Image default
Short Stories

ನಿಯೋಗ

ಸಂಜೆ ಆಫೀಸಿನಿಂದ ಮನೆಗೆ ಬಂದ ಹರಿ ಕಾರನ್ನು ಷೆಡ್ಡಿನೊಳಗೆ ನಿಲ್ಲಿಸದೆ, ಅವಸರವಸರವಾಗಿ ಷೂ ಬಿಚ್ಚಿ ಹೆಂಡತಿಗಾಗಿ ಸುತ್ತ ಹುಡುಕು ನೋಟ ಬೀರಿದ. ಸ್ಮಿತಾ ಎಲ್ಲೂ ಕಣ್ಣಿಗೆ ಬೀಳಲಿಲ್ಲ. ಅಷ್ಟರಲ್ಲಾಗಲೇ ಶಾರದಮ್ಮ ಮಗನಿಗೆ ಬಿಸಿ ಬಿಸಿ ಕಾಫಿ ತಂದಿದ್ದರು. `ಅಮ್ಮಾ, ಸ್ಮಿತಾ ಎಲ್ಲಿ?’ ಎಂದು ಕೇಳಿದವನನ್ನು ` ಮೊದ್ಲು ಕಾಫಿ ಕುಡಿ, ಆರಿಹೋಗತ್ತೆ…ಅವಳು ರೂಮ್ನಲ್ಲಿ ಮಲಗಿಕೊಂಡಿದ್ದಾಳೆ, ತಲೆನೋವಂತೆ…’ ಎಂದು ಮಗನ ಕೈಗೆ ಲೋಟವಿತ್ತು, ಆಕೆ `ಸ್ಮಿತಾ…ಸ್ಮಿತಾ…’ ಎಂದು ಕೂಗುತ್ತ, ಮಗನ ಕೋಣೆ ಹೊಕ್ಕು, ಕತ್ತಲಾವರಿಸಿದ್ದ ರೂಮಿನ ಲೈಟ್ ಹಾಕಿ `ಇದೇನಮ್ಮಾ…ಮುಸ್ಸಂಜೆ ಹೊತ್ನಲ್ಲಿ ಹೀಗೆ ದೀಪವೂ ಹಾಕದೇ ಮಲಗಿದ್ದೀಯಲ್ಲ?- ಎಂದು ಸೊಸೆಯನ್ನು ಆಕ್ಷೇಪಿಸಿದರು.

            ಹಾಸಿಗೆಯ ಮೇಲೆ ಬುಗುರಿಯಂತೆ ಸುತ್ತಿಕೊಂಡು ಮಲಗಿದ್ದ ಸ್ಮಿತಳಲ್ಲಿ ಅಣೆಕಟ್ಟಿದ್ದ ದುಃಖದ ಪ್ರವಾಹ ಒಮ್ಮೆಲೆ ಸ್ಫೋಟಗೊಂಡಿತು. ` ಅಯ್ಯೋ ನನ್ತಾಯಿ, ನಾನೇನಂದ್ನೇ ಅಂಥದ್ದು ಅನ್ನಬಾರದ್ದನ್ನ?!’ -ಶಾರದಮ್ಮ ಗಾಬರಿಯಾದರು. ಅವರ ಹಿಂದೆಯೇ ರೂಮಿನೊಳಗಡೆ ಬಂದ ಹರಿ, `ಸ್ಮಿತಾ…ಏನಾಯ್ತೇ?…ತುಂಬಾ ತಲೇನೋವೇನೇ? ತಡಿ, ಮಾತ್ರೆ ಕೊಡ್ಲಾ?….ಪಿ.ವಿ ಆರ್ ನಲ್ಲಿ ಈವನಿಂಗ್ ಷೋಗೆ ಟಿಕೇಟ್ ತಂದಿದ್ದೆ…ಹೋಗ್ಲಿ ಬಿಡು…ರೆಸ್ಟ್ ತೊಗೋ’ ಎಂದವನೆ, ಬೀರುವಿನಲ್ಲಿದ್ದ ಮೆಡಿಸಿನ್ ಬಾಕ್ಸ್ ತೆಗೆಯತೊಡಗಿದ.

            ` ಸಿನಿಮಾಗೆ ಹೋಗ್ಬನ್ನಿ…ಹೊರಗೆ ಹೋದ್ರೆ ಎಲ್ಲಾ ಸರೀಹೋಗತ್ತೆ…ರೆಡಿಯಾಗು ಸ್ಮಿತಾ, ನಾ ಕಾಫೀ ತರ್ತೀನಿ’ ಎಂದು ಶಾರದಮ್ಮ  ಒಳನಡೆದಾಗ, ಹರಿಗೆ ಹೆಂಡತಿಯ ಮೊಗದಲ್ಲಿ ಮಡುಗಟ್ಟಿದ ದುಃಖ-ಬೇಸರದ ಕಾರಣವರಿಯಲು ತಡವಾಗಲಿಲ್ಲ. ಪಕ್ಕದ ಟೀಪಾಯಿಯ ಮೇಲಿದ್ದ ಆಮಂತ್ರಣ  ಪತ್ರಿಕೆಯನ್ನು ಕೈಗೆತ್ತಿಕೊಂಡ. ಅವಳ ತಂಗಿ ಶ್ವೇತಳ ಮಗುವಿನ ನಾಮಕರಣದ ಕರೆಯೋಲೆ. ಹರಿ ಅದನ್ನು ಗಮನಿಸದವನಂತೆ, ` ಬೇಗ ರೆಡಿಯಾಗು ಚಿನ್ನ, ಬರ್ತಾ ಹಾಗೇ ಹೊರಗೇ ಊಟ ಮುಗಿಸ್ಕೊಂಡು ಬರೋಣ…ನಿನ್ನ ಫೇವರೆಟ್ ಮೆಕ್ಸಿಕನ್ ರೆಸ್ಟೊರೆಂಟ್‍ಗೆ ಹೋಗೋಣಾ?’

