Image default
Dance Reviews

ಸಾತ್ವಿಕಾಭಿನಯದಿಂದ ಸೆಳೆದ ಅಕ್ಷರಾ ಭಾರದ್ವಾಜ್

ಇತ್ತೀಚಿಗೆ ಭಾರತೀಯ ವಿದ್ಯಾಭವನದಲ್ಲಿ ಅಕ್ಷರಾ ಭಾರಧ್ವಾಜ್ , ಐ.ಸಿ.ಸಿ.ಆರ್ ಆಯೋಜಿತ ನೃತ್ಯಕಾರ್ಯಕ್ರಮದಲ್ಲಿ  ‘ಶೃಂಗಾರ ತರಂಗಿಣಿ’ ಎಂಬ ಶೀರ್ಷಿಕೆಯಲ್ಲಿ, ಭರತನಾಟ್ಯದ ‘ಮಾರ್ಗಂ’ ನಲ್ಲಿ  ಹರಿದಾಸರ ಸಾಹಿತ್ಯದ ಕೃತಿಗಳನ್ನು ಬಳಸಿಕೊಂಡು ಶೃಂಗಾರದ ಅಂಶಗಳಿಗೆ ಒತ್ತುನೀಡುವ ಶ್ರೀಪಾದರಾಜರು, ಪ್ರಸನ್ನ ವೆಂಕಟದಾಸರು ಮತ್ತು ಹೆಳವನಕಟ್ಟೆ ಗಿರಿಯಮ್ಮನವರ ಕೃತಿಗಳನ್ನು ಅತ್ಯಂತ ಮನೋಹರವಾಗಿ ತಮ್ಮ ಸಾತ್ವಿಕಾಭಿನಯದಲ್ಲಿ ಸಾದರಪಡಿಸಿದರು.

ಹರಿದಾಸರ ಕೃತಿಗಳನ್ನು ‘’ಮಾರ್ಗಂ’’ ಗೆ ಹೊಂದಿಸುವ ಪರಿಕಲ್ಪನೆಯೇ ವಿನೂತನ ಹಾಗೂ ಪ್ರಾಯೋಗಿಕ. ಅಭಿನಯಪ್ರಧಾನ ನೃತ್ತಬಂಧಗಳನ್ನೇ ಪ್ರಸ್ತುತಿಗೆ ಆರಿಸಿಕೊಳ್ಳಲಾಗಿತ್ತು. ಸಾಮಾನ್ಯವಾಗಿ ಹರಿದಾಸರ ಕೃತಿಗಳು ಎಂದಾಗ ನಮ್ಮ ಮನಸ್ಸಿಗೆ ಬರುವುದು ಭಕ್ತಿಭಾವ ತುಂಬಿದ ರಚನೆಗಳು ಎಂದೇ. ಆದರೆ ಅಪರೂಪಕ್ಕೆ ಕೆಲವು ಸಾಮಾಜಿಕ ಆಯಾಮವುಳ್ಳ, ಮಾನವ ಸಂಬಂಧಗಳನ್ನು ಕುರಿತ ಭಾವನೆಗಳ ಸುತ್ತ ಪರಿಕ್ರಮಿಸುವ ಕೃತಿಗಳೂ ಇವೆ. ಭರತನಾಟ್ಯ ಕಲಾವಿದೆಯ ಜೊತೆ ಸಂಶೋಧಕಿಯೂ ಆಗಿರುವ ಅಕ್ಷರಾ, ಶೃಂಗಾರ ರಸಸಿಂಚನವಿರುವ ಇಂಥ ಕೆಲಕೃತಿಗಳನ್ನು ಹೆಕ್ಕಿ ತೆಗೆದು ತಮ್ಮ ಪರಿಣತಾಭಿನಯ ಪುಷ್ಟಿಯಿಂದ ಚೈತನ್ಯಗೊಳಿಸಿ ರಸಿಕರಿಗೆ ರಸದೌತಣ ಉಣಬಡಿಸಿದ್ದು ನಿಜಕ್ಕೂ ವಿಶೇಷ. ಈ ಕೃತಿಗಳಲ್ಲಿ  ಶೃಂಗಾರ ಸ್ಥಾಯೀಭಾವವಾದರೂ, ಇದನ್ನು ಉದ್ದೀಪಿಸುವ ಲಜ್ಜೆ, ಕಂಪನ, ಸರಸ,ಹುಸಿಮುನಿಸು, ಅನುಮಾನ ಇತ್ಯಾದಿ ಸಂಚಾರಿಭಾವನೆಗಳು ಆವೃತವಾದುದರಿಂದ ಪ್ರಸ್ತುತಿ ವರ್ಣರಂಜಿತವಾಗಿತ್ತು. ಪ್ರೇಮಮಯಿಯಾದ ನಾಯಕಿಯ ವಿವಿಧ ಅವಸ್ಥೆಗಳನ್ನು ಅಕ್ಷರಾ, ತಮ್ಮ ಮೃದು-ಮಧುರ ಚಲನೆಗಳಿಂದ ಆವೇಗವಿಲ್ಲದ ಸೌಮ್ಯ ಅಭಿವ್ಯಕ್ತಿಯಿಂದ ನೋಡುಗರ ಹೃದಯಕ್ಕೆ ದಾಟಿಸಿದರು.

