ಶ್ರೀರಕ್ಷಾಳ ಸಾತ್ವಿಕಾಭಿನಯದ ನೃತ್ಯಸೊಬಗು
ಬೆಂಗಳೂರಿನ ಜಯನಗರದ ಜೆ.ಎಸ್.ಎಸ್. ರಂಗಮಂದಿರದ ಸರಳ ರಂಗಸಜ್ಜಿಕೆಯ ವೇದಿಕೆಯ ಮೇಲೆ, ವಿದುಷಿ ಡಾ.ಜಯಶ್ರೀ ರವಿ ಅವರ ಶಿಷ್ಯೆ ಮತ್ತು ಮಗಳೂ ಆದ ಶ್ರೀರಕ್ಷಾ ಹಗಡೆ ಆತ್ಮವಿಶ್ವಾಸದಿಂದ ತನ್ನ ಭರತನಾಟ್ಯದ ‘ರಂಗಪ್ರವೇಶ’ದಲ್ಲಿ ಸುಮನೋಹರವಾಗಿ ನರ್ತಿಸಿದಳು. ನೃತ್ಯಕ್ಕೆ ಹೇಳಿ ಮಾಡಿಸಿದ ನೀಳ ನಿಲುವು- ತೆಳುವಾದ ಶರೀರ ಹೊಂದಿದ್ದ ಶ್ರೀರಕ್ಷಾ, ‘ಪುಷ್ಪಾಂಜಲಿ’ಯ ಮುನ್ನ ರಂಗ ಶುದ್ಧಿಗೊಳಿಸಿ, ತನ್ನ ನರ್ತನದ ಶುಭಾರಂಭಗೊಳಿಸಿದಳು. ಹಸನ್ಮುಖದ ಅಂಗಶುದ್ಧ ಆಂಗಿಕಾಭಿನಯ-ಭಾವಪೂರ್ಣ ಅಭಿನಯ ಮೊದಲನೋಟದಲ್ಲಿ ಗಮನ ಸೆಳೆಯಿತು. ಗುರು-ಹಿರಿಯರು, ದೇವಾನುದೇವತೆಗಳಿಗೆ ಕೃತಜ್ಞತಾಪೂರ್ವಕ ವಂದನೆ ಸಲ್ಲಿಸುವ ಈ ಕೃತಿಯಲ್ಲಿ ಅಭಿನಯ ಇರುವುದಿಲ್ಲವೆಂದರೂ ಕಲಾವಿದೆ ನೃತ್ತನಮನಗಳನ್ನು ಮನದುಂಬಿ-ಭಾವದುಂಬಿ ಅರ್ಪಿಸಿದ್ದು ವಿಶೇಷವಾಗಿತ್ತು.
ಚತುರ್ವೇದಗಳಿಂದ ಉದಯಿಸಿದ ಪಾಠ, ಅಭಿನಯ, ರಸಾನುಭವ-ಗೀತಾದಿಗಳನ್ನು ಹೊಂದಿದ ‘ನಾಟ್ಯವೇದ’ದ ಅಸ್ಮಿತೆಯನ್ನು ಕಲಾವಿದೆ ತನ್ನ ವಿಶಿಷ್ಟ ಆಂಗಿಕಾಭಿನಯದಿಂದ ಅಭಿವ್ಯಕ್ತಿಸುತ್ತ, ಏಕದಂತನ ವಿವಿಧ ಭಂಗಿಗಳನ್ನು ತೋರುತ್ತ ವಿಘ್ನೇಶ್ವರನನ್ನು ಸಾಕಾರಗೊಳಿಸಿದಳು. ಕೊರಳು ಕೊಂಕಿಸುತ್ತ ನವಿಲಿನ ಹೆಜ್ಜೆಗಳಲ್ಲಿ ರಂಗದಲ್ಲಿ ಬಳುಕುತ್ತ ಅಡಿಯಿರಿಸಿ, ಮಯೂರ ಹಸ್ತಮುದ್ರಿಕೆಗಳನ್ನು ಬಳಸಿ ‘ಅಲ್ಲರಿಪು’ವನ್ನು