Image default
Dance Reviews

ಮನಸೆಳೆದ ಪವಿತ್ರಳ ಪ್ರಫುಲ್ಲ ನರ್ತನ

ರಂಗದ ಮೇಲೆ ಮೈಮರೆತು ನರ್ತಿಸಲು ಕಲಾವಿದರಾದವರಿಗೆ ಮುಖ್ಯವಾಗಿ ಬೇಕಾದುದು ಅಭಿನಯ ಚತುರತೆಯೊಂದಿಗೆ ತನ್ಮಯತಾ ಭಾವ, ಭಾವನಿಮಗ್ನತೆ. ನೃತ್ಯಕಲಾವಿದರ ತನು-ಮನಗಳನ್ನು ಆವರಿಸಿದ ಆನಂದದ ನರ್ತನ ವೀಕ್ಷಿಸುವ ರಸಿಕರ ಕಣ್ಮನಗಳಿಗೂ ಅಷ್ಟೇ ಮುದ ನೀಡುವುದು ಸಹಜ. ಈ ಮಾತಿಗೆ ಸಾಕ್ಷಿಯಾದವರು ಇತ್ತೀಚಿಗೆ ನಗರದ ಎ.ಡಿ.ಎ. ರಂಗಮಂದಿರದಲ್ಲಿ ರಂಗಪ್ರವೇಶ ಮಾಡಿದ ಕು. ಪವಿತ್ರ ಭೂಪತಿ. ನರ್ತಕಿ ಪ್ರಸ್ತುತಿಯ ಆರಂಭದಿಂದ ಅಂತ್ಯದವರೆಗೂ ಅದೇ ಹಸನ್ಮುಖ ಕಾಪಾಡಿಕೊಂಡು ಬಂದಿದ್ದು  ವಿಶೇಷ, ನಗು ಮೊಗದಲ್ಲಿ ಅರಳಿದ ದಂತಪಂಕ್ತಿಗಳನ್ನು ಪ್ರದರ್ಶಿಸುತ್ತ  ಪವಿತ್ರ ನಿರಾಯಾಸವಾಗಿ ಭಾವತನ್ಮಯತೆಯಿಂದ ಹೆಜ್ಜೆ ಹಾಕಿದಳು.

ನಗರದ ಖ್ಯಾತ ‘’ಶಿವಪ್ರಿಯ’’ ನೃತ್ಯಸಂಸ್ಥೆಯ ಗುರು ಡಾ. ಸಂಜಯ್ ಶಾಂತಾರಾಂ ಅವರ ಉತ್ತಮ ಮಾರ್ಗದರ್ಶನ ತರಬೇತಿಯಲ್ಲಿ ಅರಳಿದ ಈ ಕಲಾ ಕುಸುಮ ಕಾಲಿಗೆ ಗೆಜ್ಜೆ ಕಟ್ಟಿ ತಾನು ಕಲಿತದ್ದನ್ನು ಆತ್ಮವಿಶ್ವಾಸದಿಂದ ಪ್ರದರ್ಶಿಸಿದಳು. ನೋಡುಗರನ್ನು ಸೆಳೆವ ಆಕರ್ಷಕ ‘’ಆಹಾರ್ಯ’’ ( ಉಡುಗೆ-ತೊಡುಗೆ) , ಹಿನ್ನಲೆಯಲ್ಲಿ ಕಂಚಿನಕಂಠದ ಸುಮಧುರ ಗಾಯನ ( ಡಾ.ಸಂಜಯ್), ನಟುವಾಂಗ ( ಎನ್.ಸಜಿನಿ), ವೀಣೆ ( ವಿ.ಗೋಪಾಲ್), ಮೃದಂಗ ( ತುಮಕೂರು ಶಶಿಶಂಕರ್), ಕೊಳಲು (ಗಣೇಶ್),ರಿದಂಪ್ಯಾಡ್ಸ್ ( ಕಾರ್ತೀಕ್ ದಾತಾರ್) ಗಳ ಹಿಮ್ಮೇಳದ ಸಹಕಾರದಲ್ಲಿ ಪವಿತ್ರ, ಗುರುಗಳು ಹೇಳಿಕೊಟ್ಟಿದ್ದನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿದಳು.   

