ಆಗ-
`ಸ್ವಲ್ಪ ದೂರ ಸರೀರಿ…ತುಂಬ ಸೆಖೆ…ನಿದ್ದೇನೇ ಬರ್ತಿಲ್ಲ…’
`ಛೀ ಕಳ್ಳೀ, ನೀನೇ ಮೈ ಮೇಲೆ ಕಾಲು ಹಾಕ್ಬಿಟ್ಟು, ಈಗ ನಾಟಕ ಆಡ್ತೀಯಾ’ –
ಕತ್ತಲಲ್ಲಿ ಅವನ ತುಂಟ ನಗು ತುಂಬಿದ ಮುಖ ಗೋಚರಿಸದಿದ್ದರೂ , ಅವನ ತುಂಟ ಕೈಗಳ ಚಲನೆ ಅವಳಿಗೆ ಕಚಗುಳಿ ಇಟ್ಟಂತಾಗಿ, ಕಿಸಕ್ಕನೆ ನಕ್ಕು ಅವನ ತೋಳ ತೆಕ್ಕೆಯಲ್ಲಿ ಸೇರಿಹೋದಳು. ಅವನು ಕಿವಿಯಲ್ಲಿ ಪಿಸುಗುಟ್ಟಿದ. `ಷ್…ಮೆಲ್ಲಗೆ…ಮಗು ಎದ್ದೀತು, ಆಮೇಲೆ ನಿಮ್ಮಾಸೆಯೆಲ್ಲ ನಾಳೆಗೆ ಪೋಸ್ಟ್‍ಪೋನ್’ ಎಂದವಳು ಅವನ ತುಟಿಯ ಮೇಲೆ ಕೈಯಿಟ್ಟಾಗ ಅವನು ಸದ್ದಿಲ್ಲದೆ ಅವಳನ್ನು ಆವರಿಸಿಕೊಂಡ.
ಇದು ದಿನ ನಿತ್ಯದ ಕಥೆ.
ಆ ಪುಟ್ಟ ಕೋಣೆಗೆ ಇದ್ದದ್ದು ಒಂದೇ ಚಿಕ್ಕ ಕಿಟಕಿ. ಗಡ ಗಡ ಸದ್ದು ಮಾಡುತ್ತ ಮೆಲ್ಲಗೆ ತಿರುಗುವ, ಅದೂ ಮನಸ್ಸು ಬಂದರೆ, ಇಲ್ಲವಾದರೆ ಸುಖಾಸುಮ್ಮನೆ ಮುನಿಸಿಕೊಂಡು ಕಾಲೂರಿ ನಿಂತುಬಿಡುವ ಆ ಅಡಕಾಸಿ ಟೇಬಲ್ ಫ್ಯಾನು, ಮದುವೆಯಲ್ಲಿ ಯಾರೋ ಉಡುಗೊರೆಯಾಗಿ ಕೊಟ್ಟಿದ್ದು. ಪ್ರಶಾಂತ ನಿದ್ದೆಯನ್ನು ಕುಲುಕಿ ಪರಪರನೆ ಕೆರೆಯುವ ಆ ಪೀಡೆಯನ್ನು ಎಷ್ಟೋಸಲ ಹೊರಗೆಸೆದು ಬಂದುಬಿಡಲೇ ಎನಿಸುವಷ್ಟು ಸಿಟ್ಟು ತರಿಸುತ್ತಿತ್ತು ಅವನಿಗೆ. ಮೈಯೊತ್ತುವ ಹತ್ತಿ ಕರಗಿದ ಆ ಹಾಸಿಗೆಯ ಮೇಲೆ ಹೊರಳಾಡುತ್ತ ಅವಳ ಗೊಣಗಾಟ ನಿಲ್ಲುತ್ತಲೇ ಇರಲಿಲ್ಲ.
