Image default
Short Stories

ಕಾಲ್ಗುಣ

            ಮನೆಯ ತಿರುವಿನಲ್ಲೇ ಜೋರಾಗಿ ನಗುವ ಶಬ್ದ ಕೇಳಿ ನಾಗರಾಜನ ಮುಖ ಗಂಟಿಕ್ಕಿತು. ಭುಸುಗುಟ್ಟತೊಡಗಿದ. ಒಂದಲ್ಲ…ಎರಡಲ್ಲ, ಮೂರು..!! ಅದರಲ್ಲಿ, ಕೇಳಿಯೇ ಮರೆತುಹೋಗಿದ್ದ ಸೀತೆಯ ಧ್ವನಿಯೂ..!

            ಗೇಟು ತೆರೆದು ಒಳಬಂದ ನಾಗರಾಜನ ಮೋರೆ ಕೆಂಪಾಗಿತ್ತು. ಎಂದೂ ತನ್ನೆದುರಿಗೆ ತಲೆ ಎತ್ತಿ ಸಹ ನಿಲ್ಲದ ಮಗ ಕೈ ತಟ್ಟಿ ಕೆನೆದು ನಗುತ್ತಿದ್ದಾನೆ ಮೈಮರೆತು. ‘ಹೊ ಹ್ಹೋ’ ಎಂದು ಸಂತೋಷದಿಂದ ಅಬ್ಬರವಾಗಿ ನಗುತ್ತಿದ್ದ ಮಗಳ ಕೈಲಿದ್ದುದನ್ನು ಕಿತ್ತುಕೊಳ್ಳುವ ಯತ್ನದಲ್ಲಿ ಸೀತೆಯ ದನಿ ಕೂಡ ಸಂಭ್ರಮದಿಂದ ತುಳುಕಿತ್ತು….ಮಗಳ ಕೈಯಿಂದೆತ್ತಿ ಎದೆಗವುಚಿಕೊಂಡಳು.

            ನಾಗರಾಜ  ಅವಾಕ್ಕಾಗಿ  ಕಲ್ಲಿನಂತೆ ಹೊಸ್ತಿಲಲ್ಲೇ ಅಲುಗಾಡದೆ ನಿಂತ. ಸೀತೆಯ ಮಡಿಲಲ್ಲಿ ಬುಳುಬುಳು ಹೊರಳಾಡುತ್ತಿದ್ದ ವೆಲ್ವೇಟ್ ಕೂದಲಿನ ಆ ಪುಟ್ಟ ಕರೀ ನಾಯಿಮರಿ..!

            ” ಥತ್…ಈ ದರಿದ್ರ ಎಲ್ಲಿತ್ತೇ?…ಓಡಿಸಾಚೆ…ಹಚಾ…” ಎನ್ನುತ್ತಾ ಅವನು ಅವಳತ್ತ ನುಗ್ಗಿದ ರಾಕ್ಷಸನಂತೆ.

            “ಅಯ್ಯೋ ಅಣ್ಣಾ ಸುಮ್ನಿರಿ,ಪ್ಲೀಸ್….ಪಾಪ ಈ ಮರಿ ಇನ್ನೂ ಇಪ್ಪತ್ತು ದಿನಗಳ ಹಸುಗೂಸು”-ಶಶಾಂಕ ಮುನ್ನುಗ್ಗಿ ಬಂದವನೆ, ತಟಕ್ಕನೆ ಆ ನಾಯಿಮರಿಯನ್ನೆತ್ತಿ ತನ್ನ ಕಂಕುಳಲ್ಲಿ ಅವುಚಿಕೊಂಡ. ನಾಗರಾಜ ಮಗನ ಧೈರ್ಯ ಕಂಡು ಕಕ್ಕಾಬಿಕ್ಕಿಯಾಗಿ ನಿಂತ. ಮರುಕ್ಷಣ “ಇಸ್ಸೀ…ಕೊಳಕುಮುಂಡೇದು, ಇದೆಲ್ಲಿತ್ತು ಶನಿ…ಹೊರಗೆ ತಳ್ಳಾಚೆ…”ಎಂದು ಮುಖ ಹಿಂಡಿದ.

            “ಅಣ್ಣಾ…ನಾವೇ ಇದನ್ನ ಕೊಂಡುಕೊಂಡು ಬಂದ್ವಿ…ದಿನ ಪೂರ್ತಿ ಆಫೀಸ್ನಲ್ಲಿ ಕೆಲಸ…ಮನೆಗೆ ಬಂದರಾದರೂ ಸ್ವಲ್ಪ ಖುಷಿಯಾಗಿರೋಣಾಂತ…ಫರ್ ಎ ಛೇಂಜ್ ನಾಯಿಮರಿ ಸಾಕೋಣಾಂತ ಆಸೆಯಾಯ್ತು,ಅದಕ್ಕೇ…”

            -ಶೃತಿ, ಭಯದಿಂದ ನಡುಗುತ್ತ ಬಾಗಿಲ ಸಂದಿಯಲ್ಲಿ ಇರುಕಿಕೊಂಡಿದ್ದವಳು, ಮೆಲ್ಲನೆ ಹೊರ ನುಸುಳಿ ಬಂದಳು. ಮನೆಯವರು ತೆಗೆದುಕೊಳ್ಳುತ್ತಿರುವ ಸಲುಗೆ ಕಂಡು ನಾಗರಾಜ ನಿಜಕ್ಕೂ ದೂರ್ವಾಸ ಮುನಿಯ ಅಪರಾವತಾರವಾಗಿದ್ದ.

