Image default
Short Stories

ಧರ್ಮ

ನಾನು ಶಾಲೆಯಿಂದ ಬಂದಾಗ ಅಜ್ಜಿ ಮನೆಯಲ್ಲಿರಲಿಲ್ಲ. ಬಂದವಳೇ ಕುತ್ತಿಗೆಗೆ ನೇತುಹಾಕಿಕೊಂಡಿದ್ದ ಚೀಲವನ್ನು ಕಪಾಟಿನಲ್ಲಿ ಎಸೆದು ಅಡಿಗೆ ಮನೆಗೆ ಓಡಿದೆ. ಕಕ್ಕಿ ರೊಟ್ಟಿ ಮಾಡುತ್ತ ಕೂತಿದ್ದರು. ನಾನು ಅವರ ಹತ್ತಿರಾನೇ ಒಂದು ಮಣೆ ಎಳೆದುಕೊಂಡು ಕೂತು-

“ಕಕ್ಕೀ……ನಂಗೆ ನಾಳೆ ಸ್ಕೂಲಿಲ್ಲ. ರಜೆ!” ಎಂದೆ ಅವರ ಮುಖ ನೋಡುತ್ತ. ಆದರೆ ಕಕ್ಕಿ ಯಾಕೆ ಅಂತ ಕೇಳಲಿಲ್ಲ. ಅವರ ಮುಖದಲ್ಲಿ ಕಾರಣವನ್ನು ತಿಳಿದುಕೊಳ್ಳುವ ಕುತೂಹಲವೂ ಕಾಣಲಿಲ್ಲ. ಮತ್ತೇ ನಾನೇ ಕೇಳಿದೆ.

“ಯಾಕೆ ಗೊತ್ತಾ ಕಕ್ಕಿ?”

ಕಕ್ಕಿ ಸುಮ್ಮನೆ ತಲೆಯಾಡಿಸಿದರು.

“ಮತ್ತೇ ನಾಳೆ ಭೀಮನ ಅಮಾವಾಸ್ಯೆ ಹಬ್ಬವಂತೆ… ನೋಡು ಕಕ್ಕಿ, ಸರಸಿ ಇಲ್ವಾ, ಅವಳು ಹೇಳ್ತಾಳೆ- ನಾಳೆ ಗಂಡನ ಪೂಜೆ ಮಾಡಬೇಕಂತೆ, ಒಳ್ಳೇ ಗಂಡನ್ನ ಕೊಡಪ್ಪ ದೇವರೆ ಅಂತ ಬೇಡಿಕೊಂಡರೆ ಒಳ್ಳೆ ಗಂಡ ಸಿಗ್ತಾನಂತೆ, ಹೌದಾ ಕಕ್ಕೀ?”ಎಂದು ಕೇಳಿದೆ.

ಕಕ್ಕಿ ಮಾತನಾಡದೆ ಒಲೆಯ ಮೇಲಿದ್ದ ಕಾವಲಿಯನ್ನು ಇಳಿಸಿ ಅಗ್ಗಿಷ್ಟಿಕೆಗೆ ಇದ್ದಿಲು ಹಾಕಿ ಇಕ್ಕಳದಿಂದ ಕೆಂಡವನ್ನು ಕೆದರಿ ಉರಿ ಮಾಡಿದರು.

“ಏನು ಕಕ್ಕೀ, ನನ್ನ ಜೊತೆ ಮಾತಾಡಲ್ವಾ…..ಟೂನಾ?” ಎಂದು ಅಳು ಮೋರೆ ಮಾಡಿಕೊಂಡು ಕೇಳಿದೆ. ತತ್‍ಕ್ಷಣ ಕಕ್ಕಿ ಇನ್ನೊಂದು ಕಾವಲಿಗೆ ತಟ್ಟಿದ್ದ ಹಸಿ ರೊಟ್ಟಿಯನ್ನು ಒಲೆ ಮೇಲಿಟ್ಟು ನನ್ನ ಕಡೆ ತಿರುಗಿ, “ಆ್ಞ……ಏನು ಹೇಳೀಗ?” ಎಂದು ನಸುನಕ್ಕರು.

ನಾನು ಉತ್ಸಾಹದಿಂದ ಚಕ್ಕಂಬಕ್ಕಳ ಹಾಕಿಕೊಂಡು-

“ಅದೇ ಸರಸಿ ಹೇಳಿದ್ಲು ಅಂದ್ನಲ್ಲ, ನಾಳೆ ಪೂಜೆ ಮಾಡಿದ್ರೆ ಒಳ್ಳೆ ಗಂಡ ಸಿಗ್ತಾನಂತೆ ಹೌದಾ ಕಕ್ಕಿ?”ಎಂದೆ.

“ಹೌದು, ಬಹಳ ಭಕ್ತಿಯಿಂದ ಪೂಜೆ ಮಾಡಬೇಕು. ನಾನು ಚಿಕ್ಕವಳಿದ್ದಾಗ ಪ್ರತಿಸಲಾನೂ ಮಣ್ಣಿನ ಗೌರಿ ಮಾಡಿ, ಅದಕ್ಕೆ ಸುಣ್ಣದ ಚುಕ್ಕೆ ಇಟ್ಟು, ಅರಿಶಿನ ಕುಂಕುಮ ಹಾಕಿ ಪೂಜೆ ಮಾಡ್ತಿದ್ದೆ” ಎಂದು ಮಾತನ್ನು ಅರ್ಧದಲ್ಲೇ ನಿಲ್ಲಿಸಿದರು.