ಬೆವರು ಕಕ್ಕುವ ಆ ಕೆಂಡಬೇಸಿಗೆಯ ದಿನಗಳಲ್ಲಿ ಬೆತ್ತಲ ಎದೆಯಲ್ಲಿ ಅಂಗಾತ ಮಲಗಿದ ಅವನು, ತನ್ನಷ್ಟು ಪಡಿಪಾಟಲು ಪಡುತ್ತಿಲ್ಲವೆಂದೆನಿಸಿ ಅವಳು ದೂರಿದಾಗ ` ನಿನಗ್ಯಾರು ಬೇಡ ಅಂದೋರು, ನೀನೂ ನನ್ನ ಹಾಗೆ ಹಾಯಾಗಿರು’ ಎಂದವನು ಆಹ್ವಾನ ನೀಡಿದಾಗ `ಥೂ…ಪೋಲಿ,…ಎಂಥ ಕಿಲಾಡಿಯಪ್ಪ ನೀವು…’ಎಂದವಳು ಹುಸಿಮುನಿಸು ತೋರಿದಾಗ,` ಸರಿ ಬಿಡು, ನೀನೇ ತಂದುಕೊಂಡ ಶಿಕ್ಷೆ…ಹಾಯಾಗಿರೋ ದಾರಿ ಗೊತ್ತಿಲ್ಲ ನಿನಗೆ ‘ ಎಂದು ಕಣ್ಣು ಮಿಟುಕಿಸುತ್ತಿದ್ದ.
ಕಾವಲಿಯಂತೆ ಕಾದುಹೋದ ಷೀಟ್ ತಾರಸಿಯ ಕೆನ್ನಾಲಗೆ, ತನ್ನ ಬಿಸಿ ಪ್ರವಾಹ ಝಳಪಿಸುತ್ತ ಬಡಪಾಯಿಗಳನ್ನು ನೆಕ್ಕುವ ಶಾಪವೋ, ಬೆವರ ಮುಸಲಧಾರೆಯೋ, ಹುಷ್ ಎಂಬ ನಿಡುಸುಯ್ಲೋ…ಕಿಷ್ಕಿಂಧೆ ಜಾಗದಲ್ಲಿ ಅಪ್ಪಿ ಹೊರಳುವ ಅನಿವಾರ್ಯವೋ…ಅಂತೂ ವಿಚಿತ್ರ ಸುಖದ ಸುಮ್ಮಾನ ಸುಳಿಗೆ ಸಿಲುಕಿದ ನಿದ್ರಾಮಾಯೆಯ ಕಾರಣ ಮಾತ್ರ ಅವ್ಯಕ್ತ.
ಅದೇ ಚಳಿಗಾಲದಲ್ಲಿ ಈ ಇಕ್ಕಟ್ಟೇ ವರದಾಯಿನಿ !….ಮೂಳೆ ನಡುಗಿಸುವ ಆ ಕಡು ಹಿಮದ ರಾತ್ರಿಗಳಲ್ಲಿ ಉಸಿರುಸಿರು ತೀಡುವ ಹಿತವಾದ ಬೆಚ್ಚನೆಯಾಸರೆ…ಬರೀ ತಣಿದ ಮುಲುಕುಗಳು….ಅಮಲು..ಗಡದ್ದು ನಿದ್ದೆ…ಸುಖದ ನರಳಾಟ…ಗೊಣಗಾಟವಿಲ್ಲದ ಮೌನ ಹೆಣೆದ ಭಾವಬಂಧುರ…ಜೋಗುಳದ ಮೆಲ್ಲುಲಿ. ಓಹ್ ಶಿಶಿರ ನೀನೇಕೆ ನಮ್ಮನೆಯ ಖಾಯಂ ಅತಿಥಿಯಾಗಬಾರದು ಎಂಬ ಬೇಡಿಕೆ ಆ ದಂಪತಿಗಳದು.
