ಭರತನಾಟ್ಯದ ಶುದ್ಧನೃತ್ಯದ ಸೊಬಗಿಗೆ ಮಿಥುನ್ ಶ್ಯಾಂ ನರ್ತನ ವೈವಿಧ್ಯವನ್ನು ಕಣ್ಣಾರೆ ಕಾಣಬೇಕು. ವಿಶಿಷ್ಟ ನೃತ್ಯದ ಸೊಗಡು, ಮಿಂಚಿನ ಸಂಚಾರದ ಸಂಕೀರ್ಣ ಜತಿಗಳು, ಪ್ರಭುದ್ಧಾಭಿನಯ ಇವರ ವೈಶಿಷ್ಟ್ಯ. ಅಪರೂಪದ ಕೆಲವೇ ಪುರುಷ ನೃತ್ಯಕಲಾವಿದರಲ್ಲಿ ಇವರೂ ಒಬ್ಬರು. ‘ವೈಷ್ಣವಿ ನಾಟ್ಯಶಾಲೆ’ಯಲ್ಲಿ ಬಹು ಬದ್ಧತೆಯಿಂದ ಕಲಿಯುತ್ತಿರುವ ಸುಮಾರು ನಾಲ್ಕುನೂರಕ್ಕೂ ಮಿಕ್ಕಿದ ಶಿಷ್ಯವೃಂದವನ್ನು ಹೊಂದಿರುವ ಮಿಥುನ್ ಗೆ ನಾಟ್ಯಕಲಿಕೆ ಮತ್ತು ಶಿಕ್ಷಣ ಒಂದು ಆರಾಧನೆ. ಕಾಲಿಗೆ ಗೆಜ್ಜೆಕಟ್ಟಿ ಇಪ್ಪತ್ತೆಂಟು ವರ್ಷಗಳನ್ನು ಕ್ರಮಿಸಿದ್ದು, ನರ್ತನವೇ ಉಸಿರಾಗಿ ಬಾಳುತ್ತ, ವೃತ್ತಿಪರತೆಗೆ ನಿಷ್ಠರಾಗಿರುವ ಇವರು, ದೇಶ-ವಿದೇಶಗಳಲ್ಲಿ ನೂರಾರು ಉತ್ತಮ ಕಾರ್ಯಕ್ರಮಗಳನ್ನು ನೀಡಿ ಅಂತರರಾಷ್ಟ್ರೀಯ ಕಲಾವಿದರಾಗಿ ಹೆಸರು ಪಡೆದವರು.
ಮೂಲತಃ ಕೇರಳದವರಾದರೂ ಮಲೆಯಾಳದಷ್ಟೇ ನಿರರ್ಗಳವಾಗಿ ಕನ್ನಡ ಮಾತನಾಡಬಲ್ಲರು. ಇಂಗ್ಲೀಷ್, ಹಿಂದಿ, ತಮಿಳುಭಾಷೆಗಳ ಜೊತೆ ಫ್ರೆಂಚ್ ಭಾಷೆಯನ್ನೂ ಕಲಿತಿರುವರು. ಬೆಂಗಳೂರಿನಲ್ಲೇ ಹುಟಿ ಬೆಳೆದು, ಶೇಷಾದ್ರಿಪುರಂ ಕಾಲೇಜಿನಿಂದ ‘ ಬಿ.ಕಾಂ’ ಪದವೀಧರರಾಗಿ, ಕೆಲವು ಕಾಲ ಕಾರ್ಪೋರೆಟ್ ಕಂಪನಿಯಲ್ಲಿ ಉದ್ಯೋಗ ಮಾಡಿದ ಅನುಭವವೂ ಇದೆ.
