ಇನ್ನೂ ಬೆಳಗಿನ ಜಾವ ಐದೂವರೆ ಗಂಟೆ. ಮಂಜು ಮುಸುಕಿದ ನಸು ಬೆಳಕು. ರಚ್ಚೆ ಹಿಡಿದ ಮೋಡಗಳು ಮೂರುದಿನಗಳು ಕಳೆದಿದ್ದರೂ ಇನ್ನೂ ತೊಟ್ಟಿಡುವುದನ್ನು ನಿಲ್ಲಿಸಿರಲಿಲ್ಲ. ಜಿಟಿ ಜಿಟಿ ಮಳೆ. ವರಾಂಡದ ಈಸಿಚೇರಿನ ಮೇಲೆ, ಕೆನ್ನೆಯವರೆಗೂ ಬೆಚ್ಚಗೆ ಕುಲಾವಿ ತೊಟ್ಟು ಮುದುರಿ ಕುಳಿತಿದ್ದ ಗೋವರ್ಧನರಾಯರು, ಹೊರಗೆ ಪೇಪರಿನವನು ಅಂಗಳದಲ್ಲಿ ದಿನಪತ್ರಿಕೆ ಎಸೆದ ಸದ್ದಿಗೆ ಬೆನ್ನು ಸೆಟೆಸಿ ಕುಳಿತರು.
‘ಹಾಳು ಮುಂಡೇಗಂಡ, ನೀರಿನ ಮೇಲೆ ಎಸೆದನೋ ಏನೋ…’
-ಎಂದು ಗೊಣಗಿಕೊಳ್ಳುತ್ತಾ ಮೇಲೆದ್ದು, ಮುಂಬಾಗಿಲಿಗೆ ಹಾಕಿದ್ದ ಬೀಗ ತೆಗೆದು ಗೋಣು ಹೊರಗೆ ತೂರಿಸಿ ನೋಡಿದರು.
ಅಂಗಳದಲ್ಲಿ ದೋಣಿಯಂತೆ ಪೇಪರ್ ತೇಲುತ್ತ ಗೇಟಿನತ್ತ ಸಾಗುತ್ತಿದೆ. ತಾವು ನೆನೆಯುವುದನ್ನೂ ಲೆಕ್ಕಿಸದೆ ರಾಯರು ಮೆಟ್ಟಿಲಿಳಿದು ಹಾರಿ, ಒದ್ದೆಪೇಪರನ್ನು ಎಳೆದುಕೊಂಡು ಕೊಡವಿದರು. ಅದು ಸದ್ದಿಲ್ಲದೆ ಹರಿಯಿತು. ಗೊಣಗುತ್ತ ರಾಯರು ಒಳಬಂದು ಕುಳಿತು ಕನ್ನಡಕ ಮೂಗಿಗೇರಿಸಿಕೊಂಡು ಮುಖಪುಟದ ಮೇಲೆ ಕಣ್ಣಾಡಿಸಿದರು.
ಒದ್ದೆ ಪೇಪರಿನ ಮುಂದೆ ಹಬೆಯಾಡುವ ಕಾಫಿ ಲೋಟ!…ರಾಯರು ಅದನ್ನು ಫಕ್ಕನೆ ಕಸಿದುಕೊಂಡವರೇ ಗಂಟಲು ಬಿಸಿ ಬಿಸಿ ಮಾಡಿಕೊಂಡು ಮತ್ತೆ ತಾಜಾ ಭಂಗಿಯಲ್ಲಿ ಕುಳಿತು ಪೇಪರಿನತ್ತ ಕಣ್ಣು ಹರಿಸಿದರು.