ಪ್ರಾರಂಭಕ್ಕೆ ‘ಪುಷ್ಪಾಂಜಲಿ’ ರೂಪದಲ್ಲಿ, ಜಗನ್ನಾಥದಾಸರ ‘ಹರಿಕಥಾಮೃತಸಾರ’ ದಿಂದ ಆಯ್ದ ಗಣೇಶವಂದನೆಯಲ್ಲಿ ಸಿದ್ಧಿ-ಬುದ್ಧಿಯರ ಪ್ರೇಮಾತಿಶಯದ ಸರಸ ಭಾವನೆಯನ್ನು ಗುರುತಿಸಲೆತ್ನಿಸಿದ ಕೃತಿಯ ಸಾಕಾರದಲ್ಲಿ ಅಕ್ಷರ, ತಮ್ಮ ಸುಸ್ಪಷ್ಟ ಆಂಗಿಕಾಭಿನಯ, ಅಭಿನಯದ ಮೋಹಕತೆಯಿಂದ ಗೆದ್ದರಾದರೂ, ಗಣೇಶಸ್ತುತಿಯಲ್ಲಿ ಶೃಂಗಾರಭಾವನೆಯ ಅಳವಡಿಕೆ ಅಷ್ಟು ಸೂಕ್ತವಾಗಿ ಹೊಂದಲಿಲ್ಲ.

ಮುಂದೆ, ಹೆಳವನಕಟ್ಟೆ ಗಿರಿಯಮ್ಮನವರ ‘ಬಾರನ್ಯಾತಕೆ ನೀರೆ ನೀ ಕರೆತಾರೆ ಸುಗುಣ ಗಂಭೀರನ..’ (ರಾಗಮಾಲಿಕೆ-ಮಿಶ್ರಛಾಪು ತಾಳ) ಎಂದು ಶಿವನಲ್ಲಿ ಮೋಹಿತಳಾದ ವಾಸಿಕಸಜ್ಜಾನಾಯಕಿಯ ವಿರಹಾಂತ ಭಾವನೆಗಳನ್ನು ‘ಶಬ್ದಂ’ ಆಗಿ ಪರಿಣಾಮಕಾರಿಯಾಗಿ ಚಿತ್ರಿಸಲಾಯಿತು. ತನ್ನಿನಿಯ ಶಿವನ ನಿರೀಕ್ಷೆಯಲ್ಲಿ ನಾಯಕಿ ವ್ಯಾಕುಲಳಾಗಿ, ಖಿನ್ನತೆಯಿಂದ ದುಃಖಪಡುತ್ತ, ಅವನನ್ನು ಕರೆತರುವಂತೆ ತನ್ನ ಸಖಿಯನ್ನು ಪೀಡಿಸುವ ದೈನ್ಯಸ್ಥಿತಿಯನ್ನು ಅಕ್ಷರಾ ಬಹು ಸಮರ್ಥವಾಗಿ ಸೆರೆಹಿಡಿದರು. ಶಿವನ ಗುಣಗಳನ್ನು ವರ್ಣಿಸುತ್ತ ತೋರಿದ ಖಚಿತ ಸುಂದರ ಆಂಗಿಕಗಳು, ವೀರ-ಧೀರ ಹೆಮ್ಮೆಯ ಭಾವಗಳ ಪ್ರತಿರೂಪವಾಗಿ ಪಾತ್ರದಲ್ಲಿ ನಿಮಗ್ನರಾದರು ಕಲಾವಿದೆ. ಕಾಮದಹನ ಮತ್ತು ಮಾರ್ಕಂಡೇಯನ ಕಥಾನಕದ ಸಂಚಾರಿಯಲ್ಲಿ ದೈವೀಕಭಾವ ಮಿನುಗಿದರೆ, ಪ್ರಣಯಿನಿಯ ಭಾವದಲ್ಲಿ ಭಕ್ತಿಮಿಶ್ರಿತ ಶೃಂಗಾರಭಾವ ಅಭೇಧ್ಯವಾಯಿತು. ಜತಿಗಳಲ್ಲಿ ನೃತ್ತದ ಖಾಚಿತ್ಯಸೌಂದರ್ಯ ಇಮ್ಮಡಿಸಿತು.

