Image default
Dance Reviews

Natanam Institute Of Dance- Naatyaarpanam

ಮುದ ನೀಡಿದ  ನಾಲ್ವರು ಲಲನೆಯರ ನಾಟ್ಯಾರ್ಪಣೆ

ನಾಟ್ಯಾಚಾರ್ಯ ಡಾ. ರಕ್ಷಾ ಕಾರ್ತೀಕ್

ನಾಲ್ವರು ಉದಯೋನ್ಮುಖ ಕಲಾವಿದೆಯರು ಒಂದಾಗಿ ಸಾಮರಸ್ಯದಿಂದ ಅಚ್ಚುಕಟ್ಟಾಗಿ ‘ನಾಟ್ಯಾರ್ಪಣೆ’ ಮಾಡಿದ್ದು ಸುಮನೋಹರವೆನಿಸಿತು. ಅದರಲ್ಲಿ ಇಬ್ಬರು ಗೃಹಿಣಿಯರು ಮತ್ತಿಬ್ಬರು ಷೋಡಷ ಕನ್ಯೆಯರು. ಎಲ್ಲರೂ ನೃತ್ಯಾಸಕ್ತರು-ನೃತ್ಯಾಭ್ಯಾಸಿಗಳು. ಪರಿಶ್ರಮದಿಂದ ವಿದ್ಯಾರ್ಜಿಸಿದವರು. ಅಂತರ್ರಾಷ್ಟ್ರೀಯ ನೃತ್ಯ ಕಲಾವಿದೆ-‘ನಟನಂ’ನೃತ್ಯಸಂಸ್ಥೆಯ ಗುರು ಡಾ. ರಕ್ಷಾ ಕಾರ್ತೀಕ್ ಅವರ ನುರಿತ ಗರಡಿಯಲ್ಲಿ ತರಬೇತಿಗೊಂಡ ಶಿಷ್ಯೆಯರು. ಇತ್ತೀಚಿಗೆ ನಗರದ ಜೆ.ಎಸ್.ಎಸ್. ಸಭಾಭವನದಲ್ಲಿ ಕಲಾತ್ಮಕವಾಗಿ ಸಜ್ಜುಗೊಂಡಿದ್ದ ದೈವೀಕ ಆವರಣದಲ್ಲಿ ಕಲಾವಿದೆಯರು ಬಹು ಸಂಭ್ರಮದಿಂದ ನವೋಲ್ಲಾಸದಿಂದ ನರ್ತಿಸಿದರು. ಎಲ್ಲರದೂ ಹಸನ್ಮುಖ-ನೃತ್ಯ ಕಾರಂಜಿಯ ಚಲನೆಗಳು. ಉತ್ತಮ ಆಯ್ಕೆಯ ಕೃತಿಗಳ ಪ್ರಸ್ತುತಿಯಿಂದ ಕಲಾರಸಿಕರನ್ನು ರಂಜಿಸಿದರು.

ಶುಭಾರಂಭ-ದೇವತಾ ಪ್ರಾರ್ಥನೆ, ಗುರು ಹಿರಿಯರಿಗೆ ಕೃತಜ್ಞತಾಪೂರ್ವಕ ವಂದನೆಯ ನೃತ್ತನಮನಗಳ ಅರ್ಪಣೆ. ಪ್ರಥಮವಂದಿತ ವಿನಾಯಕನ ಕುರಿತ ಭಕ್ತಿಪೂರಿತ ಶ್ರೀರಂಜಿನಿ ರಾಗ-ಆದಿತಾಳದ ( ರಚನೆ- ಪಾಪನಾಶಂ ಶಿವನ್) ‘ಗಜವದನ ಕರುಣಾ ಸದನ…’ ಕೃತಿಯನ್ನು ನಾಲ್ವರು ಕಲಾವಿದೆಯರು ಆನೆಮೊಗದ ಗಣಪನ ವೈಶಿಷ್ಟ್ಯ, ಮಹಿಮೆಗಳನ್ನು ಕುರಿತು ಕಣ್ಣಿಗೆ ಕಟ್ಟುವಂಥ ಸ್ಪಷ್ಟ ಚಿತ್ರಣವನ್ನು ತಮ್ಮ ಸುಂದರ ಆಂಗಿಕಗಳಲ್ಲಿ ಸಾಕಾರಗೊಳಿಸಿದರು.

