ನೃತ್ಯ ಇವಳ ಬಾಲ್ಯದ ಪ್ರೀತಿ. ಮಗಳಿಗೆ ನೃತ್ಯ ಕಲಿಸುವುದು ಅವಳ ತಾಯಿ ಅನ್ನಪೂರ್ಣರ ಇಷ್ಟ ಕೂಡ. ತಂದೆ ‘ನೈಷಧಂ’ ಅಶ್ವಥನಾರಾಯಣ ಶಾಸ್ತ್ರಿಗಳು ಅದನ್ನು ಪೋಷಿಸಿದರು. ಹೆತ್ತವರು, ಮಗಳು ಒಬ್ಬ ನೃತ್ಯ ಕಲಾವಿದೆಯಾಗಿ ಬೆಳವಣಿಗೆ ಹೊಂದುವವರೆಗೂ ಅವಳೆಲ್ಲ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬೆನ್ನೆಲುಬಾದವರು. ಹೀಗೆ ಪ್ರಾರಂಭವಾಯಿತು ವಿದುಷಿ ಫಣಿಮಾಲಾ ಚಂದ್ರಶೇಖರ್ ನೃತ್ಯಪಯಣ .

ಶಾಲೆಯಲ್ಲಿ ಯಾವುದೇ ನೃತ್ಯ ಕಾರ್ಯಕ್ರಮವಾದರೂ ಆಸಕ್ತಿಯಿಂದ ಭಾಗವಹಿಸುತ್ತಿದುದನ್ನು ಕಂಡು ಶಿಕ್ಷಕರೊಬ್ಬರು ಆಕೆಯ ಹೆಜ್ಜೆಗಳಿಗೆ ಗೆಜ್ಜೆ ಕಟ್ಟಿ ಸರಿಯಾಗಿ ನಾಟ್ಯಶಿಕ್ಷಣ ಪಡೆಯಲು ನೆರವಾದರು. ಅಂದು ಉತ್ತಮ ಭರತನಾಟ್ಯ ಗುರುವಾಗಿದ್ದ ನೀಲಾ ಜಯರಾಮ್ ಹೀಗೆ ಫಣಿಮಾಲಾಗೆ ಶಿಸ್ತುಬದ್ಧವಾಗಿ ನೃತ್ಯ ಕಲಿಯಲು ಮಾರ್ಗದರ್ಶನ ಮಾಡಿದ ಹಿರಿಯ ತಜ್ಞ ಗುರುಗಳು.
ಹುಡುಗಿ ತನ್ನ ಎಂಟನೆಯ ವಯಸ್ಸಿಗೆ ಪಂದನಲ್ಲೂರು ಶೈಲಿಯ ಶಾಸ್ತ್ರೀಯ ಭರತನಾಟ್ಯವನ್ನು ಆಸಕ್ತಿಯಿಂದ ಕಲಿಯತೊಡಗಿದಳು. ಕರ್ನಾಟಕ ಸರ್ಕಾರ ನಡೆಸುವ ಜ್ಯೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗಳಲ್ಲಿ ಉತ್ತಮಾಂಕಗಳನ್ನು ಪಡೆದು ತೇರ್ಗಡೆಯಾಗುವಷ್ಟರಲ್ಲಿ ಅನೇಕ ವೇದಿಕೆಗಳಲ್ಲಿ ತನ್ನ ನೃತ್ಯಪ್ರತಿಭೆಯ ಮೆರುಗು ತೋರಿದ್ದಳು.
ತಾನಿನ್ನೂ ಶಿಷ್ಯೆಯಾಗಿರುವಾಗಲೇ ಗುರುವಿನ ಅನುಭವ ದಕ್ಕಲೆಂದು ಗುರು ನೀಲಾ ಪುಟ್ಟಮಕ್ಕಳಿಗೆ ಶಿಕ್ಷಣ ನೀಡಲು ಶಿಷ್ಯೆಗೆ ಉದಾರ ಮನದಿಂದ ಪ್ರೋತ್ಸಾಹಿಸಿದ್ದನ್ನು ಮಾಲಾ ಕೃತಜ್ಞತೆಯಿಂದ ನೆನೆಯುತ್ತಾರೆ. ನಿಸ್ವಾರ್ಥ-ಸರಳ ಮನಸ್ಕ ಇಂಥ ಗುರು ದೊರೆಯುವುದು ತನ್ನ ಸೌಭಾಗ್ಯವೆಂಬ ಕೃತಜ್ಞತೆ.