ಸಪ್ಪಗಿದ್ದ ಅವಳ ಕನ್ನೆ ಸವರುತ್ತ ಅವಳನ್ನು ಹುರಿದುಂಬಿಸಿದ.

            ಕೆನ್ನೆಯ ಮೇಲಿಳಿಯುತ್ತಿದ್ದ ಕಂಬನಿಯನ್ನು ಒರೆಸಿಕೊಳ್ಳುತ್ತ ಸ್ಮಿತಾ ಮೌನವಾಗಿ ಬಾತ್ ರೂಮಿನತ್ತ ಸಾಗಿದಳು.

             ಹರಿಗೆ ಅವಳ ಮನದ ಭಾವನೆಗಳು, ಆಗಾಗ ಸ್ಫೋಟಗೊಳ್ಳುವ ಅವಳ ಅಂತರಂಗದ ತಾಯ್ತನದ ನೋವು -ತುಮುಲಗಳು ಹೊಸತೇನಲ್ಲವಾದರೂ, ಪ್ರತಿ ಬಾರಿ ಅವಳ ಕಣ್ಣಲ್ಲಿ ಕಂಬನಿ ಜಿನುಗಿದಾಗ ಅವನ ಒಳಗೂ ಕದಡುವುದು. ಈ ಕೊರಗಿಗೆ ಅವಳೆಷ್ಟು ಹೊಣೆ ಎಂದು ಪ್ರಶ್ನಿಸಿಕೊಂಡಾಗ ಅವನೆದೆ ಅಳುಕುವುದು. ಅವಳಂತೆ ಸದಾ ಕೊರಗುತ್ತ, ಯೋಚಿಸುತ್ತ ಕೂರುವ ಜಾಯಮಾನ ಅವನದಲ್ಲ, ಹಾಗೂ ತಮ್ಮ ಕೈಯಲ್ಲಿಲ್ಲದ್ದಕ್ಕೆ ವ್ಯರ್ಥ ದುಃಖಿಸುವುದರಲ್ಲಿ ಅರ್ಥವಿಲ್ಲ ಎಂದು ಚಿಂತಿಸುವಷ್ಟು ವೈಚಾರಿಕ ಪ್ರಜ್ಞೆ ಹೊಂದಿದ್ದನಾದ್ದರಿಂದ ಅವನು ಮಾಡಬೇಕಾದ ಪ್ರಯತ್ನದ ಕಡೆ ಗಮನ ಹರಿಸಿದ್ದ. ಆದಷ್ಟೂ ಸ್ಮಿತಾ ಇಲ್ಲಸಲ್ಲದ ಯೋಚನೆಗಳನ್ನು ಬಿಟ್ಟು, ಅವಳಿಗೊಲಿದಿದ್ದ ಚಿತ್ರಕಲಾ ಪ್ರತಿಭೆಯನ್ನು    ವೃದ್ಧಿಸಿಕೊಳ್ಳುವತ್ತ ಶ್ರಮಿಸಬೇಕೆಂದು ಸದಾ ಉಪದೇಶ ನೀಡುತ್ತ ಅವಳನ್ನು ನಗರದ ಪ್ರಸಿದ್ಧ  ಆರ್ಟ್ ಸ್ಕೂಲಿಗೆ ಸೇರಿಸಿದ್ದ. ಅಲ್ಲವಳು ಮಾಡಿದ್ದೇನು?….ತನ್ನ ಹೃದಯವನ್ನು ಕೀಟದಂತೆ ಕೊರೆಯುತ್ತಿದ್ದ ನೋವಿಗೆ ನಾನಾ ರೂಪ- ಬಣ್ಣಗಳನ್ನು ಕೊಟ್ಟು ಸದಾ ಅದು ತನ್ನ ಅಂತಪಟಲದ ಮೇಲೆ ಅಚ್ಚೊತ್ತುವಂತೆ ಮಾಡಿಕೊಂಡಿದ್ದಳು….ಮನೆ ತುಂಬಾ ನಗುವ ಕಂದಮ್ಮಗಳ ನೂರು ಮುಖಗಳನ್ನು ಅನಾವರಣಗೊಳಿಸಿದ್ದಳು.

            `ಕಲಾವಿದನ ಸಾಮರ್ಥ್ಯವನ್ನು ಅವನು ನಿರ್ವಹಿಸುವ ವೈವಿಧ್ಯ ವಿಷಯಗಳ ಮೇಲೆ ಅಳೆಯುತ್ತಾರೆ ಕಣೆ ಸ್ಮಿತಾ, ಇದು ಬರೀ ಮೊನಾಟನಿ ಆಯ್ತು…ನಿನ್ನ ಕಲ್ಪನೆಗಳು ಇಷ್ಟೇನಾ?…ನಿನಗೆ ಬೇರೆ ಸಬ್ಜೆಕ್ಟ್ ನ  ಹ್ಯಾಂಡಲ್ ಮಾಡಕ್ಕಾಗಲ್ವಾ?…ಬದುಕಿನ ಎಲ್ಲ ಮುಖಗಳನ್ನೂ ಚಿತ್ರಿಸಿದಾಗಲೇ ನೀನು ರೆಕಗ್ನೈಸ್ ಆಗೋದು…ಒನ್ ಮ್ಯಾನ್ ಷೋ ನಲ್ಲಿ ಹೆಸರು ಮಾಡಬೇಕಾದ್ರೆ, ಟ್ರೈ ಫರ್ ಸಂಥಿಂಗ್ ಎಲ್ಸ್…’ ಎಂದವಳನ್ನು ಛೇಡಿಸಿದ್ದ ಕೂಡ. ಅವನ ಮಾತುಗಳು ಅವಳ ಮೇಲೆ ಪರಿಣಾಮ ಬೀರಿರಬೇಕು. ಅಂದಿನಿಂದ ಸ್ಮಿತಾ, ಲ್ಯಾಂಡ್ ಸ್ಕೇಪ್ ಜೊತೆ ಬದುಕಿನ ಇನ್ನಿತರ ಸಂಕೀರ್ಣತೆ-ನಿಗೂಢಗಳನ್ನು ಚಿತ್ರಿಸುವತ್ತ ಹೊರಳಿಕೊಂಡಿದ್ದಳು.