            ಈ ಅಂಕ ನಿರೀಕ್ಷಿಸಿದ್ದ ಸೀತೂ, ಭಯದಿಂದ ನಡುಗಿ ಅಡುಗೇಮನೆ ಬಿಟ್ಟು ಹೊರಗೇ ಬರಲಿಲ್ಲ.

            ” ಹೂಂ…ನಿಮಗೇ ಹೇಳ್ತಿರೋದು”-ನಾಗರಾಜ ಅವುಡುಗಚ್ಚಿ ನಿಂತಿದ್ದ.

            ಶಶಾಂಕ ನಾಯಿಮರಿಯನ್ನು ಮತ್ತಷ್ಟು ಮುಚ್ಚಟೆಯಿಂದ ಎದೆಗೊತ್ತಿಕೊಳ್ತಾ ಮೂತಿ ಉಬ್ಬಿಸಿ-“ಉಹೂಂ…ನಾವಿದನ್ನು ಹತ್ತುಸಾವಿರ ರೂಪಾಯಿ ಕೊಟ್ಟು ಕೊಂಡುಕೊಂಡು ಬಂದಿದ್ದೀವಿ”-ಎಂದ ಸಣ್ಣದನಿಯಲ್ಲಿ.

            ಅಷ್ಟುಹೊತ್ತಿಗೆ ಸರಿಯಾಗಿ ಆ ನಾಯಿಮರಿ ಸಳಕ್ಕನೆ ಶಶಾಂಕನ ತೆಕ್ಕೆಯಿಂದ ಕೆಳಜಾರಿ ನಾಗರಾಜನ ಪಾದದ ಮೇಲೆ ಹೊರಳಿತು. ತಟ್ಟನೆ ನಾಗರಾಜ ಹಿಂದಕ್ಕೆ ಜಿಗಿದ ಹೌಹಾರಿ!..ಆದರೂ ಅದು ಬಿಟ್ಟೂ ಬಿಡದೆ ಅವನ ಪಾದದಮೇಲೆ ಕುಪ್ಪಳಿಸಿ, ವೆಲ್ವೆಟ್ ಉಂಡೆಯಂಥ ತನ್ನ ಮೈಯನ್ನು ಬುಳಬುಳನೆ ಹೊರಳಾಡಿಸಿದಾಗ ಅವನು ಗಲಿಬಿಲಿಗೊಂಡವನೆ, ಅದನ್ನೇ ತಿನ್ನುವಂತೆ ದುರುಗುಟ್ಟಿ ನೋಡಿದ…ಮುದ್ದು ಒಸರುವ ಮುಖದಿಂದ ಅದು ಅವನನ್ನೇ ಪಿಳಿಪಿಳಿ ದಿಟ್ಟಿಸಿತು…ಹತ್ತು ಸಾವಿರ ರೂಪಾಯಿಯ ಆ ವಸ್ತುವನ್ನೇ ಎವೆಯಿಕ್ಕದೆ ನೋಡಿದ. ಮೆಲ್ಲನೆ ಬಗ್ಗಿ ಅದನ್ನು ಬೊಗಸೆಯಲ್ಲಿ  ಹಿಡಿದು ಇಷ್ಟೊಂದು ದುಬಾರಿಯೇ? ಎಂದು ಪರೀಕ್ಷಿಸುವಂತೆ ಅದರ ಕಣ್ಣೊಳಗೆ ನೋಟ ಬೆರೆಸಿ ಚೂಪಾಗಿ ದಿಟ್ಟಿಸಿದ.

            ಶೃತಿಗೆ ಕೊಂಚ ಧೈರ್ಯ ಬಂತು.” ಇದು ಭಾಳ ರೇರ್ ವೆರೈಟೀದೂ ಅಣ್ಣಾ, ಜರ್ಮನ್ ರಾಟ್ವೇಲರ್ ಅಂತ…..ರಾಟ್ವೇಲ್ ಅನ್ನೋ ಸಣ್ಣ ಊರಿನಲ್ಲಿ ಈ ಸ್ಪೀಷೀಸ್‍ನ ಡೆವಲಪ್ ಮಾಡಿದ್ದಂತೆ…ಚಿಕ್ಕದ್ರಲ್ಲಿ ಪೆಟ್, ದೊಡ್ಡದಾದಾಗ ತುಂಬಾ ಫೆರೋಷಿಯಸ್ ಅಂತೆ….ವೆರಿ ಫೇತ್ ಫುಲ್ ಡಾಗ್…ನಾವಿಬ್ರೂ ಕೆಲಸಕ್ಕೆ ಹೊರಟು ಹೋದ್ಮೇಲೆ ಇಷ್ಟು ದೊಡ್ಡ ಮನೇಲಿ ನೀವು-ಅಮ್ಮ ಇಬ್ಬರೇನೇ…ನಿಮ್ಮ ಸೇಫ್ಟಿಗೋಸ್ಕರ ಇರಲಿ ಅಂತ..”-ಎಂದು ಎಂಜಲು ನುಂಗಿಕೊಂಡಳು, ಅಪ್ಪನತ್ತ ಅಂಜಿಕೆಯ ನೋಟ ಬೀರಿ.

