ನವವರ್ಷದ ಹೊಸ ಹೊನಲು-ಚೈತನ್ಯ ತುಂಬಿ ತುಳುಕುತ್ತಿದ್ದ ಏಳುಜನ ಚಿಣ್ಣರು ಇತ್ತೀಚಿಗೆ ನಗರದ ಚೌಡಯ್ಯ ಮೆಮೋರಿಯಲ್ ಮಂದಿರದಲ್ಲಿ ಮಿಂಚಿನ ಬಳ್ಳಿಗಳಂತೆ ರೋಮಾಂಚಕವಾಗಿ ನರ್ತಿಸಿ ಕಣ್ಮನ ಸೆಳೆದರು. ಈ ಪುಟಾಣಿ ಪ್ರತಿಭೆಗಳೆಲ್ಲ ಖ್ಯಾತ ‘ಶಿವಪ್ರಿಯ’ ನೃತ್ಯಶಾಲೆಯ ಕೊಡುಗೆ. ಅಂತರ್ರಾಷ್ಟ್ರೀಯ ನೃತ್ಯ ಕಲಾವಿದ ಮತ್ತು ಗುರು ಡಾ. ಸಂಜಯ್ ಶಾಂತಾರಾಂ ಅವರ ಸಮರ್ಥ ಗರಡಿಯಲ್ಲಿ ರೂಹುಗೊಂಡ ಕಲಾಶಿಲ್ಪಗಳು.
ಬಾಲ ಶಿವ-ಶಕ್ತಿಯರ ಪ್ರತಿರೂಪವಾಗಿ ಧಿಗ್ಗನೆ ರಂಗದ ಮೇಲೆ ಕಾಣಿಸಿಕೊಂಡ ಬಾಲ ನರ್ತಕರು ಒಂದು ನರ್ತನ ವಿಸ್ಮಯವನ್ನೇ ಸೃಷ್ಟಿಸಿದರು. ಶುಭಾರಂಭಕ್ಕೆ-ಗಣಪತಿ ತಾಳ-ರಾಗಮಾಲಿಕೆಯಲ್ಲಿ ಲಂಬೋದರನ ವಿಶಿಷ್ಟ ವ್ಯಕ್ತಿತ್ವವನ್ನು ಇಡೀ ರಂಗಾಕ್ರಮಣದ ಚಲನೆಗಳಿಂದ, ಕಣ್ತುಂಬಿದ ಆಂಗಿಕಾಭಿನಯಗಳಿಂದ ಹೃದಯಸ್ಪರ್ಶಿಯಾಗಿ ಕಟ್ಟಿಕೊಟ್ಟರು. ಒಬ್ಬೊಬ್ಬರ ನರ್ತನಾ ವಿಲಾಸವೂ ಅತ್ಯದ್ಭುತವಾಗಿತ್ತು. ಅಂಗಶುದ್ಧ ಚೌಕಟ್ಟಿನಲ್ಲಿ ಅರಳಿದ ಹೊಸವಿನ್ಯಾಸದ ಮನಮೋಹಕ ನೃತ್ಯ, ಸಾಮರಸ್ಯದ ನೆಲೆಯಲ್ಲಿ ಮೆಚ್ಚುಗೆ ಗಳಿಸಿತು.
