Image default
Dance Reviews

Mahamaya Arts Foundation – Mahamaya Festival Day-2

ವರ್ಣರಂಜಿತ ನೃತ್ಯಧಾರೆಯ  ‘ಮಹಾಮಾಯ’- ನೃತ್ಯೋತ್ಸವದ ದ್ವಿತೀಯ ದಿನ

ಮಾಗಿಕಾಲದ ಚುಮು ಚುಮು ಮುಚ್ಚಂಜೆಯಲ್ಲಿ ಬೆಂಗಳೂರಿನ ಮಲ್ಲೇಶ್ವರದ ಸೇವಾಸದನ ರಂಗಮಂದಿರದಲ್ಲಿ ರಂಗೇರಿದ ಕಲಾತ್ಮಕ ವಾತಾವರಣ. ಆಸಕ್ತಿಯಿಂದ ನೆರೆದ ಕಲಾರಸಿಕರ ಜನಸ್ತೋಮ. ವೇದಿಕೆಯ ಮೇಲೆ ಅನೇಕ ಬಗೆಯ ಅತ್ಯಾಕರ್ಷಕ ನೃತ್ಯ ವಿಸ್ಮಯಗಳು. ಭಾರತೀಯ ನೃತ್ಯಪರಂಪರೆಯ ವಿವಿಧ ಶಾಸ್ತ್ರೀಯ ನೃತ್ಯ ಶೈಲಿಗಳ ಸುಂದರ ಅನಾವರಣ. ‘ಮಹಾಮಾಯ ಆರ್ಟ್ಸ್ ಫೌಂಡೇಶನ್’ ನ ಪ್ರಸಿದ್ಧ ನೃತ್ಯ ದಂಪತಿಗಳಾದ ಸೂರ್ಯ ಎನ್. ರಾವ್ ಮತ್ತು ಪ್ರಥಮಾ ಪ್ರಸಾದ್ ರಾವ್ ಅವರ ಸಹಭಾಗಿತ್ವದಲ್ಲಿ ಸುರತ್ಕಲ್ಲಿನ ಖ್ಯಾತ ನೃತ್ಯಗುರು ವಿದ್ವಾನ್. ಕೆ. ಚಂದ್ರಶೇಖರ ನಾವಡ ಅವರ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ಸಂಸ್ಥೆಯ 40 ರ ಸಂಭ್ರಮಕ್ಕಾಗಿ ಹಮ್ಮಿಕೊಂಡಿದ್ದ ಎರಡು ದಿನಗಳ ಕಲೋತ್ಸವ ಅತ್ಯಂತ ಯಶಸ್ವಿಯಾಗಿ ನೆರವೇರಿತ್ತು. 

ಕಲೋತ್ಸವದ ದ್ವಿತೀಯ ದಿನ ತನ್ನದೇ ಆದ ಅಸ್ಮಿತೆಯಿಂದ ಕೂಡಿತ್ತು. ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರಾದ ಮಹಾ ಸಂಗೀತ ಸಾಧಕ ಶ್ರೀ ಮುತ್ತುಸ್ವಾಮಿ ದೀಕ್ಷಿತರ 250 ವರ್ಷಗಳ ಸಂಸ್ಮರಣೆಗಾಗಿ ಅವರಿಗೆ ಭಾವಾರ್ಪಣೆಯಾದ ಅಪೂರ್ವ ಕಾರ್ಯಕ್ರಮ ಅದಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ. ಸಂಗೀತಕ್ಕೆಂದೇ ರಚಿತವಾದ ದೀಕ್ಷಿತರ ಕ್ಲಿಷ್ಟಕರ ವಿಲಂಬಿತ ಕೃತಿ ಪಾಕವನ್ನು ಯಾವುದೇ ಎರಕದಲ್ಲಿ ಹುಯ್ದರೂ ರುಚಿಗೆಡದು ಎಂಬುದಕ್ಕೆ ಸಾಕ್ಷೀಭೂತವಾಗಿತ್ತು ಅಂದಿನ ವಿವಿಧ ನೃತ್ಯ ಶೈಲಿಗಳ ಆವಾಹನೆಯ ಸಾಕ್ಷಾತ್ಕಾರ. ಭರತನಾಟ್ಯ, ಕುಚಿಪುಡಿ, ಕಥಕ್, ಒಡಿಸ್ಸಿ ಮತ್ತು ಸತ್ರಿಯ ಮುಂತಾದ ವಿವಿಧ ನೃತ್ಯಶೈಲಿಗಳ ಸಂಗಮವಾಗಿ ನಡೆದ ನೃತ್ಯಾವಳಿಗಳು ರಸಾನುಭವ ನೀಡುವುದರಲ್ಲಿ ಸಫಲವಾಗಿ, ಎಲ್ಲವೂ ದೈವೀಕ ನೃತ್ಯಾರ್ಪಣೆಯ ರಸಾನಂದವನ್ನು ಧಾರೆ ಎರೆದವು.  

