Image default
Short Stories

ಬೆಳಕಿಂಡಿ

ಗೇಟಿನ ಸಪ್ಪುಳ ಕೇಳಿ ಕತ್ತಲ ಕೋಣೆಯಲ್ಲಿ ವಿಷಣ್ಣಳಾಗಿ ಒಂಟಿಯಾಗಿ ಕುಳಿತಿದ್ದ ರೇಣುಕಾ ಮಂಡಿಯ ನಡುವೆ ಹುದುಗಿಸಿದ್ದ ಮುಖವನ್ನು ಎತ್ತಿ, ಕೂತಲ್ಲಿಂದಲೇ ಕಿಟಕಿಯ ತೆರೆಯನ್ನು ಸರಿಸಿ ಹೊರಗೆ ನೋಡಿದಳು.

ಒಮ್ಮೆಲೆ ಅವಳ ಮೊಗವು ನಳನಳಿಸಿತು. ಕೈಕಾಲಿಗೆ ಅದೆಲ್ಲಿಂದ ಶಕ್ತಿ ಬಂದಿತ್ತೋ ? ಛಿಟಿಲ್ಲನೆ ಮೇಲೆದ್ದು ನಿಂತು ಕೆದರಿದ್ದ ಕೂದಲನ್ನು ತಿದ್ದಿಕೊಂಡು, ಎದುರಿಗೆ ಗೋಡೆಯ ಮೇಲಿದ್ದ ಕನ್ನಡಿಯತ್ತ ಬಾಗಿದರೆ ಅವಳ ಪ್ರತಿಬಿಂಬವು ನಾಪತ್ತೆಯಾಗಿತ್ತು. ಒಂದರೆ ಘಳಿಗೆ ಗಾಬರಿ ಆಗಿತ್ತವಳಿಗೆ. ತತ್‍ಕ್ಷಣ, ಮುಸ್ಸಂಜೆ ಜಾರಿ ರಾತ್ರಿ ಗಾಢವಾಗುತ್ತಾ ಇರುಳು ಬಲಿಯುತ್ತಾ ಇರುವುದನ್ನು ನೆನೆದು- ‘ಓ, ಈಗ ಗಂಟೆ ಎಷ್ಟಾಗಿರಬಹುದು?’ ಎಂದುಕೊಳ್ಳುತ್ತಲೇ ಕೈಗಡಿಯಾರ ನೋಡಿಕೊಂಡವಳು, ತನ್ನ ಮರುಳಿಗೆ ತಾನೇ ನಕ್ಕು, ತಡವರಿಸುತ್ತಾ ಸ್ವಿಚ್ ಅದುಮಿದಳು.

ಅಷ್ಟರಲ್ಲಿ ಮುಂಬಾಗಿಲಲ್ಲಿ ಬಂದು ನಿಂತ ಪ್ರಮೋದನ ಕಂಚುಕಂಠವಾಗಲೇ ವರಾಂಡ ದಾಟಿ ನಡುಮನೆ ಪ್ರವೇಶಿಸಿತ್ತು.“ಪ್ರಸಾದ್ ಇದಾನೇನಮ್ಮ ?”ಕಾವೇರಮ್ಮನವರ ಹಾರ್ದಿಕ ನಗೆ ಅವನನ್ನು ಸ್ವಾಗತಿಸಿತು. ಗೆಳೆಯನ ‘ಅಮ್ಮ’ ಪ್ರಮೋದನಿಗೂ ‘ಅಮ್ಮ’ ಆಗಿದ್ದರು. ಅಷ್ಟು ಆಪ್ತತೆ, ಸಲುಗೆ, ವಿಶ್ವಾಸ ಅವನ ಹಾಗೂ ಪ್ರಸಾದನ ಕುಟುಂಬದ ನಡುವೆ.ವಾಡಿಕೆಯಂತೆ ಪ್ರಮೋದ್, ತನ್ನ ಆಗಮನವನ್ನು ಸಾರುವ ಪ್ರಶ್ನೆಗಳ ಮಾಲೆಯನ್ನು ಬಿಚ್ಚುತ್ತ ನಡುಮನೆಯ ಸೋಫಾದ ಮೇಲೆ ಮೈಚೆಲ್ಲಿದ. ಸುತ್ತ ಮೌನ ಇಟ್ಟಾಡುವುದನ್ನು ಗಮನಿಸಿದವನೇ ಮೇಲೆದ್ದು ಟಿ.ವಿ. ಹಾಕುತ್ತ “ಅಮ್ಮಾ ಪ್ರಸಾದ್ ಮನೇಲಿ ಇದ್ದ ಹಾಗಿಲ್ಲ!… ಚಿಲ್ಟುಪಲ್ಟುಗಳ ಜಗಳ, ಕರಾಟೆಯ ವರಸೆ ಹಾಗೂ ಪ್ರಸಾದನ ಬಾಸಿಣಿಯವರ ಧಾವಂತದ ಓಡಾಟ ಕಾಣ್ತಿಲ್ಲಮ್ಮ! ಎಲ್ಲಿ ಎಲ್ಲಾ ಹೊರಗೆ ಹೋಗಿದ್ದಾರೇನು?’ ಎಂದು ಕೇಳುತ್ತ ಅವನು ಕೈಲಿ ಟಿ.ವಿ.ಯ ರಿಮೋಟ್ ಹಿಡಿದು ಟಿ.ವಿ.ಗೆ ಎದುರಾಗಿ ಕುಳಿತ.

ಕಾವೇರಮ್ಮನವರು ಅವನ ಮುಂದೆ ಕಾಫಿಯ ಲೋಟ ಹಿಡಿದು- “ಆಫೀಸ್ನಿಂದ ಬರಕ್ಕಿಲ್ಲ. ಆಗಲೇ ಕಾದಿರತ್ವೆ- ಒಂದು ಘಳಿಗೆ ಪಾಪ ರೆಸ್ಟ್ ಬೇಡವಾ ಅವನಿಗೆ?… ಅದಕ್ಕೆ ಸರಿಯಾಗಿ ಇವಳೂ ಸೀರೆ ಉಟ್ಕೊಂಡು ಸಿದ್ಧವಾಗಿರ್ತಾಳೆ. ಕಾಂಪ್ಲೆಕ್ಸೂ… ಹೋಟ್ಲು ಅಂತ ಹೊರಗೆ ಸುತ್ತೋಕ್ಕೆ”ಸಿಡಿಮಿಡಿಗೊಂಡು ನುಡಿದರಾಕೆ.

“ಹೋಗ್ಲಿ ಬಿಡೀ ಅಮ್ಮ… ಪಾಪ ಅವರಿಗೂ ಬೆಳಗ್ಗಿನಿಂದ ಮನೇಲಿದ್ದೂ ಇದ್ದು ಬೇಜಾರಾಗಿರುತ್ತೆ… ಮಕ್ಕಳಿಗೂ ರಜ ಬಂದಿದೆ. ಒಂದ್ವಾರ ರಜ ಹಾಕಿ ಈ ಮಾರಾಯ ಅಂತೂ ಊರೂ-ಪಾರೂ ಸುತ್ತಿಸೋನಲ್ಲ. ಸದಾ ಕೆಲಸದ ನೆಪ. ಹೋಗ್ಲಿ ಬಿಡಿ… ಈಗ ನಿಮ್ಮ ತಲೇನಾ ತಿನ್ನಕ್ಕೆ ನಾನು ಬಂದಿದ್ದೀನಲ್ಲ… ಹೂಂ ಹೇಳಿ ಏನು ವಿಶೇಷ…? ಇವತ್ತು ಅಡುಗೆ, ತಿಂಡಿ ಏನೇನು ಮಾಡಿದ್ರೀ ?”ಪ್ರಮೋದ್ ತನ್ನ ಎಂದಿನ ಮಾತಿನ ಸರಕು ಬಿಚ್ಚಿದ.

ಕಾವೇರಮ್ಮನವರ ಮುಖದಲ್ಲಿನ ಗಂಟುಗಳು ಇನ್ನೂ ಸಡಿಲವಾಗಿರಲಿಲ್ಲ. “ನಂಗೇನು ಮಗ-ಸೊಸೆಯ ಮೇಲೆ ಹೊಟ್ಟೆಕಿಚ್ಚಿಲ್ಲಪ್ಪಾ… ಮಾರಾಯರಾಗಿ ಎಲ್ಲಾದ್ರೂ ತಿರುಗಿಕೊಂಡು ಬರಲಿ. ಚಿಕ್ಕಮಗ-ಸೊಸೇನೂ, ಮೊಮ್ಮಗೂನ ಕರ್ಕೊಂಡು ಬಂದು ಒಂದು ಘಳಿಗೆಕಾಲ ಇದ್ದು ಹೋದರು. ಅವರು ಹಾಯಂತ ಬೇರೆ ಇಲ್ವೇ? ನನ್ನದು ಯಾವ ಆಕ್ಷೇಪಣೆ ? ನನಗಿರೋ ಚಿಂತೆಯೆಲ್ಲಾ ನಮ್ಮ ರೇಣೂದೊಬ್ಬಳದೇ ನೋಡಪ್ಪ” – ಎನ್ನುವಾಗ ಆಕೆಯ ಕಂಠ ಗದ್ಗದವಾಯಿತು.ರೇಣುಕಾಳ ವಿಚಾರ ಪ್ರಮೋದನಿಗೆ ತಿಳಿಯದ್ದೇನಲ್ಲ. ಅವಳ ಹೆಸರು ಕಿವಿಗೆ ಬಿದ್ದೊಡನೆ ಅವನು ಟಿ.ವಿ. ಆರಿಸಿ “ಅಂದ್ಹಾಗೆ ಎಲ್ಲವಳು?” ಎನ್ನುತ್ತ ಅಡುಗೆ ಮನೆಯೊಳಗೆ ಇಣುಕಿದ, ಆಚೀಚೆ ಕೋಣೆಗಳಲ್ಲಿ ನೋಡಿ, ಹೊರಗಿನ ಕೋಣೆಯಲ್ಲಿ ಬೆಳಕು ಕಂಡು, “ಓ ಇಲ್ಲಿದ್ದಾಳಾ ರೇಣು?” ಎಂದು ನಕ್ಕು ತಾನೇ ಅತ್ತ ನಡೆದ.

