Image default
Dance Reviews

Kuchipudi ‘Bhavanutha’ Aadhyaatmika Ramayana

ಮನಮುಟ್ಟಿದ ಕೂಚಿಪುಡಿ ನೃತ್ಯಶೈಲಿಯಲ್ಲಿ ‘ಭವನುತ’ ಆಧ್ಯಾತ್ಮಿಕ ರಾಮಾಯಣ

ವಿವಿಧ ನಾಟ್ಯರೂಪಗಳಲ್ಲಿ ಹಲವಾರು ರಾಮಾಯಣದ ನೃತ್ಯರೂಪಕಗಳು ಇದುವರೆಗೂ ಪ್ರಸ್ತುತವಾಗಿದ್ದರೂ ಬಹುಶಃ ಕುಚಿಪುಡಿ ನೃತ್ಯಶೈಲಿಯಲ್ಲಿ ಸಂಪೂರ್ಣ ಆಧ್ಯಾತ್ಮ ರಾಮಾಯಣದ ನೃತ್ಯರೂಪಕ ವೇದಿಕೆಯ ಮೇಲೆ ಪ್ರದರ್ಶನಗೊಂಡದ್ದು ಇದೇ ಮೊದಲೆನ್ನಬಹುದು.

ಇತ್ತೀಚೆಗೆ`ಕೂಚಿಪುಡಿ ಪರಂಪರಾ  ಫೌಂಡೇಶನ್’ ನೃತ್ಯಸಂಸ್ಥೆಯು ತನ್ನ ‘ನಾಟ್ಯ ಪರಂಪರ ದಶಮಾನೋತ್ಸವ’ದ ಸಂಭ್ರಮಾಚರಣೆಯನ್ನು ಸಂಜಯನಗರದ ರಮಣ ಮಹರ್ಷಿ ಹೆರಿಟೇಜ್ ಆಡಿಟೋರಿಯಂನಲ್ಲಿ ‘ಭವ ನುತ ನೃತ್ಯರೂಪಕವನ್ನು ವರ್ಣರಂಜಿತವಾಗಿ ಪ್ರದರ್ಶಿಸಿ ಕಲಾರಸಿಕರ ಮನಸ್ಸನ್ನು ಸೆಳೆಯಿತು. ಲಾಸ್ಯ-ಲಾಲಿತ್ಯತೆಗೆ ಹೆಸರಾದ ಕುಚಿಪುಡಿ ನಾಟ್ಯಶೈಲಿ ಭರತನಾಟ್ಯಕ್ಕಿಂತ ಕೊಂಚ ಭಿನ್ನವಾಗಿದ್ದು ವೇಷಭೂಷಣ-ವಸ್ತ್ರವೈವಿಧ್ಯ, ನೃತ್ಯದ ಧಾಟಿಯಲ್ಲೂ ಸ್ವಲ್ಪ ಬೇರೆ. ಕಥಾ ನಿರೂಪಣೆ-ಅಭಿನಯ ಪ್ರಸ್ತುತಿಯಲ್ಲಿ ವೇಗಗತಿಯಲ್ಲಿ ಸಾಗುತ್ತ, ಲಾಸ್ಯ ಭಾವ-ಭಂಗಿ, ನಡೆಯಲ್ಲಿ ಚುರುಕಾಗಿ ಪ್ರವಹಿಸುತ್ತದೆ. ಅಂತೆ ನಡೆದ ‘ಭವನುತ’ ಅರ್ಥಪೂರ್ಣ ಶೀರ್ಷಿಕೆಯ ಮೋಹಕ ನೃತ್ಯರೂಪಕ ಪರಿಣಾಮಯುತವಾಗಿ ಪ್ರದರ್ಶಿತಗೊಂಡಿತು.

