ರಾಷ್ಟ್ರೀಯ-ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ, ಚೆನ್ನೈ ‘ಕಲಾಕ್ಷೇತ್ರ’ದಲ್ಲಿ ತರಬೇತಿ ಪಡೆದ ನುರಿತ ಭರತನಾಟ್ಯ ಕಲಾವಿದೆ ವೀಣಾ ಚಿಕ್ಕನಹಳ್ಳಿ ಶೇಷಾದ್ರಿ, ನಿಷ್ಠೆ, ಪ್ರಾಮಾಣಿಕತೆ ಮತ್ತು ಪರಿಪೂರ್ಣತೆಗೆ ಇನ್ನೊಂದು ಹೆಸರು. `ತುಂಬಿದ ಕೊಡ ತುಳುಕುವುದಿಲ್ಲ’ ಎಂಬ ಗಾದೆಗೆ ಅನ್ವರ್ಥಕವಾಗಿರುವ ಇವರು, ಸೌಜನ್ಯದ ಮೂರ್ತಿ. `ನೃತ್ಯ ಒಂದು ಮಹಾಸಾಗರ, ಇದರ ಆಳ-ಅಗಲ, ಹಾಸು-ಬೀಸುಗಳನ್ನು ಅರಿವ ಪರಿಜ್ಞಾನ ಪಡೆಯುವ ವಿಷಯದಲ್ಲಿ ತಾವಿನ್ನೂ ನಿರಂತರ ವಿದ್ಯಾರ್ಥಿ, ಜೀವನಪರ್ಯಂತ ಕಲಿಯುತ್ತ ಹೋಗಬೇಕಾಗುತ್ತದೆ. ಅಂಥ ಅಗಾಧ ಭಂಡಾರವದು’ ಎಂದು ವಿನಮ್ರತೆ ಮೆರವ ವೀಣಾ, ಎಲೆಮರೆಯ ಕಾಯಂತೆ ತಮ್ಮ ಪಾಡಿಗೆ ತಾವು ನಿರಂತರ ನೃತ್ಯಕಾಯಕದಲ್ಲಿ ತೊಡಗಿಕೊಂಡಿರುವ ಸಾಧಕಿ.
ಮನೆಯಲ್ಲಿ ಸಾಂಸ್ಕೃತಿಕ ವಾತಾವರಣ. ಕೆ.ಜಿ.ಎಫ್.ನಲ್ಲಿ ಶಿಕ್ಷಕಿಯಾಗಿದ್ದ ತಾಯಿ ಶಾರದಾ ಅನೇಕ ನಾಟಕಗಳಲ್ಲಿ ನಟಿಸಿದವರು. ತಂದೆ ಶೇಷಾದ್ರಿಯವರಿಗೂ ಅದೇ ನಂಟು. ಇನ್ನು ಮಗಳಿಗೆ ನೃತ್ಯದತ್ತ ಅಪಾರ ಆಸಕ್ತಿ. ಹೀಗಾಗಿ ವೀಣಾ ತನ್ನ ಏಳನೇ ವಯಸ್ಸಿಗೇ ಭರತನಾಟ್ಯ ಕಲಿಯಲು ಆರಂಭಿಸಿದರು. ಗಾಯತ್ರಿ ಕೇಶವ್, ರೇಖಾ ಸುಬ್ಬರಾವ್ ಪ್ರಾರಂಭದ ನಾಟ್ಯಗುರುಗಳು. ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಬಿಎಸ್ಸಿ ಓದುವಾಗ ಕಾಲೇಜಿನ ಸಾಂಸ್ಕೃತಿಕ ಕಾರ್ಯದರ್ಶಿ .ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿ. ಜೊತೆಯಲ್ಲಿ ಲಲಿತಾ ಶ್ರೀನಿವಾಸನ್ ಅವರಲ್ಲಿ ನೃತ್ಯಾಭ್ಯಾಸ ಮುಂದುವರಿಕೆ. ವಿಜ್ಞಾನ ಪದವೀಧರೆಯೆನಿಸಿಕೊಂಡರೂ ನೃತ್ಯರಂಗದಲ್ಲಿ ಮಹತ್ತನ್ನು ಸಾಧಿಸುವ ಕನಸು ಬೆಂಬಿಡಲಿಲ್ಲ.