            ಗಂಡ ಅವಳ ಮನಸ್ಸನ್ನು ಬೇರೆಡೆ ಸೆಳೆಯಲು ಯತ್ನಿಸಿದ್ದರೂ ಅವಳು ಮಾತ್ರ ಕೆಲವು ಸಂದರ್ಭಗಳಲ್ಲಿ ಅಪ್ಪಟ ಅವಳೇ ಆಗಿಬಿಡುತ್ತಿದ್ದಳು. ಯಾರೋ ಗರ್ಭಿಣಿಯಾದ ಸುದ್ದಿ, ಮಗು ಹಡೆದ ಬಗ್ಗೆ, ನಾಮಕರಣ, ಚೌಲ,ಹುಟ್ಟಿದಹಬ್ಬ  ಇತ್ಯಾದಿಗಳ ಬಗ್ಗೆ ಮಾತಾಡಿಕೊಂಡರೆ ಅಯಾಚಿತವಾಗಿ ಅವಳ ಕಣ್ಣುಗಳು ತುಂಬಿ ಬರುವುವು. ಫಲವತ್ತಾಗದ ತನ್ನ ಒಡಲನ್ನು ಕಿವುಚಿಕೊಳ್ಳುತ್ತ, ಗದ್ಗದಿಸುತ್ತ ಕೋಣೆ ಸೇರಿ ದಿನಗಟ್ಟಲೆ ಮೌನದ ಸೆರೆಮನೆಯಲ್ಲಿ ಬಂದಿಯಾಗಿಬಿಡುತ್ತಿದ್ದಳು. ಅವಳ ಮನಸ್ಥಿತಿಯನ್ನರಿತ ಹರಿ, ಹೆಂಡತಿಯೊಡನೆ ಬಹು ಸೂಕ್ಷ್ಮವಾಗಿ ನಡೆದುಕೊಳ್ಳುತ್ತಿದ್ದ.

            ಇವತ್ತು ಬೆಳಗ್ಗೆ ಸ್ಮಿತಳ ತಂದೆ-ತಾಯಿಯರು ಖುದ್ದಾಗಿ ಬಂದು ಅವಳ ಕಿರಿಯ ತಂಗಿ ಶ್ವೇತಳ ಮಗುವಿನ ನಾಮಕರಣಕ್ಕೆ ಕರೆಯಲು ಬಂದುದೇ ಅವಳ ದುಃಖದ ಕಟ್ಟೆ ಒಡೆಯಲು ನೆಪವಾಗಿತ್ತು. ಅವರು ಬಂದು ಹೋದ ತತ್‍ಕ್ಷಣ  ರೂಮು ಸೇರಿದವಳು ಈಗಲೇ ಹರಿ ಬಂದಾಗಲೇ ಕದಲಿದ್ದು. ಅವಳೇನಂಥ ಹಟಮಾರಿಯಲ್ಲ. ಜೊತೆಗೆ ಬೇಕಂಥಲೂ ಅವಳು ಹೀಗೆ ಮಾಡುವುದಲ್ಲ. ಆದರೂ ಅವಳ ನಿಯಂತ್ರಣ ತಪ್ಪಿ ಹೀಗೆ ತನ್ನನ್ನು ತಾನು ಶಿಕ್ಷಿಸಿಕೊಳ್ಳುವ ಅಂಕ ನಡೆದುಬಿಡುತ್ತದೆ. ಆಮೇಲೆ ಅವಳಿಗೆ ತನ್ನದು ಬಾಲಿಶ ನಡವಳಿಕೆಯಾಯಿತೇ?…ಎಂಬ ಅರಿವು ಮೂಡಿ ನಾಚಿಕೆಯೂ ಆಗುವುದುಂಟು. ಮೃದು ಸ್ವಭಾವದ ಅತ್ತೆ-ಮಾವ ತನ್ನ ಬಗ್ಗೆ ಏನು ಭಾವಿಸಿಯಾರು ಎಂಬ ಅಳುಕೂ ಉಂಟಾಗಿ ಸಹಜವಾಗಿರಲು ಪ್ರಯತ್ನಿಸುವಳು.

ಇಂದೂ ಹಾಗೆಯೇ ಆದದ್ದು. ಚಕಾರವೆತ್ತದೆ ರೆಡಿಯಾಗಿ ಗಂಡನೊಡನೆ ಹೊರಡಲು ಸಿದ್ಧವಾಗಿದ್ದಳು. ಅತ್ತೆ ತಂದಿತ್ತ  ಕಾಫಿ ಕುಡಿದು, ಹರಿಯ ಮನಸ್ಸಿಗೆ ಕಿರಿಕಿರಿಯಾಗಬಾರದೆಂದು ನಗುತ್ತ `ಅತ್ತೆ- ಮಾವ ಬರ್ತೀವಿ, ರಾತ್ರಿ ಊಟಕ್ಕೆ ಕಾಯಬೇಡಿ’- ಎಂದು ಮನೆಯ ಮುಂದೆ ನಿಲ್ಲಿಸಿದ್ದ ಕಾರಿನೊಳಗೆ ಹೋಗಿ ಕುಳಿತಳು. ಹರಿಗೆ ನಿರಾಳದ ನಿಟ್ಟುಸಿರು. `ಮೂಡಿ, ಈ ಹುಡುಗಿ’ ಎಂದು ಮನದಲ್ಲಿ ಗುನುಗಿಕೊಂಡು, ಮುಖದಲ್ಲಿ ಕಿರುನಗೆ ಮಿನುಗಿಸಿ ಕಾರು ಸ್ಟಾರ್ಟ್ ಮಾಡಿದ.