ಶ್ರೀಪಾದರಾಜರ ‘ಒಲ್ಲೆನವ್ವ ಲಕುಮಿಯ ನಲ್ಲ ಬಾರದಿದ್ದರೆ…’ ಎಂಬ ಕೃತಿಯಲ್ಲಿ ‘ ವರ್ಣ’ದ ಲಕ್ಷಣಗಳನ್ನು ಗುರುತಿಸಿ,  ಪ್ರಸ್ತುತಿಯ ಕೇಂದ್ರಭಾಗವನ್ನಾಗಿಸಲಾಗಿತ್ತು.  ರಂಗನ ಆಗಮನವನ್ನು ಕಾದ ವಿರಹೋತ್ಖಂಠಿತ ನಾಯಕಿಯ ಅಗಲಿಕೆಯ ಉತ್ಖಂಠತೆಯನ್ನು ಅಕ್ಷರಾ, ಪರಿಣತ ಅಭಿನಯದ ವಿವಿಧ ಮಜಲುಗಳಲ್ಲಿ  ಅನಾವರಣಗೊಳಿಸಿದಳು. ತನ್ನ ಹತಾಶಭಾವಗಳನ್ನು ಸೌಮ್ಯ ನೃತ್ತಗಳ ಮೂಲಕ ಅಭಿವ್ಯಕ್ತಿಸಿದಳು. ಅವಳ ದುಃಖಾರ್ತ ಭಾವಕ್ಕನುಗುಣವಾಗಿ ಗಾಯಕ ಕಾರ್ತೀಕ್ ಹೆಬ್ಬಾರ್ ಭಾವಪೂರ್ಣ ದನಿಯಾಗಿ, ನೋವನ್ನು ಸಾಂದ್ರಗೊಳಿಸಿದರು. ಇನಿಯನ ಸಂಗವಿಲ್ಲದೆ ನಾಯಕಿಗೆ ಹೂವಿನ ಹಾರವೂ ಭಾರ, ಬೆಳದಿಂಗಳೂ ಸುಡುವುದು, ಮಂದಾನಿಲನೂ ಹಿತ ತರನು. ಸೋತ-ವಿಷಾದಭಾವದಲ್ಲಿ ಅವಳಿಗೆ ಏನೂ ಬೇಡವಾಗಿ ತನ್ನ ರಂಗ ಪರವನಿತೆಯರ ಮೋಹದಲ್ಲಿ ವಿಚಲಿತನಾದನೇ ಎಂಬ ಭಯ ಕಾಡುತ್ತದೆ. ಅವನ ನಿರೀಕ್ಷೆಯ ತಯಾರಿಯ ಉತ್ಸಾಹ ಇಂಗಿ, ತನ್ನ ಪ್ರೇಮ ರಾಯಭಾರಿಯಾಗುವಂತೆ  ಪ್ರತಿ ಪ್ರಾಣಿ-ಪಕ್ಷಿಗಳನ್ನು ಬೇಡುವಲ್ಲಿ ಭಾವಪೂರ್ಣ ಅಭಿನಯ ತೋರುತ್ತಾಳೆ ಕಲಾವಿದೆ. ನಡುನಡುವೆ ಸೇತುವೆಯಂತೆ ಸಹಜವಾಗಿ ಬೆಸೆದು ಬರುವ ಸೌಮ್ಯನೃತ್ತಗಳು ಭಾವಕ್ಕೆ ಕನ್ನಡಿಯಾದವು.

