Image default
Dance Reviews

ರಂಜನಿ ರಂಗಪ್ರವೇಶದ ಮೂಲಕ ಮೆರೆದ ಸಾಮಾಜಿಕ ಕಾಳಜಿ

‘’ರಂಗಪ್ರವೇಶ’’-ಒಬ್ಬ ನೃತ್ಯ ಕಲಾವಿದರ ಜೀವನದಲ್ಲಿ ಸ್ಮರಣೀಯ ಘಟ್ಟ. ತಾವು ಅರ್ಜಿಸಿದ ನಾಟ್ಯ ವಿದ್ಯೆಯನ್ನು ಕಲಾರಸಿಕರ ಮುಂದೆ ಬದ್ಧತೆಯಿಂದ ಪ್ರಸ್ತುತಗೊಳಿಸುವುದು ಹಿಂದಿನಿಂದ ನಡೆದು ಬಂದಿರುವ ಪದ್ಧತಿ. ಇದಕ್ಕೆ ಕಲಾವಿದರು ನೃತ್ಯ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಅಪಾರ ವೆಚ್ಚ ಮಾಡಬೇಕಿದೆ. ಇದು ಅನಿವಾರ್ಯವಾಗಿದೆ ಕೂಡ. ಹೀಗಾಗಿ ನಾಟಕಗಳಿಗೆಗಿದ್ದಂತೆ ಪ್ರವೇಶಧನ ಇಲ್ಲಿರುವುದಿಲ್ಲ. ಸಾಮಾನ್ಯವಾಗಿ ಇಂಥ ಕಾರ್ಯಕ್ರಮಗಳಿಗೆ ‘ಉಚಿತ ಪ್ರವೇಶ’ ಎಂಬುದು ಎಲ್ಲರಿಗೂ ಗೊತ್ತು. ಆದರೆ ಈ ಪದ್ಧತಿಯನ್ನು ಕೊಂಚ ಬದಲಿಸಿ, ಆಗಮಿಸುವ ಪ್ರೇಕ್ಷಕರು, ಸ್ವ ಇಚ್ಚೆಯಿಂದ ವಿಶೇಷಚೇತನ ಸಂಸ್ಥೆಯೊಂದಕ್ಕೆ ತಮ್ಮ ಕೈಲಾದಷ್ಟು ಧನಸಹಾಯ ನೀಡಿ, ನೃತ್ಯದ ಆನಂದವನ್ನು ಪಡೆಯುವ ಅಪರೂಪದ ವ್ಯವಸ್ಥೆಯೊಂದು ಇತ್ತೀಚಿಗೆ ರೂಪಿತವಾಗಿತ್ತು. ತಮ್ಮ ‘ರಂಗಪ್ರವೇಶ’ದ ಹೊಸ ಮಜಲಾಗಿ ಇದನ್ನು ಆಗು ಮಾಡಿದವರು ಉದಯೋನ್ಮುಖ ನೃತ್ಯ ಕಲಾವಿದೆ ರಂಜನಿ ವೀಣಾ ಬೆಳವಾಡಿ. ಇದಕ್ಕೆ ಪ್ರೋತ್ಸಾಹ-ಪ್ರೇರಣೆ ನೀಡಿದವರು ಅವಳ ತಾಯಿ ರೂಪಾ ರಾಜ್. ನಗರದ ‘ಸಮರ್ಥನಂ’ -ವಿಶೇಷ ಚೇತನರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಂಸ್ಥೆಗೆ ತಾವೂ ಕೊಡುಗೆ ನೀಡಿ ಬಂದವರಿಂದಲೂ ಸಹಾಯಹಸ್ತ ದೊರೆಯುವಂತೆ ಮಾಡುವಲ್ಲಿ ಅವರು ಯಶಸ್ವಿಯಾದರು. ಇದು ಬೇರೆಯವರಿಗೂ ಮಾದರಿ ಎಂಬುದರಲ್ಲಿ ಖಂಡಿತಾ ಎರಡು ಮಾತಿಲ್ಲ.  

