ಶಾಸ್ತ್ರೀಯ ನೃತ್ಯಗಳಿಗೆ ತನ್ನದೇ ಆದ ಒಂದು ಸೊಬಗಿದೆ. ಶಾಸ್ತ್ರಗಳ ಚೌಕಟ್ಟಿನಲ್ಲಿ ವಿಕಸಿತವಾದ, ನಿರ್ದಿಷ್ಟ ತತ್ವ-ನಿಯಮಗಳ ಆಧಾರಿತ ಕಲಾಬಂಧ. ಪ್ರದರ್ಶನಕ್ಕೆ ಒಳಪಟ್ಟಾಗ, ಅಂತರ್ಲಯವೊಂದು ತನಗೆ ತಾನೇ ಹೊಮ್ಮುತ್ತ ಹೋಗುವುದೇ ನೃತ್ಯಪ್ರಸ್ತುತಿ ರಸಾಯನದ ಒಳಗುಟ್ಟು. ವೇದಿಕೆಯ ಮೇಲೆ ವಿಜೃಂಭಿಸುವ ಪ್ರದರ್ಶಕ ಕಲೆಗಳ ಅಡಿಪಾಯವಾದ ಶಾಸ್ತ್ರದ ಬಗ್ಗೆ ಅದರ ಮೂಲ ವ್ಯಾಕರಣದ ಬಗ್ಗೆ ಎಷ್ಟು ನ ತಲೆಕೆಡಿಸಿಕೊಳ್ಳುತ್ತಾರೆ? ರಂಗದ ಮೇಲೆ ಮನರಂಜಿಸುವ ನೃತ್ಯಪ್ರಕಾರಗಳ ಹಿಂದಡಗಿರುವ ಇತಿಹಾಸ, ಶಾಸ್ತ್ರ, ಪಟ್ಯದ ಎಳೆಗಳನ್ನು ಬಿಡಿಸಿ ಆಳವಾಗಿ ಅಧ್ಯಯನ ಮಾಡಿದವರು ತುಂಬ ವಿರಳ. ಅಂಥ ಅಪರೂಪದ ವ್ಯಕ್ತಿಗಳಲ್ಲಿ ಡಾ.ಕರುಣಾ ವಿಜಯೇಂದ್ರ ಒಬ್ಬರು. ನೃತ್ಯ ಕ್ಷೇತ್ರದಲ್ಲಿ ಅಪಾರ ಅನುಭವ ಪಡೆದು, ಆನಂತರ ಅದರ ಶಾಸ್ತ್ರ, ವ್ಯಾಕರಣಗಳ ಬಗ್ಗೆ ಕೂಲಂಕಷ ಅಧ್ಯಯನ ಮಾಡಿ, ‘’ ಕರ್ನಾಟಕ ದೇವಾಲಯಗಳಲ್ಲಿ ರಂಗಭೋಗ (ನೃತ್ಯ) ‘’ ಎಂಬ ಮಹಾ ಪ್ರಬಂಧ ಬರೆದು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದಿಂದ ‘’ ಡಾಕ್ಟರೇಟ್ ‘’ ಪಡೆದ ನೃತ್ಯಶಾಸ್ತ್ರ ಪಾರಂಗತೆ.
ಮೂಲತಃ ಕರುಣಾ ಭರತನಾಟ್ಯ ಕಲಾವಿದೆ. ಬೆಂಗಳೂರಿನ ವಿದ್ಯಾವರ್ಧಕ ಶಾಲೆಯಲ್ಲಿ ಪ್ರಾಥಮಿಕ ತರಗತಿಯಲ್ಲಿದ್ದಾಗಲೇ ನಾಟ್ಯಗುರು ಪ್ರಭಾವತಿ ಶಾಸ್ತ್ರೀಯವರಲ್ಲಿ ನೃತ್ಯಾಭ್ಯಾಸ ಮಾಡಿ ಸೀನಿಯರ್ ಪರೀಕ್ಷೆಯಲ್ಲಿ ತೇರ್ಗಡೆಯಾದವರು. ಸಂಗೀತಾಭ್ಯಾಸವೂ ಜೊತೆಯಲ್ಲೇ ಸಾಗಿತ್ತು. ಇದರೊಡನೆ ರಂಗಭೂಮಿಯ ಚಟುವಟಿಕೆಗಳಲ್ಲೂ ಆಸಕ್ತಿ. ಹಲವಾರು ನಾಟಕಗಳಲ್ಲಿ ಅಭಿನಯ. ಪಿಯೂಸಿ ಯ ನಂತರ ತಮ್ಮ ಪ್ರಧಾನ ಆಸಕ್ತಿ ಭರತನಾಟ್ಯ ಕಲಿಕೆಯ ಬಗ್ಗೆಯೇ ಪೂರ್ಣಗಮನ. ಬೆಂಗಳೂರು ವಿಶ್ವ ವಿದ್ಯಾಲಯದ ಸೆಂಟ್ರಲ್ ಕಾಲೇಜಿನಲ್ಲಿ ನೃತ್ಯ-ನಾಟಕ-ಸಂಗೀತ ವಿಭಾಗಕ್ಕೆ ಸೇರ್ಪಡೆ. ಮನೆಯಲ್ಲಿ ಉತ್ತಮ ಸಾಂಸ್ಕೃತಿಕ ವಾತಾವರಣವಿದ್ದುದರಿಂದ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ಸಂಸ್ಕಾರವಿತ್ತು. ಅಧ್ಯಯನದ ಬಗ್ಗೆ ಏಕಾಗ್ರತೆಯಿತ್ತು. ಹೀಗಾಗಿ ನೃತ್ಯ ವಿಷಯದಲ್ಲಿ ಬಿ.ಎ. ಪದವಿ ಉತ್ತಮದರ್ಜೆಯಲ್ಲಿ ದೊರೆಯಿತು.
