Image default
Dancer Profile

ಬಹುಮುಖ ಪ್ರತಿಭೆಯ ಭರತನಾಟ್ಯ ಕಲಾವಿದೆ ಜಿ.ಶ್ರುತಿ

ಅಪಾರ ಜೀವನೋತ್ಸಾಹವುಳ್ಳ ಭರತನಾಟ್ಯ ಕಲಾವಿದೆ ಜಿ.ಶ್ರುತಿ ಬಹುಮುಖ ಪ್ರತಿಭೆ. ಹುಟ್ಟೂರು ಮೈಸೂರು. ತಂದೆ ಕೆ.ವಿ. ಗೋವಿಂದ ಒಳ್ಳೆಯ ಗಾಯಕರು. ಮನೆಯಲ್ಲಿ ಕಲಾಪೂರ್ಣ ವಾತಾವರಣ. ತಾಯಿ ಪೂರ್ಣಿಮಾಗೆ ಮಗಳನ್ನು ನೃತ್ಯಕಲಾವಿದೆ ಮಾಡುವ ಕನಸು. ಅದರಂತೆ ಮಗಳನ್ನು ಎಂಟುವರ್ಷಕ್ಕೆ ವಿದುಷಿ ದಿವ್ಯಾ ಬಳಿ ಭರತನಾಟ್ಯ ಕಲಿಯಲು ಸೇರಿಸಿದರು. ಹತ್ತನೆಯ ವರ್ಷಕ್ಕೇ ಶ್ರುತಿ ತನ್ನ ಮೊದಲ ನೃತ್ಯಪ್ರದರ್ಶನ ನೀಡಿದ್ದು ವಿಶೇಷ. ಶಾಲೆಯಲ್ಲಿದ್ದಾಗ ಮೋಹಿನಿಯಾಟ್ಟಂ ನೃತ್ಯವನ್ನು ಗಣ್ಯವ್ಯಕ್ತಿಗಳ ಮುಂದೆ ಪ್ರದರ್ಶಿಸಿ ಪ್ರಶಂಸೆ ಪಡೆದದ್ದು ಮುಂದಿನ ಕಲಿಕೆಗೆ ಸ್ಫೂರ್ತಿ ತುಂಬಿತು.

ಉತ್ತಮ ಕ್ರೀಡಾಪಟುವಾಗಿದ್ದ ಶ್ರುತಿ, ಅಂತರಶಾಲಾ ಕ್ರೀಡೆ, ನೃತ್ಯ ಮತ್ತಿತರ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ತಂದೇ ತರುತ್ತಿದ್ದಳು. ತಂದೆಯಿಂದ ಸ್ಫೂರ್ತಿಗೊಂಡು ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತ ಕಲಿಯಲು ಆರಂಭಿಸಿದ್ದಳು.

ಬಹುಮುಖ ಪ್ರತಿಭೆಯ ಶ್ರುತಿ, ಹಲವು ವರ್ಷಗಳ ಕಾಲ ಭರತನಾಟ್ಯಾಭ್ಯಾಸ ಮಾಡಿ ಅಪಾರ ಮೆಚ್ಚುಗೆ ಗಳಿಸಿದಳು. ಅನಂತರ ಸತತವಾಗಿ ನೃತ್ಯ ಪ್ರದರ್ಶನಗಳನ್ನು ನೀಡುತ್ತ ಜೊತೆಗೆ ಗಾಯನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ, ಯೋಗ, ನಿರೂಪಣೆ, ಪೇಯಿಂಟಿಂಗ್, ಕರಕುಶಲಗಾರಿಕೆ , ಫ್ಯಾಶನ್ ಡಿಸೈನಿಂಗ್ ಮುಂತಾದ ತನ್ನೆಲ್ಲ ಬಹುಮುಖ ಹವ್ಯಾಸಗಳನ್ನು ಮುಂದುವರಿಸಿಕೊಂಡು ಹೋದಳು.

ಅನಂತರ, ಮೈಸೂರಿನ ಎಸ್.ಡಿ.ಎಂ. ಕಾಲೇಜಿನಿಂದ ಬಿ.ಎಸ್ಸಿ. ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಸಿ.ಎ. ಮಾಸ್ಟರ್ ಪದವಿಯನ್ನೂ ಗಳಿಸಿಕೊಂಡಳು.