ಚೆಂದಗಾಣಿಸಿದ ಶ್ರೀರಕ್ಷಾಳ ವಯ್ಯಾರದ ನಡೆ, ಗರಿಬಿಚ್ಚಿ ನಲಿದ, ನಲಿವ ನರ್ತನದ ಸೊಬಗು, ಸುಮ್ಮಾನದ ಭಂಗಿಗಳು ಆಕರ್ಷಕವಾಗಿದ್ದವು. ಅಪರೂಪದ ದೇವರನಾಮ ‘ಅದಿಗೋ ಬರುತಿಹನೆ ಶ್ರೀರಾಮ..’ ಎಂದು ಸೀತಾ ಸ್ವಯಂವರಕ್ಕೆ ಆಗಮಿಸುತ್ತಿದ್ದ ಶ್ರೀರಾಮನ ಸುಂದರರೂಪಿಗೆ ಬೆರಗಾಗಿ ಸಂಭ್ರಮಿಸುವ ಸೀತೆಯ ಸಖಿಯರ ಕುತೂಹಲ, ಜಾನಕಿಯ ಲಜ್ಜೆ-ಸಂಭ್ರಮಗಳ ಚಿತ್ರಣವನ್ನು ಕಲಾವಿದೆ ರಮ್ಯವಾಗಿ ಕಟ್ಟಿಕೊಟ್ಟಳು.
ಪ್ರಸ್ತುತಿಯ ಪ್ರಮುಖ ಘಟ್ಟ ‘ವರ್ಣ’- ಕಲಾವಿದೆಯ ಪ್ರತಿಭೆಯನ್ನು ಒರೆಗೆ ಹಚ್ಚುವ ಕೃತಿ. ಅಗಾಧ ನೆನಪಿನ ಶಕ್ತಿ, ತಾಳ-ಲಯ ಜ್ಞಾನವನ್ನು ನಿರೀಕ್ಷಿಸುವ, ಸಮರ್ಥ ಅಭಿನಯ ಬೇಡುವ ಕೃತಿ ‘ವರ್ಣ’- ಹೆಸರಿಗೆ ತಕ್ಕಂತೆ ವರ್ಣರಂಜಿತವಾಗಿರುತ್ತದೆ. ವಿದುಷಿ ದ್ವಾರಕೀ ಕೃಷ್ಣಸ್ವಾಮಿ ಅವರ ಬಹು ಮನೋಹರ ರಚನೆ-‘ಭುವನ ಸುಂದರನ ಕರೆತಾರೆ ಸಖಿ’-ಎಂದು ವಿರಹಾರ್ತತೆಯಿಂದ ನೊಂದ ನಾಯಕಿ, ಅವನನ್ನು ಕರೆತಾ ಎಂದು ತನ್ನ ಸಖಿಯನ್ನು ಕೇಳಿಕೊಳ್ಳುವ ಈ ಕನ್ನಡ ಕೃತಿ ಹೃದಯಸ್ಪರ್ಶಿಯಾಗಿತ್ತು. ಗುರುಗಳಿಂದ ಉತ್ತಮ ತರಬೇತಿ ಪಡೆದಿದ್ದ ಕಲಾವಿದೆ ಭಾವಪೂರ್ಣ ಅಭಿನಯದಿಂದ ನಾಯಕಿಯ ವಿರಹದ ತಲ್ಲಣಗಳನ್ನು ಸೊಗಸಾಗಿ ಅಭಿವ್ಯಕ್ತಿಸಿದಳು. ಕೃಷ್ಣನ ಅಗಲಿಕೆಯಿಂದ ಬೆಂದ ನಾಯಕಿ, ವಿಹ್ವಲಿಸುತ್ತ, ಇನಿಯನ ಗತ ನೆನಪುಗಳಿಂದ ಬಳಲುತ್ತಾ, ಅವನನ್ನು ಕಾಣುವ ತೀವ್ರ ಹಂಬಲಿಕೆಯಿಂದ ಪರಿತಪಿಸುವ ಚಿತ್ರಣ ಕಣ್ಮನ ತುಂಬಿತು.
