ಮುಸ್ಸಂಜೆ ಸಮಯ. ಅದೇ ತಾನೆ ಬೀದಿ ದೀಪಗಳು ಕಣ್ಬಿಡತೊಡಗಿದ್ದವು. ರಸ್ತೆ ಬದಿಯ ಆ ವಿಶಾಲವಾದ ಪಾರ್ಕಿನಲ್ಲಿ ಮೂಲೆ ಮೂಲೆಗಳಲ್ಲಿ ಅಲ್ಲಲ್ಲೊಂದು ದೀಪಗಳಿದ್ದರೂ ಮಬ್ಬುಗತ್ತಲು. ಜನಗಳು ಓಡಾಡಲು ಸುಮಾರು ಐದಡಿಯ ಕಾಬ್ಲರ್ ಸ್ಟೋನ್ ಹಾಕಿದ ಕಿರಿದಾದ ರಸ್ತೆ. ಅದೂ ಅಲ್ಲಲ್ಲಿ ಉಬ್ಬಿ ಕಿತ್ತುಹೋಗಿತ್ತು. ಹುಷಾರಾಗಿ ನಡೆಯಬೇಕಿತ್ತು. ಮುದುಕರಿಗಂತೂ ಇನ್ನೂ ಕಷ್ಟ. ಪಾರ್ಕಿನ ಆ ಒಳ ಕಾಲುದಾರಿಯ ನಾಲ್ಕೂ ಕಡೆ ನಡೆದು ಬಂದರೆ ಅಂದಾಜು ಒಂದು ಫರ್ಲಾಂಗ್ ದೂರ ಆದರೆ ಹೆಚ್ಚೆಚ್ಚು. ಎತ್ತರದ ಮರಗಳಡಿ ಅಲ್ಲಲ್ಲಿ ಕಲ್ಲು ಬೆಂಚುಗಳು. ಸಂಜೆಯ ತಂಗಾಳಿಗೆ ಆರಾಮವಾಗಿ ಹರಟುತ್ತ ಕುಳಿತ ವೃದ್ಧರ ಗುಂಪು ಒಂದೆಡೆಯಾದರೆ, ಇನ್ನೊಂದೆರಡು ಬೆಂಚುಗಳು ಹರಟೆ ಕೊಚ್ಚುತ್ತಿದ್ದ ಹೆಂಗಸರಿಂದ ತುಂಬಿತ್ತು.
ಕತ್ತಲು ಇಡುಗಿದ್ದ ಎಲ್ಲ ಮೂಲೆ ಬೆಂಚುಗಳನ್ನು ಆಯ್ದು ಕುಳಿತಿದ್ದರು ಯುವ ಪ್ರೇಮಿಗಳು.
ಸುಧಳ ಕಣ್ಣುಗಳು ಆ ಕತ್ತಲಲ್ಲೂ ಸರ್ಚ್ ಲೈಟ್‍ನಂತೆ ಮೂಲೆ ಮೂಲೆಗಳ ಬೆಂಚುಗಳನ್ನು ದಿಟ್ಟಿಸಿ ನೋಡುತ್ತ, ಮೂತಿ ಸೊಟ್ಟಗೆ ಮಾಡಿ ` ಶ್…ಉಮಾ, ಆ ಕಡೆ ನೋಡು, ಮುಂಡೇವು ಹೇಗೆ ನಾಚಿಕೆಗೆಟ್ಟು ಚಕ್ಕಂದ ಹೊಡೀತಾ ಕೂತಿವೆ, ನೋಡು ….ಇವಕ್ಕೆ ಹೇಳೋರು ಕೇಳೋರು ಯಾರೂ ಇಲ್ಲ , ಮನೇಲಿ ಪಾಪಾ ತಂದೆ ತಾಯಿಗಳು ಟ್ಯೂಷನ್‍ಗೆ ಹೋಗಿವೆ…ಇಲ್ಲ ಜಾಯಿಂಟ್ ಸ್ಟಡಿ ಮಾಡ್ತಿವೆ ಅಂತ ಭಾವಿಸ್ಕೊಂಡು ಜೇಬು ತುಂಬ ದುಡ್ಡು ಕೊಟ್ಟು ಕಳಿಸಿದರೆ, ಇವು ಮಾಡ್ತಿರೋ ಘನಾದಾರಿ ಕೆಲಸ ನೋಡೇ..ಛಿ ಛೀ…’- ಅಂತ ಹಲ್ಲು ಕಡಿದಳು.