ಕಾಲೇಜಿನಲ್ಲಿ ಯೂನಿಯನ್ ಪ್ರೆಸಿಡೆಂಟಾಗಿ ಸಂಘಟನೆಯ ಕೆಲಸಗಳಲ್ಲಿ ಸಕ್ರಿಯಳಾಗಿದ್ದ ಇವಳು, ತಾನೇ ನೃತ್ಯಸಂಯೋಜಿಸಿದ ಅನೇಕ ನೃತ್ಯಗಳನ್ನು ಪ್ರದರ್ಶಿಸಿದಳು. ಭರತನಾಟ್ಯ, ಮೋಹಿನಿಯಾಟ್ಟಂ, ಕಂಸಾಳೆ, ಪೂಜಾಕುಣಿತ, ಅರೆಶಾಸ್ತ್ರೀಯ, ಪಾಶ್ಚಾತ್ಯ ನೃತ್ಯಗಳಲ್ಲಿ ಪಾಲ್ಗೊಂಡಿದ್ದು ಇವಳ ಅಗ್ಗಳಿಕೆ.

ಜೊತೆಗೆ ಈ ಮಧ್ಯೆ ಬ್ಯೂಟಿಷಿಯನ್ ಕೋರ್ಸ್ ಮುಗಿಸಿ, ಬ್ರೈಡಲ್ ಮೇಕಪ್ ಮತ್ತು ಮೆಹಂದಿ ಹಾಕುವ ಕಲೆಯಲ್ಲಿ ಪರಿಣಿತರಾಗಿ, ‘ಬ್ಯೂಟಿಷಿ ಯನ್ನಾಗಿ ಮೈಸೂರಿನಲ್ಲಿ ಹೆಸರು ಮಾಡಿದರು.  

ಅನಂತರ ಹೆಚ್ಚಿನ ಸಾಧನೆಗೆ ಬೆಂಗಳೂರಿಗೆ ಬಂದನಂತರ ಶ್ರುತಿಯ ಬದುಕು ಇನ್ನೊಂದು ಆಯಾಮ ಪಡೆದುಕೊಂಡಿತು. ಭರತನಾಟ್ಯ ಮತ್ತು ಕೂಚಿಪುಡಿ ಉಭಯ ನೃತ್ಯಶೈಲಿಗಳಲ್ಲಿ ತರಬೇತಿಗೊಂಡು ಸೀನಿಯರ್ ಮತ್ತು ಜ್ಯೂನಿಯರ್ ನೃತ್ಯಪರೀಕ್ಷೆಗಳಲ್ಲಿ ಪ್ರಥಮದರ್ಜೆಯಲ್ಲಿ ತೇರ್ಗಡೆಯಾಗಿ ‘ವಿದ್ವತ್’ ಪರೀಕ್ಷೆಯ ಸಿದ್ಧತೆಯಲ್ಲಿ ಪ್ರಸಕ್ತ ತೊಡಗಿಕೊಂಡಿದ್ದಾಳೆ. ಗುರು ಮೋಹನ್ ಮತ್ತು ಸುಚೇತನ್ ರಂಗಸ್ವಾಮಿ ಅವರ ಮಾರ್ಗದರ್ಶನದಲ್ಲಿ ಸಂಗೀತ ಕಲಿಕೆ ಮುಂದುವರಿಸಿದ್ದಾಳೆ. ಜೊತಗೆ ‘ರಂಗಪ್ರವೇಶ’ವನ್ನು ಯಶಸ್ವಿಯಾಗಿ ನೆರವೇರಿಸಿಕೊಂಡು ವಿವಿಧ ವೇದಿಕೆಗಳಲ್ಲಿ ಅನೇಕ ನೃತ್ಯಪ್ರದರ್ಶನಗಳನ್ನು ನೀಡುವುದರಲ್ಲಿ ನಿರತಳಾಗಿದ್ದಾಳೆ.

