ಇವೆಲ್ಲದರ ಜೊತೆ ರಘುನಂದನ್, ಮೃದಂಗವಾದನ, ವಿದ್ವತ್ ಪದವಿ ಜೊತೆಗೆ `ನಟುವಾಂಗ’ ದಲ್ಲೂ ಶ್ರೇಷ್ಟಾಂಕ ಗಳಿಸಿ ಪರಿಣತ ವಿದ್ವಾಂಸರಾಗಿರುವುದು ಇವರ ಹೆಗ್ಗಳಿಕೆ. ನೃತ್ಯರಂಗದಲ್ಲಿ ಎರಡೂವರೆ ದಶಕಗಳ ಸುದೀರ್ಘ ಅನುಭವವುಳ್ಳ ರಘುನಂದನ್ ಪೂರ್ಣಪ್ರಮಾಣದಲ್ಲಿ ನಾಟ್ಯರಂಗದ ಸೇವೆಗೇ ಭವಿಷ್ಯವನ್ನು ಮೀಸಲಾಗಿಟ್ಟವರು.ಜೀವನಕ್ಕೆ ಹೊಸದೊಂದು ಆಯಾಮವನ್ನು ಒದಗಿಸುವ ಸೃಜನಶೀಲ ಕಲೆ ನೃತ್ಯವನ್ನು ಕಲಿಯುವುದರಿಂದ ಮಕ್ಕಳ ಜೀವನದೃಷ್ಟಿ, ಮನೋಧರ್ಮ ಬದಲಾಗುವುದೆಂಬ ನಂಬಿಕೆಯುಳ್ಳ ರಘುನಂದನ್, ತಮ್ಮದೇ ಆದ `ಅಭಿವ್ಯಕ್ತಿ ಡ್ಯಾನ್ಸ್ ಸೆಂಟರ್’ ಮೂಲಕ ಸತತವಾಗಿ ನೂರಾರು ಮಕ್ಕಳಿಗೆ ನೃತ್ಯ ಕಲಿಸುತ್ತಿದ್ದಾರೆ.
ಸದಾ ನೂತನ ಪ್ರಯೋಗಗಳಲ್ಲಿ ನಿರತರಾದ ಕ್ರಿಯಾಶೀಲ ಪ್ರವೃತ್ತಿಯ ರಘುನಂದನ್ ಅವರ ಹೊಸ ಅರ್ಥವಂತಿಕೆಯ ಪರಿಕಲ್ಪನೆಯ ‘ಬಾಲಕಾಂಡಂ’ ಇದೀಗ ಎಪ್ರಿಲ್ ತಿಂಗಳ 2 ನೇ ತಾ. ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 10.30 ಕ್ಕೆ ಅನಾವರಣಗೊಳ್ಳಲಿದೆ.