ಮೊದಲಿಗೆ ಕಲಾವಿದ ಸುವಿನ್ ಪ್ರಸಾದ್ ‘ಕಂಜದಳಾಯತಾಕ್ಷಿ ಕಾಮಾಕ್ಷಿ’ಯನ್ನು ತಮ್ಮ ಭರತನಾಟ್ಯದ ಸೊಬಗಿನ ಆಂಗಿಕಾಭಿನಯ ಮತ್ತು ಭಾವಪೂರ್ಣ- ಭಕ್ತಿ ತಾದಾತ್ಮ್ಯತೆಯ  ಅಭಿನಯಗಳಲ್ಲಿ ದೈವೀಕವಾಗಿ ಚಿತ್ರಿಸಿದರು. ದೀಕ್ಷಿತರ ಪಾಶ್ಚಾತ್ಯ ಗಾನ-ರಾಗದಲೆಗಳ ‘ನೊಟ್ಟು ಸ್ವರ’ ದ ವಿನೂತನ ಝಲಕ್, ಪ್ರೇಕ್ಷಕರ ಕಣ್-ಕಿವಿಗಳು ನಿಮಿರುವಂತೆ ಮಾಡಿತ್ತು. ಅದಕ್ಕೆ ತಕ್ಕಂತೆ ಹಗುರ-ಅಲೆಯ ಚಲನೆಯ ಹೆಜ್ಜೆಗಳಿಂದ ಸುಮ್ಮಾನ ತುಳುಕಿಸಿದ ಸುವಿನ್ ನರ್ತನದ ಹೊಸ ಪದರದ ಮಿನುಗು, ಕುಣಿತದ ಅಲೆಯಲ್ಲಿ ಮೀಯುತ್ತ ನೋಡುಗರು ಸಂಭ್ರಮಿಸಿದ್ದರು.

