Image default
Dance Reviews

ದೇದೀಪ್ಯಮಾನ ದೀಪ್ತಿಯ ಸುಮನೋಹರ ನರ್ತನ

ರಂಗದ ಮೇಲೆ ನರ್ತಿಸುತ್ತಿದ್ದ ಬಾಲೆಯ ವಯಸ್ಸು ಸಣ್ಣದಾದರೂ ಅವಳು ತೋರುತ್ತಿದ್ದ ಭಾವಾಭಿವ್ಯಕ್ತಿ, ಲೀಲಾಜಾಲವಾದ ಆಂಗಿಕ ಅಭಿನಯ ಕಲಾಭಿಮಾನಿಗಳ ಮನಸೂರೆಗೊಂಡಿತ್ತು. ಪ್ರತಿ ಕೃತಿಯ ಅಂತ್ಯದಲ್ಲೂ ಮೆಚ್ಚುಗೆಯ ಕರತಾಡನದ ಸದ್ದು ಕೇಳಿ ಬರುತ್ತಿದ್ದುದು ವಿಶೇಷ. ಈ ಸುಂದರ ಸಂದರ್ಭ ದೀಪ್ತಿ ಮೋಹನಳ ವಿದ್ಯುಕ್ತ ರಂಗಪ್ರವೇಶದ  ಕಾರ್ಯಕ್ರಮ.

ನೃತ್ಯ ಕಲಾವಿದೆಯಾಗಿ ರೂಹುಗೊಳ್ಳಲು ಅಣಿಗೊಂಡಿದ್ದ ದೀಪ್ತಿಯನ್ನು ತಿದ್ದಿ ತೀಡಿದವರು ನಾಟ್ಯಗುರು ಡಾ. ಸಂಜಯ್ ಶಾಂತಾರಾಂ.  ಭರತನಾಟ್ಯ ಹಾಗೂ ಕುಚುಪುಡಿ ನೃತ್ಯ ವಿಶಾರದ ಸಂಜಯ್, ಅವಳಿಗಿತ್ತ ಕಲೆಯ ಆಯಾಮಗಳ ತರಬೇತಿ ಅವಳು ಪ್ರಸ್ತುತಪಡಿಸಿದ ಎಲ್ಲ ಕೃತಿಗಳಲ್ಲಿ ಮಿನುಗಿತ್ತು. ಅವುಗಳಲ್ಲಿ ಗುರುಗಳ ವಿಶಿಷ್ಟ ಪ್ರತಿಭಾಸ್ಪರ್ಶವಿತ್ತೆಂದರೆ ಅತಿಶಯೋಕ್ತಿಯಲ್ಲ.

ಮೊದಲಿಗೆ `ಪುಷ್ಪಾಂಜಲಿ’ ಯಿಂದ ಕಲಾವಿದೆಯ ನರ್ತನ ಆರಂಭಗೊಂಡಿತು. ಸಕಲ ದೇವಾನುದೇವತೆಗಳ, ಗುರು-ಹಿರಿಯರ, ಮತ್ತು ಪ್ರೇಕ್ಷಕರ ಶುಭಾಶೀರ್ವಾದ ಬೇಡುವ ವಿನೀತ ಪ್ರಾರ್ಥನೆ ಸಲ್ಲಿಸುತ್ತ  ದೀಪ್ತಿ,  ತನ್ನ ತನುವನ್ನು ಬಾಗು-ಬಳುಕುವಿಕೆಗೆ ಒಗ್ಗಿಸಿಕೊಳ್ಳುವ ಹಾದಿಯಲ್ಲಿ  ಮೊದಲಡಿಯಿರಿಸಿದಳು. ಲಕ್ಷ್ಮಿ, ಸರಸ್ವತಿ ಮತ್ತು ಪಾರ್ವತಿದೇವಿಯರಾದ ತ್ರಿಮಾತೆಯರನ್ನು ಸ್ತುತಿಸುವ ಮುತ್ತುಸ್ವಾಮಿ ದೀಕ್ಷಿತರ `ಶ್ರೀ ರಮಾ ಸರಸ್ವತಿ…’ಎಂಬ ಕೀರ್ತನೆಯನ್ನು ಕಲಾವಿದೆ, ಭಕ್ತಿಪೂರ್ವಕ ಭಾವನೆಗಳಿಂದ  ಸಾಕಾರಗೊಳಿಸಿ ದೇವತಾ ಪ್ರಾರ್ಥನೆಯನ್ನು ಸಲ್ಲಿಸಿದಳು. ಅಷ್ಟೇ ಮುದವಾಗಿ ನೃತ್ತಗಳ ಸೌಂದರ್ಯವನ್ನು `ಅಲ್ಲರಿಪು’ ಅನಾವರಣಗೊಳಿಸಿತು.