“ಅದಕ್ಕೇ ಅಲ್ವಾ ಒಳ್ಳೇ ನಾಣೀ ಕಕ್ಕ ಸಿಕ್ಕಿರೋದು ನಿಮಗೆ ?” ಎಂದು ನಾನು ಸರ್ರನೆ ಅವರ ಮಾತನ್ನು ಪೂರ್ತಿ ಮಾಡಿ ಅವರನ್ನು ದಿಟ್ಟಿಸಿದೆ. ಕಕ್ಕಿಯ ಮುಖದಲ್ಲಿ ಯಾವ ಪ್ರತಿಕ್ರಿಯೆಯೂ ಕಾಣಲಿಲ್ಲ. ತಲೆ ಬಗ್ಗಿಸಿಕೊಂಡು ಕಾಫಿ ಬೆರೆಸಿ ಒಲೆಯ ಮೇಲಿಟ್ಟು ರೊಟ್ಟಿ ತಟ್ಟೆಯನ್ನು ನನ್ನ ಮುಂದಿಟ್ಟರು. ನಾನು ಮೌನವಾಗಿ ತಿನ್ನತೊಡಗಿದೆ. ಅಷ್ಟರಲ್ಲಿ ಹೊರಗಡೆ ಅಜ್ಜಿಯ ದನಿ ಕೇಳಿಸಿತು. ನಾನು ಬೇಗ ಬೇಗ ಕಾಫಿ ಕುಡಿದು  ಎದ್ದು ನಿಂತೆ.

“ಸ್ಕೂಲ್ ಆಯ್ತೇನೇ?” ಎನ್ನುತ್ತಾ ಅಜ್ಜಿ ಬಂದು ಕುಳಿತರು. ನಾನು ಹೂಂಗುಟ್ಟಿ, “ಅಜ್ಜಿ, ನಾಳೆ ನಮ್ಮನೇಲೂ ಗಂಡನ ಪೂಜೆ ಉಂಟಾ?”ಎಂದು ಅವರು ಮಗ್ಗುಲಲ್ಲಿ ಕೂಡುತ್ತಾ ಕೇಳಿದೆ.

ನನ್ನ ಮಾತಿಗೆ ಅಜ್ಜಿ ನಿಟ್ಟುಸಿರು ಬಿಟ್ಟರು.

“ಯಾವ ಭಾಗ್ಯಕ್ಕೇಂತ ಮಾಡಬೇಕು ನಾವು? ನಂಗಂತೂ ಮಾಡಿದ್ದು ನೆನಪೇ ಇಲ್ಲ. ಜಾನಕಿ ಇದೇ ದಿನ ಕಳಕೊಂಡ್ಲು. ಇನ್ನು ಯಾರಿದ್ದಾರೆ ಹೇಳು ಈ ಮನೇಲಿ- ತಾಯಿ ಮಗಳೇ ಹೀಗೆ” ಅಂತ ಗಲ್ಲಕ್ಕೆ ಕೈ ಹಚ್ಚಿದರು.

“ಯಾಕಜ್ಜಿ ನಾನು – ಕಕ್ಕೀ ಇದ್ದೀವಲ್ಲ? ನಾವೇ ಮಾಡ್ತೀವಿ. ನನಗೂ ಕೈಗೆ ದಾರ ಕಟ್ಟಿಸಿಕೊಳ್ಳಕ್ಕೆ ತುಂಬ ಆಸೆ ಅಜ್ಜಿ…ನಮ್ಮನೆಯಲ್ಲೂ  ನಾಳೆ ಪೂಜೆ ಮಾಡೋಣ.” ಎಂದೆ ಆಸೆಯಿಂದ.

ಅಜ್ಜಿ ಮತ್ತೆ ನಿಟ್ಟುಸಿರುಬಿಟ್ಟು “ನೀನು ಬೇಕಾದ್ರೆ ಪಕ್ಕದ ಮನೆಗೆ ಹೋಗಿ ದಾರ ಕಟ್ಟಿಸಿಕೋ. ನಮ್ಮ ಮನೆಯಲ್ಲಿ ಮಾತ್ರ ಪೂಜೆ ಬೇಡ. ಈ ದಿನ ಬಂದರೆ ಜಾನಕಿ ಬಹಳ ಬೇಜಾರು ಮಾಡಿಕೊಳ್ಳುತ್ತಾಳೆ” ಎಂದು,

“ಓ……ಆಗಲೇ ಜಾನಕಿ ಬರೋ ಹೊತ್ತಾಯ್ತು, ಕಾಫಿ ಬೆರೆಸಿ ಇಡು” ಎಂದು ಕಕ್ಕಿಗೆ ಹೇಳಿದರು. ಅಜ್ಜಿಯ ಮಾತು ಕೇಳಿ ನನಗೆ ನಿರಾಶೆಯಾದರೂ, ಹೋಗಲಿ ಪಕ್ಕದ ಮನೆಗೆ ಹೋದರಾಯಿತು ಎಂದು ಸಮಾಧಾನ ತಂದುಕೊಂಡೆ. ಆದರೆ ಕಕ್ಕೀ?…ಅವರಾದರೂ ಹಟ ಮಾಡಬಾರದೇ ಮನೆಯಲ್ಲೇ ಪೂಜೆ ಮಾಡೋಣಾಂತ?… ಉಹುಂ……..ಕಕ್ಕೀ ಸುಮ್ಮನೆ  ರೊಟ್ಟಿ ತಟ್ಟುತ್ತಲೇ ಇದ್ದಾರೆ. ಅವರು ಯಾವಾಗ್ಲೂ ಹೀಗೇನೆ, ಸುಮ್ಮನಿದ್ದುಬಿಡ್ತಾರೆ ಎಂದು ಕೋಪ ಒಸರಿತು.