ಅನಂತರ-ಶ್ರೀಮತಿ ಗೋವರ್ಧಿನಿ ಯತಿರಾಜನ್, ಪದ್ಮಶ್ರೀ  ದಂಡಾಯುಧಪಾಣಿ  ಪಿಳ್ಳೈ ಅವರ ರಾಗಮಾಲಿಕೆ-ಆದಿತಾಳದಲ್ಲಿ ರಚಿತವಾದ ‘ಉಲಗಂ ಪುಗಲಂ ನಾಟ್ಯಕಲೈ’  ಎಂಬ ಅರ್ಥಗರ್ಭಿತ ವಿಶೇಷ ‘ಪದಂ’ ಅನ್ನು ರಮ್ಯವಾಗಿ ಪ್ರಸ್ತುತಿಪಡಿಸಿದರು.  ನೃತ್ಯಕಲೆಯ ಅನನ್ಯತೆಯನ್ನು ಈ ಕೃತಿಯಲ್ಲಿ ವರ್ಣಿಸಲಾಗಿತ್ತು. ನೃತ್ಯ ಎಂಬುದು ಕೇವಲ ಮನರಂಜನೆಗಾಗಿ ಇರುವುದಲ್ಲ, ಅದು ದೈವೀಕ ಕಲೆ. ಅದನ್ನು ಹವ್ಯಾಸದ ಪರಿಧಿಗೆ ಬಂಧಿಸಬಾರದು. ಮನಸ್ಸಿನ ವೇದನೆಯನ್ನು ದೂರ ಮಾಡಿ ಆನಂದದಿಂದ ತುಂಬುವ ಈ ಅನನ್ಯ ಕಲೆ ಜೀವನ ಮಾರ್ಗವಾಗಬೇಕು, ಆತ್ಮತೇಜಸ್ಸನ್ನು ವೃದ್ಧಿಸುವ ಈ ಕಲೆ ಶಿಸ್ತು ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತದೆ ಎಂದು ಈ ಕಲೆಯ ಬಗ್ಗೆ ಅಭಿಮಾನದಿಂದ ಬಣ್ಣಿಸಿದ್ದಾರೆ ವಾಗ್ಗೇಯಕಾರರು.

ಕಲಾವಿದೆ ಕೃತಿಯ ಹೂರಣವನ್ನು ತನ್ನ ಸುಂದರ ಅಭಿನಯ-ಅಂಗಿಕಾಭಿನಯಗಳಲ್ಲಿ ಅಚ್ಚುಕಟ್ಟಾಗಿ ಅಭಿವ್ಯಕ್ತಿಸಿದಳು. ನೃತ್ಯಕಲೆಯ ವೈಶಿಷ್ಟ್ಯವನ್ನು ಸವಿವರವಾಗಿ ಬಿಡಿಸಿ ಹೇಳುವಂತೆ ತನ್ನ ನಗುಮೊಗದ ಭಾವನೆ-ಅಭಿನಯ ಸಾರದಲ್ಲಿ ಮುಂದಿಟ್ಟಳು.

ಮುಂದಿನ ನರ್ತನವನ್ನು ಅರ್ಪಿಸಿದವರು ಶ್ರೀನಿಧಿ ನಟರಾಜನ್. ಅಗಸ್ತ್ಯರು ರಚಿಸಿದರು ಎನ್ನಲಾದ ರಾಗಮಾಲಿಕೆ-ಆದಿತಾಳದ ‘ಶ್ರೀ ಚಕ್ರ ರಾಜ ಸಿಂಹಾಸನೇಶ್ವರಿ’ ಜಗನ್ಮಾತೆ, ಜ್ಞಾನದಾತೆ  ಲಲಿತಾಂಬಿಕೆಯ ವಿಶೇಷತೆಗಳನ್ನು ಬಣ್ಣಿಸುವ ದೈವೀಕ ಕೃತಿ. ಭಕ್ತಿ ತಾದಾತ್ಮ್ಯತೆಯಿಂದ ಅಖಿಲಾಂಡೇಶ್ವರಿಯನ್ನು ಆರಾಧಿಸಿದ ಕಲಾವಿದೆ,  ದೈನ್ಯತೆ-ಕರುಣಾರ್ದ್ರ ಭಾವಗಳಿಂದ ಕೂಡಿದ್ದ ತನ್ನ ಅನನ್ಯ ಭಕ್ತಿಯನ್ನು ಸಾತ್ವಿಕಾಭಿನಯದಿಂದ ಅಭಿವ್ಯಕ್ತಿಸಿದಳು. ಗಾಯಕ ಬಾಲಸುಬ್ರಮಣ್ಯ ಶರ್ಮರ ಭಾವಪೂರ್ಣ ಧ್ವನಿ ದೈವೀಕ ಝೇಂಕಾರಗೈದಿತ್ತು. ದೇವಿಯ ಅಪೂರ್ವ ಭಾವ- ಭಂಗಿಗಳು ಸುಮನೋಹರವಾಗಿದ್ದವು.