ಇಷ್ಟುಹೊತ್ತಿಗೆ ವೀಣಾ ತೀರ್ಮಾನಿಸಿಯಾಗಿತ್ತು, ನೃತ್ಯವೇ ತನ್ನ ಒಡನಾಡಿಯೆಂದು. ಸುಮಾರು ಅರವತ್ತು ವರ್ಷಗಳ ಹಿರಿಮೆಯುಳ್ಳ ಚೆನ್ನೈನ `ಕಲಾಕ್ಷೇತ್ರ’ ದಲ್ಲಿ ವೃತ್ತಿಪರ ತರಬೇತಿ ಪಡೆದು ಭಾರತೀಯ ಸನಾತನ ಪರಂಪರೆ-ಸಂಸ್ಕೃತಿಗಳ ಸಾರಸರ್ವಸ್ವವನ್ನು ಮೈಗೂಡಿಸಿಕೊಳ್ಳುವ ಹೆಬ್ಬಯಕೆ ಅವರದಾಯಿತು. ದಿಗ್ಗಜ ಗುರುಗಳಿಂದ ಶಿಸ್ತಿನ ವಾತಾವರಣದಲ್ಲಿ ನಿಷ್ಠೆಯಿಂದ ಕಲಾಕ್ಷೇತ್ರದ ನೃತ್ಯಶೈಲಿಯನ್ನು ಅಭ್ಯಾಸ ಮಾಡಿದರು. ತನ್ನದೇ ಆದ ಛಾಪುಳ್ಳ ಅಡವುಗಳು, ದೇಹವಿನ್ಯಾಸ ಮತ್ತು ಜಾಮಿತ್ರಿಯ ಕೋನದಿಂದ ವೈಶಿಷ್ಟ್ಯ ಪಡೆದ ಈ ಪರಂಪರೆಯ ಬಗ್ಗೆ ಗೌರವ ವ್ಯಕ್ತಪಡಿಸುವ ವೀಣಾ, ಇದರ ಶುದ್ಧ ಶಾಸ್ತ್ರೀಯತೆ ಕಾಪಾಡಿಕೊಳ್ಳುವ ಬದ್ಧತೆಯುಳ್ಳವರು.
ಇಷ್ಟೆಲ್ಲಾ ಕಲಿತ ಮೇಲೂ ವೀಣಾ, ಕಲಾಕ್ಷೇತ್ರದಲ್ಲಿ ಕಲಿತ ಗುರು ಮೀನಾಲ್ ಪ್ರಭು ಅವರ ಬಳಿ ನೃತ್ಯ ಮಾರ್ಗದರ್ಶನ ಪಡೆದರು. ತಿರುಚನಾಪಳ್ಳಿಯ `ಕಲೈ ಕಾವೇರಿ’ ಯಿಂದ ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿಕೊಂಡರು. ನಂತರ ಸಾಫ್ಟ್ ವೇರ್ ಎಂಜಿನಿಯರ್ ಸುರೇಶ್ ರಾವ್ ಅವರನ್ನು ಮದುವೆಯಾಗಿ ದೆಹಲಿ ಸೇರಿದರೂ ಗುರು ಜಯಲಷ್ಮೀ ಈಶ್ವರ್ ಅವರ ಬಳಿ ನೃತ್ಯ ಮುಂದುವರಿಸಿದರು. ಅನಂತರ ಲಂಡನ್ನಿಗೆ ಪಯಣ. ಅಲ್ಲಿದ್ದಷ್ಟೂ ಕಾಲ ಅಲ್ಲಿನ ಮಕ್ಕಳಿಗೆ ನೃತ್ಯಶಿಕ್ಷಣ ನೀಡಿದರು.