ಬಾಗಿಲುದ್ದಕ್ಕೆ ನಿಂತಿದ್ದ ಪ್ರಮೋದನನ್ನು ಕಂಡು, ಮುಖದ ಮೇಲೆ ನಗುವನ್ನು ಒತ್ತಾಯದಿಂದ ಎಳೆದು ತಂದು, “ಈಗ ಬಂದ್ರಾ?” ಎಂದು ಕೇಳಿದಳು ರೇಣುಕಾ, ತನ್ನ ಪ್ರಶ್ನೆ ಅರ್ಥಹೀನ ಎಂದು ತಿಳಿದೂ.“ಹಲೋ ರೇಣು ಏನ್ಮಾಡ್ತಿದ್ದೆ ಒಬ್ಬಳೇ ರೂಂನಲ್ಲಿ…? ಮನೇ ಹತ್ರಾನೇ ಲೈಬ್ರರಿ ಇದೆ. ಹೋಗಿ ಒಂದೆರಡು ಒಳ್ಳೆ ಪುಸ್ತಕಗಳನ್ನು ತಂದು ಓದಬಾರ್ದಾ?…ಅಂದ್ಹಾಗೆ, ಮೊನ್ನೆ ನಾನು ತಂದ್ಕೊಟ್ಟ ಕಾದಂಬರಿನ ಓದಾಯ್ತಾ?” ಎನ್ನುತ್ತ ಕುತ್ತಿಗೆಯ ಮೇಲೆ ಮೂಡಿದ್ದ ಬೆವರಹನಿಗಳನ್ನು ಕರ್ಚೀಫಿನಿಂದ ಒತ್ತಿಕೊಳ್ಳುತ್ತ ‘ಅಬ್ಬಾ! ಏನು ಧಗೆ ಇಲ್ಲಿ… ಅದ್ಹೇಗೆ ಇಲ್ಲಿ ಇಷ್ಟು ಹೊತ್ನಿಂದ ಅಡಗಿಕೊಂಡು ಕೂತಿದ್ದೀಯೋ? ಉಸಿರುಗಟ್ಟಿಸತ್ತೆ, ಬಾ ಹೊರಗಡೆ… ಜಗುಲಿಯ ಮೇಲೆ ಕೂತು ಮಾತಾಡೋಣ”ಎಂದವನೇ ಅವಳ ಪ್ರತಿಕ್ರಿಯೆಗೂ ಕಾಯದೆ ಮನೆಯ ಮುಂಬಾಗಿಲ, ಆಚೀಚೆ ಪಕ್ಕದಲ್ಲಿದ್ದ ಸಿಮೆಂಟ್ ಜಗುಲಿಯ ಮೇಲೆ ಹೋಗಿ ಕುಳಿತ.

ಅವನು ನುಡಿದಷ್ಟು ಸಲೀಸಾಗಿ ಅವಳ ಪಾದಗಳು ಚಲಿಸಲಿಲ್ಲ. ಭಾರವಾದ ಮನಸ್ಸು ಹೆಜ್ಜೆಗಳನ್ನು ನೆಲಕ್ಕೆ ಒತ್ತಿಹಿಡಿದಿತ್ತು. ಇದೆಲ್ಲವೂ ಪ್ರಮೋದ ತನ್ನನ್ನು ಸುಪ್ರಸನ್ನಗೊಳಿಸಲು ಆಡುವ ಮಾಮೂಲು ಮಾತಿನ ಕಾರಂಜಿ ಎಂಬುದನ್ನು ಚೆನ್ನಾಗಿ ಬಲ್ಲಳಾದರೂ ಅವಳು, ಅವನ ಲವಲವಿಕೆಯ ಮಾತಿನ ಸವಿಯಿಂದ ವಂಚಿತಳಾಗಲೊಲ್ಲದೆ ನಿಧಾನವಾಗಿ ಅವನಿದ್ದತ್ತ ಹೆಜ್ಜೆ ಎಳೆದಳು.ಪ್ರಮೋದ ಬಂದಾಗ ಅವಳಿಗೆ ನಾಲ್ಕು ಸಾಂತ್ವನದ ನುಡಿ, ಉತ್ಸಾಹ ತುಂಬಿಸುವ ಯತ್ನ ಎಂಬುದನ್ನರಿತಿದ್ದ ಕಾವೇರಮ್ಮನವರು ಸದ್ದಿಲ್ಲದೆ ಒಳಸರಿದರು.

ಪ್ರಮೋದ ತಡೆಯಿರದ ಮಾತಿಗಾರಂಭಿಸಿದ. ರೇಣುಕಾಳ ಮೊಗದಲ್ಲಿ ಉತ್ಸಾಹದ ಕಳೆ ಮೆಲ್ಲನೆ ತೆವಳತೊಡಗಿತು. ಅವನ ಭರವಸೆ ತುಂಬುವ ಮಾತುಗಳಲ್ಲಿ ಅವಳಿಗದೇನೋ ಅವ್ಯಕ್ತ ಸಮಾಧಾನ- ಧೈರ್ಯ.’ಪ್ರಸಾದಣ್ಣ ಹೆಂಡ್ತೀ-ಮಕ್ಕಳ ಜೊತೆ ಫಿಲ್ಮಿಗೆ ಹೋದ”- ಎಂದು ಮೆಲ್ಲನೆ ತುಟಿ ತೆರೆದಳು.“ಯಾಕೆ ರೇಣು, ನೀನೂ ಕೂಡ ಅವರ್ಜೊತೆ ಹೋಗ್ಬಾರ್ದಿತ್ತಾ? ಸದಾ ಮನೇಲಿ ಕೂತು ಬೋರ್ ಅನ್ನಿಸಲ್ವಾ?”“ನಾನು ಯಾರ ಜೊತೆ ಹೋಗಬೇಕಾದೋಳು ಅಂತ ಗೊತ್ತಿದ್ದೂ ಈ ಪ್ರಶ್ನೆಯೇ?” ಎಂದು ಮನಸ್ಸಿನಲ್ಲೇ ಅಂದುಕೊಂಡವಳ ಕಣ್ಣಾಲಿಯು ನೀರಿನೊಳಗೆ ಅಲುಗಿದಾಗ, ಅವಳು ಮತ್ತಷ್ಟು ತಲೆಬಾಗಿಸಿದಳು, ಅವನದನ್ನು ಗಮನಿಸದಂತೆ.“ಹೀಗೆ ನೀನು ಮನೇಲೇ ಕೂತು, ಸದಾ ಹೀಗೆ ಯೋಚ್ನೆ ಮಾಡ್ತಾ ಇದ್ರೆ, ನಿಂಗೆ ಹುಚ್ಚುಹಿಡಿಯುತ್ತಷ್ಟೇ. ಯೂ ನೀಡ್ ಎ ಛೇಂಜ್”- ಎಂದವನು ತತ್‍ಕ್ಷಣ ತನ್ನ ಕತ್ತನ್ನು ಅತ್ತ ಹೊರಳಿಸಿದ, ಅವಳ ವಿಷಾದದ ನೋಟವನ್ನು ಎದುರಿಸಲಾರದೆ.