`ನಿಜವಾಗಿ ಇವರ ಹೆತ್ತವರನ್ನ ಕಂಡರೆ ತುಂಬಾನೇ ಅಯ್ಯೋ ಅನ್ನಿಸತ್ತೆ….ಮಕ್ಕಳು ಅಂತ ಎಷ್ಟು ಕಷ್ಟಪಟ್ಟು,ಹೊಟ್ಟೆ ಬಟ್ಟೆ ಕಟ್ಟಿ, ಸಾಕಿ ಸಲಹಿ, ಕಾಲೇಜಿಗೆ ಕಳಿಸಿದರೆ ಇದೇನಾ ಇವರು ಮಾಡೋದು…ಶುದ್ಧ ಮೋಸ….ಅನ್ಯಾಯ’ ಅಂತ ಉಮಾ ಪ್ರತಿಕ್ರಿಯಿಸಿದರೆ, ಅವರೊಡನೆ ಹೆಜ್ಜೆ ಹಾಕುತ್ತಿದ್ದ ಗಾಯತ್ರಿ ಕೂಡ ತನಗೂ ರೇಗಿದೆಯೆಂಬುದನ್ನು ವ್ಯಕ್ತಪಡಿಸುತ್ತ- ` ಕಾಲ ಕೆಟ್ಟೋಯ್ತುರೀ…..ನಾವೇನಾದ್ರೂ ಒಮ್ಮೆ ಕಾಲೇಜಿನಲ್ಲಿ ಅಪ್ಪಿ ತಪ್ಪಿ ಏನಾದ್ರೂ ಒಬ್ಬ ಹುಡುಗನ್ನ ಮಾತಾಡಿಸಿಬಿಟ್ರೆ , ನಮ್ಮ ಮೂರೂ ಜನ ಅಣ್ಣಂದಿರೂ ಓಡಿ ಬಂದು ನಮ್ಮಮ್ಮನಿಗೆ ಚಾಡಿ ಹೇಳಿ ಹೊಡೆಸ್ತಿದ್ರು…ಅಂಥ ಸ್ಟ್ರಿಕ್ಟು ನಮ್ಮ ಕಾಲದಲ್ಲಿ…ಈಗೇನ್ರೀ ಇವಕ್ಕೆ ಲಂಗಿಲ್ಲ, ಲಗಾಮಿಲ್ಲ…ದೋಡ್ಡೋರು ಅಂದರೆ ಕೇರೇ ಇಲ್ಲ’ ಎನ್ನುತ್ತ ತಿರುತಿರುಗಿ, ಒತ್ತಿ ಕುಳಿತಿದ್ದ ಆ ಹುಡುಗ-ಹುಡುಗಿಯನ್ನೇ ಕುತೂಹಲದಿಂದ ನೋಡಿದಳು.
ಇನ್ನೊಂದು ಮೂಲೆಯಲ್ಲಿ ಕುಳಿತಿದ್ದ ಹುಡುಗಿ ಕಪ್ಪು ಬುರುಕ ಹಾಕಿಕೊಂಡಿದ್ರಿಂದ ಅವಳ ಮುಖ ಕಾಣದೆ ನಿರಾಶಳಾದ ಸುಧಾ-` ಆ ಹುಡುಗನ ಕೈ ಎಲ್ಲಿದೆ ನೋಡ್ರೀ…ಹೂಂ…ಇನ್ನೂ ಅನುಕೂಲಾನೇ ಆಯ್ತು…’ ಎಂದು ವ್ಯಂಗವಾಗಿ ಕಿಸಕ್ಕನೆ ನಕ್ಕು ತಲೆಯಾಡಿಸಿದಳು.
