ದೇವತಾರಾಧನೆಯಲ್ಲಿ ನಾನಾ ವಿಧವಾದ ಸೇವೆಗಳಲ್ಲಿ ನೃತ್ಯ ಸೇವೆಯೂ ಒಂದು. ಹಿಂದೆ ದೇವಾಲಯಗಳಲ್ಲಿ ನರ್ತಕಿಯರು ತಾದಾತ್ಮ್ಯತೆಯಿಂದ, ಪರಮ ಭಕ್ತಿಯಿಂದ ನಾಟ್ಯಗೈಯುತ್ತ ದೈವೀಕತೆಯನ್ನು ಸಮರ್ಪಣೆ ಮಾಡುತ್ತಿದ್ದ ಪದ್ಧತಿಯಿತ್ತು. ಮೂಲತಃ ಭಕ್ತಿಮೂಲವಾದ ನೃತ್ಯದ ಆಶಯವೇ ಇದು. ಸಾದರಪಡಿಸಿದ ತನ್ನೆಲ್ಲ ಕೃತಿಗಳಿಂದ ಭಕ್ತಿ ನೈವೇದ್ಯ ಮಾಡಿದ ವಿದುಷಿ. ಮೇಘನಾ ಅಯ್ಯಂಗಾರ್ ಅಂದು ಎ.ಡಿ.ಎ.ರಂಗಮಂದಿರದಲ್ಲಿ ಸಾರ್ಥಕ ‘ರಂಗಪ್ರವೇಶ’ ಮಾಡಿದ್ದಳು. ಪ್ರಖ್ಯಾತ ನೃತ್ಯಗುರು-ವಿದುಷಿ ಕೆ.ಬೃಂದಾ ಅವರ ಪ್ರತಿಭೆಯ ಮೂಸೆಯಲ್ಲಿ ಪುಟಿದುಬಂದ ಕಲಾಚೇತನ ಮೇಘನಾ, ಗುರುಗಳೆರೆದ ಸಂಪೂರ್ಣ ವಿದ್ಯಾಧಾರೆಯನ್ನು ಪ್ರಫುಲ್ಲವಾಗಿ ಅಭಿವ್ಯಕ್ತಿಸಿ ಮೆಚ್ಚುಗೆ ಪಡೆದಳು. ಅಭಿನಯಕ್ಕೆ ಹೆಚ್ಚಿನ ಒತ್ತನ್ನು ನೀಡಿದ ಪ್ರಸ್ತುತಿ ಸಾತ್ವಿಕಭಾವದಿಂದ ಮೆರುಗು ಪಡೆದುಕೊಂಡಿತ್ತು.

ರಾಗಮಾಲಿಕೆಯ ತಿಶ್ರಗತಿಯಲ್ಲಿ ಆರಂಭವಾದ ‘ಅಲ್ಲರಿಪು’ ಕಲಾವಿದೆಯ ನೃತ್ಯ ಸಾಮರ್ಥ್ಯವನ್ನು ಅಭಿವ್ಯಕ್ತಿಸುತ್ತ ಸಾಗಿದರೆ, ಹಿನ್ನಲೆಯಲ್ಲಿ ಮೂಡಿಬಂದ ‘ಮುದಾಕರತ್ತ ಮೋದಕಂ ‘ ಎಂಬ ಗಣೇಶಸ್ತುತಿಗೆ ಕಲಾವಿದೆ ಏಕಕಾಲದಲ್ಲಿ ಅಭಿನಯಿಸಿದಳು. ಗುರು ಬೃಂದಾ ಅವರ ಪುತ್ರಿ ಹಾಗೂ ಶಿಷ್ಯೆಯಾದ ವಿದುಷಿ. ಎಂ.ಅನನ್ಯರ ಅಸ್ಖಲಿತ ನಟುವಾಂಗದ ಜತಿಗಳಿಗೆ, ಮೇಘನಾ, ಖಚಿತ ಹಸ್ತ, ಅಡವುಗಳಿಂದ ತನ್ನ ಅಂಗಶುದ್ಧ ನರ್ತನವನ್ನು ಯಾವುದೇ ಗೊಂದಲಗಳಿಲ್ಲದೆ ಪ್ರದರ್ಶಿಸುತ್ತ, ವಿ.ಕಾರ್ತೀಕ್ ಹೆಬ್ಬಾರರ ಸುಶ್ರಾವ್ಯ ಕಂಠದ ಗಣಪನ ವರ್ಣನೆಗಳಿಗೆ ಅಭಿನಯವಾಗುತ್ತ ದೈವೀಕತೆಯನ್ನು ಮೆರೆದಳು.