ಎದುರು ಬದುರು ಒಂದೇ ತಾಟಿನಲ್ಲಿ ಉಣ್ಣುವಾಗ ಅವಳ ಕೈ ಇವನ ಬಾಯಿಗೆ, ಇವನ ಕೈ ಅವಳ ಬಾಯಿಗೆ…ಹೊಟ್ಟೆ ತುಂಬಿತೋ ಬಿಟ್ಟಿತೋ ಪರಿವೆ ಇಲ್ಲ…ಪಾತ್ರೆ ಬರಿದಾಗುವವರೆಗೆ. ಗುಟುಕು ನೀರು, ಗೋಪಾದದ ಜಾಗ ಬ್ರಹ್ಮಾಂಡದಂತೆ….ತಿಂದು ಮಲಗಿದ್ದು, ಕುಡಿದು ತಣಿದದ್ದು , ಇಂದ್ರನರಮನೆಯ ಅಮರಾವತಿಯಂತೆ.
ಈಗ-
ಮನೆ ದೊಡ್ಡ ಮಹಲಾಗಿದೆ. ಕೆಳಗಡೆ ವಿಶಾಲವಾದ ಕೈತೋಟ. ಕಣ್ಣು ತುಂಬುವ ಹಸಿರು ಮಕಮಲ್ಲಿನಂಥ ಲಾನ್…ಪೋರ್ಟಿಕೋ…ಕಾರುಗಳು… ತೆರೆದ ದೊಡ್ಡ ವರಾಂಡ…ನಡುಮನೆ, ಸಿಟ್ ಔಟ್, ಊಟದ ಮನೆ, ದೇವರ ಮನೆ, ಅಡುಗೆಮನೆಯಲ್ಲದೆ, ನಾಲ್ಕು ವಿಶಾಲವಾದ ರೂಂಗಳು, ಅಟ್ಯಾಚ್ ಬಾತ್ ರೂಂ ಸೇರಿದಂತೆ. ಮಹಡಿಯ ಮೇಲೆ ಡ್ರಾಯಿಂಗ್ ರೂಂ ಬಿಟ್ಟು ಆರು ಕೋಣೆಗಳು. ಎಲ್ಲವೂ ಸುಸಜ್ಜಿತ. ಏರ್ ಕಂಡೀಷನ್ಡ್….ಕೋಣೆ ಕೋಣೆಗೂ ಫೋನುಗಳು, ಇಂಟರ್ ಕಾಂಗಳ ವ್ಯವಸ್ಥೆ- ವಿಶಾಲ ಬಾಲ್ಕನಿಗಳು, ಎಲ್ಲ ಒಪ್ಪ ಓರಣ.
ಅವನ ಅದೃಷ್ಟವೋ ಅಥವಾ ಅವನ ಕಡುಶ್ರಮದ ಫಲವೋ, ಅವಳು ಪೂಜಿಸಿದ ದೇವರ ವರವೋ, ಅಂತೂ ವರ್ಷಗಳು ಉರುಳಿದಂತೆ ಕಡ್ಡಿ ಗುಡ್ಡೆಯಾದಂತೆ ಅವನು ಮಾಡುತ್ತಿದ್ದ ಬಿಸಿನೆಸ್ ಅರಳಿ ಬ್ಯಾಂಕಿನಲ್ಲಿ ಹಣ ಬೆಳೆದಿತ್ತು, ಜೊತೆಗೆ ಸಮಾಜದಲ್ಲಿ ಅವನ ಪ್ರತಿಷ್ಠೆಯೂ. ಇಂದವನು ದೊಡ್ಡ ಉದ್ಯಮಿ!!..ಸಿರಿವಂತಿಕೆ ವೃದ್ಧಿಸಿದಂತೆ ಕಾಲ ಕೆಳಗೆ ಬಿದ್ದು ಒದ್ದಾಡುತ್ತಿದ್ದ ಸಮಯ ಈಗ ಅವನುದ್ದಕ್ಕೂ ಚಿಮ್ಮಿ, ಕೈಗಿರಲಿ ಕಣ್ಣಸೆಳವಿಗೂ ಮಿಂಚದಂತೆ ಅಗೋಚರಿಯಾಗಿ ಅವನಿಗೊಂದು ದೊಡ್ಡ ಸವಾಲಾಗಿ ಕೈಗೆಟುಕದೆ ಆಟವಾಡಿಸುತ್ತಿತ್ತು, ಉಣ್ಣಲೂ, ಉಡಲೂ ಬಿಡದಂತೆ.