` ರಾಮ..ರಾಮ…ನಮಗೆ ಇದನ್ನೆಲ್ಲ ನೋಡೋ ಕರ್ಮ….ನೆಮ್ಮದಿಯಾಗಿ ವಾಕ್ ಮಾಡೋ ಹಾಗೂ ಇಲ್ಲ…ಎಷ್ಟು ಅಸಹ್ಯವಾಗಿ ಕುಳಿತುಕೊಳ್ತಾರೆ ಪಬ್ಲಿಕ್ ಪ್ಲೇಸ್ ನಲ್ಲಿ..ಛೇ…’- ಇವರ ಸಂಭಾಷಣೆಗಳನ್ನು ಆಲಿಸಿಕೊಂಡು ಹಿಂದೆ ಬರುತ್ತಿದ್ದ ನಡುವಯಸ್ಸಿನ ಆತ ಇವರ ಮಾತಿಗೆ ಒಗ್ಗರಣೆ ಹಾಕುವಂತೆ ಗೊಣಗಿಕೊಂಡರು.
ಪ್ರತಿ ದಿನ ಈ ಮೂವರು ಗೃಹಿಣಿಯರು ಬೆಳಗ್ಗೆ -ಸಂಜೆ ಅರ್ಧರ್ಧ ಗಂಟೆ ವಾಕ್ ಮಾಡುವುದು ದಿನನಿತ್ಯದ ಅಭ್ಯಾಸ. ಆ ದಿನ ಓತಪ್ರೋತವಾಗಿ ಸಾಗಿದ್ದವು ಅವರ ಟೀಕಾ ಪ್ರಹಾರಗಳು.
`ಕಣ್ ಕುಕ್ಕುವ ಸೂರ್ಯನ ಬೆಳಕಿನಲ್ಲಿ, ಬೆಳಬೆಳಗ್ಗೆ ಇಲ್ಲಿ ಬಂದು ಕುಕ್ಕರಿಸುತ್ತವಲ್ಲ ಇವಕ್ಕೆ ಮಾಡಕ್ಕೆ ಬೇರೆ ಕೆಲಸವೇ ಇಲ್ವಾ? ಕಾಲೇಜಿಗೆ ಹೋಗ್ತಾಳೆ ಮಗಳು ಅಂತ ಪಾಪಾ ಆ ಅಮ್ಮ ಕೈ ಬಾಯಿ ಸುಟ್ಕೊಂಡು ಕಷ್ಟಪಟ್ಟು ಅವಸರವಸರವಾಗಿ ತಿಂಡಿ ಮಾಡಿ ಡಬ್ಬಿಗೆ ತುಂಬಿ ಕೊಟ್ಟು ಕಳಿಸಿದರೆ, ಈ ಹುಡುಗಿ ಆ ಡಬ್ಬದ ಮುಚ್ಚಳ ತೆಗೆದು ಆ ಹುಡುಗನ ಬಾಯಿಗೆ ಅದೆಷ್ಟು ಪ್ರೀತಿಯಿಂದ ತುತ್ತು ಇಡ್ತಿದ್ದಾಳೆ ನೋಡ್ರೀ, ಕಣ್ಣು ತಂಪು ಮಾಡ್ಕೊಳ್ಳಿ….’
` ಇಲ್ನೋಡ್ರೀ….ಪಾಪ..ತಮ್ಮ ತಾಪತ್ರಯಗಳನ್ನೆಲ್ಲ ಮುಚ್ಚಿಟ್ಕೊಂಡು ಹೆತ್ತವರು, ಮಗ ಹಾಯಾಗಿರಲಿ ಅಂತ ಪುಡಿಗಾಸು ಕೂಡಿಟ್ಟು ಕೊಟ್ಟಿದ್ದನ್ನ, ಇವನು ಚಾಕೊಲೆಟ್, ಐಸ್ ಕ್ರೀಂ ತಂದು ಅವಳ ಕೈಗಿಟ್ಟು ಪುಸಲಾಯಿಸ್ತಿದ್ದಾನೆ…..ಹೇಗಿದೆ ದೃಶ್ಯಗಳು!’