ನಾಲ್ಕುದಶಕಗಳಿಂದ ಅಚ್ಚ ಶಾಸ್ತ್ರೀಯ ಕೂಚಿಪುಡಿಯ ನೃತ್ಯಶೈಲಿಯಲ್ಲಿ ಪರಿಶ್ರಮಿಸುತ್ತಿರುವ  ಆಚಾರ್ಯ ದೀಪಾ ನಾರಾಯಣನ್ ಶಶೀಂದ್ರನ್  ಖ್ಯಾತ ಗುರು ಪದ್ಮಭೂಷಣ ಡಾ. ವೆಂಪಟಿ ಚಿನ್ನಸತ್ಯಂ ಅವರ ಶಿಷ್ಯೆ, ತಮ್ಮ ಅಸಂಖ್ಯ ನೃತ್ಯಪ್ರದರ್ಶನಗಳಿಂದ ಖ್ಯಾತರಾದವರು. ತಮ್ಮ `ಕೂಚಿಪುಡಿ ಪರಂಪರಾ ಫೌಂಡೆಶನ್ ‘ ಮೂಲಕ ನೃತ್ಯಾಭಿವೃದ್ಧಿಯ ಸಾಧನೆಯಲ್ಲಿ ನಿರತರಾದ ದೀಪಾ, ಪರಿಣಿತ ಅಭಿನಯ- ಮನೋಜ್ಞ ನೃತ್ಯಪ್ರಸ್ತುತಿಗಳಿಂದ ಕಲಾರಸಿಕರ ಗಮನ ಸೆಳೆದಿದ್ದಾರೆ. ಶಂಕರಾಭರಣ ಚಲನಚಿತ್ರ ಖ್ಯಾತಿಯ ಮಂಜುಭಾರ್ಗವಿ ಅವರ ಪ್ರಧಾನಶಿಷ್ಯರಾಗಿ ಅವರಲ್ಲಿ ಸತತ  ಇಪ್ಪತ್ತೈದು ವರುಷಗಳು ನಾಟ್ಯಶಿಕ್ಷಣ ಪಡೆದು ಗುರುಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಅಗ್ಗಳಿಕೆ ಇವರದು.

ಕೂಚಿಪುಡಿ ನಾಟ್ಯಗುರು-ನೃತ್ಯ ಕಲಾವಿದೆ, ಸಂಯೋಜಕಿಯಾದ ಇವರು,  ‘ಕೂಚಿಪುಡಿ ಪರಂಪರ ಫೌಂಡೆಶನ್ ಟ್ರಸ್ಟ್’ನ ಲೈಫ್ ಟ್ರಸ್ಟಿಯಾಗಿ ವರ್ಷಪೂರ್ತಿ ನಿರಂತರ ಒಂದಲ್ಲ ಒಂದು ನೃತ್ಯ ಚಟುವಟಿಕೆಗಳಲ್ಲಿ ಕಾರ್ಯನಿರತರು.

ಹದಿನೇಳನೆಯ ಶತಮಾನದ ಖ್ಯಾತ ಕವಿ ಶ್ರೀ ಮುನೆಪಲ್ಲಿ ಸುಬ್ರಮಣ್ಯ ಕವಿ ವಿರಚಿತ ‘ಭವ ನುತ– ಸಂಪೂರ್ಣ ಆಧ್ಯಾತ್ಮ ರಾಮಾಯಣದ  6 ಕಾಂಡಗಳ ಕಥೆಯಲ್ಲಿ 104 ಕೀರ್ತನೆಗಳನ್ನು ಸಮರ್ಥವಾಗಿ ಬಳಸಿಕೊಂಡು ರಾಮಾಯಣ ಕಥೆಯ ಅದ್ಭುತ ನೃತ್ಯರೂಪಕವನ್ನು ಹೆಣೆಯಲಾಗಿತ್ತು.  ಈ ವಿಶಿಷ್ಟ ನೃತ್ಯರೂಪಕದ ಪರಿಕಲ್ಪನೆ-ನಿರ್ಮಾಣ ಮತ್ತು ನೃತ್ಯಸಂಯೋಜನೆ ಕೂಚಿಪುಡಿ ನಿಪುಣೆ ಆಚಾರ್ಯ ದೀಪಾ ನಾರಾಯಣನ್ ಸಶೀಂದ್ರನ್  ಅವರದಾಗಿತ್ತು. ಸಂಗೀತ ಸಂಯೋಜನೆ- ಮೃದಂಗ ವಿದ್ವಾನ್ ಜಿ. ಗುರುಮೂರ್ತಿ, ಸಾಹಿತ್ಯ-ರಜನಿ ಮಲ್ಲಾಡಿ, ಗಾಯನ ದೀಪ್ತಿ ಶ್ರೀನಾಥ್, ಕೊಳಲು ಕಿಕ್ಕೇರಿ ಜಯರಾಂ ಮುಂತಾದವರಿದ್ದ ವಾದ್ಯಗೋಷ್ಠಿ. ಪ್ರಸ್ತುತಪಡಿಸಿದವರು  `ಕೂಚಿಪುಡಿ ಪರಂಪರಾ  ಫೌಂಡೇಶನ್’ ಸಂಸ್ಥೆಯ ನೃತ್ಯಕಲಾವಿದೆಯರು.