            ಸಿನಿಮಾ, ಊಟ ಮುಗಿಸಿ ಮನೆಗೆ ಬರುವಷ್ಟರಲ್ಲಿ ಸ್ಮಿತಾ ಗೆಲುವಾಗಿದ್ದಳು. ಒಳಗೆ ಬಂದವನೆ ಹರಿ, ರೂಮಿಗೆ ಧಾವಿಸಿ ಬಂದು ಮೊದಲು ಮಾಡಿದ ಕೆಲಸವೆಂದರೆ ನಾಮಕರಣದ ಇನ್ವಿಟೇಷನ್ ಅನ್ನು ಮುಚ್ಚಿಟ್ಟಿದ್ದು. ಆ ರಾತ್ರಿ ಮಟ್ಟಿಗೆ ಸ್ಮಿತಾ ಸಿನಿಮಾ ಜಗತ್ತಿನಲ್ಲಿ ಮುಳುಗಿದ್ದಳು. ಗಂಡ-ಹೆಂಡತಿ ಇಬ್ಬರೂ ಅಂದು ತಾವು ನೋಡಿದ ಸಿನಿಮಾ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದರು ದಾರಿಯುದ್ದಕ್ಕೂ. ಊಟವೂ ಗಡದ್ದಾಗಿದ್ದರಿಂದ ಅವಳು ದಿಂಬಿಗೆ ತಲೆ ಇಟ್ಟಾಕ್ಷಣ ನಿದ್ರಾಲೋಕದೊಳಗೆ ಜಾರಿದ್ದಳು. ಒಂದು ಲೆಕ್ಕಾಚಾರದಂತೆ ಅವಳಿಗೆ ಈ ರಾತ್ರಿ ಜಾಗರಣೆ ಎಂದು ಭಾವಿಸಿದ್ದ ಹರಿ, ಅದರ ಬದಲಾಗಿ ತಾನೇ ಆ ಶಿಕ್ಷೆಗೆ ಗುರಿಯಾಗಿದ್ದ. ಬಲವಂತವಾಗಿ ಕಣ್ರೆಪ್ಪೆಗಳನ್ನು ಮುಚ್ಚಿಕೊಂಡಿದ್ದರೂ ಹರಿ ಜಾಗೃತನಾಗಿದ್ದ. ನಿದ್ದೆ ಯೋಜನ ದೂರ…ಮೆದುಳಿನ ಪದರದೊಳಗೆ ಯೋಚನಾಲಹರಿ ಕಡಲಿನಲೆಯಂತೆ ಸುನಾಮಿಯಾಗಿದ್ದವು….ಹಾಸಿಗೆಯಲ್ಲಿ ಹೊರಳಾಡಿದ…ಅಮಾಯಕ ಸ್ಮಿತಳ ಯಾವ ತಪ್ಪಿಗೆ ಈ ಶಿಕ್ಷೆ ಎಂಬ ತಪ್ಪಿತಸ್ಥ ಭಾವ ಅವನನ್ನು ಕುಕ್ಕತೊಡಗಿತ್ತು.

            ಅವರಿಬ್ಬರ ಮದುವೆಯಾಗಿ ಎಂಟು ವರ್ಷಗಳು ಕಳೆದಿದ್ದವು. ತಂದೆ-ತಾಯಿಯರಿಗೆ ಒಬ್ಬನೇ ಮಗ. ಇಪ್ಪತ್ತೈದು ತುಂಬುವುದರಲ್ಲಿ ಅವನ ಮದುವೆ ಮಾಡಿ ಮುಗಿಸಿದ್ದರು. ಸ್ಮಿತಾಗೆ ಇಪ್ಪತ್ತೊಂದು ತುಂಬಿತ್ತು. ಪದವೀಧರೆ ಎನಿಸಿಕೊಳ್ಳುತ್ತಿದ್ದ ಹಾಗೆ ಕಂಕಣಭಾಗ್ಯ ಕೂಡಿಬಂದಿತ್ತು. ಆಜಾನುಬಾಹು, ನೋಡಲು ಸುಂದರ…ಇನ್ನೇನು ಬೇಕು…ಮದುವೆ ನಡದೇಹೋಯಿತು. ಮೊದಲೆರಡು ವರ್ಷ ಹಾಯಾಗಿದ್ದಾರೆ ಹುಡುಗರು ಎಂದು ಭಾವಿಸಿದ್ದರು ಹಿರಿಯರು. ಆಮೇಲೆಯೇ ಅವರ ಒತ್ತಾಯ ಪ್ರಾರಂಭವಾದದ್ದು ವಂಶೋದ್ಧಾರಕನಿಗಾಗಿ. ನವ ದಂಪತಿಗಳು ಆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಈ ಮಧ್ಯೆ ತಮಗೆ ಮಕ್ಕಳಾಗದಿರುವ ಬಗ್ಗೆ ಅವರು ಅಂಥ ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ. ಆಗತ್ತೆ ನಿಧಾನವಾಗಿ ಎಂದು ಕೂಲಾಗಿದ್ದರು. ವರ್ಷ ಕಳೆಯುತ್ತಿದ್ದಂತೆ ನಿಧಾನವಾಗಿ ಹುಳ ತಲೆಯಲ್ಲಿ ಹೊಕ್ಕತೊಡಗಿತು. ವರ್ಷವಿರಲಿ ತಿಂಗಳು ಕಳೆಯುತ್ತಿದ್ದ ಹಾಗೆ ನಿರೀಕ್ಷೆಗಳು ಭುಸುಗುಡಲಾರಂಭಿಸಿದ್ದವು. ಮನೆಯಲ್ಲಿ ಹಿರಿಯರ ಒಂದೇ ವರಾತಃ `ಒಳ್ಳೆ ಡಾಕ್ಟರಿಗಾದ್ರೂ ತೋರಿಸಬಾರದೇ?…ನಿಮಗೆ ಆತುರವಿಲ್ಲದಿದ್ರೂ ನಮಗೆ ದಿನೇ ದಿನೇ ವಯಸ್ಸಾಗ್ತಾ ಬಂತು…’