“ಐ ಮೀನ್… ನಿನ್ನ ಮನಸ್ಸನ್ನು ಸ್ವಲ್ಪ ಬೇರೆ ಕಡೆ ತಿರುಗಿಸೋ ಪ್ರಯತ್ನ ಮಾಡಬೇಕು ರೇಣು… ನಾಳೆ ಆಪ್ಲಿಕೇಶನ್ ತಂದ್ಕೊಡ್ತೀನಿ, ಎಂ.ಎ. ಪರೀಕ್ಷೆಗಾದ್ರೂ ಕಟ್ಟು… ನಾನೂ ಕೂಡ ನಿನ್ನ ಪ್ರಸಾದಣ್ಣನ ಥರಾನೇ ಅಲ್ವಾ? ನನ್ನಲ್ಯಾಕೆ ನೀನು ಬಿಚ್ಚುಮನದಿಂದ ಮಾತಾಡೋ ದಿಲ್ಲ- ಯಾಕೆ ಸಂಕೋಚವೇ?”ರೇಣುಕಾಳ ಮೌನ ನೋಟವೇ ಅವನಿಗೆ ಉತ್ತರವಾಯಿತು.“ಪ್ಲೀಸ್ ರೇಣು, ನೀನು ಮೊದಲಿನ ರೇಣು ಆಗಬೇಕಾದರೆ ನಾನು ಏನು ಮಾಡಬೇಕು ಹೇಳು… ಅತ್ತಿತ್ತ ಭುಜಗಳ ಮೇಲೆ ಮೋಟು ಜಡೆಗಳನ್ನು ಚಿಮ್ಮಿಸಿಕೊಂಡು ಓಡಿಬರುತ್ತಿದ್ದ ಆ ಧಾಷ್ಟೀಕ ಹುಡುಗಿಯ ಅರಳು ಹುರಿದಂತಹ ಮಾತುಗಳೆಲ್ಲಿ? ಅದು ಬೇಕು ಇದು ಬೇಕು ಅಂತ, ಮೈಕೈ ಗುದ್ದಿ ಹಟವನ್ನು ಮಾಡುತ್ತಿದ್ದ ಆ ತುಂಟ ಹುಡುಗಿ ಎಲ್ಲಿ ಕಳೆದು ಹೋದಳು ರೇಣು? ಇಲ್ಲ… ನಾನು ಹಿಂದಿನ ಆ ಘಾಟಿ ರೇಣೂನ ನೋಡಬೇಕು. ಖಂಡಿತಾ… ಐಯಾಮ್ ಈಗರ್ ಟು ಸೀ ಹರ್”ಪ್ರಮೋದನ ಭಾವುಕ ನುಡಿ ಕೇಳುತ್ತಿದ್ದ ಹಾಗೆ ಅವಳ ಗಂಟಲುಬ್ಬಿ ಬಂತು. ಮುಖದ ಮೇಲೆ ಅದೇತಾನೇ ಸುರುಳಿ ಬಿಚ್ಚಲು ಯತ್ನಿಸುತ್ತಿದ್ದ ಮಂದಹಾಸ ಥಟ್ಟನೆ ಮುದುರಿಕೊಂಡು ಅವಳು ವಿಷಣ್ಣಳಾದಳು.ಒಂದರೆ ಘಳಿಗೆ ಮಾತಿನ ಧಾಟಿಯನ್ನು ಬೇರೆಡೆಗೆ ತಿರುಗಿಸಲು ಅವಳು “ನನ್ನ ವಿಷಯ ಹಾಗಿರಲಿ ಪ್ರಮೋದ್, ಇಷ್ಟೆಲ್ಲ ಉಪದೇಶ ಹೇಳೋ ನೀವು ಯಾಕೆ ಎಲ್ಲರ ಹಾಗೆ ಮದುವೆ ಮಕ್ಳು, ಸಂಸಾರ-ಅಂತ…” ತಟಕ್ಕನೆ ಮಾತನ್ನು ಕಡಿದಳು. ತನ್ನ ನುಡಿ ಅತಿರೇಕವಾಯಿತೇ ಎಂದು ಹಿಂಜರಿದು.ಆದರೆ ಪ್ರಮೋದನ ಮುಖಮುದ್ರೆ ಕೊಂಚವೂ ವ್ಯತ್ಯಾಸವಾಗಲಿಲ್ಲ. ಬದಲಾಗಲಿಲ್ಲ ಸಣ್ಣ ನಗುವಿನ ಎಳೆ.“ನಾನೀಗ ಸಂತೋಷವಾಗಿಲ್ಲ ಅಂತ ಯಾರು ಹೇಳಿದೋರು ನಿನಗೆ? ಸದ್ಯ ಅವುಗಳ ರಗಳೆ ಯಾವುದೂ ಇಲ್ಲದೆ ಹಾಯಾಗಿದ್ದೀನಿ. ನೋಡು ನನಗೀಗ ನಲವತ್ತು ವರ್ಷ ಅಂತ ಯಾರು ತಾನೇ ಹೇಳಲಿಕ್ಕೆ ಸಾಧ್ಯ?… ನನ್ನ ಮನಸ್ಸು ಯಾವ ಬಿರುಗಾಳಿಗೂ ಸಿಕ್ಕದೆ ಪ್ರಶಾಂತವಾಗಿದೆ- ಈ ರೀತಿಯ ಬದುಕು ನನಗೆ ಖುಷಿಯನ್ನು ಕೊಟ್ಟಿದೆ..ಮದುವೆಗೆ ನನ್ನ ದೊಡ್ಡ ನಮಸ್ಕಾರ’ ಎಂದೇ ಲೆಕ್ಚರ್ ಆರಂಭಿಸುತ್ತಿದ್ದ ಅವನ ಭಾಷಣವನ್ನು ಮತ್ತೆ ಕೇಳಲಿಚ್ಚಿಸದ ರೇಣುಕಾ ಮಾತು ಮುಂದುವರಿಸದೆ ಮೇಲೆದ್ದಳು.

ಬಾಗಿಲವಾಡಕ್ಕೆ ಒರಗಿನಿಂತು ಅವರಿಬ್ಬರ ಸಂಭಾಷಣೆಯನ್ನು ಮೌನವಾಗಿ ಆಲಿಸುತ್ತ ನಿಂತಿದ್ದ ಕಾವೇರಮ್ಮ ದೀರ್ಘವಾಗಿ ನಿಡುಸುಯ್ದರು.

ರೇಣು ಅವರ ಬದುಕಿನ ಆಶಾಕಿರಣ. ಇಬ್ಬರು ಗಂಡು ಮಕ್ಕಳನಂತರ ತುಂಬಾ ಅಂತರದಲ್ಲಿ ಹುಟ್ಟಿದ ಮುದ್ದಾದ ಹೆಣ್ಣು ಕೂಸು. ಅಪಾರ ಅಕ್ಕರಾಸ್ಥೆಯಿಂದ ಬೆಳೆಸಿದ ಹೆಣ್ಣು ಮಗುವಿದು. ಮನೆಯವರೆಲ್ಲರ ಕಣ್ಮಣಿ. ಉತ್ಸಾಹವೆರಚುತ್ತಾ ಚಟಪಟ ಚಟುವಟಿಕೆಯಿಂದ ಮನೆಯೆಲ್ಲಾ ಓಡಾಡಿಕೊಂಡಿದ್ದ ಹುಡುಗಿ. ವಿದ್ಯೆ-ಯೌವ್ವನ ತನಿಯಾಗಿ ಬೆರೆತ ಅವಳನ್ನು ಮದುವೆಯಾಗಲು ಮುಂದೆ ಬಂದವರೆಷ್ಟೋ.ಮನೆಯವರೆಲ್ಲ ಅಳಿಯನ ಗುಣಗಳನ್ನೆಲ್ಲ ಪಟ್ಟಿಮಾಡಿ ಅವನು ಹೀಗೇ ಇರಬೇಕೆಂದು ಅವನ ಬೊಂಬೆಯನ್ನೇ ಕಡೆದು ಇಟ್ಟಿದ್ದರು. ಕಡೆಗೂ ಅವರೆಲ್ಲರಿಗೂ ಒಪ್ಪಿಗೆಯಾದ ಎಂ.ಟೆಕ್. ಫಾರಿನ್ ರಿಟರ್ನ್ಡ್, ಕೈತುಂಬ ಸಂಬಳ ತರುವ ದಿನಕರ್, ರೇಣುಕಾಳ ಕೈ ಹಿಡಿದಿದ್ದ.ಈ ಮೊದಲು ಪ್ರಸಾದನ ಮದುವೆಯಾಗಿ ಸೊಸೆ ಮನೆತುಂಬಿದ್ದಳು. ಮಗಳೂ ಗಂಡನ ಮನೆ ಸೇರಿದ ನಂತರ, ಕಿರಿಮಗ ಶ್ರೀಮಂತರ ಮಗಳ ಕೈ ಹಿಡಿದು ಅಲ್ಲೇ ಮನೆಯಳಿಯನಾಗಿಯೇ ಉಳಿದ. ಒಟ್ಟಿನಲ್ಲಿ ಎಲ್ಲವೂ ಹಿತವಾಗಿಯೇ ನಡೆದಿತ್ತು.

ಒಂದು-ಎರಡು-ಮೂರು-ವರ್ಷಗಳು…ಮದುವೆಯಾಗಿ ಐದಾರು ವರ್ಷಗಳು ಸಂದರೂ ಮಗಳಿಗೆ ಮಕ್ಕಳಿಲ್ಲವೆಂಬ ಕೊರತೆಯೊಡನೆ ಅವಳ ಉತ್ಸಾಹ, ಲವಲವಿಕೆಗಳು ದಿನೇದಿನೇ ಸೋರಿ ಹೋಗುತ್ತಿವೆ ಎನಿಸಿತ್ತು ಹೆತ್ತವರಿಗೆ. ಚಟುವಟಿಕೆಯ ಚಿಲುಮೆಯಾಗಿದ್ದವಳು ಬರುಬರುತ್ತ ಮಿತಭಾಷಿ, ಮೌನಗೌರಿಯಾಗಿದ್ದಳು ರೇಣು.ತಾಯಿ ಮಗಳನ್ನು ಒತ್ತೊತ್ತಿ ಕೇಳಿದಾಗ ಅವಳೆದೆಯಲ್ಲಿ ಹೆಪ್ಪುಗಟ್ಟಿದ್ದ ನೋವಿನ ಪರ್ವತ ಕರಗಿಹೊರಬಂದಿತ್ತು.