ಕೂಚಿಪುಡಿ ನೃತ್ಯಶೈಲಿಯಲ್ಲಿ ಪ್ರಥಮಬಾರಿಗೆ ಪ್ರಯೋಗವಾದ ಒಂದೂವರೆ ಗಂಟೆಯ ‘ಭವ ನುತ – ನೃತ್ಯರೂಪಕ ನಾಟಕೀಯ ದೃಶ್ಯಗಳಿಂದೊಡಗೂಡಿ ಕಲಾರಸಿಕರ ಮನಸ್ಸನ್ನು ಆವರಿಸಿತು. ಶಿವ ಮತ್ತು ಪಾರ್ವತಿದೇವಿಯ ನಡುವೆ ನಡೆಯುವ ಸಂವಾದ, ಪ್ರಶ್ನೋತ್ತರ ತಂತ್ರದ ಮೂಲಕ, ಇಡೀ ರಾಮಾಯಣದ ಕಥೆಯನ್ನು ಆಸಕ್ತಿಕರವಾಗಿ ದೃಶ್ಯವತ್ತಾಗಿ ಹೇಳುವ ಪ್ರಯತ್ನ ಇದಾಗಿತ್ತು. ಹಿನ್ನಲೆಯ ವೇದಿಕೆಯಲ್ಲಿ ಪ್ರಕೃತಿ-ಪುರುಷರ ಸಂವಾದ-ಮುನ್ನಲೆಯಲ್ಲಿ ರಾಮಾಯಣದ ಕಥೆಯ ಮುಖ್ಯ ಘಟನೆಗಳ ಚಿತ್ರಗಳು ಪದರ ಪದರವಾಗಿ ಬಿಚ್ಚಿಕೊಳ್ಳುತ್ತಾ ಸಾಗಿತು.

ಸಾಂಪ್ರದಾಯಕ ಕಥೆಯೇ ಆದರೂ ನಿರೂಪಣೆಯಲ್ಲಿ ನವೀನತೆಯನ್ನು ದಕ್ಕಿಸಿಕೊಂಡ ಈ ‘ಗೀತಗಬ್ಬ’ ವು ಶ್ರೀರಾಮ ಜನನದಿಂದ ಆರಂಭವಾಗಿ, ಸೀತಾ ಸ್ವಯಂವರ, ಕೈಕೇಯಿ ಬೇಡಿಕೆಯ  ನಿಮಿತ್ತವಾಗಿ ಅರಣ್ಯವಾಸ, ಚಿನ್ನದ ಜಿಂಕೆಯ ಪ್ರಕರಣ, ಸೀತಾಪಹರಣ, ಆಂಜನೇಯನ ಭೇಟಿ, ಅಶೋಕವನದಲ್ಲಿ ಸೀತಾಮಾತೆಯ ದರ್ಶನ-ಮುದ್ರಾ ಉಂಗುರ ಮತ್ತು ಚೂಡಾಮಣಿ ವಿನಿಮಯ ಮುಂತಾದ ಘಟನೆಗಳಿಂದ ರಾಮ-ರಾವಣರ ಯುದ್ಧ, ಅಂತ್ಯದಲ್ಲಿ ಶ್ರೀರಾಮ ಪಟ್ಟಾಭಿಷೇಕದ ಹೃನ್ಮನ ತಣಿಸುವ ದೃಶ್ಯದೊಂದಿಗೆ ನೃತ್ಯರೂಪಕ ಸಂಪನ್ನವಾಯಿತು.