 ಅನಂತರ ಅಭಿನಯ ಪ್ರಧಾನವಾದ ಹಿರಿಯ ಗುರು ಡಾ. ವೀಣಾ ಮೂರ್ತಿ ವಿಜಯ್ ಅವರ ಪ್ರೌಢ ನೃತ್ಯ ಸಮರ್ಪಣೆ ವಿಶಿಷ್ಟವಾಗಿತ್ತು. ಪ್ರಕೃತಿ- ಪಂಚಭೂತಗಳ ಬಗ್ಗೆ ಬಹು ಆಸ್ಥೆಯುಳ್ಳ ದೀಕ್ಷಿತರು ಯಮನ್ ಕಲ್ಯಾಣಿ ರಾಗದಲ್ಲಿ ರಚಿಸಿದ ಜಲರೂಪದ ಶಿವನ ಕುರಿತ  ‘ಜಂಭೂಪತೇ ಮಾಂ ಪಾಹಿ ’ – ಎಂಬ ಜಲಲಿಂಗನ ಅರ್ಥಾತ್ ಶಿವಸ್ತುತಿಯನ್ನು ವಿಳಂಬ ಕಾಲದ ಕೃತಿಗೆ ಅನ್ವರ್ಥಕವಾಗಿ ವೀಣಾ ಅವರು ಸಣ್ಣ ತೊರೆ, ಹಳ್ಳ ಕೊಳ್ಳ- ಕೆರೆ, ನದಿ, ಸಮುದ್ರದವರೆಗೂ ಹರಿಯುತ್ತಾ ಸಾಗಿದ ಗಂಗಾ ಸಲಿಲ, ಬಾಗಿ ಬಳುಕುತ್ತ, ಅಲೆಯಲೆಯಾಗಿ ಹರಿದ ಪರಿಯನ್ನು ತಮ್ಮ ಸುಲಲಿತ ಆಂಗಿಕಾಭಿನಯದಲ್ಲಿ ಕಣ್ಮುಂದೆ ತಂದ ಪರಿ ಗಾಢವಾಗಿತ್ತು. ಮುಂದಿನ ಪ್ರಸ್ತುತಿಯ ಕೃತಿ ಇಂದಿಗೂ ಪ್ರಸ್ತುತವಾಗಿತ್ತು. ಅಂದೂ ಇಂದೂ ಸಮಸ್ಯೆಯಾಗಿರುವ ಸಾರ್ವಕಾಲಿಕ ವಿಷಯವಾದ ಮಳೆ ಮತ್ತು ನೀರಿನ ಪ್ರಾಮುಖ್ಯವನ್ನು ಎತ್ತಿಹಿಡಿಯುವ ‘ಆನಂದಾಮೃತ ಕರ್ಷಿಣಿ’ ರಾಗ ಹಾಡಿ, ದೀಕ್ಷಿತರು ಮಳೆಗಾಗಿ ಕಾತರಿಸಿದ ನಿರ್ಜಲ ಪುರವೊಂದರಲ್ಲಿ ಮಳೆ ತರಿಸಿದ ಹೃದಯಸ್ಪರ್ಶೀ ಘಟನೆಯನ್ನು ದೃಶ್ಯಾತ್ಮಕವಾಗಿ ಕಣ್ಮುಂದೆ ತಂದು ನಿಲ್ಲಿಸಿದರು. ಮಳೆಯ ಚಿಟಿ ಪಿಟಿ ಸಣ್ಣ ಹನಿಗಳು ಮೇಲಿನಿಂದ ಉದುರುತ್ತ, ಎಳೆ ಎಳೆಯಾಗಿ ಧರೆಗಿಳಿಯುತ್ತ ಬರುಬರುತ್ತಾ ಅವು ಜೋರುಮಳೆಯ ಮುಸಲಧಾರೆಯಾಗಿ ಸಮೃದ್ಧ ವರ್ಷವೃಷ್ಟಿಗೈದು, ಭೂಮಿಯನ್ನು ತಣಿಸಿದ ಸುಂದರ- ಸಮಗ್ರ ಚಿತ್ರಣವನ್ನು ವೀಣಾ, ತಮ್ಮ ನವಿರಾದ ಅಷ್ಟೇ ಭಾವಪೂರಿತವಾದ ನುರಿತ ಅಭಿನಯದಲ್ಲಿ ‘ಗಂಗಾರತಿ’, ‘ಅಭಿನಯ ಪ್ರಾತ್ಯಕ್ಷಿಕೆ’ಯಂತೆ ನಿರೂಪಿಸಿದ್ದು ನಿಜಕ್ಕೂ ಅನುಪಮ ರೂಪಕವಾಗಿತ್ತು. ಮಳೆಯ ಹನಿ ಬೀಳುವ ಅನನ್ಯ ಪರಿಯನ್ನು ಮಹೇಶಸ್ವಾಮಿ ಅವರ ಕೊಳಲ ನಿನಾದ ಮೊಗೆ ಮೊಗೆದು ನೀಡಿತ್ತು.

ಮುಂದೆ- ಒಡಿಸ್ಸೀ ನೃತ್ಯಗಾರ್ತಿ ವಂದನಾ ಸುಪ್ರಿಯಾ ಕಾಸರವಳ್ಳಿ ತಮ್ಮ ದ್ರವೀಕೃತ ಚಲನೆಗಳ – ಸುಕೋಮಲ ನಡೆಯ ನವಿರು ಭಾವ-ಭಂಗಿಗಳ ಸಾತ್ವಿಕಾಭಿನಯದಲ್ಲಿ ‘ಅಖಿಲಾಂಡೇಶ್ವರಿ ರಕ್ಷಮಾಂ’ ಎಂದು ಭಕ್ತಿ ಭಾವದಿಂದ ದೇವಿಯ ಸುರಮ್ಯ ರೂಪ- ಮಹಿಮಾತಿಶಯವನ್ನು ನಿಧಾನಗತಿಯ ಲಯಾತ್ಮಕ ಹೆಜ್ಜೆ-ಗೆಜ್ಜೆಗಳ ಉಲಿಯಲ್ಲಿ ಮಾರ್ದವತೆಯಿಂದ ಸಾಕ್ಷಾತ್ಕರಿಸಿದರು.

