Image default
Dance Reviews

ಅಪೂರ್ವ ಭಂಗಿಗಳ ಚೇತೋಹಾರಿ ನೃತ್ತಾಭಿನಯ

ನೃತ್ಯ ಪ್ರದರ್ಶನಕ್ಕೆ ಆರಿಸಿಕೊಂಡ ಕೃತಿಗಳ ಉತ್ತಮಿಕೆಯಿಂದ ಒಂದು ನೃತ್ಯಪ್ರಸ್ತುತಿಯ ಸ್ವಾರಸ್ಯ, ವೈವಿಧ್ಯ ಹೆಚ್ಚುವ ಸಾಧ್ಯತೆಗಳಿವೆ. ಅದಕ್ಕೆ ಸಾಕ್ಷಿಭೂತವಾದುದು ಇತ್ತೀಚಿಗೆ ನಗರದ ಎ.ಡಿ.ಎ. ರಂಗಮಂದಿರದಲ್ಲಿ ನಡೆದ ಅಕ್ಷಯ ಮಧುರವಾಣಿಯ ಯಶಸ್ವೀ ರಂಗಪ್ರವೇಶ. ಖ್ಯಾತ ‘ರಸಾನಂದ’ ನೃತ್ಯಶಾಲೆಯ ನಾಟ್ಯಗುರು ಮತ್ತು ನೃತ್ಯ ಸಂಯೋಜಕಿ ಪೂರ್ಣಿಮಾ ಮೋಹನ್ ರಾಮ್ ಅವರ ಗರಡಿಯಲ್ಲಿ ರೂಪುಗೊಂಡ ಕಲಾಶಿಲ್ಪ ‘ಅಕ್ಷಯ’.

ಅಂದಿನ ಪ್ರಸ್ತುತಿ ಸಂಪೂರ್ಣ ಭಕ್ತಿಪ್ರಧಾನ ಕೃತಿಗಳಿಗೆ ಒತ್ತು ನೀಡಿದ್ದು ನಿಜಕ್ಕೂ ಅಪೂರ್ವವಾಗಿತ್ತು. ಮೊದಲಿನಿಂದ ಕಡೆಯವರೆಗೂ ನಡೆದ ನೃತ್ಯಸೇವೆಯಲ್ಲಿ ಭಕ್ತಿಭಾವ ಕೆನೆಗಟ್ಟಿತ್ತು. ಹಸಿತವದನೆ ಅಕ್ಷಯ, ಪ್ರಾರಂಭಕ್ಕೆ ಗುರು-ಹಿರಿಯರಿಗೆ, ಪ್ರೇಕ್ಷಕರಿಗೆ ನಮನ ಸಲ್ಲಿಸುವ ‘ಪುಷ್ಪಾಂಜಲಿ’ಯನ್ನು ತನ್ನ ಅಂಗಶುದ್ಧಿಯ ನೃತ್ಯದ ಮೂಲಕ ಅಚ್ಚುಕಟ್ಟಾಗಿ ಅರ್ಪಿಸಿದಳು. ಅದರ ಹಿನ್ನಲೆಯಲ್ಲೇ ‘ಗಣೇಶ ಭುಜಂಗ ಸ್ತೋತ್ರ’ವನ್ನು ಮನೋಹರ ಆಂಗಿಕಗಳು ಮತ್ತು ನವವಿನ್ಯಾಸದ ಹರಿತನೃತ್ತಗಳನ್ನು ಅಭಿವ್ಯಕ್ತಿಸಿ ತನ್ನ ಕಲಾನೈಪುಣ್ಯವನ್ನು ಪ್ರದರ್ಶಿಸಿದಳು.

