Image default
Dancer Profile

ಅನುಪಮ ಕಥಕ್ ನೃತ್ಯಗಾರ್ತಿ ವಿಶ್ರುತಿ ಆಚಾರ್ಯ

ಬಹುಮುಖ ಪ್ರತಿಭೆಯ ವಿಶ್ರುತಿಯ ಪ್ರಧಾನ ಆಸಕ್ತಿ ಮನೋಹರ ನೃತ್ಯಶೈಲಿಯ ಕಥಕ್. ಬಾಲ್ಯದ ಒಂಭತ್ತರ ಎಳೆವಯಸ್ಸಿನಲ್ಲೇ ನೃತ್ಯಕ್ಕೆ ಮನಸೋತ ಅವಳು ಕಳೆದ ಹದಿನಾರು ವರುಷಗಳಿಂದ ಸತತ ಕಥಕ್ ಶಿಕ್ಷಣ ಪಡೆಯುತ್ತಿರುವುದು ಪ್ರಖ್ಯಾತ ಅಂತರಾಷ್ಟ್ರೀಯ ಕಥಕ್ ನೃತ್ಯಪಟುಗಳಾದ ನೃತ್ಯ ಕಲಾವಿದರು ಮತ್ತು ಗುರುಗಳಾದ ನಿರುಪಮಾ ಹಾಗೂ ರಾಜೇಂದ್ರ ದಂಪತಿಗಳಲ್ಲಿ.

ಉಡುಪಿಯವರಾದ ಸುರೇಂದ್ರ ಕೆ.ಹೆಚ್. ಮತ್ತು ರೇಖಾ ಆಚಾರ್ಯ ದಂಪತಿಗಳ ಪುತ್ರಿಯಾದ ವಿಶ್ರುತಿ ಬಾಲ ಪ್ರತಿಭೆ. ಬೆಂಗಳೂರಿನ ಕಾರ್ಮಲ್ ಶಾಲೆಯಲ್ಲಿ ವಿದ್ಯಾಭ್ಯಾಸ. ಎಲ್ಲ ತರಗತಿಗಳಲ್ಲೂ ಉತ್ತಮಾಂಕಗಳು. ಅರಳು ಹುರಿದಂತೆ ಮಾತನಾಡುವ ಈಕೆ ಉತ್ತಮ ನಿರೂಪಕಿ ಕೂಡ. ಕಾಲೇಜಿನ ಎಲ್ಲ ಕಾರ್ಯಕ್ರಮಗಳಲ್ಲಿ, `ಅಭಿನವ ಡಾನ್ಸ್ ಕಂಪನಿ’ ಯ ಎಲ್ಲ ನೃತ್ಯ ಕಾರ್ಯಕ್ರಮಗಳಲ್ಲೂ ಉತ್ಸಾಹದಿಂದ ಭಾಗವಹಿಸುವ ಇವಳು, ರಂಗದ ಮುಂದೆ ಮೈಕ್ ಹಿಡಿದು ನಿರರ್ಗಳವಾಗಿ ನಿರೂಪಣೆ ಮಾಡಬಲ್ಲ ಛಾತಿವಂತಳೂ ಕೂಡ. ರಂಗದ ನೇಪಥ್ಯದ ಇನ್ನಿತರ ಸಿದ್ಧತಾ ಕೆಲಸಗಳಲ್ಲೂ ಸಿದ್ಧಹಸ್ತಳು. ಅಭಿನವ ಡಾನ್ಸ್ ಕಂಪೆನಿಯಲ್ಲಿ ಕಿರಿಯ ನೃತ್ಯವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ತರಬೇತಿಯನ್ನು ನೀಡುತ್ತ ಬಂದಿದ್ದು, ಅಪಾರ ಅನುಭವವನ್ನೂ ಗಳಿಸಿದ್ದಾಳೆ.