ಕಕ್ಕಿಯ ಕಡೆ ಕರುಣೆಯಿಂದ ನೋಡುತ್ತ ನಾನು ಹೊರಗೆ ಎದ್ದು ಬಂದೆ. ನನಗೆ ಅವರನ್ನು ನೋಡಿದಾಗಲ್ಲೇ ಅಯ್ಯೋ ಪಾಪ ಎನ್ನಿಸುತ್ತೆ. ಅವರಿಗೆ ಮಾತೇ ಬರಲ್ವೇನೋ ಮೂಕಿ ಅನ್ನೋ ಹಾಗೆ ಕಾಣಿಸ್ತಾರೆ. ದಿನಕ್ಕೆ ನಾಲ್ಕು ಮಾತಾನಾಡಿದರೆ ಹೆಚ್ಚು. ಎಲ್ಲದಕ್ಕೂ ಕೋಲೇ ಬಸವನಂತೆ ತಲೆ ಅಲ್ಲಾಡಿಸುತ್ತಾರೆ. ಪಾಪ, ಈ ಕಕ್ಕಿ ಬಹಳ ಕಷ್ಟದಲ್ಲೇ ಬೆಳೆದರಂತೆ. ತಂದೆ,ತಾಯಿ, ಒಡಹುಟ್ಟಿದವರು ಯಾರೂ ಇಲ್ಲವಂತೆ, ಅವರ ದೊಡ್ಡಪ್ಪಾನೇ ಸಾಕಿ ಮದುವೆ ಮಾಡಿದರಂತೆ. ಈ ಕಕ್ಕೀಗೂ ನಾಣಿ ಕಕ್ಕನಿಗೂ ಸರಿಯಾಗಿದೆ ಜೋಡಿ. ಇಬ್ಬರೂ ಮಾತಾಡಲ್ಲ. ಬೊಂಬೆ ಥರ ಯಾವಾಗೂ ಬಾಯಿ ಹೊಲಿದುಕೊಂಡೇ ಇರ್ತಾರೆ.

ನಾಣಿ ಕಕ್ಕ ಮದುವೆಗೆ ಮುಂಚೆ, ಮದುವೇನೇ ಮಾಡಿಕೊಳ್ಳಲ್ಲ ಅಂತಿದ್ದರಂತೆ . ಅಜ್ಜೀನೇ ಬಲವಂತ ಮಾಡಿ ಹೆಣ್ಣು ನೋಡಿ ಮದುವೆ ಮಾಡಿದ್ದು. ಕಕ್ಕಿಯನ್ನು ನೋಡಕ್ಕೆ ಹೋದಾಗ ನನ್ನನ್ನೂ ಕರೆದುಕೊಂಡು  ಹೋಗಿದ್ದರು.

ಹುಡುಗಿ ಒಪ್ಪಿಗೆಯಾಗಿದೆ ಅಂತ ಅಜ್ಜಿ, ಮುದುಕರೊಬ್ಬರ ಹತ್ತಿರ ಹೇಳಿದ್ದು ನನಗೆ ಚೆನ್ನಾಗಿ ನೆನಪಿದೆ. ಬಹುಶಃ ಅವರೇ ಕಕ್ಕೀ ದೊಡ್ಡಪ್ಪ ಇರಬೇಕು. ಸ್ವಲ್ಪ ದಿನಗಳಲ್ಲೇ ಕಕ್ಕನ ಮದುವೆ ಅದೇ ಊರಲ್ಲಿ ನಡೆಯಿತು. ಮದುವೆಗೆ ಅಪ್ಪ , ಅಮ್ಮ, ಮಧು, ಕಿಟ್ಟ ಎಲ್ಲರೂ ಬಂದಿದ್ದರು. ಅಪ್ಪ-ಅಮ್ಮಾನೇ ಹಸೆಮಣೆಯ ಮೇಲೆ ಕೂತುಕೊಂಡಿದ್ದರು. ನಾನು ಮೂರುದಿನವೂ ಕಕ್ಕನ ಪಕ್ಕ  ಕೂತುಕೊಂಡು ಮದುವೆ ಶಾಸ್ತ್ರ ನೋಡುತ್ತಿದ್ದೆ. ಬರುವಾಗ ಬಸ್ಸಿನಲ್ಲಿ ನಾನು, ಕಕ್ಕ ಕಕ್ಕಿಯ ಮಧ್ಯೆ ಕೂತುಕೊಂಡು ಕಕ್ಕಿಯ ಜೊತೆ ಏನೇನೋ ಮಾತನಾಡಿದೆ. ಕಕ್ಕಿ ಎಲ್ಲದಕ್ಕೂ ಮುಸಿ ಮುಸಿ ನಗುತ್ತಿದ್ದರು. ನಾನು ಎದ್ದು ಕಕ್ಕನ ಪಕ್ಕ ಅವರನ್ನು ತಳ್ಳಿ ಕಿಟಕಿಯ ಕಡೆ ಕೂತಾಗ ಕಕ್ಕಿ ತುಂಬ ನಾಚಿಕೆ ಪಟ್ಟುಕೊಳ್ಳುತ್ತಿದ್ದರು.

ನಾನು ಮೆಲ್ಲಗೆ ಕಕ್ಕನೆ ಕಿವಿಯಲ್ಲಿ-“ಏನು ಕಕ್ಕ, ನೀವು ಮೂಕಿಯನ್ನು ಮದುವೆಯಾದಿರೋ ಹೇಗೆ?”ಎಂದಾಗ ಕಕ್ಕನೂ ನಕ್ಕುಬಿಟ್ಟಿದ್ದರು.

ಮನೆಗೆ ಬಂದಾಗ ಅಮ್ಮಾನೇ ಆರತಿ ಎತ್ತಿ ಕಕ್ಕಿಯನ್ನು ಬರಮಾಡಿಕೊಂಡರು. ಅಪ್ಪ , ಅಮ್ಮ ಹದಿನೈದು ದಿನ ಇದ್ದು ಆಮೇಲೆ ನರಸೀಪುರಕ್ಕೆ ಹೊರಟುಬಿಟ್ಟರು.

