದ ನಡುಮನೆಗೆ ಧಾವಿಸಿ ಬಂದ. ಬಿಕ್ಕಿ ಬಿಕ್ಕಿ ಅಳು. ಮುಖ ಮುಚ್ಚಿದ ಕೈಗಳು. ಅವನು ಕಂಗಾಲಾದ. ಮಂದಾಕಿನಿ ತಲೆಯ ಮೇಲೆ ಕೈಹೊತ್ತು ಸರ್ವಸ್ವವನ್ನೂ ಕಳೆದುಕೊಂಡ ದುಃಖದ ಮುಖ ಹಾಕಿಕೊಂಡು ಕುಕ್ಕರಿಸಿದ್ದಳು. ಕಾರಣ ತಿಳಿದು ಅವನ ಮುಖ ಹೂವಾಯಿತು. ಆದರೆ ಅದನ್ನವನು ಹೊರಗೆ ಪ್ರಕಟಿಸುವಂತಿರಲಿಲ್ಲ. ಅವನ ತಾಯಿಯಂತೂ ಹಿರಿಹಿರಿ ಹಿಗ್ಗಿ ಸೊಸೆಗೆ ದೃಷ್ಟಿ ತೆಗೆದು ನೆಟಿಕೆ ಮುರಿದರು. ಸಿಹಿಸುದ್ದಿ ತಿಳಿಸಲು ಮನೆಯ ಪ್ರತಿಯೊಂದು ಕೋಣೆಗೂ ಧಾವಂತದಿಂದ ಓಡಾಡಿದರಾಕೆ.
‘ಹೋ…ನನ್ನ ಲೈಫೇ ಹಾಳಾಗೋಯ್ತು’ ಎಂದು ಮಂದಾಕಿನಿ ಗಂಡನನ್ನು ತಿವಿಯುವ ನೋಟದಲ್ಲಿ ಚುಚ್ಚಿ ಕಣ್ಣೀರು ಹರಿಸಿದಳು. ರಾಘವ ಅವಳ ಗೋಳುಕರೆಗೆ ಚಕಾರವೆತ್ತದೆ ಹೆದರುತ್ತಲೇ ಸಮಾಧಾನಿಸಿದ. ‘ಹೋಗ್ಲಿ ಬಿಡು, ಏನೋ ಈ ಸಲ ಅಚಾತುರ್ಯದಿಂದ ಹೀಗಾಗಿಬಿಡ್ತು ಇನ್ಮ್ಮುಂದೆ ಹುಷಾರಾಗಿರೋಣ’- ಎಂದರೂ ಅವನಿಗೆ ಒಳಗೊಳಗೇ ಅಳೆಯಲಾಗದ ಆನಂದ!
‘ಈಗಾಗಿರೋ ಕರ್ಮಕ್ಕೆ ಹೇಳ್ರಿ ಮೊದ್ಲು, ನಂಗಂತೂ ನೆನೆಸಿಕೊಂಡ್ರೇ ಜ್ಞಾನ ತಪ್ಪತ್ತೆ. ಬನ್ನಿ ಡಾಕ್ಟ್ರ ಹತ್ತಿರ ಹೋಗಿ ಈ ದರಿದ್ರಾನ ತೆಗೆಸಿಹಾಕಿ ಬರೋಣ’-ಅವಳ ಹಟಕ್ಕೆ ಹೌಹಾರಿದ ರಾಘವ, ಏನು ಹೇಳಬೇಕೆಂದು ತಿಳಿಯದೆ ಬೆಂಡಾದ.