ಮಲಯಮಾರುತ ರಾಗದ ‘ಆಂಡಾಳ್ ಕೌತ್ವಂ’ ನಲ್ಲಿ, ತುಳಸೀವನದಲ್ಲಿ ಸಂತ ವಿಷ್ಣುಚಿತ್ತರಿಗೆ ಭಾಗ್ಯಲಕ್ಷ್ಮಿಯಂತೆ ಸಿಕ್ಕ ಗೋಧಾದೇವಿ, ಮುಂದೆ ಹರಿವಲ್ಲಭೆಯಾಗಿ, ಜಗತ್ತನ್ನು ಪೊರೆವ ಆಂಡಾಳಾಗಿ, ಕರುಣಾಮಯಿಯಾದ ದೇವಿಯ ಕಥಾನಕವನ್ನು ಕಲಾವಿದೆ ತನ್ನ ಮನೋಹರ ಅಭಿನಯದಿಂದ ಸಾಕ್ಷಾತ್ಕರಿಸಿದಳು. ಮುಂದೆ ಪ್ರಸ್ತುತವಾದ ಪಾಲಿನಿ ರಾಗದ ‘ಶಿವಸ್ತುತಿ’ ಯಲ್ಲಿ ಉಮಾಪತಿಯನ್ನು ಮನದಣಿಯೆ ವರ್ಣಿಸಿ, ರಕ್ಷಿಸೆಂದು ಬೇಡುವ ದೈವೀಕ ಕೃತಿ ಭಕ್ತಿಪಾರಮ್ಯವನ್ನು ಝೇಂಕರಿಸಿತು. ‘ಕಪಾಲಿನಿ, ದಯಾನಿಧೆ’ ಎಂದು ಶಿವನಿಗೆ ಸ್ವರಾಭಿಷೇಕಗೈಯುತ್ತ ಕಲಾವಿದೆ, ತನ್ನ ಸುಂದರ ನೃತ್ತಗಳಲ್ಲೇ ಮುರಾರಿಯ ವಿವಿಧ ರೂಪಗಳನ್ನು, ರೌದ್ರ-ಕರುಣಾಭಾವಗಳನ್ನು, ಆರ್ದ್ರತೆಯ ಅಭಿನಯದಲ್ಲಿ ಧ್ವನಿಸಿದ್ದು ವಿಶೇಷವಾಗಿತ್ತು. ಮನಮೋಹಕ ಭಂಗಿಗಳು, ಖಚಿತ ಹಸ್ತಚಲನೆ, ಆಕಾಶಚಾರಿಗಳು, ಭಾವಸಾಂದ್ರದ ಮುಖಭಾವ, ಪಕ್ವಾಭಿನಯ ಮನಸೆಳೆಯಿತು.

ಸಾಮಾನ್ಯವಾಗಿ ಶೃಂಗಾರಭಾವದ ಪ್ರತೀಕವಾಗಿ ಮನದುಂಬುವ ಶ್ರೀಕೃಷ್ಣ, ಖರಹರಪ್ರಿಯ ರಾಗದ ಈ ‘’ಪದವರ್ಣ’’ದಲ್ಲಿ ಅಲೌಕಿಕ ನೆಲೆಗೆ ಕೊಂಡೊಯ್ಯುವ ಜೀವಾತ್ಮ-ಪರಮಾತ್ಮಭಾವದ ಸಾಯುಜ್ಯ ಪದವಿಯ, ಪರಮಗಂತವ್ಯದ ದಿವ್ಯದರ್ಶನ ನೀಡುತ್ತಾನೆ. ಕೃಷ್ಣನ ಮಾಯೆಗೆ ಒಳಗಾಗುವ ನಾಯಿಕೆ, ಪ್ರಕೃತಿಯ ಪ್ರತಿ ಚಲನವಲನಗಳಲ್ಲೂ ಅವನ ಬರುವನ್ನೇ ಕಾಣುತ್ತ, ಭ್ರಮೆಯಿಂದ ತಲ್ಲಣಗೊಂಡು ಒಮ್ಮೆ ಸಡಗರಿಸುತ್ತಾಳೆ ಮತ್ತೊಮ್ಮೆ ಕಾತರಿಸಿ ಆತಂಕಕ್ಕೊಳಗಾಗುತ್ತಾಳೆ, ಮಗದೊಮ್ಮೆ ನಿರಾಶೆಯಿಂದ ಕಣ್ಣೀರಧಾರೆ ಯಾಗುತ್ತಾಳೆ. ನಾಯಿಕೆಯ ಭಾವುಕ ಮನಸ್ಥಿತಿಯ ಹಂಬಲಿಕೆಯನ್ನು ಮೇಘನಾ, ತನ್ನ ಪ್ರಭುದ್ಧಾಭಿನಯದಿಂದ ಮನಮುಟ್ಟಿಸುವುದರಲ್ಲಿ ಯಶಸ್ವಿಯಾಗುತ್ತಾಳೆ. ಸೀತೆ ಜಿಂಕೆಯನ್ನು ಮುದ್ದಿಸುವ, ರಾವಣ ಸೀತೆಯನ್ನು ಅಪಹರಿಸುವ, ಹನುಮನ ಸಖ್ಯದ ಸಂಚಾರಿಗಳಲ್ಲಿ, ಕೃಷ್ಣ ತನ್ನ ಬಾಲ್ಯದ ಗೆಳೆಯ ಸುಧಾಮನೊಂದಿಗಿನ ಆತ್ಮೀಯತೆಯ ಕ್ಷಣಗಳನ್ನು ಚಿತ್ರಿಸುವ ಹೃದ್ಯ ಸಂಚಾರಿಯಲ್ಲಿ ಕಲಾವಿದೆ ತೋರಿದ ಹೃದಯಂಗಮ ಅಭಿನಯ ಪರಿಣಾಮಕಾರಿ. ಕಲಾವಿದೆಯ ಪ್ರಫುಲ್ಲ ತಾಜಾ ನೃತ್ಯವಲ್ಲರಿಗಳು, ತಾಳ-ಲಯಜ್ಞಾನಗಳನ್ನು ಸುವ್ಯಕ್ತಗೊಳಿಸಿದ ಬೃಂದಾ ಹಾಗೂ ಅನನ್ಯರ ಜೋಡಿ ನಟುವಾಂಗ ಸಶಕ್ತವಾಗಿತ್ತು.

ಕಾರ್ತಿಕೇಯನ ಮಹಿಮೆಯನ್ನು ಪಾಡುವ ತಿಲ್ಲಾಂಗ್ ರಾಗದ ‘ಪದಂ‘- ಮೇಘನಳ ಆತ್ಮವಿಶ್ವಾಸದ ಹೆಜ್ಜೆಗಳು, ನಗುಮುಖದ ಆಹ್ಲಾದಕರ ಭಂಗಿಗಳು ‘ಶೃಂಗಾರ ವೇಲನ’ ರೂಪವನ್ನು ಸೊಗಸಾಗಿ ಪಡಿಮೂಡಿಸಿತ್ತು. ಸಿಂಧುಭೈರವಿ ‘ಭಜನೆ‘ ಯಲ್ಲಿ ‘ನೀಲಮೇಘ ಶ್ಯಾಮಸುಂದರ’ನ ಕಮನೀಯ ರೂಪವನ್ನು ವರ್ಣಿಸುತ್ತ ಭಜಿಸುವ ಈ ಭಕ್ತಿ ಸಮರ್ಪಣೆಯ ಕೃತಿಯಲ್ಲಿ ಶ್ರೀರಾಮನ ಧೀರೋದ್ದಾತ್ತ ನಿಲುವು, ಅನನ್ಯ ಕರುಣೆ, ಶೌರ್ಯಗಳನ್ನು ಚಿತ್ರಿಸುತ್ತ ಕಲಾವಿದೆ, ಸಂಚಾರಿಯಲ್ಲಿ ದಶರಥನಿಗೆ ಪಾಯಸ ಪ್ರಾಪ್ತಿ, ಪುತ್ರರ ಜನನ, ಬಾಲ್ಯದಿಂದ ಹಿಡಿದು, ಭಕ್ತಾಗ್ರಣ್ಯ ಹನುಮನ ಸಖ್ಯ, ಸೀತಾನ್ವೇಷಣೆ ಮುಂತಾದ ರಾಮಾಯಣದ ಹಲವು ಘಟನೆಗಳನ್ನು ಬಹು ಸಂಕ್ಷಿಪ್ತವಾಗಿ, ವಿಶೇಷವಾಗಿ ಹನುಮನ ಅಪರಾವತಾರವಾಗಿ ಮನಸೂರೆಗೊಂಡಳು. ಗಾಯಕ ಕಾರ್ತೀಕರ ಹೃದಯಸ್ಪರ್ಶಿ ಗಾಯನ ರೋಮಾಂಚಗೊಳಿಸಿತು. ಮಿಂಚಿನ ಸಂಚಾರದ ನೃತ್ತಗಳ ತಿಲ್ಲಾನದೊಂದಿಗೆ ಪ್ರಸ್ತುತಿ ಸಂಪನ್ನಗೊಂಡು ಕಲಾವಿದೆಯ ಪ್ರತಿಭಾ ಸಂಪನ್ನತೆಗೆ ಕನ್ನಡಿ ಹಿಡಿಯಿತು.