ಊರಿಗೆ ಹೋಗುವ ಮುಂಚೆ ಅಮ್ಮ ನನ್ನನ್ನು ಒಂದು ಪಕ್ಕಕ್ಕೆ ಕರೆದು, “ಏ ಪಮ್ಮೀ, ಎಲ್ಲ ಸರಿಯಾಗಿದೆಯೇನೇ ಇಲ್ಲಿ ? ಅಜ್ಜಿ ಚೆನ್ನಾಗಿ ನೋಡ್ಕೋತಾರಾ?” ಎಂದರು.

 ಅಪ್ಪ-“ಅಜ್ಜಿಗೆ ಏನೂ ತೊಂದರೆ ಕೊಡ್ತಿಲ್ಲ ತಾನೆ ನೀನು? ಸಣ್ಣ ಪುಟ್ಟ ಕೆಲಸ ಮಾಡಿಕೊಡಬೇಕು, ಜಾಣೆ” ಎಂದು ತಲೆ ಸವರಿದ್ದರು. ಅಜ್ಜಿಗೆ ನನ್ನ ಕಂಡರೆ ಬಹಳ ಪ್ರೀತಿ. ಅದಕ್ಕೇ ಅವರು ನನ್ನನ್ನು ಇಲ್ಲೇ ಇಟ್ಟುಕೊಂಡಿದ್ದು.

 “ನಿಮ್ಮಮ್ಮನ ಹಾಗೆ ಬಜಾರಿ ಅಲ್ಲ ನೋಡು ನೀನು. ನಿಮ್ಮಮ್ಮ ಮದುವೆ ಆದಕೂಡ್ಲೆ ಗಂಡನಿಗೆ ವರ್ಗಮಾಡಿಸಿಕೊಂಡು ಅವನನ್ನೂ ಹೊರಡಿಸಿಕೊಂಡು ಹೊರಟುಬಿಟ್ಲು ಘಟವಾಣಿ ಹೆಂಗಸು”- ಹಾಗೆ ಹೀಗೆ ಅಂತ ಅಜ್ಜಿ ಯಾವಾಗ್ಲೂ ಅನ್ನುತ್ತಿರುತ್ತಾರೆ.

ಕಕ್ಕನ ಮದುವೆಯಾಗಿ ಸುಮಾರು ದಿನಗಳಾದವು.

ಅಜ್ಜಿ ಈಗೀಗ- “ನಾಣೀನ ನೋಡು, ಗುರು ಹಾಗೆ ಹೆಂಡತೀ ದಾಸ ಆಗಿದಾನೇನು? ನನ್ನ ಮುಂದೆ ಹೆಂಡತಿ ಜೊತೆ ಮಾತಾಡ್ಲಿಕ್ಕೂ ಹೆದರ್ತಾನೆ. ನಮ್ಮ ನಾಣೀದು ಅಪರಂಜಿ ಗುಣ” ಅಂತ ಜಾನಕತ್ತೆ ಹತ್ತಿರ ಹೇಳುತ್ತಿದ್ದುದು ನನ್ನ ಕಿವಿಗೆ ಬಿದ್ದಿದೆ.

ಹೌದು..! ನಾಣೀಕಕ್ಕ ಮದುವೆಯಾದಾಗಿನಿಂದ ಒಂದು ದಿನವೂ ಕಕ್ಕಿ ಹತ್ತಿರ ಮಾತಾಡಿದ್ದು ನಾನು ನೋಡಿಲ್ಲ. ಕಕ್ಕ ಆಫೀಸಿನಿಂದ ಬಂದ ಕೂಡಲೇ ಅಜ್ಜೀನೇ ಕಾಫೀ ತಿಂಡಿ ಕೊಡ್ತಾರೆ. ರಾತ್ರಿ ಅಜ್ಜೀನೇ ಊಟಕ್ಕೆ ಬಡಿಸ್ತಾರೆ. ಕಕ್ಕಿ ಅಡಿಗೆಮನೇಲೇ ಕೆಲಸ ಮಾಡ್ತಿರ್ತಾರೆ. ಕಕ್ಕನಿಗೆ ಕಕ್ಕೀಬಗ್ಗೆ ಯೋಚನೆ ಇದ್ದ ಹಾಗೇ ಕಾಣಲಿಲ್ಲ. ತಮ್ಮ ಪಾಡಿಗೆ ತಾವು ಪೇಪರು ಹಿಡಿದು ಕೂರುತ್ತಾರೆ.

ಈಗ ಎಂಟು ದಿನಗಳಿಂದ ಕಕ್ಕಿ ಒಂದು ಥರಾ ಇದ್ದಾರೆ. ಮೊದಲಿನ ನಗುಮುಖವೂ ಮಾಯ. ಅವರ ಹತ್ತಿರ ಹೋಗಿ “ಯಾಕೆ ಕಕ್ಕಿ ಹೀಗಿದ್ದೀರಾ?” ಅಂತ ಕೇಳಿದ್ದಕ್ಕೆ ಮಾತೇ ಇಲ್ಲ. ಮತ್ತೆ ಮತ್ತೆ ಕೇಳಿದ ಮೇಲೆ ‘ಊಟಾನೇ ಸೇರಲ್ಲ, ಸುಸ್ತು-ಸಂಕಟ’ ಅಂತ ಹೇಳಿದರು. ನಾನು ತತ್‍ಕ್ಷಣ ಓಡಿ ಹೋಗಿ ಅದನ್ನು ಕಕ್ಕನಿಗೆ ಹೇಳಿದ್ದಕ್ಕೆ “ಅಜ್ಜಿಗೆ ಹೇಳು” ಅಂದುಬಿಟ್ಟರು. ಆದರೆ ಅಜ್ಜಿ ಅದನ್ನು ಕಿವೀಮೇಲೇ ಹಾಕಿಕೊಳ್ಳಲಿಲ್ಲ. ನನಗೆ ಬಹಳ ಕೆಡುಕೆನಿಸಿತು. ನಾನು ತಾನೆ ಏನು ಮಾಡಬಲ್ಲೆ ಎಂದು ತೆಪ್ಪಗಾದೆ.

ಅವತ್ತು, ನಾನು ಸರಸಿ ಮನೆಯಿಂದ ಬಂದವಳೆ  ಕಕ್ಕಿಯನ್ನು ಹುಡುಕಿಕೊಂಡು ಹೋದೆ. ಕಕ್ಕಿ ಎಲ್ಲೂ ಕಾಣಲಿಲ್ಲ. ಮನೆಯಲ್ಲಾ ಹುಡುಕಾಡಿದೆ. ಬಚ್ಚಲು ಮನೆಯಲ್ಲಿ, ಬಕೀಟಿನಲ್ಲಿ ನೀರು ಹಿಡಿದು ಹಂಡೆಗೆ ತುಂಬಿಸುತ್ತಿದ್ದರು. ನಾನು ನೋಡುತ್ತಿದ್ದ ಹಾಗೇ ಕಕ್ಕಿ ನೀರು ತುಂಬಿದ ಬಕೀಟನ್ನು ಮೈಮೇಲೆ ಹಾಕಿಕೊಂಡು ‘ಅಮ್ಮಾ’ ಎಂದು ಚೀರಿ ಕೆಳಗೆ ಬಿದ್ದುಬಿಟ್ಟರು. ನನಗೆ ಒಂದು ಕ್ಷಣ ಏನು ತೋಚಲಿಲ್ಲ. ಭಯದಿಂದ ಓಡಿ ಹೋಗಿ ಅಜ್ಜಿಯನ್ನು ಕರೆದು ತಂದೆ.

ಕಕ್ಕಿಯ ಅವಸ್ಥೆ ಕಂಡು ನನಗೆ ಕಣ್ಣಲ್ಲಿ ನೀರು ತುಂಬಿತು. ಅಜ್ಜಿ, “ಬೇಗ ಜಟಕಾ ಕರ್ಕೊಂಡು ಬಾರೇ” ಅಂತ ನನ್ನನ್ನು ಅಟ್ಟಿದರು. ನಾನು ಜಟಕಾ ತರುವಷ್ಟರಲ್ಲಿ ಜಾನಕತ್ತೆ ಕೆಲಸದಿಂದ ಮನೆಗೆ ಬಂದಿದ್ದರು. ಕಕ್ಕೀಗೇ ಬೇರೆ ಸೀರೆ ಉಡಿಸಿ ಅತ್ತೆ ಒಂದು ಕಡೆ, ಅಜ್ಜೀ ಇನ್ನೊಂದು ಕಡೆ, ಹೆಗಲು ಹಿಡಿದುಕೊಂಡು ಜಟಕಾದಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಹೋದರು. ಕಕ್ಕಿಯ ಮುಖ ಬಿಳುಚಿಕೊಂಡಿತ್ತು. ತುಂಬ ನಿಶ್ಯಕ್ತರಾದವರಂತೆ ಕಂಡುಬಂದರು.  

ಅವತ್ನಿಂದ ಅವರು ಒಂದುವಾರ ಹಾಸಿಗೆ ಮೇಲೇ ಮಲಗಿದ್ದರು. ಆಮೇಲೆ ಯಥಾಪ್ರಕಾರ ಕೆಲಸಕ್ಕೆ ತೊಡಗಿಕೊಂಡಿದ್ದರು. ಅಂದಿನಿಂದ ಕಕ್ಕಿ, ಅತ್ತೆ ಮುಂದಿನ ರೂಮಿನಲ್ಲಿ; ನಾನು, ಅಜ್ಜಿ, ಕಕ್ಕ ನಡುಮನೆಯಲ್ಲಿ ಮಲಗುತ್ತಿದ್ದೆವು.

ಒಂದೊಂದು ಸಲ ನನಗೆ ಅಜ್ಜೀ ಮೇಲೆ ತುಂಬ ಕೋಪ ಉಕ್ಕುತ್ತೆ. ದುಃಖವಾಗುವಂತೆ ಮಾತಾಡಿಬಿಡುತ್ತಾರೆ. ನನ್ನನ್ನೂ ಎಷ್ಟೋಸಲ ಸುಮ್ಮ ಸುಮ್ಮನೆ ಗದರಿಸಿಬಿಡ್ತಾರೆ. ಅವತ್ತು ಪಕ್ಕದಮನೆ ಕಾವೇರಮ್ಮನ ಹತ್ತಿರ ಅಜ್ಜಿ-

“ನೋಡಿ, ನಮ್ಮನೇಲಿ ಇವಳು, ತಾನೇ ಮಹಾ ಮುತ್ತೈದೆ ಅನ್ನೋಥರ ಕಾಸಿನಗಲ ಕುಂಕುಮ, ತಲೆತುಂಬ ಹುಲ್ಲಿನ ಹೊರೆ ಹಾಗೆ ಹೂ ಹೊರೆದುಕೊಳ್ತಾಳೆ. ಪಾಪ ಆ ಹುಡುಗಿ ನನ್ನ ಮಗಳು ಜಾನಕಿ, ಇದನ್ನು ನೋಡಿ ತನಗೆ ಆ ಲಭ್ಯ ಇಲ್ಲ ಅಂತ ಎಷ್ಟು ನೊಂದುಕೋ ಬೇಡ. ಹೀಗೆ ಹೊಟ್ಟೆ ಉರಿಸೋದು ಯಾವ ಧರ್ಮ ನೀವೇ ಹೇಳಿ ಕಾವೇರಮ್ಮ?”ಎಂದು ಹೇಳುತ್ತಿದ್ದರು.