ಮಿಥುನ್ ನೃತ್ಯ ಕಲಿಯಲು ಆರಂಭಿಸಿದ ಕಥೆ ಕುತೂಹಲಕರವಾಗಿದೆ. ತಂಗಿಯನ್ನು ಪ್ರತಿನಿತ್ಯ ಗುರು ಐರಾವತಿ ನಾಯ್ಡು ಅವರ ನೃತ್ಯಶಾಲೆಗೆ ಕರೆದೊಯ್ಯುವ ಜವಾಬ್ದಾರಿಯನ್ನು, ಮಿಥುನ್ ಗೆ, ರಾಜ್ಯಸರ್ಕಾರದಲ್ಲಿ ಉದ್ಯೋಗದಲ್ಲಿದ್ದ ತಾಯಿ ಸರಳಾ ವಹಿಸಿದ್ದರು. ಇವರೊಂದಿಗೆ ಅಣ್ಣ ವಿಪಿನ್ ಶ್ಯಾಂ ಕೂಡ ಬರುತ್ತಿದ್ದರು. ಗುರುಗಳು ಮಾಡುತ್ತಿದ್ದ ತಿದ್ದುಪಡಿಗಳನ್ನು ಗಮನಿಸುತ್ತ, ಅದರಂತೆ ಮಾಡುತ್ತಿದ್ದ ಇವನ ಪ್ರತಿಭೆಯನ್ನು ಗುರುತಿಸಿದ ಗುರುಗಳು ಅಣ್ಣ-ತಮ್ಮಂದಿರಿಗೂ ನೃತ್ಯ ಕಲಿಸಿದರಂತೆ. ತಂದೆ ವಿಷ್ಣುಮೋಹನ್ ಕೂಡ ಉತ್ತೇಜನ ನೀಡಿದರಂತೆ. ಅನಂತರ ಮೂವರೂ ಖ್ಯಾತಗುರು ಪದ್ಮಿನಿ ರಾಮಚಂದ್ರನ್ ಅವರ ‘ವಳವೂರು’ ನೃತ್ಯಬಾನಿಗೆ ಸೇರ್ಪಡೆಯಾಗಿ ಅತ್ಯಂತ ನಿಷ್ಠೆಯಿಂದ ನಾಟ್ಯಶಿಕ್ಷಣ ಪಡೆದರು.
ಮೂವರೂ ಒಟ್ಟಿಗೆ ರಂಗಪ್ರವೇಶ ಮಾಡಿದ್ದು ವಿಶೇಷವೇ. ಅದರ ಖರ್ಚು ನಿಭಾಯಿಸಲು, ಹತ್ತನೆಯ ತರಗತಿಯಲ್ಲಿದ್ದ ಹದಿನಾರರ ಮಿಥುನ್ ನಾಲ್ಕಾರು ಮನೆಗಳಿಗೆ ಹೋಗಿ ನೃತ್ಯಪಾಠ ಹೇಳಿದರು. ಇಷ್ಟು ಹೊತ್ತಿಗೆ ಕರ್ನಾಟಕ ಸರ್ಕಾರ ನಡೆಸುವ ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯಪರೀಕ್ಷೆಗಳಲ್ಲಿ ವಿಜೇತರಾಗಿದ್ದರು. ಶಿಷ್ಯನಲ್ಲಿ ಹುದುಗಿದ್ದ ಪ್ರತಿಭೆಯನ್ನು ಗಮನಿಸಿದ ಗುರು ಪದ್ಮಿನಿ ತಮ್ಮ ಶಾಲೆಯ ಎಲ್ಲ ನೃತ್ಯ ನಿರ್ಮಾಣಗಳಲ್ಲಿ ಮಿಥುನ್ ಗೆ ಪ್ರಮುಖ ಪಾತ್ರ ನೀಡಿ ವೈವಿಧ್ಯ ಅನುಭವ ಗಳಿಕೆಗೆ ನೆರವಾದರು. ಆನಂತರ ಮಿಥುನ್ ನಟನಾ ಪ್ರತಿಭೆಗೆ ಅನೇಕ ಅವಕಾಶಗಳು ಮುಕ್ತವಾದವು. ಸಂಗೀತ ಗುರು ವಿ.ದೇಬೂರ್ ನಾಗರಾಜನ್ ಬಳಿ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದು, ನಟುವಾಂಗವನ್ನೂ ಬಲ್ಲ ಇವರು ಅನೇಕ ನೃತ್ಯರೂಪಕಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಇವರು ನಿರ್ಮಿಸಿರುವ ನೃತ್ಯರೂಪಕಗಳು- ನರಸಿಂಹ, ಬೀಬಿ ನಾಚಿಯಾರ್,ಶ್ರೀ ರಾಮಾಂಜನೇಯ ವಿಜಯ, ಸಂಹಾರ ತಾಂಡವಂ,ರಸಮಯ ಮುಂತಾದವು. ನೀಡಿರುವ ಮುಖ್ಯ ಕಾರ್ಯಕ್ರಮಗಳು- ರಸಸಂಜೆ, ಚೆನ್ನೈನ ದಾಸ್ಯಂ ಉತ್ಸವ,ನಾಟ್ಯಂ ದರ್ಶನಂ, ತಿರುಪತಿಯಲ್ಲಿ ನಾಟ್ಯ ನೀರಾಜನ, ಮುಂಬೈನಲ್ಲಿ ರೈನ್ ಡ್ರಾಪ್ ಫೆಸ್ಟಿವಲ್, ನರ್ತಕ ಮುಂತಾದ ಅನೇಕ ಪ್ರತಿಷ್ಟಿತ ನೃತ್ಯೋತ್ಸವಗಳು.