ವಿದ್ಯಾಭ್ಯಾಸದಲ್ಲೂ ಜಾಣೆಯಾಗಿರುವ ವಿಶ್ರುತಿ, ಎಸ್.ಎಸ್.ಎಲ್.ಸಿ. ಮತ್ತು ಪಿ.ಯೂ.ಸಿ.ಯಲ್ಲಿ ಡಿಸ್ಟಿಂಕ್ಷನ್  ಪಡೆದುಕೊಂಡವಳು. ಕಿರಿಯ ವಯಸ್ಸಿಗೇ ತನ್ನ ಬಹುಮುಖ ವ್ಯಕ್ತಿತ್ವವನ್ನು ಪ್ರಫುಲ್ಲವಾಗಿ `ಸಾಧನೆ’ಯ ಹಾದಿಯಲ್ಲಿ ರೂಪಿಸಿಕೊಳ್ಳುತ್ತಿರುವ ವಿಶ್ರುತಿ ಕೆ. ಆಚಾರ್ಯ ಬಹು ಕ್ರಿಯಾಶೀಲ ಹದಿಹರೆಯದ ಯುವತಿ. ನಗರದ ಬಿ.ಎಂ.ಎಸ್. ಎಂಜಿನಿಯರಿಂಗ್ ಕಾಲೇಜಿನಲ್ಲಿ ಟೆಲಿಕಮ್ಯೂನಿಕೇಷನ್ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ವಿಶ್ರುತಿ ಬಹುಶ್ರುತಳು.. ಚಟುವಟಿಕೆಯ ಜೀವನಶೈಲಿಯೇ ಅವಳೆಲ್ಲ ಪ್ರಗತಿಗೆ ಬಹುತೇಕ ಕಾರಣವೆನ್ನಬಹುದು.

ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಅಪಾರ ಉತ್ಸುಕತೆ ತೋರುವ ವಿಶ್ರುತಿ, ಕಾಲೇಜಿನ ಕಲ್ಚರಲ್ ಸೆಕ್ರೆಟರಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದು, ಅನೇಕ ಸ್ವಯಂ ಸೇವಾಸಂಸ್ಥೆಗಳಲ್ಲೂ ನೈರ್ಮಲ್ಯ, ಆರೋಗ್ಯ ಕುರಿತ ವಿಷಯಗಳ ಜೊತೆ ವಿಜ್ಞಾನ ಪ್ರಸರಣ ಕಾರ್ಯಕ್ರಮಗಳಲ್ಲೂ  ತೊಡಗಿಕೊಂಡು ಬದ್ಧತೆಯಿಂದ ಕೆಲಸ ಮಾಡಿದ್ದು,  ಇವಳ ಸಕ್ರಿಯ ಮನೋಭಾವದ ಪ್ರತಿಬಿಂಬ. ಕಾಲೇಜಿನ ರೋಟರ್ಯಾಕ್ಟ್ ಕ್ಲಬ್ ಕಾರ್ಯದರ್ಶಿ, ಚಾಪ್ಟರ್ ಸದಸ್ಯೆ ಹಾಗೂ ಅನೇಕ ಕಾರ್ಯಕ್ರಮಗಳ ಮತ್ತು ಉತ್ಸವಗಳ ಆಯೋಜಕಿ ಕೂಡ ಆಗಿ ಕಾರ್ಯ ಚತುರತೆ ತೋರಿದ್ದಾಳೆ. ವಿದ್ಯಾರ್ಥಿನಿಯಾಗಿದ್ದ ಕಾಲಾವಧಿಯಲ್ಲಿ, ಅಂತರ ಕಾಲೇಜಿನ ಎಲ್ಲ ಶಾಸ್ರೀಯ ನೃತ್ಯಸ್ಪರ್ಧೆಗಳಲ್ಲಿ  ಬಹುಮಾನಗಳು ಇವಳ ಪಾಲಾಗಿದ್ದವು. ರಾಜ್ಯಾದ್ಯಂತ ಜಯ ಗಳಿಸಿದ ತನ್ನ  ಕಾಲೇಜಿನ ತಂಡದ ಸಮೂಹ ನೃತ್ಯಸ್ಪರ್ಧೆಗಳ ನೇತೃತ್ವ ವಹಿಸಿಕೊಂಡ ಹೆಮ್ಮೆ ವಿಶ್ರುತಿಯದು.

