Image default
Dancer Profile

ತ್ರಿಶೈಲಿಯ ಮೋಹಕ ನರ್ತಕಿ ಮಾಯಾ ಧನಂಜಯ್

ಈ ಹುಡುಗಿ ನೋಡಲು ಬಲು ಮೆದು, ಮಾತೂ ಮಿತ, ಹಿತವಾದ ದನಿ. ಆದರೆ ವೇದಿಕೆಯ ಮೇಲೆ ಲವಲವಿಕೆಯಿಂದ ನರ್ತಿಸಲು ತೊಡಗಿದರೆ ಗರಿಗೆದರಿದ ಚೇತೋಹಾರಿ ನವಿಲು. ಹುಟ್ಟಿನಿಂದಲೇ ರಕ್ತಗತವಾಗಿ ಬಂದ ನೃತ್ಯಕಲೆ ಅವಳಲ್ಲಿ ಪ್ರವಹಿಸುತ್ತಲಿದೆ. ಈಕೆಯೇ ಭರತನಾಟ್ಯ, ಕಥಕ್ ಮತ್ತು ಒಡಿಸ್ಸೀ ನೃತ್ಯಪ್ರಕಾರದ ತ್ರಿಶೈಲಿಯ ನೃತ್ಯವನ್ನು ಅಭ್ಯಾಸ ಮಾಡಿರುವ ಕಲಾವಿದೆ ಮಾಯಾ ಧನಂಜಯ್.

ಬೆಂಗಳೂರಿನ ಧನಂಜಯ್ ಮತ್ತು ಪ್ರಖ್ಯಾತ ನೃತ್ಯಗುರು-ಕಲಾವಿದೆ ಶುಭಾ ಧನಂಜಯ್ ಅವರ ಪುತ್ರಿಯಾದ ಮಾಯಾ ತಾಯಿಯ ಮಡಿಲಲ್ಲಿ ಮಲಗಿ-ಕೂತು ನೃತ್ಯವನ್ನು ನೋಡುನೋಡುತ್ತಲೇ ಬೆಳೆದವಳು. ಮನೆಯಲ್ಲಿ ಸದಾ ನೃತ್ಯಪೂರ್ಣ ವಾತಾವರಣ. ಹೆಂಡತಿ-ಮಕ್ಕಳ ಕಲೆಗೆ ಬೆಂಬಲವಾಗಿ ನಿಂತ ಕಲಾರಾಧಕ ತಂದೆ ಧನಂಜಯ್. ಇನ್ನೇನು ಬೇಕು?…ಮೂರುವರ್ಷದ ಮಗು ಮಾಯಾ ರಂಗದ ಮೇಲೆ ಕೃಷ್ಣನ ವೇಷ ಹಾಕಿ ಸೈ ಎನಿಸಿಕೊಂಡು, ತನ್ನ ಐದನೆಯ ವರ್ಷಕ್ಕೆ ನೃತ್ಯದ ಹೆಜ್ಜೆಗಳನ್ನಿರಿಸಿ, ಮೊದಲ ಕಾರ್ಯಕ್ರಮ ನೀಡಿದಳು.

ತಾಯಿ ಶುಭಾರ ನುರಿತ ಗರಡಿಯಲ್ಲಿ ಬಹುಬೇಗ ಭರತನಾಟ್ಯ ಮತ್ತು ಕಥಕ್ ನೃತ್ಯದ ಪಟ್ಟುಗಳನ್ನರಿತು ಶಾಲಾ-ಕಾಲೇಜಿನ ಎಲ್ಲ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಲ್ಲದೆ, ಸ್ಪರ್ಧೆಗಳಲ್ಲಿ ಪಾಲ್ಗೊಂಡು ಅಸಂಖ್ಯ ಬಹುಮಾನಗಳನ್ನು ತನ್ನದಾಗಿಸಿಕೊಂಡ ಹೆಮ್ಮೆ ಅವಳದು. ನೃತ್ಯದೊಡನೆ, ಕರ್ನಾಟಕ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡಿ ಕರ್ನಾಟಕ ಸರ್ಕಾರದ ಜ್ಯೂನಿಯರ್ ಪರೀಕ್ಷೆಯಲ್ಲಿ ಅತ್ಯುಚ್ಚ ಅಂಕಗಳನ್ನು ಪಡೆದಳು. ವೀಣಾವಾದನವನ್ನೂ ಅಭ್ಯಸಿಸಿರುವ ಮಾಯಾ, ವಿದ್ಯಾರ್ಥಿ ದೆಸೆಯಲ್ಲಿ ಥ್ರೋ ಬಾಲ್ ಮತ್ತು ಉತ್ತಮ ಅಥ್ಲೆಟಿಕ್ ಕ್ರೀಡಾಪಟು. ಯೋಗಾ, ಈಜು, ಸ್ಕೇಟಿಂಗ್, ಸೈಕ್ಲಿಂಗ್, ಫೋಟೋಗ್ರಫಿ ಇತರ ಹವ್ಯಾಸಗಳು. 