ವೈವಿಧ್ಯಪೂರ್ಣ ಅಡವುಗಳಿಂದ ಕೂಡಿದ `ಜತಿಗಳು’, ಸ್ವರಗಳ ಸಾಂಗತ್ಯದಲ್ಲಿ ರಚಿತಗೊಂಡ ಈ ನೃತ್ತಬಂಧ, ನೋಡುಗರ ಕಣ್ಮನಗಳಿಗೆ ಹಬ್ಬ, ಕೇಳುವ ಕಿವಿಗಳಿಗೆ ಸುಶ್ರಾವ್ಯ ಇನಿದು ಸ್ವರಗಳ ಮಾಲೆ. ‘ಮಾರ್ಗ’ ಪ್ರವರ್ತಕರಾದ ತಂಜಾವೂರು ಸಹೋದರರು ರಚಿಸಿದ, ಕಲ್ಯಾಣಿರಾಗದ ಜತಿಸ್ವರದ ಅಂದವನ್ನು ಮನಗಾಣಿಸಿದಳು ದೀಪ್ತಿ.

ಮುಂದಿನ ಘಟ್ಟ `ವರ್ಣ’. ಇದು ಭರತನಾಟ್ಯದಲ್ಲಿ ಪ್ರಮುಖವೆನಿಸಿದ, ಕಲಾವಿದೆಯ ಶಕ್ತಿ-ಸಾಮರ್ಥ್ಯಕ್ಕೆ, ಲಯಜ್ಞಾನ ಹಾಗೂ ಅಭಿನಯ ಕೌಶಲ್ಯಕ್ಕೆ ಸವಾಲೊಡ್ಡುವ ದಿವ್ಯ ಪರೀಕ್ಷೆ ಎನ್ನಬಹುದು. ಇದರಲ್ಲಿ ಕಲಾವಿದೆ ಗೆದ್ದರೆ ಅವಳಿಂದ ಎಂಥ ಕ್ಲಿಷ್ಟ  ಕೃತಿಗಾದರೂ ನ್ಯಾಯ ನಿರೀಕ್ಷಿಸಬಹುದು. ನರ್ತಕಿಯ ಅತ್ಯಂತ ತನ್ಮಯತೆ ಹಾಗೂ ಶ್ರಮವನ್ನು ಬೇಡುವ ದೀರ್ಘವಾದ ನೃತ್ಯಬಂಧವಿದು. ಜಟಿಲವಾದ ಈ ಪದವರ್ಣವನ್ನು ಮೊದಲು ವಿಳಂಬ ಕಾಲದಲ್ಲಿ ತದನಂತರ ತೀವ್ರಗತಿಯಲ್ಲಿ ಕುಶಲ ಪಾದಭೇದಗಳೊಂದಿಗೆ, ವಿಶಿಷ್ಟ ಹಸ್ತಚಲನೆ, ಶುದ್ಧ ನೃತ್ತಗಳೊಂದಿಗೆ ದೀಪ್ತಿ ಅಪೂರ್ವ ಅಭಿನಯವನ್ನೂ ತೋರಿದಳು.

ಚೆನ್ನೈನ ಲಲಿತಾ ರಚಿಸಿದ ಕಾಮಾಚಿರಾಗದ ವರ್ಣ `ವೆಲನೈ ಕಾಂಬೋಮ್  ವಡಿ ‘ ಎಂಬ ಶಣ್ಮುಖನ ವಿವಿಧ ರೂಪ-ಮಹಿಮೆಗಳನ್ನು ಹಾಡಿ ಹೊಗಳುವ ಕೃತಿಗೆ ಅಪೂರ್ವ ನರ್ತನವಾದಳು ಕಲಾವಿದೆ. ಅವಳ ಸಂಪೂರ್ಣ ಪ್ರತಿಭೆ ಪ್ರಕಾಶವಾಗಿದ್ದು ಅವಳ ಭಾವಪುರಸ್ಸರ ಪರಿಣಾಮಕಾರಿ ಅಭಿನಯದಲ್ಲಿ. ಸಂಚಾರಿಯಲ್ಲಿ ತೋರಿದ, ಮುರುಗ, ವೃದ್ಧ ರೂಪದಲ್ಲಿ ವಳ್ಳಿಯನ್ನು ವಂಚಿಸಿ ಮದುವೆಯಾದ ಘಟನೆಯ ನಿರೂಪಣೆಯಲ್ಲಿ, ಆ ಸುಂದರಾಂಗ ಕರುಣಾಮಯಿಯನ್ನು  ದೀಪ್ತಿ ನಿಂದಾಸ್ತುತಿಯ ರೂಪದಲ್ಲಿ ಮತ್ತು  ತಾರಕಾಸುರನ ವಧೆಯ ಪ್ರಸಂಗವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಳು.