ದೂರದರ್ಶನದ ‘’ಎ’’ ಗ್ರೇಡ್ ಕಲಾವಿದರಾದ ಇವರು, ಐ.ಸಿ.ಸಿ.ಆರ್. (ನವದೆಹಲಿ)ಮಾನ್ಯತೆ ಪಡೆದ ನೃತ್ಯಕಲಾವಿದರೂ ಕೂಡ. ಪ್ರಖ್ಯಾತ ಅಭಿನೇತ್ರಿ ಹೇಮಾಮಾಲಿನಿ ಅವರ ಅನೇಕ ನೃತ್ಯರೂಪಕಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಮೇರಿಕಾ, ಚೈನಾ, ಥಾಯ್ ಲ್ಯಾಂಡ್, ಸಿಂಗಾಪುರ್, ಶ್ರೀಲಂಕಾ ಮುಂತಾದ ದೇಶಗಳಲ್ಲಿ ನೃತ್ಯ ಪ್ರದರ್ಶನಗಳಲ್ಲದೆ, ಪ್ರಾತ್ಯಕ್ಷಿಕ ಉಪನ್ಯಾಸ, ಕಾರ್ಯಾಗಾರಗಳನ್ನು ನಡೆಸಿಕೊಟ್ಟಿರುವ ಅಗ್ಗಳಿಕೆ ಇವರದು. ‘ನೃತ್ಯ ಸುಂದರಂ’,ಯುವ ಕಲಾಪ್ರತಿಭಾ, ನೃತ್ಯೋಪಾಸಕ, ಕನ್ನಡ ನಾಟ್ಯಕೌಸ್ತುಭ ಮುಂತಾದ ಪ್ರಶಸ್ತಿಗಳು ಇವರ ಮುಡಿಗೇರಿವೆ.
ಇಪ್ಪತ್ತು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಇವರ ‘ವೈಷ್ಣವಿ ನೃತ್ಯಶಾಲೆ’ ಯಲ್ಲಿ ಭರತನಾಟ್ಯ, ಯೋಗ ಮತ್ತು ಸಂಗೀತದ ಶಿಕ್ಷಣ ನೀಡಲಾಗುತ್ತದೆ. ಇವರ ಸಂಪಾದಕತ್ವದಲ್ಲಿ, ಜಾಗತಿಕ ಮಾಹಿತಿ, ಸಂವಹನ ಮತ್ತು ಕಲಾಚಿಂತನೆಗಳಿಗೆ ಮೀಸಲಾದ ‘’ ನೃತ್ಯಂ’’ ಪತ್ರಿಕೆಯನ್ನು ಪ್ರಕಟಿಸಲಾಗುತ್ತಿದೆ. ಇವರ ಮಡದಿ ನೃತ್ಯ ಕಲಾವಿದೆ ಮಿನು ಮೋಹನ್ ಕೂಡ ನೃತ್ಯಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಇವರ ಅನುರೂಪ ದಾಂಪತ್ಯದ ಕೊಡುಗೆ ನರ್ಸರಿಯಲ್ಲಿ ಓದುತ್ತಿರುವ ಪುತ್ರ ವಿಶ್ವಾಮಿತ್ರ.