ಅನಂತರ- ಸಹನಾ ವೆಂಕಟಸಾಯಿ, ಕವಿ ಮುತ್ತುತಾಂಡವರು ರಚಿಸಿದ ( ರಾಗ- ಮಾಯಾ ಮಾಳವಗೌಳ- ಆದಿತಾಳ) ’ಆಡಿಕೊಂಡಾರ್’ -ಚಿದಂಬರದ ದೇವಾಲಯದಲ್ಲಿ ನರ್ತಿಸಿದ ನಟರಾಜನ ದಿವ್ಯ ನರ್ತನವನ್ನು ನೋಡಲು ಸಾವಿರ ಕಣ್ಣುಗಳು ಸಾಲವು ಎಂದು ಬೆರಗುಗೊಳ್ಳುವ ವಾಗ್ಗೇಯಕಾರರ ಕೃತಿಯನ್ನು ಸೊಗಸಾಗಿ ಸಾಕ್ಷಾತ್ಕಾರಗೊಳಿಸಿದಳು. ಗುರು ರಕ್ಷಾರ ನಟುವಾಂಗದ ಸ್ಫುಟವಾದ ತಾಳಕ್ಕೆ ಹೆಜ್ಜೆ ಹೆಣೆದ ಸಹನಾ ಢಮರುಗ ಹಿಡಿದು ನರ್ತಿಸುವ ತಾಂಡವದಲ್ಲಿ ನೃತ್ತಾಮೋದವನ್ನು ಉಣಬಡಿಸಿದಳು. ನಟರಾಜನ ಸಕಲ ವಿಶಿಷ್ಟ ಆಭರಣಗಳು ಮತ್ತು ಅವನ ಅನನ್ಯ  ಕಥಾನಕವನ್ನು ಬಣ್ಣಿಸುವ ಬಗೆಯಲ್ಲಿ ನೃತ್ಯಾಭಿವ್ಯಕ್ತಿಗೆ ವಿಪುಲ ಅವಕಾಶ. ಅದನ್ನು ಸರಿಯಾಗಿ ಬಳಸಿಕೊಂಡ ಕಲಾವಿದೆ ಮನಮೋಹಕ ಜತಿಗಳು, ಆಕಾಶಚಾರಿಗಳನ್ನು ಪ್ರದರ್ಶಿಸಿ ಶಿಲ್ಪಸದೃಶ ಭಂಗಿಗಳ ನೋಟ ಒದಗಿಸಿದಳು.

ಮುಂದೆ- ಸವಿತಾ ರೆಡ್ಡಿ ಅಭಿನಯಿಸಿದ್ದು ಮೈಸೂರು ವಾಸುದೇವಾಚಾರ್ಯರು ಸುನಾದ ವಿನೋದಿನಿ ರಾಗ-ಆದಿತಾಳದಲ್ಲಿ ರಚಿಸಿದ ‘ದೇವಾದಿ ದೇವ..’ -ಶ್ರೀಕೃಷ್ಣ ಸಮರ್ಪಿತ ದೈವೀಕ ಕೃತಿಯನ್ನು ಕಲಾವಿದೆ ತನ್ನ ಸೌಮ್ಯಾಭಿನಯ ಸೌಂದರ್ಯದಲ್ಲಿ, ಅರಿಷಡ್ವರ್ಗಗಳನ್ನು ದೂರಾಗಿಸಿ ಉದ್ಧರಿಸುವಂತೆ ಭಕ್ತ ಮನದುಂಬಿ ಹಾಡಿ ನಲಿವ ಕೃತಿಗೆ ನ್ಯಾಯ ದೊರಕಿಸಿದಳು. ಪರಿಣಾಮಕಾರಿ ಭಾವಗಳನ್ನು ಗಾಢ ಅಭಿನಯದಿಂದ ನಿರೂಪಿಸಿದಳು. ಶಿವಧನಸ್ಸು ಛೇಧನ, ಸೀತಾ ಕಲ್ಯಾಣದ ಸಂಚಾರಿಗಳನ್ನು ನಿರೂಪಿಸುವಾಗ ಇಬ್ಬರು ಸಹ ನರ್ತಕಿಯರು ಪಾಲ್ಗೊಂಡ ಹೊಸ ಆಯಾಮ ಗುರುಗಳ ನೃತ್ಯ ಸಂಯೋಜನೆಯ ಜಾಣ್ಮೆಯನ್ನು ಎತ್ತಿಹಿಡಿಯಿತು. ಸಂಕ್ಷಿಪ್ತ ದಶಾವತಾರದ ದೃಶ್ಯಗಳು ಸುಂದರವಾಗಿ ಒಡಮೂಡಿದವು.