            ಶಶಾಂಕನೂ ಅದಕ್ಕೆ ದನಿಗೂಡಿಸಿದ

            ನಾಗರಾಜ ದೀರ್ಘವಾದ ಉಸಿರು ತೆಗೆದುಕೊಂಡ. ಹತ್ತು ಸಾವಿರ!!….ಅದೂ ಅಪರೂಪದ ಜಾತಿ ನಾಯಿ. ದುಬಾರಿ ಬೆಲೆಯ ವಸ್ತು ಅಂದ್ರೆ ಅವನಿಗೆ ಒಂಥರಾ ಕ್ರೇಸ್!…ಜಂಭವೂ ಕೂಡ. ಸದಾ ತನ್ನದೇ ಆದ ಸ್ಪೆಷಾಲಿಟಿ ಪ್ರದರ್ಶಿಸೋ ಗೀಳು ಸ್ವಭಾವದ ಅವನ ಮುಖದಲ್ಲೊಂದು ಠೇಂಕಾರ ನೆಗೆಯಿತು. ಇದ್ದ ಒಂದಿಬ್ಬರೇ ಗೆಳೆಯರನ್ನು ಹುಡುಕಿಕೊಂಡು ಹೋಗಿ ಕೊಚ್ಚಿಕೊಳ್ಳಲು ವಿಷಯವೊಂದು ಸಿಕ್ಕಹಾಗಾಯ್ತು….ಬಲು ಜತನವಾಗಿ ಆ ವಸ್ತುವನ್ನು ಎದೆಗವಚಿಕೊಂಡವನು ಭಾಳ ಹೊತ್ತು ಕೆಳಗಿಳಿಸಲೇಇಲ್ಲ.

            ಅವನದು ಎಲ್ಲವೂ  ಅತಿ ಅತಿ…ಪ್ರೀತಿ, ದ್ವೇಷ, ಕೋಪಗಳ ವಿಚಿತ್ರ ಸ್ವಭಾವ. ಶಶಾಂಕ, ಶೃತಿ ಮಕ್ಕಳಾಗಿದ್ದಾಗಲೂ ಅಷ್ಟೇ,ಅತೀ ನಚ್ಚು…ಮಂಗಳಾರತಿ ತೊಗೊಂಡ್ರೆ ಉಷ್ಣ, ತೀರ್ಥ      ತೊಗೊಂಡ್ರೆ ಶೀತ..ಸೀತೂಗೆ ಹುಚ್ಚು ಹಿಡಿಯುವುದೊಂದು ಬಾಕಿ. ಅವಳು ಹಸುಮಕ್ಕಳನ್ನು ಹೇಗೆ ಮುಟ್ಟಿದರೂ ತಪ್ಪು.”ಹೋಗಿ ಡೆಟಾಲ್ ಸೋಪ್ ಹಾಕಿ ಕೈ ತೊಳ್ಕೊಂಡು ಬಾ..ಇಲ್ಲದಿದ್ರೆ ಮಕ್ಕಳಿಗೆ  ಇನ್ಫೆಕ್ಷನ್ ಆಗತ್ತೆ” ಅಂತ ಅವಳಿಗೇ ಮಕ್ಕಳನ್ನು ಮುಟ್ಟಗೊಡದವನು,ಮಕ್ಕಳನ್ನು ಸಾಕೋ ಬಗ್ಗೆ ದೊಡ್ಡ ಭಾಷಣ ಕೊರೆಯುತ್ತಿದ್ದ. ಗಡಿಯಾರದ ಢಣ್ ಗಳಿಗೆ ಸರಿಯಾಗಿ ಅವಕ್ಕೆ ಹಾಲು,  ಹಾರ್ಲಿಕ್ಸು,ಊಟ-ತಿಂಡಿ,ಫ್ರೂಟ್ ಜ್ಯೂಸ್, ನಿದ್ದೆ,ಮಲ-ಮೂತ್ರ. ಪ್ರತಿಯೊಂದಕ್ಕೂ ಟೈಮ್ ಟೇಬಲ್ ನಿಗದಿಪಡಿಸಿದ್ದ ಮಹರಾಯ. ಕಡೆಗೆ ಮಕ್ಕಳು ಅಳಲೂ, ನಗಲೂ ಕೂಡ. ಅದಕ್ಕೇ ಈ ವಿಚಿತ್ರ ಡಿಸಿಪ್ಲೀನ್ ಮನುಷ್ಯನ ಮನೆಯ ಕಡೆ ನೆಂಟರಿರಲಿ,ಯಾವ ಸ್ನೇಹಿತರೂ ಕೂಡ ಸುಳಿಯುತ್ತಿರಲಿಲ್ಲ.