ಕಳೆದ ಹತ್ತುವರ್ಷಗಳಿಂದ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಉದ್ಯೋಗ ಮಾಡುತ್ತಿರುವ ಶ್ರುತಿಯ ಇನ್ನೊಂದು ಆಸಕ್ತಿ ‘ಜಿಮ್’. ಇಂಟರ್ನ್ಯಾಷನಲ್ ಬಾಡಿಬಿಲ್ಡರ್ ಗುರು ಸಂತೋಷ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಮೂರುತಿಂಗಳಲ್ಲಿ ಹದಿನೆಂಟು ಕೆ.ಜಿ.ತೂಕ ಕಳೆದುಕೊಂಡಿರುವ ಇವಳಿಗೆ ಅವರೇ ‘ರೋಲ್ ಮಾಡಲ್’.  ಇದರಿಂದ ತನ್ನ ಸಾಧನೆಗೆ ಮತ್ತಷ್ಟು ಹುರುಪು ದೊರಕಿದೆ ಎನ್ನುವ ಇವಳು ಅನೇಕ ‘ಮ್ಯಾರಥಾನ್‘ ಗಳಲ್ಲಿ ಭಾಗವಹಿಸಿದ್ದಾಳೆ.

ಈಕೆ ನರ್ತಿಸಿರುವ ಪ್ರಮುಖ ನೃತ್ಯರೂಪಕಗಳೆಂದರೆ, ನೃತ್ಯೋಲ್ಲಾಸ, ಹರಿವಿಲಾಸಂ, ನವರಸ ಕೃಷ್ಣ ಸೇರಿದಂತೆ ಮೈಸೂರು ದಸರಾ ಉತ್ಸವ, ಹೆಜ್ಜೆ-ಗೆಜ್ಜೆ, ರೋಟರಿ ನೃತ್ಯೋತ್ಸವ, ಇನ್ನರ್ ವೀಲ್ ಕ್ಲಬ್ ಫೆಸ್ಟಿವಲ್, ಯುವದಸರಾ ಮುಂತಾದವು.

ಮುಂದೆ ನೃತ್ಯಶಾಲೆಯೊಂದನ್ನು ತೆರೆದು ಅದರಲ್ಲಿ ಬಡ ಹಾಗೂ ವಿಶೇಷ ಚೇತನದ ನೃತ್ಯಾಕಾಂಕ್ಷಿಗಳಿಗೆ ಉಚಿತವಾಗಿ ನೃತ್ಯ ಹೇಳಿಕೊಡಬೇಕೆನ್ನುವ ಆಶಯ ಈಕೆಯದು.

ಅಪಾರ ಆತ್ಮವಿಶ್ವಾಸವುಳ್ಳ ಶ್ರುತಿಗೆ, ತನ್ನ ಸ್ವಸಾಮರ್ಥ್ಯ-ನೃತ್ಯ-ಸಂಗೀತದ ಒಲವು ಹಾಗೂ ಫಿಟ್ನೆಸ್ ಬಗ್ಗೆ ದೃಢವಾದ ನಂಬಿಕೆ. ನೃತ್ಯದ ಕೆಲವು ಅಪರೂಪದ ಕೃತಿಗಳಿಗೆ ಅಪೂರ್ವವಾಗಿ ನೃತ್ಯಸಂಯೋಜನೆ ಮಾಡಿ ವಿಶ್ವದಾದ್ಯಂತ ಪ್ರದರ್ಶನಗಳನ್ನು ನೀಡುವುದು ಅವಳ ಮುಂದಿನ ಕಾರ್ಯಯೋಜನೆಗಳು.

Related posts

ಕೂಚಿಪುಡಿ ನೃತ್ಯಾಭಿನಯ ಕುಶಲಿ ಸರಸ್ವತಿ ರಜತೇಶ್

YK Sandhya Sharma

ಉಭಯ ನೃತ್ಯಶೈಲಿಯ ಕಲಾವಿದೆ ಕಾವ್ಯಶ್ರೀ ನಾಗರಾಜ್

YK Sandhya Sharma

ಸರ್ವಕಲಾ ಸಂಪನ್ನೆ ನೃತ್ಯ ಕಲಾವಿದೆ ಮಾನಸ ಕಂಠಿ

YK Sandhya Sharma

Leave a Comment

This site uses Akismet to reduce spam. Learn how your comment data is processed.