` ಅಲ್ಲಾ, ಇವಳನ್ನ ನೋಡಿದರೆ ಶ್ರೀಮಂತರ ಮನೆಯವಳ ಹಾಗಿದ್ದಾಳೆ…ಎಷ್ಟು ಬೆಳ್ಳಗೆ ಮುದ್ದಾಗಿದ್ದಾಳೆ…ಅವನು ಕರಿಯ…ಅದೂ ಒಡ್ಡೊಡ್ಡಾಗಿ….ಹೇಗೆ ಮನಸ್ಸು ಬರತ್ತೋ…..ಲವ್ ಈಸ್ ಬ್ಲೈಂಡ್..’ ವಿಚಿತ್ರವಾಗಿ ಮುಖ ಮಾಡಿ ಭುಜ ಕುಣಿಸಿದಳು ಸುಧ.
ಬೆಳಗ್ಗೆ-ಸಂಜೆ ಎರಡು ಹೊತ್ತೂ ಈ ಗೆಳತಿಯರ ಕಣ್ಣಿಗೆ ಕಾಣುವ ಖಾಯಂ ದೃಶ್ಯಗಳು ಇವು.
ಮೂರು ಸುತ್ತಿನಿಂದ ಉಮಳ ಗಮನವೆಲ್ಲಾ ಒಂದು ಕತ್ತಲ ಮೂಲೆಯಲ್ಲಿ ತಲೆ ಬಗ್ಗಿಸಿ ಕುಳಿತ ಆ ಹದಿಹರೆಯದ ಹುಡುಗನ ಮೇಲೆಯೇ. ಪೊದೆಗೂದಲಿನಿಂದ ಅವನ ಮುಖ ಮರೆಯಾಗಿತ್ತು. ಅದಲ್ಲದೆ ಇವರು ದೂರದಲ್ಲಿ ಬರುತ್ತಿರುವುದನ್ನು ಗಮನಿಸಿ ಅವನು ಇನ್ನೂ ಬಾಗಿ ಕುಳಿತುಕೊಳ್ಳುತ್ತಿದ್ದ. ` ಇನ್ನೂ ಮುಖದ ಮೇಲೆ ಮೀಸೆ ಮೊಳೆತಿಲ್ಲ , ಆಗಲೇ ಇವನಿಗೆ ಹುಡುಗಿ ಬೇಕಾ?…ಎಂಥ ಚೂಲು!…’- ಅಸಹ್ಯಿಸಿಕೊಂಡಳು ಗಾಯತ್ರಿ.
ಉಮಾ, ಅವನ ಪಕ್ಕದಲ್ಲಿ ಹಲ್ಲು ಕಿರಿಯುತ್ತ ಕುಳಿತಿದ್ದ ಹುಡುಗಿಯ ಗುರುತು ಹಿಡಿದು- ` ಅಯ್ಯೋ, ಇವಳು ನಮ್ಮ ರೋಡಿನ ಕಡೇ ಮನೆಯ, ಟೀಚರ್ ಇಂದಿರಮ್ಮನ ಮಗಳು!….ಎಂಥ ಅನ್ಯಾಯ…’ ಎಂದು ಲೊಚಗುಟ್ಟಿ ತನ್ನ ಮಾತನ್ನು ಮುಂದುವರಿಸಿದಳು: ` ಪಾಪ ಆಕೆಗೆ ಗಂಡ ಇಲ್ಲ….ಭಾಳ ಕಷ್ಟಜೀವಿ, ಬೆಳಗ್ಗೆ ಸ್ಕೂಲಿನಲ್ಲಿ ಪಾಠ ಮಾಡಿಬಂದು ಸಂಜೆ ರಾಶಿ ಮಕ್ಕಳಿಗೆ ಟ್ಯೂಷನ್ ತೊಗೋತಾಳೆ….