ಮುಂದೆ, ಅಲ್ಲಲ್ಲಿ ನೃತ್ಯ ಪ್ರದರ್ಶನಗಳನ್ನು ನೀಡುತ್ತಿದ್ದರೂ, ಹೆಚ್ಚಿನ ಅಧ್ಯಯನದ ತುಡಿತ. ಹೈದರಾಬಾದಿನ `ಸರೋಜಿನಿ ನಾಯ್ಡು ಸ್ಕೂಲ್ ಆಫ್ ಫರ್ಫಾರ್ಮಿಂಗ್ ಆರ್ಟ್ಸ್ ‘ ನಲ್ಲಿ ಭರತನಾಟ್ಯ ಸ್ನಾತಕೋತ್ತರ (ಎಂ.ಎ.) ತರಗತಿಗೆ ಪ್ರವೇಶ. ಇಲ್ಲೇ ಆಕೆಗೆ ನಿಜವಾದ ನೃತ್ಯ ಸಾಗರದ ದರ್ಶನ.
ಕಲಿಕೆಯ ವಿಸ್ತಾರ ಅರಿವಾಗುತ್ತಿದ್ದಂತೆ, ಬಹು ನಿಷ್ಠೆ-ಶ್ರದ್ಧೆಗಳಿಂದ ಕಲಿಕೆಯಲ್ಲಿ ನಿಮಗ್ನರಾದರು.ನೃತ್ಯಶಾಸ್ತ್ರ, ಪ್ರಸ್ತುತಿ, ಸಂಯೋಜನೆಯ ಜೊತೆಜೊತೆಗೆ ದೃಶ್ಯಕಲೆ. ಪೇಯಿಂಟಿಂಗ್, ರಂಗಭೂಮಿಯ ಪ್ರಾಥಮಿಕ ಪಾಠಗಳು, ಸೆಮಿನಾರುಗಳಲ್ಲಿ ಪತ್ರಿಕಾ ಮಂಡನೆ, ಮಾಸ್ ಮೀಡಿಯಾ ಕಮ್ಯುನಿಕೇಶನ್ ಪರಿಚಯ, ಮುಂತಾಗಿ ಇಲ್ಲಿನ ವಿದ್ಯಾಭ್ಯಾಸದ ದಿನಗಳು ಕರುಣಾಗೆ ಜ್ಞಾನವಿಸ್ತಾರ-ಹರವುಗಳ ಕಾಣ್ಕೆಯ ಕಾಲಘಟ್ಟ. ನಾಟ್ಯಶಾಸ್ತ್ರದ ನಾಲ್ಕೂ ಗ್ರಂಥಗಳ ಸಮಗ್ರ ಅಧ್ಯಯನ. ನೃತ್ಯದ ಮಜಲುಗಳ ಪರಿಚಯ. ದೇಶದ ತಜ್ಞ ವಿದ್ವಾಂಸರುಗಳಿಂದ ಸೋದಾಹರಣ ಉಪನ್ಯಾಸ ಕೇಳುವ ಅವಕಾಶ. ಏಕವ್ಯಕ್ತಿ ನೃತ್ಯ, ಸಮೂಹ ನೃತ್ಯ, ಕಥಕ್, ನಟುವಾಂಗಂ,ಗಾಯನ, ನಾಟಕಾಭಿನಯ, ಪ್ರಸಾಧನ ತರಬೇತಿ ಮತ್ತು ದೇಸೀ ನೃತ್ಯಗಳಾದ ಜಾನಪದ, ಲಾವಣಿ, ತಮಾಷ, ಭಾಂಗಡಾ, ಮುಂತಾದ ನೃತ್ಯ ಪ್ರಕಾರಗಳ ಕಲಿಕೆ ಮತ್ತು ದಿನದಲ್ಲಿ ಎಂಟು ಗಂಟೆಗಳ ಸತತ ಅಭ್ಯಾಸ. ಎರಡು ವರ್ಷಗಳಲ್ಲೂ ಅತುಚ್ಚ ಅಂಕಗಳಿಂದ ತೇರ್ಗಡೆಯಾಗುವಷ್ಟರಲ್ಲಿ ‘’ಶಾಸ್ತ್ರ ನಿಪುಣೆ’’ ಎನಿಸಿಕೊಂಡಿದ್ದರು ಕರುಣಾ.
