Image default
Dance Reviews

ನೃತ್ಯದೊಡನೆ ಜ್ಞಾನವಿಕಾಸ-ಹೊಸ ಪ್ರಯೋಗ

ಕಣ್ಮನ ತುಂಬುವ ನೃತ್ಯವೈಭವ ಎಂಥವರನ್ನೂ ಸೆಳೆಯುವ ಮನರಂಜಕ ಪ್ರಸ್ತುತಿಗಳು. ನರ್ತಿಸುವವರಿಗೂ ಆನಂದದ ಭಾವುಕ ಅನುಭವ – ಸಾರ್ಥಕ್ಯದ ಅನುಭೂತಿ. ಇಂಥ ಅನುಪಮ ಕ್ಷಣಗಳನ್ನು ಆಗು ಮಾಡಿದವರು ‘ಸಾಧನ ಸಂಗಮ ನೃತ್ಯ ಕೇಂದ್ರ’ ದ ಖ್ಯಾತ ನಾಟ್ಯಗುರು ಜ್ಯೋತಿ ಪಟ್ಟಾಭಿರಾಮ್. ಬಸವೇಶ್ವರನಗರದಲ್ಲಿರುವ ಅವರ ನೃತ್ಯ ಕೇಂದ್ರ ‘ರಂಗೋಪನಿಷತ್’ ನೃತ್ಯಾಂಗಣದಲ್ಲಿ ‘ಮುಕುಲ ನೃತ್ಯೋತ್ಸವ’ದ ಮನೋಹರ ನೃತ್ಯ ಕಾರ್ಯಕ್ರಮಗಳು, ಕರೋನಾ ಕಾರ್ಮೋಡದ ನಂತರ ಹೊಂಗಿರಣವಾಗಿ ಸ್ಫುರಣಗೊಂಡವು.  

ನೃತ್ಯಾರ್ಥಿಗಳಿಗೆ ಕೇವಲ ಭರತನಾಟ್ಯವನ್ನು ಮಾತ್ರ ಇಲ್ಲಿ ಕಲಿಸಲಾಗುವುದಿಲ್ಲ. ನೃತ್ಯ ಕಲಿಯುವ ಮುನ್ನ ಅವರನ್ನು ಸರ್ವಾಂಗೀಣ ಸನ್ನದ್ಧ ಮಾಡುವುದು ಇವರ ಗುರಿ. ಮೈ ಬಾಗಿಸಿ ನೃತ್ಯ ಮಾಡಲು ಅನುಕೂಲವಾಗುವಂತೆ ಯೋಗವನ್ನು ಮತ್ತು ಅದನ್ನು ಕರಗತ ಮಾಡಿಕೊಳ್ಳಲು ಉತ್ತಮ ಮಾನಸಿಕ ಪಾಕ ಒದಗಿಸುವ ಆತ್ಮವಿದ್ಯೆಯನ್ನು ಪೂರಕವಾಗಿ ಕಲಿಸುವರು. ಆಗ ವಿದ್ಯಾರ್ಥಿಗಳಿಗೂ ಹಾಗೂ ಗುರುಗಳಿಗೂ ಇಬ್ಬರಿಗೂ ವಿದ್ಯಾರ್ಜಿಸಲು ಮತ್ತು ತರಬೇತಿ ನೀಡಲು ಇಂಬು ದೊರೆಯುತ್ತದೆ. ಹೀಗೆ ಇವರಿಂದ ಉತ್ತಮ ನೃತ್ಯ ಕಲಾವಿದೆಯರಾಗಿ ಸಂಪೂರ್ಣತೆ ಪಡೆದವರು ಅನೇಕರು. ಈ ದಿಸೆಯಲ್ಲಿ ಸಾಧನ ಸಂಗಮ ಶಿಷ್ಯರ ಸರ್ವಾಂಗೀಣ ಬೆಳವಣಿಗೆಗಾಗಿ ಅನೇಕ ಸೃಜನಾತ್ಮಕ ಮಗ್ಗುಲುಗಳಲ್ಲಿ ಶ್ರಮಿಸುತ್ತಿದೆ.