ಆಗರ್ಭ ಶ್ರೀಮಂತನಾದರೂ ಬಾಲ್ಯದಲ್ಲೇ ಅನಾಥನಾಗಿ, ದಾದಿಯ ಆರೈಕೆಯಲ್ಲೇ ಬೆಳೆದಿದ್ದ ದಿನಕರ ಬುದ್ಧಿವಂತ, ಕೆಲಸದಲ್ಲಿ ನಿಪುಣನಾಗಿದ್ದರೂ ಬಾಳಿನಪುಟಗಳಲ್ಲಿ ಶುಷ್ಕ ಮನೋಭಾವದ ನೀರಸನಾಗಿದ್ದ. ಬಾಲ್ಯದಿಂದಲೂ ಪ್ರೀತಿಯ ಹನಿಗಳಿಂದ ಅರಳದಿದ್ದ ಅವನ ಹೃದಯ ಸೆಟೆದುಕೊಂಡೇ ಇತ್ತು. ಅವನ ಮನಸ್ಸಿನ ಪದರಗಳು ಮೃದು-ಮಧುರ ಭಾವನೆ ಪಲುಕುಗಳ ಪರಿಚಯವೇ ಇಲ್ಲದೆ ಸ್ಪಂದನ ಕಳೆದುಕೊಂಡು ಬಂಡೆಗಲ್ಲಿನಂತಾಗಿತ್ತು.ಕನಸನ್ನೇ ಮೈವೆತ್ತು ಅವನ ಬಾಳನ್ನು ಪ್ರವೇಶಿಸಿದ್ದ ಭಾವುಕ ಹೆಣ್ಣು ರೇಣುಕಾಳ ಆಸೆ-ಆಕಾಂಕ್ಷೆ, ಬಯಕೆಗಳು ಅವನಿಗೆ ವಿಚಿತ್ರವಾಗಿಯೇ ಕಂಡವು. ನಾಟಕೀಯ, ಬಾಲಿಶ ಎನಿಸಿ ಸಿಡಿಮಿಡಿಗೊಂಡ. ಅವಳ ಧ್ವನಿಗೆ ಪ್ರತಿಧ್ವನಿ ಅವನಾಗಿರಲಿಲ್ಲ. ಭಾವನೆಗಳ ವಿಭ್ರಮೆಯಲ್ಲಿ ತೇಲಾಡುತ್ತಿದ್ದ ಅವಳಿಗೆ ಗಂಡನ ರಸಹೀನ, ಒಣ, ಯಾಂತ್ರಿಕ ನಡವಳಿಕೆಗಳು ದಿಗ್ಭ್ರಮೆ ತರಿಸಿದವು!! ಅವಳು ಹೊತ್ತು ತಂದಿದ್ದ ಕನಸಿನ ಗೊಂಬೆಗಳು ನುಚ್ಚುನೂರಾಗಿದ್ದವು. ರಮ್ಯ-ಪ್ರಣಯ ಕಾದಂಬರಿ, ಚಲನಚಿತ್ರಗಳ ಕನಸಿನ ಪ್ರತಿಮೆ ಆಗಿದ್ದ ರೇಣುಕಾ ಒಮ್ಮೆಲೆ ಕಲ್ಪನಾ ಸುಖಸಾಮ್ರಾಜ್ಯದಿಂದ ದುಡುಮ್ಮನೆ ಕೆಳಗುರುಳಿ ಬಿದ್ದಿದ್ದಳು.ಉಂಡುಟ್ಟು ಮಾಡಲು ಕೊರತೆಯಿಲ್ಲದಿದ್ದರೂ, ಅವನ ಪ್ರೀತಿಯ ಒತ್ತಾಸೆ ಇಲ್ಲದೆ ಅವಳು ಬಡವಾಗಿ ಹೋಗುತ್ತಾ ಅಂತರಂಗದಲ್ಲಿ ಯೋಚನೆಯ ಹುತ್ತವಾದಳು. ಕೊರಗು ಅವಳ ಬಯಕೆ, ಉತ್ಸಾಹಗಳನ್ನು ನುಂಗುತ್ತ ಬಂದಿತ್ತು.

ದಿನಕರನಿಗೆ ಹೆಂಡತಿಯಲ್ಲಿ ಆಗುತ್ತಿದ್ದಂಥ ವೇದನೆ ತಳಮಳಗಳೊಂದೂ ಅರ್ಥವಾಗಲಿಲ್ಲ. ಅರ್ಥಮಾಡಿಕೊಳ್ಳುವ ಗೋಜೂ ಅವನಿಗೆ ಸುತರಾಂ ಬೇಕಿರಲಿಲ್ಲ.ಗಂಡನ ಮನೆಯಲ್ಲಿ ಮಗಳು ‘ಅಸುಖಿ’ ಎಂದು ಹೆತ್ತವರಿಗೆ ಬರುಬರುತ್ತಾ ಮನವರಿಕೆಯಾಗಿತ್ತು. ಹಣ, ಅಂತಸ್ತು, ಆಳು-ಕಾಳು ಸಮೃದ್ಧಿ ಇರುವ ಮನೆಯಲ್ಲಿ ಅವಳಿಗೇನು ಕೊರತೆ ಎಂಬ ಸೂಕ್ಷ್ಮ ಯಾರಿಗೂ ಅರಿವಾಗಿರಲಿಲ್ಲ. ಅವಳೂ ಬಾಯ್ಬಿಟ್ಟು ಹೇಳುವಂತಿರಲಿಲ್ಲ. ಬಾಯಿ ತುಂಬ ಹರಟದ, ರೋಮ್ಯಾಂಟಿಕ್ ಭಾವನೆ ತೋರದ, ಆದರೆ ಮಿಕ್ಕೆಲ್ಲ ವಿಷಯಗಳಲ್ಲಿ ಪರಿಪೂರ್ಣ ವ್ಯಕ್ತಿ, ಉದಾರಿಯಾಗಿದ್ದ ಗಂಡನಲ್ಲಿ ಯಾವ ಅವಗುಣಗಳನ್ನು ಎತ್ತಿ ತೋರಿಸಿ ಹೆತ್ತವರಲ್ಲಿ ದೂರುವುದೆಂದು ರೇಣುವಿಗೆ ಹೊಳೆಯಲಿಲ್ಲ.

ರುಚಿ ಕಾಣದ ಬದುಕಿನಲ್ಲೊಂದು ದಿನ ರೇಣು ಸಿಡಿದೆದ್ದು- ‘ನೀವು ಕಲ್ಲುಗೊಂಬೆಯ ಜೊತೆ ಮಾತ್ರ ಸಂಸಾರ ಮಾಡಕ್ಕೆ ಲಾಯಕ್ಕು. ನಾನಂತೂ ನನ್ನ ಭಾವನೆಗಳನ್ನು ಕೊಂದುಕೊಂಡು ಇನ್ನು ಇಲ್ಲಿರಲಾರೆ” ಎಂದು ತನ್ನ ತೀರ್ಮಾನ ತಿಳಿಸಿ ಅವಳು ಅಂದೇ ತಾಯಿ ಮನೆ ಸೇರಿದ್ದಳು.ದಿನಕರ ಒಂದೆರಡು ಬಾರಿ ಬಂದು ಅವಳನ್ನು ಪುಸಲಾಯಿಸಿ ಕರೆದೊಯ್ಯಲು ಪ್ರಯತ್ನಿಸಿ ಸೋತಿದ್ದ. ರೇಣು ಹಟದಿಂದ ಸೆಟೆದುಕೊಂಡು “ನನಗಲ್ಲಿ ಆಸಕ್ತಿ ಇಲ್ಲ. ದಯವಿಟ್ಟು ನನ್ನನ್ನು ಹಿಂಸಿಸಬೇಡಿ… ನಿಮ್ಮ ದಾರಿ ಬೇರೆ, ನನ್ನ ದಾರಿ ಬೇರೆ” ಎಂದು ಹರಿತವಾಗಿ, ಅವನ ಮುಖಕ್ಕೆ ಹೊಡೆದ ಹಾಗೆ ಉತ್ತರಿಸಿದ ಮೇಲೆ ದಿನಕರ ಕೃದ್ರನಾಗಿ ತೆರಳಿದ್ದ.