            ಆಗ- ಹರಿ ಚೇಷ್ಟೆ ಮಾಡಿದ್ದಃ `ಏನಮ್ಮ ಹೀಗಂತೀ?…ನಮ್ಮ ಮದುವೇ ವರಪೂಜೇಲಿ, ನನ್ನ ಬದಲು ಅಪ್ಪನ ಕೈಲಿ ವಿಳ್ಳೆಯದೆಲೆ-ತೆಂಗಿನಕಾಯಿ ಕೊಟ್ಟು ಹಸೆಮಣೇಗೆ ಕರ್ಕೊಂಡ್ಹೋಗಿ ಕೂರಿಸಿಬಿಟ್ಟಿದ್ರಲ್ಲಮ್ಮ, ಇವಳ ತಾತಾ’…ಎಂದ ಅವನ ಮಾತು ಕೇಳಿ ಎಲ್ಲರೂ ಬಿದ್ದೂ ಬಿದ್ದು ನಕ್ಕಿದ್ದರು. ಮುಖ ಕೆಂಪಗೆ ಮಾಡಿಕೊಂಡ ಶಾರದಮ್ಮ , `ನಿನಗೂ ನಿಮ್ಮಪ್ಪನಿಗೂ ಸರ್ಯಾಗಿ ಇಪ್ಪತ್ನಾಲ್ಕು ವರ್ಷ ವ್ಯತ್ಯಾಸ ಕಣೋ…ಹೊತ್ತೊತ್ತಿಗೆ ಸರ್ಯಾಗಿ ತಿಂದುಕೊಂಡು , ವ್ಯಾಯಾಮ, ವಾಕಿಂಗೂ ಅಂತ ಮಾಡೋದು ಬಿಟ್ರೆ ಇನ್ನೇನು ಕೆಲಸ ಅವರಿಗೆ…ಇದ್ದ ಹಾಗೇ ಇರ್ತಾರೆ…ನಮಗೆ ಹೆಂಗಸರಿಗೆ ಹಾಗೆ ಬಿಡುವು ಇರತ್ಯೇ?…ಮನೆಗೆಲಸ-ಜವಾಬ್ದಾರಿಗಳು…ಬೇಗ ಸೋತು ಬಿಡ್ತೇವೆ ಕಣೋ…’ ಎಂದು ಸಬೂಬು ಹೇಳಿ ಮುಖವನ್ನು ನಾಟಕೀಯವಾಗಿ ತಿರುಗಿಸಿದರು.

            ಪ್ರತಿನಿತ್ಯ ತಾಯಿಯದು ಒಂದೇ ವರಾತ- ಅಲ್ಲಿಂದ ವೈದ್ಯರ ಬೇಟೆ ಆರಂಭವಾಯಿತು. ಸ್ಮಿತಳಿಗೆ ಎಲ್ಲ ಬಗೆಯ ಟೆಸ್ಟ್ ಗಳೂ ಮುಗಿದವು. ಅವಳಲ್ಲಿ ಯಾವ ಬಗೆಯ ದೋಷಗಳೂ ಕಂಡುಬರಲಿಲ್ಲ. ಆದರೂ ಮಾತ್ರೆಗಳನ್ನು ನುಂಗಿದಳು. ಕಂಡ ಕಂಡ ದೇವರಿಗೆ ಕೈ ಮುಗಿದಿದ್ದಾಯ್ತು, ಹರಕೆ, ತೀರ್ಥಸ್ಥಳಗಳ ಟೂರ್ ಹೊಡೆದಿದ್ದಾಯ್ತು…ಹೆಜ್ಜೆ ನಮಸ್ಕಾರ, ಉರುಳುಸೇವೆ ಯಾವುದೂ ಬಾಕಿ ಉಳಿಯಲಿಲ್ಲ. ಎಲ್ಲ ಬಗೆಯ ವೈದ್ಯರನ್ನೂ ಕಂಡಿದ್ದಾಯಿತು. ಏನೂ ಪ್ರಯೋಜನವಾಗಲಿಲ್ಲ.

 ದಿನಗಳೆಯುತ್ತಿದ್ದಂತೆ ದಂಪತಿಗಳಿಗೆ ಆತಂಕವೇರತೊಡಗಿತ್ತು. ಈ ಮಧ್ಯೆ ಹರಿಯೂ    ತಪಾಸಣೆಗೊಳಪಟ್ಟಿದ್ದ. ಕಡೆಗೆ ಅರಕೆಯಿರುವುದು ಅವನಲ್ಲೇ ಎಂದು ಖಾತ್ರಿಯಾಗಿತ್ತು. ಧರೆಗಿಳಿದು ಹೋಗಿದ್ದ ಹರಿ. ಅವನಿಗೆ ಸಾಂತ್ವನ ಹೇಳುತ್ತ  ಸ್ಮಿತಾ `ಒಳ್ಳೆಯ ಎಕ್ಸ್ಪರ್ಟ್ ಡಾಕ್ಟರ್ಸ್‍ನ ನೋಡೋಣ ಹರಿ, ಈಗ ಮೊದಲಿನ ಹಾಗಲ್ಲ, ಮೆಡಿಕಲ್ ಫೀಲ್ಡ್ ತುಂಬಾ ಅಡ್ವಾನ್ಸಾಗಿದೆ ‘ ಎಂದು ಗಂಡನಿಗೆ ಧೈರ್ಯ ತುಂಬಿದಳು.

