Image default
Dance Reviews

ಪ್ರೌಢ ಅಭಿನಯದ ಸೊಗಸಾದ ನರ್ತನ

ಭಾವಪೂರ್ಣ ಅಭಿನಯ ಮತ್ತು ಶುದ್ಧನೃತ್ತಗಳ ವಲ್ಲರಿಯಿಂದ ನೋಡುಗರ ಕಣ್ಮನ ಸೆಳೆದ ಭರತನಾಟ್ಯ ಕಲಾವಿದೆ ಅನಿಷಾ ಯರ್ಲಾಪಟಿ ಇತ್ತೀಚಿಗೆ ಜೆ.ಎಸ್.ಎಸ್. ಆಡಿಟೋರಿಯಂನಲ್ಲಿ ಯಶಸ್ವಿಯಾಗಿ ರಂಗಪ್ರವೇಶ ಮಾಡಿದಳು. ಅಂತರರಾಷ್ಟ್ರೀಯ ಖ್ಯಾತಿಯ ನೃತ್ಯದಂಪತಿಗಳಾದ ಡಾ.ಶ್ರೀಧರ್ ಮತ್ತು ಅನುರಾಧ ಅವರ ಶಿಷ್ಯೆ           ’ಖೇಚರ ಅಕಾಡೆಮಿ’ಯ ಉತ್ತಮ ಕಲಾವಿದೆಯಾಗಿ ಹೊರಹೊಮ್ಮಿದ ಅನಿಷಾ, ತನ್ನ ಸಾರ್ಥಕ ನೃತ್ಯಪ್ರದರ್ಶನದಿಂದ ಗುರುಗಳ ಹೆಸರನ್ನು ದೇದೀಪ್ಯಮಾನಗೊಳಿಸಿದಳು.

ಡಾ.ಶ್ರೀಧರ್ ನೃತ್ಯಸಂಯೋಜಿಸಿದ ‘ವೆಂಕಟೇಶ್ವರ ಸುಪ್ರಭಾತ’ದ ಶುದ್ಧನರ್ತನದ ನೃತ್ಯಾಂಜಲಿಯಲ್ಲಿ ಕಲಾವಿದೆ, ನಿರೂಪಿಸಿದ ಆಕರ್ಷಕ ಆಕಾಶಚಾರಿಗಳು, ನವವಿನ್ಯಾಸದ ನೃತ್ತಗಳೊಂದಿಗೆ, ವೆಂಕಟೇಶನಿಗೆ ಸಮರ್ಪಿಸಿದ ಶರಣಾಗತಭಾವದಲ್ಲಿ ದೈವೀಕತೆ ಕೆನೆಗಟ್ಟಿತ್ತು. ಕಣ್ಮನ ತುಂಬಿದ ಭಂಗಿಗಳು ಅನನ್ಯವಾಗಿತ್ತು. ಆರಂಭಿಕ ‘ಅಲ್ಲರಿಪು’ ವಿನಲ್ಲಿ ತೋರಿದ ಅಂಗಶುದ್ಧಿಯ ಅಚ್ಚುಕಟ್ಟುತನ ಮೆಚ್ಚುಗೆ ಪಡೆದರೆ, ‘ಜತಿಸ್ವರ’ದಲ್ಲಿ ನಿರೂಪಿತವಾದ ಜತಿಗಳ ಲಾಸ್ಯಕ್ಕೊಂದು ಹೊಸತನದ ವೈಶಿಷ್ಟ್ಯವಿತ್ತು. ಎಲ್ಲಕ್ಕಿಂತ ಪ್ರಮುಖವಾಗಿ ಕಲಾವಿದೆಯ ಮಂದಸ್ಮಿತವದನ ನರ್ತನಕ್ಕೆ ಆಹ್ಲಾದದ ಚೌಕಟ್ಟು ನಿರ್ಮಿಸಿತ್ತು.

‘ವೀಣಾಪಾಣಿ ಪುಸ್ತಕಧಾರಿಣಿ’-ಮುತ್ತುಸ್ವಾಮಿ ದೀಕ್ಷಿತರ ಕೃತಿಯನ್ನು ಅನಿಷಾ, ಸ್ಫುಟವಾದ ಆಂಗಿಕಾಭಿನಯದೊಂದಿಗೆ ಏಕಾಗ್ರತಾಭಾವದ ಪಕ್ವಾಭಿನಯ ಬೆರೆಸಿ ಮನಸೂರೆಗೊಂಡಳು. ‘ಸ್ವಾಮಿ ನಾನುಂದನಡಿಮೈ…’- ‘ವರ್ಣ’ದಲ್ಲಿ ವಿರಹೋತ್ಖಂಠಿತ ನಾಯಕಿಯಾಗಿ ಹರಿಸಿದ ಭಾವದ ಹೊನಲು ಆರ್ದ್ರತೆಯನ್ನು ಸೂಸಿತ್ತು. ನಡುವೆ ಸುಳಿದ ನೃತ್ತದ ಒಘವೂ ಸಾತ್ವಿಕಾಭಿನಯಕ್ಕೆ ಪೂರಕವಾಗಿತ್ತು. ವರ್ಣದಂಥ ಸುದೀರ್ಘ ಬಂಧವನ್ನು ನಿರಾಯಾಸವಾಗಿ ಅಷ್ಟೇ ಗೆಲುವಾಗಿ ಪ್ರದರ್ಶಿಸಿದ ಆತ್ಮವಿಶ್ವಾಸದ ಗರಿಮೆ ಅವಳದಾಗಿತ್ತು. ಸಂಚಾರಿಗಳಲ್ಲಿ ಶಿವನ ಮಹಿಮೆಯನ್ನು ಬಣ್ಣಿಸುವ ವಿವಿಧ ಸನ್ನಿವೇಶಗಳಲ್ಲಿ ಮೂಡಿಬಂದ ಶಿವನ ಅನನ್ಯ ಭಂಗಿಗಳು ಸ್ಮರಣೀಯ. ಹಾಗೆಯೇ ‘ಚಂದ್ರಚೂಡ ಶಿವಶಂಕರ…’- ಎಂಬ ಪುರಂದರದಾಸರ ಅಪರೂಪದ ಕೃತಿಯನ್ನು ಹೃದಯಸ್ಪರ್ಶಿಯಾಗಿ ಅರ್ಪಿಸಿದಳು. ಲವಲವಿಕೆಯ ‘ತಿಲ್ಲಾನ’ದೊಂದಿಗೆ ಪ್ರಸ್ತುತಿ ಸಂಪನ್ನಗೊಂಡಿತು.

Related posts

ರಸಾನುಭವ ನೀಡಿದ ಆಹ್ಲಾದಕರ ಮೃಣಾಲಿಯ ನರ್ತನ

YK Sandhya Sharma

ನಾಟಕೀಯ ಸೆಳೆಮಿಂಚಿನ ತೆನಾಲಿಯ ರಮ್ಯಚಿತ್ರಣ

YK Sandhya Sharma

ವಿಶಿಷ್ಟ ಸೊಬಗಿನ ನಾಟ್ಯಾರಾಧನೆ

YK Sandhya Sharma

Leave a Comment

This site uses Akismet to reduce spam. Learn how your comment data is processed.