ತಾನು ನೃತ್ಯ ಕಲಿಯುತ್ತಿರುವ “ಅಭಿನವ ಸಂಸ್ಥೆ’’ಯಿಂದ ಶಿಸ್ತು, ಕಠಿಣ ಪರಿಶ್ರಮ, ವೃತ್ತಿಪರತೆ ಮತ್ತು ಸಮಯಪಾಲನೆಯ ಮೌಲ್ಯಗಳನ್ನು ಅಳವಡಿಸಿಕೊಂಡು ತನ್ನ ವ್ಯಕ್ತಿತ್ವ ರೂಪಿಸಿಕೊಂಡಿರುವ ವಿಶ್ರುತಿ, ಈಗ, ‘ಅಭಿನವ  ಡಾನ್ಸ್ ಕಂಪೆನಿ’ ಯಲ್ಲಿ ನೃತ್ಯ ಶಿಕ್ಷಣ ನೀಡುತ್ತಿರುವ ಹಿರಿಯ ಶಿಕ್ಷಕಿಯೂ ಹೌದು. ತಾನು ಓದಿದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುವ ಶಾಸ್ತ್ರೀಯ ನೃತ್ಯಸ್ಪರ್ಧೆಗೆ ವಿಶ್ರುತಿ ಸತತ ಐದುವರ್ಷಗಳಿಂದ ತೀರ್ಪುಗಾರಳಾಗಿ ಅಹ್ವಾನಿತಳಾಗುತ್ತಿರುವುದು ಅವಳ ವೈಶಿಷ್ಟ್ಯ.

ಎರಡು ವರ್ಷಗಳ ಹಿಂದೆ ನಡೆದ ಇವಳ ಕಥಕ್ ನೃತ್ಯದ “ರಂಗಪ್ರವೇಶ’’ ಕಾರ್ಯಕ್ರಮ ನೃತ್ಯ ಪ್ರೇಮಿಗಳಿಗೆ ಅತೀವ ಆನಂದದ ರಸದೌತಣ ನೀಡಿತು. ತಾನೊಬ್ಬ ಪ್ರಬುದ್ಧ ಕಲಾವಿದೆ ಎಂದು ಸಾಬೀತುಪಡಿಸಿದಳು. ಅಂದವಳು ನರ್ತಿಸಲು ಆರಿಸಿಕೊಂಡ ಕೃತಿಗಳು ಅವಳ ಪ್ರತಿಭೆಯ ಕಲಾನೈಪುಣ್ಯವನ್ನು ಎತ್ತಿ ಹಿಡಿದಿದ್ದವು. ಉಡುಪಿ ಫಲಿಮಾರು ಪರ್ಯಾಯದಂಥ ಪ್ರತಿಷ್ಠಿತ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ಮಾಡಿ ಮೆಚ್ಚುಗೆ ಪಡೆದ ಹಿರಿಮೆ ಇವಳದು.

ಅಭಿನವ ಡಾನ್ಸ್ ಕಂಪೆನಿಯ ಭಾಗವಾಗಿರುವ ವಿಶ್ರುತಿ, ದೇಶ-ವಿದೇಶಗಳಲ್ಲಿ ಅಸಂಖ್ಯಾತ ನೃತ್ಯ ಪ್ರದರ್ಶನಗಳನ್ನು  ನೀಡಿ ಅಂತರಾಷ್ಟ್ರೀಯ ಹೆಮ್ಮೆಯ ನೃತ್ಯ ಕಲಾವಿದೆಯೆನಿಸಿಕೊಂಡಿದ್ದಾಳೆ. ಲಂಡನ್ನಿನ ಭಾರತೀಯ ವಿದ್ಯಾ ಭವನದಿಂದ ಹಿಡಿದು, ಇವಳು, ಚೆನ್ನೈನ ಮದ್ರಾಸ ಮ್ಯುಸಿಕ್ ಅಕಾಡೆಮಿ, ದೆಹಲಿ, ಬೆಳಗಾಂ, ಅನಂತಪುರ, ರಾಜಕೋಟ್, ಪಲ್ಲಕಾಡ್, ಹೈದರಾಬಾದ್,  ಮೈಸೂರು,ಉಡುಪಿ, ತಿರುಪತಿ ಮುಂತಾದ ಹಾಗೂ  ಬೆಂಗಳೂರಿನ ಬಹುತೇಕ ಎಲ್ಲ ಪ್ರಮುಖ ನೃತ್ಯೋತ್ಸವಗಳಲ್ಲಿ ನರ್ತಿಸಿದ ಅಗ್ಗಳಿಕೆ.