 ಅವರಿಬ್ಬರು ಪರಸ್ಪರ ಮಾತನಾಡಿಕೊಂಡು ಈ ವಿಷಯವನ್ನು ಹೆತ್ತವರಿಂದ ಗೌಪ್ಯವಾಗಿಟ್ಟಿದ್ದರು-ಕಾರಣ ಅವರನ್ನು ನೋವುಗೀಡು ಮಾಡಿ ಕಂಗಲಾಗಿಸಬಾರದೆಂದು. ಇದರ ಅರಿವಿಲ್ಲದೆ ಶಾರದಮ್ಮ `ವಂಶೋದ್ಧಾರಕ’ನಿಗಾಗಿ ತಾವೂ ಅನೇಕ ಉಪವಾಸ, ಹರಕೆ, ಸೇವೆಗಳನ್ನು ಕೈಕೊಂಡಿದ್ದರು.

            ಹರಿಯ ದೇಹದಲ್ಲಿ `ಸ್ಪರ್ಮ್ ಕೌಂಟ್ಸ್’ ಕಡಮೆಯಿದೆಯೆಂದು ವೈದ್ಯರು ಮಾತ್ರೆಗಳನ್ನು ಕೊಡಲಾರಂಭಿಸಿದ್ದರು. ಹೀಗೂ ಹಲವು ತಿಂಗಳುಗಳು ಉರುಳಿ ಫಲ ಕಾಣದೆ, ಅವರಿಬ್ಬರ ಆತಂಕ,ತಲ್ಲಣಗಳು ಏರಿದ್ದವು. ಕಡೆಗೆ ವಿದೇಶದಿಂದ ತರಿಸಿಕೊಂಡ ಔಷಧಗಳೂ ಕೆಲಸ ಮಾಡದೆ ಕೊರಗು ಹೆಚ್ಚಾಗತೊಡಗಿತು. ತಾಯ್ತನದ ಭಾಗ್ಯವಿಲ್ಲದ ಸ್ಮಿತಾ ಒಳಗೊಳಗೇ ಕೊರಗಿ ಕೃಶವಾಗತೊಡಗಿದ್ದನ್ನು ಕಾಣುತ್ತ, ಹರಿ ವ್ಯಾಕುಲನಾಗಿದ್ದ. ಕೆಲವು ವೈದ್ಯರ ಕೌನ್ಸಿಲಿಂಗ್ ಪರಿಣಾಮವಾಗಿ ಯಾವುದಾದರೂ ಅನಾಥ ಮಗುವನ್ನಾದರೂ `ದತ್ತು’ ತೆಗೆದುಕೊಂಡು ಸಂತಾನಭಾಗ್ಯ ಪಡೆಯಬೇಕೆಂಬ ತೀರ್ಮಾನಕ್ಕೆ ಬಂದಿದ್ದರವರು ಕಡೆಗೊಂದು ದಿನ .

ಮನೆಯಲ್ಲಿ ಈ ವಿಷಯ ಬಹಿರಂಗವಾದಾಗ ಮೊದಲ ಪ್ರತಿಭಟನೆ ಬಂದದ್ದು ಶಾರದಮ್ಮನವರಿಂದ. ` ಅಂಥ ಪರಿಸ್ಥಿತಿಯೇನು  ಬಂದಿಲ್ಲ ನಮಗೆ…ಕಾದು ನೋಡೋಣ..ದೇವರು ಕಣ್ಣು ಬಿಟ್ಟರೆ ಎಲ್ಲ ಒಳ್ಳೆಯದಾಗತ್ತೆ…ಕೆಲವರಿಗೆ ಹೀಗೇ ನಿಧಾನವಾಗತ್ತೆ ಅಂತ ಕೇಳಿದ್ದೀನಿ…ದತ್ತು ಗಿತ್ತು ಎಲ್ಲಾ ಬೇಡ, ನಮಗೆ ನಮ್ಮ ವಂಶೋದ್ಧಾರಕನೇ ಬೇಕು’ ಎಂದಾಕೆ ಪಟ್ಟು ಹಿಡಿದಾಗ, ಗಂಡ-ಹೆಂಡತಿಯಿಬ್ಬರು ಕಂಗಾಲಾದರು. ಹರಿ ತಂದೆಗೆ ಮಾತ್ರ ತನ್ನಲ್ಲಿರುವ ನ್ಯೂನತೆಯ ಬಗ್ಗೆ ಹೇಳಿದ್ದನಾದ್ದರಿಂದ ರಾಮಚಂದ್ರಯ್ಯ ಚಕಾರವೆತ್ತಲಿಲ್ಲ.

            ಶಾರದಮ್ಮನವರಿಗೆ ಗೊತ್ತಾಗದಂತೆ ತಂದೆ-ಮಗ-ಸೊಸೆಯ ಸಭೆ ಗೌಪ್ಯವಾಗಿ ಬೇರೆಡೆ ನಡೆಯಿತು.

 `ಅಮ್ಮಾ ಒಂದೇ ಪಟ್ಟುಹಿಡಿದಿದ್ದಾಳೆ ಏನ್ಮಾಡೋದಪ್ಪಾ?…ಅವಳಿಗೆ ವಂಶದ್ದೇ ಬೇಕಂತೆ, ಎಲ್ಲಿಂದ ತರೋಣ?’…ಹರಿ ತಲೆಯ ಮೇಲೆ ಕೈ ಹೊತ್ತು ಕುಳಿತ. ರಾಮಚಂದ್ರಯ್ಯ ನಿಧಾನವಾಗಿ ಆಲೋಚಿಸಿ-`ನಾನು ಹೀಗೆ ಹೇಳ್ತೀನಿ ಅಂತ ಅನ್ಯಥಾ ಭಾವಿಸದಿದ್ರೆ ಒಂದು ಸಲಹೆ’ ಎಂದರು ಮಗ-ಸೊಸೆಯ ಮುಖ ನೋಡುವ ಧೈರ್ಯವಾಗದೆ ಎತ್ತಲೋ ನೋಡುತ್ತ. `ನಿಮ್ಮಮ್ಮ ದತ್ತು ತೊಗೊಳಕ್ಕೆ ಸುತರಾಂ ಒಪ್ಪಲ್ಲ…ಸೊಸೆಯ ಹೊಟ್ಟೇಲೇ ಹುಟ್ಟಬೇಕು ಮೊಮ್ಮಗ ಅಂತ ಹಂಬಲಿಸ್ತಾಳೆ…ಅದಕ್ಕೆ…’ ಎಂದು ಅರೆಕ್ಷಣ ಮಾತು ನಿಲ್ಲಿಸಿ, ಮುಂದುವರೆಸಿದರು-` ನಿನ್ನ ಸ್ಪರ್ಮ್ ಕೊರತೆಯ ಕಾರಣದಿಂದ ಸಾಧ್ಯವಿಲ್ಲಾಂತ ಖಾತ್ರಿಯಾಗಿರೋದ್ರಿಂದ…ಬೇರೆ ಯಾರದಾದ್ರೂ ಪಡ್ಕೊಂಡು, ತಜ್ಞವೈದ್ಯರ ಚಿಕಿತ್ಸೆ-ನೆರವಿನಿಂದ ನಮ್ಮ ಸ್ಮಿತಳ ಹೊಟ್ಟೆಯಲ್ಲೇ ಮಗು ಹುಟ್ಟೋ ಹಾಗೇ ನಾವು ಯಾಕೆ ಪ್ರಯತ್ನಿಸಬಾರದು?’

