Image default
Dance Reviews

Shivapriya-75 th Rangapravesha- Pooja- Arnav Raj Kuchipudi Debut

ತಾಯಿ-ಮಗನ ಸಾಮರಸ್ಯದ ಚೆಂದದ ನರ್ತನ

                     

ವೇದಿಕೆಯ ಮೇಲೆ ನರ್ತಿಸುತ್ತಿದ್ದ ಜೋಡಿ ನೃತ್ಯ ಕಲಾವಿದರ ಬಗ್ಗೆ ಎಲ್ಲ ಕಲಾರಸಿಕರಿಗೂ ಅದಮ್ಯ ಕುತೂಹಲ. ಅಷ್ಟೇ ಆಸಕ್ತಿಕರ ಕೇಂದ್ರೀಕೃತ ನೋಟ. ಅದೊಂದು ಅಪರೂಪದ ರಂಗಪ್ರವೇಶ. ತಾಯಿ ಪೂಜಾ ರಾಜ್ ಮತ್ತು ಹನ್ನೊಂದು ವರ್ಷದ ಪುಟ್ಟ ಮಗ ಅರ್ಣವ್ ರಾಜ್ ಅತ್ಯುತ್ಸಾಹದಿಂದ, ಅಸೀಮ ಚೈತನ್ಯ ಪ್ರದರ್ಶನದಿಂದ ತಮ್ಮ ‘ಕುಚಿಪುಡಿ ಪ್ರಥಮ ಪ್ರವೇಶ’ದ ಸಮಾರಂಭದಲ್ಲಿ ಸುಮನೋಹರವಾಗಿ ನರ್ತಿಸುತ್ತಿದ್ದರು.

ಈ ಕಲಾಪ್ರತಿಭೆಗಳು ‘ಶಿವಪ್ರಿಯ’ ಖ್ಯಾತಿಯ ಅಂತರರಾಷ್ಟ್ರೀಯ ನೃತ್ಯ ಕಲಾವಿದ-ಗುರು ಡಾ.ಸಂಜಯ್ ಶಾಂತಾರಾಂ ಅವರ ಗರಡಿಯಲ್ಲಿ ಪಳಗಿದ ನೃತ್ಯಾಕಾಂಕ್ಷಿಗಳು. ಡಾ. ಸಂಜಯ್ ಗಾಯನ ನೀಡಿ ನಟುವಾಂಗ ಮಾಡಿದ 75 ನೆಯ ರಂಗಪ್ರವೇಶ ಇದಾಗಿತ್ತು ಎಂಬುದೊಂದು ವಿಶೇಷ ಸಂಗತಿಯಾದರೆ, ಗುರುಗಳು ನಿರ್ವಹಿಸಿದ ಪ್ರಥಮ ಕುಚಿಪುಡಿ ರಂಗಪ್ರವೇಶ ಇದೆಂಬುದು ಇನ್ನೊಂದು ಅಗ್ಗಳಿಕೆಯಾಗಿತ್ತು.

ರಂಗದ ಮೇಲೆ ಅದ್ದೂರಿಯಾದ ಗಂಧರ್ವಲೋಕವೇ ಸೃಷ್ಟಿಯಾಗಿತ್ತು. ಕುಸುರಿಗೆಲಸದ ಆಲಂಕೃತ ಮಹಾದ್ವಾರ-ಹೆಬ್ಬಾಗಿಲ ವೈಭವದ ನೋಟವೇ ಎಂಥವರನ್ನೂ ಸೆಳೆಯುವಂತಿತ್ತು. ಝಗಝಗಿಸುವ  ದೀಪಾಲಂಕಾರ. ಆಕರ್ಷಕ ವರ್ಣಮೇಳ  -ಧೂಮ್ರಲೀಲಾವೃತ ಅಸದೃಶ ದೈವೀಕ ಪರಿಸರ, ಕಲಾವಿದರಿಗೆ ನೃತ್ಯ ಮಾಡಲು ಹೇಳಿ ಮಾಡಿಸಿದ ಆವರಣ. ಒಂದು ರಂಗಪ್ರವೇಶದ ಯಶಸ್ಸಿಗೆ ಎಷ್ಟೆಲ್ಲಾ ಅಂಶಗಳು ಪೂರಕವಾಗಿರುತ್ತವೆ ಎಂಬುದಕ್ಕೆ ಸಾಕ್ಷಿಯಾಗಿದ್ದವು.