ಅನಂತರ- ಆರುಮೊಗಗಳ ಕುಮಾರಸ್ವಾಮಿಯ ಆಸಕ್ತಿಕರ ಜನ್ಮರಹಸ್ಯ-ಕಥಾನಕದ ಸ್ವಾರಸ್ಯವನ್ನು ತೆರೆದಿಡುವ ಗುರು ಭಾನುಮತಿ ನೃತ್ಯಸಂಯೋಜನೆಯ, ಅವರ ತಾಯಿ ಎಲ್.ಆರ್.ಲಕ್ಷ್ಮಿಯವರು ರಾಗಮಾಲಿಕೆಯಲ್ಲಿ ರಚಿಸಿದ ಕುಮರೇಶನ ಸ್ತುತಿಯನ್ನು ಸಹನಾ ಮತ್ತು ಶ್ರೀನಿಧಿ ಬಹು ಲವಲವಿಕೆಯಿಂದ ಇಡೀ ರಂಗವನ್ನು ಬಳಸಿಕೊಂಡು, ನವಿಲ ವಾಹನವನ್ನೇರಿ ಬರುವ ಕುಮಾರಸ್ವಾಮಿಯ ಸೊಬಗನ್ನು ಅಷ್ಟೇ ಸೊಬಗಿನ ಜತಿಗಳ ನಲಿವಿನ ನೃತ್ಯದಿಂದ ಕಟ್ಟಿಕೊಟ್ಟರು. ಸಾಮರಸ್ಯದಿಂದ ನರ್ತಿಸಿದ ನರ್ತಕಿಯರು ನೃತ್ತಗಳ ಸಮ್ಮೇಳದಲ್ಲಿ ತನ್ಮಯತೆಯಿಂದ ಅಭಿನಯಿಸಿದರು.

ನಂತರ ಗೋವರ್ಧಿನಿ, ಪಾಪನಾಶಂ ಶಿವನ್ ರಚನೆಯ (ರಾಗ- ನವರಸ ಕನ್ನಡ, ತಾಳ-ಆದಿ)  ’ನಾನ್ ಒರು ವಿಳಯಾಟ್ಟು ಬೊಮ್ಮೆಯಾ…’ ಎಂದು ಉಮೆಯ ಕಾರುಣ್ಯ ಬೇಡಿ ಆಕೆಯನ್ನು  ಪರಿಪರಿಯಾಗಿ ಕೇಳಿಕೊಳ್ಳುತ್ತ ಶರಣಾಗುವ ದೈನ್ಯದ ಸಂದರ್ಭವನ್ನು ಮನನೀಯವಾಗಿ ನಿರೂಪಿಸಿದಳು. ನಿನ್ನ ಸೂತ್ರದಗೊಂಬೆಯಾಗಿರುವ ನನಗೆ ಈ ಜನ್ಮಗಳ ಬಂಧನದಿಂದ ಬಿಡು ಗೊಡೆಗೊಳಿಸಿ ನಿನ್ನ ಸಾನಿಧ್ಯ ಕರುಣಿಸು, ಸ್ವಂತ ಅಸ್ತಿತ್ವವಿರದ ನನ್ನೊಳಗಿನ ಚೇತನ ನೀನು ಎಂದು ಭಕ್ತಿಯ ಉನ್ಮಾದದಿಂದ ನರ್ತಿಸಿದ ಕಲಾವಿದೆ ಪರಿಣಾಮ ಮೂಡಿಸಿದಳು.