ಒಂದು ಕ್ಷಣ ನೀರವ ವಾತಾವರಣ. ಹರಿ ನಂತರ ಕೂಡಲೇ ಒಪ್ಪಿಕೊಂಡದ್ದಷ್ಟೇ ಅಲ್ಲ, ಸ್ಮಿತಳನ್ನೂ ಚೆನ್ನಾಗಿ ಕನ್ವಿನ್ಸ್ ಮಾಡಿ ಒಪ್ಪಿಸಿಬಿಟ್ಟ.

            ಮುಂದಕ್ಕೆ ತಂದೆ- ಮಗ ಇಬ್ಬರು ವೈದ್ಯರ ಸಲಹೆಗಾಗಿ ಅನೇಕ ತಜ್ಞರ ಬಳಿ ಓಡಾಡಿದರು…ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿದರು. ಉತ್ತಮ ವೀರ್ಯಾಣುವಿಗಾಗಿ ಹುಡುಕಾಟ ಪ್ರಾರಂಭವಾಯಿತು. ಯಾಕೋ ತೃಪ್ತಿಯೆನಿಸದೆ, ತಮಗೆ ಗುರುತು ಕಂಡ ಕೆಲವರ, ಅನುಭವದ ಕಥೆಗಳನ್ನು ಆಲಿಸಿದರು. ಗುಣ-ರೋಗಗಳು ವಂಶವಾಹಿ, ಸರಿಯಾಗಿ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಬೇಕೆಂದು ಆಲೋಚಿಸಿದರು. ಹಲವಾರು ಪುಸ್ತಕಗಳು, ಇಂಟರ್ ನೆಟ್ ಎಲ್ಲವನ್ನೂ ಮೊರೆ ಹೋಗಿದ್ದಾಯ್ತು.

 `ಯಾಕೋ ಅಮ್ಮನಿಗೆ ಮೋಸ ಮಾಡ್ತಿದ್ದೀವಿ ಅಂತ ಅನ್ನಿಸಲ್ವೇನಪ್ಪಾ’- ಮಗನ ಅನುಮಾನವನ್ನು ಮುರಿಯುತ್ತ, ತಂದೆ `ಅಲ್ವೋ, ಯಾವ ತಪ್ಪೂ ಮಾಡಿಲ್ಲದ ಆ ಮಗೂ ಸ್ಮಿತಳ ತಾಯ್ತನವನ್ನು ಕಿತ್ಕೊಳ್ಳೋದು ಯಾವ ನ್ಯಾಯಾನಪ್ಪ ಹೇಳು ?’ ಎಂದು ಮರಳಿ ಪ್ರಶ್ನಿಸಿದರು. `ಆದರೂ, ನಮ್ಮ ವಂಶ ಅಂತ…’ ಎಂಡು ಹರಿ ರಾಗವೆಳೆದಾಗ, ರಾಮಚಂದ್ರಯ್ಯ,  `ಡೋಂಟ್ ಬಿ ಸೆಂಟಿಮೆಂಟಲ್ ಫೂಲ್’ ಎಂದು ಮಗನನ್ನು ನಿಷ್ಠೂರವಾಗಿ ಜರಿದು, ದೃಢ ನಿರ್ಧಾರ ಕೈಗೊಂಡು, ಡಾಕ್ಟರ್ ಛೇಂಬರಿನೊಳಗೆ ಪ್ರವೇಶಿಸಿದರು. ಒಳಗೆ ಗಂಟೆಗಟ್ಟಲೆ ಚರ್ಚೆ, ಮಾತೂಕತೆ ನಡೆಯಿತು.

            ಆಮೇಲಿನ ಕಥೆಯೆಲ್ಲ ಒಂದು ಕನಸಿನಂತೆ ನಡೆದು ಹೋಯಿತು….