ಜೊತೆಗೆ ಬಟ್ಟೇನೂ ಹೊಲಿದು ಮೂರು ಮಕ್ಕಳ ಹೊಟ್ಟೆ-ಬಟ್ಟೆ ತೂಗಿಸಿಕೊಂಡು, ಓದಿಸ್ತಿದ್ದಾಳೆ…ಇಲ್ಲಿ ನೋಡಿದರೆ ಇವಳು ಹಾಯಾಗಿ ಹುಡುಗನ ಕೈ ಹಿಡ್ಕೊಂಡು ಮಜ ತೊಗೋತಿರೋದನ್ನ ನೋಡಿದರೆ ನನಗೇ ಹೊಟ್ಟೆ ಉರಿಯತ್ತೆ ಕಣ್ರೀ…’ ಉಮಳ ಮುಖ ಕ್ರೋಧದಿಂದ ಕೆಂಪಾಗಿತ್ತು. ಉಳಿದವರೂ ಆ ಟೀಚರಮ್ಮನ ಮಗಳ ಮೊಗವನ್ನು ದಿಟ್ಟಿಸಿ ನೋಡಿ ತುಟಿಕಚ್ಚಿಕೊಂಡರು. ` ಎಂಥ ತಾಯಿಗೆ ಎಂಥಾ ಮಗಳು’ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಉಮಳ ಮನಸ್ಸು ಕಲಕಿ ಹೋಗಿತ್ತು. ದೈನ್ಯ ಮುಖದ ಇಂದಿರಮ್ಮಳೇ ಅವಳ ಕಣ್ಮುಂದೆ ನಿಂತಿದ್ದಳು. ಪೀಚು ದೇಹ. ಕಷ್ಟವೇ ಪಿಡಿಚೆ ಮಾಡಿಟ್ಟಂತ್ತಿದ್ದ ನೊಂದ ಮುಖ. ಚಿಕ್ಕವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡ ಅವಳು ಪಟ್ಟ ಕಷ್ಟ ಒಂದೆರಡಲ್ಲ. ತೌರುಮನೆಯವರು ಸಹಾಯಕ್ಕೆ ಬರಲಿಲ್ಲ. ಅತ್ತೆ ಮನೆಯವರಂತೂ ತಿರುಗಿಯೂ ನೋಡಲಿಲ್ಲ. ಅವಳ ಪಾಲಿನ ಮುರುಕು ಮನೆಯ ಸಣ್ಣ ಆಸ್ತಿಯನ್ನೂ ಕಸಿದುಕೊಂಡು ಸಂಬಂಧ ಕಡಿದುಕೊಂಡಿದ್ದರು. ಏಕಾಕಿ ಹೋರಾಡುತ್ತ ಅವಳು,ಛಲದಿಂದ, ಮಾನದಿಂದ ಬದುಕಿ ಮಕ್ಕಳನ್ನು ಒಂದು ಹಂತಕ್ಕೆ ತಲುಪಿಸಲು ಹೆಣಗುತ್ತಿದ್ದಳು. ಇಂಥ ಕಷ್ಟಜೀವಿಯ ಮಗಳು, ಹೀಗೆ ಬೇಜವಾಬ್ದಾರಿಯಿಂದ, ಸ್ವೇಚ್ಛಾಚಾರವಾಗಿ ಪ್ರಣಯದಾಟದಲ್ಲಿ ಮುಳುಗಿದ ಹುಡುಗಿಯನ್ನು ಕಂಡು ಉಮಳಿಗೆ ವಿಪರೀತ ರೇಗಿತು- ಅವಳ ಕೆನ್ನೆಗೊಂದು ಬಾರಿಸಿ ಬುದ್ಧಿವಾದ ಹೇಳಲೇ ಎಂದು ಮನ ತುಡಿಯಿತು.