ಮೈಮರೆತು ನೃತ್ಯಾರ್ಪಣೆ ಮಾಡುವವರನ್ನು ಪ್ರೇರೇಪಿಸುವ, ಮತ್ತಷ್ಟು ಸ್ಫೂರ್ತಿಯನ್ನು ಮೊಗೆದು ಕೊಡುವ ದಿವ್ಯಗಾನ ಮೇಳ- ವಾದ್ಯಗೋಷ್ಠಿ ಅನುಪಮವಾಗಿತ್ತು. ಗುರು ಡಾ. ಸಂಜಯರ ಸುಶ್ರಾವ್ಯ ಗಾಯನ, ಹುರಿದುಂಬಿಸುವ ಸ್ಫುಟವಾದ ನಟುವಾಂಗದ ಬನಿ ಕಿವಿದುಂಬಿದರೆ, ಕಾರ್ತೀಕ್ ವೈಧಾತ್ರಿ ಅವರ ಸೊಗಸಾದ ಮೃದಂಗವಾದನ, ಇನಿದಾದ ದನಿಯಿಂದ ಮನದುಂಬಿದ ಗೋಪಾಲರ ವೀಣಾನಿನಾದ, ಸನ್ನಿವೇಶಗಳ ಪರಿಣಾಮವನ್ನು ಎತ್ತಿ ಹಿಡಿವ ನುರಿತ ಹೇಮಂತ ಕುಮಾರರ ಪಿಟೀಲು ವಾದನ, ಬೇರೊಂದು ಲೋಕಕ್ಕೊಯ್ದ ನಿತೀಶ್ ಅಮ್ಮಣ್ಣಯ್ಯ ಅವರ ಕೊಳಲಗಾನ ಮತ್ತು ಪ್ರಭಾವಶಾಲಿಯಾದ ಧ್ವನಿ ಪರಿಣಾಮ ನೀಡಿದ ಲಕ್ಷ್ಮೀನಾರಾಯಣರ ಕೌಶಲ್ಯ ರಂಗಪ್ರವೇಶಕ್ಕೆ ಉತ್ತಮ ಪ್ರಭಾವಳಿ ನೀಡಿದ್ದವು.       

ಶುಭಾರಂಭಕ್ಕೆ, ಪುಷ್ಪಾಂಜಲಿ, ಗಣೇಶವಂದನೆಗಳನ್ನು ಇಬ್ಬರೂ ತಮ್ಮ ಅಂಗಶುದ್ಧ ಅಷ್ಟೇ ಲವಲವಿಕೆಯ ನರ್ತನದಿಂದ ಸಾಕಾರಗೊಳಿಸಿದರು. ನಾಜೂಕು-ಕೋಮಲತೆಗಳ ಸಾಕಾರವಾದ ಕುಚಿಪುಡಿ ನೃತ್ಯಶೈಲಿ ಆಕರ್ಷಕ. ಚೈತನ್ಯದ ಚಿಲುಮೆ ಅರ್ಣವನಂತೂ ಪುಟ್ಟ ನಟರಾಜನ ಅಪರಾವತಾರವಾಗಿ ನೃತ್ಯವೇ ತಾನಾಗಿ ಮೈಮರೆತು ಕುಣಿದೇ ಕುಣಿದ. ದಣಿವು ಕಾಣದೆ ಕುಣಿದ. ಉತ್ತಮಾಭಿನಯವನ್ನು ಮೊಗದಲ್ಲಿ ಬಿಂಬಿಸುತ್ತಾ ಕುಣಿದನೆಂದರೆ ಈ ಬಾಲಪ್ರತಿಭೆಯ ಬಗ್ಗೆ ಎಂಥವರಿಗೂ ಅಚ್ಚರಿಯಾಗುತ್ತದೆ. ಕ್ಲಿಷ್ಟಜತಿಗಳ ಸಂಯೋಜನೆಯನ್ನು ಲೀಲಾಜಾಲವಾಗಿ ನಿರ್ವಹಿಸಿದ ಕಲಾವಿದ, ಹನುಮಂತ ದೇವನನ್ನು ಸಾಕ್ಷಾತ್ಕರಿಸಿದ ಬಗೆ ನಿಜಕ್ಕೂ ಮೋಡಿ ಮಾಡಿತು. ಅತ್ಯಂತ ಸೂಕ್ಷ್ಮಗ್ರಹಣ ಶಕ್ತಿಯುಳ್ಳ ಅರ್ಣವ್, ಮಿಂಚಿನ ಸಂಚಾರದ ನೃತ್ತಗಳನ್ನು, ಆಕಾಶಚಾರಿಗಳನ್ನು ಅರೆಮಂಡಿಯ ಭಂಗಿಗಳನ್ನು ಪ್ರದರ್ಶಿಸಿದ ವೈಖರಿ ಅದ್ಭುತವಾಗಿತ್ತು. ಕಲಾವಿದರ, ರಂಗಾಕ್ರಮಣದ ವಯ್ಯಾರದ ಬಾಗಿನಲ್ಲಿ ಸಾಗಿದ ಮಂಡಲಗಳಲ್ಲಿ ನಿಷ್ಕ್ರಮಣ, ಜಾರುನಡೆಯ ಸೊಗಸು ಮುದನೀಡಿತು.  