ಮುಖಪುಟದ ತುಂಬಾ ಯಾರ ಯಾರದೋ ಫೋಟೋಗಳು…ಪೋಲಿಸ್ ಮುಖಗಳು!…ಹಾಂ… ತಟ್ಟನೆ ಅವರಿಗೆ ನೆನಪಾಯಿತು….ಇಂದು ಆಗಸ್ಟ್ ಹದಿನೈದು…ಭಾರತದ ಸ್ವಾತಂತ್ರ್ಯೋತ್ಸವದ ದಿನ !…
ಅಂತೂ ಪ್ರತಿವರ್ಷ ಹಲವಾರು ಜನರಿಗೆ ಪ್ರಶಸ್ತಿ-ಪುರಸ್ಕಾರಗಳ ಸುರಿಮಳೆ…ಬಹುಶಃ ಪೋಲಿಸ್ ಇಲಾಖೆಯಲ್ಲಿದ್ದವರಿಗೆಲ್ಲ ಒಂದಲ್ಲ ಒಂದು ದಿನ ಪ್ರಶಸ್ತಿಗಳು ಗ್ಯಾರಂಟಿ…ಏಕೆಂದರೆ ಪ್ರತಿವರ್ಷ ಒಂದಷ್ಟು ಜನಗಳಿಗೆ ಕೊಡಲೇಬೇಕಲ್ಲ..- ಎಂದು ಯೋಚಿಸುತ್ತ ರಾಯರು ಅನಾಸಕ್ತಿಯಿಂದ ಪೇಪರ್ ಮೊಗಚಿದರು. ಮೂರನೇ ಪುಟದಲ್ಲೂ ಪ್ರಶಸ್ತಿ ಪಡೆದವರ ದೊಡ್ಡ ಪಟ್ಟಿಯೇ ಇದೆ!…
ಹೊತ್ತು ಕಳೆಯಲು ರಾಯರು ಪ್ರತಿದಿನ ಒಂದುಗಂಟೆಗೆ ಕಡಿಮೆ ಇಲ್ಲದಂತೆ ಪೇಪರ್ ಓದುತ್ತ ಕುಳಿತುಕೊಳ್ಳುವುದು ಅವರ ವಾಡಿಕೆ. ಇಂದೂ ಹಾಗೇ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಆ ಮಹನೀಯರ ಪಟ್ಟಿಯನ್ನು ಜೋರಾಗಿ ರಾಗವಾಗಿ ಓದುತ್ತ ಬಂದರು. ‘ ಕಡಬಗೆರೆ ರಾಮಯ್ಯ, ಹನುಮಂತಪ್ಪ ಸಿ.ಕೆ., ದೊರೆಸ್ವಾಮಿ ಹೆಚ್.ಎಂ., ಭೀಮಣ್ಣ, ಕಲ್ಲಪ್ಪ, ಡಿ. ನರಸಿಂಹ ಮೂರ್ತಿ, ಎಸ್. ಹಿರೇಮಠ, ಸಿ.ಪಿ. ಗೋವರ್ಧನ್ ರಾವ್, ಜವರಾಯಿ ಗೌಡ ಜಿ……’
ಮುಂದೆ ಹೋಗಿದ್ದವರು ಮತ್ತೆ ಹಿಂದೆ ಬಂದರು….ಸಿ.ಪಿ.ಗೋವರ್ಧನ್ ರಾವ್ !…ಯಾರೀತ?!…ನನ್ನ ಇನ್ಶಿಯಲ್ಲೇ ಇಟ್ಟುಕೊಂಡಿದ್ದಾನಲ್ಲ ?!!… ಊರು ಬೇರೆ ಮೈಸೂರೇ..ರಾಯರು ಒಂದುಕ್ಷಣ ತಲೆ ಕೆರೆದುಕೊಂಡರು…ಹೂಂ…ಯಾರೋ ತಮ್ಮ ದಾಯಾದಿ ಇರಬೇಕು ಎಂದವರು ಮನದಲ್ಲೇ ಮುಸಿನಗೆ ನಕ್ಕು, ದೃಷ್ಟಿಯನ್ನುಮುಂದೆ ಹರಿಸುವ ಮುನ್ನ ಕೈಲಿದ್ದ ಕೆಂಪು ಸೀಸದ ಕಡ್ಡಿಯಿಂದ ಆ ಹೆಸರಿನ ಕೆಳಗೆ ಒಂದು ಗೀಟೆಳೆದು ಮುಂದಕ್ಕೆ ಕಣ್ಣಾಡಿಸಿದರು.
ಗಂಟೆ ಕಳೆಯಿತು. ಪತ್ರಿಕೆಯ ಶೀರ್ಷಿಕೆಯಿಂದ ಹಿಡಿದು ಕಡೆಯ ಪುಟದ ಕಡೆಯ ಸಾಲಿನವರೆಗೂ ಒಂದಕ್ಷರವನ್ನೂ ಬಿಡದೆ ಓದಿ, ಮತ್ತೆ ಕುತೂಹಲದಿಂದ ಅವರು ಮೂರನೆಯ ಪುಟ ತೆರೆದು ಅಂಡರ್ ಲೈನ್ ಮಾಡಿದ್ದ ಹೆಸರು ಓದುವಾಗ ಅವರ ಮೈ ಪುಳುಕಗೊಂಡಿತು.