ದೂರದರ್ಶನದ `ಎ’ ಗ್ರೇಡ್ ಕಲಾವಿದೆ ಹಾಗೂ ಐ.ಸಿ.ಸಿ.ಆರ್.ನಲ್ಲಿ ಮಾನ್ಯತೆ ಪಡೆದ ಕಲಾವಿದೆಯಾಗಿರುವ ಇವರು ರಾಜರಾಜೇಶ್ವರಿ ನಗರದಲ್ಲಿ `ಕಲಾಸಂಪದ’ ನೃತ್ಯಶಾಲೆ ಪ್ರಾರಂಭಿಸಿದರು. ಇಂದು ನೂರೈವತ್ತಕ್ಕೂ ಮಿಕ್ಕ ಶಿಷ್ಯರಿದ್ದಾರೆ. ಜೊತೆಗೆ ಸಂಗೀತ, ಸಂಸ್ಕೃತ ಮತ್ತು ಯೋಗವನ್ನೂ ಇಲ್ಲಿ ಕಲಿಸಲಾಗುತ್ತಿದೆ. ಇವೆಲ್ಲದರ ಸಂಗಮದಿಂದಲೇ ಕಲಾವಿದರ ಪರಿಪೂರ್ಣತೆ ಸಾಧ್ಯ ಎಂಬ ಅಚಲ ನಂಬಿಕೆ ಅವರದು. ಸಾಂಪ್ರದಾಯಕ ರೂಪದಲ್ಲಿ ಭರತನಾಟ್ಯವನ್ನು ಸಂರಕ್ಷಿಸುವ ಕೆಲಸಗಳಲ್ಲಿ ಆಸಕ್ತರೇ ಹೊರತು, ಸಂಪೂರ್ಣ ಸಿದ್ಧಗೊಳ್ಳದೆ, ನೃತ್ಯ ಪ್ರದರ್ಶನ, ರಂಗಪ್ರವೇಶ ಏರ್ಪಡಿಸುವುದರಲ್ಲಿ ಉತ್ಸಾಹ ತೋರುವುದಿಲ್ಲ.
ಪ್ರತಿವರ್ಷ `ಕಲಾಸಂಪದ’ ದಿಂದ ಕಲಾಪ್ರದರ್ಶನ, ಕಲಾ ಉತ್ಸವ ಮತ್ತು ಜ್ಞಾನವಾಣಿ ಎಂಬ ಬೋಧಪ್ರದ ಕಾರ್ಯಕ್ರಮಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳ ಜ್ಞಾನವಿಕಾಸಕ್ಕೆ ಅನುವು ಮಾಡಿಕೊಡಲಾಗುತ್ತದೆ. ‘’ ಲಯ-ಲಾಸ್ಯ-ಲಹರಿ’’- ಕಲಾಸಂಪದದ ಅಂತರರಾಷ್ಟ್ರೀಯ ಸಂಗೀತ-ನೃತ್ಯಗಳ ಪ್ರಸಿದ್ಧಿ ಪಡೆದ ಪ್ರಮುಖ ಉತ್ಸವ. ಪ್ರತಿವರ್ಷ ವಿಖ್ಯಾತ ಕಲಾವಿದರ ಪ್ರತಿಭಾ ಪರಿಚಯ ದೊರಕಿಸಿಕೊಡುವ ಸದುದ್ದೇಶ. ವೀಣಾ ನಿರ್ಮಿಸಿರುವ `ಶಂಕರಂ ಜಗದ್ಗುರುಂ’ ನೃತ್ಯರೂಪಕಕ್ಕಾಗಿ ಶೃಂಗೇರಿ ಶಾರದಾಪೀಠ ಅವರನ್ನು ಸನ್ಮಾನಿಸಿದೆ. ಸುರ್ ನೂಪುರ್, ನಾಟ್ಯಮಯೂರಿ, ನಾಟ್ಯಪಿಯೂಶಂ, ಯೋಗ ಕಲಾನಿಧಿ ಮುಂತಾದ ಬಿರುದುಗಳೂ ಲಭ್ಯವಾಗಿವೆ.