ಇಂಥ ಹೊಸಪಂಕ್ತಿಯನ್ನು ಹಾಕಿಕೊಟ್ಟ ಭರತನಾಟ್ಯ ಕಲಾವಿದೆ ರಂಜನಿ, ಖ್ಯಾತ ‘ನಾಟ್ಯಸಂಕುಲ’ ನೃತ್ಯಶಾಲೆಯ ಗುರು-ಕಲಾವಿದೆ ವಿದುಷಿ ನಾಗಶ್ರೀ ಕೆ.ಎಸ್. ಅವರ ಸಮರ್ಥ ಗರಡಿಯಲ್ಲಿ ತಯಾರಾದ ಕಲಾಶಿಲ್ಪ. ‘ಕಲಾಕ್ಷೇತ್ರ’ ಬಾನಿಯ ಪದ್ಧತಿಯಂತೆ ‘ಮಾರ್ಗ’ ದ ಶೈಲಿಯಲ್ಲಿ ಅಚ್ಚುಕಟ್ಟಾಗಿ ಮೂಡಿಬಂದ ನೃತ್ಯಪ್ರದರ್ಶನ ಅದಾಗಿತ್ತು.

ದೇವಲೋಕದ ಇಂದ್ರನ ಸಭೆಯಂತೆ ಭಾಸವಾದ ಅನುಪಮ ರಂಗಸಜ್ಜಿಕೆ ದೇವನರ್ತನದ ಸರ್ವಮೆರುಗನ್ನು ಕಾಂತಿಗೊಳಿಸಿತ್ತು. ಶಾಸ್ತ್ರೀಯ ಚೌಕಟ್ಟಿನಲ್ಲಿ ತನ್ನ ಸಾತ್ವಿಕ ನೃತ್ಯದ ಆನಂದವನ್ನು ಪಸರಿಸಿದ ರಂಜನಿ, ಶುಭಾರಂಭದಲ್ಲಿ ಖಂಡಜಾತಿಯ ‘ಅಲ್ಲರಿಪು’ ವನ್ನು ತನ್ನ ಸರಳ ನೃತ್ತಗಳ ಪ್ರಭಾವಳಿಯಿಂದ ಪ್ರಸ್ತುತಿಗೊಳಿಸಿದಳು. ನೃತ್ಯ ವ್ಯಾಕರಣದ ಮುನ್ನೋಟವಾಗಿ ದೃಷ್ಟಿಭೇದ, ಶಿರೋಭೇದ, ಖಚಿತ ಅಡವುಗಳು, ಅರೆಮಂಡಿ, ವಿವಿಧ ಬಗೆಯ ಹಸ್ತ ವಿನಿಯೋಗವನ್ನು ಸ್ಫುಟವಾಗಿ – ಸಾಂಪ್ರದಾಯಕವಾಗಿ ನಿರೂಪಿಸಿದಳು.

ನಂತರ- ರುಕ್ಮಿಣೀ ದೇವಿ ಅರುಂಡೆಲ್ ನೃತ್ಯ ಸಂಯೋಜಿಸಿದ ‘ಜತಿಸ್ವರ’ (ರಾಗಮಾಲಿಕೆ-ಮಿಶ್ರಛಾಪು ತಾಳ) ಅಂಗಶುದ್ಧ ಜತಿಗಳಲ್ಲಿ ಮಿಂಚಿತು. ಸ್ವರ ಮಾಧುರ್ಯ, ಲಯಗಳ ನಾದದಲ್ಲಿ           ಝೇಂಕರಿಸಿ ‘ಜತಿ-ಸ್ವರ’ ಮಿಲನವನ್ನು ಅರ್ಥಪೂರ್ಣವಾಗಿ ಧ್ವನಿಸಿತು. ಮೂಲ ಸೊಗಡಿನ ಸಂಯೋಜನೆ ಚಾಚೂತಪ್ಪದೆ ಪಾಲನೆಯಾಗಿ ದಿವ್ಯಾನುಭವ ನೀಡಿತು.