ಮೈಸೂರು ವಾಸುದೇವಾಚಾರ್ಯರ ಬಹು ಮನ್ನಣೆ ಪಡೆದ ’ಬ್ರೋ ಚೇವಾ ಎವರುರಾ…’ ( ಕಮಾಚ್ ರಾಗ, ಆದಿತಾಳ) ಕೀರ್ತನೆಯನ್ನು ಶ್ರೀನಿಧಿ ಅರ್ಥಪೂರ್ಣವಾಗಿ ಸಾಕ್ಷಾತ್ಕರಿಸಿದಳು. ನಿನ್ನ ಬಿಟ್ಟರೆ ಅನ್ಯ ಗತಿಯಿಲ್ಲ, ನಿನ್ನಗಲಿರಲಾರೆ ಎಂದು ಶರಣಾಗುವ ವಾಗ್ಗೇಯಕಾರರು ಶ್ರೀರಾಮನ ಔನ್ನತ್ಯ-ಮಹಿಮೆಯನ್ನು ಅನೇಕ ಉದಾಹರಣೆಗಳ ಮೂಲಕ ಸ್ತುತಿಸುತ್ತಾರೆ. ವಿಶ್ವಾಮಿತ್ರ ಯಾಗ ರಕ್ಷಣೆ, ಅಹಲ್ಯೆ ಶಾಪವಿಮೋಚನೆ, ಗಜೇಂದ್ರ ಮೋಕ್ಷ ಮುಂತಾದ ಸಂಚಾರಿಗಳನ್ನು ಸಮರ್ಥವಾಗಿ ನಿರೂಪಿಸಿ, ರಾಮಭಂಟ  ಹನುಮನ ಭಕ್ತಿಯ ತಾದಾತ್ಮ್ಯತೆಯ ಪರಾಕಾಷ್ಠೆಯನ್ನು ಶ್ರೀನಿಧಿ ತನ್ನ ಸುಂದರ ಅಭಿನಯದ ಮೂಲಕ ಅಭಿವ್ಯಕ್ತಿಸಿದಳು.

ಮುಂದೆ- ಅಣ್ಣಮಾಚಾರ್ಯರು ಶ್ರೀರಾಗ-ಆದಿತಾಳದಲ್ಲಿ ರಚಿಸಿದ ‘ಅದಿವೋ ಅಲದಿವೋ..’ ಕೀರ್ತನೆಯಲ್ಲಿ ತಿರುಪತಿ ಶ್ರೀ ವೆಂಕಟೇಶ್ವರನ ಪವಿತ್ರತಾಣದ ಮಹಿಮೆಯನ್ನು ಸೊಗಸಾಗಿ ಕಟ್ಟಿಕೊಡುತ್ತಾರೆ. ಈ ಸುಂದರ ಚಿತ್ರವನ್ನು ಸವಿತಾ ರೆಡ್ಡಿ ತಮ್ಮ ಮೆರುಗಿನ ಭಾವ-ಭಂಗಿಗಳಿಂದ, ಆಂಗಿಕಾಭಿನಯದ ಸೊಗಸಿನಿಂದ ಅನುಭವಗಮ್ಯವಾಗಿಸುತ್ತಾರೆ. ಅಚ್ಚುಕಟ್ಟಾದ ನರ್ತನದಲ್ಲಿ ಅಂತ್ಯದಲ್ಲಿ ಮೂಡಿದ ಭಂಗಿ ಚೆಂದೆನಿಸಿತು. ಅನಂತರ- ಪುರಂದರದಾಸರ ( ಶ್ರೀಮಧ್ಯಮಾವತಿ ರಾಗ-ಆದಿತಾಳ) ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ದೇವರನಾಮವನ್ನು ಸಹನಾ ವೆಂಕಟ್ ಆಹ್ಲಾದಕರ ಭಾವದಿಂದ ಅಭಿನಯಿಸಿ ಲಕ್ಷ್ಮಿಯನ್ನು ನೃತ್ಯಾಮೋದದಿಂದ ಬರಮಾಡಿಕೊಂಡ ದೃಶ್ಯ ಚಿತ್ರವತ್ತಾಗಿತ್ತು. ದೈವೀಕವಾಗಿ ಕಂಗೊಳಿಸಿದ ಆಕೆಯ ನೃತ್ಯ ಉಲ್ಲಾಸಕರವಾಗಿತ್ತು.