ಸರ್ವಿಸ್ ಪೂರಾ ಗುಮಾಸ್ತರಾಗಿಯೇ ಕಾಲ ದೂಡಿದ್ದ ಅವರು, ಎಂದೂ ತಮ್ಮ ಹೆಸರನ್ನು ಮುದ್ರಿತ ಅಕ್ಷರಗಳಲ್ಲಿ, ಅದೂ ಪತ್ರಿಕೆಯಲ್ಲಿ ಕಂಡಿರದವರು, ಆ ಹೆಸರನ್ನು ಬೆರಳುಗಳಿಂದ ಸ್ಪರ್ಶಿಸಿ ಹರ್ಷಗೊಂಡರು .
‘ನೀರು ಕಾದಿದೆ…ಸ್ನಾನಕ್ಕೇಳ್ತೀರಾಂದ್ರೆ ?’-ಹೆಂಡತಿ ಅಲಾರಾಂ ಕೊಟ್ಟರು. ರಾಯರು, ತಮ್ಮ ತೊಡೆಯ ಮೇಲಿದ್ದ ಪೇಪರ್ ಜಾರಿಸಿ, ಕುಲಾವಿ ತೆಗೆದರು.
ಸ್ನಾನ ಮಾಡಿ, ದೇವರಪೂಜೆ ಮುಗಿಸಿ, ಸಂಧ್ಯಾವಂದನೆಯ ಆಹ್ನಿಕದ ನೀರನ್ನು ತುಳಸೀಕಟ್ಟೆಯೊಳಗೆ ಚೆಲ್ಲಲು ಹೊರಬಂದಾಗ ಅವರ ಹಿರೇಮಗ ಜೋರಾಗಿ ಕೂಗಿದ.
‘ಅಣ್ಣಾ, ಬನ್ನಿ ಇಲ್ಲಿ..’ ಎನ್ನುತ್ತಾ ತಾನೇ ಕೈಯಲ್ಲಿ ಅಂದಿನ ಪೇಪರ್ ಹಿಡಿದು ಧಾವಿಸಿ ಬಂದ ಅದ್ಭುತ ಕಂಡವನಂತೆ. ತಂದೆಯ ಮುಂದೆ ಪೇಪರನ್ನು ಹರವಿ ಹಿಡಿದ.
‘ಏನಣ್ಣಾ , ನೀನು ಫ್ರೀಡಂ ಫೈಟರ್ರಾ?!…ನಮಗೆ ನೀನು ಹೇಳೇ ಇಲ್ವಲ್ಲ!!..ನಿನಗೆ ಪ್ರಶಸ್ತಿ ಬಂದಿದೆ ‘-ಎಂದು ಸಂತಸ ಉಕ್ಕಿಸುತ್ತ ನುಡಿದು, ‘ಅಮ್ಮಾ, ಅಣ್ಣನಿಗೆ ಪ್ರಶಸ್ತಿ ಬಂದಿದೆ ‘ ಎನ್ನುತ್ತಾ ಮನೆಮಂದಿಗೆಲ್ಲ ಸಿಹಿ ಸುದ್ದಿಯನ್ನು ಹಂಚಿ ಬಂದ.
ಕ್ಷಣಾರ್ಧದಲ್ಲಿ ಗೋವರ್ಧನರಾಯರ ಮಗ-ಸೊಸೆ, ಹೆಣ್ಣುಮಕ್ಕಳು, ಮೊಮ್ಮಕ್ಕಳು ಅವರ ಸುತ್ತ ನೆರೆದಿದ್ದರು.
ನಿಜವಾಗಿ ರಾಯರು ಜಿಜ್ಞಾಸೆಗೆ ಸಿಲುಕಿದ್ದರು. ತಮ್ಮಿಬ್ಬರ ಹೆಸರು ಮತ್ತು ಇನ್ಶಿಯಲ್ಸೂ ಒಂದೇ ಆಗಿ ಎಂಥ ಆಭಾಸ!
ಮಕ್ಕಳೆಲ್ಲ ಖುಷಿಯಿಂದ ಕುಣಿದಾಡುತ್ತಿದ್ದಾರೆ!…ಮೆಚ್ಚುಗೆಯ ದೃಷ್ಟಿವರ್ಷ!…ಸೊಸೆಯಂದಿರು ಕಂಗ್ರಾಟ್ಸ್ ಹೇಳುತ್ತಿದ್ದಾರೆ!…ನಾಚಿಕೆಯಿಂದ ಕುಸಿಯತೊಡಗಿದರು ರಾಯರು. ಮುಂದೆ ಮಾತಿಲ್ಲದೆ ಅವರು ಕೋಣೆ ಸೇರಿ ತಲೆಗೆ ಕೈಕೊಟ್ಟು ಕುಳಿತರು.