ಸಾಧನ ಸಂಗಮದ ಪ್ರತಿವರ್ಷ ಉದಯೋನ್ಮುಖ ನೃತ್ಯ ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸುವ ಸದಾಶಯದಿಂದ ನಡೆಸುವ ‘ಮುಕುಲೋತ್ಸವ’ ಒಂದು ವಿಶಿಷ್ಟ ಪ್ರಾಯೋಗಿಕ ಯಶಸ್ವೀ ಪ್ರಯತ್ನ. ಚಿಕ್ಕ ಮಕ್ಕಳಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಗಳು ಅತ್ಯವಶ್ಯ. ಇದನ್ನು ಮನಗಂಡ ಸಾಧನ ಸಂಗಮ, ವೇದಿಕೆಯನ್ನು ಒದಗಿಸುವುದಲ್ಲದೆ, ಉದಯೋನ್ಮುಖರನ್ನು ಪ್ರೋತ್ಸಾಹಿಸಲು ಉತ್ತಮಾಭಿರುಚಿಯುಳ್ಳ ಪ್ರೇಕ್ಷಕರು, ಸ್ಥಳಾವಕಾಶ ಇನ್ನಿತರ ಎಲ್ಲ ಸೌಲಭ್ಯಗಳೊಡನೆ ಬಹುಮಾನಿಸುವ ಪದ್ಧತಿಯನ್ನೂ ಅಳವಡಿಸಿಕೊಂಡಿರುವುದು ವಿಶೇಷ.

ಇತ್ತೀಚಿಗೆ ನಡೆದ ‘ಮುಕುಲ ನೃತ್ಯೋತ್ಸವ’ದಲ್ಲಿ ನೃತ್ಯಗುರುಗಳಾದ ವಿ. ದೀಪಾಭಟ್, ರಶ್ಮೀ ಥಾಪರ್ ಮತ್ತು ಭವ್ಯ ಮಂಜುನಾಥ್ ಅವರ ಶಿಷ್ಯರು ಸುಂದರ ನೃತ್ಯಗಳನ್ನು ಪ್ರಸ್ತುತಿಪಡಿಸಲು ಅವಕಾಶ ಒದಗಿಸಲಾಗಿತ್ತು.

ಮೊದಲಿಗೆ ‘ಕ್ರಿಶ್ವೀ ಆರ್ಟ್ ಫೌಂಡೇಷನ್’- ಗುರು ಭವ್ಯಾ ಮಂಜುನಾಥ್ ಪಂಚಶಿಷ್ಯರು -ಗಂಭೀರ ನಾಟ ರಾಗದ ‘ಶ್ರೀ ವಿಘ್ನರಾಜಂ ಭಜೆ’ ಎನ್ನುತ್ತಾ ಆದಿವಂದಿತ ಗಣಪತಿಯ ವಿವಿಧ ರೂಪಗಳನ್ನು ಸಾಕಾರಗೊಳಿಸಿ ಮನೋಹರವಾಗಿ ನರ್ತಿಸಿದರು. ಅಂಗಶುದ್ಧ ಜತಿಗಳು, ಸಂಚಾರಿ ಕಥಾನಕ್ ಅಚ್ಚುಕಟ್ಟಾಗಿ ಮೂಡಿಬಂತು. ನಟೇಶ ಕೌತ್ವಂ ಮತ್ತು ಕುವೆಂಪು ವಿರಚಿತ ಭೈರವನಾರಿಯ ದೈವೀಕ-ರುದ್ರ-ರಮಣೀಯ ಭಾವಗಳ ಸಂಗಮದ ಪ್ರಸ್ತುತಿ  ಕೂಡ ಅಷ್ಟೇ ಸಮರ್ಥವಾಗಿ ಹೊರಹೊಮ್ಮಿತು.