ರಂಗವನ್ನು ಪ್ರವೇಶಿಸುತ್ತಿದ್ದಂತೆ, ಕಲಾವಿದೆ, ಸಂಪ್ರದಾಯದಂತೆ ಶುದ್ಧ ಗಂಗೋದಕದಿಂದ ಇಡೀ ರಂಗವನ್ನು ಶುದ್ಧೀಕರಿಸಿ ಪವಿತ್ರಗೊಳಿಸಿ, ವಿನೀತಳಾಗಿ ಸಮಸ್ತ ದೇವತೆಗಳು, ಗುರು-ಹಿರಿಯರು ಮತ್ತು ಕಲಾಭಿಮಾನಿಗಳಿಗೆ ನಮನ ಸಲ್ಲಿಸಿ ಆದಿವಂದಿತ ಗಣಪನಿಗೆ , ಸುಸೂತ್ರವಾಗಿ ತನ್ನ ನೃತ್ಯ ಪ್ರಸ್ತುತಿ ನಡೆಯಲು ಅನುವು ಮಾಡಿಕೊಡಬೇಕೆಂದು ಪ್ರಾರ್ಥಿಸಿದಳು. `ಶ್ರೀ ಗಣನಾಥಂ ಭಜಾಮ್ಯಹಂ ….’ ಎಂಬುದಾಗಿ ಭಜಿಸುತ್ತ ಗಣಪತಿಯ ವಿವಿಧ ರೂಪಗಳನ್ನು ಅಭಿನಯಿಸಿ ತೋರುತ್ತ, ಅವನ ಮಹಿಮೆಯನ್ನು ಸ್ತುತಿಸುತ್ತ ಪ್ರಪ್ಹುಲ್ಲತೆಯಿಂದ ನರ್ತಿಸಿದಳು.

ತಂಜಾವೂರು ಸಹೋದರರು ರಚಿಸಿದ, ರೂಪಕತಾಳದ ` ಅಲ್ಲರಿಪು’ ವಿನ ಸರಳ ನೃತ್ತಗಳ ಪ್ರಸ್ತುತಿಯನ್ನು ಪ್ರಾಮಾಣಿಕತೆಯಿಂದ ಪ್ರದರ್ಶಿಸಿದಳು. ಇಲ್ಲಿ ಗಮನ ಸೆಳೆದದ್ದು ಪವಿತ್ರಳ  ಕಣ್ಣು-ಹುಬ್ಬುಗಳ ಚಲನೆ, ಗ್ರೀವ ಭೇದಗಳು ಮತ್ತು ಅರೆಮಂಡಿ ಅಡವುಗಳು. ನಂತರದ `ಜತಿಸ್ವರ’ ದಲ್ಲಿ ಚುರುಕಾದ ಹೆಜ್ಜೆಗಳು, ಖಚಿತ ಹಸ್ತವನ್ನು ನೀಟಾಗಿ ನಿರೂಪಿಸಿದಳು. ಮುಂದೆ ಮಿಶ್ರಚಾಪು ತಾಳದ “ಶಬ್ದಂ’’ ನೃತ್ತ ಹಾಗೂ ಅಭಿನಯಗಳಿಗೆ ಸಮಾನ ಪ್ರಾಮುಖ್ಯ ನೀಡಿದ ಕೃತಿ. ಕೃಷ್ಣ ಈ ಕೃತಿಯ ಕೇಂದ್ರ ಪಾತ್ರ. ಇದರ ನಾಯಿಕಾ, ತನ್ನನ್ನು ನಿರ್ಲಕ್ಷಿಸುವ, ಬಾಲಿಶವಾಗಿ ವರ್ತಿಸುವ  ತನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳದ ಅವನ ಹುಡುಗಾಟಕ್ಕೆ ವಿಲಪಿಸುತ್ತಿದ್ದಾಳೆ. ಬಾಲಕೃಷ್ಣನ ತುಂಟಾಟಗಳ ನಿರೂಪಣೆಯಲ್ಲಿ ಕಲಾವಿದೆ, ಅಂಬೆಗಾಲಿಕ್ಕುತ್ತ, ಮಣ್ಣು ತಿಂದು, ವಿಶ್ವರೂಪವನ್ನು ತೋರಿದ , ಗೋಪಿಕೆಯರ ಹಾಲು-ಮೊಸರಿನ ಗಡಿಗೆಗಳಿಗೆ ಕಲ್ಲು ಹೊಡೆಯುವ ದೃಶ್ಯಗಳನ್ನು, ಎಲ್ಲರ ಮನಗಳನ್ನು ಕದಿಯುವ ಆ ಮನೋಹರ ರೂಪಿ ಕೃಷ್ಣನ ನಾನಾ ಚೇಷ್ಟೆಗಳನ್ನು ಸುಂದರ ಅಭಿನಯದಲ್ಲಿ ಅನನ್ಯವಾಗಿ ಪ್ರದರ್ಶಿಸಿದಳು. ನಡುನಡುವೆ ಮಿಂಚುವ ನೃತ್ತಗಳೂ ಅಂದವಾದ ಭಂಗಿಗಳು ಅಷ್ಟೇ ಸುಂದರವಾಗಿ ಮೂಡಿದವು.