“ನನ್ನ-ನಿಮ್ಮ ದಾರಿಯೇ ಬೇರೆ ಬೇರೆ” ಎಂದು ಖಡಾಖಂಡಿತವಾಗಿ ಗಂಡನಿಗೆ ಬೆನ್ನುಹಾಕಿ ಬಂದಿದ್ದ ರೇಣುಕಾಳಿಗೆ ತನ್ನ ದಾರಿ ಯಾವುದೆಂದು ಸ್ಪಷ್ಟವಾಗಿ ತಿಳಿದಿರಲಿಲ್ಲ.ಬೆಳಗಿನಿಂದ ಸಂಜೆಯವರೆಗೆ ತಂದೆ, ತಾಯಿ, ಅಣ್ಣ-ಅತ್ತಿಗೆ, ಮಕ್ಕಳೊಡನಾಟದಲ್ಲಿ ಕಾಲ ಬಹುಬೇಗ ಕಳೆಯುತ್ತಿದೆಯೆನಿಸಿದ್ದು ಕೆಲವು ದಿನ ಮಾತ್ರ. ಅಣ್ಣನ ಸ್ನೇಹಿತ ಪ್ರಮೋದನೂ ಕೆಲವೊಮ್ಮೆ ಅವಳ ಬೇಸರ ನೀಗುತ್ತಿದ್ದ. ಕಥೆ ಪುಸ್ತಕ, ಮ್ಯಾಗಜಿನ್ ತಂದುಕೊಡುವುದರ ಜೊತೆ ಅನೇಕ ಹೊಸಹೊಸ ಸಂಗತಿಗಳನ್ನೂ ಅವಳಿಗೆ ತಿಳಿಸುತ್ತಿದ್ದ, ಚರ್ಚೆ ಮಾಡುತ್ತಿದ್ದ. ಕತ್ತಲ ಮೂಲೆಯಲ್ಲಿ ಒಂಟಿ ಕೂತು ಅವಳು ಗೆದ್ದಲು ಹಿಡಿಯದಂತೆ ಅವನು ಬಹಳಷ್ಟು ಶ್ರಮಿಸಿದ್ದ. ಅಂತರ್ಮುಖಿಯಾಗಿ ಗಂಟೆಗಟ್ಟಲೆ ಯೋಚನೆ ಮಾಡುತ್ತ ಕುಳಿತು ಬಿಡುತ್ತಿದ್ದ ಅವಳನ್ನರಳಿಸಲು ಮೊದಲಿನ ಸ್ನೇಹ-ಸಲುಗೆಯನ್ನು ಬಳಸಿಕೊಂಡು ಅವಳನ್ನು ಕೆಣಕುತ್ತಿದ್ದ, ಹೊಸ ಹುರುಪನ್ನು ತುಂಬಲೆತ್ನಿಸುತ್ತಿದ್ದ ಪ್ರಮೋದ.ರೇಣುಕಳ ಬಗ್ಗೆ ಪ್ರಮೋದನಿಗೆ ಅವಳಣ್ಣನಷ್ಟೇ ವ್ಯಾಕುಲತೆಯಿತ್ತು. “ಮದುವೆ” ಒಬ್ಬ ಮನುಷ್ಯನ ಬಾಳಿನಲ್ಲಿ ಎಷ್ಟೆಲ್ಲಾ ಬದಲಾವಣೆಗಳನ್ನು, ಸುಖ-ದುಃಖ, ಉತ್ಸಾಹ-ನಿರುತ್ಸಾಹಗಳ ವೈರುಧ್ಯ ಭಾವನೆಗಳನ್ನು ಬಿತ್ತಬಲ್ಲುದೆಂಬುದನ್ನು ಚೆನ್ನಾಗಿ ಬಲ್ಲ ಅವನಿಗೆ ಮದುವೆಯ ಬಗ್ಗೆ ಒಂದು ರೀತಿ ಅಲರ್ಜಿಯ ಭಾವನೆ ಬೆಳೆದಿತ್ತು. ತನ್ನ ಜೀವನದಲ್ಲಿ ಅದರ ಅಗತ್ಯವಿಲ್ಲ ಎಂದು ಮನಗಂಡವನೇ ಅಂದೇ ಅವನು, ತಾನು ಜೀವನಪೂರ್ತಿ ಬ್ರ್ಮಹಚಾರಿಯಾಗಿರುವುದೆಂದು ಸ್ಥಿತಪ್ರಜ್ಞತೆಯಿಂದ ತೀರ್ಮಾನಿಸಿದ್ದ. ಅವನ ನಿರ್ಧಾರವನ್ನು ಕೇಳಿದ ಅವನ ಹೆತ್ತವರು-ಒಡಹುಟ್ಟಿದವರೆಲ್ಲ ದಿಗ್ಭ್ರಮೆಗೊಂಡಿದ್ದರು. ಅಷ್ಟೇ ಕಳವಳಿಸಿ, ಅವನಿಗೆ ಹಲವು ವಿಧದಲ್ಲಿ ಉಪದೇಶಿಸಿ ನೋಡಿ, ಅವನನ್ನು ಕದಲಿಸುವ ತಮ್ಮ ಪ್ರಯತ್ನ ನಿಷ್ಪ್ರಯೋಜಕ ಎಂದರಿತು ಕಡೆಗೆ ಅದರ ಚಿಂತೆಯನ್ನೇ ತೊರೆದಿದ್ದರವರು. ಹೀಗಾಗಿ ಪ್ರಮೋದ್ ನಲವತ್ತರಗಡಿಯನ್ನು ದಾಟುತ್ತಾ ಬಂದಿದ್ದರೂ ಅವಿವಾಹಿತನಾಗಿಯೇ ಉಳಿದಿದ್ದ.

ಇಂಥ ಬಂಡೆಗಲ್ಲು ಪ್ರಮೋದ ಹೇಗೆ ಪರಿವರ್ತಿತನಾದ ಎಂದೇ ಎಲ್ಲರಿಗೂ ಆಶ್ಚರ್ಯ! ಅದಕ್ಕೆ ಕಾರಣಳಾದವಳು ರೇಣು. ಉತ್ಸಾಹದ ಬುಗ್ಗೆ ರೇಣು, ಶ್ರೀಮಂತ ಯುವಕನನ್ನು ಬಹು ಆಸೆಯಿಂದಲೇ ಮದುವೆಯಾದಾಗ, ಅವಳಣ್ಣ ಪ್ರಸಾದನಂತೆ, “ಹ್ಯಾಪಿ ಮ್ಯಾರೀಡ್ ಲೈಫ್” ಎಂದು ಹಾರೈಸಿ ಕಳುಹಿಸಿದವನು ಪ್ರಮೋದ. ಅದೇ ಅವಳ ಜೀವನ, ಒಡೆದ ಹಡಗಿನಂತೆ ಅತಂತ್ರವಾಗಿ ಬಿರುಗಾಳಿಗೆ ಸಿಕ್ಕಾಗ, ಅವಳು ನಿರಾಸೆಯೆಂಬ ಕತ್ತಲೆಯ ಕೂಪದಲ್ಲಿ ಹುದುಗಿ ಕುಳಿತಾಗ ಅವಳಲ್ಲಿ ಬದುಕಿನ ಆಶಾಕಿರಣ ಬಿತ್ತಿ, ಉತ್ಸಾಹ, ಆಶಾಭಾವಗಳನ್ನು ತುಂಬಿದವನೂ ಅವನೇ.

“ರೇಣು, ನೀನು ಮೊದಲಿನ ಉತ್ಸಾಹದ ಖನಿ ರೇಣುವಾಗಬೇಕು. ಆದದ್ದಾಯ್ತು… ಇನ್ನಾದರೂ ಹೊಸ ಬಾಳಿಗೆ ತೆರೆದುಕೋ. ಜೀವನವನ್ನು ಕೈಗೆ ಎತ್ತಿಕೋ, ನಿನ್ನದಾಗಿಸಿಕೋ’“ಅಂದರೆ ಹಿಂದಿನ ಕಹಿಬಾಳಿನ ಪುಟಾನ ಮೊಗಚಿ ಹಾಕಿದರೆ, ಮುಂದೆ ಸಿಹಿಪುಟ ಇರುತ್ತೆ ಅಂತೀರಾ? ಇದ್ದೇ ಇರುತ್ತೆ ಅಂತ ಗ್ಯಾರಂಟಿ ಏನು?”-ನಿರಾಸೆಯನ್ನು ಪುಟಿಯಿಸುತ್ತ ನುಡಿದಿದ್ದಳವಳು.

“ಇರಲ್ಲ ಅಂತ ಯಾಕೆ ತೀರ್ಮಾನ ಮಾಡಿಕೊಂಡಿದ್ದೀ? ನಿನಗೆ ಖಂಡಿತಾ ಹೊಸಬಾಳು ಇದೆ ರೇಣು, ಬಿ ಚಿಯರ್ ಅಪ್”-ಪ್ರಮೋದ ಅವಳನ್ನು ಜೀವನ್ಮುಖಳನ್ನಾಗಿಸಲು ಸುಮ್ಮನೆ ಮಾತಿಗಂದಾಗ ಅವಳು ತಟ್ಟನೆ ಅವನಿಗೆ ಸವಾಲೆಸೆದಿದ್ದಳು.

“ನನಗೆ ಈ ಹೊಸಬಾಳನ್ನು ಖಂಡಿತ ನೀವೇ ಕೊಡ್ತೀರಾ?”ಅವಳ ಅನಿರೀಕ್ಷಿತ ಪ್ರಶ್ನೆಯಿಂದ ಪ್ರಮೋದ ತತ್ತರಿಸಿದ್ದ!“ಯಾಕೆ ಸುಮ್ನಾಗ್ಬಿಟ್ರೀ ಪ್ರಮೋದ್?… ನೋಡಿದಿರಾ ಬಾಯಲ್ಲಿ ಸಮಾಧಾನಕ್ಕೆ ಏನೋ ಹೇಳಿಬಿಡಬಹುದು. ಆದರೆ ಅದನ್ನು ಆಚರಣೆಗೆ ತರೋದು ಬಹಳ ಕಷ್ಟ ಅಲ್ವಾ? ನಿಮ್ಮ ಕೈಲಿ ಈ ತಿದ್ದುಪಡಿ ಸಾಧ್ಯವೇ? ನನ್ನ ಬಾಳಿಗೆ ಈ ಹೊಸದೊಂದು ಚೌಕಟ್ಟು ಕೊಡಕ್ಕೆ ಸಾಧ್ಯವೇ ನಿಮಗೆ?”-ಬಹಳ ನೇರವಾಗಿತ್ತು ಅವಳ ಪ್ರಶ್ನೆ-ಅಷ್ಟೇ ನಿಷ್ಠೂರವಾಗಿತ್ತು.

‘ ನೀನೂ ಎಲ್ಲರ ಹಾಗೆ ನಗುನಗುತ್ತ ಇರಬೇಕು ಅಂತಲೇ ನನ್ನಾಸೆ ರೇಣು. ಆದರೆ ಆ ಬದಲಾವಣೆಯನ್ನು ನಾನೇ ಮಾಡಬೇಕು, ಮಾಡ್ತೀನಂತಲ್ಲ… ನೀನು ಮೊದಲಿನ ಹಾಗಾಗು, ಆಮೇಲೆ ನೋಡೋಣ”ರೇಣುವಿನ ಮೊಗದ ಮೇಲೆ ವಿಷಾದದ ಗೆರೆ ಬಳುಕಿತು.