ಸಮನ್ವಯದಿಂದ ನರ್ತಿಸಿದ ಪೂಜಾ-ತನ್ನ ನವರಸಗಳ ಅಭಿನಯದಲ್ಲಿ, ರುದ್ರ-ಶಾಂತ-ಪ್ರಸನ್ನ ಮುಖಭಾವದಲ್ಲಿ, ದೇವಿ ಶ್ರೀ ಚಾಮುಂಡೇಶ್ವರಿಯ ಮಹಿಮೆಯ ಕಥಾನಕವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಳು. ಆಕೆಯ ಅಭಿನಯ ಉತ್ತಮವಾಗಿತ್ತು. ಅನಂತರ- ತ್ಯಾಗರಾಜರ ಕೀರ್ತನೆ ಭಾವಪೂರ್ಣವಾಗಿ ಮೂಡಿಬಂದಿತು. ಕನಕದಾಸರ ‘ಬಾಗಿಲನು ತೆರೆದು ಸೇವೆಯನು ಕೊಡೊ ನರಹರಿಯೇ ..’ – ಕೃತಿ ಮನಮುಟ್ಟಿತು.

ಅರ್ಣವ್- ತರಂಗದಲ್ಲಿ ನೃತ್ಯ ವ್ಯಾಕರಣದ ಎಲ್ಲ ಅಂಶಗಳನ್ನೂ ಸ್ಫುಟವಾಗಿ ತನ್ನ ಪರಿಣತ ತಾಳ-ಲಯಜ್ಞಾನಗಳಿಂದ ಪ್ರಸ್ತುತಪಡಿಸಿ ಭರವಸೆಯ ಕಲಾವಿದನಾಗಿ ಹೊರಹೊಮ್ಮಿದ. ಕಲಾವಿದರಿಬ್ಬರು ಗುರುಗಳೊಡನೆ ಮಂಗಳದಲ್ಲಿ ನರ್ತಿಸಿದ ಕನ್ನಡ ಕಣ್ಮಣಿ ಪುನೀತ್ ರಾಜ್ ಕುಮಾರನಿಗೆ ಸಮರ್ಪಿಸಿದ ಶ್ರದ್ಧಾಂಜಲಿ-ಭಾವಾಂಜಲಿಯ ನೃತ್ಯ ಎಲ್ಲರ ಮನಸೂರೆಗೊಂಡಿತ್ತು.                                     

  ************          

Related posts

ರಂಜನಿ ರಂಗಪ್ರವೇಶದ ಮೂಲಕ ಮೆರೆದ ಸಾಮಾಜಿಕ ಕಾಳಜಿ

YK Sandhya Sharma

ದೀಕ್ಷಿತಾಳ ಪ್ರೌಢ ಅಭಿನಯದ ಮನೋಜ್ಞ ನೃತ್ಯವಲ್ಲರಿ

YK Sandhya Sharma

ಕವನ-ಧ್ವನಿ ಸೋದರಿಯರ ಸುಂದರ ಯುಗಳ ನೃತ್ಯ

YK Sandhya Sharma

Leave a Comment

This site uses Akismet to reduce spam. Learn how your comment data is processed.