ಮೂಲಕಥೆ ಮುಕ್ಕಾಗದಂತೆ ಸಾಗಿದ ನಿರೂಪಣೆಯ ದೃಶ್ಯಾವಳಿಗಳ ಸಂಯೋಜನೆಯಲ್ಲಿ ಹಲವಾರು ಸೂಕ್ಷ್ಮಸ್ಪಂದನಗಳು ಆಸಕ್ತಿಕರವಾಗಿದ್ದವು. ಅರಣ್ಯದಲ್ಲಿ ಅವರೇ ಪರ್ಣಕುಟೀರಗಳನ್ನು ನಿರ್ಮಿಸಿಕೊಳ್ಳುವುದು, ನವದಂಪತಿಗಳಾದ ರಾಮ-ಸೀತೆಯರ ನಡುವಣ ನವಿರಾದ ಸರಸ-ವಿಹಾರಗಳ ದೃಶ್ಯ ಮುದನೀಡಿತು. ಅಶೋಕವನದಲ್ಲಿ ಸೀತೆ ಮತ್ತು ಆಂಜನೇಯರ ನಡುವಣ ಸಂವಹನ, ಕುತೂಹಲಕಾರಿಯಾಗಿದ್ದಷ್ಟೇ ಅಲ್ಲದೆ ಭಾವಪೂರ್ಣವೂ ಆಗಿತ್ತು. ಶಿವ-ಪಾರ್ವತಿಯರ ತಾಂಡವ-ಲಾಸ್ಯದ ಹೆಜ್ಜೆಗಳ ಝೇಂಕಾರ, ಜಟಾಯು ಪ್ರತಿಭಟನೆ, ಶ್ರೀರಾಮನ ಧನುಛೇಧನ, ಶೂರ್ಪನಖಿಯ ಅಭೀಪ್ಸೆ ಮುಂತಾದ ಘಟ್ಟಗಳಲ್ಲಿ ಪಾತ್ರಗಳ ಮನಮುಟ್ಟುವ ಅಭಿನಯ,ನಯನ ಮನೋಹರ ವೇಷಭೂಷಣ, ಬಳಸಿದ ಸಾಂದರ್ಭಿಕ ಪರಿಕರಗಳು, ಕಲಾವಿದೆಯರ ಲವಲವಿಕೆಯ ನೃತ್ಯಲಹರಿ, ಚುರುಕಾದ ಕಥಾ ನಿರೂಪಣೆ ರೂಪಕದ ಯಶಸ್ಸಿಗೆ ಪೂರಕವಾಗಿತ್ತು.

ಆಚಾರ್ಯ ದೀಪಾ ನಾರಾಯಣನ್ ಅವರ ಮಹತ್ವಾಕಾಂಕ್ಷೆಯ ಕನಸಾದ ಈ ನೃತ್ಯರೂಪಕವು ಸಮರ್ಥವಾಗಿ ಮೂಡಿಬಂದಿದ್ದು, ಕೂಚಿಪುಡಿ ನೃತ್ಯ ಇತಿಹಾಸದಲ್ಲೊಂದು ಮೈಲಿಗಲ್ಲು ಸೃಷ್ಟಿಸಿತು ಎಂದರೆ ಅತಿಶಯೋಕ್ತಿಯಲ್ಲ.

                                    ******************     ವೈ.ಕೆ.ಸಂಧ್ಯಾ ಶರ್ಮ

.

Related posts

ಶಾಸ್ತ್ರೀಯ ಚೌಕಟ್ಟಿನ ಅಚ್ಚುಕಟ್ಟಾದ ಲೋಹಿತಾ ನರ್ತನ

YK Sandhya Sharma

ಅಪೂರ್ವ ವರ್ಚಸ್ವೀ ಅಭಿನಯದ ಸಾಕ್ಷಾತ್ಕಾರ

YK Sandhya Sharma

ತೇಜಸ್ವಿನಿಯ ಪ್ರಬುದ್ಧ ನರ್ತನದ ಸೊಗಸಿನ ಸಿರಿ

YK Sandhya Sharma

Leave a Comment

This site uses Akismet to reduce spam. Learn how your comment data is processed.