ತತ್ ಕ್ಷಣ ಸುಧಾ-` ಇವನಿಗೇನು ಬಂತು ರೋಗ?….ಲಕ್ಷಣವಾಗಿ ಓದೋ ಬರಹವೋ, ಕೆಲಸವೋ ಮಾಡಿಕೊಳ್ಳದೆ ಈ ಹುಡುಗೀನ ಹಾಳುಮಾಡ್ತಿದ್ದಾನಲ್ಲಾ…ಇವನಿಗೆ ಸರ್ಯಾಗಿ ಬುದ್ಧಿ ಕಲಿಸಬೇಕ್ರೀ….ಬನ್ನಿ ಹೊರಗೆ `ಹೊಯ್ಸಳ’ ಗಾಡಿ ನಿಂತಿದೆ, ಪೋಲಿಸಿನವರಿಗಾದ್ರೂ ಹೇಳಿ ನಾಲ್ಕು ಒದೆಸಬೇಕು..’ ಎಂದು ಅವುಡುಗಚ್ಚಿದಳು. ನಾಲ್ಕು ರೌಂಡ್ ಹೊಡೆದರೂ ಕಳ್ಳ, ತನ್ನ ಮುಖವೇ ಕಾಣದಂತೆ ಮಂಡಿಗೆ ತಗಲುವಂತೆ ಮುಖ ಬಗ್ಗಿಸಿಕೊಂಡಿದ್ದಾನೆ!… ಪೊದೆಗೂದಲು ಬಿಟ್ಟರೆ ಅವನ ಮುಖದ ಚಹರೆಯೇ ಗೊತ್ತಾಗುತ್ತಿಲ್ಲ.
` ಇವನನ್ನು ಹೀಗೆ ಗೂಳಿ ಥರ ಬಿಟ್ಟಿದ್ದಾರಲ್ಲ ಅವನ ತಂದೆ-ತಾಯಿಗಳನ್ನ ತರಾಟೆಗೆ ತೊಗೋಬೇಕು….ಹೊತ್ತೊತ್ತಿಗೆ ಮೇವು ಹಾಕಿ ಕಂಡೋರ ಹೊಲ ಮೇಯಲು ಹೋರಿ ಬಿಟ್ಟಿದ್ದಾರಲ್ಲ ಅವರಿಗೆ ಸರ್ಯಾಗಿ ಬುದ್ಧಿ ಕಲಿಸಬೇಕು…..ಅವರೇನು ಕತ್ತೆ ಕಾಯ್ತಿದ್ದಾರಾ?….ಮಕ್ಕಳ ಮೇಲೆ ಒಂದು ಕಣ್ಣಿಟ್ಟಿರಬೇಕು ಅನ್ನೋ ಒಂದು ಕನಿಷ್ಠ ಜ್ಞಾನ-ತಿಳುವಳಿಕೆ ಬೇಡವಾ?….ಸುಮ್ಮನೆ ಹುಟ್ಟಿಸಿಬಿಟ್ಟರೆ ಸಾಕಾ…ವೇಸ್ಟು ಬಾಡಿಗಳು ‘ ಉಮಾ ದೊಡ್ಡ ಭಾಷಣಕ್ಕೇ ತೊಡಗಿದಳು.
ಅಷ್ಟರಲ್ಲಾಗಲೇ ಆ ಪ್ರೇಮಿಗಳು ಮೇಲೆದ್ದು ಗೇಟಿನ ಹೊರಭಾಗದಲ್ಲಿ ನಿಲ್ಲಿಸಿದ್ದ ಅವನ ಮೋಟರ್ ಬೈಕ್ ಏರಿ ಹೊರಡುವ ಸನ್ನಾಹದಲ್ಲಿದ್ದರು. `ಹಿಡೀರಿ ಆ ಕಳ್ಳನನ್ನ, ನಡೀರಿ ಬಿಡೋದು ಬೇಡ’ ಎನ್ನುತ್ತ ಉಮಾ ಉದ್ಯಾನವನದ ಹೊರಗೇಟಿನತ್ತ ಧಾವಿಸಿದಾಗ ಉಳಿದವರೂ ಅವಳನ್ನು ಹಿಂಬಾಲಿಸಿದರು. ಉಮಳ ಮೊಗದಲ್ಲಿ ಏನೋ ಸಾಧಿಸಿದವಳಂತೆ ವಿಜಯೋತ್ಸಾಹ ನೆರೆದಿತ್ತು.
ಆ ಹುಡುಗ ತನ್ನ ಹಣೆ ಕವಿದಿದ್ದ ಪೊದೆಗೂದಲನ್ನು ಹಿಂದೆ ತಳ್ಳಿ ಹೆಲ್ಮೆಟ್ ಧರಿಸಲನುವಾಗುತ್ತಿದ್ದ.