ಬೆಂಗಳೂರಿಗೆ ವಾಪಸ್ಸಾದ ನಂತರವೂ ಅವರ ಜ್ಞಾನದಾಹ ಇಂಗಲಿಲ್ಲ. ಓದುವ ಗೀಳು ಬಾಲ್ಯದಿಂದಲೂ ಇದ್ದ ಕಾರಣ, ಪಿ.ಹೆಚ್.ಡಿ ಮಾಡಲು ಕ್ಷೇತ್ರಕಾರ್ಯಕ್ಕೆ ಸಿದ್ಧರಾಗಿ ಹೊರಟೇಬಿಟ್ಟರು. ಶಾಸನಗಳ ಅಧ್ಯಯನಕ್ಕಾಗಿ, ಡಿಪ್ಲೊಮಾ ಮಾಡಿ ಅನಂತರ ಪ್ರಸಿದ್ಧ ಇತಿಹಾಸಜ್ಞ ಡಾ.ಹೆಚ್.ಎಸ್. ಗೋಪಾಲರಾಯರ ಮಾರ್ಗದರ್ಶನದಲ್ಲಿ ‘ಪಿ.ಹೆಚ್.ಡಿ.’ ಮುಗಿಸಿದರು. ನೃತ್ಯ ವಿಕಾಸ, ಇತಿಹಾಸ, ಕನ್ನಡ ಕಾವ್ಯಗಳು, ವಾಸ್ತು-ಶಿಲ್ಪಶಾಸ್ತ್ರ,ಆಗಮಶಾಸ್ತ್ರಗಳೆಲ್ಲವನ್ನೂ ಆಮೂಲಾಗ್ರ ಅಧ್ಯಯನ ಮಾಡಿ, ಸುಮಾರು 800 ವರ್ಷಗಳ ಶಾಸನಗಳನ್ನು ಪರಿಶೀಲಿಸಿ, ಶಿಲ್ಪದಲ್ಲಿ ರಂಗಭೋಗವನ್ನು ಗುರುತಿಸಿ, ಅವುಗಳನ್ನು ವಿಶ್ಲೇಷಿಸಿ, ದಾಖಲಿಸಿ, ಸುಮಾರು 60-70 ದೇವಾಲಯಗಳನ್ನು ಗುರುತಿಸಿ, ಕ್ಷೇತ್ರಕಾರ್ಯ ಮಾಡಿ ಅನುಭವಪೂರ್ಣ ಶೋಧನಾಗ್ರಂಥ ಸಿದ್ಧಪಡಿಸಿದ್ದು ಕರುಣಾ ಅವರ ಹೆಗ್ಗಳಿಕೆ.
ಇಂದು ರಂಗದಮೇಲೆ ನೃತ್ಯಪ್ರದರ್ಶನ ನೀಡಿ ರಸಿಕರ ಮನತಣಿಸುವ ನೃತ್ಯಕಲಾವಿದರು ಅಸಂಖ್ಯರಿದ್ದಾರೆ. ಆದರೆ ಆ ನೃತ್ಯಗಳ ಆಧಾರ, ಹಿನ್ನಲೆಯ ಶಾಸ್ತ್ರಗಳನ್ನು ಪರಿಪೂರ್ಣರಾಗಿ ತಿಳಿದುಕೊಂಡ ವಿದ್ವಾಂಸರು ಕಡಮೆಯೆಂದೇ ಹೇಳಬೇಕು. ಇಚ್ಚೆಪಟ್ಟಿದ್ದರೆ ಕರುಣಾ ಇಂದು ಪ್ರಖ್ಯಾತ ನೃತ್ಯಕಲಾವಿದೆಯಾಗಬಹುದಿತ್ತು. ಆದರೆ ಅವರು ಆಯ್ದುಕೊಂಡ ಕ್ಷೇತ್ರ ಮಹತ್ವಪೂರ್ಣವಾದದ್ದು. ನೂರಾರು ಜನ ನೃತ್ಯವಿದ್ಯಾರ್ಥಿಗಳಿಗೆ ನೃತ್ಯಶಾಸ್ತ್ರದ ಬೇರುಗಳನ್ನು ಅವರ ಮನದಾಳದಲ್ಲಿ ಗಟ್ಟಿಯಾಗಿ ಇಳಿಸುತ್ತಿರುವ ಮಹತ್ಕಾರ್ಯ ಸ್ತುತ್ಯಾರ್ಹ.