            ಈ ದೂರ್ವಾಸಮುನಿಯ ಕೈ ಹಿಡಿದ ದುರಾದೃಷ್ಟವಂತೆ ಸೀತೂ, ಹೆಸರಿಗೆ ತಕ್ಕ ಹಾಗೆ ಸಹನೆಯನ್ನೇ ಹಾಸಿ ಹೊದ್ದವಳು. ಈ ನಾಗರಾಜಾಯಣದ ಪ್ರತಿದಿನದ ವನವಾಸದಲ್ಲಿ ಅದೆಷ್ಟು ಬಾರಿ ಅಗ್ನಿಗೆ ಧುಮುಕಿ, ಅದರಲ್ಲಿ ಮಿಂದು ಕಾಷ್ಠವಾಗಿದ್ದೀನಿ ಅಂತ ಅವಳು ಲೆಕ್ಕ ಇಟ್ಟಿಲ್ಲ. ಹೀಗಾಗಿ ಅವಳಿಗೆ ಬಾಯಿ-ದನಿ, ಆಸೆ-ಕನಸು ಎಲ್ಲ ಸತ್ತೇ ಹೋಗಿದ್ವು ಅಂದ್ರೆ ತಪ್ಪಿಲ್ಲ. ತಂದೆಯ ಕಬ್ಜದಲ್ಲಿ ಬೆಳೆದು ಬಂದ ಮಕ್ಕಳೂ ಕೂಡ ಹೆಚ್ಚೂ ಕಮ್ಮಿ ಅದೇ ಬಂದೋಬಸ್ತಿನಲ್ಲಿ ಉಸಿರಾಡುತ್ತಿದ್ದವರೇ. ಈ  ಕಟ್ಟುನಿಟ್ಟಿನ ವಾತಾವರಣದಲ್ಲಿ ಸೀತೂ ಮಂಕಾಗಿ, ಏಕಾಕಿಯಾಗಿ ಹೋಗಿದ್ದಳು. ಮಕ್ಕಳು ವಯಸ್ಸಿಗೆ ತಕ್ಕ ಹಾಗೆ ಆಡಿ-ನಲಿಯುವ ಸ್ವಾತಂತ್ರ್ಯವಿಲ್ಲದೆ, ಮನೇಲಿ ಎಲ್ಲರೂ ರೋಬೋಗಳಾಗಿ ಹೋಗಿದ್ದರು. ಯಾವುದೋ ಪಿಳ್ಳೆ ನೆವಕ್ಕೆ ಸೀತೂ ಗಂಡನ ಜೊತೆ ವರ್ಷವೆರಡರಿಂದ ಟೂ    ಬಿಟ್ಟಿದ್ರಿಂದ ಅವರಿಬ್ಬರ ಮುಖಗಳು ಉತ್ತರ-ದಕ್ಷಿಣಗಳಾಗಿದ್ದವು.

            ಹೀಗಾಗಿ ಮನೆಯೆಂಬೋ ಮನೆ ಸ್ಮಶಾನವಾಗಿತ್ತು.

            ಬಿಗಿದುಕೊಂಡಿದ್ದ ನಾಗರಾಜನ ಎಣ್ಣೆಮುಖ, ಇದ್ದಕ್ಕಿದ್ದ ಹಾಗೆ ಎದೆಯಲ್ಲಿ ಏನೋ ಕಚಗುಳಿಯಿಟ್ಟ ಅನುಭವವಾಗಿ, ಮೈ ಕೊಡವಿದ.  ಅವನರಿವಿಲ್ಲದೆ ಮುಖದ ಸ್ನಾಯುಗಳು ಸಡಿಲವಾಗಿ ಅರಳಿದವು. ತೊಡೆಯ ಮೇಲೆ ಕುಪ್ಪಳಿಸಿದ ಆ ಪುಟ್ಟ ನಾಯಿಮರಿಯ ತಲೆಯ ಮೇಲೊಂದು ಮೆಲ್ಲನೆ ಮಟುಕಿ “ಥೂ ಕಳ್ಳ..” ಎಂದು ಅದರ ಕಿವಿ ನೇವರಿಸಿದ. ಬಾಗಿಲ ಮರೆಯಲ್ಲಿ ನಿಂತಿದ್ದ ಸೀತೂ ತುಟಿಯ ಮೇಲೊಂದು ಸಣ್ಣ ಕಿರು ನಗೆ ಹಾದುಹೋಯಿತು.

            ಶ್ರುತಿ ಸಮಯ-ಸಂದರ್ಭ ನೋಡಿಕೊಂಡು ತಂದೆಯ ಮುಂದೆ ಮೆಲ್ಲನೆ ಒಂದು ಲಿಸ್ಟ್ ಹಿಡಿದಳು.

            ” ತುಂಬಾ ಸೂಕ್ಷ್ಮ ಅಣ್ಣಾ ಇದು…ಹಸುಗೂಸಿನ ಹಾಗೆ ನೋಡ್ಕೋಬೇಕಂತೆ ಇದನ್ನ…ಬೆಳಗ್ಗೆ ರಾತ್ರಿ ಹಾಲು,ಸೆರಾಲ್ಯಾಕ್,ಬೇಯಿಸಿದ ಮೊಟ್ಟೆ,ತೆಳ್ಳಗೆ ರಾಗೀ ಮುದ್ದೆ…ಇದಲ್ಲದೆ ರೆಡಿಮೇಡ್ ಫುಡ್ ಅನ್ನು ಐವತ್ತು ಎಂ.ಎಲ್ ಬಿಸಿನೀರಿನಲ್ಲಿ ಕಲೆಸಿ ಕೊಡಬೇಕು “

            ದುಬಾರಿ ನಾಯಿಮರಿಯ ಡಯಟ್ ಅನ್ನು ನಾಗರಾಜ ಖುಷಿಯಾಗಿಯೇ ಆಲಿಸಿದ. ತತ್ ಕ್ಷಣ ಅವನು ಆ ಲಿಸ್ಟನ್ನು ನಾಲ್ಕು ಕಾಪಿ ಮಾಡಿಸಿ , ಮನೆಯ ಇಲ್ಲ ಸದಸ್ಯರಿಗೂ ಹಂಚಿದವನೆÉ, ತಲೆಯೆತ್ತಿ ಗಡಿಯಾರದ ಕಡೆ ನೋಡುತ್ತಾ-“ಸೀತೂ, ಸೆರಾಲ್ಯಾಕ್ ಟೈಂ…ಬೇಗ ಕಾದಾರಿಸಿದ ನೀರು ತೊಗೊಂಬಾ..”-ಎಂದು ಒಳಗಿದ್ದ ಹೆಂಡತಿಯನ್ನು ಆದೇಶದ ದನಿಯಲ್ಲಿ ಕರೆದ, ಎರಡು ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದ ತಮ್ಮ ಜಗಳವ್ರತ ಮರೆತು.