`ಅರರೇ ಉಮಾ……ಅವನು ನಿಮ್ಮ ಮಗ ವಿಶ್ವ ಇದ್ದ ಹಾಗಿದೆ’- ಎನ್ನುವ ಸುಧಳ ದನಿ ಕೇಳುತ್ತಿದ್ದ ಹಾಗೆ ಉಮಾ ಕರೆಂಟು ಹೊಡೆಸಿಕೊಂಡವಳಂತೆ ಸ್ತಂಭೀಭೂತಳಾದಳು!… ಎದೆ ಧಸಕ್ಕೆಂದಿತು. ಪರಾರಿಯಾಗಲಿದ್ದ ಆ ಪೊದೆಗೂದಲ ಪುಂಡನನ್ನು ಪೋಲೀಸಿಗೆ ಹಿಡಿದುಕೊಡುವ ಉಮೇದಿನಲ್ಲಿದ್ದ ಉಮಾ, ಷಾಕಿನಿಂದ ವಿಗ್ರಹದಂತೆ ನೆಲಕ್ಕೆ ಕಾಲು ಕಚ್ಚಿಸಿ ನಿಂತುಬಿಟ್ಟಳು. ಎಲ್ಲರ ಗಮನ ಸೆಳೆದ ಆ ಪೋಲಿ ಹುಡುಗ ಬೇರಾರೂ ಆಗಿರದೆ ತನ್ನ ಮಗನೇ ಎಂಬ ಸುದ್ದಿ ಕೇಳಿ ಗಾಬರಿಯಾದಳು. ಕಹಿ ಸತ್ಯ ಅವಳನ್ನು ಜರ್ಜರಿತಗೊಳಿಸಿತ್ತು. ಗಂಟಲ ದ್ರವ ಬತ್ತಿಹೋಗಿತ್ತು. ಮನಸ್ಸಿನಲ್ಲೊಂದು ವಿಚಿತ್ರ ತಳಮಳ. ನೋವು, ಅವಮಾನಗಳಿಂದ ಉಮಾ ಧರೆಗೆ ಕುಸಿಯತೊಡಗಿದಳು. ಹೊಟ್ಟೆಯಲ್ಲಿ ಅವ್ಯಕ್ತ ಸಂಕಟ… ಕೈಕಾಲಲ್ಲಿ ನಡುಕ…… ಮೈ ಬೆವರಿನಿಂದ ತೊಯ್ದುಹೋಗಿತ್ತು. ಹೆತ್ತವರ ಮರ್ಯಾದೆಯನ್ನು ಹರಾಜಿಗೆ ಹಾಕಿದ ಆ ತನ್ನ ಕೆಟ್ಟಮಗನ ಮೊಗವನ್ನು ದಿಟ್ಟಿಸುವ ಧೈರ್ಯವಾಗದೆ ಅವಳ ಮುಖ ಕಪ್ಪಿಟ್ಟಿತು. ಬಹಿರಂಗ ಪ್ರೇಮಲೀಲೆಯಲ್ಲಿ ತೊಡಗಿದ್ದ ಆ ಜೋಡಿಯನ್ನು ರೆಡ್ ಹ್ಯಾಂಡಾಗಿ ಹಿಡಿದುಕೊಟ್ಟು ದೊಡ್ಡ ಸಮಾಜಸೇವೆ ಮಾಡಿದವಳಂತೆ ಬೀಗಬೇಕೆಂಬ ಉತ್ಸಾಹದಲ್ಲಿ ದಾಪುಗಾಲಿಕ್ಕಿ , ಪೋಲೀಸಿನ ಬಳಿಸಾರಿದವಳ ಕಾಲುಗಳು ಲಕ್ವ ಹೊಡೆದಂತೆ ನಿಶ್ಚೇಷ್ಟಿತವಾಗಿದ್ದವು.