ಪೂಜಾ-ಪ್ರಶಾಂತ್ ರಾಜ್ ಪುತ್ರ ಅರ್ಣವ್, ಮುಂದಿನ ಪ್ರಸ್ತುತಿ ಕುಚುಪುಡಿ ಶೈಲಿಯ ಬ್ರಹ್ಮತಾಳದ ‘ಸಂಧ್ಯಾ ತಾಂಡವ’ದಲ್ಲಿ ತನ್ನ ಅಸ್ಮಿತೆಯನ್ನು ನುರಿತ ನರ್ತಕನಂತೆ, ಶಕ್ತಿಶಾಲಿ ಆಂಗಿಕಾಭಿನಯದಲ್ಲಿ ಪ್ರಕಾಶಿಸಿದ. ಪ್ರತಿಭೆಗೆ, ಪಟುತ್ವಕ್ಕೆ ವಯೋಮಿತಿ ಇಲ್ಲ ಎಂಬುದನ್ನು ಸಾಬೀತುಗೊಳಿಸಿದ ಬಾಲಕಲಾವಿದ, ನಟರಾಜನಿಗೇ ವಿಶಿಷ್ಟವೆನಿಸಿದ ರಭಸದ ಜತಿಗಳಿಗೆ ಜೀವ ತುಂಬಿ, ವಿವಿಧ ಚಾರಿ-ಕರಣಗಳ ಸಮ್ಮೇಳದಲ್ಲಿ ಚೈತನ್ಯಪೂರ್ಣವಾಗಿ ನಿರೂಪಿಸಿದ. ಗುರು ಸಂಜಯರ ಕಂಚಿನ ಕಂಠದ ನಟುವಾಂಗದ ಕೊನ್ನಕೋಲುಗಳಿಗೆ ಸರಿಮಿಗಿಲಾಗಿ ಹೆಜ್ಜೆಗಳನ್ನು ಮಿಂಚಿಸಿದ. ಶಿವನ ಅಪೂರ್ವಭಂಗಿಗಳನ್ನು ಪ್ರದರ್ಶಿಸಿದ ಅರ್ಣವ್, ಮುಂದೆ ತಾನೊಬ್ಬ ಭರವಸೆಯ ಕಲಾವಿದನಾಗುವ ಎಲ್ಲ ಹೊಳಪನ್ನೂ ತೋರಿದನು.
ದಿವಾನಂದ ರೈ ಮತ್ತು ಮಲ್ಲಿಕಾರ ಪುತ್ರಿ ಮೌಲ್ಯ. ಡಿ. ರೈ.- ಶಿವಪಂತವರಾಳಿ ರಾಗದಲ್ಲಿ ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ‘ಕುಣಿಯುವಳಾರೀ ಭೈರವನಾರಿ’ -ತ್ರಿಶಕ್ತಿ ರೂಪಿಣಿಯನ್ನು ಆವಾಹಿಸಿಕೊಂಡು ರಣಭೈರವಿಯಾಗಿ ಹೆಜ್ಜೆಗಳನ್ನು ಕುಣಿಸಿದ್ದು ಪುಳಕ ತಂದಿತು. ರೌದ್ರಭಾವದ ಜತಿಗಳಲ್ಲಿ ಕಾಳಿಯ ತಾಂಡವಲೀಲೆಯನ್ನು ಕಣ್ಮುಂದೆ ತಂದು ನಿಲ್ಲಿಸಿದ ಬಾಲಪ್ರತಿಭೆ ಮೌಲ್ಯ ಕಲಾರಸಿಕರು ತದೇಕನೋಟದಿಂದ ವೀಕ್ಷಿಸುವಂತೆ ಮಾಡಿದ್ದಳು. ಮಹಿಷನೊಡನೆ ಕಾಳಗ ಮಾಡಿದ ಶಂಕರಿಯ ಕೆನ್ನಾಲಗೆ, ಕಿಡಿಕಾರುವ ಉರಿನೋಟದ ಪ್ರತಿ ಚಲನೆಯೂ ರುದ್ರ-ರಮಣೀಯ ಅನುಭವ ಬಿತ್ತಿತು.
ಚೇತನ್ ಗಂಗಾಟ್ಕರ್ ಮತ್ತು ಚೇತನರ ಪುತ್ರಿ ಶ್ರೀಚರಿತಾ, ಆಂಧ್ರಪ್ರದೇಶದಲ್ಲಿ ಶಿವನ ದೇವಾಲಯಗಳಲ್ಲಿ ಪ್ರದರ್ಶಿಸುವ ವಿಶಿಷ್ಟ ಮಣ್ಣಿನ ಮಡಕೆಯ ಮೇಲೆ ಲಯವಿನ್ಯಾಸದಿಂದ ಚತುರತೆಯಿಂದ ನರ್ತಿಸುವ ‘ಪ್ರೇರಿಣಿ’-ನೃತ್ಯವೈಶಿಷ್ಟ್ಯವನ್ನು ಅರ್ಪಿಸಿದಳು. ‘ನಟನ ಮನೋಹರ ನಾಗಾಭರಣ’ನಿಗೆ ಶ್ರೀಚರಿತಾ, ಮಡಕೆಯ ಮೇಲೆ ಹೆಜ್ಜೆಗಳನ್ನು ಜೋಡಿಸಿ, ಮನಮೋಹಕ ಆಂಗಿಕಾಭಿನಯದಿಂದ ನೀಲಕಂಠನನ್ನು ಅರ್ಚಿಸಿದಳು. ಭಾವ-ಭಂಗಿಗಳ ಸಮೇತ ವಿವಿಧ ನೃತ್ತಾವಳಿಗಳನ್ನು ನಿರೂಪಿಸುತ್ತ ಬಾಲ ಕಲಾವಿದೆ ಕಾಯ್ದುಕೊಂಡ ಅದ್ಭುತ ಸಮತೋಲನ ಉಸಿರು ಬಿಗಿಹಿಡಿದು ನೋಡುವಂತೆ ಕುತೂಹಲ ಕೆರಳಿಸಿತ್ತು.