“ನೀವೇನೇ ಹೇಳಿ ಪ್ರಮೋದ್, ಗಂಡಸರು ಪಲಾಯನವಾದಿಗಳು, ಸಮಸ್ಯೆ ಎದುರಾದಾಗ ಅದರಿಂದ ತಪ್ಪಿಸಿಕೊಂಡು ಓಡ್ತೀರಿ ಅಥವಾ ಅದನ್ನು ಮುಂದೆ ಮುಂದಕ್ಕೆ ಹಾಕ್ತಾ ಹೋಗ್ತೀರಿ, ಇಲ್ಲಾ ಏನಾದ್ರೂ ನೆಪವನ್ನು ಹೇಳಿ ಅದನ್ನು ಒತ್ತಟ್ಟಿಗೆ ಸರಿಸಿಬಿಡ್ತೀರಿ. ನಂಗೊತ್ತು, ನೀವೇನು ಹೇಳ್ತೀರಾಂತ ಆಜನ್ಮ ಬ್ರಹ್ಮಚಾರಿಯಾಗಿರಬೇಕು ಅನ್ನೋ ನಿಮ್ಮ ನಿರ್ಧಾರ ಇದಕ್ಕೆ ಅಡ್ಡಿ ಅಂತೀರಾ?”“ನಿರ್ಧಾರ ಅನ್ನೋದು ದೀರ್ಘಾಲೋಚನೆಯಿಂದ ರೂಪುಗೊಳ್ಳುವಂಥದ್ದು. ನನಗೀಗ ಆ ಬಗ್ಗೆ ಆಸಕ್ತಿಯೇ ಇಲ್ಲ ರೇಣು. ನೋ… ಆ ರೊಮ್ಯಾಂಟಿಕ್ ಭಾವನೆಗಳು ನನ್ನಲ್ಲಿ ಸಾಧ್ಯವೇ ಇಲ್ಲ. ದಯವಿಟ್ಟು ನನ್ನ ನಿರ್ಧಾರಾನ ಪ್ರಶ್ನಿಸಬೇಡ ರೇಣುಕಾ” ಅವನ ಮುಖಮುದ್ರೆ ಗಂಭೀರವಾಯಿತು.

“ಯಾರಿಗೂ ಉಪಯೋಗವಾಗದ ಆ ನಿಮ್ಮ ನಿರ್ಧಾರಕ್ಕೆ ಯಾವ ಬೆಲೆ ಇದೆ?”“ಅಂದ್ರೆ ಪ್ರತಿಯೊಂದು ನಿರ್ಧಾರದ ಹಿಂದೆಯೂ ಘನವಾದ ತ್ಯಾಗದ ಉದ್ದೇಶ-ಉಪಯೋಗ ಇರಲೇಬೇಕು ಅಂತ್ಲೇ ನಿನ್ನ ಅರ್ಥ?” ಎಂದ ಪ್ರಮೋದ ಹುಬ್ಬುಹೆಣೆದು.“ಮತ್ತೆ ಯಾವುದಾದ್ರೂ ಸದುದ್ದೇಶ-ತ್ಯಾಗ-ಗುರಿಗಳಿಂದ ನಿರ್ಧಾರ ರೂಪುಗೊಂಡಿದ್ರೆ ತಾನೇ ಅದಕ್ಕೆ ಹೆಚ್ಚಿನ ಬೆಲೆ-ಮೌಲಿಕ ಅನ್ನಿಸಿಕೊಳ್ಳುವುದು. ಅದನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದುದಕ್ಕೂ ಸಾರ್ಥಕ…”ರೇಣುವಿನ ನೇರ ನುಡಿಯ ಮೊನಚು ಅವನ ಹೃದಯವನ್ನು ನಾಟಿತ್ತು. ಅವಳನ್ನೇ ಬೆರಗಾಗಿ ದಿಟ್ಟಿಸಿ ನೋಡಿದಾಗ ಅವಳ ಕಣ್ಣಿನಲ್ಲಿ ಸವಾಲಿನ ಕಿಡಿಯಿತ್ತು.

“ನೀವೊಂದು ಒಳ್ಳೆ ಕೆಲಸ ಮಾಡೋ ಹಾಗಿದ್ರೆ, ನಿಮ್ಮ ಈ ನಿರ್ಧಾರ ಮುರಿದುಬಿದ್ದರೂ ನಿಮ್ಮ ವ್ಯಕ್ತಿತ್ವಕ್ಕೊಂದು ಘನತೆ, ಅಪೂರ್ವತೆ-ವೈಶಿಷ್ಟ್ಯ, ನಿಮ್ಮ ನಿರ್ಧಾರಕ್ಕೂ ಒಂದು ನಿಜವಾದ ಅರ್ಥ-ಮೆರುಗು”ಅವಳ ಹರಿತವಾದ ನುಡಿಗಳು ಅವನನ್ನು ಹಿಡಿದಲುಗಿಸಿದವು.“ದಿನ ಬೆಳಗಾದರೆ ಬೊಗಳೆಯ ಉಪದೇಶ ಹೊಡೀತಿದ್ರಲ್ಲ-ತಾಕತ್ತಿದ್ದರೆ ನೀವೇ ಏಕೆ ಆ ಹೊಸಗೆರೆ ಎಳೆಯಬಾರದು?” ಎಂಬರ್ಥದ ಅವಳ ದಿಟ್ಟನೋಟ, ಪ್ರಶ್ನೆಯ ಕುಣಿಕೆಯನ್ನು ಎಸೆದು ಅವನ ಅಂತರಂಗಕ್ಕೊಂದು ಪಾತಳಿಯನ್ನು ಹಾಕಿತ್ತು.

ಒಂದರೆ ಘಳಿಗೆ ಅವರೀರ್ವರ ನಡುವೆ ಮೌನ ಹೊಯ್ದಾಡಿತು.‘ನನ್ನ ಪ್ರಶ್ನೆಗೆ ನಿಮ್ಮಿಂದ ಉತ್ತರ ಬರಲಿಲ್ಲ”ರೇಣುವಿನ ಡಿಮ್ಯಾಂಡ್ ಕೇಳಿ ಪ್ರಮೋದ ಚಕಿತನಾದ!“ಪ್ರಮೋದ್, ಏನಿವೇ ದಿನಕರ್ ಅವರಿಗೆ ನನ್ನ ಬಗ್ಗೆ, ನನಗೆ ಅವರ ಬಗ್ಗೆ ಆಸಕ್ತಿ ಉಳಿದಿಲ್ಲ… ಎಷ್ಟೋ ಸಲ ಡೈವೋರ್ಸ್‍ವರೆಗೂ ಮಾತು ಹೋಗಿತ್ತು. ನೀವೇ ಮಧ್ಯೆ ನಿಂತು ಅವರನ್ನು ಕನ್‍ವಿನ್ಸ್ ಮಾಡಿ ನನಗೆ ದಯವಿಟ್ಟು ವಿಚ್ಛೇದನ ಕೊಡಿಸಿ, ನನ್ನ ಬಾಳಿಗೊಂದು ‘ಬೆಳಕಿಂಡಿ’ ನೀಡಲು ನೀವು ಯಾಕೆ ಈ ಅವಕಾಶನ ಬಳಸಿಕೊಳ್ಳಬಾರದು?”-ಇಂಥ ದಿಟ್ಟ ರೇಣು, ತಾನು ತಂದುಕೊಡುತ್ತಿದ್ದ ಕಾದಂಬರಿಗಳ ಪ್ರಭಾವದಿಂದ ಬೆಳೆದುನಿಂತವಳೇ? ತಾನೇ ಧಾರೆ ಎರೆದು ತುಂಬಿದ ವಿಚಾರಗಳಿಂದ ಪ್ರಚೋದಿತಳಾದವಳೇ ಎಂದವನು ಗರಬಡಿದು ಅವಳನ್ನು ದಿಟ್ಟಿಸಿದಾಗ, ಅವಳ ಒಳಗು ಇನ್ನೇನು ಕೋಡಿಬೀಳುವಷ್ಟು ಉದ್ವಿಗ್ನಳಾಗಿದ್ದುದು ಕಂಡುಬಂದಿತು.

“ರೇಣು ಡೋಂಟ್ ಬಿ ಎಕ್ಸೈಟೆಡ್… ನಿನ್ನ ಒಳಿತನ್ನು ಕೋರುವವನು ನಾನು” -ಅವಳನ್ನು ತಹಬಂದಿಗೆ ತರಲು ಪ್ರಮೋದ ಪ್ರಯತ್ನಪೂರ್ವಕವಾಗಿ ತನ್ನ ದನಿಯನ್ನು ನಯಗೊಳಿಸಿದ.“ಅದನ್ನು ಸಾಬೀತುಪಡಿಸೋ ಕಾಲ ಬಂದಿದೆ. ಇದಕ್ಕೆ ನೀವು ದೊಡ್ಡ ಮನಸ್ಸು ಮಾಡಬೇಕು ಪ್ರಮೋದ್. ನಿಮ್ಮ ನಿರ್ಧಾರ, ತ್ಯಾಗದ ಹಿನ್ನೆಲೆಯಿಂದ ಸಡಿಲಾದರೆ ಯಾವ ಅಪಚಾರವೂ ಆಗಲ್ಲ. ಓ.ಕೆ. ಅದನ್ನು ಉದ್ಧಾರ ಅಂತಲೇ ಭಾವಿಸಿ ನಿಮ್ಮ ತೀರ್ಮಾನಾನ ಬದಲಿಸಿ, ಅಂಧಕಾರದ ಒಡಲಲ್ಲಿ ಬೆಳಕಿನ ಸೊಡರು ಹಿಡಿಯೊದು ಥ್ರಿಲ್ ಅನ್ನಿಸಲ್ವಾ?”ಅವಳು ಮಾತು ನಿಲ್ಲಿಸುವ ಲಕ್ಷಣವೇ ಕಾಣಲಿಲ್ಲ.