ಒಂದೆರಡು ಗಂಟೆಗಳಲ್ಲಿ ‘ಅಣ್ಣಾ, ಈ ಪೋಸ್ಟ್ ನೋಡಿ’- ಎಂದು ಹೆಮ್ಮೆಯಿಂದುಬ್ಬಿ ಎರಡನೆಯ ಹಾಗೂ ಮೂರನೆಯ ಮಗಂದಿರು ಕೋಣೆಯೊಳಗೆ ಓಡಿಬಂದರು. ಅವರ ಹಿಂದೆ ಒಂದು ದೊಡ್ಡ ದಂಡು.
ಮತ್ತೆ ಕನ್ನಡಕ ರಾಯರ ಮೂಗನ್ನೇರಿತು….ಸರಕಾರದಿಂದ ಬಂದ ಪತ್ರ!!!..ಗೋವರ್ಧನರಾಯರು ನೆಟ್ಟಗೆ ಕುಳಿತು ಸರಸರನೆ ಓದಿದರು. ಒಂದುಕ್ಷಣ ಗಲಿಬಿಲಿಗೊಂಡರು…ಕಣ್ಣು ಮಂಜಾಯಿತು. ಕನ್ನಡಕದ ಗಾಜನ್ನು ಶಲ್ಯದ ತುದಿಯಿಂದ ಮತ್ತೆ ಒರೆಸಿಕೊಂಡು ಆ ಪತ್ರದ ಸಾಲುಗಳಲ್ಲಿ ದೃಷ್ಟಿ ಊರಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸೆರೆಮನೆ ವಾಸವನ್ನು ಅನುಭವಿಸಿ ದೇಶಸೆವೆಗೈದ ಶ್ರೀ. ಸಿ.ಪಿ.ಗೋವರ್ಧನರಾಯರಿಗೆ ಅಂದರೆ ಸಾಕ್ಷಾತ್ ತಮಗೇ ಪ್ರಶಸ್ತಿ ಪುರಸ್ಕಾರ!!
ಅವರ ಹೃದಯದ ಬಡಿತ ಒಂದುಕ್ಷಣ ಸ್ತಬ್ಧ…ಪತ್ರವನ್ನು ಹಿಂದೆ ಮುಂದೆ ತಿರುಗಿಸಿ ನೋಡಿದರು…. ತಮ್ಮದೇ ವಿಳಾಸ!…ನಂಬಲಾರದೆ ಪತ್ರವನ್ನು ಮತ್ತೆ ಮತ್ತೆ ಓದಿದರು.
ನಾಚಿ ಮುದುರಿಕೊಂಡಿದ್ದ ಅವರ ಮೊಗ ಅರಳಿತು. ಮನದಲ್ಲಿ ಸಂತಸದ ಓಕುಳಿ!!…ಆ…ದ…ರೆ ತಲೆಯೊಳಗೆ ಗೊಂದಲ!!.. ಅವರಿಗೆ ಮುಂದೆ ಯೋಚಿಸಲು ಬಿಡಲಿಲ್ಲ ಅವರ ಪರಿವಾರ. ಅತ್ತೆ-ಸೊಸೆಯರು ಆಗಲೇ ಕರಿದ ಶ್ಯಾವಿಗೆ ಪಾಯಸದ ಸಿಹಿಯಡುಗೆಗೆ ಪ್ರಾರಂಭಿಸಿದ್ದರು. ಗಂಡುಮಕ್ಕಳು ತಂತಮ್ಮ ಸ್ನೇಹಿತರಿಗೆಲ್ಲ ಈ ಶುಭಸುದ್ದಿ ತಿಳಿಸಲು ಹೊರಗೆ ಹಾರಿದರು.