ಶಾಲಾಭ್ಯಾಸ ಮಾಡಿದ ‘ಸೇಕ್ರೆಡ್ ಹಾರ್ಟ್’ ಕಾನ್ವೆಂಟ್ನಲ್ಲಿ ಪ್ರತಿವರ್ಷ ನೃತ್ಯಸ್ಪರ್ಧೆಗಳಲ್ಲಿ ಬಹುಮಾನಗಳ ಸುರಿಮಳೆ. ಎಂ.ಇ.ಎಸ್. ಕಾಲೇಜಿನಲ್ಲೂ ಅದು ಮುಂದುವರಿಯಿತು. ಸಂಗೀತ-ನಾಟಕಗಳಲ್ಲೂ ಪಾಲ್ಗೊಳ್ಳುವ ಅವಕಾಶ. ಕಾಲೇಜಿನ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅನೇಕ ಚಟುವಟಿಕೆಗಳಲ್ಲಿ ತೊಡಗಿಕೊಂಡರು ಮಾಲಾ. ಓದಿನಲ್ಲೂ ಜಾಣೆಯಾದ್ದರಿಂದ ಬಿ.ಎಸ್ಸಿ. ವಿಜ್ಞಾನ ಪದವೀಧರೆಯಾದರು. ಆಕೆಯನ್ನು ಸೈಂಟಿಸ್ಟ್ ಮಾಡುವ ಕನಸು ತಂದೆಗೆ. ಆದರೆ ಮಗಳು ಆರ್ಟಿಸ್ಟ್ ಆದಳು! ಮುಂದೆ ಎಂ.ಸಿ.ಎ. ಅಧ್ಯಯನ. ಕಂಪ್ಯೂಟರ್ ಶಿಕ್ಷಣದ ಬಗ್ಗೆ ಅಪಾರ ಒಲವು ಹೊಂದಿದ್ದ ಮಾಲಾ, ಎನ್,ಐ,ಐ,ಟಿ.ನಲ್ಲಿ ಉದ್ಯೋಗಕ್ಕೆ ಸೇರಿದರು. ಅನೇಕರಿಗೆ ತರಬೇತಿ ನೀಡಿದರು. ಭವಿಷ್ಯವನ್ನು ಕಂಪ್ಯೂಟರ್ ಕ್ಷೇತ್ರದಲ್ಲಿ ಕಟ್ಟಿಕೊಳ್ಳಬೇಕೆಂದು ಬಯಸಿದ್ದರೂ ಆಕೆಯ ಕೈ ಹಿಡಿದ್ದದ್ದು ನೃತ್ಯಕ್ಷೇತ್ರ.

ಎರಡು ದಶಕಗಳ ನೃತ್ಯಶಿಕ್ಷಣದ ಅನುಭವವುಳ್ಳ ಫಣಿಮಾಲಾ, ತನ್ನ ರಂಗಪ್ರವೇಶದ ಸುಮೂಹರ್ತದಲ್ಲೇ ತಮ್ಮ ’’ನೃತ್ಯ ಸಂಜೀವಿನಿ ಅಕಾಡೆಮಿ’’ಯನ್ನು ಆರಂಭಿಸಿದರು. ಇಂದು ನೂರಾರು ವಿದ್ಯಾರ್ಥಿಗಳು ಅವರ ಮಾರ್ಗದರ್ಶನದಲ್ಲಿ ತಯಾರಾಗುತ್ತಿದ್ದಾರೆ. ಅವರಿಗೆ ಅನೇಕ ಉಪಯುಕ್ತ ಕಾರ್ಯಾಗಾರಗಳು, ವೇದಿಕೆ ಕಾರ್ಯಕ್ರಮಗಳು ಮತ್ತು ನಾಟ್ಯ ಗಣಪತಿ, ದಶಾವತಾರ, ರುದ್ರ ಸ್ಫಟಿಕಾ, ವಿಷ್ಣು ಕಲಾಪಂ , ಗೋಕುಲ ನಿರ್ಗಮನ ಮುಂತಾದ ನೃತ್ಯ ರೂಪಕಗಳನ್ನು ರಚಿಸಿ ಶಿಷ್ಯರ ಕಲಾಪ್ರತಿಭೆಯ ಅಭಿವ್ಯಕ್ತಿಗೆ ಅನುವು ಮಾಡಿಕೊಟ್ಟಿದ್ದಾರೆ.
ನೃತ್ಯದೊಡನೆ ಇಲ್ಲಿ ಸಂಗೀತ ಮತ್ತು ನಟುವಾಂಗದ ತರಗತಿಗಳನ್ನೂ ನಡೆಸುತ್ತಾರೆ. ಜೊತೆಗೆ ದಾವಣಗೆರೆಯಲ್ಲೂ ನೃತ್ಯ ಕಲಿಸುತ್ತಾರೆ. ಬಾಲಭವನ ಮತ್ತು ಶ್ರೀ ಶ್ರೀ ರವಿಶಂಕರ್ ಆರ್ಟ್ ಆಫ್ ಲಿವಿಂಗ್ ನಲ್ಲೂ ನಾಟ್ಯಶಿಕ್ಷಣ ನೀಡುತ್ತಿರುವ ಅಗ್ಗಳಿಕೆ.

