ಅಂದು, ನವೋತ್ಸಾಹ ತುಂಬಿದ ಮೂರು ಪ್ರತಿಭಾ ಚೇತನಗಳು ಚೌಡಯ್ಯ ಮೆಮೋರಿಯಲ್ ಸಭಾಂಗಣ ವೇದಿಕೆಯ ಮೇಲೆ ನೃತ್ಯ ಕಾರಂಜಿಯಾಗಿ ಪ್ರಜ್ವಲಿಸಿ ಮಿಂಚಿನ ಬಳ್ಳಿಗಳಂತೆ ಅದ್ಭುತವಾಗಿ ನರ್ತಿಸಿ ನೆರೆದ ಕಲಾರಸಿಕರ ಮನಸೂರೆಗೊಂಡರು.
ಖ್ಯಾತ ‘ಶಿವಪ್ರಿಯ’ದ ಅಂತರರಾಷ್ಟ್ರೀಯ ನೃತ್ಯಗುರು-ಕಲಾವಿದ ಡಾ. ಸಂಜಯ್ ಶಾಂತಾರಾಂ ಅವರ ಕಲಾಮೂಸೆಯಲ್ಲಿ ಅರಳಿದ ಈ ಉದಯೋನ್ಮುಖ ಕಲಾವಿದತ್ರಯರಾದ ಮಾಸ್ಟರ್ ಕೌಶಿಕ್, ರಿಷಭ್ ಮತ್ತು ಕು. ಭವಾನಿ ಕಳೆದ ವರ್ಷ ಯಶಸ್ವಿಯಾಗಿ ರಂಗಪ್ರವೇಶ ಮಾಡಿದ್ದು, ಇದೀಗ ಭಕ್ತಿಪ್ರಧಾನ ವಿಶಿಷ್ಟ ಕೃತಿಗಳನ್ನು ಸಾಕಾರಗೊಳಿಸುವ ಮೂಲಕ ಅರ್ಥಪೂರ್ಣ ಗುರುವಂದನೆಯನ್ನು ಸಮರ್ಪಿಸಿದರು.
ಅಂದಿನ ಎಲ್ಲ ಕೃತಿಗಳೂ ತ್ರಿಶಕ್ತಿ ಬಾಲಪ್ರತಿಭೆಗಳ ನೃತ್ಯನೈಪುಣ್ಯವು ಪ್ರದರ್ಶಿತವಾದದ್ದು ದೈವೀಕ ನೆಲೆಯಲ್ಲಿ ಎಂಬುದು ಆ ಗುರುವಂದನೆಯ ವಿಶೇಷವಾಗಿತ್ತು. ವಿಘ್ನನಿವಾರಕ ‘ಗಣೇಶ ವಂದನೆ’ಯಿಂದ ಮೂವರೂ ಪ್ರಸ್ತುತಿ ಪ್ರಾರಂಭಿಸಿ, ಗಣಪತಿಯ ವಿವಿಧ ರೂಪ-ಮಹಿಮೆಗಳನ್ನು ತಮ್ಮ ವಿಶಿಷ್ಟ ಅಂಗಿಕಾಭಿನಯದಿಂದ ಸಾಕ್ಷಾತ್ಕರಿಸಿದರು. ‘ಪರಬ್ರಹ್ಮ ರೂಪಂ..ಚಿದಾನಂದ ರೂಪಂ’ -ಎಂದು ಭಜಿಸುತ್ತ ಹೊಸಶೈಲಿಯ ನೃತ್ಯವಿನ್ಯಾಸದಲ್ಲಿ, ಖಚಿತ ಅಡವು-ಚಾರಿಗಳಲ್ಲಿ ಇಡೀ ವೇದಿಕೆಯ ತುಂಬಾ ಚಿಗರೆಮರಿಗಳಂತೆ ಸಂಭ್ರಮಿಸಿ ಕುಣಿಕುಣಿದು, ಕುಪ್ಪಳಿಸಿ, ಅನೇಕ ಸಂಚಾರಿಗಳ ಸಂಗಮ ದೃಶ್ಯದಲ್ಲಿ ವಿನಾಯಕನನ್ನು ಆರಾಧಿಸಿದರು.