ಹೆಣ್ಣುಮಕ್ಕಳು-ಮೊಮ್ಮಕ್ಕಳು, ಈ ಪ್ರಶಸ್ತಿಯ ಸುದ್ದಿ ಹೊತ್ತು ತಂದ ಶುಭ ಪತ್ರವನ್ನು ಕಟ್ಟು ಹಾಕಿಸಲು ಹತ್ತಿರದ ಫೋಟೋ ಅಂಗಡಿಗೆ ಕೊಟ್ಟು ಬಂದು ನೆರೆಹೊರೆಯ ಮನೆಯ ಅಂಗಳದತ್ತ ಕಾಲು ಹಾಕಿದ್ದರು. ಇನ್ನು ಕೆಲವರು ಮುಖವರಳಿಸಿಕೊಂಡು ಫೋನ್ ಕಿವಿಗೆ ಹಚ್ಚಿಕೊಂಡಿದ್ದರು.
ರಾಯರು ಮಾತ್ರ ಆಶ್ಚರ್ಯದ ಆಘಾತದಿಂದಲೋ, ಅತೀವ ಸಂತೋಷದಿಂದಲೋ ಗರಬಡಿದು ಕುಳಿತಿದ್ದರು ವಿಗ್ರಹದಂತೆ!
ಆ ದಿನ ಬಂದೇ ಬಿಟ್ಟಿತು…ರಾಯರೆದೆ ದುಡಿಯಂತೆ ಲಬ್ ಡಬ್…ಲಬ್ ಡಬ್ ….ನಗರದ ಪ್ರಮುಖ ಆಡಿಟೋರಿಯಂ ನಲ್ಲಿ ವಿಶೇಷ ಸಮಾರಂಭ ಅದ್ದೂರಿಯಾಗಿ ಏರ್ಪಾಟಾಗಿತ್ತು. ವೇದಿಕೆಯ ಮೇಲೆ ಕುಳಿತಿದ್ದ ಗೋವರ್ಧನ ರಾಯರಿಗೆ ಪ್ರಶಸ್ತಿ..ಪುರಸ್ಕಾರ. ಭಾಷಣಗಳ ಸುರಿಮಳೆ..ಮಂತ್ರಿ ಮಹೋದಯರಿಂದ ಹಾರ-ತುರಾಯಿ, ಹೂಗುಚ್ಛ, ಹಣ್ಣಿನ ಬುಟ್ಟಿ..ಹೊಗಳಿಕೆಯ ಹಾಡು. ರಾಜ್ಯಪಾಲರ ಅಭಿನಂದನೆ!…ಶಾಲು ಹೊದಿಸಿ ಕುತ್ತಿಗೆಗೆ ಪದಕ ಹಾಕಿದರು.
ರಾಯರಿಗೆ ಯಾವುದೋ ಲೋಕದಲ್ಲಿ ತೇಲಾಡುತ್ತಿರುವ ಅನುಭವ !!…ಸಾವಿರ ರೂಪಾಯಿಗಳ ಮಾಸಾಶನ…ಸಂತಸದ ಅತಿರೇಕದಿಂದ ಅವರ ಮೈ ಕಂಪಿಸಿತು.
ಅಂದಿನ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶಭಕ್ತರು ಮೆರವಣಿಗೆಯಲ್ಲಿ ಹಾಡಿಕೊಂಡು ಹೋಗುತ್ತಿದ್ದ ‘ ಪ್ರಭಾತ ಫೇರಿ’ಯ ಹಾಗೂ ದೇಶಭಕ್ತಿ ಗೀತೆಗಳ ಸಮೂಹ ಗಾನವನ್ನು ಧ್ವನಿವರ್ಧಕ ಜೋರಾಗಿ ಬಿತ್ತರ ಮಾಡುತ್ತಿತ್ತು.
‘ನಮ್ಮ ದೇಶ ನಮ್ಮ ದೇಶ ನಮ್ಮ ದೇಶ ಭಾರತ
ತಾಯ್ನಾಡಿಗಾಗಿ ಹೋರಾಡಿ ಮಡಿವೆವು ಅವಿರತ’
ರಾಯರ ಕಿವಿಯಲ್ಲಿ ಈ ಪಲ್ಲವಿ ಅನುರಣನಗೊಂಡು, ಅವರ ನೆನಪು ಹಿಂದ ಹಿಂದಕ್ಕೆ ಸರಿಯಿತು. ಅವರರಿವಿಲ್ಲದಂತೆ ಅವರ ತುಟಿಗಳು ಮೆಲ್ಲನೆ ಆ ಪಲ್ಲವಿಯನ್ನು ಗುನುಗುನಿಸಿದವು.