‘ಪ್ಲೀಸ್ ನಿನ್ನ ದಮ್ಮಯ್ಯ, ಅಮ್ಮಂಗೆ ತಿಳಿದರೆ ಎದೆ ಒಡೆದುಕೊಂಡು ಪ್ರಾಣ ಬಿಟ್ಟುಬಿಡ್ತಾಳೆ’-ದಮ್ಮಯ್ಯಗುಡ್ಡೆ ಸುರಿದ. ಮಂದಾಕಿನಿ ಬಲವಾದ ಪಟ್ಟೇ ಹಿಡಿದಿದ್ದಳು. ಅವನೂ ಜಗ್ಗಿದ. ಅಂತೂ ಅವಳ ಅನಿಚ್ಛೆಯಿದ್ದರೂ ಮಂದಾಕಿನಿಯ ಹೊಟ್ಟೆ ಬೆಳೆಯಿತು. ಜೊತೆಗೆ ಅವಳ ಕೋಪವೂ ಬೆಳೆಯಿತು. ಗಂಡನ ಮುಖ ಕಂಡರೆ ಸಿಡಿಮಿಡಿ. ಹೊಟ್ಟೆಯಲ್ಲಿರುವ ಮಗುವಿಗೆ ಹಿಡಿಹಿಡಿ ಶಾಪ. ಹಣ್ಣು-ಹಾಲು ತೆಗೆದುಕೊಳ್ಳಲು ಮುಷ್ಕರ. ಬಸುರಿಯ ಜೊತೆಗೆ ರಾಘವನೂ ನವೆಯುತ್ತ ಬಂದ. ಅವನ ತಾಯಿ ‘ಸೀಮಂತ’ದ ಪ್ರಸ್ತಾಪವೆತ್ತಿದಾಗ ಮಂದಾಕಿನಿ ಭಯಾನಕವಾಗಿ ಕೆರಳಿದಳು.
‘ನಂಗ್ಯಾವ್ದೂ ಬೇಡ’ ಎಂದು ಒರಟಾಗಿ ಉತ್ತರಿಸಿದಾಗ ಆಕೆ ನೊಂದುಕೊಂಡು ಸುಮ್ಮನಾದರು. ನಗುನಗುತ್ತಿರಬೇಕಾದ ಕಾಲದಲ್ಲಿ ಸಂಕಟದಿಂದ ನರಳುತ್ತಿರುವ ಮಡದಿಯ ವ್ಯಗ್ರಸ್ಥಿತಿ ಕಾಣುತ್ತ ರಾಘವನಲ್ಲಿ ಹದಗೊಳ್ಳುತ್ತಿದ್ದ ಹರ್ಷದ ಕಾವು ಆರತೊಡಗಿತ್ತು.
ಕಡೆಗೂ ಬೇಡದ ವಾತಾವರಣದಲ್ಲಿ ಭೂಮಿಗಿಳಿದು ಬಂದ ಮಗಳನ್ನು ಮಂದಾಕಿನಿ ಸ್ವಾಗತಿಸಲಿಲ್ಲ. ರಾಘವ, ಹೆಂಡತಿಯ ಮರೆಯಾಗಿ ಮಗುವನ್ನು ಮಡಿಲಲ್ಲಿ ತುಂಬಿಸಿಕೊಂಡ. ಗಂಡ-ಹೆಂಡತಿಯರಿಬ್ಬರೂ ಸೇರಿ ಮುಕ್ತವಾಗಿ ಮನಸಾರೆ ಮಗುವನ್ನು ಮುದ್ದಿಸುವ ಸಂದರ್ಭ ಇರದುದ್ದಕ್ಕೆ ಅವನಲ್ಲಿ ಕೊರಗು ಕೊರೆದರೂ ಮಗಳ ಕಿಲಕಿಲ ನಗು ಆ ಅರಕೆಯನ್ನು ತುಂಬಿಕೊಟ್ಟಿತು.
