Image default
Poems

ಎಂಥ ಚೆಂದ

 ಮುಖದ ಸುಕ್ಕು-ಮಡಿಕೆಗಳ ಬಿಡಿಸಿ,

ನಯವಾಗಿ ಸವರಿ

ಇಸ್ತ್ರಿ ಮಾಡಿ

ಗರಿಗರಿ ಮಾಡುವಂತಿದ್ದರೆಷ್ಟು ಚೆನ್ನ?

ಎದೆಯೊಳಗೆ

ಮಡುಗಟ್ಟಿ ನಿಂತ

ಕಹಿನೆನಪುಗಳ ಮೀಟಿ

ಬೊಗಸೆಗಟ್ಟಲೆ ಸಿಹಿಗನಸ

ಸುರಿಯುವಂತಿದ್ದರೆಷ್ಟು ಚೆನ್ನ?

ಮೈತುಂಬ

ಕಲೆತು-ಕೊಳೆತಿರುವ

ನಂಜು-ನರಕಗಳ

ಭಂಗು-ಬರೆಗಳ

ರಬ್ಬರಿಂದಳಿಸಿ

ರಂಗೋಲೆ-ಚಿತ್ತಾರ

ಬಿಡಿಸುವಂತಿದ್ದರೆಷ್ಟು ಚೆನ್ನ?

ಕಳೆದ ವರುಷಗಳ ಹೊಸಕಿ

ಹಗಲು ರಾತ್ರಿಗಳ ನಿಲಿಸಿ

ಬಿಸಿಲು-ಮಳೆಗಳ ಎತ್ತಂಗಡಿಸಿ

ಕಾಲಾತೀತ

ಗೊಮ್ಮಟ ಶಿಲೆಯಾಗಿ

ಅದರ ಹೊಕ್ಕುಳ ಕಲೆಯಾಗಿ

ಕಾಲ ಕಾಲಕೆ

ಉಳಿಯುವಂತಿದ್ದರೆಷ್ಟು ಚೆನ್ನ?

ಕಾಲ ಸುತ್ತಿಕ್ಕುವ

ಸರಪಳಿಗಳ ಕಿತ್ತೊಗೆದು

ಬಾನ ಬಯಲಲಿ

 ತೊಂಗು ತೊಡಕಿಲ್ಲದೆ

ಹಂಗಿಲ್ಲದ ಹಕ್ಕಿಯಾಗಿ

ಹೊಳೆವ ಚಿಕ್ಕಿಯಾಗಿದ್ದರೆಷ್ಟು ಚೆನ್ನ?

Related posts

ನೇಣು ಬಿಗಿವ ನೆನೆಪುಗಳು

YK Sandhya Sharma

ಪವಾಡ ಪುರುಷ

YK Sandhya Sharma

ಗೂಢ-ನಿಗೂಢ

YK Sandhya Sharma

Leave a Comment

This site uses Akismet to reduce spam. Learn how your comment data is processed.