ಮುಂದೆ ಅಭಿಸಾರಿಕಾ ನಾಯಕಿಯ ‘ಪದಂ’ ಅಭಿನಯದಲ್ಲೂ ಅಕ್ಷರಾ, ಗೋಪಿಕೆಯರು ಕೃಷ್ಣನ ಮುರಳಿಗಾನ ಕೇಳಿ ವಿಚಲಿತರಾಗಿ, ತಮ್ಮರಿವಿಲ್ಲದೆ, ಕರುವನ್ನು ತೊಟ್ಟಿಲಿಗೆ ಹಾಕಿ ತೂಗುತ್ತಾರೆ, ಬೆಕ್ಕಿಗೆ ಎದೆಹಾಲುಣಿಸಿ, ಕಿವಿಗೆ ನೂಪುರ ಹಾಕಿಕೊಳ್ಳುವ ಇವೇ ಮುಂತಾದ ಅನೇಕ ಆಭಾಸಗಳನ್ನು ಸೃಷ್ಟಿಸುತ್ತಾ ನಗೆಗೀಡಾಗುವ ಸನ್ನಿವೇಶಗಳನ್ನು ಪುನರ್ಸೃಷ್ಟಿಸುವಲ್ಲಿ ಸಫಲರಾದರು.  ಪರಕೀಯನಾಯಿಕಾಭಾವದ ‘ಸದ್ದು ಮಾಡಲಿ ಬೇಡವೋ ರಂಗಯ್ಯ’ ಎಂಬ ಶ್ರೀಪಾದರಾಜರ ಕೃತಿಯಲ್ಲಿ ಗೆಣೆಯ ಕೃಷ್ಣನ ಅನಿರೀಕ್ಷಿತ ಆಗಮನದಿಂದ ಗಲಿಬಿಲಿಯಾದರೂ ಖುಷಿಪಡುವ ಗೃಹಿಣಿಯ ಪ್ರೇಮಪ್ರಕರಣವನ್ನು ಕಲಾವಿದೆ ಸುಂದರವಾಗಿ ನಿರೂಪಿಸಿದಳು. ಜೀವಾತ್ಮ-ಪರಮಾತ್ಮಭಾವದ ಕೊನೆಯ ‘ದಶಾವತಾರ’ ಕೃಷ್ಣ-ಸತ್ಯಭಾಮರ ಪ್ರೇಮಾಲಾಪದ ಹಾಸ್ಯದ ಲಹರಿಯಲ್ಲಿ ಸಾಗುತ್ತ, ಕಲಾವಿದೆ ತಮ್ಮ ಹೃದ್ಯ ಅಭಿನಯದಿಂದ, ನೋಡುಗರ ಮನಸ್ಸನ್ನು ಆವರಿಸಿದರು.

Related posts

ಸಂಗೀತ ತ್ರಿವಳಿ ರತ್ನಗಳಿಗೆ ನೃತ್ಯನಮನ

YK Sandhya Sharma

ಪ್ರಕೃತಿಯ ಮನೋಜ್ಞ ಭಂಗಿಗಳ ಪ್ರಬುದ್ಧಾಭಿನಯದ ನರ್ತನ

YK Sandhya Sharma

ರಸಾನುಭವ ನೀಡಿದ ಮಧುಶ್ರೀ ನರ್ತನ

YK Sandhya Sharma

Leave a Comment

This site uses Akismet to reduce spam. Learn how your comment data is processed.