ಆಗ ನಾನು, ಕಕ್ಕಿ ಇಬ್ಬರೂ ಮನೆ ಮುಂದೇನೇ ಕೂತಿದ್ದೆವು. ಅಜ್ಜಿ ಮಾತು ಕೇಳಿ ಕಕ್ಕಿ ಬಿಕ್ಕಳಿಸುತ್ತಾ ಅಲ್ಲಿಂದ ಎದ್ದು ಒಳ ಹೋಗಿಬಿಟ್ಟರು. ಅವತ್ತಿನಿಂದ ಇವತ್ತಿನವರೆಗೂ ಅವರು ಸಣ್ಣ ಕುಂಕುಮಾನೇ ಇಡೋದು, ಹೂವನ್ನಂತೂ ಮುಟ್ಟೋದೇ ಇಲ್ಲ.

ಹೀಗೆ ಅಜ್ಜಿ ಅವರಿರವರ ಮುಂದೆ ಅದು ಧರ್ಮನಾ, ಇದು ಧರ್ಮನಾ ಅಂತ ಏನೇನೋ ಅನ್ನುತ್ತಿರುತ್ತಾರೆ.

“ತಾವು ಗಂಡ ಹೆಂಡತಿ ಒಟ್ಟಿಗೆ ಮಾತಾಡುತ್ತಿದ್ದರೆ ಪಾಪ ಜಾನಕಿ ಎಲ್ಲಿ ದುಃಖಪಡ್ತಾಳೋ ಅಂತ ನಮ್ಮ ನಾಣೀನೇ ಸೂಕ್ಷ್ಮ ತಿಳಿದುಕೊಂಡು ತಂಗಿಯ ಮನಸ್ಸನ್ನು ಒಂದು ಚೂರು ನೋಯಿಸಲ್ಲರೀ’ ಅನ್ನುತ್ತಾರೆ.

“ಅಜ್ಜಿ, ನೀವು ಹೀಗೆ ಸುಮ್ಮಸುಮ್ಮನೆ ಕಕ್ಕಿಯನ್ನು ನೋಯಿಸುವುದು ಯಾವ ಧರ್ಮ?”ಅಂತ ಅವರನ್ನೇ ನೇರವಾಗಿ ಕೇಳಿಬಿಡೋಣ ಅನ್ನಿಸುತ್ತದೆ. ಆದರೆ ಧೈರ್ಯ ಸಾಲದೆ ಬಾಯಿ ಮುಚ್ಚಿಕೊಂಡಿರುತ್ತೇನೆ.

ಅದೇ ಜಾನಕತ್ತೆ ಮಾತ್ರ ಅವತ್ತು ತಮ್ಮ ವ್ಯಾನಿಟಿ ಬ್ಯಾಗಿನಲ್ಲಿ ಕೆಂಡ ಸಂಪಿಗೆ ಹೂ ತಂದಿರಲಿಲ್ಲವಾ? ನಾನು ಕೇಳಿದರೆ “ನಿಂಗೇ ತಂದದ್ದು ಪುಟ್ಟ ” ಅಂತ ನನ್ನ ಹೆರಳಿಗೆ ಮುಡಿಸಿಬಿಟ್ಟರು ಅತ್ತೆ.

 “ಮುಡಿದ ಹೂ ಹಾಗೆ ಬಾಡಿದೆಯಲ್ಲ ಅತ್ತೆ ” ಅಂದರೆ, “ಬೆಳಗ್ಗೆ ನನ್ನ ಸ್ನೇಹಿತೆ ಕೊಟ್ಟದ್ದು. ಚೀಲದಲ್ಲೇ ಇದ್ದು ಬಾಡಿಹೋಗಿದೆ, ಅಷ್ಟೆ” ಎಂದರು. ಇನ್ನೊಂದು ದಿನ ಅವರ ಬ್ಯಾಗಿನಲ್ಲಿದ್ದ ಕೆಂಪು ಪೆನ್ಸಿಲ್ಲನ್ನು ನೋಡಿ ನಾನು-

“ಅತ್ತೇ, ಇದು ಬಣ್ಣದ ಪೆನ್ಸಿಲ್ಲಾ? ಕೊಡೀ ಅತ್ತೆ, ಉಗುರಿಗೆ ಹಾಕಿಕೊಂಡು ಕೊಡ್ತೀನಿ” ಅಂದಾಗ ಅತ್ತೆ-

“ಏ ಪೆದ್ದೇ, ಇದು ಉಗುರಿನ ಬಣ್ಣ ಅಲ್ವೇ, ಇದು ಹಣೆಗಿಡೋದು ಇಟ್ಟರೆ ಎಷ್ಟು ಚೆಂದ ಕಾಣುತ್ತೆ, ಗೊತ್ತಾ?” ಎಂದು ನನ್ನ ಹಣೆಗೆ ಹಚ್ಚಿ ಕನ್ನಡಿ ಮುಂದೆ ನಿಲ್ಲಿಸಿ ತೋರಿಸಿದ್ದರು. ಎಷ್ಟು ಚೆನ್ನಾಗಿತ್ತು! ಅಜ್ಜಿಗೆ ಹೇಳದಿದ್ದರೆ ಇನ್ನೂ ಏನೇನೋ ಹೊಸ ಥರಾ ಸಾಮಾನುಗಳನ್ನು ತೋರಿಸುತ್ತೇನೆ ಅಂತ ಹೇಳಿದ್ದರು. ಅವರಿಗೇನು ಕೈತುಂಬ ಸಂಬಳ ಬರುತ್ತೆ. ಅದೆಂಥೆಂಥದೋ ಬಣ್ಣ ಬಣ್ಣದ ಸೀರೆ ತಗೊಂಡಿದ್ದಾರೆ. ನಂಗೂ ಹೊಸ ಲಂಗ, ಚೋಲಿ ಹೊಲಿಸಿದ್ದಾರೆ.