ಅನಂತರ ಸವಿತಾರೆಡ್ಡಿ ಮತ್ತು ಗೋವರ್ಧಿನಿ ಒಟ್ಟಾಗಿ ಅಭಿನಯಿಸಿದ ಮುತ್ತುಸ್ವಾಮಿ ದೀಕ್ಷಿತರ ಕೃತಿ ( ರಾಗ ನಾಸಾಮಣಿ, ಆದಿತಾಳ) ‘ಶ್ರೀ ರಮಾ ಸರಸ್ವತಿ ಸೇವಿತ ಶ್ರೀಲಲಿತೆ’ಯ ಮಹಿಮೆಯನ್ನು ಸ್ವಾರಸ್ಯಕರ  ದೃಷ್ಟಾಂತವೊಂದರ ಮೂಲಕ ತಮ್ಮ ದಿವ್ಯಾಭಿನಯದಿಂದ ಯಶಸ್ವಿಯಾಗಿ ಮುಟ್ಟಿಸಿದರು. ಅಂತ್ಯದಲ್ಲಿ ಸಾದರಪಡಿಸಿದ ನಾಲ್ವರು ಲಲನಾಮಣಿಯರ ‘ತಿಲ್ಲಾನ’ ( ರಾಗ-ವಲಚಿ, ಆದಿತಾಳ, ರಚನೆ- ದ್ವಾರಕೀ ಕೃಷ್ಣಸ್ವಾಮಿ) ಮನೋಹರ ನೃತ್ತ ಮಾಲೆಗಳಿಂದ ಕೂಡಿದ ಲಯಬದ್ಧ ಹೆಜ್ಜೆ-ಗೆಜ್ಜೆಗಳ ಮಾಧುರ್ಯದಿಂದ ಚೇತೋಹಾರಿಯಾಗಿತ್ತು. ಮುಂದೆ ಅಲಮೇಲು ಮಂಗಳೆಗೆ ಆರತಿ ಬೆಳಗುವ ಸಂಭ್ರಮ ‘ಕ್ಷೀರಾಬ್ಧಿ ಕನ್ಯಕಕು..ಶ್ರೀ ಮಹಾಲಕ್ಷ್ಮಿ’ ಗೆ ( ರಚನೆ ಅಣ್ಣಮಾಚಾರ್ಯ ಕುರಿಂಜಿ ರಾಗ, ಆದಿತಾಳ) ನೃತ್ಯ ನೀರಾಜನವನ್ನು ಬೆಳಗಿಸಿ ತಾಯಿಯ ಕೃಪೆಗೆ ಪಾತ್ರರಾದರು.

ನೃತ್ಯ ಕಲಾವಿದೆಯರ ನೃತ್ಯಕ್ಕೆ ಮೆರುಗು ತುಂಬಿದ ಮುಮ್ಮೇಳದಲ್ಲಿದ್ದವರು  ಗಾಯನ-ಬಾಲಸುಬ್ರಮಣ್ಯ ಶರ್ಮ, ಮೃದಂಗ-ಶ್ರೀಹರಿ ರಂಗಸ್ವಾಮಿ, ಕೊಳಲು-ಕಿಕ್ಕೇರಿ ಜಯರಾಂ, ವೀಣೆ- ಶಂಕರ್ ರಾಮನ್,  ರಿದಮ್ಪ್ಯಾಡ್  ಡಿ.ವಿ.ಪ್ರಸನ್ನಕುಮಾರ್  ಮತ್ತು  ನಟುವಾಂಗ- ಡಾ.ರಕ್ಷಾ ಕಾರ್ತೀಕ್.

                                 ***************      

Related posts

ತುಂಬಿ ಹರಿದ ಚೈತನ್ಯ- ಸಪ್ತ ಚಿಣ್ಣರ ರನ್ನದ ಹೆಜ್ಜೆಗಳು

YK Sandhya Sharma

ಸಂಜನಳ ಮನೋಜ್ಞ ನೃತ್ಯದ ಮನಮೋಹಕ ಅಭಿನಯ

YK Sandhya Sharma

ಪಕ್ವಾಭಿನಯದ ‘ರಮ್ಯ’ ನೃತ್ಯರಂಜನೆ

YK Sandhya Sharma

Leave a Comment

This site uses Akismet to reduce spam. Learn how your comment data is processed.