ಸಂಧ್ಯಾ ಕಲಾವಿದರ ಹೊಸ ಪ್ರಯೋಗ – ‘ಮುಖವಾಡ’
ಈಗಾಗಲೇ ಕಳೆದ 46 ವರ್ಷಗಳಿಂದ ರಂಗಭೂಮಿಯಲ್ಲಿ ಜನಪ್ರಿಯವಾಗಿರುವ ಕ್ರಿಯಾಶೀಲ ಹವ್ಯಾಸೀ ನಾಟಕ ತಂಡ ‘ಸಂಧ್ಯಾ ಕಲಾವಿದರು, ಅನಿರೀಕ್ಷಿತ ಅಂತ್ಯದ ಕುತೂಹಲ-ಆಸಕ್ತಿಕರ ಹೊಸಪ್ರಯೋಗ ‘ಮುಖವಾಡ’ವನ್ನು ಅರ್ಪಿಸುತ್ತಿದೆ. ಇದೇ ತಿಂಗಳ 15 ನೇ ತಾ. ಶನಿವಾರದಂದು ಸಂಜೆ 7.30 ಗಂಟೆಗೆ ಹನುಮಂತನಗರದ ಕೆ.ಹೆಚ್.ಕಲಾಸೌಧದಲ್ಲಿ ಪ್ರದರ್ಶನವಿದೆ. ಅಭಿನಯ ಸಂಧ್ಯಾ ಕಲಾವಿದರು – ನಿರ್ದೇಶನ ಪ್ರದೀಪ್ ಅಂಚೆ. ಮನುಷ್ಯ ತನ್ನ ಅಂತರಂಗದಲ್ಲಿ ಹುದುಗಿರುವ ಆಸೆ-ಅಭೀಪ್ಸೆಗಳ ಈಡೇರಿಕೆಗಾಗಿ, ಯಾವ ಹಂತಕ್ಕೂ ಸಿದ್ಧನಾಗಬಲ್ಲ, ಯಾವ ಹೇಯ ಕೃತ್ಯ-ಕ್ರೌರ್ಯಗಳಿಗೂ ಹಿಂಜರಿಯಲಾರ ಎಂಬ ಅಂಶವನ್ನು, ಬರಹಗಾರನೊಬ್ಬನ ಜೀವನದ ಕಥೆಯ ಸನ್ನಿವೇಶಗಳಲ್ಲಿ ಅನ್ವೇಷಿಸಲಾಗಿದೆ. ಲೇಖಕನೊಬ್ಬನ ಬರಹಕ್ಕೂ, ಆತನ ನಿಜಸ್ವಭಾವಕ್ಕೂ ಇರುವ ಅಂತರದ ವಿಡಂಬನಾತ್ಮಕ ಸತ್ಯಕ್ಕೆ ಕನ್ನಡಿ ಹಿಡಿಯುವ ‘ಮುಖವಾಡ’ ನಾಟಕದ ನಡೆ ಆಸಕ್ತಿಕರವಾಗಿದ್ದು, ಕೌತುಕತೆಯೊಂದಿಗೆ ನಿಗೂಢತೆ ಮತ್ತು ಸ್ವಾರಸ್ಯವನ್ನು ಕಾಯ್ದಿಟ್ಟುಕೊಂಡಿದೆ. ರಂಗಪ್ರೇಮಿಗಳೆಲ್ಲ ತಪ್ಪದೆ ಈ ನಾಟಕವನ್ನು ವೀಕ್ಷಿಸಲು ಬನ್ನಿ. ನಿಮಗಿದೋ ಆತ್ಮೀಯ ಆಮಂತ್ರಣ.