` ಇಲ್ಲಾರೀ ಉಮಾ, ಅವನು ನಿಮ್ಮ ವಿಶ್ವ ಅಲ್ಲ…ಅದೇ ಥರ ಇದಾನೆ ‘ -ಎಂದು ಗಾಯತ್ರಿ ನುಡಿದರೂ , ಉಮಾ ಕುಸಿದವಳು ತಟ್ಟನೆ ಯಥಾಸ್ಥಿತಿಗೆ ಮರಳಲಿಲ್ಲ. ಮಂಜುಗಡ್ಡೆಯಂತೆ ಜಡಗಟ್ಟಿದ್ದ ಅವಳ ಶರೀರ ಮಿಸುಕಾಡಲಿಲ್ಲ. ಸದ್ಯ ಆ ಹುಡುಗ ತಮ್ಮ ವಿಶ್ವನಲ್ಲ ಎಂಬುದು ಖಾತ್ರಿಯಾದರೂ ಅವಳ ಉದ್ವಿಗ್ನತೆ ಇನ್ನೂ ಕಡಮೆಯಾಗಿರಲಿಲ್ಲ. ಹೃದಯದ ಬಡಿತ ಜೋರಾಗೇ ಇತ್ತು.
ಅಷ್ಟರಲ್ಲಿ ಮೋಟರ್ ಬೈಕ್ ಸ್ಟಾರ್ಟ್ ಆಗಿ ಭುರ್ರೆಂದು ಸದ್ದು ಮಾಡುತ್ತ ಮಾಯವಾಯಿತು. ಐದ್ಹತ್ತು ನಿಮಿಷಗಳೇ ಬೇಕಾಯಿತು ಉಮಾ ಸುಧಾರಿಸಿಕೊಳ್ಳಲು. ನಿಡಿದಾದ ದೊಡ್ಡ ಉಸಿರು ಹೊರ ಚೆಲ್ಲಿದಳು…..ಮನಸ್ಸು ಕೊಂಚ ನಿರಾಳವಾಗಿ ಸಮಾಧಾನ ಮೂಡಿತು. ಉಸಿರಾಟ ತಹಬದಿಗೆ ಬಂದರೂ ಅವಳ ಮುಖ ಇನ್ನೂ ಮ್ಲಾನವಾಗಿಯೇ ಇತ್ತು.
ಕಾರಣ ಅವಳಂತರಂಗದಲ್ಲಿ ಯೋಚನೆಗಳ ತಾಕಲಾಟ ಆರಂಭವಾಗಿತ್ತು. ಇದೇ ಕೆಲವು ಕ್ಷಣಗಳ ಹಿಂದೆ ತಾನೇ ಆಡಿದ ತೀಕ್ಷ್ಣ ಮಾತುಗಳು ಅವಳೆದೆಯನ್ನು ರೂಕ್ಷವಾಗಿ ಬಗೆಯುತ್ತಿದ್ದವು. ಮನಸ್ಸು ತುಮುಲಕ್ಕೀಡಾಗಿತ್ತು. ಇನಿತೂ ಯೋಚಿಸದೆ ಮನಸ್ಸಿಗೆ ಬಂದಂತೆ ಒದರಿಬಿಡುವ ತನ್ನ ನಾಲಗೆ-ಮನಸ್ಸುಗಳ ಬಗ್ಗೆ ಅವಳಿಗೇ ಹೇಸಿಗೆಯುಂಟಾಯಿತು. ಅವನು ಯಾರ ಮಗನೇ ಆಗಿರಲಿ ಅಥವಾ ಅವಳು ಯಾರ ಮಗಳೇ ಆಗಿರಲಿ, ತಾವುಗಳು ಕೊಂಚವೂ ಹಿಂದೆ ಮುಂದೆ ಯೋಚಿಸದೆ, ಪುಸಕ್ಕೆಂದು ದುಡುಕಿ ಮಾತನಾಡುವ ಪ್ರವೃತ್ತಿಯ ಬಗ್ಗೆ , ತನ್ನ ಹಾಗೂ ಗೆಳತಿಯರ ಈ ಕೆಟ್ಟಚಾಳಿಯ ಬಗ್ಗೆ ಅವಳಲ್ಲಿ ಪಶ್ಚಾತ್ತಾಪ ಮೊರೆಯಿತು.
2 comments
Very interesting story beautifully woven and nicely presented. Great author. Congratulations
Thank you very much Krishna for your encouraging words.