ಉಪ್ಪರಿಗೆಯ ಎಲ್ಲ ಕೋಣೆಗಳಲ್ಲೂ ಹಕ್ಕಿ ತುಪ್ಪಳದಂಥ ಸುಪ್ಪತ್ತಿಗೆಯ ಹರವು ಅವನ ದಾರಿ ಕಾದಿದ್ದರೂ ಅವುಗಳಿಗೆ ವಿರಹ ತಪ್ಪಿದ್ದಲ್ಲ. ಹೊದೆಸಿದ ಮಗ್ಗುಲ ಹಾಸಿಗೆಯ ಮೇಲೆ ಇನಿತೂ ಸುಕ್ಕಿಲ್ಲ, ಮಡಿಸಿಟ್ಟ ಮೆತ್ತನೆಯ ದಪ್ಪ ರಗ್ಗುಗಳ ನೆರಿಗೆ ಬಿಡಿಸಿಲ್ಲ. ದಿಟ್ಟಿಸಿದರೆ ತಲೆ ತಿರುಗಿ ಬೀಳುವಷ್ಟು ರಭಸದಿಂದ ಗಿರಗಿರನೆ ಸುತ್ತುವ ಫ್ಯಾನ್ ಗಳ ಸ್ವಿಚ್‍ಗಳ ಮೇಲೆ ಬೆರಳ ಗುರುತಿಲ್ಲ.
ಡೈನಿಂಗ್ ಟೇಬಲ್ ಮೇಲೆ ಜೋಡಿಸಿಟ್ಟ ಥರಥರದ ಅಡುಗೆಗಳು ಆರಿ ತಣ್ಣಗಾಗಿವೆ. ಬೆರಳುಗಳ ಸ್ಪರ್ಶಕ್ಕೆ ತಪಿಸಿ ಕಾದು ಕುಳಿತ ಬೆಳ್ಳಿತಟ್ಟೆಗಳು ಹಾಗೇ ಧ್ಯಾನಸ್ಥವಾಗಿ ಜೂಗರಿಸಿವೆ. ಅವನ ದಾರಿ ಕಾದೂ ಕಾದು, ಸೋತು ಬೆಂಡಾಗಿ, ಹಸಿವೆ ಇಂಗಿದ ಹೊಟ್ಟೆಯನ್ನು ತಟ್ಟಿ ಎಬ್ಬಿಸುವುದನ್ನೇ ಮರೆತ ಆ ಅವಳು ಗೊಂಬೆಯಂತೆ ತಟಸ್ಥವಾಗಿ ಕುಳಿತಿದ್ದಾಳೆ.
ನಡುಮನೆಯ ಗೋಡೆಯ ಮೇಲೆ ಚಿನ್ನಲೇಪಿತ ಕಟ್ಟಿನ ಫೋಟೋದೊಳಗಿಂದ ಇಣುಕಿ ನೋಡುತ್ತ್ತ, ಕೀಟಲೆ ಮಾಡಿ ನಗುತ್ತಿರುವಂತೆ ಭಾಸವನ್ನುಂಟು ಮಾಡುವಂತಿದ್ದ ಪ್ರೀತಿಯ ಏಕೈಕ ಪುತ್ರ ಮನೋಹರ , ಎಂಜಿನಿಯರಿಂಗ್ ಮುಗಿಸಿ ಎಂ. ಎಸ್. ಮಾಡಲು ಅಮೇರಿಕಾ ಸೇರಿದ್ದ. ವರ್ಷದನಂತರ ಊರಿಗೆ ಬಂದ ಮಗನ ಮುಖವನ್ನೇ ದಿಟ್ಟಿಸುತ್ತ ಕುಳಿತ ಅವಳು, ಅಸಮಾಧಾನದಿಂದ ಮೂತಿ ಚೂಪಗೆ ಮಾಡಿ ಗಂಡನ ಬಗ್ಗೆ ಚಾಡಿ ಹೇಳುತ್ತಾಳೆ, ಸ್ವಗತದಲ್ಲಿ ಅಲವತ್ತುಕೊಳ್ಳುತ್ತಾಳೆ :