            ಶಶಾಂಕ-” ಮೂರು ತಿಂಗಳಿಗೆ ಪೋಲಿಯೋ ಡ್ರಾಪ್ಸ್,ಟ್ರಿಪಲ್ ಆಂಟಿಜನ್ , ವ್ಯಾಕ್ಸೀನ್ ಹಾಕಿಸ್ಬೇಕು…ಈಗ ಇದನ್ನು ತರೋವಾಗ್ಲೇ ನಾವು ಡಾಕ್ಟ್ರ ಹತ್ತಿರ ಹೋಗಿ ಇದಕ್ಕೆ ಮಲ್ಟಿವಿಟಮಿನ್  ಡ್ರಾಪ್ಸು,ಇಂಜೆಕ್ಷನ್ ಎಲ್ಲ ಹಾಕಿಸ್ಕೊಂಡು ಬಂದಿದ್ದೀವಿ”-ಎಂದು ಹೇಳುವುದನ್ನು ಮರೆಯಲಿಲ್ಲ.

            ನಾಗರಾಜ ತನ್ನ ಕಾಸ್ಟ್ಲೀ  ನಾಯಿಮರಿ ಕಡೆ ಅಭಿಮಾನದಿಂದ ನೋಡಿದ. “ಬರುತ್ತಲೇ ರಾಯಲ್ ಮುಂಡೇದು” ಅಂದುಕೊಂಡವನ ಬಾಯ್ತುಂಬ ಪ್ರೆಸ್ಟೀಜ್ ನಗು.

            ಆ ಮನೆಗೆ ಮೂರನೇ ಮಗುವಾಗಿ ಆಗಮಿಸಿದ ‘ ರಿಂಕೂ’ಗೆ ಎಲ್ಲರಿಂದಲೂ ರಾಜೋಪಚಾರ! ಗಂಡ-ಹೆಂಡತಿಗೆ ಕೈ ತುಂಬಾ ಕೆಲಸ. ಸದಾ ಅದರದೇ ನಿಗಾ.

            ವರ್ಷಕ್ಕೊಂದು ಸಲವೋ,ಎರಡು ಸಲವೋ ಈ ಮನೆಗೆ ಅಪ್ಪಿತಪ್ಪಿ ಬರುತ್ತಿದ್ದ ನಾಗರಾಜನ ಗೆಳೆಯ ಶ್ರೀಪತಿಗೆ ಆ ದಿನ ಆಶ್ಚರ್ಯವೋ ಆಶ್ಚರ್ಯ!! ಏನೇ ಆದರೂ ಆಯಾ ವಸ್ತುಗಳು ಆಯಾ ಜಾಗದಲ್ಲೇ ಇರಬೇಕೆನ್ನುವ ರೂಲ್ಸ್ ಮಾಡಿದ್ದ ನಾಗರಾಜನ ಮನೆಯ ತುಂಬಾ ಅಂದು ಚೆಲ್ಲಾಪಿಲ್ಲಿ ಬಿದ್ದಿದ್ದ ಸಾಮಾನುಗಳು…ಪೇಪರ್ರು, ಚಪ್ಪಲಿ, ಕೊಡೆ ಎತ್ತೆತ್ತ್ಲೋ…

            ಪುಟ್ಟಮಗುವೊಂದು ಮನೆಯಲ್ಲಿರುವಂಥ ಚಹರೆಗಳು!!

            ಗೆಳೆಯನ ಮುಖ ಕಂಡು ನಾಗರಾಜನಿಗೆ ಸಂಭ್ರಮವೋ ಸಂಭ್ರಮ. ಆಗಮಿಸಿದ ಹೊಸ ಅತಿಥಿಯ ಪ್ರತಾಪ ಸಾರುವ ಉತ್ಸಾಹ.!

            ” ಭಾಳ ಬಿಜಿ ಕಣಯ್ಯ ನಾನು….ನಿನಗೆ ಫೋನಾಯಿಸಕ್ಕೂ ಪುರುಸೊತ್ತಾಗ್ಲಿಲ್ಲ ನೋಡು…ದಿನ ಪೂರ್ತಿ ನಮ್ಮ ಈ ರಿಂಕೂನ ಸುಧಾರಿಸೋ ಅಷ್ಟರಲ್ಲಿ ಸರೀಹೋಗತ್ತೆ…”-ಹುಬ್ಬೇರಿಸಿ ಮಾತು ಮುಂದುವರಿಸಿದ;”ತಿಂಗಳೂ ತಿಂಗಳೂ ಇದರ ಡಾಕ್ಟ್ರ ಫೀಸೇ ಸಾವಿರ ರೂ ಆಗತ್ತೆ….ಇನ್ನುಳಿದ ಖರ್ಚು ತಿಂಗಳಿಗೆ ಸಾವಿರಕ್ಕೆ ಕಡಮೆಯಿಲ್ಲ….ಭಾಳ ಡೆಲಿಕೇಟು ಮುಂಡೇದು…ಹುಷಾರಾಗಿ ಹ್ಯಾಂಡಲ್ ಮಾಡಬೇಕು…ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಬೇಕು ಕಣಯ್ಯ, ನಿಂತಲ್ಲಿ ನಿಲ್ಲಲ್ಲ, ಅಂಥ ಆಕ್ಟೀವು…ಹುಡುಗಾಟ ಬೇರೆ…ಮನೆಪೂರ ಎಗರಾಡತ್ತೆ..ಸ್ವಲ್ಪ ಯಾಮಾರಿ ಬಾಗಿಲು ತೆಗೆದರೆ ಸಾಕು ರಸ್ತೆಗೇ ಹಾರಿಬಿಡತ್ತೆ..ಇದನ್ನು ಹಿಡಿದೂ ಹಿಡಿದು ಮನೆಮಂದಿಗೆಲ್ಲ ಸಾಕೋ ಸಾಕು…ನನ್ನನ್ನು ನೋಡು ಎಷ್ಟು ಸ್ಲಿಮ್ ಆಗಿಬಿಟ್ಟಿದ್ದೀನಿ..ಹೆ..ಹ್ಹೇ..” ಎಂದು ನಗುತ್ತಲೇ ಅವನು, ಗಾಜಿನ ಬೀರುವಿನ ಮೇಲೆ ಕಿಟಕಿಯತ್ತ ಜಂಪ್ ಮಾಡುತ್ತಿದ್ದ ರಿಂಕುವಿನ ಹಿಂದೋಡಿ ಹಾರಿ ಅದನ್ನು ಹಿಡ್ಕೊಂಡು ಬಂದು ,ತನ್ನ ಮಡಿಲಲ್ಲಿ ತುರುಕಿಕೊಂಡು ಕುಳಿತ.