ಶ್ರೀಕೃಷ್ಣನ ಲೀಲಾ ವಿನೋದ- ತುಂಟತನದ ಪ್ರಸಂಗವನ್ನು ಸುಮನೋಹರವಾಗಿ ಕಟ್ಟಿಕೊಡುವ ಸ್ವಾತಿ ತಿರುನಾಳ್ ವಿರಚಿತ ‘ಸರಸಿಜಾಕ್ಷಿಲು ಜಳಕ ಮಾಡೆ’ ಎಂಬ ‘ಶಬ್ದಂ’ ಸುಮನೋಹರವಾಗಿ ಮೂಡಿಬಂತು. ಗೋಪಿಕಾ ಸ್ತ್ರೀಯರು ಜಳಕ ಮಾಡುವಾಗ ಕೃಷ್ಣನು ಅವರ ‘ವಸ್ತ್ರಾಪಹರಣ’ ಮಾಡಿ ನಗುವ ಕೀಟಲೆಯ ಪ್ರಸಂಗದ ಬಗ್ಗ್ಗೆ , ನಾಯಿಕೆ ಟೀಕೆ ಮಾಡುತ್ತ ‘ಈ ರೀತಿ ಮಾಡುವುದು ನಿನಗೆ ಧರ್ಮವೇ-ತರವೇ ಕೃಷ್ಣಾ ?’ ಎಂದು ಅವನು ತುಂಟಾಟಗಳನ್ನು ನಾನಾ ಬಗೆಯಲ್ಲಿ ಪ್ರಶ್ನಿಸುವ ಪರಿ ಮುದ ನೀಡಿತು. ಲಹರಿಯಲ್ಲಿ ಸಾಗುವ ಆಕ್ಷೇಪಣೆಯ ಧಾಟಿಯನ್ನು ಕಲಾವಿದೆ ಸುಂದರವಾಗಿ ಅಭಿವ್ಯಕ್ತಿಸಿದಳು.

‘ವರ್ಣ’- ಪ್ರಸ್ತುತಿಯ ಹೃದಯ ಭಾಗ-ಅಷ್ಟೇ ಹೃದ್ಯವಾಗಿ ಒಡಮೂಡಿದ ಪ್ರಸ್ತುತಿ. ಕಲಾವಿದೆಯ ನೃತ್ತ ಜ್ಞಾನ-ಅಭಿನಯ ಸಾಮರ್ಥ್ಯಕ್ಕೆ ಸವಾಲು ಒಡ್ಡುವ ಮತ್ತು ಲಯ-ತಾಳಜ್ಞಾನಗಳಿಗೆ ಕನ್ನಡಿ ಹಿಡಿಯುವ ಪರೀಕ್ಷಾ ಹಂತ. ಹೆಚ್ಚೂ ಕಡಿಮೆ ನೃತ್ಯ ವ್ಯಾಕರಣದ ಎಲ್ಲ ಅಂಶಗಳೂ ಇದರಲ್ಲಿ ಅಡಕವಾಗಿರುತ್ತದೆ. ರುಕ್ಮಿಣೀ ದೇವಿ ಅರುಂಡೆಲ್ ನೃತ್ಯ ಸಂಯೋಜಿಸಿದ, ಮೈಸೂರು ಸದಾಶಿವರಾವ್ ಅವರ ಸಂಗೀತದ ಈ ಕೃತಿ ಶುದ್ಧ ಧನ್ಯಾಸಿ ರಾಗ ಮತ್ತು ಆದಿತಾಳದಲ್ಲಿದೆ.

ವಿಪ್ರಲಂಭ ಶೃಂಗಾರದ ನಾಯಕಿ, ನಾಯಕ ತನ್ನಿಂದ ದೂರಾದ ಬಗ್ಗೆ ಅಳಲು ತೋಡಿಕೊಳ್ಳುವ ವಿರಹತಪ್ತ ವಿವಿಧ ಮಜಲುಗಳನ್ನು ಕಲಾವಿದೆ ತನ್ನ ಸೌಮ್ಯಾಭಿನಯದಿಂದ ತನ್ನ ಮುನಿಸು-ದುಃಖ- ನೋವು- ನಿರಾಸೆಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದಳು. ನನ್ನ ಬಗ್ಗೆ ನಿನಗಾರು ಚಾಡಿ ಹೇಳಿ, ನಿನ್ನ ಮನಸ್ಸು ಕೆಡಿಸಿದರು?  ನನ್ನ ಒಲವು, ಉಪಚಾರಗಳೊಂದೂ ನಿನಗೆ ಬೇಡವಾಗಿವೆ, ನನ್ನ ನಿರಾಕರಣೆಗೆ ಕಾರಣವೇನೆಂದು ಪರಿಪರಿಯಾಗಿ ಚಿಂತಿಸುತ್ತಾ, ವ್ಯಥೆಪಡುತ್ತ ಆತನ ನೆನಪಲ್ಲಿ ಕಾತರಿಸುವ ಚಿತ್ರಣವನ್ನು ರಂಜನಿ ಸೊಗಸಾಗಿ ನೀಡಿದಳು. ನಡುನಡುವೆ ಅವಳ ಮನದ ಆವೇಗದಂತೆ ಪ್ರತಿಬಿಂಬಿತವಾದ ಖಚಿತ ಹಸ್ತಮುದ್ರೆಯ ಹರಿತ ನೃತ್ತಗಳು, ಪಾದಭೇದಗಳು, ನೋವಿನ ಬಾಣದಂತೆ ಅಭಿವ್ಯಕ್ತವಾದವು. ಕಲಾವಿದೆ ನೃತ್ತ- ಅಭಿನಯಗಳೆರಡರಲ್ಲೂ ಸೈ ಎನಿಸಿಕೊಂಡಳು. ಕಲಾವಿದೆಯ ನೃತ್ಯ ಕಾರಂಜಿಗೆ ಸ್ಫೂರ್ತಿ ನೀಡಿದ್ದು ಗುರು ನಾಗಶ್ರೀ ಅವರ ಕಂಚಿನ ಕಂಠದ ಸುಲಲಿತ ನಟುವಾಂಗದ ಓಘ.