ಅನಂತರ- ಖಂಡಛಾಪು ತಾಳದ ‘’ನರಸಿಂಹ ಕೌತ್ವಂ’’ನಲ್ಲಿ ದುಷ್ಟ ಶಿಕ್ಷೆ-ಶಿಷ್ಟ ರಕ್ಷೆಗಾಗಿ ಅವತರಿಸಿದ ನರಸಿಂಹಾವತಾರದ ಸುಂದರ ಕಥಾನಕವನ್ನು ದೃಶ್ಯಾತ್ಮಕವಾಗಿ ಅಭಿವ್ಯಕ್ತಿಸಿದಳು. ಕಲಾವಿದೆಯ ಪಕ್ವಾಭಿನಯ ಮತ್ತು            ನೃತ್ತಾಭಿವ್ಯಕ್ತಿಯ ಕೌಶಲ್ಯ ಸಾಮರ್ಥ್ಯಕ್ಕೆ ಈ ಕೃತಿ ಸಾಕ್ಷಿಯಾಯಿತು. ಮಿಂಚಿನ ಸಂಚಾರದ ನೃತ್ತಗಳು, ಭ್ರಮರಿ, ಆಕಾಶಚಾರಿ, ಅರೆಮಂಡಿಯ ನೃತ್ತಗಳು ಅವಳ ಸುಂದರ ನರ್ತನಕ್ಕೆ ಮನೋಹರ ಪ್ರಭಾವಳಿಯಾದವು. ಪ್ರಹ್ಲಾದನ ನಿಜಭಕ್ತಿಗೆ ಓಗೊಟ್ಟು ಕಂಭದಿಂದ ಹೊರಬಂದ ನರಹರಿಯ ಕೋಪಾತಿಶಯ, ಉಗ್ರ ಹಾಗೂ ವಿರಾಟ್ ಸ್ವರೂಪದ ನಿರೂಪಣೆಯಲ್ಲಿ, ಅಕ್ಷಯ, ತನ್ನ ಕೆಂಗಣ್ಣುಗಳನ್ನರಳಿಸಿ ರೌದ್ರರಸವನ್ನು ಹರಿಸಿದಳು. ಕಲ್ಯಾಣಕಾರಕ ಲಕ್ಷ್ಮೀ ನೃಸಿಂಹ ಅನುಗ್ರಹವನ್ನು ಕರುಣಿಸಲೆಂಬುದಾಗಿ  ಭಕ್ತಿಸಿಂಚನಗೈದಳು. ಮುಂದೆ ರಸಿಕಪ್ರಿಯ ರಾಗದ ‘ಜತಿಸ್ವರ’ದಲ್ಲಿ ಶುದ್ಧನೃತ್ತಗಳಲ್ಲಿ ರಮ್ಯತೆ ಬೆರೆಸಿ, ತನ್ನ ಆಹ್ಲಾದಕರ ನರ್ತನವನ್ನು ಶಿಲ್ಪಸದೃಶ ಭಂಗಿಗಳಲ್ಲಿ ಚೆಂದವಾಗಿಸಿದಳು. ಗುರು ಪೂರ್ಣಿಮಾ ಅವರ ಅಸ್ಖಲಿತ ಸ್ಪಷ್ಟ ನಟುವಾಂಗ ನೃತ್ತಗಳಿಗೆ ಅಧಿಕ ಪುಷ್ಠಿ ನೀಡಿತು.