            ಶ್ರೀಪತಿ ಬಿಟ್ಟ ಬಾಯಿ ಬಿಟ್ಕೊಂಡು ನೋಡುತ್ತಿದ್ದ-ಎಲಾ ಇವನಾ…ತನ್ನ ಹೊಟ್ಟೇಲಿ ಹುಟ್ಟಿದ ಮಕ್ಕಳನ್ನೂ ಹೀಗೆ ಎತ್ತಾಡಿಸಿಲ್ಲ,ಮುದ್ದಿಸಿ ಖುಷಿಪಟ್ಟಿಲ್ಲ..ಇದೇನೀ ಮಾಯೆ?!

            “ಸೀತೂ , ಶ್ರೀಪತಿ ಬಂದಿದ್ದಾನೆ..ಒಂದು ಸ್ಪೆಷಲ್ ಕಾಫಿ”

            ಕಾಫಿ ಲೋಟದೊಡನೆ ಪ್ರತ್ಯಕ್ಷಳಾದ ಸೀತೆಯ ಮುಖದ ಮಂದಹಾಸ ಗಮನಿಸಿದ ಶ್ರೀಪತಿ ‘ದೇವರು ದೊಡ್ಡೋನು’ ಅಂತ ನಿಟ್ಟುಸಿರಿಟ್ಟು ಗೆಳೆಯನ ಮುಖ ನೋಡಿದಾಗ, ಸೀತೂ, ‘ ಎಲ್ಲಾ ಇವನ ಮಹಿಮೆ’ ಅನ್ನೋ ಹಾಗೆ ರಿಂಕು ಕಡೆ ನೋಟ ಹೊರಳಿಸಿದಳು.

            ” ಸೀತೂ, ಸ್ವಲ್ಪ ಇವನನ್ನು ಕರ್ಕೋ” ಎನ್ನುತ್ತಾ ನಾಗರಾಜ ,ರಿಂಕುವನ್ನು ಮಡದಿಯತ್ತ ವರ್ಗಾಯಿಸಿದಾಗ , ಶ್ರೀಪತಿಗೆ ಗೆಳೆಯನಲ್ಲಾದ ಅಗಾಧ ಬದಲಾವಣೆ ಮನನವಾಗಿ ಮುಖದಲ್ಲಿ ಸಮಾಧಾನದ ಎಳೆ ಕಂಡಿತು. ಶಶಾಂಕ-ಶೃತಿಗೂ ತಂದೆಯ ಜಿಗುಟು ಸ್ವಭಾವ ಮಾಯವಾಗಿ ಮನೆಯಲ್ಲಿ ಹಾಯಾದ ವಾತಾವರಣ ಮೂಡಿದೆ ಎನಿಸಿತ್ತು. ರಿಂಕು ಎಲ್ಲರಲ್ಲೂ ಲವಲವಿಕೆ ತಂದಿದ್ದ.

            ವಾರಕ್ಕೆರಡು ಸಲ ರಿಂಕೂಗೆ ಮಜ್ಜನ! ಈ ಐಟಂ ಇನ್ ಛಾರ್ಜ್ ನಾಗರಾಜನದೇ ಆಗಿತ್ತು. ಅದೂ ಸ್ಪಾಂಜ್ ಬಾತ್..ಶೀತ ಆದರಂತೂ ತುಂಬಾ ಫಜೀತಿ-ಇನ್ನೂ ತಿಂಗಳ ಹಸುಗೂಸು.