ಶಿಲಾಬಾಲಿಕೆಯ ನೃತ್ಯಕ್ಕೆ ಎಲ್ಲ ಕೌಶಲಗಳ ಸಾಧ್ಯತೆಗಳನ್ನು ಒದಗಿಸುವ ಡಿವಿಜಿ ಅವರ ಪ್ರಖ್ಯಾತ ಅಂತಃಪುರ ಗೀತೆಗಳ ಸ್ಥಾನ ನಿಜಕ್ಕೂ ಅನನ್ಯ. ಶಿಲಾಬಾಲಿಕೆಯು  ಜೀವತಳೆದು ಮೈದುಂಬಿ ನರ್ತಿಸಿದಂತೆ ದೀಪ್ತಿ, ತನ್ನೆಲ್ಲ ಅಂತಃಸತ್ವವನ್ನು ಎರಕಹುಯ್ದು ಚೇತೋಹಾರಿಯಾಗಿ ನರ್ತಿಸಿದಳು. ಸೌಂದರ್ಯದ ಹೊಳಪು ಎದ್ದುಕಾಣುವಂತೆ ನೃತ್ಯ ಸಂಯೋಜನೆಯ ಕುಶಲತೆಯೂ ಅಷ್ಟೇ ಸಶಕ್ತವಾಗಿತ್ತು.

ಅಭಿನಯ ಪ್ರಧಾನವಾದ `ಪದಂ’ ಶೃಂಗಾರ ಭಾವದ ರಸಘಟ್ಟ. ಶೃಂಗಾರರಸದ ಸಂಚಾರಿ ಭಾವಗಳಾದ ಪ್ರಣಯೋನ್ಮಾದ , ಆಪ್ತತೆ, ಸಿಟ್ಟು, ಆತಂಕ, ವಿರಹ, ಅಸೂಯೆ, ದೂರಾಗುವುದು ಮತ್ತೆ  ಒಂದಾಗುವ ಪ್ರಕ್ರಿಯೆಗಳ ಆಗು ಹೋಗುಗಳು ಅಮರಪ್ರೇಮಿ ಖಂಡಿತನಾಯಕಿಯ ದಿನಚರಿಯಲ್ಲಿ ಸುವ್ಯಕ್ತವಾದವು. ಕೃಷ್ಣನನ್ನು ಅತಿಯಾಗಿ ಪ್ರೀತಿಸುವ ಅವಳ ಮಾನಸಿಕ ವಿಪ್ಲವವನ್ನು ಕಲಾವಿದೆ ಕಲಾತ್ಮಕವಾಗಿ ಅಭಿವ್ಯಕ್ತಿಸಿದಳು. ಪರಸ್ತ್ರೀ ಸಂಗ ಮಾಡಿರಬಹುದೆಂಬ ಗುಮಾನಿಯ ಆತಂಕದಲ್ಲಿ ಸಿಲುಕಿದ ನಾಯಕಿ ಅವನ ಆಮಿಷಗಳಿಗೆ ಒಲಿಯದೆ ನಿರ್ದಾಕ್ಷಿಣ್ಯವಾಗಿ ಹೊರಗಟ್ಟುವ ಕಲಾವಿದೆಯ ಸುಂದರ ಅಭಿನಯದಲ್ಲಿ ವಿಷಾದಭಾವ ಮಡುಗಟ್ಟಿತು.

ದೀಪ್ತಿಯ ನೃತ್ಯ ಪ್ರಸ್ತುತಿ, ಅತ್ಯಂತ ಕ್ಲಿಷ್ಟಕರ ನೃತ್ತಗಳನ್ನೊಳಗೊಂಡ, ಆಕರ್ಷಕ ಅಡವುಗಳನ್ನು ಹೊಂದಿದ ತಿಲ್ಲಾನದೊಂದಿಗೆ ಸಂಪನ್ನಗೊಂಡಿತು.

ಅವಳ ಮನಮೋಹಕ ನೃತ್ಯಕ್ಕೆ ವಿಶೇಷ ಪ್ರಭಾವಳಿ ನೀಡಿದ್ದು ಹಿನ್ನಲೆಯ ಬೆಂಬಲವಾಗಿದ್ದ ಸುಶ್ರಾವ್ಯ ವಾದ್ಯಗೋಷ್ಠಿ ಅವಳ ಸುಮನೋಹರ ನೃತ್ಯೋಲ್ಲಾಸಕ್ಕೆ ಸ್ಫೂರ್ತಿ ನೀಡಿತ್ತು. ನಟುವಾಂಗ ಮತ್ತು ಗಾಯನ ಡಾ . ಸಂಜಯ್ ಶಾಂತಾರಾಂ, ಮೃದಂಗ-ಜಗದೀಶ್ ಜನಾರ್ದನನ್, ಕೊಳಲು- ಗಣೇಶ್ ಮತ್ತು ರಿದಂ ಪ್ಯಾಡ್- ಕಾರ್ತೀಕ್ ದಾತಾರ್.

Related posts

ಮೇಘನಳ ಅಂಗಶುದ್ಧಿಯ ನರ್ತನ – ಭಕ್ತಿ ನೈವೇದ್ಯ

YK Sandhya Sharma

ಅಮರಪ್ರೇಮದ ರಸಲೋಕ `ಗೀತಗೋವಿಂದ’

YK Sandhya Sharma

ಪ್ರೌಢ ಅಭಿನಯದ ಸೊಗಸಾದ ನರ್ತನ

YK Sandhya Sharma

Leave a Comment

This site uses Akismet to reduce spam. Learn how your comment data is processed.