ಕಲಾವಿದೆಯ ಸೊಂಟ ಬಳುಕುಗಳ ಮೃದು ಚಲನೆಗಳು, ತ್ರಿಭಂಗಿಯ ವಯ್ಯಾರದ ಬಾಗು- ಬಳುಕುಗಳು, ಭ್ರಮರಿಗಳ ತರಂಗ, ಶಿಲ್ಪಸದೃಶ ಭಂಗಿಗಳ ಶೋಭೆ ಕಲಾವಿದೆಯ ನೃತ್ಯ ಸೌಂದರ್ಯವನ್ನು ಪಸರಿಸಿದವು.

ಮುಂದೆ ರೂಪಾ ಮೂರ್ತಿ ಮತ್ತು ಕೀರ್ತಿ ಕುಮಾರ್ ಜೋಡಿ ‘ಸುಬ್ರಹ್ಮಣ್ಯೇನ ರಕ್ಷಿತೋ ಹಂ’ – ಎಂದು ಶಿವಪುತ್ರ ಸುಬ್ರಹ್ಮಣ್ಯನ ವೈಶಿಷ್ಟ್ಯ- ಚರಿತ್ರೆಯನ್ನು ಬಿಂಬಿಸುವ ಶಾಂತಿ-ಸೌಹಾರ್ದಗಳ ಸಾರವನ್ನು, ಕಥಕ್ ನೃತ್ಯ ಲಾಸ್ಯದಲ್ಲಿ ವಿನೂತನ ಭಂಗಿಗಳ ಅನಾವರಣ, ಭ್ರಮರಿ- ತತ್ಕಾರಗಳ ಹಾಲು ಜೇನಿನ ಸಮನ್ವಯದಲ್ಲಿ, ಕರಾರುವಾಕ್ಕಾದ ಮುಕ್ತಾಯಗಳ ಸೊಬಗಿನಲ್ಲಿ ನರ್ತಿಸಿದರು.

ಭಾರತೀಯ ನೃತ್ಯ ಪರಂಪರೆಯ ವಿಭಿನ್ನ ಶೈಲಿಯ ನೃತ್ಯ ಪ್ರಕಾರವಾದ ಅಸ್ಸಾಮಿನ ‘ಸತ್ರಿಯಾ’ ಶೈಲಿಯಲ್ಲಿ ಕಲಾವಿದೆಯರಾದ ಶ್ರೀದೇವಿ ಜಗನ್ನಾಥ್ ಮತ್ತು ರೋಹಿಣಿ ಅನಂತ್, ಪ್ರಾಯೋಗಿಕ ಪ್ರಯತ್ನವಾಗಿ ದೀಕ್ಷಿತರ  ‘ಶ್ರೀ ರಂಗಾಪುರ ವಿಹಾರ’ ಎಂಬ ಅದ್ಭುತ ಕೃತಿಯಲ್ಲಿ ಶ್ರೀರಂಗನಾಥನನ್ನು ರಾಮನ ರೂಪದಲ್ಲಿ ಆವೀರ್ಭವಿಸಿ, ದಶಾವತಾರದ ಹತ್ತೂ ಕಥೆಗಳನ್ನು, ಒಂದೊಂದು ಮುಖ್ಯ ಘಟನೆಗಳಲ್ಲಿ ಇಡೀ ಅವತಾರದ ಕಥಾನಕದ ಸಾರಾಂಶವನ್ನು ಬೀಜರೂಪದಲ್ಲಿ ಎರಕ ಹುಯ್ದು ತಮ್ಮ ವಿನೂತನ – ವಿಶಿಷ್ಟ ಭಂಗಿಗಳಲ್ಲಿ ಕಣ್ಮನ ತುಂಬಿದರು. ಭರತನಾಟ್ಯದ ಹಸ್ತಮುದ್ರೆಗಳಂತೆ ಕಂಡರೂ ಕೊಂಚ ಭಿನ್ನತೆ ಮೆರೆದ ಅಂದದ ಮುದ್ರಿಕೆ-ಪಾದಚಲನೆಗಳ ಸೌಂದರ್ಯದಿಂದ ರಂಗದ ತುಂಬಾ ಲವಲವಿಕೆಯಿಂದ ಸಂಭ್ರಮದ ಹೆಜ್ಜೆಗಳನ್ನು ಹಾಕುತ್ತ ಯುಗಳ ಕಲಾವಿದೆಯರು ನಾವೀನ್ಯವನ್ನು ಮೆರೆದರು. ಶ್ರೀರಂಗನಾಥನ ದೈವಮಹಿಮೆಯ ಬಾಹುಗಳು ಎಲ್ಲೆಡೆ ಚಾಚಿ, ಭಾರತದ ಉದ್ದಗಲಕ್ಕೂ ಆವರಿಸಿದ, ದೀಕ್ಷಿತರ ಕೃತಿಗಳ ಆತ್ಮ ವಿಸ್ತೃತಗೊಂಡಿರುವ ಬೆರಗು ಕಣ್ಣರಳಿಸುವಂತೆ ಮಾಡಿತು.   