ನಡುನಡುವೆ ಹರಿದಾಡುವ ನೃತ್ತಗಳ ಮಿಂಚಿನ ಮಾಲೆ-ಕಲಾವಿದೆಯ ಸಾತ್ವಿಕಾಭಿನಯಕ್ಕೆ ಪೂರಕವಾಗಿತ್ತು. ಗಾಯಕ ರೋಹಿತ್ ಭಟ್ಟರ ಮಾರ್ದವ ಧ್ವನಿ ಹೃದಯದಲ್ಲಿ ಕಲರವ ಹರಡಿದರೆ, ವೇಣುಗೋಪಾಲರ ಮುರಳೀಗಾನದ ಸುಮಧುರತೆ, ಕೃಷ್ಣಮೂರ್ತಿಯವರ ಮನಮಿಡಿದ ವಯೋಲಿನ ಮಾಧುರ್ಯ ಮತ್ತು ವಿನೋದ್ ಶ್ಯಾಂ ಆನೂರರ ಮೃದಂಗದ ಅಲೆ ಮನಕಲಕಿತು. ಜಯಶ್ರೀ ಅವರ ಮೃದುಸ್ವರದ ನಟುವಾಂಗ ಕೃತಿಯ ಅಂತರಂಗವನ್ನು ಬೆಸೆಯಿತು.
ಲೀಲಾಶುಕ ಕವಿಯ ‘ಶ್ರೀಕೃಷ್ಣ ಕರ್ಣಾಮೃತ’-ತುಂಟಕೃಷ್ಣನ ವಿವಿಧ ಲೀಲಾ ವಿನೋದಾವಳಿಗಳಿಗೆ ಕನ್ನಡಿ ಹಿಡಿಯಿತು. ಮುಂದೆ- ‘ಶಿವ ನವರಸ’, ತಾಂಡವ ನೃತ್ಯಪ್ರಿಯನಾದ ಶಿವಕಥೆಯ ಪ್ರತಿಯೊಂದು ಸನ್ನಿವೇಶದಲ್ಲೂ ಅನುಗುಣವಾದ ವಿವಿಧ ರಸಗಳನ್ನು ಗುರುತಿಸುತ್ತ ಕಲಾವಿದೆ, ಘಟನಾಧಾರಿತ ನವರಸಗಳನ್ನು ಬಿಂಬಿಸಿದ್ದು ಔಚಿತ್ಯಪೂರ್ಣವಾಗಿತ್ತು. ಸಂಚಾರಿಗಳಲ್ಲಿ ಒಡಮೂಡಿದ ಭಾವ ಸೊಗಸಾಗಿ ಅಭಿವ್ಯಕ್ತಗೊಂಡು ಮನಮುಟ್ಟಿತು. ‘ಬರುವನೇಕೆ ರಮಣ ಸಖಿಯೇ…’ ಎಂಬ ವಿಷಾದ ದ್ವನಿಯ ‘ಜಾವಳಿ’- ಅಪರೂಪದ ಕೃತಿಯಾಗಿದ್ದು, ಕಲಾವಿದೆಯ ಅಭಿನಯ ಅದಕ್ಕೆ ನ್ಯಾಯ ಒದಗಿಸಿತ್ತು. ಅಂತ್ಯದಲ್ಲಿ, ಸ್ವಾತಿ ತಿರುನಾಳರ ಜನಪ್ರಿಯ ಧನಶ್ರೀ ರಾಗದ ‘ತಿಲ್ಲಾನ’ ಮುದಗೊಳಿಸಿದರೆ, ಮಧ್ಯಮಾವತಿ ರಾಗದ ‘ಮಂಗಳ’ ಶುಭಾಪ್ರದವಾಗಿತ್ತು.
***********************