ಒಂದು ದಿನ ಕಕ್ಕೀಗೂ ಅಂಥ ಸೀರೆಯನ್ನು ಅತ್ತೆ ಬಲವಂತ ಮಾಡಿ ಉಡಿಸಿದ್ದರು. ಆಗ ಅಜ್ಜಿ ಬೈದದ್ದರ ನೆನಪು ಇನ್ನೂ ಹಸಿಯಾಗಿದೆ.

“ಇಸ್ಸೀ! ಇದೇನು ನೀನು ಇಂಥ ಉಳ್ಳೀಪರಿ ಸೀರೆ ಉಟ್ಟಿದೀಯ…..ಛೀ……ಬಿಚ್ಚಾಕು, ಅವಳೇನೋ ಕೆಲಸಕ್ಕೆ ಹೊರಗೆ ಹೋಗ್ತಾಳೆ ,ಉಡ್ತಾಳೆ, ನಿಂಗ್ಯಾಕೆ ಮನೇಲಿರೋಳಿಗೆ?…ಒದ್ದೆ ಕೈ ಒರೆಸಿಕೊಂಡರೆ ನೀರೇ ಹೀರದೆ ಇರೋ ಸೀರೆ, ಸೀರೆಯೇನು?” ಅಂತ ಅಜ್ಜಿ, ಕಕ್ಕೀ ಉಟ್ಟುಕೊಂಡಿದ್ದ ಸೀರೆಯನ್ನು ಬಿಚ್ಚಿಸಿದ್ದರು.

ದಿನ ಉರುಳುತ್ತಿತ್ತು…. ನನ್ನ ಪರೀಕ್ಷೆ ಮುಗಿಯಿತು…. ನಾನು ಊರಿಗೆ ಹೋಗಿ ಬಂದೆ. ಮುಂದಿನ ಕ್ಲಾಸಿಗೆ ಹೋದೆ. ಮತ್ತೆ ಪರೀಕ್ಷೆ, ರಜ… ಮುಂದಿನ ತರಗತಿ.  ಹೀಗೆ ಪರೀಕ್ಷೆ-ರಜ ಬರುತ್ತಿತ್ತು ಹೋಗುತ್ತಿತ್ತು.

ಈಗ ನಾನು ಒಂಬತ್ತನೆಯ ತರಗತಿಗೆ ಬಂದಿದ್ದೇನೆ. ಈಗೀಗ ನನಗೆ ಮನೆಯ ಪರಿಸ್ಥಿತಿಯೆಲ್ಲಾ ಚೆನ್ನಾಗಿ ಅರ್ಥವಾಗುತ್ತಿದೆ. ಮನೆಯಲ್ಲಿ ಯಾವಾಗಲೂ ಮೌನ. ನನಗೆ ಬೆಳಗ್ಗೆ ಸ್ಕೂಲಾದರೆ ಸಂಜೆ ಗೆಳತಿಯರ ಮನೆ. ಕಕ್ಕ, ಅತ್ತೆ ಇಬ್ಬರೂ ಅವರವರ ಕೆಲಸಗಳಿಗೆ ಬೆಳಗ್ಗೆ ಹೋದರೆ  ಸಂಜೆಗೇ ವಾಪಸ್. ಮನೆಯಲ್ಲಿ ಅಜ್ಜಿ, ಕಕ್ಕಿ ಇಬ್ಬರೇ. ಅದೂ ಅಜ್ಜಿ ಯಾವಾಗಲೂ ಪಕ್ಕದ ಮನೇಲೇ. ಕಕ್ಕೀಗೆ ಅಡಿಗೆಮನೆಯೇ ಪ್ರಪಂಚ.

 ಈಚೆಗೆ ನಾನು ಕಕ್ಕನ ತಲೆಯಲ್ಲಿನ ನರೆತ ಕೂದಲುಗಳನ್ನು ಹೆಕ್ಕಿ ತೋರಿಸುತ್ತ ತಮಾಷೆ ಮಾಡ್ತೀನಿ-“ಏನು ಕಕ್ಕಾ, ಆಗಲೇ ಮುದುಕರಾಗಿ ಬಿಟ್ರಾ?” ಅಂತ. ಆಗ ನನ್ನ ಗಮನ ತತ್ ಕ್ಷಣ ಕಕ್ಕಿಯ ತಲೆ ಕಡೆ ಹೊರಳುತ್ತದೆ. ಅವರ ತಲೆಯಲ್ಲೂ ಕರಿ-ಬಿಳಿ ಗೆರೆಗಳು. ಅತ್ತೆ ಮಾತ್ರ ಹಾಗೇ ಇನ್ನೂ ಹುಡುಗಿ ಥರಾನೇ ಇದ್ದಾರೆ. ಕಪ್ಪಗೆ ಮಿಂಚುವ ಕೂದಲು. ಮುಖದಲ್ಲಿ ಹೊಳೆಯೋ ಮೇಕಪ್!

ಅಡಿಗೆ ಮನೆಯೊಳಗಿಂದ ಅಜ್ಜಿ ಗೋಳಾಡೋದು ಕೇಳಿ ಪುಸ್ತಕ ಮುಚ್ಚಿಟ್ಟು ಅಡಿಗೆ ಮನೆಗೆ ಧಾವಿಸಿ ಬಂದೆ. ಅತ್ತೆ ಬೇಗ ಬೇಗ ಉಂಡು ಆಫೀಸಿಗೆ ಹೊರಡುವ ಅವರಸದಲ್ಲಿದ್ದರು. ಕಕ್ಕಿ ತಲೆ ಬಗ್ಗಿಸಿಕೊಂಡು ಬಡಿಸುತ್ತಿದ್ದರು. ಅಜ್ಜಿ ಅತ್ತೆಯ ಪಕ್ಕದಲ್ಲಿ ಕೂತು ಅಲವತ್ತುಕೊಳ್ತಿದ್ದರು –