ರಸ್ತೆಯ ಆ ತುದಿಯಿಂದ ಈ ತುದಿಯವರೆಗೆ ‘ ಪ್ರಭಾತ ಫೇರಿ’ಯ ದೊಡ್ಡ ಮೆರವಣಿಗೆ. …ಇನ್ನೂ ಚುಮು ಚುಮು ನಸುಕು…ಇಬ್ಬನಿಯ ತೆರೆ…ಆ ಚಳಿಯಲ್ಲೂ ಮೈ ಬಿಸಿ ಮಾಡುವಂತೆ , ನವಿರೇಳಿಸುವಂತೆ ಜನ ತಾದಾತ್ಮ್ಯರಾಗಿ ದೇಶಭಕ್ತಿ ಗೀತೆಯನ್ನು ಹಾಡುತ್ತ ಗುಂಪಾಗಿ ಹೋಗುತ್ತಿದ್ದಾರೆ…ಅವರ ಮುಖಗಳು ಅಷ್ಟು ಸ್ಪಷ್ಟವಾಗಿ ಕಾಣದಿದ್ದರೂ ಅವರ ಕಂಚಿನ ಕಂಠಗಳು ಮುಗಿಲು ಮುಟ್ಟುತ್ತಿವೆ.!
ಪೊದೆಯ ಮರೆಯಲ್ಲಿ ತಂಬಿಗೆ ಹಿಡಿದು ಬಹಿರ್ದೆಶೆಗೆ ಕುಳಿತಿದ್ದ ಹತ್ತುವರ್ಷದ ಬಾಲಕ ಗೋವಿ, ಜೀಪಿನ ಕರ್ಕಶ ಸಪ್ಪುಳ ಕೇಳಿ ಬೆಚ್ಚಿ ಎದ್ದುನಿಂತ. ಒಂದು, ಎರಡು, ಮೂರು…ಸಾಲು ಸಾಲು ಜೀಪುಗಳು. ಅವುಗಳಿಂದ ದುಬುದುಬನೆ ಇಳಿದ ಒರಟು ಬೂಟುಗಾಲುಗಳು. …ಲಾಟಿಗಳು ಸುಯ್ಯನೆ ಗಾಳಿಯಲ್ಲಿ ತಿರುಗಿದ ಸಪ್ಪುಳ…ಬೆಚ್ಚಿದ ಗೋವಿ, ತಂಬಿಗೆಯನ್ನು ಅಲ್ಲೇ ಎತ್ತಿಹಾಕಿ, ಚಡ್ಡಿಯೇರಿಸಿಕೊಂಡವನೇ ಸತ್ತೆನೋ ಬಿದ್ದೆನೋ ಎಂದು ದಡಬಡಿಸಿ ಬಿದ್ದೆದ್ದು ಮುಂದೆ ಸಾಗುತ್ತಿದ್ದ ‘ಪ್ರಭಾತ ಫೇರಿ’ಯ ಗುಂಪಿನಲ್ಲಿ ತೂರಿಕೊಂಡು ಜೋರಾಗಿ ದನಿಗೂಡಿಸಿದ-
‘ನಮ್ಮ ದೇಶ ನಮ್ಮ ದೇಶ ಭಾರತ… ‘. ಬಡಿದುಕೊಳ್ಳುತ್ತಿದ್ದ ತನ್ನ ಹೃದಯವನ್ನು ಅದುಮಿಕೊಳ್ಳುತ್ತ, ಎದೆಯೊಳಗೆ ಮುಲುಕುತ್ತಿದ್ದ ಭಯವನ್ನು ಮುಚ್ಚಿಡುವಂತೆ ಅವನು ಜೋರಾಗಿ ಪಲ್ಲವಿಯನ್ನು ಅರಚತೊಡಗಿದ.
ಕ್ಷಣಾರ್ಧದಲ್ಲಿ ಟಪಟಪನೆ ಸದ್ದು ಮಾಡುವ ಬೂಟುಗಾಲುಗಳು ಮೆರವಣಿಗೆಯನ್ನು ಸುತ್ತುವರಿದವು. ಜನ ತಟ್ಟನೆ ಚೆಲ್ಲಾಪಿಲ್ಲಿಯಾದರು. ಮರಗಳ ಮರೆಗೆ ಬಿದ್ದು ಎಲ್ಲೆಂದರಲ್ಲಿ ಓಡತೊಡಗಿದರು. ಕಂಗಾಲಾದ ಗೋವಿಯೂ ಕೂಡ ಎದೆ ಢವಢವಿಸಿಕೊಂಡು ಫೇರಿ ಕಿತ್ತಿದ. ಆಗ- ಯಾರೋ ಅವನ ಶರ್ಟಿನ ಕಾಲರ್ ಹಿಡಿದು ಜಗ್ಗಿದ ನೆನಪು…ಕಿಟಾರನೆ ಕಿರುಚಿ ಅವನು ತಲೆತಿರುಗಿ ಕೆಳಗೆ ಬಿದ್ದ.