ದೇಶಾದ್ಯಂತ ಹಲವಾರು ದೇವಾಲಯಗಳಲ್ಲಿ ನೃತ್ಯಕಾರ್ಯಕ್ರಮಗಳನ್ನು ನೀಡಿರುವ ಇವರ ಪ್ರಮುಖ ಕಾರ್ಯಕ್ರಮಗಳೆಂದರೆ- ಬೆಂಗಳೂರು, ಚೆನ್ನೈ, ರಾಜಸ್ಥಾನ ಮತ್ತು ಕೇರಳದಲ್ಲಿ ನಡೆದ ನೃತ್ಯೋತ್ಸವಗಳು. ಭರತನಾಟ್ಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಪಡೆದಿರುವ ಫಣಿಮಾಲಾ, ಪ್ರಸ್ತುತ ಶ್ರೀಕೃಷ್ಣ ಇಂಟರ್ ನ್ಯಾಷನಲ್ ಶಾಲೆಯಲ್ಲೂ ನೃತ್ಯ ಹೇಳಿಕೊಡುವರು. ಶಂಕರ ವಾಹಿನಿಯಲ್ಲಿ ‘ನಾಟ್ಯಾಂಜಲಿ’ ಕಾರ್ಯಕ್ರಮ ನೀಡಿರುವ ಇವರಿಗೆ, ನೃತ್ಯ ಉಪಾಸಕ, ನಾಟ್ಯ ಕಲಾಭಾರತಿ, ಸಂಗೀತ ನಾಟ್ಯಕಲಾ ಸೇವಾ ಆಚಾರ್ಯ ಮುಂತಾದ ಬಿರುದುಗಳು ಸಂದಿವೆ. ವಂಡರ್ ಬುಕ್ ಆಫ್ ಪ್ರೆಸ್, ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್, ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಫಾರ್ ಗ್ರೀನ್ ಇಂಡಿಯಾ ಮುಂತಾದ ದಾಖಲೆಗಳಲ್ಲಿ ಭಾಗವಹಿಸಿದ ಹೆಮ್ಮೆ.

ಇವರೆಲ್ಲ ಚಟುವಟಿಕೆಗಳಿಗೆ ಎಂಜಿನಿಯರ್ ಪತಿ ಚಂದ್ರಶೇಖರ್ ಅವರ ಒತ್ತಾಸೆಯಿದೆ. ತಾಯಿಯ ಬಳಿಯೇ ನೃತ್ಯ ಕಲಿಯುತ್ತಿರುವ ಹತ್ತನೆಯ ತರಗತಿಯ ಮಗಳು ನಿರಂಜಿನಿ ಮತ್ತು ಐದನೆಯ ತರಗತಿಯಲ್ಲಿರುವ ಮಗ ಶೈಲೇಶ್ ಅವರಿಂದ ಕೂಡಿದ ತೃಪ್ತಿದಾಯಕ ಸಂಸಾರ ಇವರದು.