ದಿನಗಳೆದಂತೆ ಮಗಳ ಮುದ್ದಿನಾಟಗಳು ಮಂದಾಕಿನಿಯ ಮುನಿಸಿಗೆ ಮದ್ದಾಗಿ ಅವಳು ಕರಗತೊಡಗಿದಳು. ಅವಳ ತೋಳ್ಗಳÀು ಪ್ರೀತಿಯಿಂದ ತೆರೆದುಕೊಂಡು ಕರುಳಬಳ್ಳಿಯನ್ನು ಎದೆಗೆ ಅಪ್ಪಿಕೊಳ್ಳುತ್ತಿದ್ದವು. ಅಕ್ಕರೆಯಿಂದ ಹಾಲೂಡುತ್ತಿದ್ದಳು. ಕೆಲವೇ ದಿನಗಳಲ್ಲಿ ಹೆಂಡತಿಯಲ್ಲಾದ ಮಾರ್ಪಾಟು ರಾಘವನ ಜೀವನದಲ್ಲೊಂದು ಅತ್ಯದ್ಭುತ. ಅರೆಕ್ಷಣ ಮಗುವಿನಿಂದ ಅಗಲಿರಲಾರದ ಮಂದಾಕಿನಿ ಅದರೊಡನಾಡುವುದು ಅವನ ಪಾಲಿಗೆ ಅದೊಂದು ಅಪೂರ್ವ-ಆತ್ಮೀಯ ದೃಶ್ಯ.
ಅವನ ಮನಸ್ಸು ಧನ್ಯ ಎಂದು ತಣಿದದ್ದು ಕೆಲವೇ ವಾರಗಳು. ಮಗುವಿಗೆ ಇನ್ನೂ ಆರುತಿಂಗಳು ನಡೆಯುತ್ತಿರುವಾಗಲೇ ಮಂದಾಕಿನಿ ‘ವಯಕ್ ವಯಕ್’ ಎನ್ನುತ್ತಿದ್ದಳು. ರಾಘವನಿಗೆ ಬವಳಿ ಬಂದಂತಾಯ್ತು. ಬಾಯಿರುಚಿ ಕೆಟ್ಟಿತು. ‘ಮಗು ಭಾಳ ಸಣ್ಣದು ಈ ಸಲ…’ ಮಾತುಗಳನ್ನು ಕಡಿದು ತುಂಡು ತುಂಡಾಗಿ ಆಡುವ ಸರದಿ ಅವನದಾಯಿತು. ಒಮ್ಮೆಲೆ ಅವಳ ಕಣ್ಣುಗಳು ಕೆಂಡದ ಕುಳಿಗಳಾಗಿ ಎಗರಿ ಬಿದ್ದಳು ಮಂದಾಕಿನಿ. ‘ಎಂಥ ಮಾತ್ರೀ ನೀವಾಡೋದೂ! ಇಂಥ ಮುದ್ದುಮಗೂನ ಕೊಲೆ ಮಾಡೋದೇ?’ ಅವನು ಅವಾಕ್ಕಾದ. ಮೊದಲಬಾರಿ ಇದ್ದ ಸಡಗರದ ನೆರೆ ಅವನಲ್ಲಿ ಉಳಿಯಲಿಲ್ಲ. ಮಂದಾಕಿನಿ ಮಾತ್ರ ಖುಷಿಯಿಂದ ದಿನಗಳನ್ನೆಣಿಸುತ್ತಿದ್ದಳು.
ರಾಘವ ಆತಂಕದೇಣಿಯಲ್ಲಿ ಹೆಜ್ಜೆಯಿರಿಸುತ್ತ ಲೇಬರ್‍ವಾರ್ಡಿನಿಂದ ತೂರಿಬರುವ ದನಿಗಾಗಿ ಕಾತರಗೊಂಡಿದ್ದ. ‘ಕಂಗ್ರಾಟ್ಸ್…ಅವಳೀ ಹೆಣ್ಣುಮಕ್ಳು’-ನರ್ಸ್ ಗೆಲುವಾಗಿ ನುಡಿದು ಮುಂದುವರಿದಾಗ ಅವನು ಕುಪ್ಪನೆ ಕುಸಿದ. ಒಟ್ಟಿಗೇ ಎರಡು ಹೆಣ್ಣುಮಕ್ಕಳು!