‘ನೋಡಿದಾಕ್ಷಣವೇ ಮನ ಮರುಳಾಗಿದೆ…’ ಎಂದು ಶ್ರೀಕೃಷ್ಣನ ಮುರಳೀಗಾನಕ್ಕೆ ಮರುಳಾದ ಪ್ರೇಮಿಯ ವಿವಿಧ ಭಾವಸಂಚಯದ ಭಾವಗೀತೆಯಂಥ ‘ಜಾವಳಿ’ಯನ್ನು ಕಲಾವಿದೆ ತನ್ನ ರಮ್ಯ ನರ್ತನದಿಂದ ಸಾದರಪಡಿಸಿದಳು. ನುರಿತ ನರ್ತಕಿಯಂತೆ ಶ್ರೀಚರಿತಾ, ಸಮ್ಮೋಹಕ ಚಲನೆ-ಅಭಿನಯಗಳಿಂದ ಮನಸೂರೆಗೊಂಡಳು. ಮುಂದೊಮ್ಮೆ ಈಕೆ, ಉತ್ತಮ ಕಲಾವಿದೆಯಾಗುವ ಎಲ್ಲ ಸುಳುಹುಗಳೂ ಪ್ರಕಟಗೊಂಡಿದ್ದವು.
ಶ್ರೀನಿವಾಸ್ ಕಬಡಿ, ಸುಷ್ಮಾ ಕೋಲಾಪುರಿ ಪುತ್ರ ರೋಷನ್, ತನ್ನ ಅನುಪಮ ಶಕ್ತಿಶಾಲಿ ಅರ್ಪಣೆಯಿಂದ ನಿಜಕ್ಕೂ ಅದ್ಭುತ ಕಲಾವಿದ ಎಂಬ ಭಾವವನ್ನು ಹೊರಹೊಮ್ಮಿಸಿದ. ಶ್ರೀ ಪದ್ಮಚರಣರ ಸುಂದರ ರಚನೆ ‘ಪ್ರದೋಷ ಸಮಯದಿ ಪರಶಿವ ತಾಂಡವ..’- ವನ್ನು ತನ್ನ ಭಾವಪೂರ್ಣ ಅಭಿನಯ- ಆಂಗಿಕಾಭಿನಯದ ಸೌಂದರ್ಯದಿಂದ ಅದ್ಭುತವಾಗಿ ಸಾಕ್ಷಾತ್ಕರಿಸಿದ. ಇಡೀ ಕೈಲಾಸ, ಶಿವ-ಪಾರ್ವತಿಯರ ರಸಸಂಚಾರದ ನೃತ್ಯವೈಖರಿಯನ್ನು ಕಂಡು ಬೆರಗಾದ ಪರಿಯನ್ನು, ರೋಷನ್ ತೀವ್ರ ತನ್ಮಯತೆಯಿಂದ ಪರಕಾಯ ಪ್ರವೇಶ ಮಾಡಿದಂತೆ ಆವೇಶಿತನಾಗಿ ರಂಗದ ತುಂಬಾ ಭಕ್ತಿಭಾವ ತುಂದಿಲನಾಗಿ ನರ್ತಿಸಿದ. ಕ್ಲಿಷ್ಟ ನೃತ್ತ ಬೆಸುಗೆ, ಸುಲಲಿತ ಆಕಾಶಚಾರಿಗಳ, ವೇಗದ ಜತಿಗಳ ಸುರಿಮಳೆಗರೆದ. ಮೊಳಗಿದ ಮದ್ದಳೆಯ ದನಿಗೆ, ಮಹಾ ಗಣಪತಿಯ ತಾಳಮೇಳ-ಲಯವಿನ್ಯಾಸಕ್ಕೆ ಹೆಜ್ಜೆ ಹೆಣೆದ ಕಲಾವಿದನ ಕೌಶಲ್ಯ ಬೆರಗು ತಂದಿತ್ತು.