ಅಂಬೇಡ್ಕರ್ ಕಾಲೇಜಿನಿಂದ ಬಿ.ಇ. ಪದವೀಧರೆಯಾಗಿರುವ ಇವಳು, ಶುಭಾ ಧನಂಜಯ್ ಸ್ಥಾಪಿಸಿರುವ                             ‘’ನಾಟ್ಯಾಂತರಂಗ’’  ನೃತ್ಯಶಾಲೆಯ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯಳಾಗಿದ್ದು, ಹತ್ತು ವರ್ಷಗಳ ಹಿಂದೆಯೇ ತನ್ನ ‘ರಂಗಪ್ರವೇಶ’ ನೆರವೇರಿಸಿಕೊಂಡಳು. ‘ಮೇಕಪ್’ ಮಾಡುವ ಕಲೆಯಲ್ಲೂ ಪಳಗಿರುವ ಮಾಯಾ, ಮಕ್ಕಳಿಗೆ ನೃತ್ಯಶಿಕ್ಷಣ ಮತ್ತು ನೃತ್ಯಸಂಯೋಜನೆಯ ಕಾರ್ಯಗಳನ್ನು ಕೈಗೊಂಡಿದ್ದಾಳೆ. ಭರತನಾಟ್ಯದ ‘ವಿದ್ವತ್ ‘ ನೃತ್ಯಪರೀಕ್ಷೆಯಲ್ಲಿ ಮತ್ತು ‘ಕಥಕ್ ‘ ವಿದ್ವತ್ ಪೂರ್ವಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದುಕೊಂಡ ಗರಿಮೆ. ದೆಹಲಿಯಲ್ಲಿ ನೆಲೆಸಿರುವ ಕಥಕ್ ಹಿರಿಯಗುರು ಗೀತಾಂಜಲಿ ಲಾಲ್ ಅವರ ಬಳಿ ಹೆಚ್ಚಿನ ಅಭ್ಯಾಸವನ್ನು ಎಂಟುವರ್ಷಗಳಿಂದ  ಪಡೆದುಕೊಳ್ಳುತ್ತಾ, ಸುದರ್ಶನ್ ಸಾಹು ಅವರಲ್ಲಿ ಒಡಿಸ್ಸಿ ನೃತ್ಯವನ್ನು ಕಳೆದ ಐದುವರ್ಷಗಳಿಂದ ಕಲಿಯುತ್ತಿದ್ದಾಳೆ. ಭರತನಾಟ್ಯ ಮತ್ತು ಕಥಕ್ ಎರಡೂ ಶೈಲಿಗಳ ನೃತ್ಯಪ್ರಕಾರಗಳಲ್ಲಿ ದೂರದರ್ಶನದ ‘ಗ್ರೇಡೆಡ್ ಆರ್ಟಿಸ್ಟ್’ ಆಗಿರುವ ಮಾಯಾ, ಚಂದನ ಸೇರಿದಂತೆ ಹಲವಾರು ಟಿವಿ ವಾಹಿನಿಗಳಲ್ಲಿ ಅನೇಕ ನೃತ್ಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ್ದಾಳೆ.