ಅನಂತರ ‘ನೃತ್ಯ ಸಿಂಚನ’ದ ಗುರು ರಶ್ಮೀ ಥಾಪರ್ ಶಿಷ್ಯರು, ಅಂಬಾ ಶಾಂಭವಿ, ಚಂದ್ರಮೌಳಿಯನ್ನು ಕುರಿತು ತಾದಾತ್ಮ್ಯತೆಯಿಂದ ಆರಾಧಿಸಿದರು. ನಯನ ಮನೋಹರ ಆಂಗಿಕಗಳು ರಮಣೀಯತೆಯನ್ನು ಕಟ್ಟಿಕೊಟ್ಟವು. ಪಂಚಭೂತದ ಮಹಿಮೆ-ವಿಶೇಷತೆಗಳನ್ನು ಸುಂದರ ಅಭಿನಯದ ಮೂಲಕ ಅರ್ಪಿಸಿದರು. ಅನಂತರ- ‘ನೃತ್ಯ ಕುಟೀರ’ದ ವಿ. ದೀಪಾ ಭಟ್ ಶಿಷ್ಯೆಯರು, ಆರಭಿ ರಾಗದ ‘ಪುಷ್ಪಾಂಜಲಿ’ ಯನ್ನು ವಿಶಿಷ್ಟ ಸಂಯೋಜನೆಯ ವಿನ್ಯಾಸಗಳಲ್ಲಿ ಪ್ರಸ್ತುತಪಡಿಸುತ್ತ ಮನೋಜ್ಞ ನೃತ್ಯವನ್ನು ಸಾಕಾರಗೊಳಿಸಿದರು. ಅಂಗಶುದ್ಧ -ಶಾಸ್ತ್ರೋಕ್ತ ರೀತಿಯಲ್ಲಿ ನೃತ್ಯಾಧಿದೇವತೆಯನ್ನು ಸುಂದರವಾಗಿ ಸಾಕ್ಷಾತ್ಕರಿಸಿ, ದಾಸರು ರಚಿಸಿದ ಭಾಗ್ಯಲಕ್ಷ್ಮಿಯನ್ನು ಭಕ್ತಿಭಾವದಿಂದ ಓಲೈಸುತ್ತ, ದೇವಿಗೆ ಅಕ್ಕರೆಯ ಆಹ್ವಾನ ನೀಡಿ ನೋಡುಗರ ಮನಕಾನಂದ ನೀಡಿದರು.

ನರ್ತಕಿಯರ ಯೋಗಭಂಗಿಗಳ ಅನೇಕ ವಿನ್ಯಾಸದ ನರ್ತನದ ನಂತರ ಅವರ ಮೆದುಳಿಗೆ ಕಸರತ್ತು ನೀಡುವ ಮುಂದಿನ ಅಂಕ ನಿಜಕ್ಕೂ ತುಂಬಾ ಸ್ವಾರಸ್ಯ ಹಾಗೂ ಕುತೂಹಲಕರವಾಗಿತ್ತು.  

ಮುದವಾಗಿ ನರ್ತಿಸಿದ ಮಕ್ಕಳು ಲಹರಿಯಲ್ಲಿದ್ದಾಗ ಪ್ರಾರಂಭವಾದದ್ದು ‘ನೃತ್ಯ ರಸಪ್ರಶ್ನೆ’ ಎಲ್ಲರನ್ನೂ ತನ್ನೊಳಗೆ ಸೆಳೆದುಕೊಂಡದ್ದು ವಿಶೇಷ.   