ಪ್ರಸಿದ್ಧ ನೃತ್ಯಜ್ಞೆ ದಿ. ಸುಂದರಿ ಸಂತಾನಂ ಅವರೊಡಗೂಡಿ ವಿವಿಧ “ಕರಣ’’ಗಳ ಬಗ್ಗೆ ಚಿತ್ರಸಹಿತವಾದ ಪಟ್ಯಗ್ರಂಥವನ್ನು ರಚಿಸಿರುವ ಇವರು ಬೆಂಗಳೂರಿನ ದೇಸೀಕಾಲೇಜಿನ ಪ್ರಿನ್ಸಿಪಾಲರಾಗಿ ಸೇವೆಸಲ್ಲಿಸಿದ್ದು, ಪಿ.ಹೆಚ್.ಡಿ ವಿದ್ಯಾರ್ಥಿಗಳಿಗೆ ತರಬೇತಿ, ದೇಶ-ವಿದೇಶದ ಹಲವು ವಿಶ್ವವಿದ್ಯಾಲಯಗಳಲ್ಲಿ ಮಾನ್ಯತೆ ಪಡೆದ ಮಾರ್ಗದರ್ಶಕರಾಗಿದ್ದಾರೆ.ಸರ್ಕಾರದ ಹಲವಾರು ಪರೀಕ್ಷಾ ಮಂಡಳಿ, ಸಲಹಾ ಸಮಿತಿಗಳ ಸದಸ್ಯೆ. 18 ವರ್ಷಗಳ ಸಂಶೋಧನಾ ಅನುಭವ, 3 ಸಂಶೋಧನಾ ಪ್ರಕಟಣೆಗಳು, 70 ಲೇಖನಗಳನ್ನು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಬರೆದಿರುವ ಹಿರಿಮೆ ಇವರದು.
ಎಲ್ಲಕ್ಕಿಂತ ಮುಖ್ಯಸಂಗತಿಯೆಂದರೆ, ಈ ‘’ಕರುಣಾ ಮಂಗಳವೇಡೆ’’ ಮಹಿಳಾ ಹರಿದಾಸ ಪರಂಪರೆಗೆ ಸೇರಿದ ಮನೆತನದ ಮಗಳು. ಕರ್ನಾಟಕದ ಏಕೀಕರಣಕ್ಕಾಗಿ ದುಡಿದ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರಾದ ಶ್ರೀ ಮಂಗಳವೇಡೆ ಶ್ರೀನಿವಾಸರಾಯರ ಮೊಮ್ಮಗಳು. ಪತಿ ಬಿ.ಕೆ. ವಿಜಯೇಂದ್ರ ಹಿರಿಯ ಸಾಫ್ಟ್ ವೇರ್ ಇಂಜಿನಿಯರಾಗಿ ಉನ್ನತ ಹುದ್ದೆಯಲ್ಲಿದ್ದಾರೆ. ಮಗ ಭಾರ್ಗವ ಬಳ್ಳಾಪುರ ಮನಃಶಾಸ್ತ್ರ ವಿಷಯದಲ್ಲಿ ಕೊನೆಯವರ್ಷದ ಪದವಿ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾನೆ. ಎಲೆಮರೆಯ ಕಾಯಂತೆ ಸದ್ದಿಲ್ಲದೆ ಕೆಲಸ ಮಾಡುತ್ತಿರುವ ಇವರಂಥವರು ಅತಿ ವಿರಳ. ಸದಾ ಶಾಸ್ತ್ರಾಧ್ಯಯನದಲ್ಲಿ ಗಂಭೀರವಾಗಿ ತೊಡಗಿಕೊಂಡಿರುವ ಕರುಣಾ ಅವರು ನೃತ್ಯಲೋಕಕ್ಕೆ ಸಲ್ಲಿಸುತ್ತಿರುವ ಸೇವೆ ಅನನ್ಯ ಎಂದರೆ ಖಂಡಿತಾ ಅತಿಶಯೋಕ್ತಿಯಲ್ಲ.