ಇತ್ತೀಚಿಗೆ ಪದ್ಮಿನಿರಾವ್ ಪರಂಪರಾ ಆಡಿಟೋರಿಯಂನಲ್ಲಿ ನಡೆದ ‘ ನಾಟ್ಯಸಂಕುಲ’ ಸಂಸ್ಥೆ ನಡೆಸಿದ ‘ಕಲಾಯಾನ’ ದಶಮಾನೋತ್ಸವ ಕಾರ್ಯಕ್ರಮದಲ್ಲಿ, ಕಲಾಕ್ಷಿತಿ ಖ್ಯಾತಿಯ ಗುರು ಎಂ.ಅರ್.ಕೃಷ್ಣಮೂರ್ತಿ ಶಿಷ್ಯೆ , ವಿದುಷಿ ನಿವೇದಿತಾ ಶರ್ಮ ನಾಡಿಗ್ ಪ್ರಸ್ತುತಿಪಡಿಸಿದ ಎಲ್ಲ ಕೃತಿಗಳೂ ಮನಸೂರೆಗೊಂಡವು. ಪ್ರಾರಂಭದ ‘ಗಣೇಶ ಸ್ತುತಿ’ (ಗೌಳಿ ರಾಗ) ಭಾವಪುರಸ್ಸರವಾಗಿ ಮೂಡಿಬಂದಿತು. ಅಲ್ಲರಿಪುವಿನಲ್ಲಿ ಕಂಡ ಅಂಗಶುದ್ಧಿ ಆಕೆಯ ಸಿದ್ಧಿಯನ್ನು ಸಾರಿತು. ಕಲಾವಿದೆಯ ಖಚಿತ ಹಸ್ತ, ಅಡವುಗಳ ಸೌಂದರ್ಯ, ಕಣ್ಣು-ಹುಬ್ಬುಗಳ ಚಲನೆಯ ಅರ್ಥವಂತಿಕೆಯೊಂದಿಗೆ ವರ್ಚಸ್ವಿಯಾಗಿತ್ತು. ಸುಂದರವಾಗಿ ಮೂಡಿಬಂದ ನೃತ್ತಗಳಿಗೆ ನಿವೇದಿತಾ ಜೀವ ತುಂಬಿದಳು. ಆಕೆಯ ಪರಿಶ್ರಮದ ಅಭ್ಯಾಸ, ಅಚ್ಚುಕಟ್ಟುತನ ಸುವ್ಯಕ್ತವಾಯಿತು.
ಕನ್ನಡದ ‘’ ವರ್ಣ’’ `ದೀನ ಬಂಧು’ ಕೃತಿಯ ಸಾಕಾರದಲ್ಲಿ ಕಲಾವಿದೆಯ ಆಕರ್ಷಕ ವಿಶೇಷ ವಿನ್ಯಾಸದ ನೃತ್ಯಗಳ ಖಾಚಿತ್ಯ, ನುರಿತ ಅಭಿನಯ ಆಕೆಯ ಕಲಾವಂತಿಕೆಯನ್ನು ಅಭಿವ್ಯಕ್ತಿಸಿತು. ವಾಸುದೇವನ ರೂಪಗಳನ್ನು ನಾನಾ ಬಗೆಯಾಗಿ ಸೃಜನಾತ್ಮಕವಾಗಿ ಕಟ್ಟಿಕೊಟ್ಟದ್ದು, ಸ್ವರಗಳಿಗೆ ಹಾಕಿದ ಹೆಜ್ಜೆ, ತೋರಿದ ಭಾವ ಅನನ್ಯವಾಗಿದ್ದವು. ದೀನಬಂಧು ಎಂಬ ಒಂದು ಸಾಲಿನ ವಿಸ್ತಾರದಲ್ಲಿ ಕಲಾವಿದೆ ಅನೇಕ ಬಗೆಯ ಅಭಿನಯವನ್ನು ಸಾದರಪಡಿಸಿ, ತನ್ನ ಅಭಿನಯ ಕುಶಲತೆಯನ್ನು ಮನೋಹರವಾಗಿ ಪ್ರಸ್ತುತಿಗೊಳಿಸಿದಳು. ಕಲಾಕ್ಷೇತ್ರ ಬಾನಿಯ ವಿಶೇಷತೆಗಳನ್ನು ತನ್ನ ಹಸ್ತಚಲನೆ-ಆಂಗಿಕಗಳಲ್ಲಿ ಪಡಿಮೂಡಿಸಿದ್ದು ಪರಿಣಾಮಕಾರಿಯಾಗಿತ್ತು. ನಾರಾಯಣನನ್ನು ಕುರಿತ ದೈನ್ಯತೆಯಿಂದ ಕೂಡಿದ ಭಕ್ತಿಭಾವವನ್ನು ತಾದಾತ್ಮ್ಯಯಿಂದ ಮೇಳೈವಿಸಿದ ಅಭಿವ್ಯಕ್ತಿ ಹಾಗೂ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಅಭಿನಯಿಸಿದ್ದು ಸ್ತುತ್ಯಾರ್ಹವಾಗಿತ್ತು .