ಬಹಳ ದಿನಗಳ ನಂತರ ರೇಣುಕಾ ಅನಾವರಣಗೊಂಡಿದ್ದಳು. ಈಗ ಅವಳು ನೇರವಾಗಿ ಅವನನ್ನು ಅಟ್ಯಾಕ್ ಮಾಡಿದ್ದಳು.“ನನ್ನ ಹಿತೈಷಿ ನೀವಾದ್ರೆ, ನಾನು ಹೇಳೋ ಕೆಲ್ಸ ಮಾಡ್ತೀರಾ ಅಷ್ಟೇ ” ಎಂದವಳೇ ರೇಣು ಅವನ ಉತ್ತರಕ್ಕೂ ಕಾಯದೆ ಧಡಾರನೆ ಒಳಗೆದ್ದು ಹೋದಾಗ ಅವನು ಅಪ್ರತಿಭನಾಗಿದ್ದ!ಅವಳ ಆವೇಶಭರಿತ ಮಾತುಗಳ ಹಿನ್ನೆಲೆಯಲ್ಲಿ ಇದ್ದ ತುಡಿತ, ನೋವನ್ನು ನಿಧಾನವಾಗಿ ಪದರು ಪದರು ಬಿಡಿಸಿ, ವಿಶ್ಲೇಷಿಸಿ ನೋಡುತ್ತ ಅವನು ಒಲ್ಲದ ಮನದಿಂದಲೇ ಅವಳು ‘ತ್ಯಾಗ’ ಎಂದು ಕರೆದ ಹಿನ್ನೆಲೆಯಲ್ಲಿಯೇ ತನ್ನ ಹೊಸನಿರ್ಧಾರವನ್ನು ಹೊರಗೆಡಹಿದಾಗ ಮನೆಯವರಿಗೆಲ್ಲ ಅತ್ಯಾಶ್ಚರ್ಯ! ಅಷ್ಟೇ ಖುಷಿ!ಅವಳಿಗಾಗಿಯೇ ದಿನಕರನನ್ನು ಕಾಡಿ ಬೇಡಿ ಅವನನ್ನು ವಿಚ್ಛೇದನಕ್ಕೆ ಒಪ್ಪಿಸಲು ಅವನು ತಯಾರಿದ್ದ. ಅಷ್ಟೇ ಶ್ರಮವಹಿಸಿ ಅವಳ ಬಾಳಿಗೊಂದು ಹೊಸ ರೇಖೆಯನ್ನು ತಿದ್ದುವ ಹುಡುಗನೊಬ್ಬನನ್ನು ಅರಸಲೂ ಸಿದ್ಧನಿದ್ದ. ಆದರೆ ಅದು ತಾನೇ ಆಗುವುದೊಂದನ್ನು ಮಾತ್ರ ನೆನೆಯದಾದ. ತನಗಿಂತಲೂ ಹತ್ತು-ಹನ್ನೆರಡು ವರ್ಷಗಳಿಗೂ ಕಿರಿಯಳಾದ ತಂಗಿಯಂತಿದ್ದ ರೇಣುವನ್ನು ಮಾತ್ರ ಅವನು ಆ ಸ್ಥಾನದಲ್ಲಿ ಕಲ್ಪಿಸಿಕೊಳ್ಳಲಾರದಾದ. ಅದು ಅವನ ಮನಸ್ಸಿಗೆ ಅತೀವ ಹಿಂಸೆಯಾಗಿತ್ತು. ತನ್ನ ನಿಶ್ಚಲಗುರಿಯಿಂದ ವಿಚಲಿತನಾಗಿ ತಾನು ನಗೆಪಾಟಲಿಗೆ ಈಡಾದೆನೇ ಎಂಬ ಯೋಚನೆಯೂ ಒಂದೆಡೆ… ಹತ್ತು ಹಲವಾರು ವಿಕ್ಷಿಪ್ತ ಆಲೋಚನೆಗಳಿಂದ ಪ್ರಮೋದ ಇಕ್ಕಳದಲ್ಲಿ ಸಿಕ್ಕಂತೆ ಒದ್ದಾಡಿದ.

ರೇಣುಕಾಳ ಹೊಸ ನಿರ್ಧಾರ ಅವಳ ಮನೆ ಮಂದಿಗೆಲ್ಲಾ ಅಪಾರ ಹರ್ಷ ತಂದಿತ್ತು. ಪ್ರಮೋದನನ್ನು ಎಲ್ಲರೂ ಸಾಮೂಹಿಕವಾಗಿ ಬೇಡಿಕೊಂಡರು.“ಅವಳು ಒಪ್ಪಿರೋದೇ ತುಂಬಾ ಹೆಚ್ಚು… ದಯವಿಟ್ಟು ಅವಳಿಗೋಸ್ಕರ ನೀನು, ನಿನ್ನ ಮನಸ್ಸನ್ನು ಬದಲಾಯಿಸ್ಕೋ ಪ್ರಮೋದ್”“ಪ್ರಮೋದ್, ದಯವಿಟ್ಟು ದೊಡ್ಡ ಮನಸ್ಸು ಮಾಡಿ ನನ್ನ ಸ್ವೀಕರಿಸಿ”ರೇಣುವಿನ ಆರ್ದ್ರ ಮೊಗ ಕಣ್ಣೆದುರು ತೇಲಿಬಂದು ಪ್ರಮೋದನ ಅಂತರಂಗ ಕಲಕಿಹೋಗಿತ್ತು.ಯಾವ ಮೂರಕ್ಷರದ ‘ಮದುವೆ’ ಎಂಬ ಪದವನ್ನು ದೂರ ತಳ್ಳಿ ಸ್ವಾರ್ಥ, ವ್ಯಾಮೋಹ, ಬಂಧನಗಳಿಂದ ವಿಮುಕ್ತನಾಗಬೇಕು ಎಂದು ಪ್ರಮೋದ ಬಯಸಿದ್ದೆನೋ, ಆ ವಿಧಿಗೆ ಈಗವನು ಕದವನ್ನು ತೆರೆಯದೇ ಗತ್ಯಂತರವಿರಲಿಲ್ಲ.

ಮೊದಲ ಹೆಜ್ಜೆಯಾಗಿ, ಅವನು, ದಿನಕರನ ಮನೆಗೆ ಹೋಗಿ ಹಿಂದಿನ ಸಲುಗೆಯಿಂದಲೇ ಮಾತಾಡಿ, ರೇಣುಕಾಳಿಗೆ ಬಿಡುಗಡೆ ನೀಡಬೇಕಾಗಿ ಅವಳ ಆಶಯವನ್ನು ತಿಳಿಸಿದ. ಮೊದಮೊದಲು ದಿನಕರ ಈ ಬಗ್ಗೆ ಸರಿಯಾಗಿ ಉತ್ತರಿಸಲಿಲ್ಲ. ಉದಾಸೀನ ಮಾಡಿದ. ಒಲ್ಲದ ಹೆಂಡತಿಯೊಡನೆ ಸಂಸಾರ ಮಾಡುವುದು ಅವನಿಗೆ ಬೇಕಿರದಿದ್ದರೂ, ಅವಳನ್ನು ಹಿಂಸಿಸುವುದರಲ್ಲಿ ನೋಯಿಸುವುದರಲ್ಲಿ ಅವನಿಗೆ ಸಂತಸವೂ ಇರಲಿಲ್ಲ.

“ಪ್ರಮೋದ್, ನನಗೆ ಇದು ಸಂಬಂಧಪಡದೇ ಇದ್ದರೂ ಸುಮ್ಮನೆ ಕೇಳುತ್ತಿದ್ದೇನೆ… ನನ್ನಿಂದ ‘ಡೈವೋರ್ಸ್’ ಪಡೆದು ಅವಳೇನು ಮಾಡ್ತಾಳೆ?… ನನ್ನಿಂದ ಸಿಗದ ಭಾವನಾತ್ಮಕ ಸಂಬಂಧವನ್ನು ಬೇರೆ ಕಡೆ ಪಡೆದುಕೊಳ್ತಾಳೇನು? ಹಾಗಾದ್ರೆ ನನ್ನ ಒಪ್ಪಿಗೆ ಇದೆ. ಸಂತೋಷವಾಗಿರಲಿ ಬಿಡಿ”

ದಿನಕರನ ಉದಾತ್ತ ಮನೋಭಾವ ಕಂಡು ಪ್ರಮೋದನಿಗೆ ಅವನ ಬಗ್ಗೆ ಗೌರವದ ಭಾವನೆ ಉಕ್ಕಿಬಂತು. ಜೊತೆಗೆ ರೇಣು ದುಡುಕಿದಳೇನೋ ಎಂದೂ ಅನಿಸಿತು.“ರೇಣು, ನನ್ನನ್ನು ಮದುವೆಯಾಗಲು ಬಯಸಿದ್ದಾಳೆ. ಅವಳೇ ನನ್ನನ್ನು ಈ ಕೆಲಸಕ್ಕೆ ಕಳಿಸಿರೋದು ದಿನಕರ್… ಯೂ ಮಸ್ಟ್ ಕೋ ಆಪರೇಟ್” ಎಂದು ಪ್ರಮೋದ್, ಅವನ ಕೈಹಿಡಿದು ಕೇಳಿಕೊಂಡಾಗ ದಿನಕರನಿಗೆ ಅತ್ಯಾಶ್ಚರ್ಯ! ಕಾರಣ ಅವನಿಗೆ ಪ್ರಮೋದನ ನಿರ್ಧಾರ, ಮದುವೆಯ ಬಗ್ಗೆ ಅವನ ವಿಚಾರಲಹರಿ ತಿಳಿಯದ್ದೇನಲ್ಲ.