ಅನಂತರ, ಕ್ಷೇತ್ರಯ್ಯ ವಿರಚಿತ ಜನಪ್ರಿಯ ‘’ಪದಂ’’ (ರಾಗ-ಶಂಕರಾಭರಣ) `ಯೆವ್ವಡೆ ನೇನು ,,,’- ಎಂಬುದಾಗಿ ವಿರಹೋತ್ಖಂಡಿತ ನಾಯಕಿ ತನ್ನ ಸಖಿಗೆ ಆಪ್ತವಾಗಿ ಹೇಳಿಕೊಳ್ಳುತ್ತಿದ್ದಾಳೆ.

`ಯಾರೇ ಅವನು..ನನ್ನೆದೆಗೆ ಕಾಮಬಾಣ ಹೂಡಿದ ಆ ಮನ್ಮಥ ಸ್ವರೂಪಿ, ಅನಾಮತ್ತು ಬಂದವನು, ನನ್ನನ್ನು ಆಲಂಗಿಸಿ ಪ್ರೀತಿ ಸುಖವನ್ನೆರೆದು  ಮೂಕಳನ್ನಾಗಿಸಿದವ, ಹದಿನಾರು ಸಾವಿರ ಹೆಣ್ಣುಗಳ ಮನದಿನಿಯ, ಅವನ ಅಗಲಿಕೆ ಸಹಿಸೆ, ಬೇಗ ಕರೆದು ತಾ ‘ ಎಂದು ಅನುನಯದಿಂದ ಬೇಡುವ ಅಭಿನಯವನ್ನು ಪರಿಣಾಮಕಾರಿಯಾಗಿ ನಿರೂಪಿಸಿದಳು ಪವಿತ್ರ.