        ಯಾವಾಗಲೂ ಗುರು ಜ್ಯೋತಿ ಅವರ ಚಿಂತನೆ, ಯೋಜನೆಗಳೇ ವಿಭಿನ್ನ. ನೃತ್ಯ-ಸಂಗೀತದೊಡನೆ, ಯೋಗ-ಆತ್ಮವಿದ್ಯೆಗಳನ್ನು ಬಹು ಶ್ರದ್ಧೆ ಹಾಗೂ ಬದ್ದತೆಯಿಂದ ಕಲಿಸುವ ‘ಸಾಧನ ಸಂಗಮ’, ಎಲ್ಲ ನೃತ್ಯಾರ್ಥಿಗಳ ಸಮಗ್ರ ಅಭಿವೃದ್ಧಿ-ಬೆಳವಣಿಗೆಯ ಬಗ್ಗೆ ಚಿಂತಿಸುತ್ತದೆ. ಗುರುಗಳೊಡನೆ, ಹಿರಿಯ ಶಿಷ್ಯರಾದ ಡಾ. ಸಾಧನಶ್ರೀ ಸೇರಿದಂತೆ ಸುಮಾರು ಹತ್ತು-ಹನ್ನೆರಡು ಜನ ನುರಿತ ಕಲಾವಿದೆಯರು ತಿಂಗಳು ಮುಂಚಿನಿಂದಲೂ ಅಧ್ಯಯನ ಮಾಡಿ ಶ್ರಮಿಸಿ, ತಯಾರಿಸಿದ ‘ನೃತ್ಯ ರಸಪ್ರಶ್ನೆ’ -ಒಂದು ಅದ್ಭುತ ಪ್ರಯೋಗವಾಗಿತ್ತು. ನೃತ್ಯ ವಿದ್ಯಾರ್ಥಿಗಳಾದವರು ಕೇವಲ ನೃತ್ಯ ಪ್ರಸ್ತುತಿಯ ಕಡೆಗಷ್ಟೇ ತಮ್ಮ ಪರಿಶ್ರಮವನ್ನು ಕೇಂದ್ರೀಕರಿಸದೆ, ತಾವು ಮಾಡುವ ನೃತ್ಯದ ವ್ಯಾಕರಣ, ನಾಟ್ಯಶಾಸ್ತ್ರ ಮತ್ತು ಭಾರತೀಯ ಸಂಸ್ಕೃತಿಯ ಜ್ಞಾನ ಪ್ರಾಪ್ತಿ ಗಾಗಿ ನಮ್ಮ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ, ಚರಿತ್ರೆ, ಇತಿಹಾಸ- ಸಾಹಿತ್ಯಗಳ ಬಗ್ಗೆಯೂ ಸಮಗ್ರವಾಗಿ ತಿಳಿದುಕೊಂಡು ಪರಿಪೂರ್ಣತೆ ಗಳಿಸಬೇಕೆಂಬುದೇ ಈ ‘ನೃತ್ಯ ರಸಪ್ರಶ್ನೆ’ ಕಾರ್ಯಕ್ರಮದ ಉದ್ದೇಶವಾಗಿತ್ತು. ಪ್ರತಿವರ್ಷ ಇದರ ಮಾದರಿಗಳು ಬದಲಾಗುತ್ತ ಹೋಗುತ್ತ ಹೊಸ ಆಯಾಮಗಳಲ್ಲಿ ಗರಿಗೆದರುತ್ತದೆ.

ಪ್ರಶ್ನೋತ್ತರ, ಪದಬಂಧ, ಪ್ರಾತ್ಯಕ್ಷಿಕಾ ಪ್ರದರ್ಶನ, ರ್ಯಾಪಿಡ್ ಫೈರ್ ( ಥಟ್ಟಂತ ಹೇಳು) ಮುಂತಾದ ರಸಮಯ ಘಟ್ಟಗಳನ್ನು ಮಕ್ಕಳೊಂದಿಗೆ ಪ್ರೇಕ್ಷಕರೂ ಆನಂದಿಸಿದರು. ನೃತ್ಯ ಕುಟೀರದ ಕನ್ಯೆಯರು’ ಸಮರ್ಪಕ ಉತ್ತರಗಳನ್ನು ನೀಡಿ ‘ಮುಕುಲ ಬಾಲ ತಂಡ ಪ್ರಶಸ್ತಿ’ ಗಳಿಸಿ ಜಯಶಾಲಿಗಳಾದರು. ಈ ನಿಟ್ಟಿನಲ್ಲಿ ಹೊಸ ಪ್ರಯೋಗಗಳನ್ನು ಕಾರ್ಯಗತ ಮಾಡುತ್ತಿರುವ ‘ಸಾಧನ ಸಂಗಮ’ದ ಈ ವಿಶಿಷ್ಟ ಪ್ರಯತ್ನ ಸ್ತ್ಯುತಾರ್ಹವಾಗಿತ್ತು. .

                                 *********************

                                                                             

Related posts

ನಿರಂತರೋತ್ಸವದಲ್ಲಿ ‘ಪ್ರತಿಭಾ’ ಪ್ರದರ್ಶನ

YK Sandhya Sharma

ರಸಾನುಭವ ನೀಡಿದ ಆಹ್ಲಾದಕರ ಮೃಣಾಲಿಯ ನರ್ತನ

YK Sandhya Sharma

‘ನಾಟ್ಯ ಕಲಾಕ್ಷೇತ್ರ’ ದ ವಿಶಿಷ್ಟ ಪ್ರಯೋಗ “ಸೃಷ್ಟಿ-ಸ್ಥಿತಿ-ಲಯ”

YK Sandhya Sharma

Leave a Comment

This site uses Akismet to reduce spam. Learn how your comment data is processed.