ಗುರು ಸಂಜಯರ ರಚನೆ- ರಾಗ ಯಮನ್ ಕಲ್ಯಾಣಿ-ಆದಿತಾಳದಲ್ಲಿ ರಚಿತವಾದ ಅಪೂರ್ವ ಪದಮಂಜರಿಯಲ್ಲಿ ವಿಜ್ರುಂಭಿಸಿದ ‘ಶ್ರೀರಾಮ ರಾಮ ಎಂದು ಭಜಿಸೋ ನೀ ಮನ…’ ಎಂಬ ಸುಮಧುರ ಗಾಯನದಲ್ಲಿ ಕಿವಿದುಂಬಿದ ಕೃತಿಯನ್ನು ಗುರುಗಳೊಂದಿಗೆ ತಮ್ಮ ಭಾವಪೂರ್ಣ ಅಭಿನಯದಿಂದ, ಹರಿತ ನೃತ್ತಮಿಡಿತಗಳಿಂದ ಕಿಶೋರತ್ರಯರು ಮನವನ್ನಾವರಿಸಿದರು. ಶ್ರೀರಾಮನ ದಿವ್ಯವರ್ಣನೆ ಸುಮನೋಹರವಾಗಿ ಸಾಕಾರಗೊಂಡು ನವಿರಾಗಿ ಹರಿದುಬಂತು. ರಾಮಕಥನ -ಶಬರಿಯ ಭಕ್ತಿ, ಸೀತಾಪಹರಣ, ಜಟಾಯು ಮೋಕ್ಷ ಇತ್ಯಾದಿ ಸಂಚಾರಿಯ ಕಥಾನಕಗಳು ಬಹು ವಿಷದವಾಗಿ, ಅಷ್ಟೇ ಕಲಾತ್ಮಕ ನಿರೂಪಣೆಯೊಡಗೂಡಿ ಸೊಬಗಿನಿಂದ ಕಣ್ಮನ ಸೂರೆಗೊಂಡಿತು. ರಾಮನ ಭವ್ಯ ವ್ಯಕ್ತಿತ್ವವನ್ನು ತಮ್ಮ ಪ್ರಬುದ್ಧ ಅಭಿನಯದಿಂದ ಕಟ್ಟಿಕೊಟ್ಟ ಸಂಜಯ್ ಅವರಿಗೆ ಪೂರಕ ಪಾತ್ರಗಳಲ್ಲಿ ಅಷ್ಟೇ ಸಮರ್ಥವಾಗಿ ಅಭಿನಯಿಸಿದ ಮೂವರೂ ಮೆರುಗು ತುಂಬಿದ ನರ್ತನದಲ್ಲಿ ಕಂಗೊಳಿಸಿದರು. ಪರಿಣಾಮಕಾರಿಯಾದ, ನಾಟಕೀಯ ಸೆಳೆಮಿಂಚಿನ ದೃಶ್ಯಗಳು ಕಳೆಗಟ್ಟಿದವು. ಆಕರ್ಷಕ ನೃತ್ಯ ಸಂಯೋಜನೆ, ವಸ್ತ್ರವಿನ್ಯಾಸ, ಶಬ್ದ ಪರಿಣಾಮ ಮತ್ತು ಬೆಳಕಿನ ವಿನ್ಯಾಸವೂ ಘಟನೆಗಳ ತೀವ್ರತೆಯನ್ನು ಎತ್ತಿಹಿಡಿದವು.
ಮುಂದೆ ಪ್ರಸ್ತುತವಾದ ‘ ಶಂಭೋ ಶಂಕರ ಗಿರಿಜಾ ರಮಣ..’-ರೇವತಿ ರಾಗದ ‘ವರ್ಣ’ -ಪನ್ನಗಭೂಷಣನಾದ ಶಿವನ ವಿವಿಧ ರೂಪ-ಶಕ್ತಿಗಳ ಆಯಾಮವನ್ನು ವಿಶಿಷ್ಟ ರೀತಿಯಲ್ಲಿ ಕಟ್ಟಿಕೊಟ್ಟಿತು. ಸಂಜಯ್, ಢಮರುಗ ಹಿಡಿದು ವೇಗಗತಿಯ ಅಡವುಗಳಿಂದ ನರ್ತಿಸಿದ ವೈವಿಧ್ಯಪೂರ್ಣ ಶಿವನ ತ್ರಿಕಾಲ ಜತಿಗಳ ಝೇಂಕಾರ ಮೈ ನವಿರೇಳಿಸಿತು. ಢಮರುಗದೊಂದಿಗಿನ ರಂಗಾಕ್ರಮಣ, ಭಂಗಿಗಳ ವೈಭವ, ಪಾದಭೇದ-ಲಯಬದ್ಧ ಹೆಜ್ಜೆಗಳ ಸಂಚಲನದಲ್ಲಿ ಶಿವಾರ್ಚನೆ ನಡೆಸಿತು. ಕೌಶಿಕ್ ಮತ್ತು ರಿಶಭ್ ವೇದಿಕೆಯ ತುಂಬಾ ಉರಗ ಮುದ್ರೆಗಳ ಅನೇಕತೆಯನ್ನು ಪ್ರಜ್ವಲಿಸುತ್ತ ವಿಜ್ರುಂಭಿಸಿದರು.