“ಏನೇ ಜಾನಕಿ, ನೀನು ಊಟ ಮಾಡೋದು ನೋಡಿದರೆ ಕರುಳು ಕಿತ್ತು ಬರುತ್ತೆ ಕಣೆ. ಏನು ಚಿಂತೆ ಹಚ್ಚಿಕೊಂಡಿದ್ಯೇ ಮನಸ್ಸಿಗೆ.. ಇಷ್ಟು ದಿನವಾದ್ರೂ ಅದನ್ನೆಲ್ಲ ಮರೆತು ಹಾಯಾಗಿರಬಾರ್ದೇ? ಅದೇ ಚಿಂತೆಯಲ್ಲಿ ಹೇಗೆ ತೇದುಹೋಗಿದ್ದೀಯೇ ನೋಡು. ಇನ್ನು ಸ್ವಲ್ಪ ಅನ್ನ ಹಾಕಿಸ್ಕೊಳ್ಳೇ. ಈ ನಡುವೆ ನಿನ್ನ ಪರಿಯೇ ನನಗರ್ಥವಾಗಲ್ಲ” ಅಂತ ಒಂದೇ ಸಮನೆ ಏನೇನೋ ಒದರುತ್ತಿದ್ದರು. ‘ಹಳೇರಾಗ’ ಅಂತ ಅಂದುಕೊಂಡು ನಾನು ಕೋಣೆಗೆ ಮರಳಿದೆ.

ಅತ್ತೆ ಮಾತ್ರ ಅಜ್ಜಿಯ ಮಾತನ್ನು ಕಿವಿಯ ಮೇಲೆ ಹಾಕಿಕೊಳ್ಳದೆ ಚಪ್ಪಲಿ ಮೆಟ್ಟಿ ಆಫೀಸಿಗೆ ಹೊರಟೇ ಹೋದರು. ಅಜ್ಜಿ ಅದೇನೇನೋ ಆಡಿಕೋತಲೇ ಇದ್ದರು.

ಅತ್ತೆ ಆಫೀಸಿನಿಂದ ಸಂಜೆ ಬಂದದ್ದೇ ತಡ, ಅಜ್ಜಿ ಒಂದೇ ಉಸಿರಿನಲ್ಲಿ “ನಡಿಯೇ ಜಾನೂ,  ಡಾಕ್ಟರ ಹತ್ತಿರ ಹೋಗಿ ಒಳ್ಳೆ ಟಾನಿಕ್ ಬರೆಸಿಕೊಂಡು ಬರೋಣ”ಎಂದು ಬಲವಂತ ಮಾಡಿದರು. ಅದಕ್ಕೆ ಅತ್ತೆ-

“ಬಿಡಮ್ಮ ನಂಗೇನೂ ಆಗಿಲ್ಲ, ಆರೋಗ್ಯವಾಗೇ ಇದ್ದೀನಿ” ಎಂದು ಕೊಸರಿಕೊಂಡು ಒಳಗೆ ಹೊರಟುಹೋದರು. ಆದರೆ ಅಜ್ಜಿ ಹಿಡಿದ ಪಟ್ಟು ಬಿಡಲಿಲ್ಲ. ಮಾರನೇ ದಿನವೇ ನನ್ನ ಹತ್ತಿರ ಬಂದು-

“ನೀನೂ ಬಾರೇ ಪಮ್ಮಿ ನನ್ನ ಜೊತೆ” ಎಂದು ಕರೆದು, ಅತ್ತೆಯನ್ನು ಎಳೆದುಕೊಂಡು ಹೊರಟು ನಿಂತರು.

ಅಜ್ಜಿ ಲೇಡಿ ಡಾಕ್ಟರ ಮುಂದೆಯೂ ಶುರು ಮಾಡಿದರು-

“ನೋಡಿ ಡಾಕ್ಟ್ರೇ ನಮ್ಮ ಜಾನಕಿ ಹೇಗೆ ನವೆದು ಹೋಗಿದ್ದಾಳೆ. ಊಟಾನೇ ಮಾಡಲ್ಲ. ಬಹಳ ಚಿಂತೆ ಹಚ್ಚಿಕೊಂಡುಬಿಟ್ಟಿದ್ದಾಳೆ” ಹಾಗೇ ಹೀಗೆ ಏನೇನೋ ಅನ್ನೋದರಲ್ಲೇ ಡಾಕ್ಟರು, ಒಳಗೆ ಬರಲೊಲ್ಲದೆ ಬಿಗಿಯಾಗಿ ಹೊರಗೇ ನಿಂತಿದ್ದ ಅತ್ತೆಯನ್ನು ಒಳಗೆ ಕರೆದುಕೊಂಡು ಹೋದರು.

ಅರ್ಧ ಘಂಟೆ ಆ ಔಷಧಗಳ ವಾಸನೆಯ ನಡುವೆ ಕೂತಿರೋಷ್ಟರಲ್ಲಿ ನನಗೆ ಸಾಕು ಸಾಕಾಯ್ತು.

ಅತ್ತೆಯನ್ನು ಪರೀಕ್ಷಿಸಿ ಹೊರಬಂದ ಡಾಕ್ಟರು, ಅಜ್ಜಿಯ ಹತ್ತಿರ ಮೆಲ್ಲನೆ ಏನೋ ಹೇಳಿದಾಗ ಅಜ್ಜಿ-

 ‘ಆ್ಞ’! ಎಂದು ನೆಲಕ್ಕೆ ಕುಸಿದರು.

——————————————————–

Related posts

ಕೋರಿಕೆ

YK Sandhya Sharma

ಪ್ರಾಮಾಣಿಕತೆ

YK Sandhya Sharma

ಗಂಡ-ಹೆಂಡಿರ ಜಗಳ……….

YK Sandhya Sharma

Leave a Comment

This site uses Akismet to reduce spam. Learn how your comment data is processed.