ಮಾರ್ಗಂನ ಒಂದು ಮುಖ್ಯಭಾಗ `ಜಾವಳಿ’. ಇದರ ರಚನೆಕಾರರು ಡಾ.ಸಂಜಯ್. ನಾಟ್ಯಗುರು, ಗಾಯಕ, ನೃತ್ಯ ಸಂಯೋಜಕರಾದ ಇವರು ಉತ್ತಮ ವಾಗ್ಗೇಯಕಾರರೂ ಕೂಡ ಎಂಬುದು ಇವರ ವೈಶಿಷ್ಟ್ಯ. ಇದುವರೆಗೂ ಇವರು ಹತ್ತು ಪದವರ್ಣಂ, ಹದಿನೈದು ಪ್ರಾರ್ಥನಾ ಕೃತಿಗಳು,ಇಪ್ಪತ್ತು ದೇವರನಾಮಗಳು, ಹತ್ತು ತಿಲ್ಲಾನಗಳು ಮತ್ತು ಹದಿನಾಲ್ಕು ಜತಿಗಳನ್ನು ರಚಿಸಿದ್ದಾರೆ. ಶಿವಶಕ್ತಿ ರಾಗದ ಈ ‘’ ಜಾವಳಿ’’ ಯಲ್ಲಿ ನಾಯಕಿ ದುಃಖಿಸುತ್ತ ಕುಳಿತಿದ್ದಾಳೆ. `ಕಾಂತನ ಕರೆವೆಯಾ ಪ್ರಿಯ ಸಖಿ…’ ಎಂದು ತನ್ನ ಗೆಳತಿಯಲ್ಲಿ ತನ್ನ ಮನದ ನೋವನ್ನು ತೋಡಿಕೊಳ್ಳುತ್ತಾಳೆ. ಮಾತಿನಲ್ಲಿ ಮರುಳು ಮಾಡುವ ಮೋಡಿಕಾರ, ಪೊಳ್ಳು ಭರವಸೆಗಳಿಂದ ವಂಚಿಸುವ ಪರಸ್ತ್ರೀ ವ್ಯಾಮೋಹಿ ಎಂದು ತಿಳಿದೂ ಇವಳಿಗೆ ಅವನ ಬಗ್ಗೆ ಅನುರಾಗ ಬತ್ತಿಲ್ಲ. ಪತ್ರ ಬರೆದು ಗೆಳತಿಯನ್ನು ಅವನಲ್ಲಿ ರಾಯಭಾರಿಯಾಗಿ ಕಳಿಸಿದ  ಇವಳು ಅವನ ನಿರೀಕ್ಷೆಯಲ್ಲಿ ಕಲ್ಲಾಗಿ ಕೂತು ಕಾಯುವ ದೃಶ್ಯವನ್ನು ಕಲಾವಿದೆ ಅನುಪಮವಾಗಿ ಕಟ್ಟಿಕೊಟ್ಟಳು.

ಪ್ರಸ್ತುತಿಯ ಅಂತಿಮ ಹಂತ ‘’ತಿಲ್ಲಾನ’’ . ಡಾ.ಬಾಲ ಮುರಳೀಕೃಷ್ಣ ವಿರಚಿತ, ಮುರುಳೀಲೋಲನ ಕೊಳಲಗಾನದ ಮಹಿಮೆಯ ಬಣ್ಣನೆಯನ್ನು ಒಳಗೊಂಡ ಈ `ತಿಲ್ಲಾನ’ ವನ್ನು ಪವಿತ್ರ ಲವಲವಿಕೆಯಿಂದ ನಿರೂಪಿಸಿ, ಮಂಗಳವನ್ನು ಶುಭಪ್ರದವಾಗಿ ಸಂಪನ್ನಗೊಳಿಸಿದಳು. ಕೈಲಾಸದ ಮುಖ್ಯದ್ವಾರದ ಪ್ರತಿಬಿಂಬದಂತಿದ್ದ ರಂಗಸಜ್ಜಿಕೆ ನೃತ್ಯಕ್ಕೊಂದು ಅದ್ಭುತ ಆವರಣ ಸೃಷ್ಟಿಸಿತ್ತು. `ನಾಗೇಂದ್ರ ಹರಾಯ…ಓಂ ನಮಃ ಶಿವಾಯ’ ಡಾ.ಸಂಜಯ್ ಅವರ ಸುಶ್ರಾವ್ಯ ದನಿ ಹಿನ್ನಲೆಯಲ್ಲಿ ಮಾರ್ದನಿಸುತ್ತಿತ್ತು. ರಂಗವನ್ನಾವರಿಸಿದ್ದ ವರ್ಣರಂಜಿತ ಬೆಳಕಿನ ಚಮತ್ಕಾರ ಹೆಚ್ಚಿನ ಪರಿಣಾಮ ಬೀರಿತ್ತು.

                                            ********************************    

  •    

Related posts

ತ್ಯಾಗರಾಜರ ಚೇತನವನ್ನು ಸಾಕ್ಷಾತ್ಕರಿಸಿದ ಅಪೂರ್ವ ಕ್ಷಣಗಳು

YK Sandhya Sharma

ಕಣ್ಮನ ಸೆಳೆದ ವೈವಿಧ್ಯಪೂರ್ಣ ‘ತಾಳ್-ತರಂಗ್ ’

YK Sandhya Sharma

ಮೋಹಕತೆ ಚೆಲ್ಲಿದ ಕನ್ಯಾತ್ರಯರ ನರ್ತನ

YK Sandhya Sharma

Leave a Comment

This site uses Akismet to reduce spam. Learn how your comment data is processed.