ಈ ಮಧ್ಯೆ ಸಮಾರಂಭದ ಅತಿಥಿಯಾಗಿ ಬಂದಿದ್ದ ಪುಸ್ತಕಂ ರಮಾ ಅವರ ‘ಆಡಿಸಿದೆಳೆಶೋದೆ ಜಗದೋದ್ಧಾರನ’ ಗಾಯನಕ್ಕೆ ಗುರು ಸಂಜಯ್ ಆಶು ಸಂಯೋಜಿತ ಮನಮೋಹಕ ನೃತ್ಯವನ್ನು ಸಾದರಪಡಿಸಿ ನೋಡುಗರನ್ನು ಅಚ್ಚರಿಗೊಳಿಸಿದರು.
ಅನಿತಾ-ಕಾರ್ತೀಕ್ ಅವರ ಪುತ್ರಿ ಮನಿಷಾ, ರಾಗಮಾಲಿಕೆಯಲ್ಲಿ ರಚಿಸಿದ ವಿವಿಧ ರಂಜನಿಯ ಮಾಲಗಳಲ್ಲಿ ‘ರಂಜನಿ, ಮೃದು ಪಂಕಜ ಲೋಚನಿ’ಯನ್ನು ರಂಜಿನಿ ದೇವತೆ-ಶಕ್ತಿಯನ್ನು ಮನೋಹರವಾಗಿ ಸಾಕ್ಷಾತ್ಕರಿಸಿದಳು. ಅಚ್ಚುಕಟ್ಟಾಗಿ ಒಡಮೂಡಿದ ನೃತ್ತಗುಚ್ಚಗಳು ಕಮನೀಯವಾಗಿದ್ದವು. ಭಕ್ತಿಭಾವದ ಅರ್ಪಣೆಯಲ್ಲಿ ಮೂಡಿಬಂದ ಅಭಿನಯ ಮನಮುಟ್ಟಿತು.
ಮುಂದೆ- ಶ್ರೀಕಾಂತ್ ಶೆಟ್ಟಿ ಮತ್ತು ಭಾಗ್ಯ ಅವರ ಪುತ್ರಿ ಶ್ರೀಯಾ ‘ನರಸಿಂಹ ಕೃತಿ’ಯನ್ನು ಅದ್ಭುತವಾಗಿ ಅಷ್ಟೇ ಪರಿಣಾಮ ಕಾರಿಯಾಗಿ ಅಭಿನಯಿಸಿ ಸ್ಮರಣೀಯ ಪ್ರಸ್ತುತಿ ನೀಡಿದಳು. ಸಂಜಯ್ ರಚಿಸಿದ ‘ದೈತ್ಯ ದಮನನೆ ನಾರಾಯಣ’ – ನಾಟಕೀಯ ಅಂಶಗಳಿಂದ ವಿಜ್ರುಂಭಿಸಿದ ರುದ್ರ-ರಮಣೀಯ ಸನ್ನಿವೇಶ ಚಿತ್ರಣ ಮನನೀಯವಾಗಿತ್ತು. ಮುಗ್ಧ ಪ್ರಹ್ಲಾದನ ಭಕ್ತಿ, ಹಿರಣ್ಯಕಶಿಪುವಿನ ಕ್ರೌರ್ಯ ಚಿತ್ರಿಸಿದ ಸಂಚಾರಿ ಆಸಕ್ತಿಕರವಾಗಿದ್ದು, ಸಂಪೂರ್ಣ ಜತಿಗಳಲ್ಲೇ ಅಭಿನಯದ ಸೊಗಡನ್ನು ಬಿಂಬಿಸಿತ್ತು. ವಿರಾವೇಶದ ಅಭಿನಯ ಮೈಗೂಡಿಸಿಕೊಂಡು ಅಭಿವ್ಯಕ್ತಿಸಿದ ಶ್ರೀಯಾ ಸಿಂಹದ ನಡಿಗೆ, ನರಸಿಂಹನ ದೈತ್ಯರೂಪ- ಹಿರಣ್ಯಕಶಿಪುವಿನ ಹೊಟ್ಟೆ ಬಗೆದು, ಕರುಳ ಮಾಲೆ ಧರಿಸಿ, ರಕ್ತ ಕುಡಿಯುವ ಘೋರದೃಶ್ಯವನ್ನು ತನ್ನ ಸಮರ್ಥ ಅಭಿನಯದಿಂದ ಚಿತ್ರಿಸಿ, ಉತ್ತಮ ಕಲಾವಿದೆಯಾಗಿ ಹೊರಹೊಮ್ಮಿದಳು. ಅಗಾಧ ಚೈತನ್ಯದ ಈ ಕಲಾವಿದೆಯ ಪ್ರಖರ ನಡೆಯ ನೃತ್ತಗಳ ವಿನ್ಯಾಸ ಚಮತ್ಕಾರಿಕವಾಗಿದ್ದವು.