ಅನಂತರ ಮುತ್ತುಸ್ವಾಮಿ ದೀಕ್ಷಿತರು ರಚಿಸಿದ ( ವಿಜಯವಂತಿ ರಾಗ) `ಅಖಿಲಾಂಡೇಶ್ವರಿ…ರಕ್ಷಮಾಂ” ಎಂದು ತಾಯಿ ಜಗನ್ಮಾತೆಯನ್ನು ಸ್ತುತಿಸುವ ಕೃತಿಯಲ್ಲಿ ಅಭಿನಯದ ಪಕ್ವತೆ, ಸೂಕ್ಷ್ಮಾಭಿನಯ ಮತ್ತು ಭಾವನಿಮೀಲತೆ ದೈವೀಕತೆಯ ಸಾಕ್ಷಾತ್ಕಾರವಾಯಿತು. ಪಾದಭೇದಗಳ ಚೆಲುವು, ನವವಿನ್ಯಾಸದ ಆಕರ್ಷಕ ಭಂಗಿಗಳು, ದೇವಿಯ ಅಪೂರ್ವ ಕಳೆಯನ್ನು ರಾರಾಜಿಸಿತು.ಜೊತೆಗೆ ಭಕ್ತಿಯ ಸಮರ್ಪಣಾಭಾವ ಗಮನ ಸೆಳೆಯಿತು.
ಅಕ್ಕಮಹಾದೇವಿಯ ವಚನದ ಪ್ರಸ್ತುತಿಯಲ್ಲಿ ಅಕ್ಕನ ಮನದಿಂಗಿತದ ಒಳಾರ್ಥಗಳು ಮಿಂಚಿದವು. ಹೊಳೆವ ಕೆಂಜೆಡೆಯ ಶಿವನನ್ನು ಸಖಿಯ ಮುಂದೆ ವರ್ಣಿಸುವಾಗ ಒಡಮೂಡಿದ ಕಲಾವಿದೆಯ ಭಾವನೆಗಳ ತೀವ್ರತೆ ಮನತಟ್ಟಿತು. ವಚನಲಹರಿಯ ಮನೋಹರತೆಯ ನಡುವೆ ತೋರಿದ ಜತಿಗಳ ಲವಲವಿಕೆ, ಭ್ರಮರಿಗಳು, ನೃತ್ತಗಳ ಸಿಂಗಾರ ಆಹ್ಲಾದಕರವಾಗಿದ್ದವು. ಢಮರುಗಧಾರಿ ಶಿವನ ನಾನಾ ಸ್ವರೂಪಗಳು ಕಣ್ಮುಂದೆ ಕಟ್ಟಿದವು.
ಅಂತ್ಯದಲ್ಲಿ ಮೂಡಿಬಂದ `ಪ್ರಿಯೆ ಚಾರುಶೀಲೆ’ -ಜಯದೇವನ ಅಸ್ತಪದಿಯ ಸೌಂದರ್ಯ ಪರಾಕಾಷ್ಠತೆಗೆ ಕೊಂಡೊಯ್ದಿತು. ನರ್ತಕರಿಗೆ ತಮ್ಮೆಲ್ಲ ಅಭಿನಯ ಸಾಮರ್ಥ್ಯವನ್ನು ಸಂಪೂರ್ಣ ಅಭಿವ್ಯಕ್ತಿಸಲು, ಭಾವಸೌಂದರ್ಯವನ್ನು ಹೊರಹೊಮ್ಮಿಸಲು ` ಅಷ್ಟಪದಿ’ ಕೃತಿಯಲ್ಲಿ ಯಥೇಚ್ಛ ಅವಕಾಶ. ರಾಧಾ-ಕೃಷ್ಣರ ಸರಸ-ಸಲ್ಲಾಪ, ಆನಂದ ವಿಹಾರ, ಹುಸಿಮುನಿಸು, ವಿರಹವೇದನೆ ಮುಂತಾದ ವೈವಿಧ್ಯ ಮಧುರಭಾವನೆಗಳ ‘ಅಭಿವ್ಯಕ್ತಿಯ ರಸಭಂಡಾರ’ ಜಯದೇವ ಕವಿಯ ಈ ‘ಗೀತಗೋವಿಂದ’ ಕೃತಿ. ಈ ಕೃತಿಯ ಪ್ರಸ್ತುತಿಯಲ್ಲಿ ಕಲಾವಿದೆ ನಿವೇದಿತಾ ತನ್ನ ಭಾವನಿಮಗ್ನ ಅಭಿನಯದಿಂದ ರಾಧಾ-ಕೃಷ್ಣರ ಪಾತ್ರಗಳಿಗೆ ಜೀವತುಂಬಿ ನರ್ತಿಸಿ ರಸಿಕರ ಮನಗೆದ್ದಳು.