ದೇಶ-ವಿದೇಶಗಳಲ್ಲಿ ಸಾಕಷ್ಟು ನೃತ್ಯ ಕಾರ್ಯಕ್ರಮಗಳನ್ನು ನೀಡಿರುವ ಮಾಯಾ, ಅನೇಕ ಏಕವ್ಯಕ್ತಿ ಪ್ರದರ್ಶಗಳನ್ನು ನೀಡಿ ನೋಡುಗರ-ವಿಮರ್ಶಕರ ಗಮನ ಸೆಳೆದಿದ್ದಾಳೆ. ಛಾವ್ , ಜಾನಪದ ನೃತ್ಯ, ಮತ್ತು ಕಲರಿಪಯಟ್ಟು ಮಾರ್ಷಿಯಲ್ ಆರ್ಟ್ ಕೂಡ ಅಭ್ಯಸಿಸಿದ್ದಾಳೆ. ವಿಶಾಖಪಟ್ಟಣದ ವೈಶಾಖಿ ನೃತ್ಯೋತ್ಸವ, ವಿಶ್ವ ಕನ್ನಡ ವಚನ ಸಮ್ಮೇಳನ, ಕಿತ್ತೂರು, ಹಂಪಿ, ಲಕ್ಕುಂಡಿ ಉತ್ಸವಗಳಲ್ಲದೆ, ಉದಯಪುರ, ದೆಹಲಿ, ಗೋವಾ, ಕೊಚ್ಚಿನ್, ಭಿಲಾಯ್, ಮೈಸೂರು ದಸರಾ ಮುಂತಾದ ನಾಡಿನ ಸಾಂಸ್ಕೃತಿಕ ಉತ್ಸವಗಳಲ್ಲಿ ಭಾಗವಹಿಸಿದ್ದಾಳೆ. ಬಾಲಿ, ಇಂಡೋನೇಷಿಯ, ಜಿನಾನ್, ಚೈನಾಗಳಲ್ಲಿ ಹಾಗೂ ಅಮೇರಿಕಾದ ಅಕ್ಕಾ ಸಮ್ಮೇಳನದಲ್ಲಿ ನೃತ್ಯ ಕಾರ್ಯಕ್ರಮ ನೀಡಿದ ಹಿರಿಮೆ ಇವಳದು.

ಮಾಯಳ ಪ್ರತಿಭೆಯನ್ನರಸಿ ಹಲವಾರು ಪ್ರಶಸ್ತಿಗಳು ಸಂದಿವೆ. ನಾಟ್ಯಶ್ರೀ, ನೃತ್ಯಶ್ರೀ, ನೃತ್ಯ ನಿರಂಜಿನಿ, ಕರ್ನಾಟಕ ನೃತ್ಯಶ್ರೀ, ಅರಳುಮಲ್ಲಿಗೆ, ನಾಟ್ಯವೇದ, ನೃತ್ಯ ವಿಲಾಸಿನಿ, ಕಲಾಯೋಗಿ, ಆರಾಧನಾ ಸಂಮಾನ್ ಮುಂತಾದವು. ಆಡಿಯೋ ಎಂಜಿನಿಯರಿಂಗ್ ವಿಷಯದಲ್ಲಿ ಹೈಯರ್ ಸ್ಟಡೀಸ್ ಮಾಡಬೇಕೆನ್ನುವ ಆಕಾಂಕ್ಷೆಯುಳ್ಳ ಮಾಯಾಗೆ ‘ಕಲೈ ಕಾವೇರಿ’ ಯೂನಿವರ್ಸಿಟಿಯಲ್ಲಿ ಎಂ.ಎ.ಭರತನಾಟ್ಯವನ್ನು ಮಾಡುವ ಇರಾದೆಯೂ ಇದೆ. 

Related posts

ಅನುಪಮ ಸಾಧಕಿ ಭರತನಾಟ್ಯ ಕಲಾವಿದೆ ಕೌಸಲ್ಯ ನಿವಾಸ್

YK Sandhya Sharma

ಮೋಹಕ ಒಡಿಸ್ಸಿ ನರ್ತಕಿ ಕರಿಷ್ಮಾ ಅಹುಜಾ

YK Sandhya Sharma

ಪ್ರತಿಭಾವಂತ ನೃತ್ಯಗುರು ವಿದುಷಿ ಕೆ.ಬೃಂದಾ

YK Sandhya Sharma

Leave a Comment

This site uses Akismet to reduce spam. Learn how your comment data is processed.