ಅವನಿಗೆ ಎಚ್ಚರವಾದಾಗ ಅವನು ಸಣ್ಣ ಕಿಂಡಿಯ, ಉಸಿರುಗಟ್ಟಿಸುವ ಸೆರೆಮನೆಯಲ್ಲಿದ್ದ. ಎದುರಿಗೆ ಪೋಲೀಸ್ ಪೇದೆಗಳು ಲಾಟಿ ತಿರುಗಿಸುತ್ತಾ ನಿಂತಿದ್ದರು. ದೂರದಲ್ಲಿ ಕೆಂಪುಮೂತಿಯ ಬ್ರಿಟಿಷ್ ಅಧಿಕಾರಿಗಳಿಬ್ಬರು ತಮ್ಮ ತಮ್ಮಲ್ಲೇ ಏನೋ ಚರ್ಚಿಸುತ್ತಿದ್ದರು. ಗೋವಿ, ಭಯದಿಂದ ಕಂಗಾಲಾಗಿ ಸುತ್ತ ನಿರುಕಿಸಿದ. ಹತ್ತಾರು ಯುವಕರು ಮುಖ ಗಡಸು ಮಾಡಿಕೊಂಡು ಅಧಿಕಾರಿಗಳನ್ನು ಅವಡುಗಚ್ಚಿ ದುರುಗುಟ್ಟಿಕೊಂಡು ನೋಡುತ್ತಿದ್ದರು.
ಸೆರೆಮನೆಯ ತಾರಸಿ ಹಾರಿಹೋಗುವಂತೆ ‘ ಭಾರತ್ ಮಾತಾ ಕೀ ಜೈ’ ಎಂದು ಒಕ್ಕೊರಲಲ್ಲಿ ಕೂಗುತ್ತಲೇ ಇದ್ದರು. ಒಂದಿಬ್ಬರಿಗೆ ಲಾಟಿಯ ಏಟುಗಳೂ ಬಿದ್ದವು. ಹೆದರಿದ ಗೋವಿಗೆ ಏನೂ ಅರ್ಥವಾಗಲಿಲ್ಲ. ಅಳುಮೋರೆ ಮಾಡಿಕೊಂಡು ಮೂಲೆಯನ್ನು ಆತು ಕೂತ.
ಮಧ್ಯಾಹ್ನದ ಹೊತ್ತಿಗೆ ಗಂಜಿಯ ಊಟ ಬಂತು. ಗೋವಿಯ ಹೊಟ್ಟೆ ಹಪಹಪನೆ ಹಸಿಯುತ್ತಿತ್ತು. ಬೆಳಗಿಂದ ಏನೂ ಹೊಟ್ಟೆಗಿಲ್ಲ. ಸರ್ರನೆ ಬಾಯಿಗಿಟ್ಟು ಕೊಂಡವನು ಮುಖ ಸಿಂಡರಿಸುತ್ತಲೇ ಗಂಜಿಯನ್ನು ಗುಟುಕರಿಸಿದ. ಅಷ್ಟು ಹೊತ್ತಿಗೆ ಯಾರೋ ಒಬ್ಬ ಪೇದೆ ಕೈಯಲ್ಲಿ ರಿಜಿಸ್ಟರೊಂದನ್ನು ಹಿಡಿದುಕೊಂಡು ಬಂದವನೇ ಎಲ್ಲರ ಹೆಸರುಗಳನ್ನು ಕೇಳಿ ಬರೆದುಕೊಳ್ಳತೊಡಗಿದ.
