ಕು. ಐಶ್ವರ್ಯಳಿಗೆ ಬಾಲ್ಯದಿಂದಲೂ ನೃತ್ಯಪ್ರೀತಿ. ಕಲಾ ಅಭೀಪ್ಸೆಯಿಂದ ಹತ್ತನೆಯ ವಯಸ್ಸಿಗೇ ‘ವಳವೂರುಬಾನಿ’ಯ ಭರತನಾಟ್ಯವನ್ನು ಕಲಿಯಲು ಖ್ಯಾತ ‘ವೈಷ್ಣವಿ ನಾಟ್ಯಶಾಲೆ’ಯ ನಾಟ್ಯಾಚಾರ್ಯ ಮಿಥುನ್ ಶ್ಯಾಂ ಅವರಲ್ಲಿ ಸೇರ್ಪಡೆ. ಕಳೆದ ಆರುವರ್ಷಗಳಿಂದ ಕಠಿಣ ಪರಿಶ್ರಮ-ಅಭ್ಯಾಸಗಳಿಂದ ನೃತ್ಯದ ವಿವಿಧ ಆಯಾಮಗಳನ್ನು ಕಲಿಯುತ್ತಿರುವ ಇವಳು, ಶೀಘ್ರಕಾಲದಲ್ಲೇ ‘ಪ್ರಥಮ ಪ್ರವೇಶ’ ಪರೀಕ್ಷೆಯಲ್ಲಿ ಜಯಶಾಲಿಯಾಗಿ ‘ವೈಷ್ಣವಿ ಸ್ವರ್ಣ’ ಎಂಬ ಅಭಿದಾನ ಪಡೆದ ಭಾಗ್ಯಶಾಲಿ.
ನಾಡಿನ ಎಲ್ಲ ಪ್ರಮುಖ ದೇವಾಲಯಗಳಲ್ಲಿ ಮತ್ತು ಅನೇಕ ವೇದಿಕೆಗಳಲ್ಲಿ ದೇಶದಾದ್ಯಂತ ನೃತ್ಯ ಪ್ರದರ್ಶನ ನೀಡಿ ಮೆಚ್ಚುಗೆ ಪಡೆದಿದ್ದಾಳೆ. ಅವುಗಳಲ್ಲಿ ಮುಖ್ಯವಾದುವೆಂದರೆ-ವೆಲ್ಲೂರಿನ ಸ್ವರ್ಣ ದೇವಾಲಯ ಶ್ರೀ ನಾರಾಯಣೀ ಪೀಠ, ಗುರುವಾಯೂರು, ತಿರುವಣ್ಣಾಮಲೈ ಶಿವರಾತ್ರಿ ನೃತ್ಯೋತ್ಸವ, ಬಾಲಭವನದ ಬಾಲ ವೇದಿಕೆಯ ಕಾರ್ಯಕ್ರಮ, ರವೀಂದ್ರ ಕಲಾಕ್ಷೇತ್ರದ ಸ್ವರ್ಣ ಮಹೋತ್ಸವ, ನೃತ್ಯ ನೀರಾಜನ, ಚಿಗುರು- (ಕನ್ನಡ-ಸಂಸ್ಕೃತಿ ಇಲಾಖೆ) ಮುಂತಾದ ಅನೇಕಾನೇಕ ನೃತ್ಯ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿರುವ ವಿಶೇಷ ಇವಳದು.
‘ವೈಷ್ಣವಿ ನಾಟ್ಯಶಾಲೆ’ಯ ನಿರ್ಮಾಣಗಳಾದ ಮಹಿಷಾಸುರ ಮರ್ಧಿನಿ, ನರಸಿಂಹ, ಮಹಿಷಿಯಾರ್ದನಂ, ಸಂಹಾರ ತಾಂಡವಂ ಮತ್ತು 18 ಗೋಲ್ಡನ್ ಸ್ಟೆಪ್ಸ್ ಮುಂತಾದ ಮಿಥುನ್ ಅವರ ನೃತ್ಯ ಸಂಯೋಜಿತ ಅಮೋಘ ನೃತ್ಯರೂಪಕಗಳಲ್ಲಿ ಭಾಗವಹಿಸಿದ ಹೆಮ್ಮೆ ಇವಳದು.
ಪ್ರಸ್ತುತ ಬೆಂಗಳೂರಿನ ಇಂಟರ್ ನ್ಯಾಷನಲ್ ಶಾಲೆಯಲ್ಲಿ 12 ನೆಯ ತರಗತಿಯಲ್ಲಿ ಓದುತ್ತಿರುವ ಐಶ್ವರ್ಯ, ಪದವಿ ತರಗತಿಯನ್ನು ‘ಬಿಜಿನೆಸ್ ಮ್ಯಾನೆಜ್ಮೆಂಟ್ ಮತ್ತು ಎಂಟರ್ ಪ್ರೀನರ್ಶಿಪ್’ ವಿಷಯದಲ್ಲಿ ತನ್ನ ಹೆಚ್ಚಿನ ವ್ಯಾಸಂಗವನ್ನು ಅಮೆರಿಕೆಯಲ್ಲಿ ಮುಂದುವರಿಸುವ ಉದ್ದೇಶ ಹೊಂದಿದ್ದಾಳೆ. ಜೊತೆ ಜೊತೆಗೆ ಭಾರತೀಯ ಶಾಸ್ತ್ರೀಯ ಪರಂಪರೆ-ಸಂಸ್ಕೃತಿಯನ್ನು ಎತ್ತಿ ಹಿಡಿಯುವ ನೃತ್ಯವನ್ನು ಮುಂದುವರಿಸಿಕೊಂಡು ಹೋಗುವ ಮತ್ತು ಈ ಕಲಾಪ್ರಕಾರದ ಹೆಚ್ಚಿನ ಪ್ರಸಾರಕ್ಕೆ ಬದ್ಧಳಾಗಿರುವ ಅಪೇಕ್ಷೆಯನ್ನು ಹೊಂದಿದ್ದಾಳೆ.