            “ಸೀತೂ, ಬೇಗ ರಿಂಕೂ ಸ್ನಾನಕ್ಕೆ ರೆಡಿ ಮಾಡೇ”-ಆರ್ಡರ್ ಹಾಕಿ ನಾಗರಾಜ ,ರಿಂಕುವನ್ನು ದೊಡ್ಡ ಪ್ಲಾಸ್ಟಿಕ್ ಬೇಸಿನ್‍ನಲ್ಲಿ ನಿಲ್ಲಿಸ್ಕೊಂಡು ಮೆತ್ತನೆ ಬಟ್ಟೆಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ  ನೆನೆಸಿ ಅದರ ಮೈಯುಜ್ಜಿ ಸ್ನಾನ ಮಾಡಿಸಿ,ತತ್ ಕ್ಷಣ ಟರ್ಕೀ ಟವೆಲ್ಲಿನಲ್ಲಿ ಮೈಯೊರೆಸಿ ಎಳೆಬಿಸಿಲಿನಲ್ಲಿ ‘ಸನ್ ಬಾತ್ ‘ಗೆ ಕೂಡಿಸೋದು. ಅಂಗಳದಲ್ಲಿ ನೆಗೆದಾಡುವ ರಿಂಕು ಏನಾದರೂ ಮಣ್ಣಿಗೆ ಬಾಯಿ ಹಾಕಿಬಿಟ್ಟರಂತೂ ಅವನ ಫಜೀತಿ ಬೇಡ! ಅದರ ಹಿಂದೆ ರನ್ನಿಂಗ್ ರೇಸ್ ಮಾಡ್ತಾ ,ಅದನ್ನು ಹಿಡ್ಕೊಂಡು ಅದರ ಬಾಯಿ ತೆಗೆಸಿ” ಛೀ ತುಂಟ” ಎಂದು ಬಯ್ಯುತ್ತಾ, ತನ್ನ ಬೆರಳಿನಿಂದ ಅದರ ಬಾಯಿ,ನಾಲಗೆಯಿಂದ ಮಣ್ಣು ಮೀಟಿ  ತೆಗೆದು-ಒದ್ದೆ ಬಟ್ಟೆಯಿಂದ ಒರೆಸುವ ಅವನ  ಸಡಗರ ನೋಡಬೇಕು. ಇನ್ನು, ಅದು ಮನೆ ತುಂಬಾ ಅಲ್ಲಲ್ಲಿ ಸೂಸು,ಇಸ್ಸೀ ಮಾಡಿಕೊಂಡುಬಿಟ್ಟರೆ “ಸೀತೂ” ಎಂದು ಕೂಗು ಹಾಕಿದರೂ, ತಾನೇ ಅದನ್ನು ಲವಲೇಶವೂ ಅಸಹ್ಯಿಸಿಕೊಳ್ಳದೆ ಕ್ಲೀನ್ ಮಾಡಿಬಿಡ್ತಿದ್ದ ನಾಗರಾಜ.

            “ಶ್ರೀಪತಿ ಇದರ ಚಿನ್ನಾಟ ನೀನು ನೋಡಬೇಕು ಕಣಯ್ಯ …ಒಂದ್ಗಳಿಗೆ ನಾವು ಕಾಣದಿದ್ರೆ ಒದ್ದಾಡಿಬಿಡತ್ತೆ. ನಮ್ಮನ್ನಿದು ಅಷ್ಟು ಹಚ್ಕೊಂಡುಬಿಟ್ಟಿದೆ….ಇನ್ನೂ ನಾವಿದನ್ನು ಹೊರಗೆ ಬಿಟ್ಟಿಲ್ಲ. ಬಿಸಿಲಿಗೆ ಹೋದರೆ ಕಣ್ಣೇ ಮುಚ್ಚಿಕೊಂಡುಬಿಡತ್ತೆ.  ನಮ್ಮನೆಗೆ ಯಾರು ಬಂದರೂ ಇದಕ್ಕೆಲ್ಲಿ ಇನ್ ಫೆಕ್ಷನ್ ಆಗ್ಬಿಡತ್ತೋ ಅನ್ನೋ ಭಯ ನಮಗೆ…ನಮ್ಮ ನಾಲ್ಕು ಜನರ ವಾಸನೆ ಮಾತ್ರ ಇದಕ್ಕೆ ಪರಿಚಯ…”-ಉದ್ದಕ್ಕೆ ಅವನು ಇನ್ನೂ ಏನೇನೋ ಹೇಳುತ್ತಲೇ  ಹೋದ.

       ನಾಗರಾಜನ ಭೈರಿಗೆ ಮುಗಿಯೋ ಲಕ್ಷಣ ಕಾಣದಾದಾಗ, ಶ್ರೀಪತಿ ಮೆಲ್ಲನೆ ಮೇಲೇಳಲು ಪ್ರಯತ್ನಿಸಿದ.ಅಷ್ಟರಲ್ಲಿ -“ಒಂದ್ನಿಮಿಷ..ಸೀತೂ..” ಅಂತ ಕೂಗಿದ ನಾಗರಾಜ. “ಕಾಫೀ ಆಯ್ತಲ್ಲಯ್ಯ”- ಎಂದು ಶ್ರೀಪತಿ ಸಂಕೋಚದಿಂದ ನುಡಿಯುವಷ್ಟರಲ್ಲಿ,ನಾಗರಾಜ-“ನಿಂಗಲ್ಲಯ್ಯ….ನಮ್ಮ ರಿಂಕೂಗೆ ಸೆರಾಲ್ಯಾಕ್ ಟೈಂ ಆಯ್ತು” ಎಂದ.

            ಗೆಳೆಯ ಬಂದಾಗಿನಿಂದ ಸರಿಯಾಗಿ ಎಂಟು ಸಲ “ಸೀತೂ…ಸೀತೂ”ಅಂತ ಕರೆದಿದ್ದ ನಾಗರಾಜ. ಶ್ರೀಪತಿಗೆ ಅವನ ಸೀತೂ ಜಪ ಕೇಳಿ ಒಂಥರಾ ಖುಷಿಯಾಯ್ತು. ಹೋಗಲಿ ಈ ನಾಯಿಮರಿ ನೆಪದಲ್ಲಾದರೂ ಗಂಡ- ಹೆಂಡತಿ  ರಾಜಿ ಆದ್ರಲ್ಲ ಅಂತ.