ಗೋವಿಯ ಬಳಿ ಬಂದವನೇ ‘ನಿನ್ನ ಹೆಸರು ?-ಎನ್ನುತ್ತ ಹುಬ್ಬೆತ್ತಿ ಪ್ರಶ್ನಿಸುತ್ತ ತನ್ನ ಗಿರಿಜಾ ಮೀಸೆ ತೀಡಿಕೊಂಡ. ಅವನ ಕೆಕ್ಕರುನೋಟ ಎದುರಿಸಲಾರದೆ ಗೋವಿಯ ಚಡ್ಡಿ ಒದ್ದೆಯಾಗಿ- ‘ಸಾ..ನಾ ಏನೂ ಮಾಡಿಲ್ಲ, ನನ್ನ ಬಿಟ್ಬಿಡಿ’-ಎಂದು ದಮ್ಮಯ್ಯಗುಡ್ಡೆ ಹಾಕುತ್ತ ಅಳಲಾರಂಭಿಸಿದ. ಆದರೆ ಅಲ್ಲವನನ್ನು ಸಮಾಧಾನಿಸುವರಾರೂ ಇರಲಿಲ್ಲ. ಪೇದೆ ಹೂಂಕರಿಸುತ್ತ ಮುಂದೆ ನಡೆದ. ಅಳುತ್ತಳುತ್ತಲೇ ಹಾಗೇ ನಿದ್ದೆ ಹೋದ ಗೋವಿ.
ಸಂಜೆ ಯಾರೋ ಅವನನ್ನು ತಟ್ಟಿ ಎಚ್ಚರಿಸುತ್ತಿದ್ದರು. ಗಡಬಡಿಸೆದ್ದವನನ್ನು, ಜೈಲಿನ ಆವರಣದಿಂದ ಹೊರಗೆ ನಡೆಸಿಕೊಂಡು ಬಂದು ರಸ್ತೆಗೆ ತಂದು ಬಿಟ್ಟ ಪೋಲಿಸ್, ಅವನ ಬೆನ್ನು ತಟ್ಟಿ ಬುದ್ಧಿವಾದ ಹೇಳುತ್ತಿದ್ದರು: ‘ನೀನಿನ್ನೂ ಸಣ್ಣ ಹುಡುಗ..ನಿನಗಿದೆಲ್ಲ ಗೊತ್ತಾಗಲ್ಲ, ಈ ಗುಂಪಿನ ಜೊತೆ ಸೇರಬೇಡ..ಸ್ಕೂಲಿಗೆ ಹೋಗೋ ವಯಸ್ನಲ್ಲಿ ನಿನಗ್ಯಾಕೆ ಈ ಸ್ವಾತಂತ್ರ್ಯದ ಹುಚ್ಚು …ಸುಮ್ನೆ ಮನೆ ಕಡೆ ಓಡು …ಇನ್ನೊಂದು ದಿನ ಏನಾದರೂ ನೀನು ಈ ಚಳುವಳಿ, ಗಿಳುವಳಿ ಅಂತ ಈ ಹೋರಾಟಗಳಲ್ಲಿ ಧುಮುಕಿದರೆ…’
ಷರ್ಟಿನ ಚುಂಗನ್ನು ಬಿಡಿಸಿಕೊಂಡು ಗಾಳಿವೇಗದಲ್ಲಿ ಅವನು ಮನೆ ಕಡೆ ಧೌಡಾಯಿಸಿದ… ಈ ಭಯದಲ್ಲಿ ಅವನ ಹೊಟ್ಟೆ ತಿರುಚುವಿಕೆ, ಬಹಿರ್ದೆಷೆಯ ಬಾಧೆ ಎಲ್ಲಿ ಓಡಿಹೊಯಿತೋ?…
ಇನ್ನೂ ಆ ಗೋವಿ- ಇಂದಿನ ಗೋವರ್ಧನರಾಯರು ಅಂದು ನಡೆದ ಅಘಾತದ ನೆನಪಿನಿಂದ ಚೇತರಿಸಿಕೊಳ್ಳಲಾರದೆ ಏದುಸಿರು ಬಿಡುತ್ತಲೇ ಇದ್ದರು!!.. ಅವರ ಕುತ್ತಿಗೆಯಲ್ಲಿದ್ದ ಪದಕ ಭಾರ ಭಾರವಾಗಿ ಅತ್ತಿಂದಿತ್ತ ತೂಗಾಡುತ್ತ ಜಾಗಟೆಯಂತೆ ಅವರ ಹೃದಯಕ್ಕೆ ಬಡಿಯುತ್ತಲೇ ಇತ್ತು!!.
‘ನಮ್ಮ ದೇಶ ನಮ್ಮ ದೇಶ ನಮ್ಮ ದೇಶ ಭಾರತ…’- ಮೈಕಿನಿಂದ ಜೋರಾಗಿ ತೂರಿ ಬರುತ್ತಿದ್ದ ಕಂಚಿನ ಧ್ವನಿ ನಿಧಾನವಾಗಿ ಅವರ ಕಿವಿಯಲ್ಲಿ ಕರಗುತ್ತಿತ್ತು.
************************