ಅಂತ್ಯದ ಪ್ರಸ್ತುತಿ- ರಚನಾ ಮತ್ತು ಪ್ರಶಾಂತ್ ಪ್ರಭು ಪುತ್ರಿ ಶೈನಾ ಪ್ರಭು ಕುಚಿಪುಡಿ ಶೈಲಿಯ ‘ತರಂಗಂ’ -ವಿಶಿಷ್ಟ ಕೃತಿಯನ್ನು ತನ್ನದೇ ಆದ ಲಾಸ್ಯದ ಬಳುಕುಗಳಿಂದ, ಮಿಂಚಿನ ಬಳ್ಳಿಯಂತೆ ಆಕರ್ಷಕವಾಗಿ ನರ್ತಿಸಿದಳು. ಕೃಷ್ಣನ ಕಥೆಯೇ ರಸಮಯ, ಶೃಂಗಾರಪೂರ್ಣ. ಸಂಗೀತ-ಸಾಹಿತ್ಯ ಮೇಳದಲ್ಲಿ ಶೃಂಗಾರಭಾವ ಝೇಂಕರಿಸಿತು. ಮಾಟವಾದ ಗೊಂಬೆಯಂತಿದ್ದ ಶೈನಾಳ ಜಾರುಹೆಜ್ಜೆಗಳ ಪ್ರದರ್ಶನ, ಒನಪು-ವಯ್ಯಾರದ ನಡೆ, ಪಾದಭೇದಗಳ ಸೌಂದರ್ಯದಿಂದ ಬೆರಗುಗೊಳಿಸಿದಳು. ಹಿತ್ತಾಳೆಯ ತಟ್ಟೆಯ ಅಂಚಿನ ಮೇಲೆ ನಿಂತು, ಕೊನ್ನಕೋಲ್ ಜತಿಗಳ ಬೋಲ್ಗಳಿಗೆ ಲಯಾನುಸಾರ ಮೋಹಕವಾಗಿ ನೃತ್ತಗಳನ್ನು ಜೋಡಿಸಿದ ಕಲಾವಿದೆಯ ಜಾಣ್ಮೆ ಖುಷಿ ನೀಡಿತು. ಅಂಗಶುದ್ಧ, ಕ್ಲಿಷ್ಟಕರ ಜತಿಗಳ ನಿರ್ವಹಣೆ, ಲವಲವಿಕೆಯಿಂದ ನಿರಾಯಾಸವಾಗಿ ನಗುಮೊಗದಿ ನರ್ತಿಸಿದ ಶೈನಳ ಪ್ರಸ್ತುತಿ ಆನಂದದಾಯಕವಾಗಿತ್ತು.
ಸತತ ಎರಡು ಗಂಟೆಗಳಿಗೂ ಮಿಕ್ಕಿ ಸಾಗಿದ ಈ ಪ್ರತಿಭಾನ್ವಿತ ಪುಟ್ಟ ಕಲಾವಿದರ ಅದ್ಭುತ ನೃತ್ಯಾರ್ಪಣೆ ರಸಾನಂದಕರವಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ.
**************