            ಗಂಡನ ಪ್ರೀತಿಯ ಕರೆ ಕೇಳಿ ಸೀತೆಯ ಮುಖ ಹೂವಿನ ಹಾಗೆ ಅರಳಿ ಹೋಗಿತ್ತು! ಸದಾ ಗಂಡನ ಕಿರಿಕಿರಿ, ಸಿಡಿಮಿಡಿ, ಆಕ್ಷೇಪಣೆ, ಕೋಪದ ಜ್ವಾಲಾಮುಖಿಯಲ್ಲಿ  ಮೀಯುತ್ತಿದ್ದವಳಿಗೆ,ಅವನ   ಈ ಹೊಸ ಪರಿ, ಉಲ್ಲಾಸ ಚಿತ್ತ-ಉತ್ಸಾಹದ ನಡೆ ಕಂಡು, ಇದೆಲ್ಲಾ ಖಂಡಿತಾ  ಈ ಮುದ್ದು ರಿಂಕುವಿನ ‘ಕಾಲ್ಗುಣ’ , ಗಂಡನ ಸಂಪೂರ್ಣ ಬದಲಾವಣೆಗೆ ರಿಂಕುವೇ ಹಂಡ್ರೆಡ್ ಪರ್ಸೆಂಟ್ ಕಾರಣ ಎಂಬುದು ಅವಳಿಗೆ ಖಾತ್ರಿಯಾಗಿ “ಯುರೇಕಾ”-ಎಂದು ಸಂಭ್ರಮದಿಂದ ಚೀರುವಂತಾಗಿತ್ತು.

            “ಇವರ ಆರೋಗ್ಯ ತುಂಬಾ ಸುಧಾರಿಸಿದೆ ….ಬಿ.ಪಿ. ನಾರ್ಮಲ್…ತೂಕಾನೂ ಕಡಮೆಯಾಗಿ ,ಕೊಲೆಸ್ಟ್ರಾಲ್ ಮಾಯವಾಗಿದೆ”

            -ಎಂದು ಸೀತೆ ಹೇಳಿದ ಸಂಗತಿ ಕೇಳಿ ಶ್ರೀಪತಿಯ ಮುಖ ಹರವಾಯಿತು. ” ತುಂಬಾ ಸಂತೋಷಾನಮ್ಮಾ…ನಿಮ್ಮ ಮನೇಲಿ ಒಂಥರ ಸಂಭ್ರಮದ ವಾತಾವರಣ ಹರಡಿದೆ…ನಾಗರಾಜ ತುಂಬಾ ಬದಲಾಗಿದ್ದಾನೆ! ಗುಡ್..ಗುಡ್…ಮಕ್ಕಳಿಗೂ ಪ್ರಮೋಷನ್ ಬಂದ ಸಿಹಿ ಸುದ್ದಿ ಹೇಳಿದಿರಿ…ರಿಯಲಿ ಗ್ರೇಟ್ ಕಣಯ್ಯ ನಿಮ್ಮ ರಿಂಕೂ ಎಂಟ್ರೆನ್ಸು…”-ಎಂದು ಶ್ರೀಪತಿ ರಿಂಕುವಿನ ಒಳ್ಳೆಯ ಕಾಲ್ಗುಣದ ಬಗ್ಗೆ ಹೊಗಳಿಕೆಯ ಮಾತಾಡುತ್ತಿರುವಷ್ಟರಲ್ಲಿ , ನಾಗರಾಜ, ಚಿಗರೆಯಮರಿ ಥರ ಛಂಗನೆ ಹೊರಗೆ ನೆಗೆಯುತ್ತಿದ್ದ ರಿಂಕುವಿನ ಹಿಂದೆ ಹದಿನೆಂಟರ ಹುಡುಗನಂತೆ ಛಲ್ಲಾಂಗ್ ಹಾಕಿ ಓಡಿದ.

            ‘ರಿಂಕೂ’ಎಂಬ ಪುಟ್ಟ ಮಾಯಾವಿ ಮಾಡಿದ ಪವಾಡದ ಬಗ್ಗೆ ಯೋಚಿಸುತ್ತ ಶ್ರೀಪತಿ ಬೆಕ್ಕಸ ಬೆರಗಾಗಿ ನಿಂತಿದ್ದ!!.       

Related posts

ಕ್ಷಮೆ

YK Sandhya Sharma

ಒಳ ಮುಖಗಳು

YK Sandhya Sharma

Kaalada Mulaamu-Short story

YK Sandhya Sharma

3 comments

Mira Gadasalli April 15, 2020 at 11:28 pm

Very good story no madam it is the realty we notice in families who had adopted pets during very stressful periods in their lives. Pets respond immediately to all loving gestures from family members. They recognize your entering the compound before any one can do. They welcome you with a hug even before you can take off your shoes. No doubts pets are great healers therapists who cares if they have no license. Keep up the great work of loving. Namaskara

Reply
YK Sandhya Sharma April 16, 2020 at 7:52 pm

Thank you so much Meera for your valuable opinion. Plz. continue your encouragemnet comments nad my creativeness. Thanks a lot.

Reply
YK Sandhya Sharma April 19, 2020 at 10:38 am

ಪ್ರಿಯ ಮೀರಾ, ನಿಮ್ಮ ಅಮೂಲ್ಯ ಅಭಿಪ್ರಾಯಕ್ಕೆ ಧನ್ಯವಾದಗಳು. ಇದನ್ನೇ ನೀವು ಮುಖಪುಸ್ತಕದಲ್ಲಿ ಬರೆದರೆ ಉಳಿದ ಓದುಗರಿಗೂ ಉಪಯುಕ್ತವಾಗುತ್ತದೆ. ನಿಮ್ಮ ಸಹೃದಯತೆಗೆ ವಂದನೆಗಳು.

Reply

Leave a Comment

This site uses Akismet to reduce spam. Learn how your comment data is processed.