ಮಂದಾಕಿನಿ ಅವನ ಎದೆಗುದಿಯನ್ನು ಅರ್ಥ ಮಾಡಿಕೊಳ್ಳದೆ ಉತ್ಸಾಹದಿಂದ ಬಣ್ಣಿಸುತ್ತಿದ್ದಳು. ‘ನೋಡ್ರಿ ಎಷ್ಟು ಚೂಟಿಯಾಗಿದೆ… ಇದಂತೂ ಥೇಟ್ ನಿಮ್ಹಾಗೆ…ಇನ್ನೊಂದು ಅದರ ಅಕ್ಕನ ಹಾಗೆ… ಬಾ…ಬಾರೆ ಮರಿ, ನಿನ್ನ ಪುಟಾಣಿ ತಂಗೀರನ್ನ ನೋಡು’- ನಡಿಗೆ ಬಾರದ ಇನ್ನೂ ವರ್ಷತುಂಬಿರದ ಮೊದಲ ಮಗಳಿಗೆ ಬಾಲ ಭಾಷೆಯಲ್ಲಿ ಏನೇನೋ ಹೇಳುವುದರಲ್ಲೇ ನಿರತಳು ಮಂದಾಕಿನಿ.
ರಾಘವ ಲಕ್ವ ಹೊಡೆದವನಂತೆ ಬಹಳ ಹೊತ್ತು ಹಾಗೇ ಕುಳಿತಿದ್ದ. ಅರಗಿಸಿಕೊಳ್ಳಲಾಗದ ಆನಂದ ಒಟ್ಟೊಟ್ಟಿಗೆ ಒದಗಿಬಂದಾಗ ಅವನು ವಿಲವಿಲನೆ ಒದ್ದಾಡುವಂತಾಯಿತು. ಮಂದಾಕಿನಿಯಂತೂ ನಿಶ್ಚಿಂತೆಯಾಗಿ, ಅತ್ತೆಯೊಡನೆ ಮಕ್ಕಳಿಗೆ ತೊಟ್ಟಿಲು ಹಾಕುವ ಬಗ್ಗೆ ದೊಡ್ಡ ಚರ್ಚೆಯನ್ನು ನಡೆಸಿದ್ದಳು.
‘ಗಂಡಾಗಿದ್ರೆ ಚೆನ್ನಾಗಿತ್ತು…ಹೋಗ್ಲಿ ಬಿಡು. ದೇವರು ಕೊಟ್ಟಿದ್ದನ್ನ ಬೇಡ ಅನ್ನಕ್ಕಾಗುತ್ಯೇ? ಯೋಚಿಸ್ಬೇಡ ಮುಂದಿಂದು ಗಂಡಾಗುತ್ತೆ ಖಂಡಿತ’ ತಾಯಿಯ ಮಾತು ಕೇಳುತ್ತ ಕೇಳುತ್ತ ಅವನಲ್ಲಿ ಬೆವರೊಡೆಯಿತು.
‘ನೋಡೋಣ ದೇವರ ದಯೆ ಹೇಗಿದೆಯೋ?’ – ಮಂದಾಕಿನಿಯೂ ದನಿಗೂಡಿಸಿದಾಗ ರಾಘವ ನಿರ್ವಿಣ್ಣನಾದ. ಮನೆಯಲ್ಲಿ ಹಬ್ಬದ ವಾತಾವರಣ ಹರಡಿ ಹೋಗಿತ್ತು. ತಂಗಿಯರು ಶಿಸ್ತಾಗಿ ಸಿಂಗರಿಸಿಕೊಂಡು ಅರಿಶಿನ ಕುಂಕುಮಕ್ಕೆ ಆಹ್ವಾನಿಸಲು ಬೀದಿ ತುಂಬಾ ಓಡಾಡುತ್ತಿದ್ದರು. ಅಡಿಗೆಮನೆಯಿಂದ ಲಾಡುಕಾಳು ಕರಿಯುತ್ತಿರುವ ಘಮ್ಮೆನ್ನುವ ವಾಸನೆ. ನಿಧಾನವಾಗಿ ನಡುಮನೆ ತುಂಬ ಹರಡಿಕೊಳ್ಳುತ್ತಿದ್ದ ಆಹ್ವಾನಿತರು. ರಾಘವ ಭಾರವಾದ ಹೆಜ್ಜೆ ಹಾಕುತ್ತ ಕೋಣೆ ಸೇರಿದ.