ಹಿರಿಯ ನೃತ್ಯ ದಿಗ್ಗಜ-ತಜ್ಞರಾದ ಪಂಡಿತ್ ಬಿರ್ಜು ಮಹಾರಾಜ್, ಡಾ. ಮಾಯಾರಾವ್, ಶತಾವಧಾನಿ ಗಣೇಶ್ ಮುಂತಾದವರ ಮಾರ್ಗದರ್ಶನ, ಚರ್ಚೆ-ಸಂವಾದಗಳ ಸುಯೋಗ ಇವಳಿಗೆ ದೊರೆತಿದೆ. ಇದರೊಡನೆ ಇವಳು ತನ್ನ ನೃತ್ಯ ಕಲಾವಿದೆ ಸಹೋದರಿಯೊಡನೆ ( ಕಲ್ಮಂಜೆ ಸಹೋದರಿಯರು ಎಂದೇ ಖ್ಯಾತ) ತಾವೇ ಸಂಯೋಜಿಸಿದ ಹಲವು ನೃತ್ಯ ಕೃತಿಗಳನ್ನು ದಕ್ಷಿಣ ಭಾರತಾದ್ಯಂತ ಅನೇಕ ನೃತ್ಯೋತ್ಸವಗಳಲ್ಲಿ  ಪ್ರದರ್ಶಿಸಿ ಮೆಚ್ಚುಗೆ ಪಡೆದ ಭಾಗ್ಯ.  

ಪ್ರಸ್ತುತ, ವಿಶ್ರುತಿ, ‘ರಿಸ್ಟಡ್ ಎನರ್ಜಿ’ ಯಲ್ಲಿ ರಿಸರ್ಚ್ ಅನಲಿಸ್ಟ್ ಆಗಿ ಉದ್ಯೋಗ ನಿರತಳು.   ನೃತ್ಯಾರಾಧನೆಯಲ್ಲಿ ತೊಡಗಿಕೊಂಡಿರುವ  ಅವಳು ತನ್ನ ಬೌದ್ಧಿಕ ಚಟುವಟಿಕೆಗಳಿಗೆ ಮೆಚ್ಚುಗೆ ಹಾಗೂ ಬಹುಮಾನಗಳನ್ನು ಪಡೆದಿರುವಂತೆ ತನ್ನ ಕಲಾ ಪ್ರೌಢಿಮೆ ಪ್ರದರ್ಶನಗಳಿಗೂ ಸಾಕಷ್ಟು ಶ್ಲಾಘನೆ ಮತ್ತು ಗೌರವಗಳನ್ನು ಪಡೆದಿದ್ದಾಳೆ. ಕಲಾ ಪೋಷಕರಾದ ತಂದೆ ಸುರೇಂದ್ರ ಹಾಗೂ ತಾಯಿ ರೇಖಾ ಮತ್ತು ತಮ್ಮ ವೈಭವ್ ಕೆ. ಆಚಾರ್ಯ ( ಕಂಪ್ಯೂಟರ್ ಎಂಜಿನಿಯರಿಂಗ್ ವಿದ್ಯಾರ್ಥಿ) ಅವರೊಡನೆ ಸಂತೃಪ್ತಿಯ ಕುಟುಂಬ ಇವರದು.

                             *********************

Related posts

ಪ್ರತಿಭಾ ಸಂಪನ್ನೆ ನೃತ್ಯಕಲಾವಿದೆ ಡಾ. ಸಿಂಧೂ ಪುರೋಹಿತ್

YK Sandhya Sharma

ಸೃಜನಶೀಲ ನೃತ್ಯಕಲಾವಿದೆ ಪೂರ್ಣಿಮಾ ರಜನಿ

YK Sandhya Sharma

ಉದಯೋನ್ಮುಖ ಕಥಕ್ ನೃತ್ಯ ಕಲಾವಿದೆ ಶ್ರುತಿ ಗುಪ್ತ

YK Sandhya Sharma

Leave a Comment

This site uses Akismet to reduce spam. Learn how your comment data is processed.