ಸ್ಮಿತಳಿಗೆ ನಡೆಯಬೇಕಾದ ಚಿಕಿತ್ಸೆಗಳೆಲ್ಲ ಸಾಂಗವಾಗಿ ನಡೆದವು….ದಿನಗಳುರುಳಿದವು…ಸೊಸೆ ಗರ್ಭವತಿಯೆಂದು ತಿಳಿದಾಗ ಶಾರದಮ್ಮನವರಿಗೆ ಸ್ವರ್ಗಕ್ಕೆರಡೇ ಗೇಣು!!…ದಿನಾ ದೇವರಿಗೆ ತುಪ್ಪದ ದೀಪ. ಹರಕೆಗಳನ್ನೆಲ್ಲ ಚಾಚೂ ತಪ್ಪದೆ ತೀರಿಸಿದರು. ಹಾಗೇ ಸೊಸೆಯ ಬಯಕೆಗಳನ್ನೂ. ಅವರ ಸಂತೋಷ-ಸಂಭ್ರಮ ಕಂಡಾಗ ಸ್ಮಿತಳಿಗೆಲ್ಲೋ ಅಳುಕು, ವಂಶೋದ್ಧಾರಕನ ನಿರೀಕ್ಷೆಯಲ್ಲಿರುವ ಆ ಮುಗ್ದಜೀವಕ್ಕೆ ಮೋಸ ಮಾಡುತ್ತಿರುವ ಬಗ್ಗೆ ತಪ್ಪಿತಸ್ಥ ಭಾವ ಅವಳನ್ನು ಒಳಗೊಳಗೇ ಹಿಂಡುತ್ತಿತ್ತು. ` ಕಡೆಗೂ ಆ ನಮ್ಮಪ್ಪ ಕಣ್ಬಿಟ್ಟ…’ ಎಂದು ಖುಷಿಯಿಂದ ಸುತ್ತ ಮುತ್ತಲ ಮನೆಯವರಿಗೆಲ್ಲ ಸಿಹಿ ಹಂಚಿಬಂದರು ಶಾರದಮ್ಮ.

            ಸ್ಮಿತಳಿಗೆ ಅತ್ತೆಯ ಮನೆ ಹಾಗೂ ತಾಯಿಯ ಮನೆಯಲ್ಲಿ ಎರಡೆರಡು ಬಾರಿ ಅದ್ಧೂರಿಯಾಗಿ ಸೀಮಂತ ನಡೆಯಿತು. ಏಳುಮಲ್ಲಿಗೆ ತೂಕದ ರಾಜಕುಮಾರಿಯಾದಳು ಅವಳು ಎಲ್ಲರ ಪಾಲಿಗೆ. ನಿಂತರೆ, ಕೂತರೆ ಸವೆಯುತ್ತಾಳೆಂಬಂತೆ ಬಲು ಮುಚ್ಚಟೆಯಿಂದ ನೋಡಿಕೊಂಡರು ಮನೆಯವರೆಲ್ಲ.

            ಹಲವು ಕಾಲದ ಹಂಬಲ-ಕನಸಿನ ಸಾಕಾರಮೂರ್ತಿಯಾಗಿ ಅವಳ ತಾಯ್ತನವನ್ನು ಬೆಚ್ಚಗೆ ಮಾಡಲು ಅವಳ ಮಡಿಲಲ್ಲಿ ಮಲಗಿದ್ದ ಅವಳ ಕುಮಾರ ಕಂಠೀರವ, ಅವಳನ್ನೇ ರೆಪ್ಪೆ ಪಿಳಿಪಿಳಿಸಿ ದಿಟ್ಟಿಸುತ್ತಿದ್ದ. ಮಗನ ನಾಮಕರಣದ ಕರೆಯೋಲೆಯನ್ನು ಪ್ರೀತಿಯಿಂದ ನೇವರಿಸಿದವಳ ಕಣ್ಣಲ್ಲಿ ಮೂರ್ಲೋಕ ಬೆಳಗಿತ್ತು.

            ಸಮಾರಂಭದ ದಿನ-ಮನೆಯಲ್ಲಿದ್ದವರಿಗೆಲ್ಲ ಅತೀವ ಸಂಭ್ರಮ!…ಶಾರದಮ್ಮ ವಂಶೋದ್ಧಾರಕನನ್ನು ಬಲು ಮುಚ್ಚಟೆಯಿಂದ ಎತ್ತಿಕೊಂಡು ಬಂದು ಗಂಡನ ಮಡಿಲಲ್ಲಿರಿಸುತ್ತ – ` ನೋಡೀಂದ್ರೆ, ನಿಮ್ಮ ಮೊಮ್ಮಗ..ಎಂಥ ಕಿಲಾಡಿ..ನಮ್ಮನ್ನೆಲ್ಲ ಇಷ್ಟು ದಿನ ಎಷ್ಟು ಕಾಯಿಸಿ, ಆಟ ಆಡಿಸಿಬಿಟ್ಟ’ ಎಂದು ತಮ್ಮ ತುಟಿಗಳನ್ನು ಮುಂದಕ್ಕುಬ್ಬಿಸಿ, ತುಂಬು ಪ್ರೀತಿ-ಭಾವೋದ್ವೇಗಗಳಿಂದ ನುಡಿದರು.

 ಮಡಿಲು ತುಂಬಿದ ಮೊಮ್ಮಗುವನ್ನೇ ದಿಟ್ಟಿಸುತ್ತ, ಎದೆಗೊತ್ತಿಕೊಂಡ ರಾಮಚಂದ್ರಯ್ಯ ಸಂತೃಪ್ತಿಯಿಂದ – ಮೆಲ್ಲಗೆ ಮನದಲ್ಲೇ ` ಮಗನೋ? ಮೊಮ್ಮಗನೋ?…’ ಎಂದು ಸ್ವಗತವಾಡಿಕೊಳ್ಳುತ್ತ, ಪಕ್ಕದಲ್ಲಿ ನಿಂತಿದ್ದ ಮಗನತ್ತ ಪ್ರಶ್ನಾರ್ಥಕವಾಗಿ ನೋಡಿದಾಗ, ಹರಿ ತಂದೆಯತ್ತ ಓರೆಗಣ್ಣಲ್ಲಿ ನೋಡಿ ನಕ್ಕ.

Related posts

ಅನಾವರಣ

YK Sandhya Sharma

Skit- Kamlu Maga Foreign Returned

YK Sandhya Sharma

ಮೋಕ್ಷದಾತ

YK Sandhya Sharma

2 comments

Vidya Rao March 21, 2020 at 7:17 pm

Sandhya avare, wonderful ending. Surely it is heart touching.

Reply
YK Sandhya Sharma March 22, 2020 at 7:48 pm

Thank you very much dear Vidya for liking my story. I need your support and encouragement as my welwisher.Thanks a lot.

Reply

Leave a Comment

This site uses Akismet to reduce spam. Learn how your comment data is processed.