ಭವಾನಿ, ಕಾಳೀಮಾತೆಯಾಗಿ ರಣಭೈರವಿಯಾಗಿ ಆರ್ಭಟಿಸಿ, ಮಹಿಷಾಸುರನನ್ನು ಸಂಹರಿಸಿ ತನ್ನ ದೈವೀಕ ನರ್ತನದಿಂದ ಕಣ್ತುಂಬಿದಳು. ಕೆರಳಿದ ಕಾಳಿಯ ಆವೇಶ ತಗ್ಗಿಸಲು ಶಿವ ಅವಳ ಮನದಲ್ಲಿ ಶಾಂತಿಯನ್ನು ತುಂಬಲು ಪ್ರಯತ್ನಿಸಿದ ಸನ್ನಿವೇಶದಲ್ಲಿ ತ್ರಿಶೂಲವನ್ನು ಆಕೆಯಿಂದ ಕಾಣಿಕೆಯಾಗಿ ಪಡೆದ ದೃಶ್ಯ ಅತ್ಯಮೋಘವಾಗಿ ಮಿಂಚಿತು. ನವರಸಜನಕನ ಸಾಕ್ಷಾತ್ಕರಿಸಿಕೊಂಡ ಮೂರುಜನ ಶಿಷ್ಯರು ಮತ್ತು ಗುರುಗಳು ಸಂಭ್ರಮದಿಂದ ನೃತ್ತಗಳ ಸಂಭ್ರಮವನ್ನು ಚೆಲ್ಲುತ್ತ ನಾಟ್ಯವಾಡಿದ ನೋಟ ಅನುಪಮ. ಸಿಡಿಲಮರಿಗಳಂತೆ ಯಮಳ ಬಾಲಕರು ಮತ್ತು ಷೋಡಶಿ ಒಬ್ಬರನ್ನೊಬ್ಬರು ಮೀರಿಸುವ ಉಮೇದಿನಲ್ಲಿ ವೇದಿಕೆಯನ್ನು ಗುಡುಗಾಡಿಸಿದರು.
ಮುಂದೆ ಕುವೆಂಪು ರಚಿತ ‘ಕುಣಿಯುವಳೀ ನಾರಿ ಭೈರವ ನಾರಿ….’ ಯಾಗಿ ವರ್ಚಸ್ಸಿನಿಂದ ಕಂಗೊಳಿಸಿದವಳು ಕಲಾವಿದೆ ಭವಾನಿ. ರೌದ್ರ ಹೆಜ್ಜೆಗಳ ಜತಿಗಳಾವೃತದಲ್ಲಿ ಆವೇಶದಿಂದ ನರ್ತಿಸಿದಳು. ಕೌಶಿಕ್ ಮತ್ತು ರಿಷಭ್ ಕೂಡ ಚಕಿತಗೊಳಿಸುವ ಬಗೆಯಲ್ಲಿ ಆಕಾಶಚಾರಿಗಳಿಂದ ರೋಮಾಂಚನಗೊಳಿಸುತ್ತ ರಕ್ಕಸರಾಗಿ ರಣಹೆಜ್ಜೆಗಳ ಹೋರಾಟ ಪ್ರದರ್ಶಿಸಿದರು.
ಅನಂತರ ಕೂಚಿಪುಡಿ ನೃತ್ಯಶೈಲಿಯಲ್ಲಿ ಸಂಚಲನ ಮೂಡಿಸಿದ ‘ನರಸಿಂಹ ತರಂಗಂ’ ಅತಿವೇಗದ -ಶಕ್ತಿಶಾಲಿ ನೃತ್ತಗಳ ಅಂಗಿಕಾಭಿನಯದ ಮೋಡಿಯಿಂದ ಸೆಳೆಯಿತು. ವಿವಿಧ ವಿಶೇಷ ಭಂಗಿಗಳ ವಿನ್ಯಾಸಗಳನ್ನು ಸೃಜಿಸಿದ ಕಲಾವಿದರು, ಮೃದಂಗದ ಕೊನ್ನಕೋಲ್ ನ ಜತಿಗಳ ಝಣತ್ಕಾರದಲ್ಲಿ ಪ್ರೇಕ್ಷಕರನ್ನು ಕಟ್ಟಿಹಾಕಿದರು. ಪಾದದ ಹೆಬ್ಬೆರಳು ಹೆಣೆದು ಹೆಜ್ಜೆಗಳನ್ನು ಹಾಕಿ ವಿಸ್ಮಯಗೊಳಿಸಿದ್ದಲ್ಲದೆ, ಹಿತ್ತಾಳೆಯ ಪರಾತದ ಚೂಪು ಅಂಚಿನ ಮೇಲೆ ನಿಂತು ವಿವಿಧ ನೃತ್ತಗಳನ್ನು, ಬಾಗು-ಬಳಕುಗಳನ್ನು ಚಾಣಾಕ್ಷತೆಯಿಂದ ನಿರ್ವಹಿಸಿದ ಕಲಾವಿದರ ಜಾಣ್ಮೆಯ ಸಮತೋಲನ ಸ್ತುತ್ಯಾರ್ಹ.
ಅಂತ್ಯದಲ್ಲಿ ಶಿಷ್ಯರು, ಗುರುಗಳಿಗೆ ವಿಶಿಷ್ಟ ಬಗೆಯಲ್ಲಿ ಸುಮನೋಹರವಾಗಿ ಗುರುನಮನ ಸಲ್ಲಿಸಿದ ಬಗೆ, ಮೇಲಿನಿಂದ ಪುಷ್ಪವೃಷ್ಟಿಯಾದ ರೀತಿ ಮಂತ್ರಪುಷ್ಪದಂತೆ ಭಾಸವಾಯಿತು.
******************