“ಷೀ ಈಸ್ ವೆರಿ ಆಂಬೀಷಿಯಸ್… ಎನಿವೇ ಗುಡ್‍ಲಕ್ ಪ್ರಮೋದ್” ಎಂದು ಅವನಿಗೆ ಶುಭ ಹಾರೈಸಿ ಡೈವೋರ್ಸಿಗೆ ಅಗತ್ಯವಾದ ಕಾಗದಪತ್ರಗಳಿಗೆಲ್ಲಾ ಸಹಿಹಾಕಿ ತನ್ನ ಒಪ್ಪಿಗೆ ನೀಡಿದ್ದ ದಿನಕರ್.ಪ್ರಮೋದನ ವಿಶೇಷ ಶ್ರಮ, ಓಡಾಟಗಳಿಂದ ಅಂತೂ ರೇಣುಕಾಳಿಗೆ ವರ್ಷ-ವರ್ಷಾವರೆಯೊಳಗೇ ವಿಚ್ಛೇದನ ದೊರೆತಿತ್ತು.

ತೀರ್ಪು ಹೊರಬಿದ್ದ ದಿನ ರೇಣುಕಾಳ ಮೊಗದಲ್ಲಿ ಹಿಂದಿನ ಬೆಳಂದಿಂಗಳು ಬಳುಕಾಡಿತು. ಪ್ರಮೋದನ ಬಗ್ಗೆ ಅಪಾರ ಕೃತಜ್ಞತೆಯ ನೋಟ ಬೀರಿ ಮನೆ ತುಂಬ ಹಗುರಾಗಿ ಓಡಾಡಿದಳು.ಈ ಮಧ್ಯೆ ಅವಳು ಪ್ರಮೋದನ ಸಲಹೆ-ಸಹಕಾರಗಳಿಂದ ಎಂ.ಎ. ತರತಗತಿಗೆ ಸೇರಿ, ಇನ್ನೇನು ಆ ಕೋರ್ಸ್ ಮುಗಿದು ಫಲಿತಾಂಶಕ್ಕಾಗಿ ಕಾಯುತ್ತಾ ಇದ್ದಳು.

ದಿನಗಳು ತರಗೆಲೆಗಳಂತೆ ಹಾರಿಹೋಗುತ್ತಿದ್ದವು ಅವಳ ಪಾಲಿಗೆ. ಪ್ರಮೋದನಿಗೆ ಮದುವೆಯ ಬಗ್ಗೆ ಆತುರವಿರಲಿಲ್ಲ. ಅದರವನ ವಯಸ್ಸಾದ ತಾಯಿ- “ಇನ್ನೂ ಎಷ್ಟು ದಿನ ಕಾಯಬೇಕಪ್ಪ ನಾವು.. ಹಣ್ಣಾದ ಜೀವಿಗಳೆರಡು ಮನೆಯಲ್ಲಿ ಇವೆ ಅಂತ ಜ್ಞಾಪಕವಿರಲಪ್ಪ ನಿನಗೆ. ಆದಷ್ಟು ಬೇಗ ಮದುವೆಯ ದಿನವನ್ನು ನಿಶ್ಚಯಿಸಕ್ಕೆ ಹೇಳಬಾರದೇನೋ ಪ್ರಮೋದ” ಎಂದು ಅಲವತ್ತುಕೊಂಡರು.

“ರಿಸೆಲ್ಟ್ ಬರಲಿ ತಡಿಯಮ್ಮ… ನಲವತ್ತು ದಾಟಿದವನಿಗೆ ಇನ್ನೆರಡು ಭಾರವೇ?” ಎಂದವನು ಸಹನಾಮೂರ್ತಿಯಾಗಿ ನುಡಿದ. ಮನಸ್ಸಿನ ಕೋಣೆಯಿಂದ ಮೃದು-ಮಧುರ ಭಾವನೆಗಳನ್ನು ಹೊರಗಟ್ಟಿದವನು, ಈಚಿನ ದಿನಗಳಲ್ಲಿ ಅವುಗಳನ್ನು ಪ್ರಯತ್ನಪೂರ್ವಕವಾಗಿಯೇ ಮನಸ್ಸಿನೊಳಗೆ ಆಹ್ವಾನಿಸಿಕೊಳ್ಳುತ್ತ, ಮದುವೆ ಎಂಬ ಘಟ್ಟಕ್ಕೆ ಸಿದ್ಧನಾಗುತ್ತಿದ್ದ ಪ್ರಮೋದ್.

ಆ ದಿನ ರೇಣುಕಾಳನ್ನು ಅವರ ಮನೆಯ ಮುಂದಿನ ಮಲ್ಲಿಗೆ ಬಳ್ಳಿಯ ಚಪ್ಪರದಡಿ ಕರೆದು ತಂದು, ಬಹಳ ಸಂಕೋಚದಿಂದಲೇ, ಕೇಳಿದ್ದ:

“ರೇಣು, ಮದುವೆಯ ದಿನಾಂಕ ಯಾವಾಗ ಇಟ್ಕೊಳ್ಳೋಣ?… ಮನೆಯಲ್ಲಿ ನಮ್ಮಮ್ಮನದು ಒಂದೇ ಒತ್ತಾಯ”ಅವನ ಪ್ರಶ್ನೆ ಕೇಳಿ ರೇಣುಕಳ ಮುಖಭಾವ ಬದಲಾಯಿತು. ತುಟಿಗಳು ಕಂಪಿಸತೊಡಗಿದವು.

“ಯಾಕೆ ರೇಣು ಏನಾಯ್ತು?! ಈ ಪ್ರಶ್ನೆ ನಿನಗೆ ತುಂಬ ಖುಷಿಕೊಡೋ ಅಂಥದ್ದಲ್ವಾ?… ಇದು ನಿನ್ನ ಬೇಡಿಕೆ ತಾನೇ?” ಪ್ರಮೋದನಿಗೂ ಗರಬಡಿವ ಬೆರಗು!

“ಬೇಡಿಕೆ?!… ಹ್ಞಾಂ… ನನ್ನದೇ ಹೌದು… ಆದರೆ… ಈಗ ನನ್ನ ಬೇಡಿಕೆ ಬದಲಾಗಿದೆ. ಅದನ್ನು ನೀವು ನಡೆಸಿಕೊಡ್ತೀರಿ ತಾನೇ? ಮಾತು ಕೊಡಿ” ಎಂದವನ ಹಸ್ತವನ್ನು ತನ್ನ ಅಂಗೈಯಲ್ಲಿರಿಸಿಕೊಂಡ ರೇಣು-“ನಾನು ನಮ್ಮ ಲೆಕ್ಚರರ್ ಸುಮಂತ್ ಅನ್ನೋರನ್ನು ತುಂಬಾ ಪ್ರೀತಿಸ್ತಿದ್ದೀನಿ. ಅವರೂ ಕೂಡ, ಅವರಿಗೆ ನನ್ನ ವಿಷ್ಯ ಎಲ್ಲಾ ಗೊತ್ತು… ಪರಸ್ಪರ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀವಿ… ಅವರು ತುಂಬಾ ಒಳ್ಳೆಯವರು, ನೋಡೋಕ್ಕೂ ಚೆನ್ನಾಗಿದ್ದಾರೆ. ನನಗಿಂತಲೂ ಎರಡು ವರ್ಷ ದೊಡ್ಡೋರು…ದಯವಿಟ್ಟು ನನ್ನ ಕ್ಷಮಿಸಿಬಿಡಿ. ಪ್ರಮೋದ್… ನನ್ನ ಬಾಳಿಗೊಂದು ಹೊಸ ಬೆಳಕಿಂಡಿ ಬರಲು ಅವಕಾಶ ಮಾಡಿಕೊಡಿ… ನಿಮ್ಮದು ದೊಡ್ಡ ಮನಸ್ಸು ಅಂತ ನನಗ್ಗೊತ್ತು. ನನ್ನ ಹಿತೈಷಿ ನೀವಾದರೆ ನನ್ನ ಬೇಡಿಕೇನಾ ನಡೆಸಿಕೊಡ್ತೀರಾ… ನನ್ನ ಮತ್ತು ಸುಮಂತನನ್ನು ಒಂದು ಮಾಡಲಾರಿರಾ?”

-ಎಂದು ಮೊರೆಯಿಟ್ಟ ಅವಳ ದೈನ್ಯ ಬೇಡಿಕೆಯ ಬಿರುಗಾಳಿಯ ಹೊಡೆತಕ್ಕೆ, ಅವನಲ್ಲಿ ಅದೇತಾನೇ ತೆರೆದುಕೊಳ್ಳುತ್ತಿದ್ದ ಭಾವುಕ ಹೃದಯದ ಕವಾಟ ನಿಶ್ಶಬ್ಧವಾಗಿ ಮುಚ್ಚಿಕೊಂಡು, ಪ್ರಮೋದ್ ನಿಂತಲ್ಲಿಯೇ ಪ್ರತಿಮೆಯಾಗಿದ್ದ!

Related posts

ಹೊದಿಕೆಗಳು

YK Sandhya Sharma

ಪುರಸ್ಕಾರ

YK Sandhya Sharma

ಬೆಸುಗೆ

YK Sandhya Sharma

Leave a Comment

This site uses Akismet to reduce spam. Learn how your comment data is processed.