ಮುಂದೆ- ದೈವೀಕವಾಗಿ ಮೂಡಿ ಬಂದ ‘ಶ್ರೀಚಕ್ರರಾಜ ಸಿಂಹಾಸನೇಶ್ವರಿ’- ನಾಗಶ್ರೀ ಅವರ ಮನಮೋಹಕ ನೃತ್ಯ ಸಂಯೋಜನೆಯಲ್ಲಿ ‘ಅಗಸ್ತ್ಯ’ರ ಸಂಗೀತದ ಮೂಸೆಯಲ್ಲಿ ಮೈಮನಕ್ಕೆ ತಂಪೆರೆಯಿತು. ಮೈ ಚಳಿ ಬಿಟ್ಟು ತಾದಾತ್ಮ್ಯದಿಂದ ನರ್ತಿಸಿದ ರಂಜನಿ ತನ್ನ ಭಾವಪೂರ್ಣ ಅಭಿನಯವನ್ನು ಹೊರಸೂಸಿದಳು. ವಿನಯಪರ ಭಾವಗಳ ಸ್ರೋತ- ಶರಣಾಗತಿಯ ಸಮರ್ಪಣಾ ಭಾವ ಮೆರುಗು ನೀಡಿತು. ದೇವಿಯ ರಮ್ಯ ಭಂಗಿಗಳು ಮನಸೆಳೆದವು. ದಾಸಶ್ರೇಷ್ಠ ಪುರಂದರ ದಾಸರ ‘ಯಮನೆಲ್ಲೂ ಕಾಣನೆಂದು ಹೇಳಬೇಡ’ ಶಿವರಂಜಿನಿ ರಾಗದ ದೇವರನಾಮದ ಸಾಕಾರದಲ್ಲಿ ವಿವಿಧ ಸಂಚಾರಿಗಳ ನಾಟಕೀಯ ಅನಾವರಣದಲ್ಲಿ ರಂಜನಿ, ಭರವಸೆಯ ಉತ್ತಮಾಭಿನಯದ ಕಲಾವಿದೆಯಾಗಿ ಹೊರಹೊಮ್ಮಿದಳು.  ಅದಕ್ಕೆ ಪೂರಕವಾಗಿ ಗಾಯಕಿ ಭಾರತಿ ವೇಣುಗೋಪಾಲ್ ಅವರ ಆರ್ದ್ರ-ಭಾವಪೂರ್ಣ ಗಾಯನ ಹೃದಯಸ್ಪರ್ಶಿಯಾಗಿತ್ತು. ಸ್ಕಂಧಕುಮಾರ್ ಅವರ ವೇಣುನಾದ ಕರ್ಣಾನಂದಕರವಾಗಿತ್ತು. ಸಂಚಾರಿಯಲ್ಲಿ ಮಧುಸೂದನ್ ಅವರ ವಯೊಲಿನ್ ಸನ್ನಿವೇಶದ ಗಾಢತೆಯನ್ನು ಎತ್ತಿ ಹಿಡಿಯಿತು. ಜಿ.ಎಸ್. ನಾಗರಾಜರ  ಮೃದಂಗದ ಧ್ವನಿ ಸನ್ನಿವೇಶ ನಿರ್ಮಾಣದಲ್ಲಿ ಪರಿಣಾಮಕಾರಿ ಪಾತ್ರ ವಹಿಸಿತ್ತು.