ಅವನ ಅತ್ತಿಗೆಯರು ಎಲೆಯಡಿಕೆಯ ಪಟ್ಟಿ ಹಚ್ಚುತ್ತ ತಮ್ಮ ಮಾತಿನ ಸಡಗರದಲ್ಲಿ ಮೈಮರೆತಿದ್ದರು. ಕಾಲುಕಾಲಿಗೆ ತೊಡರುತ್ತಿದ್ದ ಹತ್ತಾರು ವಂಶೋದ್ಧಾರಕರು ಬಾಣಂತಿಯ ಕೋಣೆಯಲ್ಲಿ ಎರಡು ಪುಟ್ಟಪಾಪಗಳ ಸುತ್ತ ಮುಕುರಿದ್ದರು. ಮಂದಾಕಿನಿ, ಮಕ್ಕಳಿಗೆ ಅಂದವಾಗಿ ಕಣ್ಣಿಗೆ ಕಾಡಿಗೆ ತೀಡಿ, ಹೊಸಬಟ್ಟೆ ಹಾಕಿ ಬೆಚ್ಚಗೆ ಟೋಪಿ ಕಟ್ಟುತ್ತಿದ್ದಳು. ರಾಘವನಿಗೆ ಉಸಿರುಗಟ್ಟಿದಂತಾಗಿ ಸರ್ರನೆ ಅಲ್ಲಿಂದ ಹೊರಗೆದ್ದು ವರಾಂಡಕ್ಕೆ ಬಂದ. ಅಲ್ಲೂ ಭರ್ತಿಯಾದ ಕುರ್ಚಿಗಳು!
‘ಡಬಲ್ ಕಂಗ್ರಾಟ್ಸ್ ರಾಘವ’ ಶುಭಾಶಯಗಳ ಸುರಿಮಳೆಗೆ, ತಣ್ಣಗಾದ ಅವನ ಜೋಲುಹಸ್ತ ಮೆಲ್ಲಗೆ ಕುಲುಕಾಡಿತು.
“ಅಯ್ಯೋ ಏನು ಹೇಳ್ತೀರಾ!… ಹೆಣ್ಣು ಹೆತ್ತರೆ ಸಾಮಾನ್ಯವೇ? ಜಾತಕ-ಗೋತ್ರ-ವರಸಾಮ್ಯ ಸರಿಯಾದ ಸಂಬಂಧ ಅಂತ ನೂರೆಂಟು ಅಳೆದೂ ಸುರಿದು, ನಾಲ್ಕುವರ್ಷದಿಂದ ಮನೆಮನೆ ಸುತ್ತಿದ್ದಕ್ಕೆ ಕಡೇಗೆ ನಮ್ಮ ನೀರಜಂಗೆ ಮದುವೆ ಗೊತ್ತಾಗಿದೆ ನೋಡಿ…ಈಗ ವರದಕ್ಷಿಣೆ, ಹುಡುಗನಿಗೆ ಎರಡ್ಜೊತೆ ಸೂಟು, ವಾಚು, ಉಂಗುರ, ಬೆಳ್ಳಿಪಾತ್ರೆಗಳು…ಸ್ಟೀಲ್ ಸಾಮಾನಿನ ಸೆಟ್ಟು…ವರೋಪಚಾರ… ಬೀಗಿತ್ತಿಗೆ, ಅತ್ತೆ-ನಾದಿನಿ-ವಾರಗಿತ್ತಿಯರಿಗೆ ರೊಟ್ಟಿ ಅಂಚಿನ ಜರೀಸೀರೆ’… ತಾಯಿ ಹೇಳುತ್ತಿದ್ದ ಉದ್ದನೆಯ ಪಟ್ಟೆ ನಡುಮನೆಯಿಂದ ವರಾಂಡದ ಬಾಗಿಲು ದಾಟಿ, ರಸ್ತೆಗಿಳಿದು ಕೇರಿ ತುಂಬ ಹರಡಿ, ಊರಿನಲ್ಲೆಲ್ಲ ವ್ಯಾಪಿಸಿ ಮುಂದುವರಿಯುತ್ತಿದ್ದಂತೆ ರಾಘವನ ತಲೆ ತೊಲೆ ಹೊತ್ತಷ್ಟು ಭಾರ ಭಾರವಾಯಿತು.