 ದೀಕ್ಷಿತರು ಎಲ್ಲೂ ಸಲ್ಲುವರು ಎಂಬ ಸತ್ಯವನ್ನು ಈ ವೈವಿಧ್ಯಪೂರ್ಣ ನೃತ್ಯಶೈಲಿಗಳ ದೈವೀಕ ನೃತ್ಯಾರ್ಪಣೆಗಳು ನಿಸ್ಸಂದೇಹವಾಗಿ ಸಾಕ್ಷೀಕರಿಸಿದವು.

ಅಂತ್ಯದ ವಿಸ್ಮಯ ಪ್ರಸ್ತುತಿಯಾಗಿ, ಪುರುಷ ನರ್ತಕರಲ್ಲಿ ಅದ್ಭುತ ಕಲಾವಿದರೆಂದು ಹೆಸರು ಮಾಡಿರುವ ನೃತ್ಯ ನಿಪುಣ  ಸೂರ್ಯನಾರಾಯಣ್ ರಾವ್ ‘ಅರ್ಧನಾರೀಶ್ವರ’ -ಸುಂದರ ಪರಿಕಲ್ಪನೆಯಲ್ಲಿ ಏಕವ್ಯಕ್ತಿ ಪ್ರದರ್ಶನ ನೀಡಿ, ತಮ್ಮ ಅನನ್ಯ ಪ್ರತಿಭೆಯ ದ್ಯೋತಕವಾಗಿ ವಿವಿಧ ಆಕರ್ಷಕ ಭಂಗಿಗಳನ್ನು ಪ್ರದರ್ಶಿಸಿ ಕಲಾಶಿಲ್ಪದಂತೆ ಕಂಗೊಳಿಸಿದರು. ಮಾಂತ್ರಿಕ ಸ್ಪರ್ಶದ ವಿವಿಧ ಸೂಕ್ಷ್ಮ ಭಂಗಿಗಳ ಸುಭಗತೆಯಿಂದ ಶಿವ- ಶಿವೆಯರ ಅಂಗವಿನ್ಯಾಸಗಳನ್ನು ಮಾರ್ಮಿಕ ಚಲನೆಗಳಿಂದ ಅನನ್ಯವಾಗಿ ಕಟ್ಟಿಕೊಟ್ಟ ಸೂರ್ಯ ರಾವ್ ತಾವೊಬ್ಬ ಅನುಪಮ ಕಲಾವಿದ ಎಂದು ನಿರೂಪಿಸಿದರು.

‘ಮಹಾಮಾಯ’ -ಕಲೋತ್ಸವದ ರಂಗೇರಿದ ನೃತ್ಯ ವೈವಿಧ್ಯಗಳು, ಕಾಮನ ಬಿಲ್ಲಿನಂತೆ ವಿವಿಧ ಬಣ್ಣಗಳ ಕಾಂತಿಯಲ್ಲಿ ಮಿಂಚಿ ರೋಮಾಂಚಕ ಅನುಭವ ನೀಡಿ ಮುದ ನೀಡಿತು. ಜೊತೆಗೆ ಅನೇಕತೆಯಲ್ಲಿ ಏಕತೆ ಮೆರೆದು ಏಕಮೇವಾ ದ್ವಿತೀಯವೆನಿಸಿ, ಚಿರಸ್ಮರಣೀಯ ಅನುಭವದ ಛಾಪನ್ನು ಒತ್ತಿತ್ತು. 

                            ****************

Related posts

ರಂಜನಿ ರಂಗಪ್ರವೇಶದ ಮೂಲಕ ಮೆರೆದ ಸಾಮಾಜಿಕ ಕಾಳಜಿ

YK Sandhya Sharma

ಮನಸೆಳೆದ ಪವಿತ್ರಳ ಪ್ರಫುಲ್ಲ ನರ್ತನ

YK Sandhya Sharma

ನೃತ್ಯದೊಡನೆ ಜ್ಞಾನವಿಕಾಸ-ಹೊಸ ಪ್ರಯೋಗ

YK Sandhya Sharma

Leave a Comment

This site uses Akismet to reduce spam. Learn how your comment data is processed.