ಸ್ವತಃ ಉತ್ತಮ ವೇಣುವಾದಕಿಯಾದ ನೃತ್ಯ ಕಲಾವಿದೆ ರಂಜನಿ, ಜಯದೇವನ ‘ಅಷ್ಟಪದಿ’ ಯ ಸಾಕ್ಷಾತ್ಕಾರದಲ್ಲಿ ನುಡಿಸಿದ ಕೊಳಲ ನಾದಸಲಿಲ, ಕೃಷ್ಣನ ಶೃಂಗಾರದ ನಡೆಗೆ, ನರ್ತನ ಲಾಸ್ಯಕ್ಕೆ ಭಾವೊದ್ದೀಪನವಾಯಿತು. ಅಂತ್ಯದಲ್ಲಿ- ನಟಭೈರವಿ ರಾಗದ ‘ತಿಲ್ಲಾನ’ ಮನಮೋಹಕ ಆಂಗಿಕ ಚಲನೆ-ಪಾದಭೇದಗಳ ಚತುರತೆ, ರಂಗಾಕ್ರಮಣದ ಸೌಂದರ್ಯದಿಂದ ಆಹ್ಲಾದಕರವಾಗಿತ್ತು.  

Related posts

ಮನೋಜ್ಞ ಅಭಿನಯದ ‘ಅನನ್ಯ’ ನೃತ್ಯ

YK Sandhya Sharma

ಸುಂದರ ನೃತ್ಯಾಭಿನಯ ಅಕ್ಷತಾ ನರ್ತನ ಸೊಬಗು

YK Sandhya Sharma

Nrutyantar-Naman 22

YK Sandhya Sharma

3 comments

Ramesh Chandra January 5, 2022 at 12:45 am

ಮೇಡಂ7.ನಮಸ್ತೆ ಕುಮಾರಿ ರಂಜನಿ ಅವರ ರಂಗಪ್ರವೇಶ ಕಾರ್ಯಕ್ರಮದ ವ್ವೀಕ್ಷಕವಿವರಣೆ ಓದಿದೆ ಸ್ವತಃ ಪ್ರೇಕ್ಷಕರ ಕುಡೆ ಕುಳಿತು.ನೃತ್ಯವುಭೋಗ ವನ್ನೂ ಅನುಭವಿಸಿದ ಹಾಗೆ ಆಯ್ತು ನಿಮ್ಮ ವಿಮರ್ಶೆ ಅತಿ ಉನ್ನತ ಮಟ್ಟದ್ದು ಆಗಿರುತ್ತದೆ.ಅದನ್ನು ಓದುವುದೇ ಒಂದು ವಿಶೇಷ ಅನುಭವ.ನಿಮಗೆ.ಅಭಿನಂದನೆ ಕೂ.. ರಂಜನಿಗೆ ಶುಭಾಕಾಂಕ್ಷೆಗಳು. ನಿಮ್ಮ ವಿಶ್ವಾಸಿ ರಮೇಶ್ ಚಂದ್ರ ರಾ ರಾ ನಗರ ಸ್ಯಾನ್ ಫ್ರಾನ್ಸಿಸ್ಕೋ

Reply
YK Sandhya Sharma March 1, 2022 at 7:06 pm

ನಿಮ್ಮ ಅಮೂಲ್ಯ ಅಭಿಪ್ರಾಯ ಮೆಚ್ಚುಗೆಗಳಿಗೆ ಅನಂತ ನಮನಗಳು. ನಿಮ್ಮ ಈ ಪ್ರೋತ್ಸಾಹ ನಿರಂತರವಾಗಿರಲಿ.

Reply
YK Sandhya Sharma March 11, 2022 at 6:46 pm

ನಿಮ್ಮ ಮೆಚ್ಚುಗೆಗೆ ಅನಂತ ಕೃತಜ್ಞತೆಗಳು.

Reply

Leave a Comment

This site uses Akismet to reduce spam. Learn how your comment data is processed.