‘ಮನೆಯೆಂದ ಮೇಲೆ ಮಕ್ಕಳಿದ್ದರೇ ಚೆಂದ’-ಎಂಬ ನುಡಿ ಸೀಸದಷ್ಟು ತೂಕವಾಗುತ್ತ ಮಿದುಳಿಗೆ ಅಪ್ಪಳಿಸಿದಂತೆ, ಅವನಲ್ಲಿ ಮೊದಲಿದ್ದ ಉತ್ಸಾಹ ಸಂಪೂರ್ಣ ಸೋರಿಹೋಗಿ, ಸೋಲು ಆವರಿಸಿಕೊಂಡಿತು. ಬೆಳೆದು ನಿಂತ ತಂಗಿಯರ ಬಗ್ಗೆ ತಾಯಿ ಹೇಳುತ್ತಿದ್ದ ಮಾತುಗಳು ಅವನ ಎದೆಯಲ್ಲಿ ಸಿಕ್ಕಿಹಾಕಿಕೊಂಡು ಜೋರಾಗಿ ಒತ್ತತೊಡಗಿದವು. ಅವನು ನೋಡುನೋಡುತ್ತಿದ್ದಂತೆ ತೊಟ್ಟಿಲಲ್ಲಿ ಮಲಗಿದ್ದ ಮಕ್ಕಳು ನಿಮಿಷ ನಿಮಿಷಕ್ಕೆ ಉದ್ದಗಲಕ್ಕೆ ಬೆಳೆಯುತ್ತ ಬೆಳೆಯುತ್ತ ಮದುವೆಯ ಹಾರಕ್ಕೆ ಕೊರಳು ಕೊಂಕಿಸಿ ನಿಂತ ಕನ್ಯಾತ್ರಯರಾಗಿ, ಅವನ ಕೊರಳ ಮೇಲೆ ಜವಾಬ್ದಾರಿಯ ಹೊರೆ ಭಾರ ಭಾರವಾಗಿ ಅಮುಕುತ್ತ, ರಾಘವ ತಲೆಯ ಮೇಲೆ ಕೈ ಹೊತ್ತು ನಿರ್ಜೀವನಾಗಿ ಕುಸಿದು ಕುಳಿತಿದ್ದರೆ, ನಡುಮನೆಯಲ್ಲಿ ಮಂದಾಕಿನಿ, ಬಂದವರೆದುರು ಮಕ್ಕಳ ಪ್ರತಾಪವನ್ನು ಕೊಚ್ಚಿಕೊಳ್ಳುತ್ತ ತಾಯ್ತನದ ಹೆಮ್ಮೆ-ಆನಂದಗಳಿಂದ ಖುಷಿಯಾಗಿ ಜೋರಾಗಿ ನಗುತ್ತಿದ್ದಳು.
- Y.K.Sandhya Sharma