ಪಾಪನಾಶಂ ಶಿವನ್ ರಚನೆಯ (ರಾಗ- ಶ್ರೀರಂಜಿನಿ) ‘ಪದವರ್ಣಂ’ ಕ್ಲಿಷ್ಟ ಜತಿಗಳಿಂದ ಕೂಡಿದ್ದು, ಕಲಾವಿದೆಯ ನೃತ್ಯಸಾಮರ್ಥ್ಯಕ್ಕೆ ಸವಾಲು ನೀಡುವಂತಿತ್ತು. ಮುರುಗನನ್ನು ಸ್ತುತಿಸುವ ಕೃತಿಯಲ್ಲಿ ನಾಯಿಕಾ ಅವನಲ್ಲಿ ಅನುರಕ್ತಳಾಗಿ ವಿರಹೋತ್ಖಂಕಂಠಿತಳಾಗಿ ಅವನ ಅಗಲಿಕೆಯಿಂದ ಉದ್ವಿಗ್ನಳಾಗಿದ್ದಾಳೆ. ಪ್ರಿಯತಮನನ್ನು ಕರೆ ತಾರೆಂದು ಸಖಿಗೆ ಬಿನ್ನವಿಸುವ ನಾಯಕಿಯ ಶೃಂಗಾರ ಭಾವನೆಗಳ ಅಭಿವ್ಯಕ್ತಿ ಭಾವಪೂರ್ಣವಾಗಿ ಚಿಮ್ಮಿದರೂ, ಅಂತ್ಯದಲ್ಲಿ ಈ ವಿರಹತಾಪ ಪರಾಕಾಷ್ಟತೆಯಲ್ಲಿ ಭಕ್ತಿಯ ಪಾರಮ್ಯದ ಓಕುಳಿಯಾಗುತ್ತದೆ. ಸಂಚಾರಿಯಲ್ಲಿ- ವಲ್ಲಿಯ ಬಳಿಸಾರುವ ಮುರುಗ ಅವಳನ್ನು ಕೆರಳಿಸಿ ಪರೀಕ್ಷಿಸಿ ಅವಳಿಗೊಲಿವ ರಮ್ಯಕಥಾನಕವನ್ನು ಅಕ್ಷಯ ತನ್ನ ಸೂಕ್ಷ್ಮ, ಅಷ್ಟೇ ಸುಮನೋಹರ ಅಭಿನಯದಿಂದ ಸ್ವಾರಸ್ಯವಾಗಿ ನಿರೂಪಿಸಿದಳು. ಪರಮಾತ್ಮನ ಸಮಾಗಮಕ್ಕಾಗಿ ಹಾತೊರೆವ ಜೀವಾತ್ಮನನ್ನು ಸಂಕೇತಿಸುವ ನಾಯಿಕೆಯ ಪರಿತಾಪ ಮನಮುಟ್ಟುತ್ತದೆ. ನಾದನೃತ್ಯ ನೀರಾಜನದಿಂದ ಚೇತನ ಉದ್ದೀಪಿತವಾಗುತ್ತದೆ. ಪರಮಾತ್ಮ ಮತ್ತು ಜೀವಾತ್ಮರ ಸಮ್ಮಿಲನ, ಭಾವಪಟಲದಲ್ಲಿ ಸುಂದರ ಚಿತ್ರಣವನ್ನು ರಚಿಸುತ್ತದೆ. ಕಲಾವಿದೆ ಮಯೂರವಾಹನ ಷಣ್ಮುಖನ ವರ್ಣನೆಯನ್ನು ಮನದುಂಬಿ ಬಗೆಬಗೆಯಾಗಿ ಬಣ್ಣಿಸುವ ಪರಿ ಹೃದಯಸ್ಪರ್ಶಿಯಾಗಿದೆ.

ಮುಂದೆ ಶ್ರೀ ಶಂಕಾರಾಚಾರ್ಯ ಕೃತ ‘ಕಂಜದಳಾಯತಾಕ್ಷಿ’ ಯನ್ನು ಅಕ್ಷಯ, ಪ್ರಫುಲ್ಲಚಿತ್ತಳಾಗಿ ಬರಮಾಡಿಕೊಂಡು ಮನಸಾರೆ ಸ್ತುತಿಸಿದ ಪ್ರಸ್ತುತಿಯಲ್ಲಿ ದೈವೀಕತೆ ಅರಳಿತು. ಅಣ್ಣಮಾಚಾರ್ಯರ ‘ ಶ್ರೀಹರಿವಾಸಂ’ ಕೀರ್ತನೆಯನ್ನು ತಾದಾತ್ಮ್ಯಭಾವದಿಂದ ನರ್ತಿಸಿದಳು. ಗಾಯಕಿ ಭಾರತಿ ವೇಣುಗೋಪಾಲರ ಸುಸ್ವರದಲ್ಲಿ ಭಕ್ತಿ ರಸಾಯನವಾಯಿತು. ಸೊಗಸಾದ ಮಂಡಿ ಅಡವುಗಳಿಂದ ಕೂಡಿದ ‘’ ತಿಲ್ಲಾನ’’ ಮತ್ತು ಭಕ್ತಿಭಾವದ ಸಾಯಿ ‘’ಮಂಗಳಂ’’ ಸ್ಮರಣೀಯವಾಗಿ ಮನಸ್ಸಿನಲ್ಲುಳಿಯಿತು.

Related posts

ಕಣ್ಮನ ಸೆಳೆದ ಅನಘಾ-ನಿಧಿ ಬೋಳಾರ್ ಅಪೂರ್ವ ನೃತ್ಯ

YK Sandhya Sharma

ನತಾನಿಯಾ ಮನೋಜ್ಞ ಭಂಗಿಗಳ ಅದ್ಭುತ ನರ್ತನ

YK Sandhya Sharma

ವೈವಿಧ್ಯಪೂರ್ಣ ರಸಲಹರಿ ಆಶ್ರಿತಾಳ ನೃತ್ಯಾರ್ಪಣೆ

YK Sandhya Sharma

Leave a Comment

This site uses Akismet to reduce spam. Learn how your comment data is processed.