ಉತ್ತಮ ನಾಟ್ಯಗುರು, ನೃತ್ಯ ಸಂಯೋಜಕಿಯಾಗಿರುವ ವೀಣಾ, ಕಲಾವಿದೆಯಾಗಿಯೂ ದೇಶ-ವಿದೇಶಗಳಲ್ಲಿ ಅಸಂಖ್ಯಾತ ಏಕವ್ಯಕ್ತಿ ಉತ್ತಮ ನೃತ್ಯಪ್ರದರ್ಶನಗಳನ್ನು ನೀಡಿರುವ ಹೆಗ್ಗಳಿಕೆ. ಪ್ರಬುದ್ಧ ಅಭಿನಯದ ಸತ್ವಪೂರ್ಣ ಕಲಾವಿದೆ ವೀಣಾರವರ ನೃತ್ಯಕೌಶಲ ತಂತ್ರಜ್ಞಾನಗಳ ಸದುಪಯೋಗಪಡಿಸಿಕೊಳ್ಳಲು ವಿಶ್ವದ ನಾನಾ ಭಾಗಗಲ್ಲಿ ವಿಶೇಷ ಉಪನ್ಯಾಸ, ಕಾರ್ಯಾಗಾರಗಳನ್ನು ಏರ್ಪಡಿಸಲಾಗುತ್ತದೆ. ಜೊತೆಗೆ ಪ್ರಾತ್ಯಕ್ಷಿಕೆ, ನೃತ್ಯಪ್ರದರ್ಶನಗಳೂ ಇರುತ್ತವೆ. ಅಮೇರಿಕಾದ ಸ್ಟ್ರೆಡಸ್ ಬರ್ಗ್, ನ್ಯೂಜರ್ಸಿ, ವಾಶಿಂಗ್ಟನ್ ಡಿ.ಸಿ., ಬೀಜಿಂಗ್, ಚೀನಾ, ಬ್ಯಾಂಕಾಕ್. ಥಾಯ್ಲಂಡ್, ಶಾರ್ಜಾ,ಯು.ಎ.ಇ., ಸ್ಪೇನ್, ಜರ್ಮನಿ, ಶ್ರೀಲಂಕಾ, ಮುಂತಾದೆಡೆಗಳಲ್ಲಿ ನೃತ್ಯ ಪ್ರದರ್ಶನ, ತರಬೇತಿ-ಕಾರ್ಯಶಿಬಿರಗಳನ್ನು ನಡೆಸಿಕೊಡಲು ವಿಶೇಷ ಆಹ್ವಾನಿತೆಯಾಗಿ ತೆರಳಿದ್ದಾರೆ. ಭಾರತದಲ್ಲೂ `ಕಲಾಸಂಪದ’ ತಂಡದೊಡನೆ ಪ್ರತಿಷ್ಟಿತ ನೃತ್ಯೋತ್ಸವಗಳಾದ ಹಂಪಿ, ದೆಹಲಿ ಮೈಸೂರು ಮುಂತಾದೆಡೆ ನೃತ್ಯಪ್ರದರ್ಶನಗಳನ್ನು ನೀಡಿ ಮೆಚ್ಚುಗೆ ಗಳಿಸಿದ್ದಾರೆ.
·
5 comments
Namaste,
Nadavidyalaya is happy to be connected with Sandhya patrike and Sandhya madam. Her expertjse and experience in the field is appreciated and inspirational to the coming generations.
Our heartfelt gratitude to madam for her co-operation and support to the dance fraternity.
Thank you Mitra Naveen. We always support art and literature connected activities.
Thank you so much Mitra Naveen.
Kindly Request to cover art news of MYSURu also. Any good social cause from your paper, nadavidyalaya is
with uou.
ಅವಕಾಶ ಒದಗಿದಾಗ, ಖಂಡಿತಾ.