`ನೋಡ್ದ್ಯೇನೋ ಮನು ನಿಮ್ಮಪ್ಪನ ದೊಡ್ಡಸ್ತಿಕೇನಾ?!…ಮನೇಲಿ ತಮಗೊಬ್ಳು ಹೆಂಡ್ತೀ ಕಾದಿರ್ತಾಳೇನ್ನೋ ಕಿಂಚಿತ್ ಪರಿಜ್ಞಾನಾನೂ ಬೇಡವೇನೋ…ಅದೇನು ಕೆಲಸವೋ ಅಂಥ ತಲೇ ಹೋಗೋಂಥದ್ದು?!…ನಿಜ ಹೇಳ್ಬೇಕೂಂತಂದ್ರೆ ಸರ್ಯಾಗಿ ನಾನವರ ಮುಖ ನೋಡಿ ಎಷ್ಟು ಕಾಲವಾಯ್ತೋ, ಇನ್ನು ಹತ್ತಿರ ಕೂತು ಮಾತಾಡೋದು ಎಲ್ಲಿಂದ ಬಂತು?!…ಒಂದೇ ಸೂರಿನಡಿ ನಾವು ಬದುಕ್ತಿದ್ರೂ ಮಾತೂಕತೆಗಳೆಲ್ಲ ಬರೀ ಫೋನಿನಲ್ಲೇ ಕಣೋ….ಹೀಗಾದ್ರೆ ಹೇಗೋ….ಟೈಂ ಟೈಮಿಗೆ ಸರಿಯಾಗಿ ಊಟ-ನಿದ್ದೆ ಬೇಡವೇನೋ ಆ ಕೋಟ್ಯಾಧಿಪತಿ ಅನ್ನಿಸ್ಕೊಂಡ ಪ್ರಾಣೀಗೆ…ಎಷ್ಟಿದ್ರೇನು ಬಂತು, ಅನುಭವಿಸೋ ಯೋಗವಿಲ್ಲ…ಹೂಂ…’ – ನಿಟ್ಟುಸಿರು ಮಾಲೆ ಮಾಲೆಯಾಯ್ತು.
ಮಹಾರಾಣಿಯ ಅಂತ:ಪುರದಂಥ ವೈಭವೋಪೇತ ಆಲಂಕಾರಿಕ ಆ ಕೋಣೆಯ ವಿಶಾಲವಾದ ಡಬ್ಬಲ್ ಬೆಡ್ಡಿನ ಆ ತುದಿಯಿಂದ ಈ ತುದಿಯವರೆಗೂ ಅವ್ಯಾಹತ ಹೊರಳಾಡುತ್ತಿದ್ದ ಅವಳ ಹೃದಯದ ಕಿಚ್ಚು, ಅವಳ ಇಡೀ ದೇಹವನ್ನು ವ್ಯಾಪಿಸಿ ಸುಡಲಾರಂಭಿಸಿದಾಗ, ವಿಲವಿಲನೆ ಹೊರಳಾಡುತ್ತಿದ್ದ ಅವಳನ್ನು ಗಮನಿಸಲು ಅಲ್ಲಿ ಯಾರೂ ಇರಲಿಲ್ಲ. ಅವಳ ಒಂಟಿತನದ ಖಿನ್ನತೆ, ಉದ್ವಿಗ್ನತೆಯ ಧಗೆ ಕೋಣೆಯ ನಾಲ್ಕೂ ಗೋಡೆಗಳಿಗೆ ಬಡಿಬಡಿದು ಝೇಂಕರಿಸುತ್ತ, ಅವಳ ನೋವಿನ ನಿಟ್ಟುಸಿರು ಉಮ್ಮಳಿಸಿ, ದುಃಖ ಬಲೆಬಲೆಯಾಗಿ ಹೆಣೆದುಕೊಳ್ಳುತ್ತ ಅವಳ ಕೊರಳಮುಕಿ ಉಸಿರುಗಟ್ಟಿಸಿತು.
******************